ಶ್ರೀನಿವಾಸಮೂರ್ತಿ
ಎನ್. ಎಸ್. ಶ್ರೀನಿವಾಸಮೂರ್ತಿ
ಎನ್. ಎಸ್. ಶ್ರೀನಿವಾಸಮೂರ್ತಿ ಕಳೆದ ಎರಡು ದಶಕಗಳಿಂದ ದೇಗುಲಗಳ ಬಗೆಗೆ ಅಧ್ಯಯನಶೀಲರಾಗಿ ಮಹತ್ವದ ವಿಷಯಗಳ ಬಗೆಗೆ ಬೆಳಕು ಚೆಲ್ಲುತ್ತ ಬಂದಿದ್ದಾರೆ.
ಮಾರ್ಚ್ 21 ಶ್ರೀನಿವಾಸಮೂರ್ತಿ ಅವರ ಜನ್ಮದಿನ. ಅವರ ತಂದೆ ಎನ್. ಎಸ್. ಸೀತಾರಾಮ ರಾವ್ ಗಣಿತ, ವಿಜ್ಞಾನ, ಸಂಗೀತ ಮತ್ತು ರಂಗಲೋಕದ ಮಹಾನ್ ಸಾಧಕರು. ತಾಯಿ ಪ್ರೇಮಲೀಲಾ. ಶ್ರೀನಿವಾಸಮೂರ್ತಿ ಅವರ ತಾತ ನೂಲೇನೂರು ಶಂಕರಪ್ಪನವರು ಮಹಾನ್ ವಿದ್ವಾಂಸರಾಗಿ, ವಾಗ್ಗೇಯಕಾರರಾಗಿ ಮತ್ತು ಗಮಕಿಗಳಾಗಿ ನಾಡಿನಲ್ಲಿ ಪ್ರಸಿದ್ಧರಾಗಿದ್ದವರು. ದೊಡ್ಡಪ್ಪ ಎನ್. ಎಸ್. ಚಿದಂಬರ ರಾವ್ ಕಥೆಗಾರರಾಗಿ ಪ್ರಸಿದ್ಧರಾಗಿದ್ದವರು. ಇವರ ಸಹೋದರ ನಮ್ಮೆಲ್ಲರ ಆತ್ಮೀಯರಾದ ಎನ್. ಎಸ್. ಶ್ರೀಧರ ಮೂರ್ತಿ
Sreedhara Murthy ಪತ್ರಿಕಾ ಲೋಕದಲ್ಲಿ ಮತ್ತು ಬರಹಲೋಕದಲ್ಲಿ ಪ್ರಖ್ಯಾತರು.
ಶ್ರೀನಿವಾಸಮೂರ್ತಿ ಚಿಕ್ಕಮಗಳೂರು ಜಿಲ್ಲೆಯ ಹರಿಹರಪುರದಲ್ಲಿ ತಮ್ಮ ಆರಂಭಿಕ ವಿದ್ಯಾಭ್ಯಾಸ ಮುಗಿಸಿ, ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಬಿ.ಎಸ್ಸಿ ಮತ್ತು ಸ್ಟಾಟಿಸ್ಟಿಕ್ಸ್ ವಿಷಯದಲ್ಲಿ ಎಂ.ಎಸ್ಸಿ ಪದವಿ ಗಳಿಸಿದವರು.
ಶ್ರೀನಿವಾಸಮೂರ್ತಿ ಅವರು ನಾಲ್ಕು ವರ್ಷ ಅಂಚೆ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಿದ ನಂತರ ಕಳೆದ 25 ವರ್ಷಗಳಿಂದ ಕರ್ಣಾಟಕ ಬ್ಯಾಂಕಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಶ್ರೀನಿವಾಸಮೂರ್ತಿ ಅವರು ತಮ್ಮ ಹಿರಿಯರಿಂದ ಬಳುವಳಿಯಾಗಿ ಬಂದ ವೈವಿಧ್ಯಪೂರ್ಣ ಸಾಹಿತ್ಯ ಮತ್ತು ಸಾಂಸ್ಕೃತಿಕ ಆಸಕ್ತಿಗಳಿಂದ ಪ್ರೇರಿತರಾದವರು. ಕಳೆದ ಇಪ್ಪತ್ತು ವರ್ಷಗಳಿಂದ ದೇವಾಲಯಗಳ ಬಗ್ಗೆ ಅಧ್ಯಯನ ಮಾಡುತ್ತಿರುವ ಇವರು ಈ ನಿಮಿತ್ತ ರಾಜ್ಯದ ಸುಮಾರು 1000 ಕ್ಕೂ ಅಧಿಕ ಪುರಾತನ ದೇವಾಲಯಗಳಿಗೆ ಭೇಟಿ ನೀಡಿದ್ದು ಇದನ್ನು ಕೇವಲ ತಮ್ಮ ಸ್ವಯಂ ಆಸಕ್ತಿಯ ಸಂಶೋಧನೆಗೆ ಮೀಸಲುಗೊಳಿಸದೆ, ಜನಸಾಮಾನ್ಯರಿಗೂ ತಲುಪಿಸುತ್ತಾ ಬಂದಿದ್ದಾರೆ. ಕರ್ನಾಟಕ ಇತಿಹಾಸ ಅಕಾಡೆಮಿಯ ಸಕ್ರಿಯ ಸದಸ್ಯರಾಗಿರುವ ಇವರು ವಿವಿಧ ಬಳಗಗಳ ಮೂಲಕ ಇತಿಹಾಸದ ಹೊಸ ಹೊಳಹುಗಳನ್ನು ನೀಡುವ ನಿಟ್ಟಿನಲ್ಲಿ ಕ್ರಿಯಾಶೀಲರಾಗಿದ್ದಾರೆ. ಈ ನಿಟ್ಟಿನಲ್ಲಿ ಇವರು ಸುಮಾರು 500ಕ್ಕೂ ಅಧಿಕ ಲೇಖನಗಳನ್ನು ಅಜ್ಞಾತ ದೇವಾಲಯಗಳ ಕುರಿತು ಬರೆದಿದ್ದು ಅವು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಬೆಳಕು ಕಂಡಿವೆ. ಇದಲ್ಲದೆ ವಿವಿಧ ಮಾಧ್ಯಮಗಳ ಮೂಲಕವೂ ದೇವಾಲಯಗಳ ಪರಿಚಯವನ್ನು ತಲುಪಿಸುತ್ತಾ ಬಂದಿದ್ದಾರೆ. ತಮ್ಮ ಬರಹಕ್ಕೆ ಅನುಗುಣವಾಗಿ ಛಾಯಾಗ್ರಹಣದಲ್ಲೂ ಪರಿಣಿತರಾಗಿರುವ ಇವರ 20,000ಕ್ಕೂ ಹೆಚ್ಚು ಚಿತ್ರಗಳು ಇವರ ಬರಹಗಳ ಮೌಲ್ಯವನ್ನು ಓದುಗರಿಗೆ ಆಪ್ತವಾಗಿಸಿವೆ.
ಶ್ರೀನಿವಾಸಮೂರ್ತಿ ಅವರಿಂದ ಶಿಲ್ಪ ಕಲಾ ದೇವಾಲಯಕ್ಕೆ ದಾರಿ ಹೆಸರಿನಲ್ಲಿ 250 ಅಂಕಣಗಳ ನಾಲ್ಕು ಪುಸ್ತಕ ಮತ್ತು ಶಿವಮೊಗ್ಗ ಜಿಲ್ಲೆ ಶಿಲ್ಪ ಕಲಾ ದೇವಾಲಯಕ್ಕೆ ದಾರಿ ಎಂಬ ಪುಸ್ತಕ ಬಂದಿದೆ. ಸಂಶೋಧನಾ ಬಳಗದ ಮೂಲಕ ಹಲವು ಪ್ರಬಂಧಗಳನ್ನು ಮಂಡಿಸಿದ್ದಾರೆ. ಇದಲ್ಲದೇ ವಿವಿಧ ಮಾದ್ಯಮಗಳ ಮೂಲಕ ದೇವಾಲಯಗಳನ್ನು ಪರಿಚಯಿಸುವ ಕೆಲಸದಲ್ಲಿ ತೊಡಗಿದ್ದಾರೆ. ಇವರು ಚಿಂತನ ಮಂಥನ ಮಾಲಿಕೆಯಲ್ಲಿ ಕರ್ನಾಟಕ ರಾಜ್ಯದ ದೇವಾಲಯಗಳ ವಾಸ್ತು ಶಿಲ್ಪ ಬೆಳವಣಿಗೆಯ ಬಗ್ಗೆ ಸರಣಿ ಉಪನ್ಯಾಸ ಮಾಡಿದ್ದರು. ಇವರ ಬಗ್ಗೆ ಅಕಾಶವಾಣಿಯಲ್ಲಿ ದೇವಾಲಯಗಳ ಅಂಕಣಗಳ ಬಗ್ಗೆ ವಿಶೇಷ ಸಂದರ್ಶನ ಮೂಡಿ ಬಂದಿತ್ತು.
ಶ್ರೀನಿವಾಸಮೂರ್ತಿ ಅವರನ್ನು 75ರ ಅಮೃತ ಸ್ವಾತಂತ್ರ್ಯ ಸಂಭ್ರಮದಲ್ಲಿ ಬನಶಂಕರಿ ವಿದ್ಯಾಸಂಸ್ಥೆ ವಿಶೇಷ ಅತಿಥಿಯಾಗಿ ಕರೆದು ಗೌರವಿಸಿತ್ತು. ಇವರ 'ಶಿಲ್ಪ ಕಲಾ ದೇವಾಲಯಕ್ಕೆ ದಾರಿ' ಮೊದಲ ಸಂಪುಟಕ್ಕೆ ಪ್ರತಿಷ್ಠಿತ ರಾಷ್ಟ್ರೀಯ ಕಳಿಂಗ ಭಾಷಾ ಸಮ್ಮಾನ್ ಕನ್ನಡ 2022 ( ಕೆ ಎಲ್ ಎಫ್ ) ಪ್ರಶಸ್ತಿ ಸಂದಿದೆ.
ಆತ್ಮೀಯರಾದ ಶ್ರೀನಿವಾಸಮೂರ್ತಿ, ಅವರ ಪತ್ನಿ ಸಂಧ್ಯಾ ಮತ್ತು ಮಗಳು ನಿಹಾರಿಕಾ ಕುಟುಂಬಕ್ಕೆ ಶುಭಹಾರೈಕೆಗಳು.
Happy birthday Sreenivas Murthy N S Sir
ಕಾಮೆಂಟ್‌ಗಳು