ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಭಾರತಕಥಾಮಂಜರಿ31


 ಅಪಹಾಸ್ಯ ಬರೆಯತೊಡಗಿತು ಮುನ್ನುಡಿ
ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರಿ 
ಸಭಾ ಪರ್ವ - ಹನ್ನೊಂದನೆಯ ಸಂಧಿ


ರಾಜಸೂಯಕ್ರತು ಸಮಾಪ್ತಿಯೊ
ಳಾ ಜನಾರ್ದನ ಮುಖ್ಯರನು ಯಮ
ರಾಜಸುತ ಕಳುಹಿದನು ಹೊಕ್ಕರು ತಮ್ಮ ನಗರಿಗಳ

----

ಕೇಳು ಜನಮೇಜಯ ಧರಿತ್ರೀ
ಪಾಲ ರಣ ಗಜಬಜದ ಗೋಳಾ
ಗೋಳಿ ತಣಿತುದು ಹಂತಿಗಟ್ಟಿತು ಮತ್ತೆ ನೃಪನಿಕರ
ಮೇಲಣಂತರ್ವೇದಿಗಳ ಮುನಿ
ಪಾಳಿ ಮಂತ್ರಾಹುತಿಗೆ ಕವಿವುರಿ
ನಾಲಗೆಯ ಲಾವಣಿಗೆ ತಳಿತುದು ಯಜ್ಞಕುಂಡದಲಿ ೧

ತಳಿತು ತಿವಿದಾಡಿದವು ಮುರಿದೊಡ
ಗಲಸಿದವು ಹೊಗೆ ಸುತ್ತಿ ಸಿಮಿ ಸಿಮಿ
ಮೊಳಗಿ ಹೊದರೆದ್ದವು ಸಗಾಢದಲುಬ್ಬಿ ಭುಗುಭುಗಿಸಿ
ಸುಳಿ ಸುಳಿದು ಭೋರೆಂದು ಬಿಗಿದ
ವ್ವಳಿಸಿದವು ಘೃತ ಧಾರೆಗಳಿಗು
ಚ್ಚಳಿಸಿದವು ಹರಹಿನಲಿ ನಾಲಗೆ ಹವ್ಯವಾಹನನ ೨

ಶ್ರುತಿ ವಿಧಾನರ ವಿಮಳ ಪೂರ್ಣಾ
ಹುತಿಯ ಪಾರಾಯಣದ ನಿಗಮ
ಪ್ರತತಿಗಳ ಪರಿಪೂತ ಪರಿಮಳಮಯ ದಿಶಾವಳಿಯ
ಕ್ರತು ಸಮಾಪ್ತಿಯಲವಭೃತದ ಭೂ
ಪತಿಯ ವಿಮಳಸ್ನಾನ ಪುಣ್ಯೋ
ಚಿತದಲೋಕುಳಿಯಾಡಿ ದಣಿದುದು ಲೋಕ ಸುರ ನರರ ೩

ಅರಸ ಚಿತ್ತವಿಸೊಂದು ಲಕ್ಷದ
ರ್ಧಣಿಯಮರರ ಭೋಜನಾಂತಕೆ
ಮೊರೆವುದೊಂದೇ ಬಾರಿ ಶಂಖಧ್ವನಿ ಛಡಾಳದಲಿ
ಪರುಠವಣೆಯಿದು ರಾಜ ಸೂಯಾ
ಧ್ವರದ ಮೊದಲವಸಾನ ಪರಿಯಂ
ತರದೊಳೋರಂತದಲಿ ಹಗಲಿರುಳೂದಿತನವರತ ೪

ಏಸು ಲಕ್ಷವದೇಸು ಕೋಟಿಯ
ದೇಸು ನಿರ್ಬುದವೇಸು ಖರ್ವವ
ದೇಸು ಪದ್ಮದ್ವಿಜರ ಗಣನೆಯನರಿವರಾರದನು
ಏಸು ಭಕ್ಷ್ಯೋದನದ ಪರ‍್ವತ
ರಾಶಿ ದಧಿ ಘೃತ ದುಗ್ಧ ಮಧು ವಾ
ರಾಸಿಯೊಡ್ಡಣೆ ಮೆರೆದುದಿಂದ್ರಪ್ರಸ್ಥ ನಗರಿಯಲಿ ೫

ಓಗರದ ರಾಶಿಗಳ ಗಿರಿ ಕಂ
ಡಾಗಲಂತಿರೆ ಮರಳಿ ಕಾಣೆನು
ಸಾಗರದವೊಲೆ ದಧಿ ಘೃತಾದಿ ಮಹಾಪ್ರವಾಹಚಯ
ಆಗಳಂತಿರೆ ಬತ್ತುವವು ನಿಮಿ
ಷಾಗಮಕೆ ತುಂಬುವವು ಯಮಜನ
ಯಾಗ ಲಕ್ಷ್ಮಿಯನಲ್ಪಮತಿ ಬಣ್ಣಿಸುವಡರಿದೆಂದ ೬

ಅರಸ ಮೈಯಿಕ್ಕಿದನು ಸನ್ಮುನಿ
ವರ ಸಮಾಜಕೆ ನಿಮ್ಮ ಕೃಪೆಯಲಿ
ಧರಣಿಪಾಧ್ವರ ಸಿದ್ಧಿಯಾಯ್ತು ನಿರಂತರಾಯದಲಿ
ಕರುಣ ನಿಮ್ಮದು ನಿಮ್ಮ ಮಿಗೆ ಸ
ತ್ಕರಿಸಲರಿಯೆನು ಹೆಚ್ಚು ಕುಂದಿನ
ಹುರುಳನೀಕ್ಷಿಸಲಾಗದೆಂದನು ಮುಗಿದು ಕರಯುಗವ ೭

ಮನ್ನಿಸಿದನವರುಗಳನುಡುಗೊರೆ
ಹೊನ್ನು ವಿವಿಧಾಭರಣ ಪಶುಗಳ
ಲುನ್ನತಾಶೀರ್ವಾದ ವಚನದೊಳವನಿಪನ ಹರಸಿ
ಸನ್ನು ತರು ತಮ್ಮಾಶ್ರಮಕೆ ಸಂ
ಪನ್ನ ಸತ್ಯರು ಮರಳಿದರು ಪ್ರತಿ
ಪನ್ನ ಯಜ್ಞವಿಳಾಸನೊಪ್ಪಿದನಿಂದ್ರ ವಿಭವದಲಿ ೮

ರಾಜ ವರ್ಗವನವರವರ ನಿಜ
ತೇಜ ಮಾನ್ಯೋಚಿತದ ಗಜ ರಥ
ವಾಜಿ ವಿವಿಧಾಭರಣ ವಸನ ವಧೂ ಕದಂಬದಲಿ
ಆ ಜಗತ್ಪತಿಯುಳಿಯೆ ಪಾರ್ಥಿವ
ರಾಜಿಯನು ಮನ್ನಿಸಿ ಯುಧಿಷ್ಠಿರ
ರಾಜನನುಜರು ಕೂಡಿ ಕಳುಹಿಸಿದನು ಮಹೀಶ್ವರರ ೯

ಫಲುಗುಣನು ಧೃತರಾಷ್ಟ್ರ ಭೀಷ್ಮರ
ಕಳುಹಿದನು ಗುರು ಗುರುತನೂಜರ
ಬಳಿಯೊಳನಿಲಜ ಬಂದನಾ ಕೃಪನೊಡನೆ ಸಹದೇವ
ಬಳಿಯಲೈದಿದ ನಕುಲನಾ ಸೌ
ಬಲನ ಸೈಂಧವ ಶಲ್ಯನನು ಕೌ
ಸಲ ವಿರಾಟ ದ್ರುಪದಸುತ ಭಗದತ್ತ ಭೂಪತಿಯ ೧೦

ಅರಸ ಕೇಳೈ ಪಾಂಡ್ಯ ಭೂಮೀ
ಶ್ವರ ಕಳಿಂಗ ಪ್ರಮುಖ ತೆಂಕಣ
ಧರಣಿಪರ ಬಳಿಯಲಿ ಘಟೋತ್ಕಚ ಯೋಜನಾಂತರವ
ವರ ಕುಮಾರರು ನಿಖಿಳ ಪೃಥ್ವೀ
ಶ್ವರರನವರವರುಚಿತದಲಿ ಸತು
ಕರಿಸಿ ಮರಳಿದು ಬಂದರಿಂದ್ರಪ್ರಸ್ಥಪುರವರಕೆ ೧೧

ಕರೆಸಿದನು ಹರಿ ಪಾಂಡು ಪುತ್ರರ
ನರಸಿ ಸಹಿತೇಕಾಂತ ಭವನದೊ
ಳುರತರ ಪ್ರೇಮೈಕ ರಸ ಸಂಸಿಕ್ತ  ವಚನದಲಿ
ಭರಿತವಾಯಿತೆ ರಾಜಸೂಯಾ
ಧ್ವರ ಸದಾಹುತಿ ತೃಪ್ತ್ಯ ಮಾಣಾ
ಮರ ಮಹೀಶ್ವರ ವಿಭವ ವಿಳಸಿತ ಪಾಂಡು ಪದವೆಂದ ೧೨

ದೇವನಂಘ್ರಿಯ ಮುಸುಕಿದವು ಮುಕು
ಟಾವಳಿಗಳೈವರ ಸತಿಯ ಸಂ
ಭಾಷಣೆಯ ಮಧುರೋಕ್ತಿ ರಸದಲಿ ನಗುತ ಮನ್ನಿಸಿದ
ಓವಿದನು ಮುರವೈರಿ ಕಾರು
ಣ್ಯಾವಲೋಕನದಿಂದ ನಿನ್ನವ
ರಾವ ಭವದಲಿ ಭಜಿಸಿದರೊ ನಿಷ್ಠೆಯಲಿ ಹರಿಪದವ ೧೩

ದೇವ ನಿಮ್ಮ ಡಿಯಂಘ್ರಿ ಕಮಲವ
ನಾವ ನೆನದನವಂಗೆ ತುಸುವ
ಲ್ಲಾ ವಿರಿಂಚಾದ್ಯಮರ ಪದವಿದು ನಿಗಮ ಸಿದ್ಧವಲೆ
ನಾವು ಸಾಕ್ಷಾದಮಳ ಮೂರ್ತಿ ಸು
ಧಾವಸೇಚನ ಧೂತ ಕಿಲ್ಬಿಷ
ರಾವುದರಿದೈ ಬೊಪ್ಪನವರಿಗೆ ಶಕ್ರಪದವೆಂದ ೧೪

ಮಸಗಿದರೆ ಮಾಗಧನು ಯಜ್ಞವ
ಮಿಸುಕಲೀವನೆ ಚೈದ್ಯನಿಂದು
ಬ್ಬಸವ ಮಾಡಿದೊಡೆಮ್ಮ ಕೈಯಲಿ ಹರಿವ ಹೆಕ್ಕಳವೆ
ಶಿಶುವೊರಲಿದರೆ ಕಂಬದಲಿ ತೋ
ರಿಸಿದ ಕರುಣಾಜಲಧಿಯೇ ಪಾ
ಲಿಸಿದೆಲಾ ಪಾಂಡವರನೆಂದಳು ಹೊರಳಿ ಚರಣದಲಿ ೧೫

ಏಳೆನುತ ತೆಗೆದಪ್ಪಿದನು ಕರು
ಣಾಳು ಪರಿತೋಷಾಶ್ರುಪೂರ್ಣ ವಿ
ಶಾಲ ಲೋಚನ ನೋಡಿದನು ತನ್ನವರನೊಲವಿನಲಿ
ಬಾಲಕಿಯೆ ಬಾ ತಂಗು ಬಾ ನೀ
ಲಾಳಕಿಯೆ ಬಾಯೆನುತ ಮಿಗೆ ಪಾಂ
ಚಾಲೆಯನು ಕರೆದಸುರರಿಪು ಸೂಚಿಸಿದನಂಗನೆಗೆ ೧೬

ನಂಬದಿರು ಸಿರಿಯನು ಪತಿವ್ರತೆ
ಯೆಂಬರಿಗೆ ನೀ ಗುರು ವಿಷದ ವಿ
ಡಂಬ ಹರುಷಂಗಳಲಿ ನೀನಿಹುದೇಕ ಚಿತ್ತದಲಿ
ತುಂಬುವುದು ಬತ್ತುವುದು ರಾಜ್ಯದ
ಡೊಂಬು ಹರಿಮೇಖಲೆಯ ವಿದ್ಯಾ
ಡಂಬರವಿದೆಂದಸುರರಿಪು ಸೂಚಿಸಿದನಂಗನೆಗೆ ೧೭

ವಿಷವ ಗೆಲಿದಿರಿ ಹಿಂದೆ ಕಿಚ್ಚಿನ
ದೆಸೆಯಲುಳಿದಿರಿ ದಾಯಗರು ದು
ರ್ವ್ಯಸನಿಗಳು ದುಸ್ಸಹವು ನಿಮ್ಮಭ್ಯುದಯವಹಿತರಿಗೆ
ವಿಷಮ ವಿವಲೇ ದ್ಯೂತ ಮೃಗಯಾ
ವ್ಯಸನ ಪಾರ್ಥಿವ ಜಾತಿಗಿವು ದು
ರ್ವಿಷಯವಿದರಲಿ ನೆಗ್ಗಿದರು ನಳ ದಶರಥಾದಿಗಳು ೧೮

ಸೋತು ನಡೆವುದು ಹಿರಿಯರಲಿ ಸಂ
ಪ್ರೀತಿಯನು ಸುಜನರಲಿ ನಿರ್ಮಳ
ನೀತಿಯನು ಪರಿವಾರ ಪುರಜನ ನಾಡು ಬೀಡಿನಲಿ
ಖ್ಯಾತಿಯನು ಧರ್ಮದಲಿ ವೈರಿ
ವ್ರಾತದಲಿ ಪೌರುಷವನಖಿಳ
ಜ್ಞಾತಿಗಳಲೆಚ್ಚರಿಕೆಯೊಳಗಿಹುದೆಂದನಸುರಾರಿ ೧೯

ಎಂದು ಬುದ್ಧಿಯ ಹೇಳಿ ಪಾರ್ಥನ
ನಂದನನ ಕರೆಸಿದನು ತಾಯ್ಸಹಿ
ತೆಂದನವರಿಗೆ ನಯದಲುಚಿತ ಪ್ರೀತಿವಚನದಲಿ
ಬಂದು ಕುಂತಿಗೆ ಸಾರನಗೆ ನುಡಿ
ಯಿಂದ ವಿನಯವ ಮಾಡಿ ಪಾಂಡವ
ನಂದನರ ಮನ್ನಿಸಿದನತಿ ಕಾರುಣ್ಯ ಭಾವದಲಿ ೨೦

ಯಾದವರು ಪಾಂಡವರು ತನ್ನವ
ರಾದುದದುವೆ ಕುಟುಂಬವದು ಮಹ
ದಾದಿ ಸೃಷ್ಟಿಗದಾರ ರಕ್ಷೆ ಕುಟುಂಬವಾವನದು
ಆದರಿಸಿದನು ಕೆಲಬರನು ಹೊರ
ಗಾದವರು ಕೆಲರಾಯ್ತು ಹರಿಮಾ
ಯಾ ದುರಾಗ್ರಹ ವೃತ್ತಿಯೀ ಹದನೆಂದನಾ ಮುನಿಪ ೨೧

ಆ ಶುಭಗ್ರಹದುದಯದಲಿ ತಿಥಿ
ರಾಶಿ ನಕ್ಷತ್ರಾದಿ ಪುಣ್ಯೋ
ದ್ಭಾಸ ಮಾನ ಮುಹೂರ್ತದಲಿ ಸುಸ್ವರ ವಿಳಾಸದಲಿ
ಭೂಸುರಾಶೀರ್ವಾದದಲಿ ಲ
ಕ್ಷ್ಮೀಶ ಪಯಣವ ಮಾಡಿದನು ಕ
ಟ್ಟಾಸುರದಲೊದರಿದವು ಘನ ಗಂಭೀರ ಭೇರಿಗಳು ೨೨

ದೇಶದಲಿ ಕಾಲದಲಿ ದೆಸೆಯಲಿ
ರಾಸಿಯಲಿ ತಾರಾಗ್ರಹಾದಿಗ
ಳೈಸರಲಿ ತಾ ತನ್ನ ಚೇಷ್ಟೆಗಳಿವರ ವರ್ತನಕೆ
ಈಸು ಮಹಿಮೆಯ ಮರೆಸಿ ಲೋಕ ವಿ
ಳಾಸ ಚೇಷ್ಟೆಯನನುಸರಿಸಿ ನರ
ವೇಷವನು ನಟಿಸಿದನು ಹರಿ ಹೂಳಿದ ನಿಜೋನ್ನತಿಯ ೨೩

ಕಲಿ ವಿಡೂರಥ ಸಾಂಬ ಸಾತ್ಯಕಿ
ದಳಪತಿ ಪ್ರದ್ಯುಮ್ನ ಯಾದವ
ಕುಲ ಸಚಿವನಕ್ರೂರನುದ್ಧವ ಚಾರು ಕೃತವರ್ಮ
ಬಲು ಪದಾತಿಯ ರಥ ನಿಕರದ
ಗ್ಗಳೆಯ ಗಜ ವಾಜಿಗಳ ಸಂದಣಿ
ಯೊಳಗೆ ನಿಂದರು ಕೃಷ್ಣರಾಯನ ರಥದ ಬಳಸಿನಲಿ ೨೪

ಅನುಜ ತನುಜರು ಸಹಿತ ಕುಂತೀ
ತನಯ ದೂರಕೆ ಕಳುಹಿ ಮರಳಿದು
ಮನೆಗೆ ಬಂದನು ಕೃಷ್ಣ ವಿರಹ ವಿಶಾಲ ಖೇದದಲಿ
ಮುನಿಪ ವೇದವ್ಯಾಸ ಧೌಮ್ಯರ
ನನುಸರಿಸಿ ದಾಹಿಸುವ ದುಗುಡವ
ನನಿತುವನು ಬಿನ್ನವಿಸಿದನು ಮಿಡಿಮಿಡಿದು ಕಂಬನಿಯ ೨೫

ಅಸುರರಿಪು ಕೃಪೆಯಿಂದ ನಿರ್ವಾ
ಹಿಸಿದನೀ ಯಜ್ಞವನು ಪೂರ್ವದ
ವಸುಮತೀಶರ ಪಾಡಿಗೆಣೆಯೆಂದೆನ್ನ ಪತಿಕರಿಸಿ
ಬಿಸುಟು ಬಿಜಯಂಗೈದನೀಯು
ಬ್ಬಸವನಾರೊಡನುಸುರುವೆನು ಹಿಂ
ದೆಸೆವ ಗೋಕುಲವಾಯ್ತು ಪುರವಿದು ಕೃಷ್ಣವಿರಹದಲಿ ೨೬

ಅರಸ ಕೇಳೈ ದೈತ್ಯ ದಾನವ
ರುರವಣೆಯ ಯದು ನಾಯಕರು ನಿ
ಸ್ತರಿಸಲರಿಯರು ಕೃಷ್ಣ ನಿಲ್ಲದೆ ಭೀತಿ ದ್ವಾರಕಿಗೆ
ಕರುಣ ನಿಮ್ಮಲಿ ಕಿರಿದೆ ನಿಮ್ಮೊಳ
ಗೆರಕೆವಲ್ಲವೆ ಚಿಂತೆ ಸಾಕಂ
ತಿರಲಿಯೆಂದವನೀಶನನು ಸಂತೈಸಿದನು ಮುನಿಪ ೨೭

ಆ ಮುಕುಂದನ ನೆನಹು ನಮಗೆ ನಿ
ರಾಮಯವು ನೀವಿರಲು ಚಿಂತಾ
ವೈಮನಸ್ಯದ ವೇಧೆ ಮುರಿದುದು ಸಾಕದಂತಿರಲಿ
ಈ ಮಹೋತ್ಪಾತ ಪ್ರಬಂಧ ವಿ
ರಾಮ ಕರ್ಮವ ಬೆಸಸಿಯೆನೆ ನಗು
ತಾ ಮುನೀಶ್ವರ ನುಡಿದನವನೀಪತಿ ಶಿರೋಮಣಿಗೆ ೨೮

ಇದು ಕಣಾ ಕುರುರಾಯ ವಂಶಾ
ಭ್ಯುದಯ ವಿಗ್ರಹಪೂರ್ವ ಸೂಚಕ
ವಿದು ಸುಯೋಧನ ನೃಪನ ಕತಿಪಯ ಕಾಲ ಸುಖಬೀಜ
ಇದು ಸಮಸ್ತ ಕ್ಷತ್ರ ಕುಲ ವಾ
ರಿದ ಘಟೋಚ್ಚಾಟನ ಸಮೀರಣ
ವಿದರ ಫಲ ನಿಮಗಪಜಯಾವಹವೆಂದನಾ ಮುನಿಪ ೨೯

ಅರಿದಿಹುದು ನೀನಾಪ್ತ ವಚನವ
ಮರೆಯದಿರು ವೇದೋಕ್ತ ಕರ್ಮದ
ಹೊರಿಗೆ ನಿನ್ನದು ನಿನ್ನ ಹೊದ್ದದು ಕಲುಷ ಕಲಿಮಲದ
ಕರುಬರೀ ಕೌರವರು ಮಖವಿದು
ಮೆರೆದುದದ್ಭುತವಾಗಿ ನಿನ್ನನು
ಮುರಿವರಲ್ಲದೆ ನಿಮ್ಮವರು ಸೈರಿಸುವರಲ್ಲೆಂದ ೩೦

ನುಡಿಯದಿರಸತ್ಯವನು ರಾಜ್ಯವ
ಬಿಡು ವಿಭಾಡಿಸಿ ನಿನ್ನ ವಧುವಿನ
ಮುಡಿಗೆ ಹಾಯ್ದರೆ ನೀನಧರ್ಮದ ತಡಿಯನಡರದಿರು
ಒಡಲುಗೂಡಿ ಸಮಸ್ತ ಧನವಿದು
ಕೆಡುವುದಗ್ಗದ ಮೋಕ್ಷಲಕ್ಷ್ಮಿಯ
ಮುಡಿಗೆ ಹಾಯ್ವೊಡೆ ಸತ್ಯವೊಂದನೆ ನಂಬು ನೀನೆಂದ ೩೧

ಅಜ್ಞರವದಿರು ನೀವು ನೆರೆ ಸ
ರ್ವಜ್ಞರವರಿರಧರ್ಮನಿಷ್ಠರು
ಯಜ್ಞ ದೀಕ್ಷಿತರಿಂದು ನೀವು ಸಮಸ್ತ ಜಗವರಿಯೆ
ಯಜ್ಞರಿಪುಗಳು ನಿಪುಣರಿಗೆ ವರ
ಯಾಜ್ಞಿಕರಿಗಾಚಾರಹೀನರ
ಭಿಜ್ಞಮತವಿದು ತಪ್ಪದೆಂದನು ಮುನಿ ನೃಪಾಲಂಗೆ ೩೨

ಇದುವೆ ರೇಖಾಮಾತ್ರ ಸರ್ವಾಂ
ಗದಲಿ ನಿನ್ನನು ಮರೆಯದಿರು ಕೊಂ
ಕಿದರೆ ಕರುಣಾಜಲಧಿ ಜೈಸಲುವುಂಟು ಹರಿ ನಿನಗೆ
ಬೆದರದಿರು ವಿಗಡಿಸುವ ವಿಷಯಾ
ಸ್ಪದದೊಳೆಂದು ಮುನೀಂದ್ರನೈವರು
ಸುದತಿ ಸಹಿತನಿಬರಿಗೆ ಬುದ್ಧಿಯ ಹೇಳಿ ಹೊರವಂಟ ೩೩

ಮುನಿಪ ಕಳುಹಿಸಿಕೊಂಡು ಬದರೀ
ವನಕೆ ತಿರುಗಿದನತ್ತಲಿತ್ತಲು
ಜನಪ ಬಂದನು ಬಳಿಕ ಮಯನಿರ್ಮಿತ ಮಹಾಸಭೆಗೆ
ಮುನಿಗಳುಳಿದವರನು ಮಹೀಸುರ
ಜನ ಸಹಿತ ಭೂಪಾಲ ಶೇಷವ
ನನುನಯದಿ ಮಿಗೆ ಸತ್ಕರಿಸಿ ಬೀಳ್ಕೊಟ್ಟನುಚಿತದಲಿ ೩೪

ಅರಸ ಕೇಳೈ ಕೌರವೇಂದ್ರನ
ಕರೆಸಿದನು ದುಶ್ಶಾಸನಾದಿಕ
ದುರುಳ ಕೌರವ ಶತಕ ಸಹಿತಲೆ ಸಭೆಗೆ ನಡೆತಂದು
ಪರಿಭವಕೆ ಗುರಿಯಾಗಿ ಹಾಸ್ಯದ
ಹರಹಿನಲಿ ಹಳುವಾಗಿ ಪಾಂಡವ
ರರಸನನು ಬೀಳ್ಕೊಂಡು ಹಸ್ತಿನಪುರಕೆ ಹೊರವಂಟ ೩೫

ಭೂಮಿ ಲಂಬದ ನಿಖಿಳ ಭೂಪ
ಸ್ತೋಮ ಸಹಿತ ಸುಯೋಧನನು ಹೃ
ತ್ತಾಮಸದ ಚಾವಡಿಯ ಝಾಡಿಯ ರೋಷ ಪಾವಕದ
ಧೂಮ ಮುಖನೈತಂದು ಗಜಪುರ
ಸೀಮೆಯಲಿ ಪಾಳಯವ ಬಿಡಿಸಿದ
ವೈಮನಸ್ಯದಲಿರುಳು ಹೊಕ್ಕನು ಹಸ್ತಿನಾಪುರವ ೩೬

ಸಂಕ್ಷಿಪ್ತ ಭಾವ
Lrphks Kolar

ರಾಜಸೂಯ ಯಾಗದ ಸಮಾಪ್ತಿ. ಎಲ್ಲರೂ ಅವರವರ ಸ್ಥಳಗಳಿಗೆ ಪಯಣಿಸಿದರು.

ಶಿಶುಪಾಲನು ಮರಣ ಹೊಂದಿದ ಬಳಿಕ ಮತ್ತೆ ಯಾವ ತೊಂದರೆಯು ಇಲ್ಲದಂತೆ ಯಾಗವು ಸಮಾಪ್ತಿಯಾಯಿತು. ಲಕ್ಷ ಲಕ್ಷ ಸಂಖ್ಯೆಯಲ್ಲಿ ಭೂಸುರರು ಭೋಜನ, ದಾನ, ದಕ್ಷಿಣೆಗಳಿಂದ ತೃಪ್ತರಾದರು. ಅವಭೃಥಸ್ನಾನದ ಓಕುಳಿ ನಡೆಯಿತು. ತಪ್ಪು ಒಪ್ಪುಗಳನ್ನು ಮನ್ನಿಸಬೇಕೆಂದು ಧರ್ಮಜನು ಕೇಳಿದನು.

ಯಾಗಕ್ಕೆ ಬಂದ ಸರ್ವರನ್ನೂ ಸತ್ಕರಿಸಿ ಯಥೋಚಿತವಾಗಿ ಕಳಿಸಿಕೊಟ್ಟನು. ಅವನ ಸೋದರರು ಹೋಗಿ ಬಿಟ್ಟು ಬಂದರು. ಕೃಷ್ಣ ಕೆಲದಿನಗಳಿದ್ದು ಎಲ್ಲರೂ ಹೊರಟ ನಂತರ ಹೊರಟನು. ಆಗ ಪಾಂಡವರು, ದ್ರೌಪದಿ, ಮಕ್ಕಳು, ಕುಂತಿ, ಎಲ್ಲರನ್ನೂ ಕರೆಸಿಕೊಂಡು ಬುದ್ಧಿಮಾತುಗಳನ್ನು ಹೇಳಿದನು. ದ್ರೌಪದಿಗೆ ವಿಶೇಷವಾಗಿ ಸಿರಿಯನ್ನು ನಂಬದಿರಲು ಮತ್ತು ಪತಿವ್ರತಾ ಧರ್ಮವನ್ನು ಪಾಲಿಸಲು ಹೇಳಿದನು.   ಈ ಹಿಂದೆ ಅನೇಕ ಕಷ್ಟಗಳನ್ನು ದಾಟಿ ಈ ಹಂತಕ್ಕೆ ಬಂದಿರುವಿರಿ. ಆದರೆ ನಿಮ್ಮ ಏಳಿಗೆಯನ್ನು ಸಹಿಸದ ಜನರು ಇರುವರು. ಮತ್ಸರದಿಂದ ಕಾಯುತ್ತಿರುವರು. ಜೋಪಾನ ಎಂದನು. ಕೃಷ್ಣನನ್ನು ವೈಭವದಿಂದ ಕಳಿಸಿಕೊಟ್ಟರು.

ಕೃಷ್ಣನಿಲ್ಲದ ಭವನ ಬಿಕೋ ಎನಿಸಿತು. ಆಗ ವ್ಯಾಸಮುನಿಗಳು ಮತ್ತು ಇತರರು ಧರ್ಮಜನಿಗೆ ಸಮಾಧಾನ ಹೇಳಿದರು. ನಿಮ್ಮವರು ನಿಮ್ಮ ಬಗ್ಗೆ , ಯಾಗದ ಬಗ್ಗೆ ಮುರಿಯುವರಲ್ಲದೆ ಸೈರಿಸರು. ಸದಾ ಸತ್ಯವನ್ನು ಪಾಲಿಸು ಎಂದು ಹೇಳಿದರು. ಅವರುಗಳು ಸಹಾ ತಮ್ಮ ತಮ್ಮ ಆಶ್ರಮಗಳಿಗೆ ತೆರಳಿದರು.

ಕೊನೆಯಲ್ಲಿ ಕೌರವೇಂದ್ರನಾದ ದುರ್ಯೋಧನ ಮುಂತಾದವರನ್ನು ಕರೆಸಿ ಸತ್ಕರಿಸಿ ಬೀಳ್ಕೊಂಡರು. ಆ ಸಮಯದಲ್ಲಿ ದುರ್ಯೋಧನ ಸಭಾ ಮಂಟಪದಲ್ಲಿ ಅದ್ಭುತಗಳನ್ನು ನೋಡುತ್ತ ಬೆರಗಾಗಿ, ಪರಿಹಾಸ್ಯಕ್ಕೆ ಗುರಿಯಾದನು. ತನ್ನವರೊಂದಿಗೆ ಹೊರಟ ಅವನು ವೈಮನಸ್ಸಿನಿಂದ ಕೂಡಿದವನಾಗಿ ಹಸ್ತಿನಾಪುರವನ್ನು ಇರುಳು ಪ್ರವೇಶಿಸಿದ.


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ