ಬೆಳಕವಾಡಿ
ಬೆಳಕವಾಡಿ ಶ್ರೀನಿವಾಸ ಅಯ್ಯಂಗಾರ್
ಮಹಾನ್ ಸಂಗೀತಕಾರರಾದ ಬೆಳಕವಾಡಿ ಶ್ರೀನಿವಾಸ ಅಯ್ಯಂಗಾರ್ ಎಂಬುದು ತಂದೆ ಮಗ ಇಬ್ಬರದೂ ಒಂದೇ ಹೆಸರು. ಹಿರಿಯ ಬೆಳಕವಾಡಿ ಶ್ರೀನಿವಾಸ ಅಯ್ಯಂಗಾರ್ ಅವರ ಕಾಲ 1888-1936.
ಗಾನ ಕಲಾ ಭೂಷಣರೆನಿಸಿದ್ದ ಶ್ರೀನಿವಾಸ ಅಯ್ಯಂಗಾರ್ಯರು ಮಂಡ್ಯ ಜಿಲ್ಲೆಗೆ ಸೇರಿದ ಬೆಳಕವಾಡಿಯಲ್ಲಿ 1910ರ ಮಾರ್ಚ್ 9ರಂದು ಜನಿಸಿದರು. ತಂದೆ ಶ್ರೀನಿವಾಸ ಅಯ್ಯಂಗಾರ್ಯರು. ತಾಯಿ ಲಕ್ಷ್ಮಮ್ಮ. ಮೂರು ವರ್ಷದವರಾಗಿದ್ದಾಗಲೇ ತಾಯಿಯ ಪ್ರೀತಿಯಿಂದ ವಂಚಿತರಾದರು. ಶಾಲೆಯ ಕಲಿಕೆಯ ಜೊತೆಗೆ ತಿಟ್ಟೆ ಕೃಷ್ಣ ಅಯ್ಯಂಗಾರ್ಯರಲ್ಲಿ ಸಂಗೀತ ಕಲಿತರು. ತಂದೆಯ ಜೊತೆಯಲ್ಲಿ ಸಹ ಗಾಯಕರಾಗಿಯೂ ಅನೇಕ ಸಂಗೀತ ಕಾರ್ಯಕ್ರಮಗಳನ್ನು ನೀಡಿದರು.
ಶ್ರೀನಿವಾಸ ಅಯ್ಯಂಗಾರ್ಯರು ಮದರಾಸು ವಿಶ್ವವಿದ್ಯಾಲಯದ ಸಂಗೀತದ ಡಿಪ್ಲೋಮಾ ಪಡೆದರು (೧೯೩೧-೩೨). ಅಲ್ಲಿನದು ಸಂಜೆ ತರಗತಿಗಳಾಗಿದ್ದು ಟೈಗರ್ ವರದಾಚಾರ್ಯರು ಪ್ರಾಂಶುಪಾಲರಾಗಿದ್ದರು. ಬೆಳಗಿನ ವೇಳೆ ಮುತ್ತಯ್ಯ ಭಾಗವತರು ಪ್ರಾಂಶುಪಾಲರಾಗಿದ್ದ ಮದರಾಸು ಮ್ಯೂಸಿಕ್ ಅಕಾಡಮಿಯಲ್ಲಿ ಪಾಠವಾಗುತ್ತಿತ್ತು. ಹೀಗೆ ಎರಡೂ ವೇಳೆ ಸಂಗೀತ ಕಲಿಕೆ ನಡೆಯುತ್ತಿತ್ತು. ಅನೇಕ ವಿದ್ವಾಂಸರ ಸಂಗೀತ ಕಚೇರಿ ಆಲಿಸುತ್ತಾ, ಗುರುಗಳೊಂದಿಗೆ ಚರ್ಚಿಸುತ್ತಾ, ಕಲಿಯತ್ತಾ ಬೆಳೆದರು.
ಶ್ರೀನಿವಾಸ ಅಯ್ಯಂಗಾರ್ಯರು ಮೈಸೂರಿಗೆ ಹಿಂದಿರುಗಿದ ನಂತರ ಪಾಶ್ಚಾತ್ಯ ಸಂಗೀತ ಕಲಿತರು. 1939ರಲ್ಲಿ ಲಂಡನ್ನಿನ ಟ್ರಿನಿಟಿ ಕಾಲೇಜಿನ ಸಂಗೀತದ ಇಂಟರ್ ಮೀಡಿಯೆಟ್ ಪರೀಕ್ಷೆಯಲ್ಲಿ ಮೊದಲ ಶ್ರೇಣಿ ಗಳಿಸಿ, ಬೆಂಗಳೂರಿನ ವಾಣಿವಿಲಾಸ ಇನ್‌ಸ್ಟಿಟ್ಯೂಟಿನಲ್ಲಿ ಸಂಗೀತದ ಅಧ್ಯಾಪಕರಾಗಿ ನೇಮಕಗೊಂಡರು. ಕೆಲಕಾಲ ಮೈಸೂರಿನ ಸರಕಾರಿ ಟ್ರೈನಿಂಗ್ ಕಾಲೇಜಿನಲ್ಲಿ ಸೇವೆ ಸಲ್ಲಿಸಿದರು. ಶ್ರೀನಿವಾಸ ಅಯ್ಯಂಗಾರ್ಯರು ಜಯಚಾಮರಾಜ ಒಡೆಯರಿಂದ ಆಸ್ಥಾನ ವಿದ್ವಾಂಸರಾಗಿ ನೇಮಕಗೊಂಡರು. ಕೆಲಕಾಲ ಕರ್ನಾಟಕ ಸರಕಾರದ ಪರೀಕ್ಷಾ ಮಂಡಲಿ, ಆಕಾಶವಾಣಿ ಆಡಿಶನ್ ಮಂಡಳಿಯ ತೀರ್ಪುಗಾರರ ಜವಾಬ್ದಾರಿ ನಿರ್ವಹಿಸಿದರು.
ಶ್ರೀನಿವಾಸ ಅಯ್ಯಂಗಾರ್ಯರು ಸಾಹಿತ್ಯ ರಚನೆಯಲ್ಲೂ ತೊಡಗಿ ಮಹಾ ವೈದ್ಯನಾಥ ಅಯ್ಯರ್, ಮುತ್ತಯ್ಯ ಭಾಗವತರ್, ಟೈಗರ್ ವರದಾಚಾರ್ ಮುಂತಾದವರ ಬಗ್ಗೆ ಜೀವನ ಚರಿತ್ರೆಗಳನ್ನು ಬರೆದರು.
ಬೆಳಕವಾಡಿ ಶ್ರೀನಿವಾಸ ಅಯ್ಯಂಗಾರ್ಯರಿಗೆ 1928ರಲ್ಲಿ ಮೈಸೂರಿನಲ್ಲಿ ನಡೆದ ಅಖಿಲ ಭಾರತ ಓರಿಯಂಟರ್ ಕಾನ್‌ಫರೆನ್ಸ್ ಕಚೇರಿಯಲ್ಲಿ ಪ್ರಶಸ್ತಿ, 1980ರಲ್ಲಿ ಕರ್ನಾಟಕ ಗಾನಕಲಾ ಪರಿಷತ್ ಸಂಗೀತ ಸಮ್ಮೇಳನದ ಅಧ್ಯಕ್ಷತೆ-ಗಾನಕಲಾ ಭೂಷಣ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಂಗೀತ ನೃತ್ಯ ಅಕಾಡಮಿಯಿಂದ ಕರ್ನಾಟಕ ಕಲಾ ತಿಲಕ ಬಿರುದು, ಬೆಂಗಳೂರಿನ ಗಾಯನ ಸಮಾಜ, ತ್ಯಾಗರಾಜ ಗಾನಸಭಾ, ನಂದಿನಿ ರಸಿಕ ಸಭಾ ಮುಂತಾದ ಸಂಸ್ಥೆಗಳಿಂದ ಸನ್ಮಾನಗಳು ಹೀಗೆ ಅನೇಕ ಗೌರವಗಳು ಸಂದಿದ್ದವು.
ಬೆಳಕವಾಡಿ ಶ್ರೀನಿವಾಸ ಅಯ್ಯಂಗಾರ್ಯರು 2002ರ ಫೆಬ್ರವರಿ 5ರಂದು ಈ ಲೋಕವನ್ನಗಲಿದರು.
On the birth anniversary of great musician Belakavadi Sreenivasa Iyengar
ಕಾಮೆಂಟ್‌ಗಳು