ಕಿಕ್ಕೇರಿ ಕೃಷ್ಣಮೂರ್ತಿ
ಕಿಕ್ಕೇರಿ ಕೃಷ್ಣಮೂರ್ತಿ
ಕಿಕ್ಕೇರಿ ಕೃಷ್ಣಮೂರ್ತಿ ಸುಗಮ ಸಂಗೀತ ಕಲಾವಿದರಾಗಿ ಹೆಸರಾಗಿದ್ದಾರೆ.
ಕೃಷ್ಣಮೂರ್ತಿಯವರು 1964ರ ಫೆಬ್ರವರಿ 21ರಂದು ಮಂಡ್ಯ ಜಿಲ್ಲೆಯ ಕಿಕ್ಕೇರಿಯಲ್ಲಿ ಜನಿಸಿದರು. ತಂದೆ ಬಿ.ಎಸ್. ನಾರಾಯಣ ಭಟ್. ತಾಯಿ ರುಕ್ಮಿಣಮ್ಮ. ವಾಣಿಜ್ಯ ಡಿಪ್ಲೊಮಾ ನಂತರದಲ್ಲಿ ಬಿ.ಕಾಂ. ಪದವಿ ಜೊತೆಗೆ ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. (ಕನ್ನಡ) ಪದವಿ ಗಳಿಸಿದರು.
ಕೃಷ್ಣಮೂರ್ತಿಯವರಿಗೆ ಶಾಲಾ ಕಾಲೇಜು ದಿನಗಳಿಂದಲೂ ಹಾಡಿನ ಬಗ್ಗೆ ವಿಶೇಷ ಒಲವು. ಹಲವಾರು ವರ್ಷ ಜಾನಪದ ತಜ್ಞ ಎಸ್.ಕೆ. ಕರೀಂಖಾನರ ಸಹವರ್ತಿಯಾಗಿದ್ದರು. ಕರೀಂಖಾನರ ಸಾಹಿತ್ಯಕ್ಕೆ ಸಂಗೀತ ನೀಡಿ ಮೊಟ್ಟಮೊದಲ ಧ್ವನಿಸುರಳಿಯನ್ನು ಹೊರತಂದರು. ಆಕಾಶವಾಣಿ, ದೂರದರ್ಶನದಲ್ಲಿ ಮನ್ನಣೆ ಪಡೆದ ಗಾಯಕರಾಗಿ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ದಸರಾ ಸಾಂಸ್ಕೃತಿಕ ಉತ್ಸವ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಹಂಪಿ ಉತ್ಸವ, ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನ ಮುಂತಾದ ಉತ್ಸವಗಳಲ್ಲಿ ಕಾರ್ಯಕ್ರಮಗಳನ್ನು ನೀಡಿದರು. ಅನೇಕ ಧ್ವನಿ ಸುರುಳಿಗಳಲ್ಲಿ ಇವರ ಸಂಗೀತ ಹರಿದಿದೆ.
ಕಿಕ್ಕೇರಿ ಕೃಷ್ಣಮೂರ್ತಿ ರಂಗಭೂಮಿ ನಟರಾಗಿ, ನಿರ್ದೇಶಕರಾಗಿ, ಗಾಯಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಮೈಲಿಗಲ್ಲುಗಳು, ವೇದ ಸುಳ್ಳಾದರೂ ಗಾದೆ ಸುಳ್ಳಾಗದು, ಸಂಬಂಧಮಾಲೆ, ಗಲಿಬಿಲಿ ಕಲ್ಲೇಶಿ ಮುಂತಾದ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಎಲ್ಲರೂ ನಮ್ಮವ್ರೇ, ಸಮಕ್ಷಮ, ಅಂತರ ನಿರಂತರ ನಾಟಕಗಳಿಗೆ, ದೂರದರ್ಶನ ಧಾರಾವಾಹಿಗಳಿಗೆ ಸಂಗೀತ ನೀಡಿದ್ದಾರೆ. ‘ಆದರ್ಶ ಸುಗಮ ಸಂಗೀತ ಅಕಾಡಮಿ ಟ್ರಸ್ಟ್’ ಸ್ಥಾಪಿಸಿದ್ದಾರೆ. ಆರ್ಥಿಕವಾಗಿ ಹಿಂದುಳಿದವರಿಗೆ ಉಚಿತ ತರಬೇತಿ ನೀಡಿದ್ದಾರೆ. ವಿದ್ಯಾರ್ಥಿಗಳ ಸುಪ್ತ ಪ್ರತಿಭಾ ಪ್ರದರ್ಶನಕ್ಕೆ ‘ನವಸುಮ-ವನಸುಮ’ ವೇದಿಕೆ ಸ್ಥಾಪಿಸಿದರು. ಮಕ್ಕಳಿಗೆ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದ ಇವರಿಗೆ ಬಾಲವಿಕಾಸ ಅಕಾಡೆಮಿ ಅಧ್ಯಕ್ಷತೆಯೂ ಒಲಿದು ಬಂತು.
ಕಿಕ್ಕೇರಿ ಕೃಷ್ಣಮೂರ್ತಿ ಅವರಿಗೆ ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ, ಗಾಯನಶ್ರೀ ಪ್ರಶಸ್ತಿ, ಪಿ. ಕಾಳಿಂಗರಾವ್ ಪ್ರಶಸ್ತಿ, ಕರ್ನಾಟಕ ಚೇತನ ಪ್ರಶಸ್ತಿ, ವಿಶ್ವಮಾನವ ಪ್ರಶಸ್ತಿ, ಗೌತಮ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಭೂಪಾಲ್‌ನ ಅಖಿಲ ಭಾರತ ಭಾಷಾ ಸಮ್ಮೇಳನದ ರಾಷ್ಟ್ರೀಯ ಸಾಹಿತ್ಯಶ್ರೀ ಪ್ರಶಸ್ತಿ, ಮತ್ತು ಹಲವಾರು ಬಿರುದುಗಳು ಸೇರಿದಂತೆ ಅನೇಕ ಗೌರವಗಳು ಸಂದಿವೆ.
On the birthday of singer Kikkeri Kirishnamurthy
ಕಾಮೆಂಟ್‌ಗಳು