ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಯರ್ಮುಂಜ ರಾಮಚಂದ್ರ


ಯರ್ಮುಂಜ ರಾಮಚಂದ್ರ


ಯರ್ಮುಂಜ ರಾಮಚಂದ್ರರು ಕಳೆದ ಶತಮಾನದ ವಿಶಿಷ್ಟ ಸಾಹಿತಿ ಮತ್ತು ಪತ್ರಕರ್ತರು 

ರಾಮಚಂದ್ರ 1933ರ ಫೆಬ್ರವರಿ 9ರಂದು  ಯರ್ಮುಂಜ ಗ್ರಾಮದಲ್ಲಿ ಜನಿಸಿದರು. ತಂದೆ ಜನಾರ್ಧನ ಜೋಯಿಸರು.  ತಾಯಿ ದೇವಕಿ ಅಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ಕಬಕದ ಕೊವೆತ್ತಿಲ ಎಂಬ ಗ್ರಾಮದಲ್ಲಿ ಮತ್ತು ಮಾಧ್ಯಮಿಕ ಶಿಕ್ಷಣ ಪುತ್ತೂರಿನ ಬೊರ್ಡ್ ಹೈಸ್ಕೂಲಿನಲ್ಲಿ ನಡೆಯಿತು. 

ಯರ್ಮುಂಜ ರಾಮಚಂದ್ರ ಹೈಸ್ಕೂಲಿನಲ್ಲಿದ್ದಾಗಲೇ ಬರಹವನ್ನು ರೂಢಿಸಿಕೊಂಡು ಪ್ರಾರಂಭಿಸಿದ ಹಸ್ತ ಪತ್ರಿಕೆ ‘ಬಾಲವಿಕಟ.’ ಮೊದಲ ಕವನ ‘ಬಾಪೂಜಿಗೆ ಬಾಷ್ಪಾಂಜಲಿ’ ಬರೆದದ್ದು 1948ರಲ್ಲಿ. ಮೊದಲ ಕಥೆ ‘ಆರಿದ ಹಂಬಲ’  ಅರುಣ ಪತ್ರಿಕೆಯಲ್ಲಿ ಪ್ರಕಟಗೊಂಡಿತು. ಎರಡನೆಯ ಕಥೆ ‘ಸ್ನೇಹಿತರು’, ಬೆಟಗೇರಿ ಕೃಷ್ಣಶರ್ಮರು ನಡೆಸುತ್ತಿದ್ದ ‘ಜಯಂತಿ’ ಪತ್ರಿಕೆಯಲ್ಲಿ ಮೊದಲ ಬಹುಮಾನ ಪಡೆಯಿತು. 

ರಾಮಚಂದ್ರ ಅವರು ಮೆಟ್ರಿಕ್ ಪರೀಕ್ಷೆಯಲ್ಲಿ  ತೇರ್ಗಡೆಯಾಗುವ ಹೊತ್ತಿಗೆ ‘ಪಾಂಚಜನ್ಯ’ ಹಸ್ತಪತ್ರಿಕೆ ಪ್ರಾರಂಭ ಮಾಡಿದರು. ಚಾಣಾಕ್ಷನ ಬಾಣಗಳು, ವಿಚಿತ್ರ ವಿಭಾಗ, ಪ್ರಶ್ನೋತ್ತರ ಮಾಲಿಕೆ, ಲೆಕ್ಕದ ಬುಕ್ಕು- ಅಣಕುವಾಡುಗಳು, ಗತಕಾಲದ ಟಗರುಗಳು-ವಿಡಂಬನೆ ಇದರ ಸ್ಥಿರ ಶೀರ್ಷಿಕೆಗಳಾಗಿ ಪ್ರಖ್ಯಾತವಾಗಿದ್ದವು. ಪಾಂಚಜನ್ಯದ ವಿಶೇಷಾಂಕಕ್ಕೆ ಗೋವಿಂದ ಪೈ, ಕಾರಂತರು, ಸೇಡಿಯಾಪು ಕೃಷ್ಣಭಟ್ಟರು, ಗೋಪಾಲಕೃಷ್ಣ ಅಡಿಗರು ಮುಂತಾದವರೆಲ್ಲರ ಬರೆಹಗಳಿರುತ್ತಿದ್ದುವು. 

ಯರ್ಮುಂಜ ರಾಮಚಂದ್ರರು ಕೆಲಕಾಲ ಅಂಚೆಕಚೇರಿ ಕೆಲಸ ಮಾಡಿದರು.  ಮುಂದೆ ಏಕೋಪಾಧ್ಯಾಯ ಶಾಲೆಯಲ್ಲಿ ಉಪಾಧ್ಯಾಯರಾಗಿ, ತಾಲ್ಲೂಕು ಕಚೇರಿಯಲ್ಲಿ ಟೈಪಿಸ್ಟ್ ಆಗಿ ದುಡಿದರು. ನಂತರ ‘ನವಭಾರತ’ ಪತ್ರಿಕೆಯಲ್ಲಿ ಉಪ ಸಂಪಾದಕರ ಹುದ್ದೆ ಗಳಿಸಿದರು. ಕಾಡಿದ ಉದರ ವ್ಯಾಧಿಯಿಂದ ಮಂಗಳೂರಿಗೆ ಬಂದರು. ಕಡೆಂಗೋಡ್ಲು ಶಂಕರಭಟ್ಟರ ‘ರಾಷ್ಟ್ರಮತ’ ಪತ್ರಿಕೆಯಲ್ಲಿ ಸಹ ಸಂಪಾದಕರಾಗಿ ಬಿಡುವಿಲ್ಲದೆ ದುಡಿದರು. ಅನಾರೋಗ್ಯದ ಬದುಕಾಗಿ, ತೀವ್ರ ಕರುಳು ಬೇನೆಯಿಂದ ಮಂಗಳೂರು ತೊರೆದು ಮನೆಗೆ ಬಂದರು. ಅನಾರೋಗ್ಯದ ಸ್ಥಿತಿಯಲ್ಲೂ ‘ಚಿಕಿತ್ಸೆಯ ಹುಚ್ಚು ಮತ್ತು ಇತರ ಕಥೆಗಳು’ ಕಥಾಸಂಕಲನ ಪ್ರಕಟಣೆ ಮಾಡಿದರು. 

ಯರ್ಮುಂಜ ರಾಮಚಂದ್ರರು ಕರುಳು ನಿಷ್ಕ್ರಿಯತೆಯಿಂದ ವ್ಯಾಧಿ ಉಲ್ಬಣಗೊಂಡು ಕೇವಲ 22 ವಯಸ್ಸು ತುಂಬುವ ಮುಂಚೆಯೇ 1955ರ ಜನವರಿ 10ರಂದು ನಿಧನರಾದರು. 

ಯರ್ಮುಂಜ ರಾಮಚಂದ್ರರು ಹದಿನೈದನೇ ವಯಸ್ಸಿಗೇ ಸಾಹಿತ್ಯ ಕೃಷಿ ಪ್ರಾರಂಭಿಸಿ ಇಪ್ಪತ್ತೆರಡರ ಒಳಗೆ ರಚಿಸಿದ ಕಥೆ, ಕಾವ್ಯಗಳೆರಡೂ ಪ್ರಬುದ್ಧವಾದುವು ಎನಿಸಿದವು. ವಯಸ್ಸಿಗೆ ಮೀರಿದ ಸಾಧನೆ ಮಾಡಿ ರಾಷ್ಟ್ರಪ್ರೇಮವನ್ನು ಬಡಿದೆಬ್ಬಿಸುವ ಕವಿತೆಗಳನ್ನು ಬರೆದರು. ಇವರ ಮರಣಾನಂತರ ‘ವಿದಾಯ’ ಕವನ ಸಂಕಲನ ಪ್ರಕಟಗೊಂಡಿತು.

ಪ್ರಸಿದ್ಧ ಸಾಹಿತಿ ವೇಣುಗೋಪಾಲ ಕಾಸರಗೋಡು ಅವರು ಯರ್ಮುಂಜ ರಾಮಚಂದ್ರ - ಬದುಕು ಬರೆಹ ಸಂಶೋಧನಾ ಕೃತಿ ಮೂಡಿಸಿದರು.

On the birth anniversary of very short lived great poet Yarmunja Ramachandra 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ