ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಭಾರತಕಥಾಮಂಜರಿ86


 ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರಿ 
ಭೀಷ್ಮಪರ್ವ - ಐದನೆಯ ಸಂಧಿ


ಸೂಉಭಯಬಲದತಿರಥ ಮಹಾರಥ

ವಿಭುಗಳುರೆ ಹಳಚಿದರು ರಣದಲಿ

ತ್ರಿಭುವನವು ರಂಜಿಸಿತು ಸವೆದುದು ಸಕಲ ಸನ್ನಾಹ


ಅಳಿದುದೆರಡರ ಚೂಣಿ ಮುಂಗುಡಿ

ಯೊಳಗೆ ಕಡಲಾಯ್ತರುಣ ಜಲದೊ

ಬ್ಬುಳಿಯ ಖಂಡದ ದೊಂಡೆಗಳು ಕೆಸರಿಡುವ ಮಿದುಳುಗಳ

ಕಳದ ಹೆಣನೊಟ್ಟಿಲಲಿ ಮನ್ನೆಯರು ಬಳಿಕರೆ

ನೆಲೆಗಳಲಿ ಸೂಳೈಸಿದವು ನಿಸ್ಸಾಳ ಕೋಟಿಗಳು  


ನರನ ರಥ ಕುಣಿದುದು ಯುಧಿಷ್ಠಿರ

ನುರು ವರೂಥ ಸಗಾಢದೊಳು ಚೀ

ತ್ಕರಿಸಿತನಿಲಾತ್ಮಜನ ಸ್ಯಂದನ ಮುಂದುವರಿಯುತಿರೆ

ಭರದಿ ಮಾದ್ರೀಸುತರ ತೇರುಗ

ಳುರವಣಿಸಲಭಿಮನ್ಯು ಸಾತ್ಯಕಿ

ಯಿರದೆ ಕೈಕೊಳಲಾಯಿತಿತ್ತಲು ಕದನಕುದ್ಯೋಗ  


ವಿನುತ ಭೀಷ್ಮನು ಗಜರೆ ದುರಿಯೋ

ಧನನು ಬಿಲುಗೊಳಲಾತನನುಜರು

ಧನುವ ತುಡುಕೆ ಸುಶರ್ಮ ಶಲ್ಯರು ಸರಳ ಹೊದೆಗೆದರೆ

ಮೊನೆಗಣೆಯನಳವಡಿಸೆ ಗುರು ಗುರು

ತನುಜನಸ್ತ್ರವ ತಿರುಹೆ ಸೇನಾ

ವನಧಿ ಗರ್ಜಿಸಲಾಯ್ತು ಸಂಕುಲಸಮರ ಸೌರಂಭ  


ಶಕುನಿ ಸಹದೇವನೊಳು ಶಲ್ಯನು 

ನಕುಲನೊಳು ದುಶ್ಶಾಸನನು ಸಾ

ತ್ಯಕಿಯೊಡನೆ ಸೈಂಧವನು ಕುಂತೀಭೋಜ ಭೂಪನೊಳು

ಸಕಲ ನಾಯಕರಂದು ಯುದ್ಧೋ

ದ್ಯುಕುತರಾದರು ಕೇಳು ನೃಪ ತಾ

ವಕರ ಕೌಂತೇಯರ ಸಮಗ್ರಾಹವದ ವುಸ್ರರವ  


ಕಣೆಗೆದರಿ ದ್ರುಪದಾಂಕ ಗುರುವನು

ಕೆಣಕಿದನು ತತ್ತನುಜ ಭೀಷ್ಮನ

ಸೆಣಸಿದನು ಮೂದಲಿಸಿದನು ಲಕ್ಷಣನನಭಿಮನ್ಯು

ರಣಕೆ ಕರೆದನು ಕೌರವಾನುಜ

ಗಣವನನಿಲತನೂಜನಿತ್ತಲು

ಹೆಣಗಿದರು ಭಗದತ್ತ ಭೀಮಕುಮಾರರವಗಡಿಸಿ  


ಕಲಹದೊಳು ಕರಿಘಟೆಯ ಹೊಯ್ ಹೊ

ಯ್ದಲಸಿ ಕೌರವನನುಜನನು ಮುಂ

ಕೊಳಿಸಿ ಕೊಳ್ಳದೆ ಕಳುಹಿ ಬೇಸರುತನಿಲಸುತ ಮಸಗಿ

ನೆಲನ ಲೋಭಿಯ ಬುದ್ಧಿ ಮರಣಕೆ

ಪಲಿಸಬೇಹುದು ಕರೆ ಸುಯೋಧನ

ನಿಲಲಿ ಬವರಕ್ಕೆನುತ ಗದೆಯನು ತೂಗಿದನು ಭೀಮ


ಭುಜವನೊದರಿಸಿ ಸಿಂಹರವದಲಿ

ಗಜರಿ ಗದೆಯನು ತಿರುಹಿ ರಿಪು ಭೂ

ಭುಜರನರಸಿದನಳವಿಗಾಂತರೆ ಕೊಂದನತಿಬಳರ

ತ್ರಿಜಗ ಮಝ ಭಾಪೆನಲು ಪವಮಾ

ನಜನು ತಿರುಗಿಟ್ಟಣಿಸೆ ಸೇನಾಂ

ಬುಜಕೆ ಕುಂಜರನಾದನೈ ಜನಮೇಜಯ ಕ್ಷಿತಿಪ


ನಡೆದರಾಹವಕನಿಲ ನಂದನ

ನೊಡನೆ ಸಾತ್ಯಕಿ ನಕುಲ ದ್ರುಪದರು

ತುಡುಕಿದರು ಬಿಲುಗೋಲನೈದಿತು ಪವನಜನ ಚೂಣಿ

ಗಡಣಿಸುವ ಮುಂಮೊಗದ ಕೌರವ

ಪಡೆಯ ಹೇರಡವಿಯನು ಸವರಲು

ಕಡಿತಕಾರರು ಮುಂದೆ ಹೊಕ್ಕುದು ನಕುಲ ಪಾರ್ಥಜರು  


ಕಡಿದರರಿಭಟಪಾದಪವನಡ

ಗೆಡಹಿದರು ಗಜಗಿರಿಗಳನು ರಥ

ದೆಡೆದವರ ಕೊಚ್ಚಿದರು ತುರಗವ್ರಜದ ಬಲುಮೆಳೆಯ

ಕಡಿದು ಹರಹಿದರನಿಲಸುತ ಕಾ

ಲಿಡಲು ತೆರಹಾಯ್ತಹಿತವಿಪಿನದ

ಕಡಿತ ತೀರಿತು ಹೊಕ್ಕನರೆನೆಲೆಗಾಗಿ ಕಲಿಭೀಮ


ಎಲೆಲೆ ವಿಲಯಕೃತಾಂತನೋ 

ಮ್ಮಳವು ಕೊಳ್ಳದು ಬೆಂಗೊಡಲಿ ಮುಂ

ಕೊಳಿಸದಿರಿ ಮದುಳಾಗದಿರಿ ಹುರುಳಾಗಿ ಹೆಂಡಿರಿಗೆ

ಕೊಲೆಗಡಿಗನೋ ಭೀಮನೋ ರಿಪು

ಬಲಜಲಧಿಬಡಬಾನಲನೋ ತೊಲ

ತೊಲಗೆನುತ ತೆಗೆದೋಡಿತರೆನೆಲೆ ಕೌರವನ ಹೊರೆಗೆ  ೧೦


ಅದಟನಡ್ಡೈಸಿದನು ದುರುಳನ

ಮದವನಳಿವೆನು ಬಾಯ ಹೊಯ್ ಹೊಯ್

ಕದನದಲಿ ನಡುಗಿಸುವ ನಾಯಕವಾಡಿಗಳನೆನುತ

ಬದಗಿನಿದಿರಾದನು ಜಯಶ್ರೀ

ಮದನಕಾಯನು ಕಪಟದಾಯನು

ವಿದಿತಮಾಯನು ರಣದಜೇಯನು ಕೌರವರ ರಾಯ೧೧


ಎಲವೊ ಮಾರುತಿ ನಿಮ್ಮೊಳಗೆ ಕೋ

ಮಳೆಯ ಹುದುವನು ಮೆಚ್ಚಿ ನಮ್ಮೊಳ

ಗಿಳೆಯ ಹುದುವನು ಬಯಸಿದೈ ಛಲದಂಕನೆಂದರಿಯ

ನೆಲನ ಬೇಟವ ಬಿಸುಟು ಜೀವದ

ಲುಳಿದು ತೊಲಗೆನೆ ಪವನಸುತ ಕಳ

ಕಳಿಸಿ ನಗುತವೆ ಕೌರವೇಂದ್ರಂಗೆಂದನುತ್ತರವ೧೨


ಕೆಡಹಿ ದುಶ್ಶಾಸನನ ರಕುತವ

ಕುಡಿದು ನಿನ್ನೂರುಗಳನೀಕ್ಷಣ

ವುಡಿದು ಕೊಂಬೆನು ಧರೆಯನಲ್ಲದೆ ಹುದುವ ಬಯಸುವೆನೆ

ಪೊಡವಿ ದ್ರುಪದಕುಮಾರಿಯೆಮ್ಮಯ

ಮಡದಿಗನ್ಯರು ಮನವಿಡಲು ಬಳಿ

ಕಡಗುದರಿವೆನೆನುತ್ತ ಹೊಕ್ಕನು ಭೀಮನವಗಡಿಸಿ  ೧೩


ಗಾಳಿಯುರುಬೆಗೆ ಮಲೆತ ಮೇಘದ

ತೋಳುವಲ ನಗೆಗೆಡೆಯಲಾ ಕುರು

ಪಾಲನೆತ್ತಲು ಭೀಮನೆತ್ತಲು ಶಿವಶಿವಾ ಎನುತ

ಮೇಲಣಮರರ ಮಂದಿ ನಗೆ ನೃಪ

ಮೌಳಿ ಜವಗೆಡೆ ಖಾತಿಯೊಳು 

ಟ್ಟಾಳು ಹೊಕ್ಕುದು ಭೀಮಸೇನನ ರಥವ ಮುರಿಯೆಸುತ೧೪


ಬಿಲುದುಡುಕಿ ಕೈಕೊಂಡ ರಥಿಕಾ

ವಳಿಯ ಗೋಣಡವಿಯಲಿ ಭೀಮಾ

ನಲನ ವಿಲಸತ್ಕೇಳಿ ಕಾಣಿಸಲಾಯ್ತು ನಿಮಿಷದಲಿ

ಇಳೆಯೊಳೀ ಪವಮಾನ ನಂದನ

ನುಳಿಯೆ ಯಮರಾಜಂಗೆ ಬೆಸಕೈ

ವಳವಿ ಹಲಬರಿಗಾಗದೆಂದುದು ಸಮರ ಭೂತಗಣ ೧೫


ಪವನಜನ ಕೈಘಾಸಿಗಾನದ

ಬವರಿಗರನೀಕ್ಷಿಸುತ ರಥವನು

ಕವಿಸಿದನು ಕೈನೆಗಹಿ ಮೋಹರಕಭಯವನು ಕೊಡುತ

ಹವಣಿಸೈ ಹೇರಾಳದಾಟೋ

ಪವನು ಹಾರೈ ಜಯವ ರಣದಲಿ 

ತವಕಿಸೈ ತೆಗೆದೋಟಕೆನುತುರವಣಿಸಿದನು ಭೀಷ್ಮ೧೬


ಎಲೆ ಪಿತಾಮಹ ನೀವು ಕರುಣಿಸಿ

ದಳವ ನಿಮಗೊಪ್ಪಿಸುವೆ ಜಯವೆಮ

ಗುಳಿವು ಬೇರೆಂತೆನುತ ಕೊಂಡನು ಪವನಸುತ ಧನುವ

ಚಳಕದಲಿ ತೆಗೆದೆಚ್ಚಡಹಿತನ

ಹಿಳುಕ ಸೀಳಿದು ಬಿಸುಟು ಭೀಮನ

ಗೆಕೆದನೆಂಟಂಬಿನಲಿ ಗಂಗಾಸೂನು ಸಮರದಲಿ  ೧೭


ಮೇಲೆ ಹೇಳಿಕೆಯಾಯ್ತು ವರ ಪಾಂ

ಚಾಲರಿಗೆ ಚೈದ್ಯರಿಗೆ ಮತ್ಸ್ಯ ನೃ

ಪಾಲ ಸೃಂಜಯರಾದಿಯಾದಕ್ಷೋಹಿಣೀ ದಳಕೆ

ಸೂಳು ಮಿಗೆ ಗರ್ಜಿಸುವ ಘನ ನಿ

ಸ್ಸಾಳ ಕೋಟಿಯ ಗಡಣದೊಳು ಕೆಂ

ಗೋಲ ಮಳೆಗರೆಯುತ್ತ ಗಂಗಾಸುತನ ಕೆಣಕಿದರು  ೧೮


ಪೂತು ಮಝರೇ ಪಾಂಡುಸೈನ್ಯ

ವ್ರಾತ ಕವಿದುದು ಕೇಳಿರೈ ಮು

ಯ್ಯಾಂತುದೇ ಬರಹೇಳಿ ವೈವಸ್ವತನ ಪರಿಜನವ

ಘಾತಿಸುವೆನದನೆನುತ ತೊಡಚಿದ

ನೂತನಾಸ್ತ್ರಂಗಳಲಿ ರಿಪು ಸಂ

ಘಾತವನು ಕೆಡೆಯೆಚ್ಚು ಪಲ್ಲಟಿಸಿದನು ಕಡಿಕಡಿಯ೧೯


ಕಾಳೆಗಕ್ಕಿದಿರೊಡ್ಡಿ ಭೀಷ್ಮನ

ಕೋಲ ಹತಿಯಲಿ ಮಡಿದ ರಿಪು ಭೂ

ಪಾಳಿ ಹರಿದುದಯ ಸುರರ ಹೆಂಡಿರ ಮುರಿದ ಮುಂದಲೆಯ

ಮೇಲೆ ಮೇಲೈತಪ್ಪ ವೀರ 

ಟಾಳಿಯೊಡನಲ್ಲಿಂದ ಸುಭಟರು

ಸೂಳೆಬಂಟಿಕೆಯಿಂದ ಹೊಯ್ದಾಡಿದರು ನಾಕದಲಿ  ೨೦


ಮುಡುಹುಗಳೊಳೊಡೆಹೊಯ್ವ ಕಾಲಲಿ

ಮಿಡಿಯ ಮೆಟ್ಟುವ ತಂಬುಲವ ತೆಗೆ

ದಿಡುವ ಕರೆಕರೆದೊರೆಯನುರ್ಚುವ ನಾಯ ಹೆಸರಿಡುವ

ತೊಡರುಗಟ್ಟುವ ಬೈವ ಭಟ್ಟರ

ಬಿಡುವ ಕಾದುವ ವೀರ ಭಟರಿಂ

ದಿಡಿದುದಮರಾವತಿಯ ಸೊಂಪಿನ ಸೂಳೆಗೇರಿಗಳು  ೨೧


ಸುರರಿಗತ್ತಣ ಗಜಬಜವ ಪರಿ

ಹರಿಸಲರಿಯದೆ ವೀರ ಭೀಷ್ಮನ

ಧುರವನೀಕ್ಷಿಸಲಿತ್ತಲಳವಡದೇನನುಸುರುವೆನು

ಅರರೆ ಅಂಬರಸರಸಿ ರಿಪುಭಟ

ವರರ ಮುಖಪಂಕರುಹವನ ವಿ

ಸ್ತರಣವಾದುದೆನಲ್ಕೆ ಗಂಗಾಸೂನು ಕೈಕೊಂಡ೨೨


ಕಡುಮನದ ಕೈ ಸೂರೆಗಾರರ

ನಡಗೆಡಹಿದನು ಧುರದ ಗೆಲವಿಗೆ

ಮಿಡುಕುವರನಸಿಯರೆದು ನೆಗ್ಗಿದನೆನನುಸುರುವೆನು

ತಡಣಿಗರನೊಂದೊಂದು ಶರದಲಿ

ಗಡೆಗಡಿವ ಸಂರಂಭ ಭೀಷ್ಮನ

ಬಿಡುಧನುವಿನುಬ್ಬಟೆಗೆ ತೆರಳಿತು ಮಕುಟವರ್ಧನರು  ೨೩


ಬಳಸಿ ತಾರೆಗಳೆಸೆಯೆ ಚಂದ್ರರು

ಹಲಬರಾದರೊನಭದೊಳೆನೆ ಹೊಳೆ

ಹೊಳೆದ ಮಣಿಮೌಳಿಗಳು ಸಂದಣಿಸಿದವು ಗಗನದೊಳು

ಗೆಲಿದನಹಿತಾನೀಕವನು ರಿಪು

ಬಲ ದಿಶಾಪಟ ಭೀಷ್ಮನಿತ್ತಲು

ಕಲಿ ಯುಧಿಷ್ಠಿರನೃಪನ ವಿರಥನ ಮಾಡಿದನು ಶಲ್ಯ೨೪


ಅರಸನನು ಹಿಂದಿಕ್ಕಿ ನಡೆದು

ತ್ತರನು ಶಲ್ಯನೊಳಾಂತು ನಿಂದನು

ಸರಳ ಸರಿವಳೆಗರೆಯೆ ಕಡಿದನು ಶಲ್ಯಭೂಪಾಲ

ಧುರವಿಶಾರದನಹೆ ವಿರಾಟನ

ಹಿರಿಯಮಗ ನೀನಂದು ಗೋಕುಲ

ಹರಣದಲಿ ಕಲಿಯಾಗಿ ಕಾದಿದೆಯೆನುತ ತೆಗೆದೆಚ್ಚ೩೫


ಎಸಲು ಶಲ್ಯನ ಸರಳ ಖಂಡಿಸಿ

ನಿಶಿತ ಬಾಣದಲುತ್ತರನು ತೆಗೆ

ದೆಸಲು ಖತಿಯಲಿ ಶಲ್ಯನಭಿಮಂತ್ರಿಸಿ ಮಹಾಶರವ

ಅಸಮಬಲನಾಕರ್ಣಪೂರದಿ

ನೆಸೆ ವಿರಾಟಕುಮಾರನಸು ಲಂ

ಘಿಸಿತು ಕಾಯವನೊದೆದು ಖಚರೀಜನದ ಕುಚಯುಗಕೆ  ೨೬


ವೀರ ಶಲ್ಯ ದ್ರೋಣ ಕೃಪ ಭಾ

ಗೀರಥಿಯ ನಂದನರು ಪಾಂಡು ಕು

ಮಾರಕರ ಸೇನೆಯೊಳು ಗೆಲಿದರು ಮುರಿದರತಿಬಲರ

ಧೀರ ಸುಭಟರ ರಕ್ತಧಾರಾ

ಸಾರಲೋಹಿತ ಬಿಂಬವನು ಘನ

ವಾರಿಯಲಿ ತೊಳೆದಂತೆ ಪಶ್ಚಿಮಜಲಧಿಗಿನನಿಳಿದ೨೭


ಸೂಳವಿಸಿದವು ಸನ್ನೆಯಲಿ ನಿ

ಸ್ಸಾಳ ಸೇನೆಯ ತೆಗೆಸಿದವು ಹೆ

ಗ್ಗಾಳೆ ಮೊಳಗಿದವಾನೆವರೆ ಗಜರಿದವು ಡೌಡೆಗಳು

ಪಾಳಯಕೆ ತಿರುಗಿದರಖಿಲ ಭೂ

ಪಾಲಕರು ಗಂಗಾಸುತನ ಪಾಂ

ಚಾಲಕನ ನೇಮದಲಿ ಕೌರವ ಪಾಂಡುನಂದನರು  ೨೮


ಇತ್ತಲೀ ಸಂಗ್ರಾಮ ಮಹಿಯೊಳು

ಮೃತ್ಯುವಿನ ಭಾಗ್ಯೋದಯವು ಕೈ

ವರ್ತಿಸಿತು ವೈವಸ್ವತಾಭಿಪ್ರಾಯ ಸಿದ್ಧಿಸಿತು

ಮುತ್ತಿಗೆಯ ಜಂಬುಕ ಖಗಾಳಿಯ

ಚಿತ್ತ ನಿಶ್ಚಲವಾಯ್ತು ಸಲೆ ಮನ

ವುತ್ತರೋತ್ತರವಾಯ್ತು ಶಾಕಿನಿ ಡಾಕಿನೀ ಜನದ೨೯


ಹೆಗಲ ಪಕ್ಕಲೆಗಳಲಿ ಕವಿದುದು

ವಿಗಡ ಪೂತನಿವೃಂದ ಜೀರ್ಕೊಳ

ವಿಗಳ ಕೈರಾಟಳದೊಳೈದಿತು ಶಾಕಿನೀ ನಿಕರ

ತೊಗಲ ಕುನಿಕಿಲ ಬಂಡಿಗಳಲಾ

ರ್ವಗಿದು ಹೊಕ್ಕರು ರಕ್ಕಸರು ಬಾ

ಯ್ದೆಗೆದು ಬಂದುದುಲೂಕ ಜಂಬುಕ ಕಾಕ ಸಂದೋಹ೩೦


ತಳಿತ ತಲೆಯೋಡಿನೊಳು ಶೋಣಿತ

ಜಲವ ಕಾಸಿದರೆಳೆಯ ಕರುಳನು

ಹಿಳಿದು ಹಿಂಡಿದರಿಕ್ಕಿದರು ಕುಸುರಿಗಳ ಮೂಳೆಗಳ

ತೆಳುದೊಗಲ ಚಕ್ಕಳದ ಕೈ 

ಪ್ಪಳೆಯವರು ಹಂತಿಯಲಿ ಕುಡಿದರು

ಕೆಳೆಯರಿಗೆ ಸವಿದೋರಿ ಪೂತನಿನಿಕರ ಗಡಣದಲಿ  ೩೧


 ಕರುಳನಣಲೊಳಗಡಸಿ ನಲಿದುದುಮರುಳ ಬಳಗ ಕಪಾಲ ಪಾತ್ರೆಯ

ನರೆನೆಗಹಿ ಕೊಂಕಿನಲಿ ಕುಡಿದರು ಮುಕ್ತಕೇಶಿಯರು

ಮೊರೆವೆಣನನೊಡೆ ಮೆಲುತ ಹಾಡಿತು

ಮರುಳ ದಾನವನಿಕರ ಪಾಂಡವ

ಕುರುನೃಪರ ಹರಸಿದುದು ಕೈಪರೆಗುಟ್ಟ ಭೂತಗಣ೩೨


ಸಿಡಿದ ಕಣ್ಣಾಲಿಗಳನಾಯಿದು

ಕುಡುಕುಗೊಂಡವು ಕಾಗೆಗಳು ಹಿ

ಮ್ಮಡಿಯ ಹೊರಳಿಯ ನರವ ಸೆಳೆದವು ಜಂಬುಕಾದಿಗಳು

ಅಡಗ ಕದುಕಿರಿದೊರಲಿ ಕರೆದವು

ಗಡಣವನು ಗೂಗೆಗಳು ರಕುತದ

ಕಡಲಲೋಕುಳಿಯಾಡಿದವು ಭೇತಾಳ ಕಾಳಿಯರು  ೩೩


ತೆಳುದೊಗಲ ನಿಡುಸೋಗೆಯುಡುಗೆಯ

ನೆಳಗರುಳ ಸಿಂಗಾರದುರುಬಿನ

ಕೆಳದಿಯರ ಕೈನೇಣ ಕಿರಿದೊಟ್ಟಿಲಿನ ಬೊಂಬೆಗಳ

ಎಳಮಿದುಳ ಕಜ್ಜಾಯ ಮೂಳೆಯ

ಹಳುಕು ಕಾಲಿಜದಟ್ಟುಗುಳಿಗಳ

ಕೆಳೆಗಳೊಳು ಕೊಡಗೂಸು ಪೂತನಿ ನಿಕರವೊಪ್ಪಿದವು  ೩೪


ತೂಳ ಬರೆ ಕುಣಿದುದು ಕಬಂಧದ

ಜಾಲದೊಡನೆ ಪಿಶಾಚಗಣ ಭೇ

ತಾಳಗಣ ಕೈಪರೆಯ ಬಡಿದುದು ಶಾಕಿನೀನಿವಹ

ಸಾಲು ಮಿಗೆ ಸೊಗಸಿದುದು ರಣ ಭೂ

ತಾಳಿಯಲಿ ಮತ್ತಿತ್ತ ಕೇಳ್ವುದು

ಪಾಳಯಂಗಳೊಳೆರಡರಲಿ ಸಂಗರ ಮಹೋತ್ಸಾಹ೩೫


ಹಿಳಿದ ಲೋಹದ ಸೀಸಕಂಗಳ

ಬಲಿಸಿದರು ಹೋಳಾದ ಕವಚವ

ಹೊಲಿಸಿದರು ಬಾಹುರಕೆ ಸವಗದ ಬಿರುಕ ಬೆಸಸಿದರು

ಕಳಚಿದಾಯುಧದಾಯತದ ಕೀ

ಲ್ಗೊಳಿಸಿದರು ಖಡ್ಗಕ್ಕೆ ಕುಂತವ

ಕಳೆದು ಕಾವನು ತೊಡಿಸುತಿರ್ದುದು ಸೇನೆಯೆರಡರಲಿ  ೩೬


ತಡಿಯ ಬಲಿಸುವ ಗುಳನ ರೆಂಚೆಯ

ಗಡಣಿಸುವ ಹಕ್ಕರಿಕೆಗಳನಾ

ಯ್ದಡಸಿ ಹೊಲಿಸುವ ಕಬ್ಬಿಗಳ ಕೊಂಡಿಗಳ ಮಿಗೆ ಬಲಿವ

ಒಡೆದ ದೂಹತ್ತಿಗೆಗೆ ಕೀಲ್ಗಳ

ನಡಸಿ ಬೆಟ್ಟದ ಗಾಲಿಗಚ್ಚನು

ತೊಡಿಸುತಿರಲಾಯ್ತೆರಡು ಬಲದೊಳು ನುದ್ರೆಗವಮಾನ೩೭


ಅಸಿಯ ಮಸೆಸುವ ಮುರಿದ ಲೌಡಿಯ

ಬೆಸುವ ಕುಂತದ ಧಾರೆಗಳ ಢಾ

ಳಿಸುವ ನೆರೆಸೊಪ್ಪಾದ ಹಿಳುಕಿನ ಗರಿಯ ಕೀಲಿಸುವ

ಹೊಸ ತಿರುವ ಕಟ್ಟುವ ಕಠಾರಿಯ

ಮಸೆವ ಹಲಗೆಯ ಬಲಿವ ಸುರಗಿಯ

ಬಸೆಯ ಬೆಳಸುವ ವೀರ ಭಟರೊಪ್ಪಿದರು ಕಟಕದಲಿ  ೩೮


ಹರಿದ ಕೊರಳನು ಬಿಗಿವ ಉರದೊಳು

ಮುರಿದ ಬಾಣವ ಕೀಳ್ವ ಹೊಟ್ಟೆಯ

ನಿರಿಗರುಳನೊಳಗಿಕ್ಕಿ ಹೊಲಿಸುವ ಮದ್ದುಗಳನಿಡಿವ

ಉರಿವ ಸೇಕದ ನಸ್ಯದೊಳು ಹದ

ನರಿವ ತುರಗದ ವೈದ್ಯ ತತಿಯೆ

ಚ್ಚರಿಕೆಯಲಿ ಸಂತೈಸಿದರು ವಾಜಿಗಳ ವೇದನೆಯ೩೯


ಒಡಲಿನೊಳು ಮುರಿದಿದ್ದ ಸಬಳವ

ನುಡಿಯಲೀಯದೆ ಕೀಳ್ವ‌ ಮದ್ದನು

ಗಿಡಿವ ಜೇವಣಿಗೆಯೊಳು ಸಪ್ರಾಣಿಸುವ ದುರ್ವ್ರಣವ

ತೊಡೆದು ಕಟ್ಟುವ ಹಸ್ತಿವೈದ್ಯರ 

ಗಡಣವುಭಯದೊಳೆಸೆವವಂತ್ಯದ

ಕಡಲ ರಭಸಕೆ ತೊಡಕನಿಕ್ಕಿತು ಬಹಳ ಬಲಜಲಧಿ  ೪೦


ಬಾದಣಿಸಿದೇರುಗಳ ಬಾಯೊಳು

ಕಾದ ಬಾರಂಗಿಗಳನಳತೆಗೆ

ಕೋದು ವಾಮದೊಳೆಯ್ದೆ ಹಿಡಿದರು ತೈಲಧಾರೆಗಳ

ಆದ ಮೈಗಂಡಿಯೊಳು ರಕುತವ

ಶೋಧಿಸುತ ಹಳದುಪ್ಪವನು ತೊಡೆ

ದಾದರಿಸಿದುದು ವೈದ್ಯಸಂತತಿ ವೀರ ಭಟರುಗಳ೪೧


ಖಡುಗದಡವೊಯ್ಲುಗಳಲಡು 

ದ್ದಡಸಿದರು ಸೂಕರನ ತುಪ್ಪವ

ತೊಡೆದರಿರಿದೇರಿನೊಳು ಬಿಟ್ಟರು ತೈಲಧಾರೆಗಳ

ಕುಡಿಸಿದರು ಮಂತ್ರೋದಕವನೊಳ

ಗಡಸಿ ಕರುಳನು ಮುಚ್ಚಿ ಮಂತ್ರಿಸಿ

ತೊಡೆದರಖಿಳೌಷಧಿಗಳನು ನೃಪಸೇನೆಯೆರಡರಲಿ  ೪೨


ಸಂಕ್ಷಿಪ್ತ ಭಾವ


ಯುದ್ಧ ಮುಂದುವರಿದ ದಿನರಾತ್ರಿಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ.


ಎರಡೂ ಪಕ್ಷಗಳು ಭಯಂಕರ ಹೋರಾಟ ನಡೆಸಿದವುಅತಿರಥ ಮಹಾರಥರುಗಳುಮುಂಚೂಣಿಯಲ್ಲಿ ಕಾದಿದರು ಹಲವರು ವೀರ ಸ್ವರ್ಗ ಸೇರಿದರುಸ್ವರ್ಗದಲ್ಲಿಯೂ ಜಾಗ ಸಾಲದಪರಿಸ್ಥಿತಿ ಉಂಟಾಯಿತು


ಶಕುನಿಯು ಸಹದೇವನೊಂದಿಗೆಶಲ್ಯನು ನಕುಲನೊಂದಿಗೆದುಶ್ಯಾಸನನು ಸಾತ್ಯಕಿಯ ಜೊತೆಗೆಹೀಗೆ ಅವರವರಿಗೆ ಸಿಕ್ಕಿದ ಎದುರಾಳಿಗಳ ಜೊತೆಗೆ ಹೋರಾಟ ನಡೆಯಿತುಭೀಮ ಸುಯೋಧನನಜೊತೆಗೆ ಕಾದಲು ಹುಡುಕುತ್ತಿದ್ದನುಭೀಮನ ಆರ್ಭಟಕ್ಕೆ ಕೌರವರ ಸೈನ್ಯ ನಲುಗಿತುಅವನಸಹಾಯಕ್ಕೆ ದ್ರುಪದನಂದನಪಾಂಡವಕುಮಾರರು ಎಲ್ಲರೂ ಸೇರಿದರು.


ಒಬ್ಬರನ್ನೊಬ್ಬರು ಮೂದಲಿಸುವುದುತಮ್ಮ ಶೌರ್ಯ ಹೇಳಿಕೊಳ್ಳುವುದು ಎಲ್ಲ ನಡೆದವುಭೀಷ್ಮನು ಒಂದು ಕಡೆಯಿಂದ ಎಲ್ಲವನ್ನೂ ನಿಯಂತ್ರಿಸುತ್ತ ಎದುರಾದವರನ್ನು ಕೊಚ್ಚುತ್ತ ಬಂದನುಎರಡೂ ಕಡೆಗಳಲ್ಲಿ ಭಾರೀ ಯುದ್ಧ ನಡೆಯಿತುಅಷ್ಟರಲ್ಲಿ ಸೂರ್ಯಾಸ್ತ ಆಗಿದ್ದರಿಂದನಿಯಮದಂತೆ ಕದನ ವಿರಾಮ ಉಂಟಾಯಿತು.


ಇಡೀ ರಾತ್ರಿಯಲ್ಲಿ ನಾನಾವಿಧದ ವೈದ್ಯರು ಗಾಯಾಳುಗಳ ಚಿಕಿತ್ಸೆ ನಡೆಸಿದರುಪಶುವೈದ್ಯರುಕುದುರೆಗಳಆನೆಗಳ ಕಡೆ ಗಮನ ಕೊಟ್ಟರುಹಾಗೆಯೇ ರಥದ ಮುರಿದ ಭಾಗಗಳನ್ನುಜೋಡಿಸುವಆಯುಧಗಳನ್ನು ಮಸೆದು ಹರಿತಗೊಳಿಸುವಸರಕು ಸಾಮಗ್ರಿಗಳನ್ನು ಒದಗಿಸುವಗಾಯಾಳುಗಳ ಯೋಗಕ್ಷೇಮ ನೋಡುವನಾಳಿನ ಯುದ್ಧದ ಬಗ್ಗೆ ಆಲೋಚಿಸುವಸನ್ನಿವೇಶಗಳಲ್ಲಿ ರಾತ್ರಿ ಎರಡೂ ಪಕ್ಷಗಳು ನಿದ್ರಿಸಿದ್ದು ಅತ್ಯಂತ ಕಡಿಮೆ ಅವಧಿಯಲ್ಲಿರಣರಂಗದಲ್ಲಿಭೂತ ಪ್ರೇತಗಳುಮರುಳುಗಳುರಕ್ತ ಹೀರುವ , ಮಾಂಸ ತಿನ್ನುವ ಕಾರ್ಯದಲ್ಲಿ ತೊಡಗಿದವು


 ಭಾಗದಲ್ಲಿ ಆಯಾ ಗಾಯಗಳಿಗೆ ಬೇಕಾದ ವಿವಿಧ ಔಷಧೀಯ ವಸ್ತುಗಳುತೈಲಗಳುತುಪ್ಪಗಳು ಮುಂತಾದ ವಿವರಗಳು ಸಾಕಷ್ಟು ಉಪಯುಕ್ತವಾಗಿವೆಯುದ್ಧಭೂಮಿಯಲ್ಲಿಪ್ರತಿನಿತ್ಯವೂ ಗಾಯಾಳುಗಳಿಗೆಪ್ರಾಣಿಗಳಿಗೆ ಚಿಕಿತ್ಸೆ ನೀಡಲು ವೈದ್ಯರ ದೊಡ್ಡ ತಂಡವೇ ಇತ್ತು.



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ