ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮಂಜುಳಾ ಹುಲ್ಲಹಳ್ಳಿ


 ಮಂಜುಳಾ ಹುಲ್ಲಹಳ್ಳಿ


ಡಾ. ಮಂಜುಳಾ ಹುಲ್ಲಹಳ್ಳಿ ಅವರು ಜನಾನುರಾಗಿ ಕರ್ನಾಟಕ ಸರ್ಕಾರದ ಅಧಿಕಾರಿಗಳಾಗಿ, ಬರಹಗಾರ್ತಿಯಾಗಿ, ಸಾಂಸ್ಕೃತಿಕ ಸಂಘಟಕರಾಗಿ, ಇತಿಹಾಸ ತಜ್ಞರಾಗಿ ಹೆಸರಾಗಿದ್ದಾರೆ.

ಮಾರ್ಚ್ 28 ಎಚ್. ಪಿ. ಮಂಜುಳಾ ಅವರ ಹುಟ್ಟುಹಬ್ಬ.  ಇವರ ಹುಟ್ಟೂರು ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ.  ತಂದೆ ಎಚ್. ಎಂ.  ಪುಟ್ಟಸ್ವಾಮಪ್ಪ. ತಾಯಿ ವನಜಾಕ್ಷಮ್ಮ.

ಪ್ರತಿಭಾನ್ವಿತರಾದ ಮಂಜುಳಾ ಅವರು ಉನ್ನತ ಸಾಧನೆಯೊಂದಿಗೆ ಎಂ. ಎ. ಕನ್ನಡಪದವಿಯನ್ನೂ; ಭಾಷಾ ವಿಜ್ಞಾನ, ಜಾನಪದ, ಶರಣ ಸಾಹಿತ್ಯ ವೈವಿಧ್ಯಗಳಲ್ಲಿ ಸ್ನಾತಕೋತ್ತರ ಡಿಪ್ಲೋಮಾ ಪದವಿಗಳನ್ನೂ; ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಪದವಿಯನ್ನೂ, ಮತ್ತು "ಹೆಡತಲೆ ಗ್ರಾಮ ಜಾನಪದ : ಒಂದು ಕ್ಷೇತ್ರ ಕಾರ್ಯವರದಿ" ಸಂಶೋಧನಾ ಮಹಾಪ್ರಬಂಧ  ಮಂಡಿಸಿ ಯುಜಿಸಿ ಪಿಎಚ್.ಡಿ ಸಾಧನೆಯನ್ನೂ ಮಾಡಿದ್ದಾರೆ. 

ಡಾ. ಮಂಜುಳಾ ಅವರು ಕರ್ನಾಟಕ ರಾಜ್ಯ ಸೇವೆಯಲ್ಲಿ ಹಲವು ರೀತಿಯಲ್ಲಿ ಜನಾನುರಾಗಿ ಅಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದು ಪ್ರಸ್ತುತದಲ್ಲಿ ಚಿಕ್ಕಮಗಳೂರು ವಿಭಾಗದಲ್ಲಿ ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕಿಯಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.

ಸಾಹಿತ್ಯ ಸಂಸ್ಕೃತಿಗಳಲ್ಲಿ ಅಪಾರ ಆಸಕ್ತರಾದ ಡಾ. ಮಂಜುಳಾ ಅವರ ಬಹುಮುಖಿ ಬರಹಗಳಲ್ಲಿ ಕವಳಿಗೆ (ವಿಮರ್ಶಾ ಲೇಖನ ಸಂಕಲನ), ಕದಳಿಯ ಬನದೊಳಗೆ (ಮಹಿಳಾ ಸಾಹಿತ್ಯ ವಿಮರ್ಶಾ ಸಂಕಲನ), ಕುವೆಂಪು ಕೃತಿಗಳ ಕೈಪಿಡಿ, ಕುವೆಂಪು ಎಂದರೆ (ಕುವೆಂಪು ಸಾಹಿತ್ಯ ವಿಮರ್ಶಾ ಲೇಖನ ಸಂಕಲನ), ಪುರಾತನರ ನೆನಪಿನಲ್ಲಿ (ಕಥನ ಲೇಖನಗಳು), ನಂಜನಗೂಡು ಗ್ಯಾಸೆಟಿಯರ್, ಸಾಹೇಬರ ಮಗಳು (ಲೀಲಾದೇವಿ ಆರ್.ಪ್ರಸಾದ್ ಜೀವನ ಚರಿತ್ರೆ), ಕೈಲಾಸದ ನೆರಳಿಗೆ ಮಾನಸೆಯ ಮಡಿಲಿಗೆ (ಪ್ರವಾಸ ಕಥನ), ಕುವೆಂಪು ಭಾವಲಹರಿಯಲ್ಲಿ (ವಿಮರ್ಶಾ ಲೇಖನ ಸಂಕಲನ), ಸೂಳ್ಳುಡಿಗಳೊಂದಿಗೆ ಕೆಲಗಳಿಗೆ (ವಚನ ಸಾಹಿತ್ಯ ಅನುಸಂಧಾನ),  ನಮ್ಮ ಹೆಮ್ಮೆಯ ಯೋಧ (ಕವನ ಸಂಕಲನ), ನಮ್ಮ ಹೆಮ್ಮೆಯ (ಯೋಧ ಹಿಂದಿ ಭಾಷಾಂತರ), ಇಬ್ಬನಿಯೊಡೆಯನಿಗೆ ಆತ್ಮ ನೈವೇದ್ಯ (ವಚನ ಸಂಕಲನ), ಅಮೃತ ಮಂಡ್ಯ (ಸಂಪಾದನೆ),  ಹಸಿರು ಸಿರಿ (ಸಂಪಾದನೆ), ವಿಜಯಾನ್ವೇಷಣೆ (ಸಂಪಾದನೆ ಇತರರೊಡನೆ), ರಾಷ್ಟ್ರಭೂಷಣ (ಸಂಪಾದನೆ ಇತರರೊಡನೆ), ಎಸ್.ಎನ್.ಚಿತ್ರ ಸಂಪುಟ (ಸಂಪಾದನೆ), ಚಿಕ್ಕಮಗಳೂರು ನಲೆ-ಬೆಲೆ (ಚಿಕ್ಕಮಗಳೂರಿನ ಸಾಂಸ್ಕೃತಿಕ, ಐತಿಹಾಸಿಕ ಸ್ಥಳ ಪರಿಚಯ ಲೇಖನಗಳ ಸಂಗ್ರಹ) ಮುಂತಾದವು ಇವೆ.

ಮಂಜುಳಾ ಹುಲ್ಲಹಳ್ಳಿಯವರು ಆಕಾಶವಾಣಿಯಲ್ಲಿ ಅನೇಕ ಕಾರ್ಯಕ್ರಮ ನೀಡಿದ್ದಾರೆ. ಅವರ ವೈವಿಧ್ಯ ಬರಹಗಳು ಮತ್ತು ಅಂಕಣಗಳು ದಿನಪತ್ರಿಕೆ, ವಾರಪತ್ರಿಕೆಗಳಲ್ಲಿ ನಿರಂತರವಾಗಿ ಮೂಡಿಬರುತ್ತಿವೆ. ಮಂಜುಳಾ ಹುಲ್ಲಹಳ್ಳಿಯವರು ಕನ್ನಡ ಸಾಹಿತ್ಯ ಪರಿಷತ್ತು ಮತ್ತಿತರ ಪ್ರತಿಷ್ಠಿತ ವೇದಿಕೆಗಳಲ್ಲಿ ಕವನವಾಚನ,  ವಿಚಾರ ಮಂಡನೆ, ಉಪನ್ಯಾಸಗಳನ್ನು ಮಾಡಿದ್ದಾರೆ. 

ಮಂಜುಳಾ ಹುಲ್ಲಹಳ್ಳಿಯವರ ಸೇವೆ ಹಲವು ರೀತಿಯಲ್ಲಿ ಸಲ್ಲುತ್ತಿವೆ.  
ಕರ್ನಾಟಕ ಜಾನಪದ ವಿಶ್ವ ವಿದ್ಯಾನಿಲಯದ 'ಗ್ರಾಮೀಣ ಹಾಗೂ ಬುಡಕಟ್ಟು ಯುವಜನ ಸೇವೆ ಮತ್ತು ಕ್ರೀಡಾ ವಿಭಾಗ'ದ ಬೋರ್ಡ್ ಆಫ್ ಸ್ಟಡೀಸ್ ಸದಸ್ಯೆಯಾಗಿ ಕಾರ್ಯ ನಿರ್ವಹಣೆ, ರಾಜ್ಯ ಯುವ ನೀತಿ ಕರಡು ರಚನಾ ಸಮಿತಿಯು ಸಹ ಸದಸ್ಯೆಯಾಗಿ ಕಾರ್ಯ ನಿರ್ವಹಣೆ, ರಾಷ್ಟ್ರ ಮಟ್ಟದಲ್ಲಿ ಮಹಿಳಾ ಕ್ರೀಡಾ ಕೂಟ, ಯುವಜನೋತ್ಸವ ಸಂಘಟನೆ, ರಾಜ್ಯ ಮಟ್ಟದಲ್ಲಿ ಯುವಜನೋತ್ಸವ, ಯುವಜನ ಮೇಳ, ಯುವ ಸಮ್ಮೇಳನ ಸಂಘಟನೆ,  ಗ್ರಾಮೀಣ ಹಂತದಲ್ಲಿ ಕ್ರೀಡಾಕೂಟಗಳು, ಜಾನಪದ ಕ್ರೀಡಾ ಚಟುವಟಿಕೆಗಳ ವಿಶೇಷ ಸಂಘಟನೆ, ಮೈಸೂರು ಆಕಾಶವಾಣಿ ವತಿಯಿಂದ ಮೈಸೂರು ದಸರಾ ವೀಕ್ಷಕ ವಿವರಣಾಕಾರರಾಗಿ ಕರ್ತವ್ಯ ನಿರ್ವಹಣೆ ಮುಂತಾದ ವಿಶಿಷ್ಟ ಸೇವೆಗಳು ಇದರಲ್ಲಿ ಸೇರಿವೆ.

ಕನ್ನಡ ಸಾಹಿತ್ಯ ಪರಿಷತ್ತು,, ಕರ್ನಾಟಕ ಲೇಖಕಿಯರ ಸಂಘ, ಬೆಂಗಳೂರು. ಕನ್ನಡ ಲೇಖಕಿಯರ ಸಂಘ,ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್  ಮುಂತಾದ‍ ಸಂಘಟನೆಗಳಲ್ಲಿ ಅವರು ಸಕ್ರಿಯವಾಗಿ ಭಾಗವಹಿಸುತ್ತ ಬಂದಿದ್ದಾರೆ. 

ಡಾ ಮಂಜುಳಾ ಹುಲ್ಲಹಳ್ಳಿ ಅವರಿಗೆ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತು ದತ್ತಿನಿಧಿ ಪ್ರಶಸ್ತಿ, ಮಂಡ್ಯ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ,  ಕರ್ನಾಟಕ ಜಾನಪದ ಪರಿಷತ್ತಿನ "ಲೋಕ” ಪ್ರಶಸ್ತಿ, ಮಂಡ್ಯ ಜಿಲ್ಲಾ ಸರ್ವೋತ್ತಮ ಸೇವಾ ಪ್ರಶಸ್ತಿ, ಅಳಸಿಂಗ ಪೆರುಮಾಳ್ ಪ್ರಶಸ್ತಿ • ಚಿಕ್ಕಮಗಳೂರು ಜಿಲ್ಲಾ ಸರ್ಮೋತ್ತಮ ಸೇವಾ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿವೆ. 

ಡಾ. ಮಂಜುಳಾ ಹುಲ್ಲಹಳ್ಳಿಯವರು ತಮ್ಮ ನಿಷ್ಠಾವಂತ ಕಾರ್ಯನಿರ್ವಹಣೆಯ ಜೊತೆಗೆ ತಾವಿರುವ ವಾತಾವರಣದಲ್ಲಿ ಉತ್ಸಾಹ ಮೂಡಿಸುವ ಸಾಂಸ್ಕೃತಿಕ ವಾತಾವರಣ ನಿರ್ಮಾಣ, ಪ್ರಾಚೀನ ಸ್ಥಾವರಗಳ ಕುರಿತಾದ ಸಂಶೋಧನೆ ಮತ್ತು ರಕ್ಷಣಾ ಕಾಳಜಿ, ಸ್ಥಳೀಯ ಜಾನಪದದೊಂದಿಗಿನ ಸಕ್ರಿಯ ಒಡನಾಟಗಳಿಗೆ ಹೆಸರಾಗಿದ್ದಾರೆ.

ಸರಳತೆ, ಸುಸಂಸ್ಕೃತಿ ಮತ್ತು ಕ್ರಿಯಾಶೀಲತೆಗೆ ಹೆಸರಾದ ಆತ್ಮೀಯ ಮಂಜುಳಾ ಹುಲ್ಲಹಳ್ಳಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

Happy birthday Dr. Manjula Hullahalli Madam 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ