ಭಾರತಕಥಾಮಂಜರಿ30
ಶಿಶುಪಾಲ ವಧೆ
ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರಿ
ಸಭಾ ಪರ್ವ - ಹತ್ತನೆಯ ಸಂಧಿ
ಅಗ್ರಪೂಜಾವ್ಯಾಜ ಮುಖದಲಿ
ವಿಗ್ರಹದ ಶಿಶುಪಾಲಶಿರ ಗಗ
ನಾಗ್ರದಲಿ ಕುಣಿದಾಡಲೆಸೆದನು ವೀರ ನಾರಾಯಣ
---
ಕೇಳು ಜನಮೇಜಯ ಧರಿತ್ರೀ
ಪಾಲ ಸಹದೇವನ ವಚೋಗ್ರ
ವ್ಯಾಳ ವಿಷವೆಡೆಯಲ್ಲಿ ಸಿಲುಕಿತು ಮನ ಮಹೀಶ್ವರರ
ಸೂಳು ನೆನಹಿನ ಸುಳಿಮನದ ಸಮ
ಪಾಳಿ ಕೋಪದಲಳಿದ ಮೌನದ
ಮೇಲು ಬುದ್ಧಿಯ ಜೋಡಿ ಬೇರೊಂದಾಯ್ತು ಭಾವದಲಿ ೧
ಕಿವಿವಳೆಯ ಮೋರೆಗಳ ಮುಷ್ಟಿಯ
ಬವರಿಗಳ ಕಡೆಗಣ್ಣ ಸನ್ನೆಯ
ಸವಡಿಗೈಗಳ ನಂಬುಗೆಯ ಮನಮನದ ಬೆಸುಗೆಗಳ
ಅವಸರದ ಮೈತ್ರಿಗಳ ಮಂತ್ರಿ
ಪ್ರವರ ವಚನೋಪೇಕ್ಷೆಗಳ ರಣ
ದವಕದಲಿ ಕಳವಳಿಸುತಿರ್ದುದು ಕೂಡೆ ನೃಪಕಟಕ ೨
ಪರಿಣತರ ನುಡಿಗಳನು ಕಿವಿಯೋ
ಕರಿಸಿದವು ದುರುದುಂಬಿಗಳ ಬಾ
ಹಿರರ ನುಡಿಗಳನಡಿಗಡಿಗೆ ಕುಡಿದು ತೇಗಿದವು
ಕರೆಸಿದರು ಖೂಳರನು ನೀತಿಯ
ಗರುವರನು ನೂಕಿದರು ರಾಯನ
ಪರಮ ಯಾಗವನಳಿಯಲನುವಾಯಿತು ನೃಪಕಟಕ ೩
ನೀವು ಪರಿಯಂತೇಕೆ ನಿಮ್ಮವ
ರಾವಲೇ ನಿಮ್ಮಾಳು ಕುದುರೆಗೆ
ನಾವಲೇ ದಳಪತಿಗಳಿವದಿರ ಯಜ್ಞಮಂಟಪವ
ಆವ ಬೇಗದಲುರುಹುವೆನು ಚಿ
ತ್ತಾವಧಾನವ ಮಾಡಿಯೆಂದು ನೃ
ಪಾವಳಿಯ ಶಿಶುಪಾಲ ಸಂತೈಸಿದನು ಸಾಮದಲಿ ೪
ಧರಣಿಪರ ಸನ್ನೆಯಲಿ ಬಲ ಸಂ
ವರಿಸಿ ತಾಚೆಯಲಿತ್ತ ಸಾತ್ಯಕಿ
ನರ ವೃಕೋದರ ನಕುಲ ಧೃಷ್ಟದ್ಯುಮ್ನ ಮೊದಲಾದ
ಕರಿತುರಗ ರಥಪತ್ತಿಗಳ ಸಂ
ವರಣೆ ತಳಿತುದ ಕಂಡು ಮೂಗಿನ
ಬೆರಳ ಬೆರಗಿನಲೊಲೆದು ಭೀಷ್ಮಂಗೆಂದನಾ ಭೂಪ ೫
ಈಸು ಪೌರುಷ ದೈವ ಘಟನೆಯೊ
ಳೀಸು ಪರಿಯಂತಾಯ್ತು ಯಜ್ಞದ
ಮೀಸಲಳಿಯದ ನಡೆದುದಿನ್ನೆಗ ನಿಮ್ಮ ಕರುಣದಲಿ
ಈ ಸಮಸ್ತ ನೃಪಾಲಜನ ವಾ
ರಾಸಿ ಮೇರೆಯನೊದೆವುತಿದೆ ನಿಮ
ಗೇಸು ಭಾರವಿದೆಂದು ಬಿನ್ನವಿಸಿದನು ಭೀಷ್ಮಂಗೆ ೬
ಕಾದುವರೆ ನಮ್ಮುತ್ಸವಕೆ ನೆರ
ವಾದವರು ಸೈರಿಸುವರಗ್ಗದ
ಯಾದವೇಂದ್ರನ ನಿಂದೆ ಮೇಲಧ್ವರ ವಿಸಂಘಟನ
ಈ ದುರಂತದ ಚಿಂತೆಯಲಿ ಬೇ
ಳಾದುದೆನ್ನಯ ಚಿತ್ತವದ್ದೆನು
ಖೇದ ಪಂಕದೊಳೆನ್ನ ನುದ್ಧರಿಸೆಂದನಾ ಭೂಪ ೭
ಅಂಜದಿರು ಭಯಬೇಡ ನರರಿಗೆ
ನಂಜು ಪಥ್ಯವೆ ಗಿಳಿಯ ಮರಿಗಳು
ಮಂಜರನ ಮೇಲ್ವಾಯ್ದು ಬದುಕುವವೇ ಮಹೀಪತಿಯೆ
ಮಂಜು ಮಧ್ಯಾಹ್ನದ ದಿನೇಶನ
ನೆಂಜಲಿಸುವುದೆ ಕುಪಿತ ಸಿಂಹವ
ನಂಜಿಸುವವೇ ನಾಯ್ಗಳೆಂದನು ಭೂಪತಿಗೆ ಭೀಷ್ಮ ೮
ಬಗುಳುವಿವದಿರು ಹರಿಯ ಬಡಿ ಹೋ
ರಿಗಳಲಾ ಜಗವರಿಯದೇ ಜ
ಳ್ಳುಗಳ ಜೋಡಿಯ ಜಂಜಡಕೆ ನೀ ಜರುಗುವೈ ಭೂಪ
ಉಗಿವನಿನಿಬರ ಜೀವವನು ಜೊ
ತ್ತಗೆಯಲೀ ಶೀಶುಪಾಲ ನಾಯನು
ತೆಗೆದು ಕಟ್ಟು ವನುರ ಮರ್ಧನನೆಂದನಾ ಭೀಷ್ಮ ೯
ಜಗವ ಹೂಡುವ ಹೊರೆವ ಬಲುಗೈ
ಯಗಧರಂಗೀ ನೃಪರ ಕುರಿವಿಂ
ಡುಗಳ ಕುಮ್ಮರಿಗಡಿತಕಾವುದು ಬೇಕು ಭುಜಸತ್ವ
ಬಗೆವುದೇ ಬಲುಗಡಲು ಮಂಜಿನ
ಮುಗಿಲವಳೆಯನು ಚೈದ್ಯ ಭೂಪನ
ಜಗದ ಭಂಡನನೀ ಜನಾರ್ದನ ಗಣಿಸುವನೆಯೆಂದ ೧೦
ಎಲೆ ನಪುಂಸಕ ಭೀಷ್ಮ ಸುಡು ಬೈ
ಗುಳಿನ ಭಂಡನು ನೀನಲಾ ಗೋ
ಕುಲದ ಗರ್ವನ ಗುಣವ ಕಂಡಿತುಗೊಂಡೆ ಬೇಸರದೆ
ಹಳಿವಿನಲಿ ಹೆಮ್ಮೆಯನು ಕುಂದಿನ
ಕುಲದೊಳಗ್ಗಳಿಕೆಯನು ತಮದಲಿ
ಬೆಳಗ ಬಣ್ಣಿಸುತಿಹೆ ನಿರಂತರವೆಂದನಾ ಚೈದ್ಯ ೧೧
ಅವಗುಣದಲುದ್ಭಾವಿಸುವೆ ಗುಣ
ನಿವಹವನು ರಾಜಾಧಮರು ಯಾ
ದವರು ಪೂಜಾರುಹರೆ ಸುಡುಸುಡು ನಿನ್ನ ನಾಲಗೆಯ
ಸವಿನುಡಿಯ ದುರ್ವ್ಯಸನಿ ತೊಂಡಿನ
ತವರುಮನೆ ಬಾಹಿರರಿಗಾಶ್ರಯ
ಭವನ ಖಳರಧಿದೈವ ಭೀಷ್ಮನ ಕೊಲುವರಿಲ್ಲೆಂದ ೧೨
ಇವನು ಗಡ ಚಿಕ್ಕಂದು ಮೊಲೆಗೊ
ಟ್ಟವಳ ಹಿಂಡಿದ ಗಂಡ ಬಂಡಿಯ
ಜವಳಿಗಾಲಲಿ ಮುರಿದನೈ ಮಾಮಾ ಸಮರ್ಥನಲೆ
ಸವಡಿ ಮರ ನೆಗ್ಗಿದವು ಗಡ ಮೈ
ಯವುಚಿದರೆ ಬಲುಗತ್ತೆ ಗೂಳಿಯ
ನಿವ ವಿಭಾಡಿಸಿದನೆ ಮಹಾದ್ಭುತವೆಂದನಾ ಚೈದ್ಯ ೧೩
ಹಕ್ಕಿ ಹರಿಣಿಯ ತರಿದ ಗಡ ಕೈ
ಯಿಕ್ಕಿದರೆ ಕಡುಗುದುರೆಯನು ನೆಲ
ಕಿಕ್ಕಿದನೆ ನೆರೆ ಹೇಳು ಹೇಳಾ ಕೃಷ್ಣನಾಳ್ತನವ
ಹೊಕ್ಕು ಹೆಬ್ಬಾವಿನ ಬಸುರ ಸೀ
ಳಿಕ್ಕಿದನೆ ಯಾದವನ ಪೌರುಷ
ವಕ್ಕಜವಲಾ ಭೀಷ್ಮ ತೂಪಿರಿಯೆಂದನಾ ಚೈದ್ಯ ೧೪
ಗಾಳಿಯನು ಘಲ್ಲಿಸಿದ ಕರುವಿನ
ಕಾಲ ಹಿಡಿದೊಗೆದನು ಗಡುರಗನ
ಮೇಲೆ ಕುಣಿದಾಡಿದನು ಗಡ ಹಾವಡಿಗ ವಿದ್ಯೆಯಲಿ
ಖೂಳ ಗೋವರ ಹಳ್ಳಿಯಲಿ ಕ
ಕ್ಟಾಳಲಾ ಬಳಿಕೇನು ಪೃಥ್ವೀ
ಪಾಲರೀತಗೆ ಸರಿಯೆ ದಿಟದಿಟವೆಂದನಾ ಚೈದ್ಯ ೧೫
ಏಳು ದಿನ ಪರಿಯಂತ ಮೊರಡಿಯ
ಮೇಲುಗೊಡೆಯನು ಹಿಡಿದು ಬಲು ಮಳೆ
ಗಾಲವನು ಮಾಣಿಸಿದ ಗಡ ಹರಹರ ವಿಶೇಷವಲ
ಹೇಳು ಹೇಳಿಂದ್ರಂಗೆ ಮಾಡಿದ
ಖೂಳ ರಾಶಿಯನೊಬ್ಬನೇ ಕೈ
ಮೇಳವಿಸಿದನೆ ಕಂದನಾಣೆ ವಿಚಿತ್ರವಾಯ್ತೆಂದ ೧೬
ಅಸಗನನು ಕೆಡೆ ತಿವಿದು ಕಂಸನ
ವಸನವೆಲ್ಲವ ಸೆಳೆದ ಗಡ ಮಾ
ಣಿಸಿದನೈ ದಿಟ ಘಟ್ಟಿವಾಳ್ತಿಯ ಮೈಯ ಮೂಹೊರಡ
ಮಸಗಿ ಬೀಸುವ ಕಂಸನಾನೆಯ
ನಸು ಬಡಿದ ಗಡ ಮಲ್ಲರನು ಮ
ರ್ದಿಸಿದನೇ ಡೊಳ್ಳಾಸದಲಿ ಡಾವರಿಗನಹನೆಂದ ೧೭
ಆದರಿವನನು ತುತಿಸುವೊಡೆ ಮೇ
ಲಾದ ಕಷ್ಟವನೇನ ಹೇಳುವೆ
ನೀ ದುರಾತ್ಮಕ ಸಾಕಿದೊಡೆಯನನಿರಿದ ಸಬಳವಲೆ
ಸೋದರಿಯಲಾ ಕೃಷ್ಣನವ್ವೆ ವಿ
ವಾದವೇ ಸಾಕಿದನಲಾ ಕೈ
ಗಾದನೇ ಕಂಸಂಗೆ ಮುನಿವುದಿದಾವ ಘನವೆಂದ ೧೮
ಆದರಿಸಿ ಬಣ್ಣಿಸಿದೆ ನಾಚದೆ
ಯಾದವನ ಕೌಳಿಕ ಪರಾಕ್ರಮ
ವಾದಿಯಾದ ಸಮಸ್ತಗುಣ ವಿಸ್ತಾರ ವೈಭವವ
ಆದರಾ ಗೋವಳರ ಹೆಂಡಿರ
ಹಾದರದ ಹೆಕ್ಕಳವ ಬಣ್ಣಿಸ
ದಾದೆ ನಿನಗೇಕಕಟ ನಾಚಿಕೆಯೆಂದನಾ ಚೈದ್ಯ ೧೯
ಓಡಿ ಕೊಲಿಸಿದ ಕಾಲಯವನನು
ಮೂಡಿದವೆ ಹುಲು ಕಲುಗಳಕಟಾ
ವೋಡುಕುಳಿ ಹೋದಲ್ಲಿ ಮಗಧನ ರಾಜಕಾರ್ಯದಲಿ
ಆಡಲರಿಯೆ ವಿಜಾತಿರತ್ನದ
ಖೋಡಿಗಳ ಹಳಿವಾತನೇ ಹರಿ
ತೋಡಿ ಬಡಿಸುವೆ ಕಿವಿಗರೋಚಕವಾಯ್ತು ತೆಗೆಯೆಂದ ೨೦
ಕಪಟದಲಿ ಭೀಮಾರ್ಜುನರು ಸಹಿ
ತುಪಚಿತ ದ್ವಿಜವೇಷದಲಿ ನಿ
ಷ್ಕಪಟ ಮಗಧನ ಮನೆಯನದ್ವಾರದಲಿ ಹೊಕ್ಕರಲ
ಕೃಪಣರಿವದಿರು ವಿಪ್ರವೇಷದ
ಲಪಸದರು ಕಾದಿದರು ಭೀಷ್ಮಗೆ
ಜಪವಲಾ ಕಂಸಾರಿ ಮಾಡಿದ ಕಷ್ಟ ಕೃತಿಯೆಂದ ೨೧
ಬೆರತನಗ್ಗದ ಮಾಗಧೇಂದ್ರನ
ಮುರಿದ ಮುರುಕಕೆ ಭೀಮನಾತನ
ಸೆರೆಯ ಮನೆಯಲಿ ಸಿಕ್ಕಿದವನೀಪಾಲ ಪಂತಿಗಳ
ಸೆರೆಯನಿವ ಬಿಡಿಸಿದನು ಗಡ ಬೊ
ಬ್ಬಿರಿವ ಪೌರುಷವೇಕೆ ಕಡೆಯಲಿ
ಕರುಬುವವರಾವೈಸಲೇ ನಿಮಗೆಂದನಾ ಚೈದ್ಯ ೨೨
ಕೇಳಿ ಕಿಡಿಕಿಡಿಗೆದರಿ ತನು ರೋ
ಮಾಳಿ ತಳಿತುದು ರೋಷವಹ್ನಿ
ಜ್ವಾಲೆ ಝಳಪಿಸೆ ಜಡಿದವರುಣಚ್ಛವಿಯಲಕ್ಷಿಗಳು
ಸೂಳುರಿಯ ನಿಡುಸುಯ್ಲ ಕಬ್ಬೊಗೆ
ಜಾಳಿಗೆಯಲೇಕಾವಳಿಯ ಮು
ಕ್ತಾಳಿ ಕಂದಿತು ಖತಿಯ ಮೊನೆಯಲಿ ಮಸಗಿದನು ಭೀಮ ೨೩
ಸೆರಗ ಸಂವರಿಸಿದನು ಮಕುಟವ
ನುರುಗದಂತಿರೆ ಮುರುಹಿ ಸಚಿವಂ
ಗರುಹಿದನು ಸನ್ನೆಯಲಿ ಸಮರಕೆ ಚಾಪ ಮಾರ್ಗಣವ
ಹೊರಗೆ ಸಂವರಿಸಿರಲಿ ದಳ ಕೈ
ಮರೆಯಬೇಡ ಸುನೀತನನು ನಾ
ವ್ತರುಬಿ ನಿಂದಾಕ್ಷಣದಲೊದಗುವುದೆಂದು ಸೂಚಿಸಿದ ೨೪
ಪವನತನಯನ ಖತಿಯ ಝಾಡಿಯ
ಹವಣ ಕಂಡರು ಮಸಗಿದರು ಯಾ
ದವರ ಪಡೆಯಲಿ ಸಾಂಬ ಸಾತ್ಯಕಿ ಕಾಮ ಕೃತವರ್ಮ
ತವತವಗೆ ಪಾಂಚಾಲ ಕೇಕಯ
ನಿವಹ ಪಾಂಡವ ಸುತರು ಮೊದಲಾ
ದವಗಡೆಯರನುವಾಗೆ ಗಜಬಜವಾಯ್ತು ನಿಮಿಷದಲಿ ೨೫
ಸೆಳೆದಡಾಯುಧವುತ್ತರೀಯವ
ನಿಳುಹಿ ಮುಂಗೈಯಲಿ ವೃಕೋದರ
ಮೊಳಗುವನುವನು ಕಂಡು ಧಿಮ್ಮನೆ ಭೀಷ್ಮನಡಹಾಯ್ದು
ಸೆಳೆದುಕೊಂಡನು ಖಡುಗವನು ಭುಜ
ವಳಯದಿಂದವುಚಿದನು ತೋಟಿಯ
ತೊಳಸುಗರ ಹೊಯ್ ಹೊಯ್ಯೆನುತ ಗರ್ಜಿಸಿದನಾ ಭೀಷ್ಮ ೨೬
ನೆರಹಿದಿರಿ ಚತುರಾಬ್ಧಿ ವಳೆಯದ
ಧರಣಿಪಾಲ ಸಮುದ್ರವನು ಕಾ
ಹುರವ ಮಾಡಿದರಕಟ ಕೆಡದೇ ರಾಜಸೂಯ ಮಖ
ಧರಧುರದ ದುರ್ವ್ಯಸನಿಗಳ ನಿ
ಟ್ಟೊರಸಿ ತೆಗೆ ನಿನ್ನವರನೆನುತು
ಬ್ಬರವ ಮಾಣಿಸಿ ಹೂಣೆಗರ ಹೊಯ್ಸಿದನು ಕಲಿ ಭೀಷ್ಮ ೨೭
ಬಿಡು ಬಿಡೆಲೆ ಗಾಂಗೇಯ ಭೀಮನ
ಕಡಿದು ಪೂರ್ಣಾಹುತಿಯನಗ್ನಿಗೆ
ಬಡಿಸಿ ಕೊಡುವೆನು ಸ್ವಾಮಿದ್ರೋಹಿಯ ಕರುಳ ದಂಡೆಗಳ
ಮುಡಿಸುವೆನು ಜಯಸಿರಿಗೆ ನೋಡೆ
ನ್ನೊಡನೆ ಮೇಳವೆ ದಕ್ಷಯಜ್ಞದ
ಮೃಡನ ಮರೆಸುವೆನೆನುತ ಮಿಗೆ ಬೊಬ್ಬಿರಿದನಾ ಚೈದ್ಯ ೨೮
ಬಿಡಿಬಿಡಕಟಾ ಭೀಷ್ಮ ದರ್ಪದಿ
ಕಡುಜರೆದ ಕಳವಳದ ಕುನ್ನಿಗೆ
ಕುಡಿಸುವೆನು ದಿವ್ಯಾಸ್ತ್ರ ವಿಶಿಖ ವಿಶೇಷ ದೌಷಧಿಯ
ತಡೆದು ತನ್ನನು ರಾಜಕಾರ್ಯವ
ಕೆಡಿಸಿದೆಯಲಾ ದಕ್ಷಯಜ್ಞದ ೨೯
ಮೃಡನ ಮುರುಕವ ಕಾಬೆನೆನುತೊಡೆಮುರುಚಿದನು ಭೀಮ
ಮತ್ತೆ ಹಿಡಿದನು ಪವನಜನ ಬಾ
ಗೊತ್ತಿದನು ಮುರುಳೇ ಸುರೌಘದ
ತುತ್ತು ಗಂಟಲಲಿಳಿವುದೇ ಗಜಬಜವ ಮಾಡಿದರೆ
ತೆತ್ತಿಗನು ಹರಿ ಯಜ್ಞರಿಪುಗಳ
ಮೃತ್ಯುವರಿಯಾ ನೀನು ಮೀರುವ
ದುತ್ತಮಿಕೆಯಲ್ಲೆನುತ ಮಿಗೆ ತಿಳುಹಿದನು ಗಾಂಗೇಯ ೩೦
ಇವನ ಕೊಲುವನು ಮಿಕ್ಕ ಭೂಪರ
ನಿವಹವನು ಮನ್ನಿಸುವೆನೆನೆ ನೀ
ನಿವನ ಕೊಲುವುದಸಾಧ್ಯವೀತನ ನಿಜವನರಿಯೆಯಲ
ಇವ ಹಿರಣ್ಯಾಕ್ಷಕ ಕಣಾ ಮರು
ಭವದೊಳಗೆ ದಶವದನನಿವ ಸಂ
ಭವಿಸಿದನು ಶಿಶುಪಾಲವೆಸರಲಿ ಭೀಮ ಕೇಳೆಂದ ೩೧
ಜನಿಸಿದಾಗಳೆ ಭಾಳದಲಿ ಲೋ
ಚನ ಚತುರ್ಭುಜನಾದನದ್ಭುತ
ನಿನದದಲಿ ನೆಲ ಬಿರಿಯಲೊದರಿದನಂದು ಬಾಲ್ಯದಲಿ
ತನತನಗೆ ಜನ ಬೆದರಿತೀತನ
ಮನೆಗೆ ನಾರದ ಬಂದನೀತನ
ಜನನಿ ಬಿನ್ನಹ ಮಾಡಿದಳು ಶಿಶುಪಾಲ ಸಂಗತಿಯ ೩೨
ಆತನೆಂದನು ತಾಯೆ ಶಿಶು ವಿ
ಖ್ಯಾತನಹ ನೀನಾರ ಹಸ್ತದೊ
ಳೀತನನು ಕೊಟ್ಟಾಗಲಡಗುವವಕ್ಷಿ ಭುಜ ಯುಗಳ
ಆತನೀತನ ಮೃತ್ಯುವಿದು ಸಂ
ಭೂತ ನಿಶ್ಚಯವೆಂದು ಶಿಶುವಿನ
ಮಾತೆಯನು ಸಂತೈಸಿ ನಾರದನಡರಿದನು ನಭವ ೩೩
ಇವನ ಕಾಣಲು ಬಂದರವನಿಪ
ರವರವರ ಕೈಗಳಲಿ ತಾಯ್ತಂ
ದಿವನನಿತ್ತಳು ಮಾಣವಿವನಧಿಕಾಕ್ಷಿ ಬಾಹುಗಳು
ಇವನ ತಾಯ್ ತಮ್ಮತ್ತೆಯೆಂದು
ತ್ಸವದಲಿ ಮುರವೈರಿ ಬರಲಂ
ದಿವನ ತಂದಿವನವ್ವೆ ಕೊಟ್ಟಳು ಹರಿಯ ಹಸ್ತದಲಿ ೩೪
ಆಗೆಳಿವನಧಿಕಾಕ್ಷಿ ಬಾಹುವು
ನೀಗಿದೊಡನಿವನವ್ವೆ ಕಂಡು
ಬ್ಬೇಗದಲಿ ಕಮಲಾಕ್ಷನಂಘ್ರಿಯಲೆರಗಿ ಕೈ ಮುಗಿದು
ಮೇಗರೆಯೆ ಮಾತಲ್ಲ ಬಾಲಕ
ನಾಗುಹೋಗಿನ ಕೊರತೆ ನಿನ್ನನು
ತಾಗುವುದು ನೀ ಸೈರಿಸೆಂದಭಯವನು ಬೇಡಿದಳು ೩೫
ಸೈರಿಸುವೆನಪರಾಧ ಶತವ ಕು
ಮಾರಕನ ತಾ ಕೊಲ್ಲೆನೆಂದೀ
ಶೌರಿ ಭಾಷೆಯ ಮಾಡಿ ಹಿಂಗಿದನಿವನ ತಾಯೊಡನೆ
ಆರಿವನ ಮರಣಕ್ಕೆ ಮೊದಲು ಮು
ರಾರಿಯೋ ನೀನೋ ವಿಚಾರಿಸು
ವೀರ ಮಾರುತಿಯೆನಲು ಕೇಳಿದನಂದು ಶಿಶುಪಾಲ ೩೬
ಎಲವೊ ಗೋಪಕುಮಾರನೆನ್ನನು
ಕೊಲುವನೇ ತಾನಿವನ ಕೈಯ್ಯಿಂ
ದಳಿವವನೆ ಶಿವ ಶಿವ ವಿಕಾರಿಯನೇನ ಮಾಡುವೆನು
ಗಳಹ ಬೀಷ್ಮ ವೃಕೋದರನ ಮೈ
ವಳಿಯ ಭಟನೋ ಮೇಣು ನೀ ಗೋ
ವಳರ ಹಳ್ಳಿಯ ಭಟ್ಟನೋ ಹೇಳೆಂದನಾ ಚೈದ್ಯ ೩೭
ಈ ಕುರುಕ್ಷಿತಿಪಾಲರಲಿ ನೀ
ನಾಕೆವಾಳನು ಗಡ ವಯಃಪರಿ
ಪಾಕವುಳ್ಳವನೀಸು ಕಾಲದಲೋದಿದರಿತವಿದೆ
ಕಾಕನುರೆ ಕೊಂಡಾಡಿ ಗೊಲ್ಲರ
ಗೋಕುಲದ ಗೋಪಪ್ರಸಂಗ
ವ್ಯಾಕರಣ ಪಾಂಡಿತ್ಯ ಮೆರೆದುದು ಭೀಷ್ಮ ನಿನಗೆಂದ ೩೮
ಇದು ಮಹಾ ಮುಖವಿಲ್ಲಿ ಪೂಜ್ಯನು
ಯದುಗಳರಸನು ಭಟ್ಟನಿಲ್ಲಿಗೆ
ನದಿಯ ಮಗನಿಲ್ಲಿಗೆ ಸದಸ್ಯರು ನಾರದಾದಿಗಳು
ಹುದಿದ ಮರುಭೂಮಿಯಲಿ ಮಾನ್ಯನು
ಖದಿರನಲ್ಲಿಗೆ ಗೂಗೆ ಕೋಗಿಲೆ
ಮುದಿನರಿಗಳಲ್ಲಿಗೆ ಸಭಾಸದರೆಂದನಾ ಚೈದ್ಯ ೩೯
ನೀನಲಾ ಧರ್ಮಜ್ಞನಂದಾ
ಮಾನಿನಿಯರ ವಿವಾಹದಲಿ ನೀ
ನೇನ ಮಾಡಿದೆ ಬೇಸರಿಸಿ ಬಳಲಿಸಿದೆ ಬಾಲಕಿಯ
ಏನ ಹೇಳುವೆನೊಂದು ಹಂಸನು
ಮಾನಸದ ತೀರದಲಿ ಪಕ್ಷಿವಿ
ತಾನದಲಿ ಧರ್ಮಜ್ಞನಾಯ್ತಾ ಹಂಸ ನೀನೆಂದ ೪೦
ನುಡಿಗಳಲಿ ಸದ್ಧರ್ಮ ಸಂಗತಿ
ನಡವಳಿಯಲನ್ಯಾಯವೆಂದೇ
ಕೆಡಹಿದವು ಹಂಸೆಯನು ನಾನಾ ವಿಹಗಸಂದೋಹ
ನುಡಿವುದಲ್ಲದೆ ಮೇಣು ನಯದಲಿ
ನಡೆದುದಿಲ್ಲೆಲ ಭೀಷ್ಮ ನಿನ್ನನು
ಕಡಿದು ಭೂತಕೆ ಬಡಿಸಿದರೆ ಕೃತಕೃತ್ಯನಹೆನೆಂದ ೪೧
ಕಳೆದ ಕಾಲದ ವೃದ್ಧ ಮೇಲ
ಗ್ಗಳದ ನಿಯಮವ್ರತ ಶ್ರುತಿ ಸ್ಮೃತಿ
ಗಳಲಿ ಪರಿಣತನೆಂಬೆ ಕಡೆಯಲಿ ಗೋಪನಂದನನ
ಬೆಳವಿಗೆಯ ಮಾಡಿದೆ ಮಹೀ ಮಂ
ಡಲದ ರಾಯರನಕಟ ಲಜ್ಜಾ
ಕುಳರ ಮಾಡಿದೆ ಭಂಡ ಫಡ ಹೋಗೆಂದನಾ ಚೈದ್ಯ ೪೨
ಪರಗುಣ ಸ್ತುತಿ ನಿಂದೆಗಳು ಹಿರಿ
ಯರಿಗೆ ಸಾಮ್ಯವೆ ನಿನ್ನ ಜಿಹ್ವೆಗೆ
ವರ ಗುಣಸ್ತವದಿಂದ ಮೇಣ್ಕಂಡೂತಿ ಹರವಹರೆ
ಹಿರಿಯರಿದೆಲಾ ಕಣ್ವ ಪೌಲಾಂ
ಗಿರಸ ಜೈಮಿನಿ ಯಾಜ್ಞವಲ್ಕ್ಯರು
ವರ ಸುಪೈಕದೊಳಧಿಕರಿದೆಲಾ ಭೀಷ್ಮ ಕೇಳೆಂದ ೪೩
ನಾವು ಮೊದಲಲಿ ನಮ್ಮೊಳಗೆ ಕುಂ
ದಾವುದೇತಕೆ ಹೊಗಳೆಯಿವರಲ
ದಾವಕೊರತೆ ಯುಧಿಷ್ಠಿರನ ನೀನೇಕುಪೇಕ್ಷಿಸಿದೆ
ಈ ವೃಕೋದರ ಪಾರ್ಥರನು ಸಹ
ದೇವ ನಕುಲರನೇಕೆ ಹೊಗಳೆಯ
ದಾವ ಗುಣನಿಧಿಯೆಂದು ಕೃಷ್ಣನ ಬಣ್ಣಿಸಿದೆಯೆಂದ ೪೪
ಗರುವನಲ್ಲಾ ಕೌರವೇಶ್ವರ
ನರಸಲಾ ಬಾಹ್ಲಿಕನು ರಾಯರ
ಗುರುವಲಾ ಕೊಂಡಾಡಲಾಗದೆ ಚಾಪ ಧೂರ್ಜಟಿಯ
ಗುರುಸುತನು ಸಾಮಾನ್ಯನೇ ಸಂ
ಗರ ಭಯಂಕರನಲ್ಲವೇ ವಿ
ಸ್ತರಿಸಲಾಗದೆ ನಿನ್ನ ಕೃಷ್ಣನ ಹವಣೆಯಿವರೆಂದ ೪೫
ಕವಚಕುಂಡಲ ಸಹಿತ ತಾನುದು
ಭವಿಸನೇ ಶೌರ್ಯಾದಿ ಗುಣದಲಿ
ಭುವನದಲಿ ಭಾರಾಂಕ ವೀರರು ಪಡಿಯೆ ಕರ್ಣಂಗೆ
ಇವನನೇಕಗ್ಗಳಿಸೆ ಭೂರಿ
ಶ್ರವನ ಹೊಗಳೆ ಜಯದ್ರಥನು ನಿ
ನ್ನವನ ಹವಣೇ ಶಲ್ಯ ಮುನಿಯನೆ ನಿನಗೆ ಹೇಳೆಂದ ೪೬
ಕುಲದಲಧಿಕರು ಶೌರ‍್ಯದಲಿ ವೆ
ಗ್ಗಳರು ಶೀಲದಲುನ್ನತರು ನಿ
ರ‍್ಮಲಿನರಾಚಾರದಲಿ ಕೋವಿದರಖಿಳ ಕಳೆಗಳಲಿ
ಇಳೆಯ ವಲ್ಲಭರಿನಿಬರನು ನೀ
ಕಳೆದು ನೊಣ ನೆರೆ ಹೂತ ವನವನು
ಹಳಿದು ಹಗಿನಿಂಗೆರಗುವವೊಲಾಯ್ತೆಂದನಾ ಚೈದ್ಯ ೪೭
ಘನನಲಾ ಭಗದತ್ತ ಕಾಂಭೋ
ಜನು ಪದಸ್ಥನಲಾ ವಿರಾಟನ
ತನುಜನೀ ಪಾಂಚಾಲ ಕೇಕಯರೀ ಮಹೀಭುಜರು
ವಿನುತರಲ್ಲಾ ದಂತವಕ್ರನು
ನಿನಗೆ ಕಿರುಕುಳನೇ ಜರಾಸಂ
ಧನ ಸುತನ ನೀನೇಕೆ ಬಣ್ಣಿಸೆ ಭೀಷ್ಮ ಹೇಳೆಂದ ೪೮
ದ್ರುಮನ ಕಿಂಪುರುಷಾಧಿಪನ ವಿ
ಕ್ರಮವ ಬಣ್ಣಿಸಲಾಗದೇ ಭೂ
ರಮಣರಿದೆಲಾ ಮಾಳವಂಗ ಕಳಿಂಗ ಕೌಸಲರು
ವಿಮಳರಿನಿಬರನುಳಿದು ಕೃಷ್ಣ
ಭ್ರಮೆ ಹಿಡಿದುದೈ ನಿನಗೆ ನಿನ್ನ
ಕ್ರಮದ ಭಣಿತೆಯ ಕರ್ಮಬೀಜವನರಿಯೆ ನಾನೆಂದ ೪೯
ಕುಮತಿ ಕೇಳ್ ಬೊಬ್ಬುಲಿಯ ಬನದಲಿ
ರಮಿಸುವುದೆ ಕಳಹಂಸ ಮಾಯಾ
ಭ್ರಮಿತದಲಿ ಯಾಚಿಸುವನೇ ವರಯೋಗಿ ನಿಜಪದವ
ಸಮರ ಪಟುಭಟ ದರ್ಪಪಿತ್ತ
ಭ್ರಮ ವಿಸಂಸ್ಥುಲ ಚಪಳಚಿತ್ತ
ಸ್ಥಿಮಿತ ಭೂಪರ ಬಗೆವನೇ ತಾನೆಂದನಾ ಭೀಷ್ಮ ೫೦
ಖತಿಯ ಹಿಡಿದುದು ಸಕಲ ತಾಜ
ಪ್ರತತಿಗಳು ದುರ್ಮಾರ್ಗಮಾನ
ವ್ಯಥಿಕರದೊಳುಬ್ಬೆದ್ದರನಿಬರು ಜಲಧಿ ಘೋಷದಲಿ
ಕ್ರತುವ ಜಲದಲಿ ಕದಡು ಗಂಗಾ
ಸುತನ ಹೊಯ್ ಕಟವಾಯ ಕೊಯ್ ನಿ
ಶ್ಚಿತ ಘಟಾಗ್ನಿ ಯಲಿವನ ಸುಡಿಯೆಂದುದು ನೃಪವ್ರಾತ ೫೧
ಬರಿಯ ಮಾತನೆ ಮೆರೆದು ಕಾರ್ಯದ
ಕೊರತೆಯಾದರೆ ನಾಯ್ಗಳೊರಲಿದ
ತೆರನಹುದಲೇ ತೋರಿರೈ ನೀವ್ನಿಮ್ಮ ಪೌರುಷವ
ಇರಿದು ನೀವ್ಕೊಲಲಾರದಿದ್ದರೆ
ನೆರೆ ಘಟಾಗ್ನಿಯೊಳುರುಹದಿದ್ದರೆ
ಕೆರಹು ನಿಮ್ಮಯ ಬಾಯಲೆಂದನು ಭೂಪರಿಗೆ ಭೀಷ್ಮ ೫೨
ನೆರೆದ ನರಿಗಳ ಮಧ್ಯದಲಿ ಕೇ
ಸರಿಯ ಮನ್ನಿಸುವಂತೆ ಕೃಷ್ಣನ
ಚರಣವನು ಪೂಜಿಸಿದೆವರ್ಘ್ಯಾರುಹನು ಮುರವೈರಿ
ಎರಡುಗಳು ನೀವೀ ಜನಾರ್ದನ
ನೊರೆಗೆ ಬಹರೇ ಪ್ರೀತಿಯೇನೀ
ಪರಿ ವಿಷಾದವೆ ಹೋಗಿಯೆಂದನು ಭೂಪರಿಗೆ ಭೀಷ್ಮ ೫೩
ಅಣಕಿಸುವರೆನ್ನೊಡನೆ ಹಿರಿಯು
ಬ್ಬಣವ ತೆಗೆಯಿರಿ ಈ ಮುರಾರಿಯ
ಕೆಣಕಲಾಪರೆ ಕರೆದು ನೋಡಿ ವೃಥಾಭಿಮಾನದಲಿ
ಹಣುಕಿ ಬಾಯ್ಬಡಿದೇನಹುದು ಕೈ
ಗುಣವ ತೋರಿರೆ ಸಾವಿರೊಳ್ಳೆಗೆ
ಮಣಿವನೇ ವಿಹಗೇಂದ್ರನೆಂದನು ಭೂಪರಿಗೆ ಭೀಷ್ಮ ೫೪
ಶಿವಶಿವಾ ಮುದುಗೂಗೆ ಮೆಚ್ಚದು
ರವಿಯನೆಲವೋ ಭೀಷ್ಮ ನಿಲು ಮಾ
ಧವನ ಮರ್ದಿಸಿ ನಿನಗೆ ಜೋಡಿಸುವೆನು ಮಹಾನಳನ
ಯುವತಿಯರು ಹಾರುವರು ಹುಲು ಪಾಂ
ಡವರು ಪತಿಕರಿಸಿದರೆ ನೀನಿಂ
ದೆವಗೆ ಮಾನ್ಯನೆ ಕೃಷ್ಣ ಸಿಂಹಾಸನವನಿಳಿಯೆಂದ ೫೫
ನಿನಗೆ ಮೊದಲೊಳು ನಿಶಿತ ವಿಶಿಖದ
ಮೊನೆಯೊಳರ್ಚಿಸಿ ಬಳಿಕ ಭೀಷ್ಮನ
ಘನ ಘಟಾನಳ ಕುಂಡದೊಳ್ಸ್ವಾಹಾಸ್ವಧಾಹುತಿಯ
ಅನುಕರಿಸಿ ಬಳಿಕಿನಲಿ ಕುಂತೀ
ತನಯರೈವರ ರಕುತ ಘೃತದಲಿ
ವಿನುತ ರೋಷಾಧ್ವರವ ರಚಿಸುವೆನೆಂದನಾ ಚೈದ್ಯ ೫೬
ಎಂದು ಚಾಪವ ತರಿಸಿ ಚಪ್ಪರ
ದಿಂದ ಹೊರವಡುತವನಿಪಾಲಕ
ವೃಂದವನು ಕೈವೀಸಿದನು ಕರೆ ಗೋಕುಲೇಶ್ವರನ
ಇಂದಲೇ ರಿಪು ರುಧಿರ ಪಾನಾ
ನಂದಕೃತ ಮದ ಶಾಕಿನೀ ಸ್ವ
ಚ್ಛಮದ ಲೀಲಾ ನೃತ್ಯದರ್ಶನವೆಂದನಾ ಚೈದ್ಯ ೫೭
ಡಾವರಿಸಿದುದು ವಿವಿಧ ವಾದ್ಯವಿ
ರಾವವಬುಜೋದ್ಭವನ ಭವನವ
ನಾ ವಿಗಡ ಭಟ ಕಟಕವಿದ್ದುದು ಬಲಿದ ಬೊಬ್ಬೆಯಲಿ
ಗೋವಳನ ಬರಹೇಳು ತೋರಾ
ಕಾವವರ ತಾ ಕೊಲುವೆನೆಂದೊದರಿದನು ಕಲಿ ಚೈದ್ಯ ೫೮
ಮಿನುಗುದುಟಿಗಳ ವಿಕಲ ಮಂತ್ರದ
ಬಿನುಗುಗಳ ಕೈಯಾಹುತಿಗೆ ಕರೆ
ದನಿಮಿಷರ ಪಲ್ಲಟದ ವಿಚಲಿತ ಸೂಕ್ತಿಮಯ ನಿನದ
ತನಿಭಯದ ತರಳಾಕ್ಷಿಗಳ ದು
ರ್ಮನದ ಮೋಡಿಯ ಮೊಗದ ಬರಿದೇ
ತೊನೆವ ಗಡ್ಡದ ಮುನಿಗಳಿದ್ದರು ಬಲಿದ ಬೆರಗಿನಲಿ ೫೯
ಹಲ್ಲಣಿಸಿದುದು ಯಾದವರ ಪಡೆ
ಘಲ್ಲಣೆಯ ಘರ್ಘರದ ಘೋಷದ
ಭುಲ್ಲಣೆಯ ಗಂಭೀರ ಭೇರಿಯ ಬಹಳ ರಭಸದಲಿ
ನಿಲ್ಲದಿಳೆ ಪದಹತಿಗೆನಲು ಬಲ
ವೆಲ್ಲ ಭೀಮನ ಸನ್ನೆಯಲಿ ರಣ
ಮಲ್ಲರೊಡ್ಡಿತು ಹೊರಗೆ ನೃಪಮೋಹರದ ಬಾಹೆಯಲಿ ೬೦
ಮುನಿಗಳಂಜದಿರಂಜದಿರಿ ಪರಿ
ಜನಕೆ ಗಜಬಜ ಬೇಡ ಯಾದವ
ಜನಪರುಬ್ಬಟೆ ನಿಲಲಿ ಸೈರಿಸಿ ಪಾಂಡುಸುತರೆನುತ
ಮೊನೆ ನಗೆಯ ಸಿರಿಮೊಗದ ನೆಗಹಿದ
ಜನದಭಯ ಹಸ್ತಾಂಬುಜದ ಹರಿ
ವಿನುತ ಸಿಂಹಾಸನವನಿಳಿದಾ ಧುರಕೆ ಹೊರವಂಟ ೬೧
ಅಂದಿನಲಿ ಶಿಶುಪಾಲಕನ ತಾ
ಯ್ಬಂದು ಮಗನಪರಾಧ ಶತದಲಿ
ಕಂದಲಾಗದು ಚಿತ್ತವೆಂದಳು ನಮ್ಮನನುಸರಿಸಿ
ಇಂದು ಖತಿಯಿಲ್ಲೆಮಗೆ ಸೈರಿಸ
ಬಂದುದಿಲ್ಲವಗೆರಡು ತಪ್ಪಿನೊ
ಳೆಂದು ಮುರಹರ ನಗುತ ನುಡಿದನು ನಾರದಾದ್ಯರಿಗೆ ೬೨
ಈ ಮಹಾ ಯಜ್ಞವನು ಕೆಡಿಸುವೆ
ನೀ ಮಹೀಶನ ಮುರಿವೆನೆಂದೇ
ವೈಮನಸ್ಯದಿ ಬಗೆದು ಮೊನೆ ಮಾಡಿದನು ನುಡಿಯೆರಡ
ತಾಮಸನ ತರಿದಖಿಳ ಭೂತ
ಸ್ತೋಮ ತುಷ್ಟಿಯ ಕೀರ್ತಿ ಫಲಿಸಲಿ
ಯೀ ಮಹಾಶರಕೆನುತ ಕೊಂಡನು ದಿವ್ಯಕಾರ‍್ಮುಕವ ೬೩
ಝಂಕೆ ಮಿಗೆ ಹೊರವಂಟುದೆಡಬಲ
ವಂಕದಲಿ ಯದುಸೇನೆ ಪಾಂಡವ
ರಂಕೆಯಲಿ ದಳ ಜೋಡಿಸಿತು ಝಳಪಿಸುವ ಕೈದುಗಳ
ಮುಂಕುಡಿಯ ಮೋಹರದ ದಳ ನಿ
ಶ್ಶಂಕೆಯಲಿ ಜೋಡಿಸಿತು ಭೂಪರ
ಬಿಂಕ ಬೀತುದು ಭೀತಿ ಹೂತುದು ಹುದುಗಿತಾಟೋಪ ೬೪
ತೊಲಗಿದನು ಕುರುರಾಯ ಪಾಂಡವ
ರೊಳಗೆ ತಪ್ಪಿಲ್ಲೆನುತ ಮಿಗೆ ಕುರು
ತಿಲಕನಾವೆಡೆಯೆನುತ ಬಳಿವಿಡಿದರು ನೃಪಾಲಕರು
ಕಲಿ ಜಯದ್ರಥ ಮಾದ್ರಪತಿ ಸೌ
ಬಲ ಕಳಿಂಗ ಕರೂಪ ನೃಪ ಕೌ
ಸಲರು ತಿರುಗಿತು ಬೇರೆ ಭಗದತ್ತಾದಿಗಳು ಸಹಿತ ೬೫
ಚೆಲ್ಲಿತೀ ನೃಪಯೂಥ ಜಾರಲಿ
ಜಳ್ಳುಗಳು ಜಲಜಾಕ್ಷನ ಪ್ರತಿ
ಮಲ್ಲ ತಾನೇ ಸಾಲದೇ ಹಾರುವೆನೆ ಕೆಲಬಲನ
ಖುಲ್ಲರಾಯರು ನಿಲಲಿ ಗೊಲ್ಲರ
ಹಳ್ಳಿಗಾರ ಕೂಡೆ ಬಿರುದಿನ
ಕಲ್ಲಿಗಳ ತಮ್ಮೆದೆಯಲೊತ್ತಲಿಯೆಂದನಾ ಚೈದ್ಯ ೬೬
ಎನುತ ಖಳಿನಿದಿರಾಗಿ ಮಧು ಮ
ರ್ದನನ ಹಳಚಿದನಸುರ ರಿಪುವಿನ
ಮೊನೆಗಣೆಯಲೇ ಮುಳುಗಿದನು ಬಳಿಕಾ ಮುಹೂರ್ತದಲಿ
ದನುಜ ವೈರಿಯ ಮುಸುಕಿದನು ತನ
ತನಗೆ ನೋಟಕವಾಯ್ತು ಭೂಪತಿ
ಜನ ಸುನೀತ ಮುರಾರಿಗಳ ಕೌತೂಹಲಾಹವಕೆ ೬೭
ಬಿಡುವ ತೊಡಚುವ ಸಂಧಿಸುವ ಜೇ
ವಡೆವ ಹೂಡುವ ತಾಗಿಸುವ ಹಿಳು
ಕಿಡುವ ಹರಿಕುವ ಬೆಸುವ ಭೇದಿಸುವ ಸಮ ಚಾಪಳವ
ನುಡಿವ ಕವಿ ಯಾರೈ ಬರಿಯ ಬಾ
ಯ್ಬಡಿಕನೇ ಶಿಶುಪಾಲನೀ ಪರಿ
ನಡೆವುದೇಕೈ ಹರಿಯೊಡನೆ ಸಮಬೆಸನ ಬಿಂಕದಲಿ ೬೮
ಸೋತನೈ ಹರಿಯೆಂದು ಚೈದ್ಯನ
ಬೂತುಗಳು ಬಣ್ಣಿಸಿದರೀ ನಿ
ರ್ಭೀತ ಯಾದವ ಸೈನ್ಯವಿದ್ದುದು ಹರುಷ ಕೇಳಿಯಲಿ
ಈತ ರಾವಣ ಮುನ್ನ ಭುವನ
ಖ್ಯಾತನೆಂದಮರರು ವಿಮಾನ
ವ್ರಾತದಲಿ ನೆರೆ ನೋಡುತಿರ್ದುದು ಸಮರ ಸಂಭ್ರಮವ ೬೯
ಧರಣಿಪತಿ ಕೇಳ್ ಕೃಷ್ಣ ಶಿಶುಪಾ
ಲರ ಮಹಾ ಸಂಗ್ರಾಮ ಮಧ್ಯದೊ
ಳುರಿದುದಿಳೆ ಹೊಗೆದುದು ದಿಶಾವಳಿ ಧೂಮಕೇತುಗಳು
ತರಣಿಮಂಡಲ ಮಾಲೆಗಳು ವಿ
ಸ್ತರಿಸಿತಾಕಾಶದಲಿ ಪರ್ವದ
ಲುರವಣಿಸಿದನು ರಾಹು ಚಂದ್ರಾದಿತ್ಯ ಮಂಡಲವ ೭೦
ನಡುಗಿತವನಿಯಕಾಲದಲಿ ಬರ
ಸಿಡಿಲು ಸುಳಿದುದು ಹಗಲು ತಾರೆಗ
ಳಿಡಿದವಭ್ರದಲಿಳೆಗೆ ಸುರಿದುದು ರುಧಿರಮಯ ವರ್ಷ
ಮಿಡುಕಿದವು ಪ್ರತಿಮೆಗಳು ಶಿಖರದಿ
ನುಡಿದು ಬಿದ್ದುದು ಕಳಶ ಹೆಮ್ಮರ
ವಡಿಗಡಿಗೆ ಕಾರಿದವು ರುಧಿರವನರಸ ಕೇಳೆಂದ ೭೧
ನೆಳಲು ಸುತ್ತಲು ಸುಳಿದುದಿನ ಮಂ
ಡಳಕೆ ಕಾಳಿಕೆಯಾಯ್ತು ಫಲದಲಿ
ಫಲದ ಬೆಳವಿಗೆ ಹೂವಿನಲಿ ಹೂವಾಯ್ತು ತರುಗಳಲಿ
ತಳಿತ ಮರನೊಣಗಿದವು ಕಾಷ್ಠಾ
ವಳಿಗಳುರೆ ತಳಿತವು ತಟಾಕದ
ಸಲಿಲವುಕ್ಕಿತು ಪಾಂಡುಪುತ್ರರ ಪುರದ ವಳಯದಲಿ ೭೨
ಬೆದರಿದನು ಯಮಸೂನು ಭಯದಲಿ
ಗದಗದಿಸಿ ನಾರದನ ಕೇಳಿದ
ನಿದನಿದೇನೀ ಪ್ರಕೃತಿ ವಿಕೃತಿಯ ಸಕಳ ಚೇಷ್ಟೆಗಳು
ಇದು ಕಣಾ ಚೈದ್ಯಾದಿಗಳ ವಧೆ
ಗುದುಭವಿಸಿದುದಲೇ ಮುರಾರಿಯೊ
ಳುದಯಿಸುವವುತ್ಪಾತ ಚೇಷ್ಟೆಗಳೆಂದನಾ ಮುನಿಪ ೭೩
ಈ ನೆಗಳಿದುತ್ಪಾತ ಶಾಂತಿ ವಿ
ಧಾನವೇನೆನೆ ಕೃಷ್ಣ ಚೇಷ್ಟೆಯೆ
ಹಾನಿ ವೃದ್ಧಿ ವಿನಾಶವಭ್ಯುದಯ ಪ್ರಪಂಚದಲಿ
ಮಾನನಿಧಿಯೇ ವೇದಸೂಕ್ತ ವಿ
ಧಾನದಲಿ ಪರಿಹಾರ ವಿಶ್ವ
ಕ್ಸೇನಮಯವೀ ಲೋಕ ಯಾತ್ರೆಗಳೆಂದನಾ ಮುನಿಪ ೭೪
ಆ ಹರಿಯೆ ನಿಮಗಿಂದು ಜೀವ
ಸ್ನೇಹಿತನು ನಿಮಗಾವ ಚಿಂತೆ ವಿ
ಮೋಹ ಚೇಷ್ಟೆಗಳಿವನ ವಧೆಗೋ ಬಲ್ಲರಾರಿದನು
ಊಹಿಸಲು ಬೇಡೆಂದು ಮುನಿಪತಿ
ಗಾಹಿನಲಿ ತಿಳುಹಿದನು ಘನ ಸ
ನ್ನಾ ಹರೆಚ್ಚಾಡಿದರು ಶಿಶುಪಾಲಕ ಮುರಾಂತಕರು ೭೫
ಕಾದಿದರು ವಿವಿಧಾಸ್ತ್ರ ವಿದ್ಯಾ
ಭೇದದಲಿ ರಥಭಂಗ ಚಾಪ ವಿ
ಭೇದ ಶಸ್ತ್ರಾಸ್ತ್ರೌ ಘ ಸಂಹರಣ ಪ್ರಪಂಚದಲಿ
ಈ ದುರಾತ್ಮನ ನಿಲಿಸಿ ನಿಮಿಷದೊ
ಳಾ ದಯಾಂಬುಧಿ ತುಡುಕಿದನು ತ್ರೈ
ವೇದಮಯ ಮೂರ್ತಿತ್ರಯಾತ್ಮಕ ವರ ಸುದರ್ಶನವ ೭೬
ಬೆಸಸಿದನು ಚಕ್ರವನು ಧಾರಾ
ವಿಸರ ಧೂತ ಪರಿಸ್ಫುಲಿಂಗ
ಪ್ರಸರ ತೇಜಃಕಣ ಪರಿಷ್ಕೃತನವ್ಯ ಶತಭಾನು
ದೆಸೆದೆಸೆಗೆ ದುವ್ವಾಳಿಸುವ ಬೆಳ
ಗೆಸೆಯೆ ಬಂದು ಸುನೀತ ಕಂಠದ
ಬೆಸುಗೆ ಬಿಡಲೆರಗಿದುದು ಹಾಯ್ದುದು ತಲೆ ನಭಸ್ಥಳಕೆ ೭೭
ಹರಿಗೊರಳ ಚೌಧಾರೆಯಲಿ ಧುರು
ಧುರಿಸಿ ನೂಕಿತು ರಕುತವದರೊಳು
ಮಿರುಪ ತೇಜಃಪುಂಜವುಕ್ಕಿತು ಹೊದರ ಹೊಳಹಿನಲಿ
ತುರುಗುವೆಳಗಿನ ಜೋಕೆಯಲಿ ಜಗ
ವರಿಯೆ ಬಂದು ಮುರಾರಿಯಂಘ್ರಿಯೊ
ಳೆರಗಿ ನಿಂದುದು ನಿಜ ನೆಲೆಗೆ ವಿಜಯಾಭಿಧಾನದಲಿ ೭೮
ತಗ್ಗಿ ತುರು ಕಳಕಳ ವಿಷಾದದ
ಸುಗ್ಗಿ ಬೀತುದು ರಾಯರೀಚೆಯ
ಮಗ್ಗುಲಲಿ ಮೇಳೈಸಿ ಮೆರೆದರು ಮತ್ತೆ ಬಾಂಧವರು
ನೆಗ್ಗಿದವು ನೆನಹವನ ಸಖಿಗಳು
ಮುಗ್ಗಿದರು ಹುರಡಿನ ವಿಘಾತಿಯ
ಲಗ್ಗಿಗರು ಹಣುಗಿದರು ಶಿಶುಪಾಲಾವಸಾನದಲಿ ೭೯
ಈಸು ಹಿರಿದಿಲ್ಲೆಂದು ಕೆಲಬರು
ಲೇಸ ಮಾಡಿದನಸುರ ರಿಪುವಿವ
ನೀಸು ಬಾಹಿರನೆಂದರಿಯೆವಾವೆಂದು ಕೆಲಕೆಲರು
ಐಸಲೇ ಕೃಷ್ಣಂಗೆ ಮುನಿದವ
ರೇಸು ದಿನ ಬದುಕುವರು ಲೇಸಾ
ಯ್ತಾ ಸುನೀತಂಗೆಂದು ನಗುತಿರ್ದುದು ನೃಪಸ್ತೋಮ ೮೦
ಗೋಳಿಡುತ ಬಂದೆರಗಿದರು ಶಿಶು
ಪಾಲ ತನುಜರು ಕೃಷ್ಣನಂಘ್ರಿಗೆ
ಲಾಲಿಸಿದನನಿಬರನು ಸಂತೈಸಿದನು ಕರುಣದಲಿ
ಮೇಲು ಪೋಗಿನ ವಿಧಿವಿಹಿತ ಕ
ರ್ಮಾಳಿಗಳ ಮಾಳ್ದವನ ಮಗಗೆ ಕೃ
ಪಾಳು ಪಟ್ಟದ ಸೇಸೆದಳಿದನು ವೀರನಾರಯಣ ೮೧
ಸಂಕ್ಷಿಪ್ತ ಭಾವ
ಶಿಶುಪಾಲನ ಪರವಾಗಿ ಕೆಲವು ರಾಜರುಗಳು ನಿಂತರು. ಸಮಯ ಬಂದರೆ ಯುದ್ಧಮಾಡಲು ಸಿದ್ಧರಾದರು. ಇದನ್ನು ಕಂಡು ಬೇಸರಗೊಂಡ ಧರ್ಮಜನನ್ನು ಭೀಷ್ಮರು ಸಂತೈಸಿದರು. ಇದೆಲ್ಲವೂ ಕ್ಷಣಿಕವಾದುದು. ಕೃಷ್ಣ ಇರುವಾಗ ಚಿಂತೆಗೆ ಕಾರಣವಿಲ್ಲವೆಂದರು.
ಇತ್ತ ಶಿಶುಪಾಲನು ಭೀಷ್ಮನನ್ನು ನಪುಂಸಕನೆಂದು ಜರಿಯಲು ಆರಂಭಿಸಿದನು. ಎಂತೆಂತಹಾ ವೀರರು, ಗುರುಗಳು, ಪ್ರಮುಖರು ಇರುವಾಗ ಈ ಕೃಷ್ಣನನ್ನು ವರ್ಣಿಸುತ್ತಿರುವಿರಲ್ಲ ನೀವು ಹೇಡಿಗಳೆಂದನು. ಇವನು ಕಳ್ಳ, ಕೊಲೆಗಾರ, ಸೋದರಮಾವನನ್ನು ಕೊಂದವನು, ಇತ್ಯಾದಿ ಮತ್ತೆ ಆರೋಪಗಳು ಆರಂಭವಾದವು.
ಭೀಮನಿಗೆ ತಡೆಯಲಾಗಲಿಲ್ಲ. ಹಾಗೆಯೇ ಯಾದವರು, ಇತರ ರಾಜರುಗಳು ಭೀಮನೊಂದಿಗೆ ಶಿಶುಪಾಲನನ್ನು ಎದುರಿಸಲು ಸಿದ್ಧತೆ ನಡೆಸಿದರು. ಭೀಷ್ಮನು ಎಲ್ಲರನ್ನೂ ಸಮಾಧಾನಿಸಿದನು. ಅವನ ಮರಣ ಕೃಷ್ಣನಿಂದಲೇ ಆಗುವುದೆಂದು ಹೇಳಿ ಅದರ ಹಿನ್ನೆಲೆಯನ್ನು ಎಲ್ಲರಿಗೂ ಹೇಳತೊಡಗಿದನು.
ಶಿಶುಪಾಲನು ಹಿಂದೆ ಹಿರಣ್ಯಾಕ್ಷನಾಗಿದ್ದವನು. ಇವನ ತಾಯಿ ಕೃಷ್ಣನಿಗೆ ಸೋದರತ್ತೆಯಾಗಬೇಕು. ಇವನು ಹುಟ್ಟಿದಾಗ ಚತುರ್ಭುಜನಾಗಿಯೂ, ಹಣೆಯಲ್ಲಿ ಒಂದು ವಿರೂಪಗೊಂಡ ಕಣ್ಣನ್ನೂ ಹೊಂದಿದ್ದನು. ಇದರಿಂದ ಚಿಂತಿತಳಾದ ತಾಯಿಯು ನಾರದರನ್ನು ಕೇಳಲು ಅವರು ಯಾರು ಎತ್ತಿಕೊಂಡಾಗ ಇವನು ಮೊದಲಿನ ರೂಪದಲ್ಲಿ ಬರುವನೋ ಅವನಿಂದಲೇ ಇವನ ಮರಣ ಎಂದರು.
ಕೃಷ್ಣನು ಎತ್ತಿಕೊಂಡಾಗ ಶಿಶುಪಾಲನು ಸರಿ ಹೋದನು. ಆಗ ಅವನ ತಾಯಿಯು ಕೃಷ್ಣನಲ್ಲಿ ಬೇಡಿಕೊಂಡಾಗ ಇವನ ನೂರು ಅಪರಾಧಗಳನ್ನು ಸಹಿಸುವೆನೆಂದಿದ್ದನು. ಈಗ ಕಾಲ ಕೂಡಿ ಬಂದಿದೆ.
ಶಿಶುಪಾಲನು ಭೀಷ್ಮನನ್ನು ಮತ್ತು ಕೃಷ್ಣನನ್ನು ಹೀನಾಮಾನವಾಗಿ ಹಳಿಯುವುದನ್ನು ಮುಂದುವರಿಸಿದನು. ಕೃಷ್ಣನನ್ನು ಬಿಟ್ಟು ಮತ್ತಾರೂ ನಿನಗೆ ಸಿಗಲಿಲ್ಲವೇ ಎಂದು ಮೂದಲಿಸಿದನು. ಅವರು ಹೇಳಿದರು ಅಂತ ಒಪ್ಪಿಕೊಂಡ ನಿನಗೆ ನಾಚಿಕೆಯಿಲ್ಲವೆ? ಕೆಳಗಿಳಿ ಎಂದು ಕೃಷ್ಣನನ್ನು ರೇಗಿಸಿದನು.
ಎರಡೂ ತಂಡದವರಿಗೆ ಹೋರಾಟ ಮೊದಲಾಯಿತು. ಆಗ ಕೃಷ್ಣನು ನಗುತ್ತಾ ಎಲ್ಲರನ್ನೂ ಸುಮ್ಮನಿರಿಸಿ ತಾನು ಕೆಳಗೆ ಇಳಿದು ಬಂದು ಶಿಶುಪಾಲನೊಡನೆ ಯುದ್ಧಕ್ಕೆ ನಿಂತನು.
ಭವನದಿಂದ ಹೊರಗೆ ಬಂದರು. ಕಾಳಗ ಆರಂಭವಾಯಿತು. ಎಲ್ಲರಿಗೂ ಕಳವಳ. ಇದುವರೆಗೂ ಇವನನ್ನು ತಡೆಯಲು ಇವನ ಅಮ್ಮನಿಗೆ ಕೊಟ್ಟ ವಚನ ಕಾರಣವಾಗಿತ್ತು. ಆದರೆ ಈಗ ಇವನ ಅಪರಾಧ ಶತಕ ದಾಟಿತು ಎಂದು ನಾರದಾದಿಗಳಿಗೆ ಹೇಳಿ ತನ್ನ ಸುದರ್ಶನ ಚಕ್ರವನ್ನು ಪ್ರಯೋಗಿಸಿ ಶಿಶುಪಾಲನ ತಲೆಯನ್ನು ತೆಗೆದನು. ಎಲ್ಲ ಕೋಲಾಹಲ ತಗ್ಗಿತು. ಕೃಷ್ಣನು ಶಿಶುಪಾಲನ ಮಕ್ಕಳನ್ನು ಸಂತೈಸಿ ಅವರಲ್ಲಿ ಹಿರಿಯನಿಗೆ ಪಟ್ಟ ಕಟ್ಟಿದನು.
ಎಂಥ ತಪ್ಪು ಮಾಡಿದ ಶಿಶುಪಾಲನಿಗೂ ಪರಮಾತ್ಮ ನೂರು ಅವಕಾಶ ಕೊಟ್ಟ. ತಪ್ಪು ಮಾಡುತ್ತಲೇ ಇರುವವರಿಗೆ ಅಧೋಗತಿ.
ಕಾಮೆಂಟ್‌ಗಳು