ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಭಾರತಕಥಾಮಂಜರಿ87


 ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರಿ 
ಭೀಷ್ಮಪರ್ವ - ಆರನೆಯ ಸಂಧಿ


ಸೂಚನೆ : ರಾಯದನುಜಘರಟ್ಟನಂಭೋ ಜಾಯತಾಕ್ಷನ ಖಾತಿಯನು ಗಾಂ
ಗೇಯ ಭಯಭಕ್ತಿಯಲಿ ಗೆಲಿದನು ವರ ಸುದರ್ಶನವ

———

ಕೇಳು ಜನಮೇಜಯ ಧರಿತ್ರೀ
ಪಾಲ ದಿನಕರನುದಯದಲಿ ಮು
ಗಾಳೆಗದ ಗಾಢಾಭಿಲಾಷರು ಬಂದು ಕಣನೊಳಗೆ
ಮೇಲುನೆಲನರಿದಖಿಲ ಕುರು ಭೂ
ಪಾಲನವರೊಡ್ಡಿದರು ಲಕ್ಷ್ಮೀ
ಲೋಲನಾಜ್ಞೆಯಲಿವರು ಬಲಿದರು ತಮ್ಮ ಮೋಹರವ ೧

ದಳವೆರಡು ದಳಪತಿಗಳಿಬ್ಬರ
ತಳಿತ ಸನ್ನೆಯ ಚೌರಿಯಲಿ ಬಿಡ
ಹಳಚಿದುದು ಹೊಯ್ದಾಡಿ ಬಿದ್ದುದು ಪಾಯದಳವಂದು
ತುಳಿದು ಹೊಕ್ಕವು ದಂತಿಘಟೆ ದಳ ವುಳಿಸಿ ಹರಿದವು ತೇರುಗಳು ತೋಳ ಬಳಲೆ ಹೊಯ್ದಾಡಿದರು ರಾವುತರಸಮ ಸಮರದಲಿ  ೨

ಏನ ಹೇಳುವೆನುಭಯ ಬಲದಲಿ
ಲೂನ ನಿವಹದ ಹಯವನಡೆಗೆಡೆ
ವಾನೆಗಳ ಹೊದರೆದ್ದು ಮುಗಿದ ರಥದ ವಾಜಿಗಳ
ಮಾನವರ ಕಡಿಖಂಡ ದೊಂಡೆಯ ನೇನನೆಂಬೆನು ಹರಿವ ರುಧಿರಾಂ
ಭೋನಿಧಿಯ ಹರಹುಗಳ ಪೂರದ ವಿಗಡ ವಿಗ್ರಹವ ೩

ಅಳಿದುದರಡರ ಚೂಣಿ ದೊರೆಗಳ
ಬಲಕೆ ಹೇಳಿಕೆಯಾಯ್ತು ಘನ ಸಂ
ಕುಲ ಸುವಿಗ್ರಹ ಸಾಧನರು ಕೈಮಾಡಿ ಕಡಿವಡೆಯ
ದಳವುಳಿಸಿದನು ಭೀಮ ಕೌರವ ದಳವ ತರುಬಿದನಡ್ಡಬಿದ್ದರಿ
ಬಲದ ಸುಭಟರಿಗಿತ್ತನಮರಾವತಿಯ ಸಂಪದವ ೪

ಮುರಿದು ಬಹ ನಿಜಸೇನೆಗಭಯದ
ಸೆರಗ ಬೀಸುತ ಭೀಮಸೇನನ ತರುಬಿ ನಿಂದನು ಭೀಷ್ಮ ಬಿಗಿದನು ಸರಳಲಂಬರವ ತೆರಹುಗೊಡವ೦ಬುಗಳು ಭೀಮಗೆ ಬೆರಗು ಬಲಿದುದು ಹೊಕ್ಕು ಸಾತ್ಯಕಿ
ಯಿರಿದು ಭೀಷ್ಮನ ಬಲದಲೂಡಿದನಖಿಳ ಖಗಕುಲವ ೫

ಬಳಿಕ ಸಾತ್ಯಕಿ ಭೀಷ್ಮರಿಗೆ ಬಲು 
ಗಲಹ ಬಲಿದುದು ವಿಲಯ ರುದ್ರನ ನಿಲವನೊಚ್ಚತಗೊಂಡು ಪರಬಲದೊಳಗೆ ಗಾಂಗೇಯ ತಳಪಟವ ಮಾಡಿದನು ಭಾಷೆಯ ಬಳಿಗೆ ಕೊಂದನು ಹತ್ತು ಸಾವಿರ
ನೆಲನ ವಲ್ಲಭರನು ಯುಧಿಷ್ಠಿರರಾಯ ಸೇನೆಯಲಿ  ೬

ಬೀಳಲವನೀಪತಿಗಳತಿ ಹೀ
ಹಾಳಿಯಲಿ ಸಾತ್ಯಕಿ ಮುಳಿದು ಬಲು
ಗೋಲಿನಲಿ ಗಂಗಾಕುಮಾರನ ಸಾರಥಿಯನೆಸಲು
ಮೇಲುಗಾಳೆಗವವರ ಸೇರಿತು
ಸೋಲು ಕುರುಪತಿಗಾಯ್ತು ಕಿರಣದ
ಗೂಳಯವು ಪಡುವಣ ಸಮುದ್ರಕೆ ತೆಗೆಯಲಿನನಿಳಿದ ೭

ದಿನವೆರಡು ಹಿಂದಾದುದಿದು ಮೂ
ರನೆಯ ದಿವಸದ ಬಹಳ ವಿಗ್ರಹ
ದನುವನಾಲಿಸು ರಾಯ ಜನಮೇಜಯ ಮಹೀಪಾಲ
ದಿನಪನುದಯಾಚಲದ ಚಾವಡಿ
ವನೆಗೆ ಬರೆ ಬಲವೆರಡು ಗಳ ಗ
ರ್ಜನದಿ ಬಂದೊಡ್ಡಿದವು ಕಳನೊಳು ಖತಿಯ ಪಡಪಿನಲಿ   ೮

ಸೂಳು ಮಿಗಲಳ್ಳಿರಿವ ನಿಸ್ಸಾ
ಕೋಳಿಗಳ ತಂಬಟದ ಕೊಂಬಿನ
ಗಾಳುಗಜರಿನ ಕಹಳೆಗಳ ಕಳಕಳದ ಬೊಗ್ಗುಗಳ
ಮೇಳವಣೆ ಭುಗಿಲಿಡಲು ಬೊಬ್ಬೆಯ ಘೋಳ ಘೋಷದ ರಭಸ ದೆಸೆಗಳ
ಸೀಳೆ ಸಿಡಿಲೆದ್ದೆರಡು ಬಲ ಹೊಯ್ದಾಡಿತೊಡಗಲಸಿ  ೯

ಜೋಳವಾಳಿಯೊಳುಂಡು ಮಾಡಿದ
ಸಾಲವನು ತಲೆಗಳಲಿ ತಿದ್ದಿದ ರಾಳ ತರುಬುವ ಪತಿಗೆ ಹರುಷವ ಮಾಡಿ ತಮತಮಗೆ
ಕಾಲನೂರೈದದು ಸುರ
ಜಾಲ ನೆರೆಯದು ಗಗನ ಸುಭಟರ
ಸಾಲೊಳಡಗಿತು ಚಿತ್ರವೆನೆ ಹೊಯ್ದಾಡಿತುಭಯಬಲ ೧೦

ಬರಲಿ ಸಮರಕೆ ಸಾತ್ಯಕಿಯ ನೀ ಕರೆಯೆನುತ ಬಿಲುದುಡುಕಿ ರಥದಲಿ ಸರಿಸ ತಾಳಧ್ವಜವನೆಸಿ ಸಮರಥರ ನೆರಹಿ 
ಸರಳ ತೂಗುತ ಮಾರುಬಲವನು ತರುಬಿ ನಿಂದನು ಭೀಷ್ಮನಗ್ಗದ 
ಬಿರುದ ಸಂಭಾವಿಸುತ ಪಾಠಕಕೋಟಿ ಗಡಬಡಿಸೆ  ೧೧

ಕಾಲಯಮನೋ ಭೀಷ್ಮನೋ ಪಡ ಮೇಳವೇ ಮಝ ಭಾಪು ಮಾರಿಯ ತಾಳಿಗೆಗೆ ತುತ್ತಾದವೇ ತಡವೇಕೆ ತೆಗೆಯೆನುತ 
ಆಳು ಮುರಿದುದು ಮೋಹರದ ಭೂ ಪಾಲಕರು ಹುರಿಯೊಡೆದು ದೊರೆಗಳ ಮೇಲೆ ಬಿಸುಟರು ವೀರಗಂಗಾತನುಜನುಪಟಳವ ೧೨

ಸೋಲ ಮಿಗಲೊಳಸರಿವ ಬಿರುದರ ಬೀಳಗೆಡಹಿಸಿ ಕಪಿಯ ಹಳವಿಗೆ
ಗೋಲನೆತ್ತಿಸಿ ಕೆಲಬಲದ ಮನ್ನೆಯರ ಕೈವೀಸಿ 
ಆಲಿಯಲಿ ಕಿಡಿ ಸೂಸೆ ಮೀಸೆಯ
ಮೇಲುದಿರುಹುತಲೌಡುಗಚ್ಚಿ ಕ ರಾಳರೋಷ ಮಹೋಗ್ರವೀರನು ಪಾರ್ಥನಿದಿರಾದ ೧೩

ತೊಲತೊಲಗು ಕಲಿ ಭೀಷ್ಮ ವೃದ್ಧರಿ
ಗೆಳಭಟರ ಕೂಡಾವುದಂತರ
ವಳಿಬಲರ ಹೆದರಿಸಿದ ಹೆಕ್ಕಳವೇಕೆ ಸಾರೆನುತ
ತುಳುಕಿದನು ಕೆಂಗೋಲ ಜಲಧಿಯ
ನೆಲನದಾವುದು ದಿಕ್ಕದಾವುದು
ಸಲೆ ನಭೋಮಂಡಲವದಾವುದೆನಲ್ಕೆ ಕಲಿ ಪಾರ್ಥ ೧೪

ಪೂತುರೇ ಕಲಿ ಪಾರ್ಥ ವಿಶಿಖ
ವ್ರಾತಮಯವಾಯ್ತವನಿ ಕಾರ್ಮುಕ
ಭೂತನಾತನ ಗರುಡಿಯಲ್ಲಾ ಕಲಿತ ಮನೆ ನಿನಗೆ
ಆತುಕೊಳ್ಳಾದಡೆಯೆನುತ ಕಪಿ
ಕೇತನನ ಶರಹತಿಯನಾಂತಾ
ಮಾತು ಹಿಂಚಿತು ಕಡಿದು ಬಿಸುಟನು ಕೃಷ್ಣಬೆರಗಾಗೆ  ೧೫

ಆ ಸಮಯದೊಳು ರಣದೊಳೌಕಿದ
ರಾ ಸುಯೋಧನ ಶಲ್ಯ ಸಲೆ ದು
ಶ್ಶಾಸನನು ಕೃಪ ಶಕುನಿ ಗುರುಸುತರಾದಿ ಯಾದವರು
ಸೂಸಿದರು ಸರಳಗಳನರ್ಜುನ
ಘಾಸಿಯಾದನು ವಿಲಯ ಮೇಘದ
ಮೀಸಲಿನ ಮಳೆಗಾಲವೆನೆ ಮೋಹಿದುದು ಶರಜಾಲ ೧೬

ಕುದುರೆ ಕಂಗೆಟ್ಟವು ಮುರಾರಿಯ 
ಹೃದಯ ಸಂಚಲವಾಯ್ತು ಗಾಲಿಗ
ಳದುರಿದುವು ಗರುವಾಯಿಗೆಟ್ಟನು ಮೇಲೆ ಹನುಮಂತ
ಹೆದರಿದರು ನಾಯಕರು ಪಾಂಡವ
ರದಟು ಮುರಿದುದು ಸುರರು ಚಿಂತಿಸಿ
ಕುದಿದರರ್ಜುನಪಕ್ಷಪಾತ ವ್ಯರ್ಥವಾಯ್ತೆಂದು  ೧೭

ತೆರಳುವನೆ ಬಿಲುಗಾರರಿಗೆ ವರ
ಗುರುವಲಾ ಕಲಿ ಪಾರ್ತನನಿಬರ
ಸರಳ ಕಡಿದನು ಕೃಪನನೆಚ್ಚನು ಗುರುಸುತನ ರಥವ
ಉರುಳೆಗಡಿದನು ಶಲ್ಯನನು ಹೇ
ವರಿಸಲೆಚ್ಚನು ಕೌರವರ ಹೇ
ರುರದಲಂಬನು ಹೂಳಿದನು ಸೀಳಿದನು ಸಮರಥರ ೧೮

ಏರುವಡೆದನು ಶಲ್ಯ ರಕುತವ
ಕಾರಿದನು ದುಶ್ಶಾಸನನು ಕೈ
ಮೀರಿ ಕೈಕೊಂಡೆಚ್ಚು ನೊಂದನು ಮತ್ತೆ ಗುರುಸೂನು
ಹೇರಿದರು ಹಿಳುಕುಗಳ ಮೈಯಲಿ
ಜೋರು ಮಸಗಲು ಭೀಷ್ಮ ಕಡುಗಾ
ಹೇರಿದನು ರೋಷಾಗ್ನಿ ವಿಕಟಜ್ವಾಲೆಮುಖನಾದ ೧೯

ಮೊಗದ ಹೊಗರವಗಡಿಸೆ ಸುಯಿಲಲಿ
ಹೊಗೆಯ ಹೊದರಂಕುರಿಸೆ ಬಿಡುಗ
ಣ್ಣುಗಳೊಳೊಕ್ಕುದು ಕೆಂಪು ಸೊಂಪಡಗಿತು ಮುಖಸ್ನೇಹ
ತೆಗೆವೆನರ್ಜುನನಸುವನೆನುತಾ
ಳುಗಳ ದೇವನು ಭೀಷ್ಮನಡಿಗಡ
ಗೊಗುಮಿಗೆಯ ಕೋಪದಲಿ ತೋದನು ಸರಳಿನಲಿ ನರನ ೨೦

ನೊಂದು ಸೈರಿಸಿ ಮತ್ತೆ ಸರಳಿನ
ಸಂದಣಿಯ ಸೈಗರೆದನರ್ಜುನ
ನಿಂದುಧರ ಮಝ ಭಾಪುರೆನೆ ಪಸರಿಸಿದವಂಬುಗಳು
ಮುಂದೆ ನಿಲಲರಿಯದೆ ವಿತಾಳಿಸಿ
ಮಂದಗತಿಯೊಳು ಕೆಲಸಿಡಿದು ಹರಿ
ನಂದನನ ಬಿಡದೆಸುತ ಬಂದನು ಭೀಷ್ಮ ಮುಳಿಸಿನಲಿ  ೨೧

ಎತ್ತಲೊಲೆದನದೆತ್ತ ಸರಿದನ
ದೆತ್ತ ಜಾರಿದನೆತ್ತ ತಿರುಗಿದ
ನೆತ್ತ ಹಿಂಗಿದನೆತ್ತಲೌಕಿದನೆತ್ತಲುರುಬಿದನು
ಅತ್ತಲತ್ತಲು ರಥಹಯವ ಬಿಡ
ದೊತ್ತಿ ಬೀದಿಗೆ ನೂಕಿ ಪಾರ್ಥನ
ಮುತ್ತಯನ ಸಂಮ್ಮುಖಕೆ ಬಿಡದೌಕಿದನು ಮುರವೈರಿ  ೨೨

ಕೆರಳಿದನು ಕಲಿ ಭೀಷ್ಮನರ್ಜುನ
ನುರವಣೆಯ ಗೆಲುವರೆ ಮುರಾರಿಯ
ಭರವಸವ ತಗ್ಗಿಸಿದಡಲ್ಲದೆ ಕಾದಲರಿದೆನುತ
ಹರಿಯ ಸಿರಿಯೊಡಲಿನಲಿ ಸರಳಿನ
ಸರಿವಳೆಯ ಸೈಗರೆಯೆ ಜೋಡಿನ
ಸರಪಳಿಯಲಕ್ಕಾಡಿದವು ಕಲಿ ಭೀಷ್ಮನಂಬುಗಳು  ೨೩

ಮತ್ತೆ ರಥವನು ಹರಿಸಿ ಭೀಷ್ಮನ
ಹತ್ತೆ ಬರೆ ಕಟ್ಟಳವಿಯಲಿ ಹಾ
ಮುತ್ತಯನು ಸಿಲುಕಿದನು ಶಿವಶಿವಯೆನುತ ಬಲ ಬೆದರೆ
ಹತ್ತು ಶರದಲಿ ಕೃಷ್ಣರಾಯನ
ಮತ್ತೆ ಮುಸುಕಿದ ಬಹಳ ಭಾರ್ಗವ
ದತ್ತ ಬಾಣವ ತೊಡಚಿ ದೇವನ ನೊಸಲ ಕೀಲಿಸಿದ ೨೪

ಕೆಂಗರಿಯ ಮರಿದುಂಬಿ ತಾವರೆ
ಗಂಗವಿಸುವವೊಲಸುರರಿಪುವಿನ
ಮಂಗಳಾನನಕಮಲದಲಿ ಶರವಾಳೆ ಗರಿಗಡಿಯೆ
ತುಂಗವಿಕ್ರಮನಂಬ ಕಿತ್ತು ತ
ದಂಗರಕ್ತವಿಷೇಕರೌದ್ರಾ
ಲಿಂಗಿತನು ಬಲುಖತಿಯ ಹಿಡಿದನು ಭೀಷತಮನುಪಟಳಕೆ  ೨೫

ಕೆಂಪ ಕಾರಿದವಾಲಿಗಳು ಮೈ
ಕಂಪಿಸಿದುದಡಿಗಡಿಗೆ ರೋಷದ
ಬಿಂಪಿನೊಳು ತಗ್ಗಿದನು ಗಂಟಿಕ್ಕಿದನು ಹುಬ್ಬುಗಳ
ಸೊಂಪುಗೆಟ್ಟುದು ಸಿರಿವದನಮನ
ದಿಂಪು ಬೀತುದು ಭಕ್ತ ಮೋಹದ
ಲಂಪು ಮಸುಳಿತು ಬಿಸುಟು ಕಳೆದನು ಹಯದ ವಾಘೆಗಳ ೨೬

ಕೆಂಡವಾಗಲಿ ಲೋಕ ದಿವಿಜರ
ಹೆಂಡಿರೋಲೆಯು ಕಳೆದು ಹೋಗಲಿ
ದಿಂಡುಗೆಡೆಯಲಿ ಮೇರು ಮೇದಿನಿ ನಿಲಲಿ ವಿತಳದಲಿ
ಗಂಡುಗೆಡಿಸಿದರಿಲ್ಲ ದಾನವ
ದಿಂಡೆಯರು ಹಲರೆಮ್ಮೊಡನೆ ಮಾ
ರ್ಕೊಂಡವರು ಮಾಮಾಪ್ರತಿಜ್ಞೆಯ ತೊಡಕು ಬೇಡೆಂದ ೨೭

ಸಕಲ ಜಗದಳಿವಿನಲಿ ರುದ್ರಾ
ತ್ಮಕನು ವಿಷ್ಣುವೆ ಎಂಬ ನುಡಿ ಸು
ವ್ಯಕುತವಾಗಲು ತೋರಿದನು ಘನರೋಷತಾಮಸವ
ಚಕಿತವದನದ ಕೆಂಪಿನಮುಜಾಂ
ಬಕಯುಗಳನೊಲೆದೊಲೆದು ರೋಷ
ಪ್ರಕಟಪಾವಕ ವಿಸ್ಫುಲಿಂಗಿತನಾದನಡಿಗಡಿಗೆ  ೨೮

ಎಲೆಲಿದೆತ್ತಣ ಧರಣಿಯೆತ್ತಣ
ಕುಲಗಿರಿಗಳೆತ್ತಣ ದಿಶಾಗಜ
ಕುಲವಿದೆತ್ತಣ ಸುರರಿದೆತ್ತಣ ಹರ ಚತುರ್ಮುಖರು
ಸಲಹುವೈಯನು ಮುಳಿದು ಲೋಕದ
ಕೊಲೆಗೆಲಸಕಂಗೈಸಿದನೆ ಹಾ
ಪ್ರಳಯವಾದುದಕಾಲದಲಿಯೆಂದಮರೃಎದೆಯಾರೆ  ೨೯

ನಳಿನಪತ್ರೋದಕದವೊಲು ಮಾ
ರೊಲೆದುದಬುಜಭವಾಂಡವಂಬುಧಿ
ಯಿಳಿದು ಗುಲ್ಫಧ್ವಯಸವಾದುದು ಕಮಠನೆದೆಯೊಡೆಯೆ
ನೆಲನನಿದ ಹಿಂದಿಕ್ಕಿಕೊಂಬ
ಗ್ಗಳೆಯರಾರೋ ಶಿವಶಿವಾ ಜಗ
ದಳಿವು ಜೋಡಿಸಿತೆನುತ ನಡುಗಿದನಬುಜಭವನಂದು  ೩೦

ಮುರಮಥನ ಕೆಲ್ಲೈಸಿ ನೋಡಿದ
ನುರುಭಯಂಕರ ಚಕ್ರವನು ದು
ರ್ಧರುಷಧಾರಾ ಲೂಯಮಾನ ನಿಶಾತಚಕ್ರವನು
ತರಳ ತರಣೀಚಕ್ರವನು ಸಂ
ಗರ ವಿನಿರ್ಜಿತ ಚಕ್ರವನು ಭಯ
ಭರ ವಿವರ್ಜಿತ ಚಕ್ರವನು ಕಡುಗೋಪ ಕುಡಿಯಿಡಲು  ೩೧

ನಿಶಿತ ಧಾರೆಯ ಹೊಳಹು ಸೂರ್ಯನ
ಮುಸುಕಿದುದು ಪರಿಲೂನದೈತ್ಯ
ಪ್ರಸರಗಳನಾಳೀವಿನಿಸ್ಸೃತ ರುಧಿರಬಂಧಗಳ
ಮಿಸುಪ ಮೊಳೆಗಳ ಮುರಿವುಗಳ ನೆಣ
ವಸೆಯ ತೊರಳೆಯ ತೊಂಗಲಿನೊಳಂ
ದೆಸೆವ ಚಕ್ರವ ನೋಡಿದನು ದೈತ್ಯಾರಿ ಕೋಪದಲಿ  ೩೨

ಹರಿದುಹಬ್ಬುವ ಬಳ್ಳಿವೆಳಗಿನ
ಮುರಿವು ಮಂಡಳಿಸಿದುದು ಶತ ಸಾ
ವಿರ ದಿವಾಕರ ಬಿಂಬವೆಸೆದುದು ಝಳದ ಹೊಯಿಲಿನಲಿ
ಸುರ ನರೀರಗ ಜಗದ ಕಂಗಳ
ತೆರಹು ಕೆತ್ತವು ಬತ್ತಿದುದಧಿಯೊ
ಳುರಿಮಣಲು ಮಾಣಿಕವ ಹುರಿದುದು ಚಕ್ರದೂಷ್ಮೆಯಲಿ  ೩೩

ನರನ ತೇರಿನ ಕುದುರೆಗಳು ಡಾ
ವರಿಸಿದುವು ಡಗೆ ಹೊಯ್ದು ಮಿಗೆ ದ
ಳ್ಳುರಿಯ ಸಸಿಯಂತಾದನರ್ಜುನದೇವ ನಿಮಿಷದಲಿ
ಕರಗಿ ಕೊರಗಿತು ಲೋಕ ಕೌರವ
ಧರಣಿಪಾಲರಿದೆತ್ತಣುರಿಯೋ
ಹರನ ಕಣ್ಗಿಚ್ಚಲ್ಲಲೆ ಹಾಯೆನುತ ಹಲುಬಿದರು  ೩೪

ತುಡುಕಿದನು ಚಕ್ರವನು ರಥದಿಂ
ಪೊಡವಿಯೊಳು ಧುಮ್ಮಿಕ್ಕಿದನು ಹ
ತ್ತಡವ ಹಾಯಿಕಿ ಹರಿದನೊಡಬಿದ್ದವರನೊಡೆ ತುಳಿದು
ಸುಡುವೆನಹಿತಾನ್ವಯವ ಭೀಷ್ಮನ
ಕಡಿದು ಭೂತಗಣಕ್ಕೆ ಬೋನವ
ಬಡಿಸುವೆನು ನೋಡಿಲ್ಲಿ ಮೇಳವೆಯೆನುತ ಸೈವರಿದ ೩೫

ಶಿವಶಿವೆಂದುದು ನಿಖಿಳಜಗ ಕೌ
ರವರು ಕಂಪಿಸಿ ಥಟ್ಟುಗೆಡೆದರು
ಭುವನದಲಿ ಬಾರಿಸಿತು ಜಯಜಯ ಜಯಮಹಾದ್ಯಾನ
ತವತವಗೆ ತಳ್ಳಂಕದಲಿ ಪಾಂ
ಡವರು ನಡುಗಿತು ಪಾರ್ಥ ಬಲು ಗರ
ವವಚಿದಂತಿರೆ ಮೂಕನಾದನು ಬೆರಳ ಮೂಗಿನಲಿ  ೩೬

ಹರಿ ಮುಕುಂದ ಮುಕುಂದ ಲಕ್ಷ್ಮೀ
ವರ ನೃಕೇಸರಿಯೆನುತ ಚಾಪವ
ಶರವನವನಿಗೆ ಬಿಸುಟು ಮೈಯಿಕ್ಕಿದನು ಕಲಿ ಭೀಷ್ಮ
ಕರಯುಗವ ಮುಗಿದೆದ್ದು ಮುರಹರ
ಸರಸಿಜಾಂಬಕ ರಾಮ ರಕ್ಷಿಸು
ತರಳನಲಿ ಗುಣದೋಷದರಕೆಯೆ ದೇವ ಹೇಳೆಂದ ೩೭

ದೇವ ನಿಮ್ಮಯ ಖಾತಿ ಪರಿಯಂ
ತಾವು ಲಕ್ಷ್ಯವೆ ಜೀಯ ನೊರಜಿನ
ದೇವಗಿರಿಯಂತರವೆ ಸಂಭಾವನೆಯೆ ನನ್ನೊಡನೆ
ದೇವ ಮುನಿಗಳ ನಗೆಯ ನೋಡದಿ
ದಾವುದುಚಿತವ ಮಾಡಿದಿರಿ ಮಹಿ
ಮಾವಲಂಬವ ಮರೆದುದಕೆ ನಗೆ ಬಂದುದೆನಗೆಂದ ೩೮

ಅಲಸಿಕೆಯೊಳೈನೂರು ಸಾವಿರ
ನಳಿಭವರಡೆಗೆಡೆವರೆಂಬ
ಗ್ಗಳಿಕೆಯೆತ್ತಲು ಹುಲುಮನುಜ ನಾನೆತ್ತಲಿದಿರಾಗಿ
ಮುಳಿದು ಹರಿತಹುದೆತ್ತಲಿದು ನಿ
ನ್ನಳತೆಗೈದುವುದಲ್ಲ ಲಜ್ಜೆಗೆ
ನೆಲೆಯ ಮಾಡಿದೆ ಹೂಡಿದೈ ದುರಿಯಶವನೆನಗೆಂದ ೩೯

ರೋಮ ರೋಮದೊಳಖಿಲ ಭುವನ
ಸ್ತೋಮ ನಲಿದಾಡುವುದು ಗಡ ನಿ
ಸ್ಸೀಮತನ ಗಡ ನಾವು ವೈರಿಗಳೆಂದು ಕೋಪಿಸುವ
ಈ ಮರುಳುತನವೆತ್ತಲೀ ರಣ
ತಾಮಸಿಕೆ ತಾನೆತ್ತಣದು ರಘು
ರಾಮ ರಕ್ಷಿಸು ಬಯಲಿನಾಡಂಬರವಿದೇನೆಂದ ೪೦

ನೀನು ಖತಿಯನು ಹಿಡಿಯೆ ನಿನ್ನ ಸ
ಘಾನತನವನು ಬಲ್ಲೆ ಯೋಗಿಗ
ಳೆನನೆಂಬರು ತಮ್ಮೊಳಗೆ ಕೈಹೊಯ್ದು ಮಿಗೆ ನಗುತ
ಮಾನವರು ಕಡುಮೂರ್ಖರೆಂದೇ
ಮಾನಗರ್ವವ ತಳೆದೆ ಸಾಕಿ
ನ್ನೇನ ಹೇಳುವೆ ನಿನ್ನ ಠಕ್ಕನು ಬಲ್ಲೆ ಹೋಗೆಂದ ೪೧

ಶತ ಪಿತಾಮಹರಡಗರೇ ನೀ
ಮತಿ ಮುರಿಯೆ ಮೇಣ್ ಭ್ರೂವಿಲಾಸ
ಸ್ಥಿತಿಯೊಳೇನುತ್ಪತ್ತಿಯಾಗದೆ ಬ್ರಹ್ಮಕೋಟಿಗಳು
ಅತಿಶಯದ ಮಹಿಮಾಸ್ಪದನು ನೀ
ನತಿ ಗಹನನೆಂಬಗ್ಗಳಿಕೆಗಿದು
ಕೃತಕವಲ್ಲಾ ದೇವ ಹೇಳೆನ್ನಾಣೆ ಹೇಳೆಂದ ೪೨

ದೇವ ನೀ ದಿಟ ಕೊಲುವಡೆಯು ನಾ
ಸಾವೆನೇ ತಾನಾವನೆಂಬುದ
ದೇವರರಿಯಿರಲೈ ವೃಥಾ ಸಂಭಿನ್ನ ರೋಷದಲಿ
ದೇವನಾಮದ ಜೋಡು ನಮ್ಮನು
ಕಾವುದೈ ನೀ ಮುನಿದಡೆಯು ನಿಮ
ಗಾವು ಹೆದರೆವು ನಾಮಧಾರಿಗಳತುಳ ಬಲರೆಂದ ೪೩

ಭಂಗವಲ್ಲಿದು ನಿನ್ನ ಘನತೆಗೆ
ಡಿಂಗರಿಗರೇ ಮಿಗಿಲು ನಿನಗೆಯು
ಡಿಂಗರಿಗರೇ ಬಲ್ಲಿದರು ದಾಕ್ಷಿಣ್ಯವೇನಿದಕೆ
ಮಂಗಳಾತ್ಮಕ ಕೇಳು ನಿನ್ನಯ
ಹಂಗನೊಲ್ಲೆನು ಮುಕುತಿ ಪಥದೊಳ
ಭಂಗಪೆಂಡೆಯದಾಳಲೈ ನಿಮ್ಮಡಿಯ ಸಿರಿನಾಮ ೪೪

ಕಳುಹಿ ಕಳೆವುದು ಖಾತಿಯನು ನೀ
ನುಳುಹಿಕೊಂಬುದು ತೇಜವನು ದಿಟ
ಕೊಲುವ ಮನವೇ ಬಿಸುಟು ಚಕ್ರವನೆನ್ನ ಕಾಯದಲಿ
ಅಳುಕಿ ಕೂದಲು ಹರಿದುದಾದರೆ 
ಬಳಿಕ ನಾ ಡಿಂಗರಿಗನಲ್ಲೀ
ಕಳಕಳಕೆ ನಾನಂಜುವವನೇ ದೇವ ಮರಳೆಂದ ೪೫

ನಚ್ಚಿನಾಳಿನ ಬಿನ್ನಹಕೆ ಹರಿ
ಮೆಚ್ಚಿ ಮನದಲಿ ನಾಚಿ ಚಕ್ರವ
ಮುಚ್ಚಿದನು ಮುರಿದನು ಕಿರೀಟಿಯ ರಥದ ಹೊರೆಗಾಗಿ
ಬೆಚ್ಚಿ ಬೆದರುವ ಸೇನೆಗಭಯವ
ಹಚ್ಚಿಕೊಟ್ಟನು ವೀರಭೀಷ್ಮನ
ನಿಚ್ಚಟದ ಭಕ್ತಿಯನು ನೆನೆನೆನೆದೊಲೆದ ಹರಿ ಶಿರವ ೪೬

ಹೋದುದೊಂದಪಮೃತ್ಯು ಲೋಕಕೆ
ತೀದುದಿಲ್ಲಾಯುಷ್ಯ ಮಹದಪ
ವಾದ ದೇವಂಗಾಗಿ ತಪ್ಪಿತು ಮುಚ್ಚುಮರೆಯೇಕೆ
ಕಾದುಕೊಂಡನು ಭೀಷ್ಮನೀ ಕಮ
ಲೋದರನ ಪುಣ್ಯವೆಂದನು ಕಮಲಭವ ನಗುತ ೪೭

ನಡುಗುವರ್ಜುನದೇವನನು ತೆಗೆ
ದಡಿಗಡಿಗೆ ತಕ್ಕೈಸಿ ಭೀತಿಯ
ಬಿಡಿಸಿ ವಾಘೆಯ ಕೊಂಡು ತುರಗವನಡೆಬಲಕೆ ತಿರುಹಿ
ನಡಸಿದನು ಕಾಳೆಗಕೆ ಬಳಿಕವ
ಗಡ ಮುರಾಂತಕ ಮರಳಿ ಚಕ್ರವ
ತುಡುಕದಿರನೆಂದಸ್ತಗಿರಿಯನು ಸೂರ್ಯ ಮರೆಗೊಂಡ ೪೮

ಸಂಕ್ಷಿಪ್ತ ಭಾವ

ಭೀಷ್ಮ ಕೃಷ್ಣನ ಕೈಯಲ್ಲಿ ಸುದರ್ಶನ ಚಕ್ರವನ್ನು ಹಿಡಿಸಿ ತನ್ನ ಪ್ರತಿಜ್ಞೆ ಪೂರೈಸಿಕೊಂಡದ್ದು.

ಮತ್ತೆ ಕಾಳಗ ಮುಂದುವರೆಯಿತು. ಎರಡೂ ಪಕ್ಷಗಳಲ್ಲಿ ಮುರಿದುಬಿದ್ದ ರಥಗಳು, ಸತ್ತ ಕುದುರೆಗಳು, ರಾವುತರು, ಆನೆಗಳು ಏನೆಂದು ಹೇಳಲಿ? ಎಣಿಕೆಗೆ ಸಿಗದು ಎಂದು ಸಂಜಯನು ಹೇಳಿದನು.

ಸಾತ್ಯಕಿಗೂ ಭೀಷ್ಮನಿಗೂ ಯುದ್ಧ ಆರಂಭವಾಯಿತು. ಇಬ್ಬರೂ ಪರಾಕ್ರಮಿಗಳೇ. ಬಹಳ ಹೊತ್ತು ಕಾಳಗ ಮುಂದುವರೆಯಿತು. ಆ ದಿನ ಮುಗಿಯಿತು. ಮೂರನೆಯ ದಿನ ಮತ್ತೆ ಭೀಷ್ಮನು ವಿಜೃಂಬಿಸಿದ. ತನ್ನ ಮಾತಿನಂತೆ ಹತ್ತು ಸಾವಿರ ರಾಜರುಗಳನ್ನು ಸ್ವರ್ಗಕ್ಕೆ ಕಳಿಸಿದ. ಸಾತ್ಯಕಿಯನ್ನು ಹುಡುಕಿದ. ಜೋಳವಾಳಿ ಎಂದರೆ ಅನ್ನದ ಋಣವನ್ನು ತೀರಿಸಲು ಯುದ್ಧ ಮಾಡುತ್ತಿದ್ದಾನೆ ಭೀಷ್ಮ. ಕಾಲಯಮನಂತೆ ಬಂದ ಭೀಷ್ಮನ ಉಪಟಳವನ್ನು ಪಾಂಡವ ಸೇನೆ ತಡೆಯದಾಯಿತು.

ಆಗ ಪಾರ್ಥನು ಭೀಷ್ಮರನ್ನು ಎದುರಿಸಿದ. ಅರ್ಜುನನನ್ನು  ಹಿಮ್ಮೆಟ್ಟಿಸಲು ಸುಯೋಧನ, ಶಲ್ಯ, ಕೃಪ ಮುಂತಾದವರು ಅವನೆಡೆಗೆ ಬಾಣಗಳ ಮಳೆಗರೆದರು. ಕುದುರೆಗಳು ಕಂಗೆಟ್ಟವು. ಧ್ವಜಕ್ಕೆ ಹಾನಿಯಾಯಿತು. ಸಾರಥಿ ಕೃಷ್ಣನೂ ಗಾಯಗೊಂಡನು. ಆದರೆ ಪಾರ್ಥನು ಎಲ್ಲರನ್ನೂ ಎದುರಿಸಿದನು. ಶಲ್ಯ ಮುಂತಾದವರು ರಕ್ತ ಸುರಿಸಿದರು. ಭೀಷ್ಮನಿಗೆ ಕೋಪ ಹೆಚ್ಚಾಯಿತು.

ಕೃಷ್ಣನು ಎತ್ತ ಕಡೆ ರಥ ತಿರುಗಿಸುವನೊ ಅತ್ತ ಕಡೆ ನುಗ್ಗುವನು. ಕೃಷ್ಣನೂ ಚತುರತೆಯಿಂದ ಭೀಷ್ಮನ ಗಮನ ಬೇರೆಡೆ ತಾಗದಂತೆ ನೋಡಿಕೊಂಡನು. ಭೀಷ್ಮನು ಕೃಷ್ಣನನ್ನು ತಮ್ಮ ಬಾಣಗಳಿಂದ ನೋಯಿಸಿದರು. ರಕ್ತ ಸೋರಿತು. ಕೃಷ್ಣನಿಗೆ ಕೋಪ ಭುಗಿಲ್ ಎಂದಿತು.

ಕುದುರೆಯ ಹಗ್ಗಗಳನ್ನು ಬಿಸುಟು ತನ್ನ ಪ್ರತಿಜ್ಞೆ ಹೋದರೂ ಹೋಗಲಿ, ಏನಾದರೂ ಆಗಲಿ ಇವನನ್ನು ಕೊಲ್ಲುವೆನೆಂದು ವರ ಸುದರ್ಶನ ಚಕ್ರವನ್ನು ಹಿಡಿದು ಚಕ್ರಿಯಾದನು. ದೇವತೆಗಳು ಹೆದರಿದರು. ಕೌರವರು ಕಂಗೆಟ್ಟರು. ಆ ಪ್ರಖರತೆಗೆ, ಉರಿಗೆ ಬೆದರಿ ದಿಕ್ಕಾಪಾಲಾಗಿ ಓಡಿದರು. ಅರ್ಜುನ ಭ್ರಮಿತನಾದನು. ರಥದಿಂದ ಭೂಮಿಗೆ ಧುಮುಕಿ ಭೀಷ್ಮರೆಡೆಗೆ ಚಕ್ರವನ್ನು ಗುರಿಯಿಟ್ಟು ನಿಂತನು.

ಆಗ ಭೀಷ್ಮನು ರಥದಿಂದ ಇಳಿದು ಬಂದು ಕೃಷ್ಣನಿಗೆ ನಮಸ್ಕರಿಸಿ ಸ್ತುತಿಸತೊಡಗಿದನು. ನಿನ್ನಲ್ಲಿ ನನ್ನಂತಹ ನೂರು ಪಿತಾಮಹರು ಹುಟ್ಟುತ್ತಾರೆ. ಸಾಯುತ್ತಾರೆ. ಕೊಲ್ಲುವವನೂ ನೀನಲ್ಲ. ಸಾಯುವವನೂ ನಾನಲ್ಲ. ಇದೆಲ್ಲವೂ ನಿನ್ನ ಮಾಯೆ. ಇಡೀ ಬ್ರಹ್ಮಾಂಡವನ್ನು ಹೊಂದಿರುವ ನೀನು ಭಕ್ತನ ಮೇಲೆ ಮುನಿಯುವುದೆ? ಚಕ್ರ ಬಿಡುತ್ತೀಯಾ ಬಿಡು. ನಿನ್ನ ಭಕ್ತ ನಾನಾಗಿದ್ದರೆ ಅದು ನನ್ನನ್ನು ಉಳಿಸುತ್ತದೆ ಎಂದನು. ಕೃಷ್ಣನು ಭೀಷ್ಮನ ಭಕ್ತಿಗೆ ಮೆಚ್ಚಿದನು. ಚಕ್ರವನ್ನು ಹಿಂದಕ್ಕೆ ತೆಗೆದುಕೊಂಡನು. ದೊಡ್ಡ ಗಂಡಾಂತರ ತಪ್ಪಿತೆಂದು ಬ್ರಹ್ಮಾದಿಗಳು ನಿಟ್ಟುಸಿರಿಟ್ಟರು. ಮತ್ತೆ ಅರ್ಜುನನನ್ನು ಸಂತೈಸಿ ಸಾರಥ್ಯವನ್ನು ವಹಿಸಿಕೊಂಡು ಯುದ್ಧ ಮುಂದುವರಿಸು ಎಂದನು. ಇದೆಲ್ಲದರ ನಡುವೆ ಸೂರ್ಯ ಕೃಷ್ಣನ ಚಕ್ರಕ್ಕೆ ಹೆದರಿಯೋ ಎಂಬಂತೆ ಅಸ್ತನಾದನು. ಅಂದಿನ ಯುದ್ಧ ಮುಗಿಯಿತು.

ಕೃತಜ್ಞತೆಗಳು: Lrphks Kolar



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ