ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಭಾರತಕಥಾಮಂಜರಿ54



ಕುಮಾರವ್ಯಾಸನ

ಕರ್ಣಾಟ ಭಾರತ ಕಥಾಮಂಜರಿ 

ಅರಣ್ಯಪರ್ವ ಹದಿನೆಂಟನೆಯ ಸಂಧಿ


ಪರಿವಿಡಿಯಲಾ ದ್ವೈತವನದಲಿ

ಬೆರೆಸಿ ಬಿಟ್ಟುದು ಬೀಡು ಗಂಧ

ರ್ವರಿಗೆ ಕೌರವ ಬಲದೊಡನೆ ಮಸೆದುದು ಮಹಾಸಮರ


(ದ್ವೈತವನದಲ್ಲಿ ಕೌರವನ ಪರಿವಾರ ಬೇಡು ಬಿಟ್ಟಿದು ಗಂಧರ್ವರಿಗೂ ಕೌರವ ಸೈನ್ಯಕ್ಕೂಮಹಾಯುದ್ಧವಾಯಿತು.)


ಕೇಳು ಜನಮೇಜಯ ಧರಿತ್ರೀ

ಪಾಲ ತುರುಪಳ್ಳಿಗಳ ನೋಡಿ 

ನಾಳಿ ತಪ್ಪದೆ ಬೇಟೆಯಾಡಿ ಸಮಸ್ತ ಬಲ ಸಹಿತ

ಲೀಲೆ ಮಿಗಲಾ ಪಾಂಡವರ ವನ

ವೇಲೆಯಲಿ ನಿಸ್ಸಾಳ ರಭಸದ

ಸೂಳ ಸಂಕೇತದಲಿ ನೃಪ ಬಿಡಿಸಿದನು ಪಾಳೆಯವ  


ಲಾಯ ನೀಡಿತು ಮುಂದೆ ರಾವುತ

ಪಾಯಕರಿಗೆಡವಂಕ ಮಂತ್ರಿ 

ಸಾಯತರು ಕರ್ಣಾದಿಗಳಿಗೆಡೆಯಾಯ್ತು ಬಲವಂಕ

ರಾಯನರಮನೆ ಮೌಕ್ತಿಕದ ಕಳ

ಶಾಯತದ ಬೆಳಗಿನಲಿ ಪಾಂಡವ

ರಾಯ ನೆಲೆವನೆಗಳನು ನಗುತಿದ್ದುದು ನವಾಯಿಯಲಿ  


ಅರಸ ಕೇಳೈ ಕೌರವೇಶ್ವರ

ನರಸಿಯರು ಲೀಲೆಯಲಿ ಶತಸಾ

ವಿರ ಸಖೀಜನ ಸಹಿತ ಹೊರವಂಟರು ವನಾಂತರಕೆ

ಸರಸಿಜದ ನಿಜಗಂಧದಲಿ ತನು

ಪರಿಮಳವ ತಕ್ಕೈಸಿ ವನದಲಿ

ತರಳೆಯರು ತುಂಬಿದರು ಮರಿದುಂಬಿಗಳ ಡೊಂಬಿನಲಿ  


ಕೆಲರು ಹೊಂದಾವರೆಯ ಹಂತಿಯ

ಕೊಳನ ಹೊಕ್ಕರು ಬಿಲ್ವಫಲಗಳ

ನಿಲುಕಿಕೊಯ್ದರು ಕೊಡಹಿ ಮೊಲೆಗಳ ಮೇಲುದಿನ ನಿರಿಯ

ಕೆಲರು ಹೂಗೊಂಚಲಿನ ತುಂಬಿಯ

ಬಳಗವನು ಬೆಂಕೊಂಡರುಲಿವರೆ

ಗಿಳಿಗೆ ಹಾರದ ಬಲೆಗಳನು ಹಾಯ್ಕಿದರು ಕೊಂಬಿನಲಿ  


ಪಾರಿವದುಪಾಧ್ಯರನು ನಮಿಸುತೆ

ವಾರನಾರಿಯರಾನನದಲಿ 

ಕೋರಗಳ ಚಾಲೈಸಿದರು ಕೆಲರಂಗಪರಿಮಳಕೆ

ಸಾರಿದರೆ ಮರಿದುಂಬಿಗಳ ಸುಖ

ಪಾರಣೆಯ ಬೆಸಗೊಳುತ ನಗುತ ವಿ

ಕಾರಿಗಳು ವೇಡೈಸಿದರು ನೃಪ ಮುನಿ ನಿಜಾಶ್ರಮವ  


ನೇವುರದ ದನಿ ದಟ್ಟಿಸಿತು ವೇ

ದಾವಳಿಯ ನಿರ್ಘೋಷವನು ನಾ

ನಾ ವಿಭೂಷಣ ಕಾಂತಿ ಕೆಣಕಿತು ಮುನಿ ಸಮಾಧಿಗಳ

 ವಧೂಜನದಂಗಗಂಧ

ಪ್ರಾವರಣ ಹುತ ಚರು ಪುರೋಡಾ

ಶಾವಳಿಯ ಸೌರಭವ ಮುಸುಕಿತು ವನದ ವಳಯದಲಿ  


ಹೊಕ್ಕರಿವರಾಶ್ರಮದ ತುರುಗಿದ

ತಕ್ಕರಂತಃಕರಣ ತುರಗಕೆ

ದುಕ್ಕುಡಿಯನಿಕ್ಕಿದರು ತಿರುಹಿದರೆರಡು ವಾಘೆಯಲಿ

ಸಿಕ್ಕಿದವು ದಾಳಿಯಲಿ ಧೈರ್ಯದ

ದಕ್ಕಡರ ಮನ ಹರಹಿನಲಿ ಹಾ

ಯಿಕ್ಕಿದರು ಕಡೆಗಣ್ಣ ಬಲೆಗಳ ಮುನಿ ಮೃಗಾವಳಿಗೆ 


ಸೃಕ್ ಸೃವವ ಮುಟ್ಟಿದರು ಧೌತಾಂ

ಶುಕದೊಳಗೆ ತಂಬುಲವ ಕಟ್ಟಿದ

ರಕಟುಪಾಧ್ಯರ ಮೋರೆಯನು ತೇಡಿಸುವ ಬೆರಳಿನಲಿ

ಚಕಿತ ಧೃತಿಯರು ದೀಕ್ಷಿತರ ಚಂ

ಡಿಕೆಗಳನು ತುಡುಕಿದರು ಮುನಿವಟು

ನಿಕರ ಶಿರದಲಿ ಕುಣಿಸಿದರು ಕುಂಚಿತ ಕರಾಂಗುಲಿಯ  


ರಾಯರೆಂಬುವರಿಲ್ಲಲಾ ಸ್ವಾ

ಧ್ಯಾಯ ಕೆಟ್ಟುದು ಮುಟ್ಟಿದರು ಪಾ

ಧ್ಯಾಯರನು ಶೂದ್ರೆಯರು ಸೆಳೆದರು ಮೌಂಜಿಮೇಖಲೆಯ

ಹಾಯಿದರು ಯಜ್ಞೋಪವೀತಕೆ

ಬಾಯಲೆಂಜಲಗಿಡಿಯ ಬಗೆದರ

ಲಾಯೆನುತ ಬಿಟ್ಟೋಡಿದರು ಸುಬ್ರಹ್ಮಚಾರಿಗಳು 


ಕೆದರಿದರು ಗಡ್ಡವನುಪಾಧ್ಯರು

ಬೆದರಿನಿಂದರಿದೇನು ನೀವ್ ಮಾ

ಡಿದ ವಿಟಾಳವ ಹೇಳುವೆವು ಕುಂತೀಕುಮಾರರಿಗೆ

ಇದು ಮಹಾಮುನಿ ಸೇವಿತಾಶ್ರಮ

ವಿದರ ಶಿಷ್ಟಾಚಾರವನು ಕೆಡಿ

ಸಿದವರೇ ಕ್ಷಯವಹರು ಶಿವಶಿವಯೆಂದರಾ ದ್ವಿಜರು ೧೦ 


ಹೇಳಿದರೆ ಕುಂತೀಕುಮಾರರು

ಕೇಳಿ ಮಾಡುವುದಾವುದೋ ವನ

ಪಾಲಕರು ತಾವಿಂದು ಪೃಥ್ವೀಪಾಲ ನಮ್ಮೊಡೆಯ

ಹೇಳಿ ಬಳಿಕರ್ಜುನನ ಭೀಮನ

ದಾಳಿಯನು ತರಲಹಿರೆನುತ ಘಾ

ತಾಳಿಯರು ಮುನಿಜನವ ಬೈದರು ಬಹುವಿಕಾರದಲಿ ೧೧


ಶಾಂತರುರೆ ವಿಜಿತೇಂದ್ರಿಯರು ವೇ

ದಾಂತ ನಿಷ್ಠರು ಸುವ್ರತಿಗಳ

ಶ್ರಾಂತವೇದಾಧ್ಯಯನ ಯಾಜ್ಞಿಕ ಕರ್ಮ ಕೋವಿದರು

ಸಂತತಾನುಷ್ಠಾನ ಪರರನ

ದೆಂತು ನೀವಾಕ್ರಮಿಸುವಿರಿ ವಿ

ಭ್ರಾಂತರೌ ನೀವೆನುತ ಜರೆದರು ಕಾಮಿನೀಜನವ ೧೨ 


ಒದೆದು ಪದದಲಿ ಕೆಂದಳಿರ ತೋ

ರಿದೆವಶೋಕೆಗೆ ಮದ್ಯಗಂಡೂ

ಷದಲಿ ಬಕುಳದ ಮರನ ಭುಲ್ಲವಿಸಿದೆವು ಕುರುವಕಕೆ

ತುದಿಮೊಲೆಯ ಸೋಂಕಿನಲಿ ಹೂದೋ

ರಿದೆವು ಕಣ್ಣೋರೆಯಲಿ ತಿಲಕವ

ಕದುಕಿದೆವು ನೀವಾವ ಘನಪದವೆಂದರಬಲೆಯರು ೧೩ 


ಬಲುಮೊಲೆಯ ಸೋಂಕಿನಲಿ ಶಾಂತರ

ತಲೆಕೆಳಗ ಮಾಡುವೆವು ಕಡೆಗ

ಣ್ಣಲಗಿನಲಿ ಕೊಯ್ದೆತ್ತುವೆವು ವಿಜಿತೇಂದ್ರಿಯರ ಮನವ

ಎಳೆನಗೆಗಳಲಿ ವೇದ ಪಾಠರ

ಕಲಕಿ ಮಿಗೆ ವೇದಾಂತ ನಿಷ್ಠರ

ಹೊಳಸಿ ದುವ್ವಾಳಿಸುವೆವೆಮಗಿದಿರಾರು ಲೋಕದಲಿ ೧೪ 


ಎನುತ ಕವಿದುದು ಮತ್ತೆ ಕಾಂತಾ

ಜನ ಸುಯೋಧನನರಮನೆಯ ಸೊಂ

ಪಿನ ಸಖೀ ನಿಕುರುಂಬ ತುಂಬಿತು ವರ ತಪೋವನವ

ಮನಸಿಜನ ದಳ ನೂಕಿತೇಳೇ

ಳೆನುತ ಚೆಲ್ಲಿತು ಮುನಿನಿಕರ ನೃಪ

ವನಿತೆಯಿದಿರಲಿ ಸುಳಿದವರಿವರದಿರು ಮಂದಿ ಸಂದಣಿಸಿ ೧೫ 


ಈಕೆ ಪಾಂಡವಸತಿ ಕಣಾ ತೆಗೆ

ಯೀಕೆಯತಿ ದಾರಿದ್ರಮಾನುಷೆ

ಯೀಕೆಯಲ್ಲೊಳಗಿಹಳು ರಾಣೀವಾಸವೆಂಬರಲೆ

ಈಕೆಯಹುದಲ್ಲಿದಕೆ ಪಣವೇ

ನೀಕೆ ಬಣಗಕಟೆಂದು ಕಾಂತಾ

ನೀಕೆ ತಮ್ಮೊಳು ನುಡಿವುತಿದ್ದುದು ತೋರಿ ಬೆರಳಿನಲಿ ೧೬ 


ಕುಣಿವರಂದುಗೆ ಕಾಲಝಣ ಝಣ

ಝಣ ಝಣತ್ಕೃತಿ ರಭಸಮಿಗೆ ಕಂ

ಕಣದ ದನಿತೋರುವರು ನುಡಿನುಡಿ ಸೇರದಂದದಲಿ

ಮಣಿಮಯದ ಕುಂಡಲವನಲುಗಿಸಿ

ಯೆಣಿಸುವಂತಿರೆ ಕೊರಳ ಹಾರದ

ಮಣಿಗಳು ಮುತ್ತುಗಳ ಮೆರೆವರು ಮುರಿದ ಮೌಳಿಯಲಿ ೧೭ 


ಬಳಿಯಲೈದಿತು ಮುನಿಗಳಿವರುಪ

ಟಳವನರಸಂಗರುಹಿದರು ವೆ

ಗ್ಗಳಿಸಿ ಭೀಮಂಗೆಂದರರ್ಜುನ ಯಮಳರಿದಿರಿನಲಿ

ಉಳಿದರೆಮಗೀ ವನ ವಿಟಾಳ

ಪ್ರಳಯವಾದುದು ಕಾನನಾಂತರ

ನಿಳಯದಲಿ ನಿಲಿಸೆಮ್ಮನೆಂದುದು ಸಕಲ ಮುನಿನಿಕರ ೧೮ 


ಅರಸಲಾ ಕುರುರಾಯನಾತನ

ಬರವು ತುರುಪಳ್ಳಿಗಳ ಗೋವಿ

ಸ್ತರಣ ಕೋಸುಗವೈಸೆ ಪಾಳೆಯ ಸಾರ್ವಭೌಮನದು

ಪರಿಸರದಲಿದ್ದುದು ವಿನೋದಕೆ

ತರುಣಿಯರು ಬರಲೇಕೆ ನೀವ

ಬ್ಬರಿಸುವಿರಿ ನಮ್ಮವರಲಾಯೆಂದನು ಮಹೀಪಾಲ ೧೯ 


ಔಡುಗಚ್ಚಿದನಂಘ್ರಿಯಲಿ ನೆಲ

ಬೀಡ ಬಿಡಲೊದೆದನು ಕರಾಂಗುಲಿ

ಗೂಡಿ ಮುರಿದೌಕಿದನು ಖತಿಯಲಿ ನಿಜ ಗದಾಯುಧವ

ನೋಡಿದನು ಕುರುರಾಯನಲಿ ಹೊ

ಯ್ದಾಡಿ ಬರಬೇಕೆಂಬ ಭೀಮನ

ಮೋಡಿಯನು ನೃಪನರಿದು ಸಂತೈಸಿದನು ಸಾಮದಲಿ ೨೦ 


ಕರೆಸಿದನು ನೃಪ ವಾರಿಕೇಳಿಗೆ

ವರ ವಧೂವರ್ಗವನು ಕೇಳಿದು

ತಿರುಗಿತಂಗಜ ಥಟ್ಟು ಝಣ ಝಣರವರ ರಭಸದಲಿ

ಸರಿದಿಳಿವ ನಿರಿಯೊಂದು ಕೈಯಲಿ

ಸುರಿವರಳ ಮುಡಿಯೊಂದು ಕೈಯಲಿ

ಭರದೆ ಗಮನ ಸ್ವೇದ ಜಲ ಮಘಮಘಿಸೆ ದೆಸೆದೆಸೆಗೆ ೨೧ 


ಬಲುಮೊಲೆಗಳಳ್ಳಿರಿಯಲೇಕಾ

ವಳಿಗಳನು ಕೆಲಕೊತ್ತಿ ಮೇಲುದ

ಕಳಚಿ ನಡುಗಿಸಿ ನಡುವನಂಜಿಸಿ ಜಘನ ಮಂಡಲವ

ಆಳಕನಿಕರವ ಕುಣಿಸಿ ಮಣಿಕುಂ

ಡಲವನಲುಗಿಸಿ ಹಣೆಯ ಮುತ್ತಿನ

ತಿಲಕವನು ತನಿಗೆದರಿ ನಡೆದುದು ಕೂಡೆ ಸತಿನಿವಹ ೨೨ 


ತಾರಕೆಗಳುಳಿದಂಬರದ ವಿ

ಸ್ತಾರವೋ ಗತಹಂಸಕುಲ ಕಾ

ಸಾರವೋ ನಿಸ್ಸಾರವೋ ನಿರ್ಮಳ ತಪೋವನವೋ

ನಾರಿಯದ ದಳ ನೂಕಿದರೆ ತನು

ಸೌರಭದ ದಳ ತೆಗೆಯದಾ ಕಾಂ

ತಾರದೊಳಗೇನೆಂಬೆನಾ ಸೌಗಂಧ ಬಂಧುರವ ೨೩ 


ಅಲರ್ದ ಹೊಂದಾವರೆಯ ಹಂತಿಯೊ

ತಳಿತ ಮಾವಿನ ಬನವೊ ಮಿಗೆ 

ತ್ತಲಿಪ ಬಹಳ ತಮಾಲ ಕಾನನವೋ ದಿಗಂತದಲಿ

ಹೊಳೆವ ವಿದ್ರುಮವನವೊ ಕುಸುಮೋ

ಚ್ಚಳಿತ ಕೇತಕಿದಳವೊ ರಂಭಾ

ವಳಿಯೊ ಕಾಂತಾಜನವೊ ಕಮಲಾಕಾರ ವದನೆಯರೊ ೨೪ 


ಅರಸ ಕೇಳೈ ವಾರಿಕೇಳಿಗೆ

ಕುರುಪತಿಯ ನೇಮದಲಿ ಶತಸಾ

ವಿರ ಸರೋಜಾನನೆಯರೈದಿತು ವನವನಂಗಳಲಿ

ಪರಿಮಳದ ಪಸರಣದ ಪದ್ಮಾ

ಕರ ಸಹಸ್ರದ ಸಾಲು ಸುಮನೋ

ಹರ ಮಹೋದ್ಯಾನವನು ಕಂಡೈತಂದರಬಲೆಯರು ೨೫ 


ರಾಯಕುವರರು ಸಚಿವ ಮಂತ್ರಿ 

ಸಾಯಿತರ ಮಕ್ಕಳು ಚಮೂಪರ

ನಾಯಕರ ನಂದನರು ವಿಟರು ವಿನೋದಿಗಳು ಪುರದ

ಆಯತಾಕ್ಷಿಯರೊಡನೆ ರಾವುತ

ಪಾಯಕರ ಸುತರೋಳಿ ಮೇಳ 

ವಾಯಿಗಳ ನಾಗರಿಕರೈದಿತು ಕೋಟಿ ಸಂಖ್ಯೆಯಲಿ ೨೬ 


ತವಗತಳಿ ಮುಳುವೇಲಿ ಬಾಗಿಲ

ಜವಳಿಗದ ಬೀಯಗದಲಿದ್ದುದು

ದಿವಿಜವನಪುದ್ದಂಡತರ ಪರಿಮಳದ ಪೂರದಲಿ

ಯುವತಿಯರ ದಳ ನೂಕಿತುದಕೋ

ತ್ಸವ ವೃಥಾ ಕೇಳಿಯಲಿ ಕನಕೋ

ದ್ಭವ ಕವಾಟವನೊದೆದು ಕರೆದರು ಕಾಹಿನವರುಗಳ ೨೭ 


ಆರಿವರು ಕರೆವವರೆನುತ ಸುರ

ವೀರರೌಕಿತು ಬಾಗಿಲಲಿ ನೀ

ವಾರೆನಲು ತೆಗೆ ಕದವನರಿಯಾ ರಾಯಕುರುಪತಿಯ

ವಾರನಾರಿಯರವನಿಪತಿಯ ಕು

ಮಾರರಿದೆ ಬೇಹವರು ಸರಸಿಯ

ವಾರಿಕೇಳಿಗೆ ಬಂದೆವೆಂದರು ಗಜರಿ ಗರ್ಜಿಸುತ ೨೮ 


ಹೋಗಬಹುದೆ ಗಂಧರ್ವ ರಾಯನ

ಮಗನ ಬನವಿದು ನೋಡಿದರೆ ದೃ

ಗ್ಯುಗಳದೆವೆ ಸೀವುದು ಕಣಾ ಫಡ ಹೋಗಿ ಹೋಗಿಯೆನೆ

ತೆಗೆ ವಿಕಾರವೆ ನಮ್ಮೊಡನೆ ತೆಗೆ

ತೆಗೆ ಕದವ ಗಂಧರ್ವನಾರಿಗೆ

ಮಗನದಾವವನೆನುತ ಹೊಕ್ಕರು ತಳಿಯ ಮುರಿದೊಗೆದು ೨೯ 


ಒರಲಿದವು ಕಹಳೆಗಳು ಕಾಹಿನ

ಸುರಭಟರು ನೆರೆದಸಿ ಮುಸುಂಡಿಯ

ಪರಶು ಮುದ್ಗರ ಚಾಪಮಾರ್ಗಣ ಸಬಲ ಸೂನಗಿಯ

ಹರಿಗೆ ಖಡ್ಗದಲರಿಭಟರ 

ಪ್ಪರಿಸಿದರು ಗಂಧರ್ವ ಭಟರಿಗೆ

ಕುರುಪತಿಯ ಸುಭಟರಿಗೆ ತೊಡಕಿತು ತೋಟಿ ತೋಪಿನಲಿ ೩೦


ಚೆಲ್ಲಿದರು ಚಪಳೆಯರು ಮುನಿಜನ

ವೆಲ್ಲ ಪಾಂಡವರಾಶ್ರಮದ ಮೊದ

ಲಲ್ಲಿ ಮೊನೆಗಣೆ ಮೊರೆದು ಮುರಿದವು ಮೊನೆಯ ಮುಂಬಿಗರ

ಚಲ್ಲೆಗಂಗಳ ಯುವತಿಯರ ನಾ

ನಲ್ಲಿ ಕಾಣೆನು ಕಾಮುಕರು ನಿಂ

ದಲ್ಲಿ ನಿಲ್ಲದೆ ಹರಿದರವನೀಪತಿಯ ಪಾಳೆಯಕೆ ೩೧ 


ಬಿರಿಯ ಮಕ್ಕಳ ತಂಡವೇ ಹೊ

ಕ್ಕಿರಿದುದವದಿರನುರುಬಿ ದಿವಿಜರು

ಜರೆದು ನೂಕಿತು ತೋಪಿನೊಳಬಿದ್ದವರ ಹೊರವಡಿಸಿ

ಮುರಿದ ತಳಿಗಳ ಬಲಿದು ಬಾಗಿಲ

ಹೊರಗೆ ನಿಂದರು ವಾರಿ ಕೇಳಿಯ

ಮರೆದು ಶೋಣಿತವಾರಿ ಕೇಳಿಗೆ ಬನ್ನಿ ನೀವೆನುತ ೩೨ 


ನೃಪಸುತರ ಪಡಿಬಲಕೆ ಬಂದುದು

ವಿಪುಲಬಲ ಹಲ್ಲಣಿಸಿ ಹೊಯ್ ಹೊ

ಯ್ಯಪಸದರ ಗಂಧರ್ವಸುಭಟರನೆನುತ ಸೂಟಿಯಲಿ

ಕುಪಿತರರೆಯಟ್ಟಿದರು ತೋಪಿನ

ಕಪಿಗಳಾವೆಡೆ ಕಾಣಬಹುದೆನು

ತುಪಚರಿತರೊಳಸರಿಯೆ ಹೊಗಿಸಿದರವರನಾ ವನವ ೩೩ ಪದ್ಯ


ಬಂದ ಬಲ ಹೇರಾಳ ತೆಗೆತೆಗೆ

ಯೆಂದು ತೋಪಿನ ಕಡೆಗೆ ಹಾಯಿದು

ನಿಂದು ನೆರಹಿದರಕಟ ಗಂಧರ್ವರು ಭಟವ್ರಜವ

ಬಂದದು ನಡುವನಕೆ ಕೌರವ

ವೃಂದವನು ಕರೆದರು ವಿನೋದಕೆ

ಬಂದಿರೈ ನಾರಾಚಸಲಿಲ ಕ್ರೀಡೆಯಿದೆಯೆನುತ ೩೪ 


ಮುರಿಯಿಸುತ ಗಂಧರ್ವ ಬಲ ಮು

ಕ್ಕುರಿಕಿ ಕೌರವ ಬಲವ ತತ್ತರ

ದರಿದು ತರಹರವಿಲ್ಲೆನಿಸಿ ಹೊಗಿಸಿದರು ಪಾಳೆಯವ

ಹೊರಗುಡಿಯ ಹೊರಪಾಳೆಯದ ಭಟ

ರರುಹಿದರು ಕುರುಪತಿಗೆ ಖತಿಯಲಿ

ಜರಿದು ಜೋಡಿಸಿ ಬಿಟ್ಟನಕ್ಷೋಹಿಣಿಯ ನಾಯಕರ ೩೫ 


ಹಲ್ಲಣಿಸಿದುದು ಚಾತುರಂಗವ

ದೆಲ್ಲ ಕವಿದುದು ಹೊಕ್ಕು ದಿವಿಜರ

ಚೆಲ್ಲ ಬಡಿದರು ಚಾಚಿದರು ತೋಪಿನ ಕವಾಟದಲಿ

ನಿಲ್ಲದೌಕಿದರಂತಕನ ಪುರ

ದೆಲ್ಲೆಯಲಿ ಹೆಕ್ಕಳದ ಖಡುಗದ

ಘಲ್ಲಣಿಯ ಖಣಿಖಟಿಲ ಗಾಢಿಕೆ ಘಲ್ಲಿಸಿತು ನಭವ ೩೬ 


ಬಲದ ಪದಘಟ್ಟಣೆಗೆ ಹೆಮ್ಮರ

ನುಲಿದು ಬಿದ್ದವು ಸಾಲ ಪೂಗಾ

ವಳಿ ಕಪಿತ್ಥ ಲವಂಗ ತುಂಬುರ ನಿಂಬ ದಾಳಿಂಬ

ಫಲ ಪಲಾಶ ರಸಾಲ ಶಮಿಗು

ಗ್ಗುಳ ಮಧೂಕಾಶೋಕ ಬಿಲ್ವಾ

ಮಲಕ ಜಂಬೀರಾದಿಗಳು ನುಗ್ಗಾಯ್ತು ನಿಮಿಷದಲಿ ೩೭ 


ಕದಡಿದವು ಸರಸಿಗಳು ಕೆಡೆದವು

ಕದಳಿಗಳು ಗೊನೆಸಹಿತ ಮುಂಡಿಗೆ

ಮುದುಡಿ ನೆಲಕೊರಗಿದವು ಮಿರುಗುವ ನಾಗವಲ್ಲಿಗಳು

ತುದಿಗೊನೆಯ ಚೆಂದೆಂಗು ಖುರ್ಜೂ

ರದಲಿ ಕಾಣೆನು ಹುರುಳ ನಾರಂ

ಗದ ವಿರಾಮವನೇನನೆಂಬೆನು ನಿಮಿಷ ಮಾತ್ರದಲಿ ೩೮ 


ತೋಟ ಹುಡುಹುಡಿಯಾಯ್ತು ಮುರಿದುದು

ತೋಟಿಯಲಿ ನಮ್ಮವರು ಹಗೆಗಳ

ಗಾಟವವರಾಚೆಯಲಿ ದುರ್ಬಲ ನಮ್ಮದೀಚೆಯಲಿ

ಆಟವಿಕದಳ ಹೊಯ್ದು ಮಿಂಡರ

ಮೀಟನೆತ್ತಿದರವರು ಕಾಹಿನ

ಕೋಟಲೆಗೆ ನಾವೋಲ್ಲೆವೆಂದರು ಚಿತ್ರಸೇನಂಗೆ ೩೯ 


ಅವರು ಮರ್ತ್ಯರು ನಮ್ಮದಕಟಾ

ದಿವಿಜರೀ ವಿಧಿಯಾದುದೇ ಕವಿ

ಕವಿಯೆನುತ ಬೇಹವರಿಗಿತ್ತನು ರಣಕೆ ವೀಳೆಯವ

ಗವಿಯ ಗರುವರು ಗಾಢಿಸಿತು ಮಾ

ನವರ ಮುರುಕಕೆ ಮುರಿದುದೀ ಸುರ

ನಿವಹ ಸುಡಲಾಹವವನೆನುತೈದಿದರು ಸೂಟಿಯಲಿ ೪೦ 


ಆತುದಿದು ತೋಪಿನಲಿ ಗಂಧ

ರ್ವಾತಿರೇಕವ ಸೈರಿಸುತ ಪದ

ಘಾತ ಧೂಳೀಪಟಲ ಪರಿಚುಂಬಿಸಿದುದಂಬರವ

ಭೀತಿ ಬಿಟ್ಟುದೆ ಮನುಜರಿಗೆ 

ಮ್ಮಾತಗಳ ಕೂಡಹುದಲೈ ಕಾ

ಲಾತುದೇ ಕಲಿತನವೆನುತ ಕೈಕೊಂಡರವಗಡಿಸಿ ೪೧ 


ಆರು ನಿಲುವರು ದೇವಲೋಕದ

ವೀರರಲ್ಲಾ ವಿಗಡರೆಸುಗೆಯ

ಭೂರಿ ಬಾಣದ ಹಿಂಡು ತರಿದವು ಹೊಗುವ ಗಂಡಿಗರ

ವಾರುವವ ಮುಖದಿರುಹಿದವು ಮದ

ವಾರಣಂಗಳ ಕೊಡಹಿದವು ಹೊಂ

ದೇರು ಮುಗ್ಗಿದವೊಗ್ಗು ಮುರಿದುದು ಮಿಗುವ ಕಾಲಾಳ ೪೨ 


ಮುರಿದುದಿದು ಗಂಧರ್ವ ಬಲ ಮಿ

ಕ್ಕುರುಬಿಕೊಂಡೇ ಬಂದುದಗ್ಗದ

ಗರುವರಳಿದುದು ಬರಿಯ ದುರ್ಯಶವುಳಿದುದರಸಂಗೆ

ಕರಿತುರಗ ರಥಪಾಯದಳ ಹೆಣ

ಹೊರಳಿಗಟ್ಟಿತು ಪಾಳೆಯದ ಗೋ

ಪುರದ ಹೊರ ಬಾಹೆಯಲಿ ನಿಂದುದು ಬಲಕೆ ಬೇಹವರು ೪೩ 


ಮುರಿದು ಬರುತಿದೆ ಜೀಯ ನಾಯಕ

ರುರಿವವರ ಬಲುಗಾಯದಲಿ ಕು

ಕ್ಕುರಿಸಿದರು ಗಂಧರ್ವರಿಗೆ ಕಡೆವನದ ಕಾಹಿನಲಿ

ಮರಳಿ ಪಾಳೆಯ ಬಿಡಲಿ ಮೇಣ್ ಹಗೆ

ಯಿರಿತಕಂಗೈಸುವರು ಬಿಡು ಕೈ

ಮರೆಯಬೇಡೆನೆ ಬೆರಳ ಮೂಗಿನಲರಸ ಬೆರಗಾದ ೪೪ 


ಸಂಕ್ಷಿಪ್ತ ಭಾವ


ಕೌರವರ ವನವಿಹಾರಗಂಧರ್ವರೊಂದಿಗೆ ಕಲಹ.


ಅಲ್ಲಲ್ಲಿ ನಿಂತು ಗೋವುಗಳ ಲೆಕ್ಕ ನೋಡುತ್ತಾ ಪಾಂಡವರಿದ್ದ ಸ್ಥಳಕ್ಕೆ ಬಂದ ಕೌರವರುಅಟ್ಟಹಾಸದಿಂದ ಬಹು ವೈಭವದ ಬಿಡಾರಗಳನ್ನು ನಿರ್ಮಿಸಿದರುಸ್ತ್ರೀಯರು ಬಹಳಅಲಂಕಾರಗಳಿಂದ ಶೋಭಿಸುತ್ತ ಆಶ್ರಮದ ಮುನಿಗಳನ್ನು ಕೆಣಕುತ್ತ ಬಂದರುತಮ್ಮ ನೆಮ್ಮದಿಕೆಡಿಸುವ ಇವರ ಬಗ್ಗೆ ದೂರು ಹೇಳಲು ಬಂದರೆ ಧರ್ಮಜನು ಇವರು ತಮ್ಮವರಲ್ಲವೆ ಎಂಬಸಮಾಧಾನ ಹೇಳಿದನು


 ಸ್ತ್ರೀಯರು ದ್ರೌಪದಿಯನ್ನು ನೋಡಿ ಅಣಗಿಸಿಕೊಂಡರುಇವಳೇ ಹೌದು ಅಲ್ಲ ಎಂದುತಮ್ಮತಮ್ಮಲ್ಲಿ ಮಾತನಾಡಿದರುಭೀಮಾದಿಗಳ ಬಳಿಗೆ ಬಂದ ಮುನಿಜನರು ತಮ್ಮನ್ನು ರಕ್ಷಿಸಲುಕೇಳಿಕೊಂಡರುಭೀಮನನ್ನು ಸಹಿಸಿಕೊಳ್ಳುವಂತೆ ಧರ್ಮಜನು ಸೂಚಿಸಿದನು.


ಸಕಲ ಸ್ತ್ರೀಜನರು ವಿಲಾಸದಿಂದ ನಡೆಯುತ್ತ ಅಲ್ಲೊಂದು ವನಕ್ಕೆ ಬಂದರುಅದು ಗಂದರ್ವರ ಸ್ಥಳಆದರೆ ಅದನ್ನು ಲೆಕ್ಕಿಸದೆ ಕದವನ್ನು ಮುರಿದು ಒಳನುಗ್ಗಿದರುಇದರಿಂದ ಕೋಪಗೊಂಡಗಂದರ್ವರ ಪಡೆಯವರು ಕೌರವರೊಂದಿಗೆ ಸಮರಕ್ಕೆ ಬಂದರುತೋಟವು ಹುಡಿಯಾಯಿತುಮರಗಳು ಮುರಿದು ಬಿದ್ದವುಎರಡೂ ಕಡೆಯವರಿಗೆ ಬಹಳ ಹೋರಾಟವಾಯಿತುಕೊನೆಗೆ ದೇವಕುಲದ ಬಲ ಹೆಚ್ಚಾಯಿತು.



 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ