ಜಿ. ಆರ್. ನಿಂಬರಗಿ
ಜಿ. ಆರ್. ನಿಂಬರಗಿ
ಗಜಾನನ ರಾಮಚಂದ್ರ ನಿಂಬರಗಿ ಅವರು ಬಾಗಲಕೋಟೆ ತಾಲ್ಲೂಕಿನ ಜಮಖಂಡಿಯಲ್ಲಿ 1919ರ ಫೆಬ್ರವರಿ 9 ರಂದು ಜನಿಸಿದರು. ಅವರ ಅಜ್ಜ ಪಂಡಿತ ವಿಷ್ಣುಪಂಥ ಜಮಖಂಡಿ ಆಸ್ಥಾನದಲ್ಲಿ ರುದ್ರವೀಣೆ ಪಂಡಿತರಾಗಿದ್ದರು. ಅವರ ಗಾಯನದಿಂದ ಎಳವೆಯಲ್ಲೇ ಪ್ರೇರೇಪಿತರಾಗಿದ್ದು ಮುಂದೆ ತಮ್ಮ ಅಣ್ಣನವರಾದ ಖ್ಯಾತ ಗಾಯಕ ಡಿ.ಆರ್. ನಿಂಬರಗಿ ಅವರಲ್ಲೇ ಪ್ರಾಥಮಿಕ ಸಂಗೀತ ಶಿಕ್ಷಣ ಕಲಿತರು. ಅನಂತರ ಭಾರತದ ಹೆಸರಾಂತ ವಯೋಲಿನ್ ವಾದಕ ಹಾಗೂ ಗಾಯಕರಾದ ಮುಂಬಯಿಯಲ್ಲಿದ್ದ ಗಜಾನನ ಬುವ ಜೋಷಿಯವರಲ್ಲಿ ಹಲವಾರು ವರ್ಷ ಶಿಷ್ಯವೃತ್ತಿ ನಡೆಸಿದ್ದಲ್ಲದೆ ಪಂಡಿತ ಅನಂತ ಮನೋಹರ ಜೋಶಿ, ವಿಲಾಯತ್ ಖಾನ್, ಅಜಮಲ್ ಹುಸೇನ್, ಅಲ್ಲಾದಿಯಾ ಖಾನ್, ನಿಸ್ಸಾರ್ ಹುಸೇನ್, ವಿ.ಎ.ಕಾಗಲಕರ್ ಹಾಗೂ ಹನುಮಂತ ರಾವ್ ವಾಳ್ವೇಕರ್ ಅವರಲ್ಲಿ ಹೆಚ್ಚಿನ ವ್ಯಾಸಂಗ ನಡೆಸಿ ಸಂಗೀತ ಜ್ಞಾನ ಕ್ಷೇತ್ರವನ್ನು ವಿಸ್ತರಿಸಿಕೊಂಡರು.
ನಿಂಬರಗಿ ಅವರು ಮುಖ್ಯವಾಗಿ ಗ್ವಾಲಿಯರ್ ಅಲ್ಲದೆ ಆಗ್ರಾ, ಜೈಪುರ ಘರಾಣಿಗಳಲ್ಲೂ ಪರಿಶ್ರಮ ಪಡೆದರು. ಮೂಲತಃ ನಿಂಬರಗಿಯವರು ವಯೋಲಿನ ವಾದಕರಾದರೂ ಕರ್ನಾಟಕ ಸಂಗೀತವೂ ಸೇರಿದಂತೆ ಸಂಗೀತದ ಹಲವಾರು ಪ್ರಕಾರಗಳಲ್ಲಿ, ತಬಲ ಇತ್ಯಾದಿ ವಾದ್ಯಗಳಲ್ಲಿ ಕೃಷಿ ಮಾಡಿದ್ದಾರೆ. 1947ರಲ್ಲಿ ಮುಂಬಯಿಯ ಆಕಾಶವಾಣಿ ಕೇಂದ್ರದಲ್ಲಿ ನಿಲಯದ ಕಲಾವಿದರಾಗಿ ಸೇವೆಗೆ ಸೇರಿ, ಮೂರು ವರ್ಷಗಳ ನಂತರ ಧಾರವಾಡದ ಆಕಾಶವಾಣಿ ನಿಲಯಕ್ಕೆ ವರ್ಗಾಯಿಸಿಕೊಂಡು ಬಂದರು. ಅಲ್ಲಿ ಅಖಂಡ ಮುವತ್ತು ವರ್ಷಗಳ ಸೇವೆ ಸಲ್ಲಿಸಿ 1977ರಲ್ಲಿ ನಿವೃತ್ತರಾದರು. ಈ ಮಧ್ಯೆ ಅಖಿಲ ಭಾರತ ಗಂಧರ್ವ ಮಹಾವಿದ್ಯಾಲಯದ ವಿಶಾರದ ಹಾಗೂ ಅಲಂಕಾರಗಳ ಪರೀಕ್ಷೆಯಲ್ಲಿ ಗಾಯನ ಹಾಗೂ ವಾದನಗಳಲ್ಲಿ ಶ್ರೇಷ್ಠ ದರ್ಜೆಯಲ್ಲಿ ಉತ್ತೀರ್ಣರಾದರು.
ನಿಂಬರಗಿಯವರು ಭಾರತಾದ್ಯಂತ, ಮುಖ್ಯವಾಗಿ ಮುಂಬಯಿ, ಕರಾಡ, ಬೆಂಗಳೂರು, ಹೈದರಾಬಾದ್, ದೆಹಲಿ, ಕೋಲ್ಕತಾ, ಉತ್ತರ ಪ್ರದೇಶ ಇತ್ಯಾದಿ ಕಡೆಗಳಲ್ಲಿ ಯಶಸ್ವಿಯಾಗಿ ಕಾರ್ಯಕ್ರಮ ನೀಡಿದ್ದರು. ಅಲ್ಲದೆ ಮುಂಬಯಿ, ಜಲಂಧರ್, ರಾಜಕೋಟ್, ದೆಹಲಿ, ಕೊಹಿಮಾ, ಅಹಮದಾಬಾದ್, ನಾಗಪುರ, ಜಳಗಾವ್ ಮುಂತಾದ ಆಕಾಶವಾಣಿ ಕೇಂದ್ರಗಳಿಂದ ಶ್ರೀಯುತರ ಕಾರ್ಯಕ್ರಮಗಳು ಪ್ರಸಾರಗೊಂಡವು. ಭಾರತದ ಶ್ರೇಷ್ಠ ತಬಲಾವಾದಕರಿಗೆ ವಯೋಲಿನ್ ಸಾಥಿ ನುಡಿಸಿದ ಹಿರಿಮೆ ಪಂಡಿತ್ ನಿಂಬರಗಿಯವರದು.
ಪ್ರಸಿದ್ಧ ಸಂಗೀತಗಾರರಾದ ಶಿವರಾಮ ಬುವಾ ವಝೆ, ಬಿ.ಎ.ಕಾಗಲಕರ, ಅಜಮತ್ ಹುಸೇನ್, ಕೃಷ್ಣಾಪಂಡಿತ್, ಸರಸ್ವತಿ ರಾಣಿ, ಲತಾಫತ್ ಹುಸೇನ್, ಬಾಯಿ ನಾರ್ವೇಕರ್, ನಿಸ್ಸಾರ್ ಹುಸೇನ್, ರೋಷನ್ ಅಲಿ, ಗಂಗೂಬಾಯಿ ಹಾನಗಲ್, ಮಲ್ಲಿಕಾರ್ಜುನ ಮನ್ಸೂರ್, ಬಸವರಾಜ ರಾಜಗುರು ಮೊದಲಾದ ಸಂಗೀತ ದಿಗ್ಗಜಗಳಿಗೆ ವಯೋಲಿನ್ ಸಾಥಿ ನುಡಿಸಿದ ಪ್ರತಿಭಾವಂತರಿವರು.
ನಿಂಬರಗಿಯವರ ಶಿಷ್ಯ ವೃಂದವೂ ದೊಡ್ಡದಿದೆ. ರಾಘವೇಂದ್ರ ಮನವಳ್ಳಿ, ಬಿ.ಆರ್.ಪಾಟೀಲ, ರಾಮನಗೌಡ ರಾಧಾ ಗದಗಕರ್, ಅಚ್ಯುತ ಗದಕರ್, ಸಂಗಳದ ಮಾಧುರಿ ಖೇರ್, ಮಾಣಿಕ ಖೇರ್, ಸಂಜೀವ ನಾಮಣ್ಣನವರ, ನಾಗರಾಜ ಜಾಧವ, ಎಂ.ಎಸ್.ತಟ್ಟಿ ಶಶಿಕಾಂತ ಕುಲಕರ್ಣಿ, ಸುಜಾತ ಅಗಳಿ, ಕವಿತಾ ಪಪ್ಪು ಮೊದಲಾದವರು.
ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಪಿಟೀಲುವಾದಕರಾಗಿ ಅನನ್ಯ ಸೇವೆ ಸಲ್ಲಿಸಿರುವ ಜಿ.ಆರ್.ನಿಂಬರಗಿ ಅವರ ಸಂಗೀತ ಸೇವೆಗೆ ಹಲವಾರು ಪುರಸ್ಕಾರಗಳು ಗೌರವಗಳು ಸಂದಾಯವಾಗಿದ್ವು. ಕರ್ನಾಟಕ ಸಂಗೀತ, ನೃತ್ಯ ಅಕಾಡೆಮಿಯಿಂದ 1992-93ನೇ ಸಾಲಿನಲ್ಲಿ 'ಕರ್ನಾಟಕ ಕಲಾ ತಿಲಕ ಪ್ರಶಸ್ತಿ, 2003ನೇ ಸಾಲಿನ ರಾಷ್ಟ್ರಮಟ್ಟದ ಟಿ.ಚೌಡಯ್ಯ ಪ್ರಶಸ್ತಿ ಸೇರಿದಂತೆ ನಿಂಬರಗಿ ಅವರಿಗೆ ಅನೇಕ ಗೌರವಗಳು ಸಂದಿದ್ದವು.
ಚಿತ್ರ: ಜಿ. ಆರ್. ನಿಂಬರಗಿ ಅವರ ಅಣ್ಣನವರಾದ ಪಂಡಿತ್ ಡಿ. ಆರ್. ನಿಂಬರಗಿ ಅವರದ್ದು
On the birth anniversary of great musician G. R. Nimbaragi
ಪಂಡಿತ್ ಜಿ. ಆರ್. ನಿಂಬರಗಿ ನಾಡಿನ ಮಹಾನ್ ಸಂಗೀತಗಾರರು.
ಕಾಮೆಂಟ್‌ಗಳು