ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಭಾರತಕಥಾಮಂಜರಿ96


 ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರಿ 
ದ್ರೋಣ ಪರ್ವ - ಐದನೆಯ ಸಂಧಿ


ಸೂ.

ವೀರರಿಪುಕದಳೀವನಕೆ ಮದವಾರಣನು ಫಲುಗುಣನ ತನಯನು

ದಾರ ಪದ್ಮವ್ಯೂಹದಲಿ ಗೆಲಿದನು ಕುಮಾರಕರ  

 

ಅವಧರಿಸು ಧೃತರಾಷ್ಟ್ರ ನೃಪ ಸೈಂ

ಧವನ ಗೆಲಿದಾ ವ್ಯೂಹ ಭೇದಾ

ಹವವಿಜಯ ವಿಜಯಾತ್ಮಕನ ಕೌತುಕ ರಣೋದಯವ

ತಿವಿದನುರುಬುವ ರಥ ಪದಾತಿಯ

ಕವಿವ ಗರುವ ತುರಂಗಗಳ ಬಲು

ಜವದ ರಥ ಕೋಟ್ಯಾನುಕೋಟಿಯ ಹೊದರ ಹೊಸ ಮೆಳೆಯ    

 

ಹರಿಯ ಚಕ್ರ ವರೂಥ ಚಕ್ರದೊ

ಳುರವಣಿಪ ತೇಜಿಗಳ ಕಡುಹಿನ

ಖುರದ ಹೊಯ್ಲಲಿ ವಿಲಯ ಪವನನ ಗರಿಯ ಗಾಳಿಯಲಿ

ಹರನ ನಯನಜ್ವಾಲೆ ಪಾರ್ಥಿಯ

ಸರಳ ಕಿಡಿಯಲಿ ಪಲ್ಲಟಿಸೆ ಸಂ

ಗರದೊಳಗೆ ಸೈವರಿದು ಸದೆದನು ಸಕಲ ಸೈನಿಕರ        

 

ಮಿಕ್ಕು ನೂಕುವ ಕುದುರೆಕಾರರು

ತೆಕ್ಕೆಗೆಡೆದರು ಸಂದಣಿಸಿ ಕೈ

ಯಿಕ್ಕಿದಾನೆಯನೇನನೆಂಬೆನು ಕಾಣೆನಳವಿಯಲಿ

ಹೊಕ್ಕು ಹರಿಸುವ ರಥ ಪದಾತಿಯ

ನೊಕ್ಕಲಿಕ್ಕಿದನಮಮ ಮಗುವಿನ

ಮಕ್ಕಳಾಟಿಕೆ ಮಾರಿಯಾಯಿತು ವೈರಿ ರಾಯರಿಗೆ         

 

ಕದಳಿಯೊಳು ಮದದಾನೆ ಹೊಕ್ಕಂ

ದದಲಿ ಹೆಚ್ಚಿದ ಚಾತುರಂಗದ

ಮೆದೆಯನೊಟ್ಟಿದು ಹೂಣೆ ಹೊಕ್ಕನು ಥಟ್ಟನೊಡೆತುಳಿದು

ಇದಿರೊಳೆಚ್ಚನು ಕೆಲಬಲದೊಳಿಹ

ಕದನಗಲಿಗಳ ಸೀಳಿದನು ಕಾ

ದಿದನು ಕಾಲನ ಲೀಲೆಯಾದುದು ವಿಷಮ ಸಮರಂಗ    

 

ಜೋಡೊಡೆದು ಥಟ್ಟುಗಿದು ಬೆನ್ನಲಿ

ಮೂಡಲದಟರ ಸೀಳಿದನು ಖುರ

ಜೋಡು ಹುಡಿಹುಡಿಯಾಗೆ ತೇಜಿಯ ಥಟ್ಟ ಖಂಡಿಸಿದ

ನೋಡಲಮ್ಮುವರಿಲ್ಲ ಮಿಗೆ ಕೈ

ಮಾಡಲಮ್ಮುವರಿಲ್ಲ ಬಲವ

ಲ್ಲಾಡಿತೊಬ್ಬನೆ ಹಸುಳೆ ಹೊಕ್ಕನು ವೈರಿ ಮೋಹರವ               

 

ಆವ ವಹಿಲದೊಳಂಬ ತೊಡಚುವ

ನಾವ ವೇಗದೊಳಿದಿರಲೆಸುವನ

ದಾವ ನಿರುತದಲೊಡ್ಡುವನು ಕೊರಳಿಂಗೆ ಕೋಲುಗಳ

ಆವ ದೃಢತೆಯೊ ದೃಷ್ಟಿವಾಳವಿ

ದಾವ ಗರುಡಿಶ್ರಮವೆನುತ ದಿವಿ

ಜಾವಳಿಗಳುಲಿಯಲು ವಿಭಾಡಿಸಿದನು ರಿಪುವ್ರಜವ    

 

ಎಡದಲೌಕುವ ರಾವುತರ ವಂ

ಗಡವನೆಚ್ಚನು ಸಮ್ಮುಖದೊಳವ

ಗಡಿಸುವಿಭ ಕೋಟಿಗಳ ಕೊಂದನು ಸರಳ ಸಾರದಲಿ

ಕಡುಗಿ ಬಲದಲಿ ಕವಿವ ರಥಿಕರ

ಕೆಡಹಿದನು ಕಾಲಾಳು ತೇರಿನ

ಗಡಣ ಹುಡಿಹುಡಿಯಾಯ್ತೆನಲು ಸವರಿದನು ಪರಬಲವ    

 

ಉರವಣಿಸಿದರು ಮತ್ತೆ ಭಟರ

ಬ್ಬರದ ಖತಿಯಲಿ ನಿಖಿಳ ಮನ್ವಂ

ತರದ ಕಡೆಯಲಿ ನೆಲನನದ್ದುವ ಕಡಲ ಕಡುಹಿನಲಿ

ಸರಳು ಕಡಿದವು ಸಕುತಿ ಸೆಲ್ಲೆಹ

ಪರಶು ಕವಿದವು ಖಡ್ಗ ತೋಮರ

ಸುರಗಿ ಹೊಳೆದವು ಕೈದು ಹೇರಿದವಖಿಳ ದೆಸೆಗಳಲಿ    

 

ತೊಲಗಿರೈ ಕಾಲಾಳು ಮೇಲಾ

ಳಳವಿಗೊಡಲಿ ಮಹಾರಥರು ಮುಂ

ಕೊಳಲಿ ಜೋದರು ದಿಟ್ಟರಾದರೆ ಕವಿಸಿ ಕರಿಘಟೆಯ

ಕೆಲದ ದೊರೆಗಳು ಬರಲಿ ಮಾರಿದ

ತಲೆಯ ಭಂಡವ ಹೊತ್ತಿರದೆ ಕೈ

ಕೊಳಲಿ ಕರ್ಣಾದಿಗಳೆನುತ ಹೊಕ್ಕೆಚ್ಚನಭಿಮನ್ಯು    

 

ಕಾರಗಲಸಿದನಮಮ ರಾಜ ಕು

ಮಾರ ಕಂಠೀರವನು ರಿಪು ಪರಿ

ವಾರವನು ನಡೆಗೊಳಿಸಿದನು ಯಮರಾಜನಾಲಯಕೆ

ಮಾರಿ ಮೊಗವಡದೆರೆದಳೋ ಕೈ

ವಾರವೋ ತರುವಲಿಗಿದೆತ್ತಣ

ವೀರವೋ ಶಿವ ಎನುತ ಬೆರಗಾಯಿತ್ತು ಸುರಕಟಕ  ೧೦  

 

 

ಕೊಡೆನೆಗೆದವಟ್ಟೆಗಳು ರಕುತದ

ಕಡಲೊಳರೆಜೀವದ ಭಟರು ಬಾ

ಯ್ವಿಡುತ ತೇಕಾಡಿದರು ಮುಂಡದ ಹಿಂಡು ಮುಳುಗಾಡೆ

ಅಡಸಿ ನೆಗೆವಾನೆಗಳ ತಲೆಗಳ

ಗಡಣ ಮೆರೆದವು ಮಿಕ್ಕ ತೇಜಿಯ

ಕಡಿಕುಗಳು ಕುಣಿದಾಡಿದವು ಕಿಗ್ಗಡಲ ರಕುತದಲಿ     ೧೧  

 

ಕರಿಘಟೆಯ ಕಲಕಿದನು ಹಯ ಮೋ

ಹರವ ಜರುಹಿದನೌಕಿ ಹರಿತಹ

ವರ ರಥವ ಹುಡಿಮಾಡಿದನು ಕೆಡಹಿದನು ಕಾಲಾಳ

ಹುರಿಯೊಡೆದು ಮೈದೆಗೆದು ಸಲೆ ಕೈ

ಮರೆದು ಕೈದುವ ಹಾಯ್ಕಿ ಪಡೆ ಮೊಗ

ದಿರುಹಲೆಚ್ಚನು ಕೊಚ್ಚಿದನು ಕೌರವ ಚತುರ್ಬಲವ      ೧೨  

 

ತಳಿತ ಹೊಗರಿನ ಬಾಯಿ ಧಾರೆಯ

ಹೊಳಹುಗಳ ಹೊಸ ಮಸೆಯ ತಳಪದ

ಬೆಳಗುಗಳ ಬಲಿದಿಂಗಲೀಕ ಸುವರ್ಣ ರೇಖೆಗಳ

ಲುಳಿಯ ಹಂಗನ ಗರಿಯ ಬಿಗುಹಿನ

ಹಿಳುಕುಗಳ ಹೊಗರಂಬು ಕವಿದವು

ತುಳುಕಿದವು ತೂರಿದವು ಕೆದರಿದವಹಿತಬಲದಸುವ  ೧೩  

 

ಅಳವಿಗೆಡೆ ಧುಮ್ಮಿಕ್ಕಿ ರಥದವ

ರಿಳಿಯ ಬಿದ್ದರು ಭಯದಿ ತೇಜಿಯ

ನಿಳಿದು ರಾವ್ತರು ಕರವ ಮುಗಿದರು ಕೊರಳ ಸಲಹೆನುತ

ಗುಳವ ಸಡಿಲಿಸಿ ಹಾಯ್ಕಿ ಜೋದಾ

ವಳಿಗಳಿಳಿದುದು ಕೈಯ ಕೈದುವ

ನಿಳುಹಿ ಬಾಯಲಿ ಬೆರಳನಿಟ್ಟುದು ವೈರಿ ಪಾಯದಳ  ೧೪  

 

ಎಸಳ ಮೊನೆ ಮೋಹರದ ಸಂದಣಿ

ಯುಸಿರನುಳಿದುದು ಕೇಸರಾಕೃತಿ

ಯಸಮ ವೀರರು ಪಥಿಕರಾದರು ಗಗನ ಮಾರ್ಗದಲಿ

ನುಸುಳಿದರು ಕರ್ಣಿಕೆಯ ಕಾಹಿನ

ವಸುಮತೀಶರು ರಾಯನರನೆಲೆ

ದೆಸೆಗೆಡಲು ಮೊಳಗಿದನು ಪಾರ್ಥಕುಮಾರನಳವಿಯಲಿ  ೧೫  

 

ಜರಿದುದಬ್ಜವ್ಯೂಹ ನೂಕಿದ

ಕರಿ ತುರಗ ಕಾಲಾಳು ತೇರಿನ

ಮರಳುದಲೆ ತಾನಿಲ್ಲ ನೆರೆ ನುಗ್ಗಾಯ್ತು ಕುರುಸೇನೆ

ದೊರೆಗಳಹ ದ್ರೋಣಾದಿಗಳು ಕೈ

ಮರೆದು ಕಳೆದರು ಪಾರ್ಥತನಯನ

ಸರಿಯೊರೆಗೆ ಭಟನಾವನೆಂದನು ಕೌರವರ ರಾಯ     ೧೬  

 

ತಂದೆ ಹಡೆಯನೆ ಮಗನನಹುದೋ

ಕಂದ ಕಲ್ಪ ಸಹಸ್ರ ನೋಂತಳೊ

ಇಂದುಧರನನು ನಿನ್ನ ತಾಯಿ ಸುಭದ್ರೆಯಲ್ಲದಡೆ

ಇಂದಿನೀ ಬಲವೀ ಸಮರ ಜಯ

ದಂದವೀ ಸೌರಂಭವೀ ಸರ

ಳಂದವೀ ತೆರಳಿಕೆಯದಾವಂಗೆಂದನವನೀಶ           ೧೭  

 

ಹುರುಡ ಮರೆದೆನು ಮಗನೆ ಸಾಲದೆ

ಭರತಕುಲದಲಿ ನಿನ್ನ ಬೆಳವಿಗೆ

ಯೆರಡು ಕವಲನ್ವಯಕೆ ಕೊಡದೇ ಸುಗತಿ ಸಂಪದವ

ಕರುಳು ಬೀಳವೆ ತನ್ನ ಬಸುರಿಂ

ದುರುಳಿದವದಿರಲೇನು ಫಲ 

ತ್ಸರವೆ ಪಾರ್ಥ ಕೃತಾರ್ಥನೆಂದನು ಕೌರವರ ರಾಯ  ೧೮  

 

ಎನುತ ಬಿಲುದುಡುಕಿದನು ಸೇನಾ

ವನಧಿಗಭಯವನಿತ್ತು ಮರಳುವ

ಜನಪರನು ಜರೆದೆಡಬಲದ ಮನ್ನೆಯರ ಮೂದಲಿಸಿ

ಮೊನೆಗಣೆಯ ತೂಗುತ್ತ ನರ ನಂ

ದನನ ರಥವನು ತರುಬಿ ನಿನ್ನಯ

ತನಯನಡ್ಡೈಸಿದನು ಕೌರವ ರಾಯ ಖಾತಿಯಲಿ      ೧೯  

 

ಮಗುವು ನೀ ಕೆಡಬೇಡ ಹೋಗೆನು

ತಗಣಿತಾಸ್ತ್ರವ ಸುರಿವುತೈತರೆ

ನಗುತ ನಿಂದಭಿಮನ್ಯು ನುಡಿದನು ಕೌರವೇಶ್ವರನ

ಮಗುವು ತಾನಹೆ ತನ್ನ ಬಾಣಕೆ

ಮಗುವುತನ ಬೇರಿಲ್ಲ ನೋಡೆಂ

ದಗಲದಲಿ ಕೂರಂಬ ಸುರಿದನು ಪಾರ್ಥನಂದನನು             ೨೦  

 

ಎಸಲು ಕಣೆ ಮುಕ್ಕುರುಕಿದವು ಹೊಸ

ಮಸೆಯ ಧಾರೆಯ ತೋರ ಕಿಡಿಯಲಿ

ಮುಸುಕಿತರಸನ ತೇರು ತಳಿತವು ಮೆಯ್ಯೊಳಂಬುಗಳು

ಬಸಿವ ರಕುತದ ಜರಿವ ಜೋಡಿನ

ನಸಿದ ಗರ್ವದ ನೆಗ್ಗಿದಾಳ್ತನ

ದೆಸಕದೊಣಗಿಲ ಬಾಯ ಭೂಪನ ಕಂಡನಾ ದ್ರೋಣ  ೨೧  

 

ರಾಯ ಸಿಲುಕಿದನಕಟಕಟ ರಾ

ಧೇಯ ನಡೆ ಕೃಪ ಹೋಗು ಮಗನೆ ನಿ

ಜಾಯುಧವ ಹಿಡಿ ಶಲ್ಯ ತಡೆಯದಿರೇಳು ಕೃತವರ್ಮ

ರಾಯನನುಜರು ಕೈದುಗೊಳಿ ರಣ

ದಾಯ ತಪ್ಪಿತು ನೃಪತಿ ಮಾರಿಯ

ಬಾಯ ತುತ್ತಾದನು ಶಿವಾ ಎಂದೊರಲಿದನು ದ್ರೋಣ  ೨೨  

 

ಮಾತು ಹಿಂಚಿತು ಮುಂಚೆ ಸುಭಟ

ವ್ರಾತ ಹೊಕ್ಕುದು ಸಿಕ್ಕಿದರಸನ

ಭೀತಿಯನು ಬಿಡಿಸಿದರು ಬೀರಿದರಂಬುಗಳ ಮಳೆಯ

ಸೋತೆವಾವ್ ನೀ ಗೆಲಿದೆ ಕರೆ ನಿ

ಮ್ಮಾತಗಳನೀ ಭ್ರೂಣಹತ್ಯಾ

ಪಾತಕಕ್ಕಂಜುವೆನೆನುತ ಕೈಕೊಂಡನಾ ದ್ರೋಣ  ೨೩  

 

ರಾಯನನು ತೊಲಗಿಸಿದರಾ 

ರ್ಣಾಯತಾಸ್ತ್ರರು ರಾಹುವಿನ ಕಟ

ವಾಯ ಚಂದ್ರನ ಸೆಳೆವವೋಲರಿದಾಯ್ತು ಸುಭಟರಿಗೆ

ಸಾಯಕವ ಸರಿಗೊಳಿಸಿದರು 

ಜ್ರಾಯುಧನ ಮೊಮ್ಮನ ರಥವ ನಿ

ರ್ದಾಯದಲಿ ಮುತ್ತಿದರು ಕುರುಸೇನಾ ಮಹಾರಥರು  ೨೪  

 

ಹಸುಳೆತನದಲಿ ಹರನ ಮಗನಾ

ವಿಷಮ ದೈತ್ಯನ ಸೀಳಿ ಬಿಸುಡನೆ

ಶಿಶುವಲಾ ಪ್ರದ್ಯುಮ್ನ ಮುರಿಯನೆ ಶಂಬರಾಸುರನ

ಶಿಶುವೆ ನೋಡಭಿಮನ್ಯು ಸುಭಟ

ಪ್ರಸರದಿನಿಬರನೊಂದು ಘಾಯದೊ

ಳುಸಿರ ತೆಗೆಬಗೆ ಮಾಡಿದನು ಧೃತರಾಷ್ಟ್ರ ಕೇಳೆಂದ  ೨೫  

 

ಗುರುಸುತನನೊಟ್ಟೈಸಿ ಶಲ್ಯನ

ಭರವಸವ ನಿಲಿಸಿದನು ಕೃಪನು

ಬ್ಬರದ ಗರ್ವವ ಮುರಿದು ಕೃತವರ್ಮಕನ ನೋಯಿಸಿದ

ಅರಸನನುಜರ ಸದೆದು ಬಾಹ್ಲಿಕ

ದುರುಳ ಸೌಬಲ ಸೋಮದತ್ತರ

ಹುರುಳುಗೆಡಿಸಿದನೊಬ್ಬ ಶಿಶು ಗೆಲಿದನು ಮಹಾರಥರ  ೨೬  

 

ಮುಳುಗಿದಂಬಿನ ಮರುಮೊನೆಯ ಮೈ

ಗಳ ಮಹಾರಥರಾಜಿ ಕದನದ

ನೆಲನ ಬಿಡೆ ಖತಿಗೊಂಡು ಮುರಿದೋಡುವರ ಮೂದಲಿಸಿ

ಬಿಲುದುಡುಕಿ ಸಾರಥಿಗೆ ಸೂಚಿಸಿ

ಮಲೆತ ನೋಡೈ ಮಗುವು ಫಡ ಫಡ         

ತೊಲಗು ತೊಲಗೆಂದೆನುತ ರಿಪುವನು ತರುಬಿದನು ಕರ್ಣ [  ೨೭

 

ಗಾರುಗೆಡೆದರೆ ಮೆರೆಯದೋಲೆಯ

ಕಾರತನವೆಮ್ಮೊಡನೆ ನೀ ಮೈ

ದೋರಿ ಮಡಮುರಿವಿಲ್ಲದೆಚ್ಚಾಡಿದರೆ ಸಫಲವಿದು

ತೋರುವೆನು ಕೈಗುಣವನೆನುತೈ

ದಾರು ಶರದಲಿ ಕರ್ಣನೆದೆಯನು

ಡೋರುಗಳೆಯಲು ಬಳಲಿದನು ಪೂರಾಯ ಘಾಯದಲಿ  ೨೮  

 

ಬೆದರಿ ಭೂಕಂಪದಲಿ ಕುಲಗಿರಿ

ಯದಿರುವಂತಿರೆ ಚರಿಸಿ ಕಾಯವ

ಬಿದಿರಿ ಮರಳುವ ಕಂಗಳಲಿ ಕಲಿಕರ್ಣ ಮೈಮರೆಯೆ

ಕೆದರಿತೀ ಬಲವಕಟ ಕರ್ಣನ

ಸದೆದನೋ ಸಾಹಸಿಕ ಶಿಶು ಕಾ

ದಿದೆವು ನಾವಿನ್ನೆನುತಲಿರೆ ಕಲಿ ಶಲ್ಯನಿದಿರಾದ         ೨೯  

 

ಬಾಲಕನೆ ಹಿಮ್ಮೆಟ್ಟು ಹಿಮ್ಮೆ

ಟ್ಟಾಳುತನವೆಮ್ಮೊಡನೆಯೇ ಮರು

ಳೇಳಿಗೆಯಲುಬ್ಬೆದ್ದು ಕರ್ಣನ ಸದೆದ ಗರ್ವದಲಿ

ಮೇಲನರಿಯಾ ಶಲ್ಯನೊಡನೆಯು

ಕಾಳೆಗವೆ ನಿಮ್ಮಯ್ಯನಿಂದಿನ

ಲೂಳಿಗವ ತಹುದೆನುತ ಸುರಿದನು ಸರಳ ಸರಿವಳೆಯ  ೩೦  

 

ಬಾಲತನವೇನೂಣಯವೆ 

ಟ್ಟಾಳುತನವಾಭರಣವವನೀ

ಪಾಲಸುತರಿಗೆ ವಿದ್ಯವೇ ವಿಪ್ರರಿಗಲಂಕಾರ

ಆಳಿನಂಗವನೆತ್ತ ಬಲ್ಲೆ 

ರಾಳಿಯಲಿ ನಿನ್ನಂಘವಣೆಯ 

ಡಾಳತನವನು ಮುದ್ರಿಸುವೆನೆನುತೆಚ್ಚನಭಿಮನ್ಯು  ೩೧  

 

ಸರಳ ಸರಳಲಿ ಕಡಿದು ಸವೆಯದೆ

ಸರಿ ಮಿಗಿಲ ಕಾದಿದರೆ ಶಲ್ಯನ

ಧರಧುರದ ದೆಖ್ಖಾಳತನವನು ಕಂಡು ಖಾತಿಯಲಿ

ಸರಳು ಹದಿನೈದರಲಿ ಶಲ್ಯನ

ಬರಿಯ ಕೆತ್ತಿದನೈದು ಬಾಣದೊ

ಳುರವ ತೋಡಿದನೊಂದು ನಿಮಿಷಕೆ ಶಲ್ಯ ಸೈಗೆಡೆದ  ೩೨  

 

ತಲೆ ತಿರುಗಿ ತುಟಿಯೊಣಗಿ ಕಂಗಳ

ಬಳೆ ಮರಳಿ ಬಸವಳಿಯೆ ಸಾರಥಿ

ತೊಲಗಿಸಿದನಾ ರಥವನೊಡಹುಟ್ಟಿದನ ವೇದನೆಯ

ನಿಲುಕಿ ಕಂಡನು ಶಲ್ಯನನುಜನು

ಹಿಳುಕು ಹಿಳುಕಿನ ಮೇಲೆ ಸಂಧಿಸಿ

ಮುಳಿದೆಸುತ ತಾಗಿದನು ಖತಿಯಲಿ ಪಾರ್ಥನಂದನನ  ೩೩  

 

ಪೂತು ಶಲ್ಯನ ತಮ್ಮನೇ ಮಾ

ಱಾತನಣ್ಣನ ಹರಿಬವನು ದಿಟ

ಸೂತ ನೋಡೈ ಸಾಹಸಿಕನೈ ಲೇಸು ಲೇಸೆನುತ

ಆತನಂಬೈದಾರ ಮನ್ನಿಸಿ

ಸೋತವೊಲು ಮನಗೆಲವ ಮಾಡಿ ನಿ

ಶಾತ ಶರದಿಂದಿಳುಹಿದನು ಶಲ್ಯಾನುಜನ ಶಿರವ        ೩೪  

 

ದೊರೆ ಮಡಿಯೆ ಮಾದ್ರಾನುಜನ ಬಲ

ತಿರುಗಿತಭಿಮನ್ಯುವಿನ ಹೊಯ್ಲಲಿ

ಹುರುಳುಗೆಟ್ಟುದು ಹೆಸರ ನಾಯಕವಾಡಿ ದುಗುಡದಲಿ

ತರಹರವ ನಾ ಕಾಣೆನೀ ಮೋ

ಹರಕೆ ಗತಿಯೇನೆನುತ ಭರದಲಿ

ಕರೆದು ತೋರಿದನಾ ಕೃಪಾಚಾರ‍್ಯಂಗೆ ಕಲಿ ದ್ರೋಣ      ೩೫  

 

ಮಗುವೆ ನೋಡಭಿಮನ್ಯು ನಮಗಿದು

ಹೊಗುವಡಳವೇ ಕಾಲರುದ್ರನ

ತಗಹು ಬಿಟ್ಟಂತಿದೆ ಕುಮಾರನ ಕೋಪದಾಟೋಪ

ಮೊಗಸಲರಿದು ಭುಜಪ್ರತಾಪದ

ಹೊಗರು ಹೊಸಪರಿಯೆನುತ ರಿಪುಗಳ

ಹೊಗಳುತಿರೆ ಕೇಳಿದನು ಕೌರವ ರಾಯನೀ ನುಡಿಯ  ೩೬  

 

ಕೇಳುತಿರ್ದೈ ಕರ್ಣ ಸಲೆ 

ಮ್ಮಾಳ ಬೆದರಿಸಿ ನುಡಿದು ರಿಪು ಭಟ

ನಾಳನೇರಿಸಿ ನುಡಿವ ಬಾಹಿರರೇನ ಹೇಳುವೆನು

ಖೂಳರೆಂಬೆವೆ ಗುರುಗಳಿಂದು ವಿ

ಶಾಲಮತಿಗಳು ತಮ್ಮ ಭಾಗ್ಯದ

ಮೇಲೆ ದೈವವನೆಂದು ಫಲವೇನೆನುತ ಬಿಸುಸುಯ್ದ  ೩೭  

 

ವೀರರಂಗವನೆತ್ತ ಬಲ್ಲರು

ಹಾರುವರು ಬೆಳದಿಂಗಳಿನ ಬಿರು

ಸಾರ ಸುಡುವುದು ಕೈದು ಹಿಡಿದರೆ ಕಲಿಗಳೇ ದ್ವಿಜರು

ವೈರಿಭಟನಿವ ಮಗುವಲಾ ಮನ

ವಾರೆ ಕಾದಲು ಲಕ್ಷ್ಯವಿಲ್ಲೀ

ಯೂರುಗರ ಬೈದೇನು ಫಲವೆಂದರಸ ಹೊರವಂಟ            ೩೮  

 

ಎನಲು ದುಶ್ಶಾಸನನು ರಾಯನ

ಕನಲಿದನು ಖತಿಯೇಕೆ ಜೀಯಿಂ

ದೆನೆಗೆ ಬೆಸಸಾ ಸಾಕು ಭಂಡರ ಬೈದು ಫಲವೇನು

ದಿನಪ ದೀವಿಗೆಯಾಗಲುಳಿದೀ

ಬಿನುಗು ಬೆಳಗಿನ ಹಂಗು ಬೇಹುದೆ

ದನುಜ ದಿವಿಜರ ದಳಕೆ ತನ್ನನು ಬಿಟ್ಟು ನೋಡೆಂದ  ೩೯  

 

ತಳಿತುದೆಡಬಲವಂಕದಲಿ ಹೆ

ಬ್ಬಲ ಛಡಾಳಿಸಿ ಮೊರೆವ ಭೇರಿಯ

ಘುಳುಘುಳು ಧ್ವನಿ ಕೂಡೆ ಜಡಿದುದು ಕಮಲಜಾಂಡಘಟ

ಹಳವಿಗೆಯ ಸೀಗುರಿಯ ಚಮರಾ

ವಳಿಯ ವಿಮಳಚ್ಛತ್ರ ಪಂಙ್ತಿಯ

ವಳಯದಲಿ ನಭ ಮುಳುಗೆ ಮುತ್ತಿತು ಸೇನೆ ರಿಪುಭಟನ  ೪೦  

 

ತಿರುಹು ತೇಜಿಯನಿತ್ತಲಿವದಿರ

ನೊರಸಿ ದುಶ್ಯಾಸನನ ಬೆನ್ನಲಿ

ಕರುಳು ತೆಗೆವೆನು ನೋಡು ಸಾರಥಿ ಬೆಚ್ಚಬೇಡೆನುತ

ಅರಗಿನರಸನ ಬಾಗಿಲಲಿ 

ಳ್ಳುರಿಗೆ ತಡವೇ ಹೊಕ್ಕು ನಿಮಿಷದೊ

ಳೊರಸಿದನು ಚತುರಂಗ ಬಲವನು ಕೌರವಾನುಜನ  ೪೧  

 

ಎಲವೊ ಕೌರವ ಕೊಬ್ಬಿ ನರಿ ಹೆ

ಬ್ಬುಲಿಯ ಕೂಸನು ಬೇಡುವಂದದಿ

ಅಳವನರಿಯದೆ ಅಧಮ ರಥಿಕರ ಕೂಡೆ ತೊಡಕುವರೆ

ಮಲೆತು ನೀನೆನ್ನೊಡನೆ ರಣದಲಿ

ಹಳಚಿ ನೀ ತಲೆವೆರಸಿ ಮರಳಿದ

ಡಿಳುಹುವೆನು ಕೈದುವನು ಶರಸನ್ಯಾಸ ನನಗೆಂದ  ೪೨  

 

ಸಾಕು ತರುವಲಿತನದ ಮಾತುಗ

ಳೇಕೆ ಗರುವರ ಮುಂದೆ ವೀರೋ

ದ್ರೇಕದಲಿ ಮೈಮರೆದು ರಣದಲಿ ಹೊಯ್ದು ಹೊಟ್ಟುಗರ

 ಕಿರೀಟಿ ವೃಕೋದರರು ಮೈ

ಸೋಕಿದರೆ ಸಂತೋಷ ನೀನವಿ

ವೇಕಿ ಬಾಲಕನೇನ ಮಾಡುವೆನೆಂದನವ ನಗುತ  ೪೩  

 

ಕೊಳಚೆ ನೀರೊಳಗಾಳುತೇಳುತ

ಜಲಧಿ ಕಾಲ್ವೊಳೆಯೆಂಬ ಭಂಡರ

ಮುಳಿದು ಮಾಡುವುದೇನು ಮೊದಲಲಿ ನಮ್ಮ ನೀ ಗೆಲಿದು

ಬಳಿಕ ಭೀಮಾರ್ಜುನರ ಬಯಸುವು

ದೆಲೆ ಮರುಳೆ ನಿನ್ನೊಡಲ ಸೀಳಿಯೆ

ತಿಳಿರಕುತದಲಿ ತಾಯ ತುರುಬನು ನಾದಿಸುವೆನೆಂದ  ೪೪  

 

ಕಾತರಿಸದಿರು ಬಾಲಭಾಷೆಗ

ಳೇತಕಿವು ನೀ ಕಲಿತ ಬಿಲು ವಿ

ದ್ಯಾತಿಶಯವುಂಟಾದಡೆಮ್ಮೊಳು ತೋರು ಕೈಗುಣವ

ಭೀತಭಟರನು ಹೊಳ್ಳುಗಳೆದ 

ದಾತಿರೇಕದ ಠಾವಿದಲ್ಲೆಂ

ದೀತನೆಚ್ಚನು ನೂರು ಬಾಣದಲಿಂದ್ರಸುತ ಸುತನ  ೪೫  

 

ಬಿಲ್ಲ ಹಿಡಿಯಲು ಕೌರವಾನುಜ

ಬಲ್ಲ ನೋಡೈ ಸೂತ ಮಿಗೆ 

ಪ್ಪಲ್ಲ ತಪ್ಪಲ್ಲಂಬು ಬಿದ್ದವು ಗುರಿಯ ಸರಿಸದಲಿ

ನಿಲ್ಲು ನಿಲ್ಲಾದರೆಯೆನುತ ಬಲು

ಬಿಲ್ಲಲುಗುಳಿಸಿದನು ಶರೌಘವ

ನೆಲ್ಲಿ ನಭ ದೆಸೆಯೆತ್ತಲೆನೆ ಘಾಡಿಸಿದವಂಬುಗಳು  ೪೬  

 

ಅವನ ನೂರಂಬುಗಳ ಕಡಿದವ

ನವಯವವ ಕೀಲಿಸಿದಡಾಕ್ಷಣ

ವವನಿಯಲಿ ಬಲುಗರುಳು ಬಿದ್ದವು ಭಟನ ಕಿಬ್ಬರಿಯ

ಅವಗಡಿಸಿ ಖಾತಿಯಲಿ ಖಳ ಶರ

ನಿವಹವನು ತುಡುಕಿದನು ಕೊಡಹಿದ

ವವನ ನಿಮಿಷದೊಳರ್ಜುನಾತ್ಮಕನಗಣಿತಾಸ್ತ್ರಗಳು     ೪೭  

 

ತಾಯ ತುರುಬಿಗೆ ಹಾಯ್ದ ಪಾತಕಿ

ನಾಯ ಕೊಂಡಾಡುವರೆ ಕೊಬ್ಬಿದ

ಕಾಯವನು ಕದುಕಿರಿದು ನೆತ್ತರ ನೊರೆಯ ಬಾಸಣಿಸಿ

ತಾಯ ಕರಸುವೆನೆನುತ ಕಮಳದ

ಳಾಯತಾಂಬಕನಳಿಯನನುಪಮ

ಸಾಯಕವ ಹೂಡಿದನು ನೋಡಿದನೊಂದು ಚಿತ್ತದಲಿ  ೪೮  

 

ಇವನ ಕೊಂದರೆ ತಂದೆ ಮಿಗೆ ಮೆ

ಚ್ಚುವನೊ ಮುನಿವನೊ ತನ್ನ ನುಡಿ ಸಂ

ಭವಿಸದೆಂಬನೊ ಭೀಮಸೇನನ ಭಾಷೆಗಂಜುವೆನು

ಇವನ ತಾನೇ ಕೊಲಲಿ ನಮಗಿ

ನ್ನಿವನ ತೊಡಕೇ ಬೇಡ ಕದನದೊ

ಳಿವನ ಭಂಗಿಸಿ ಬಿಡುವೆನೆಂದನು ತನ್ನ ಮನದೊಳಗೆ  ೪೯  

 

ಕಾಯ್ದುಕೊಳ್ಳೈ ಕೌರವಾನುಜ

ಹೊಯ್ದು ಹೋಗಲು ಬಹುದೆ ಹರನಡ

ಹಾಯ್ದಡೆಯು ಗೆಲುವೆನು ಕಣಾ ನಿಲ್ಲೆನುತ ತೆಗೆದೆಸಲು

ಬಾಯ್ದೆಗೆದು ಕೇಸುರಿಯ ಕಾರುತ

ಕೈದುವೆದೆಯಲಿ ಕೊಂಡು ಬೆನ್ನಲಿ            

 ಹಾಯ್ದಡವನೊರ್ಗುಡಿಸಿದನು ಕುರುಸೇನೆ ಕಳವಳಿಸೆ     ೫೦

    

ಅಹಹ ಕೈತಪ್ಪಾಯ್ತು ರಾಯನ

ಸಹಭವನು ನೊಂದನು ಶಿವಾ ಎನು

ತಹಿತ ಸುಭಟರು ಸರಿಯೆ ಸಾರಥಿ ತಿರುಹಿದನು ರಥವ

ಬಹಳ ಬಲ ನುಗ್ಗಾಯ್ತು ಶಿಶುವಿನ

ಸಹಸ ಕುಂದದೆನುತ್ತ ಖತಿಯಲಿ

ಮಿಹಿರಸುತನಡಹಾಯ್ದು ತಡೆದನು ಮತ್ತೆ ಬಾಲಕನ  ೫೧  

 

ಸಾರು ಸಾರಭಿಮನ್ಯು ಫಡಯಿ

ನ್ನಾರ ಬಸುರನು ಹೊಗುವೆ ನಿನ್ನವ

ರಾರ ಸಂತತಿ ಮಾಡಿಕೊಳಲಿ ಭವತ್ ಪರೋಕ್ಷದಲಿ

ಭೂರಿ ಬಲವನು ಸದೆವ ಗರ್ವವಿ

ದಾರ ಕೂಡೆ ಧನುರ್ಧರಾಗ್ರಣಿ

ವೀರ ಕರ್ಣ ಕಣಾಯೆನುತ ತೆಗೆದೆಚ್ಚನತಿರಥನ        ೫೨  

 

ಬಲ್ಲೆನುಂಟುಂಟಖಿಳ ವೀರರೊ

ಳಿಲ್ಲ ಸರಿದೊರೆ ನಿನಗೆ ಬಾಯಲಿ

ಬಲ್ಲಿದನು ನೀನಹೆ ಭಟಾಂಗದ ಮಾತದಂತಿರಲಿ

ಒಳ್ಳೆ ಗಡ ಪಾವುಡವ ವಾಸುಗಿ

ಯಲ್ಲಿಗಟ್ಟಿತು ಗಡ ಮಹಾಹವ

ಮಲ್ಲ ಮಡಮುರಿಯದಿರೆನುತ ಹೊಕ್ಕೆಚ್ಚನಭಿಮನ್ಯು  ೫೩  

 

ಇರುಳುರಾಯನ ಮನೆಗೆ ಕಪ್ಪವ

ತೆರುವುದೋ ಹಗಲೆಲವೊ ಕೆಲಬರ

ನಿರಿದ ದರ್ಪವದಾರೊಡನೆ ಫಡ ಮರಳು ಮರಳೆನುತ

ಕಿರುಮೊನೆಯ ಮುಗುಳಂಬುಗಳ ಸೈ

ಗರೆದನುಭಿಮನ್ಯುವಿನ ಮೆಯ್ಯಲಿ

ತುರುಗಿದವು ಮರಿದುಂಬಿ ಕೆಂದಾವರೆಗೆ ಕವಿವಂತೆ  ೫೪  

 

ಸುರಪನಂಕುಶವೌಕಿದರೆ ಮೆ

ಯ್ಯರಿಯದೈರಾವತಕೆ ಕಬ್ಬಿನ

ಲಿರಿದರಂಜಿಕೆಯುಂಟೆ ನಿನ್ನಯ ಕಣೆಗಳೌಕಿದರೆ

ತೆರಳುವನೆ ಅಭಿಮನ್ಯುವೆನುತ

ಬ್ಬರಿಸಿ ಕರ್ಣನ ಕಾಯವನು ಹುಗಿ

ಲಿರಿದನೆಂಟಂಬಿನಲಿ ತೋದುದು ತೇರು ರಕ್ತದಲಿ  ೫೫  

 

ಮಳೆಗೆ ಮೊಗದಿರುಹುವುದೆ ಬಡಬಾ

ನಳನೆಲವೊ ನಿನ್ನಂಬು ತಾಕಿದ

ರಳುಕುವೆನೆ ತಾನೆನುತ ರವಿಸುತನೆಚ್ಚನತಿರಥನ

ಹಿಳುಕು ಕವಿದವು ಭಟನ ಕೈ ಮೈ

ಗಳಲಿ ಮಿನುಗಿದವಿರುಳು ಮರನಲಿ            

 ಹೊಳೆದು ಮುತ್ತಿದ ಮಿಂಚುಬುಳುವಿನ ಮಿನುಗಿನಂದದಲಿ  ೫೬

 

ಹೂಣಿಗರು ಕೆಲರಿವರು ಇವದಿರ

ಗೋಣನರಿವರೆ ಇವರ ಜೀವದ

ಕೇಣಿಕಾರರು ಖಾತಿಗೊಂಬರು ಭೀಮ ಫಲುಗುಣರು

ಮಾಣರಿವದಿರು ಮತ್ತೆ ರಣದಲಿ

ಕಾಣೆನಿದಕಿನ್ನನುವನೆನುತ

ಕ್ಷೀಣಭುಜ ಬಲನೆಚ್ಚು ಕಡಿದನು ಸೂತಜನ ಧನುವ  ೫೭  

 

ಕೈದು ಮುರಿಯಲು ಮುಂದೆ ನೂಕದೆ

ಹಾಯ್ದನಾ ರವಿಸೂನು ಬಳಿಕಡ

ಹಾಯ್ದು ತಡೆದನು ಬವರವನು ಕರ್ಣಾತ್ಮಜನು ಕಡುಗಿ

ಐದು ಬಾಣದಲವನ ಕೊರಳನು

ಕೊಯ್ದನರ್ಜುನಸೂನುವಾತನ

ನೊಯ್ದರಂತಕದೂತರದ್ಭುತವಾಯ್ತು ಸಂಗ್ರಾಮ      ೫೮  

 

ಘಾಯವಡೆದನು ಶಲ್ಯ ರವಿಸುತ

ನಾಯುಧವ ಬಿಟ್ಟೋಡಿದನು ಕುರು

ರಾಯನನುಜನು ಬದುಕುವರೆ ಮೆಯ್ಯೆಲ್ಲ ಬಾದಣವು

ಸಾಯದುಳಿದವರಿಲ್ಲ ಮಿಕ್ಕಿನ

ನಾಯಕರೊಳಕಟೆನಲು ಕುರುಬಲ

ಬಾಯ ಬಿಡೆ ಶಲ್ಯನ ಕುಮಾರಕ ಹೊಕ್ಕನಾಹವವ              ೫೯  

 

 ಕುಮಾರನ ಸೇನೆ ಗಡಣಿಸಿ

ನೂಕಿತುರವಣಿಸಿದುದು ತುರಗಾ

ನೀಕವಿಭತತಿ ತೂಳಿದವು ತುಡುಕಿದವು ರಥನಿಕರ

ತೋಕಿದವು ಕೈದುಗಳ ಮಳೆ ರಣ

ದಾಕೆವಾಳರ ಸನ್ನೆಯಲಿ ಸಮ

ರಾಕುಳರು ಕೆಣಕಿದರು ರಿಪುಕಲ್ಪಾಂತ ಭೈರವನ        ೬೦  

 

ಭಟ ಛಡಾಳಿಸಿದನು ಘೃತಾಹುತಿ

ಘಟಿಸಿದಗ್ನಿಯವೋಲು ರಣ ಚೌ

ಪಟ ಚತುರ್ಬಲದೊಳಗೆ ಹೊಕ್ಕನು ಸಿಂಹನಾದದಲಿ

ನಿಟಿಲ ನೇತ್ರನ ಕೋಪಶಿಖಿ ಲಟ

ಕಟಿಸುವಂತಿರೆ ಹೆಚ್ಚಿದತಿ ಬಲ

ದಟವಿಯನು ಸವರಿದುದು ಪಾರ್ಥಕುಮಾರ ಶರಜಾಲ  ೬೧  

 

ಧರೆ ಬಿರಿಯೆ ಬೊಬ್ಬೆಯಲಿ ಬಲದ

ಬ್ಬರಣೆ ದೆಖ್ಖಾದೆಖ್ಖೆಯಾಗಲು

ಧರಣಿಪತಿ ಮರುಗಿದನು ಮಗನೇನಾದನೋ ಎನುತ

ಕರೆದು ಭೀಮನ ನಕುಳನನು ಸಂ

ಗರಕೆ ಧೃಷ್ಟದ್ಯುಮ್ನ ದ್ರುಪದರ

ಪರುಠವಿಸಿ ಕಳುಹಿದನು ಸೌಭದ್ರಂಗೆ ಪಡಿಬಲವ      ೬೨  

 

ಗದೆಯ ತಿರುಹುತ ಸಿಂಹನಾದದ

ಲೊದರಿ ಮಗನಾವೆಡೆಯೆನುತ ನೂ

ಕಿದನು ರಥವನು ತನ್ನ ಸೇನೆಗೆ ಸೀಗುರಿಯ ಬೀಸಿ

ಅದಟನೈತರೆ ಹೋಗಲೀಯದೆ

ಮೊದಲ ಬಾಗಿಲ ಕಟ್ಟಿಕೊಂಡ

ಗ್ಗದ ಜಯದ್ರಥ ಭೀಮನೊಳು ಬಲುಗಾಳೆಗವ ಹಿಡಿದ  ೬೩  

 

ತೆರಹುಗೊಡು ಫಡ ಫಡ ಜಯದ್ರಥ

ಹೆರತೆಗೆದು ಸಾರೆನುತ ಹೂಣಿಗ

ನುರುಬಿದರೆ ಮಾರಾಂತು ಭೀಮನ ಕಡುಹ ನಿಲಿಸಿದನು

ಮರೆದು ಕಳೆಯಭಿಮನ್ಯುವನು ಮೈ

ಮರೆಯದೆನ್ನಲಿ ಕಾದು ಮಾತಿನ

ಬಿರುಬಿನಲಿ ಫಲವಿಲ್ಲೆನುತ ಕೆಂಗೋಲ ತೊಡಚಿದನು  ೬೪  

 

ಬವರದಲಿ ಕಲಿ ಪಾರ್ಥನಲ್ಲದೆ

ಪವನತನಯಾದಿಗಳ ಗೆಲುವರೆ

ಶಿವನ ಕೃಪೆಯೆನಗುಂಟು ಮುನ್ನೆನುತಾ ಜಯದ್ರಥನು

ಕವಲುಗೋಲಲಿ ಭೀಮನನು ಪರಿ

ಭವಿಸಿದನು ಸಹದೇವ ನಕುಳರ

ತಿವಿದು ಧೃಷ್ಟದ್ಯುಮ್ನ ಮೊದಲಾದಗಣಿತರ ಗೆಲಿದ              ೬೫  

 

ಪಡಿಬಲವ ಬರಲೀಯದನಿಲಜ

ನೊಡನೆ ಸೈಂಧವ ಕಾದುತಿರಲಿ

ಮ್ಮಡಿಸಿತಾಹವವಿತ್ತ ಮೋಹರ ಮಧ್ಯ ರಂಗದಲಿ

ಕಡುಗಿ ನೂಕುವ ಕದನರಾಗಿಗ

ಳೊಡನೆ ಕಾದುವ ಪಾರ್ಥತನಯನ

ಬಿಡಿ ಸರಳು ಬೀರಿದವು ರಮಣರನಮರ ವಧುಗಳಿಗೆ  ೬೬  

 

ತರಿದನಾನೆಯ ಥಟ್ಟುಗಳ ಮು

ಕ್ಕುರುಕಿದನು ಕಾಂಭೋಜ ತೇಜಿಯ

ನುರುಬಿ ಹೊಯ್ದನು ಸೂನಿಗೆಯ ತೇರುಗಳ ತಿಂತಿಣಿಯ

ಮುರಿದನೊಗ್ಗಿನ ಪಾಯ್ದಳವನ

ಳ್ಳಿರಿವ ಹೆಣ ಕುಣಿದಾಡೆ ಭಟ ಬೇ

ಸರದೆ ಕೊಂದನು ವೈರಿಸೇನೆಯನರಸ ಕೇಳೆಂದ  ೬೭  

 

ಒರಸಿದನು ಹದಿನೆಂಟು ಸಾವಿರ

ಕರಿ ಘಟೆಯನೈವತ್ತು ಸಾವಿರ

ತುರಗವನು ಮೂವತ್ತು ಸಾವಿರ ವರ ಮಹಾರಥರ

ಧುರದಿ ಲಕ್ಷ ಪದಾತಿಯನು ಸಂ

ಹರಿಸಿ ಶಲ್ಯ ಕುಮಾರಕನ 

ತ್ತರಿಸಿದನು ಗೋನಾಳಿಯನು ದಿವ್ಯಾಸ್ತ್ರ ಧಾರೆಯಲಿ             ೬೮  

 

ಮಡಿದನಕಟಾ ತಮ್ಮ ಸಖನೆಂ

ದಡಸಿದಳಲಿನೊಳೆದ್ದು ಕೋಪದ

ಕಡುಝಳದ ಕಾಲಾಗ್ನಿ ರುದ್ರನ ಕಣ್ಣ ಹೋಲುವೆಯ

ಸಿಡಿದ ಮೀಸೆಯ ಬಿಗಿದ ಹುಬ್ಬಿನ

ಜಡಿವ ರೋಮಾಂಚನದ ಖಾತಿಯ

ಕಡುಹುಕಾರರು ಮಸಗಿದರು ದುರ್ಯೋಧನಾತ್ಮಕರು  ೬೯  

 

ಚಂಡ ಭುಜಬಲನೊಡನೆ ಮಕ್ಕಳ

ತಂಡವೆದ್ದುದು ಬಿಗಿದ ಬಿಲ್ಲಿನ

ದಂಡವಲಗೆಯ ಮುಸುಡಿ ಮುದ್ಗ ಕಠಾರಿಯುಬ್ಬಣದ

ಗಂಡುಗಲಿಗಳು ಕವಿದರದಿರುವ

ಖಂಡೆಯದ ಮುಡುಹುಗಳ ಗಂಧದ

ಮಂಡನದ ಮೈಸಿರಿಯ ಪರಿಮಳ ಪೂರರೊಗ್ಗಿನಲಿ  ೭೦  

 

ತಳಿತ ಸತ್ತಿಗೆಗಳ ವಿಡಾಯಿಯ

ಲೊಲೆವ ಚಮರಿಯ ವಜ್ರ ಮಕುಟದ

ಹೊಳಹುಗಳ ಹೊಗೆ ಮೀಸೆಗೆದರಿನ ಬಿರುದಿನುಬ್ಬಟೆಯ

ಕೆಲಬಲದ ವೇಲಾಯತರ ವೆ

ಗ್ಗಳದ ರಾವ್ತರ ಗಡಣ ನಾಲಗೆ               

 ದಳೆದುದೆನೆ ಹೊಳೆಹೊಳೆವಡಾಯುಧ ಭಟರು ನೂಕಿದರು ೭೧


ಭಾಪುರೇ ಕೌರವನ ಸುತರಾ

ಟೋಪವೊಳ್ಳಿತು ಬಂದ ಬರವಿನ

ಚಾಪಳದಲೊದಗಿದರೆ ಲೇಸಲ್ಲಿದರ ಫಲವೇನು

ಕಾಪುರುಷರೇ ಕಾಣಬಹುದೆಂ

ದಾ ಪುರಂದರಸುತನ ಸುತ ನಿಜ

ಚಾಪವನು ನೇವರಿಸುತಿದ್ದನು ಬಗೆಯದರಿಬಲವ  ೭೨  

 

ಮಗುಳದಿರು ಶಲ್ಯಾತ್ಮಕನನುಗು

ಳುಗುಳು ನಿನ್ನಯ ಬಸಿರ ಸೀಳಿಯೆ

ತೆಗೆವೆವೆಮ್ಮಯ ಸಖನನೆನುತಾ ಲಕ್ಷಣಾದಿಗಳು

ತೆಗೆದೆಸುತ ಮೇಲಿಕ್ಕಿದರು ತಾ

ರೆಗಳು ನೆಣಗೊಬ್ಬಿನಲಿ ರಾಹುವ

ತೆಗೆದು ಬದುಕಲು ಬಲ್ಲವೇ ಧೃತರಾಷ್ಟ್ರ ಕೇಳೆಂದ  ೭೩  

 

ದಿಟ್ಟರೋ ಲಕ್ಷಣನವರು ಜಗ

ಜಟ್ಟಿಗಳಲಾ ರಾಜಕುಲದಲಿ

ಹುಟ್ಟಿದರೆ ಕೆಲರೀಸು ಚಪಳತೆ ಯಾರಿಗುಂಟೆನುತ

ಕಟ್ಟಿದನು ಕಣೆಗಳಲಿ ಸುತ್ತಲು

ತಟ್ಟಿವಲೆಗಳ ಸೋಹಿನಲಿ ಬೆ

ನ್ನಟ್ಟಿ ಪಾರ್ಥಕುಮಾರ ಸದೆದನು ವೈರಿಮೃಗ ಕುಲವ  ೭೪  

 

 ಸುಯೋಧನಸುತರ ಸರಳ ವಿ

ಳಾಸವನು ಖಂಡಿಸಿದನವದಿರ

ಬೀಸರಕೆ ಬಂದಡ್ಡಬೀಳುವ ಭಟರ ಕೆಡೆಯೆಚ್ಚ

ರೋಷವಹ್ನಿಯ ಕೆದರೆ ಕವಿವ 

ಹೀಶರನು ಮಾಣಿಸಿದನವನೀ

ವಾಸವನು ವಾಸವನ ಮೊಮ್ಮನುದಾರ ಸಮರದಲಿ  ೭೫  

 

ಫಡ ಕುಮಾರಕ ದೊದ್ದೆಗರ ಸದೆ

ಬಡಿದ ಗರ್ವಿತತನವಕಟ 

ಮ್ಮೊಡನೆಯೇ ನೋಡಿಲ್ಲಿ ಮೇಳವೆ ಸಾರು ಸಾರೆನುತ

ಒಡನೊಡನೆ ನಾರಾಚ ನಿಚಯವ

ಗಡಣಿಸಿದರೇನೆಂಬೆನವರು

ಗ್ಗಡದ ಬಿಲು ವಿದ್ಯಾತಿಶಯವನು ಸಮರಭೂಮಿಯಲಿ  ೭೬  

 

ಸರಳ ಮೊನೆಯಲಿ ವೈರಿ ಸುಭಟರ

ಕರುಳ ತೆಗೆದನು ರಣದೊಳಾಡುವ

ಮರುಳ ಬಳಗವ ತಣಿಸಿದನು ಕಡಲಾದುದರುಣ ಜಲ

ತರಳನರೆಯಟ್ಟಿದನು ಧುರದಲಿ

ದುರುಳ ದುರಿಯೋಧನನ ಮಕ್ಕಳ

ಮರಳಲೀಯದೆ ಭಟರ ಕೇಣಿಯ ಕೊಂಡನಭಿಮನ್ಯು  ೭೭  

 

ಉರಗನಿಕ್ಕಡಿಗಾರ ಹುಲ್ಲಿನ

ಸರವಿಗಂಜುವುದುಂಟೆ ಕರ್ಣಾ

ದ್ಯರನು ಕಡ್ಡಿಗೆ ಬಗೆಯನೀ ಹೂಹೆಗಳ ಗಣಿಸುವನೆ

ಎರಡು ಶರದಲಿ ಲಕ್ಷಣನ ಸಂ

ಹರಿಸಿದನು ಹದಿನೈದು ಬಾಣದ

ಲರಿದನುಳಿದ ಕುಮಾರಕರನಭಿಮನ್ಯು ನಿಮಿಷದಲಿ  ೭೮  

 

ತಳಿತ ಚೂತದ ಸಸಿಗಳವನಿಗೆ

ಮಲಗುವಂತಿರೆ ರಾಜಪುತ್ರರು

ಹೊಳೆವ ಪದಕದ ಕೊರಳ ತಲೆಗಿಂಬಾದ ತೋಳುಗಳ

ಬಳಿರಕುತದಲಿ ನನೆದ ಸೀರೆಯ

ತಳಿತ ಖಂಡದ ಬಿಗಿದ ಹುಬ್ಬಿನ

ದಳಿತ ದಂಷ್ಟ್ರಾನನದಲೆಸೆದರು ಸಾಲ ಶಯನದಲಿ  ೭೯  

 

ಇಕ್ಕಿದಿರಲಾ ರಾಜಪುತ್ರರ

ನಕ್ಕಟಕಟಾ ಸ್ವಾಮಿದ್ರೋಹರು

ಹೊಕ್ಕಮನೆ ಹಾಳಹುದಲಾ ದ್ರೋಣಾದಿ ನಾಯಕರು

ಹಕ್ಕಲಾದುದು ನಮ್ಮ ಬಲ ಶಿಶು

ಸಿಕ್ಕನಿನ್ನೂ ಪಾಂಡವರ ಪು

ಣ್ಯಕ್ಕೆ ಸರಿಯಿಲ್ಲೆನುತ ಕೌರವರಾಯ ಗರ್ಜಿಸಿದ       ೮೦  

 

ಕುಲವ ನೋಡಿದಡಿಲ್ಲ ತನ್ನಯ

ಬಲುಹ ನೋಡಿದಡಿಲ್ಲ ಕದನದೊ

ಳುಳಿವ ನೋಡಿದರಿಲ್ಲಲಾ ಪತಿಯೆಂಬ ಪಾತಕಿಯ

ಇಳೆಯೊಳೋಲೆಯಕಾರರೆಂಬರ

ತಲೆಗೆ ತಂದನು ತೃಣವನೆಂದ

ಗ್ಗಳೆಯರನು ಮೂದಲಿಸಿ ಬಯ್ದನು ಸುಯ್ದು ಕುರುರಾಯ  ೮೧  

 

ಕೇಳುತಿದ್ದರು ಪತಿಯ ಮೂದಲೆ

ಗಾಳಿಯಲೆ ದಳ್ಳಿಸುವ ಶೌರ‍್ಯ

ಜ್ವಾಲೆ ಜಡಿದುದು ಖಾತಿಯಲಿ ಹೊಗರೇರಿದಾನನದ

ಆಳುತನವುಬ್ಬೆದ್ದು ಕಡು ಹೀ

ಹಾಳಿಕಾರರು ಕೈದುಕೊಂಡರು

ಬಾಲಕನ ತರುಬಿದರು ದೊರೆಗಳು ಕೇಳು ಧೃತರಾಷ್ಟ್ರ  ೮೨


ಸಂಕ್ಷಿಪ್ತ ಭಾವ


ಅಭಿಮನ್ಯುವು ಸಾಹಸದಿಂದ ಹೋರಾಡಿ ಹಲವಾರು ರಾಜಕುಮಾರರನ್ನು ಸಂಹರಿಸಿದುದು.


ಅಭಿಮನ್ಯುವು ಕೆಡವಿದ ದಳಕ್ಕೆ ಲೆಕ್ಕವೇ ಇಲ್ಲಮಕ್ಕಳಾಟಿಕೆಯೆಂದು ಭಾವಿಸಿದ್ದುಮಾರಿಯಾದಂತಾಯಿತು ಕೌರವರಿಗೆಕಾಲಾಳುಗಳು ತೊಲಗಲಿಕರ್ಣಾದಿಗಳು ಮುಂದೆ ಬರಲಿಎಂದು ಅಭಿಮನ್ಯು ಗರ್ಜಿಸಿದನುಇವನ ಪರಾಕ್ರಮವನ್ನು ಕಂಡ ದುರ್ಯೋಧನನೂ ತಲೆದೂಗಿದಇಂತಹ ಸಾಹಸಿಯನ್ನು ಹಡೆದವರು ಪುಣ್ಯವಂತರೆಂದಎಲ್ಲರನ್ನೂ ಹುರಿದುಂಬಿಸುತ್ತಅಭಿಮನ್ಯುವಿಗೆ ನೀನಿನ್ನೂ ಮಗುಸುಮ್ಮನೆ ಜೀವ ಉಳಿಸಿಕೊಂಡು ಹೊರಟುಹೋಗು ಎಂದನುಆದರೆ ತನ್ನ ಬಾಣಕ್ಕೆ ಮಗುವುತನವಿಲ್ಲವೆಂದು ಉತ್ತರಿಸಿ ಹೋರಾಡತೊಡಗಿದನು ಪಾರ್ಥನಂದನ.


ತಕ್ಷಣ ದ್ರೋಣರು ಶಲ್ಯಕೃತವರ್ಮಕರ್ಣಕೃಪ ಮುಂತಾದವರನ್ನು ದುರ್ಯೋಧನನ ರಕ್ಷಣೆಗೆಕಳಿಸಿದನುಆದರೆ ಇವನು ಅವರೆಲ್ಲರನ್ನೂ ಗೆಲಿದನುಕರ್ಣ ಬಳಲಿದನುಅವರೆಲ್ಲ ಇವನನ್ನುಬಾಲಕನೆಂದು ಕರೆದಷ್ಟೂ ಇವನ ಪರಾಕ್ರಮ ಹೆಚ್ಚುತ್ತಿತ್ತುಶಲ್ಯನು ತಲೆತಿರುಗಿ ತುಟಿಯೊಣಗಿಬೀಳಲು ಅವನ ಸಾರಥಿ ರಥವನ್ನು ಹಿಂದೆ ತಂದಶಲ್ಯನ ತಮ್ಮ ಮುಂದೆ ಬರಲು ಅವನ ಶಿರವನ್ನುತರಿದದ್ರೋಣರು ಅಭಿಮನ್ಯುವನ್ನು ಹೊಗಳಲು ಕೌರವರಾಯ ಖತಿಗೊಂಡು ಮೂದಲಿಸಿದಆಗದುಶ್ಶಾಸನನು ಹೊರಟಅವನನ್ನೂ ಅಭಿಮನ್ಯುವಿನ ಬಾಣಗಳು ಕಂಗೆಡಿಸಿದವುಇವನನ್ನುಕೊಲ್ಲಲು ಭೀಮ ಪ್ರತಿಜ್ಞೆ ಮಾಡಿದ್ದು ನೆನಪಾಗಿ ಕೊಲ್ಲದೇ ಉಳಿಸಿದ.


ಕರ್ಣನ ಮಗನನ್ನು ಅಂತಕನಲ್ಲಿಗೆ ಕಳಿಸಿದನುದುರ್ಯೋಧನನ ಮಗ ಲಕ್ಷಣಕುಮಾರನನ್ನುಮತ್ತು ಶಲ್ಯನ ಮಗನನ್ನೂ ಇತರ ರಾಜಕುಮಾರರನ್ನೂ ಸಾಯಿಸಿದನುಧರ್ಮಜನು ಕಳಿಸಿದಬಲವನ್ನು ಒಳಹೊಗಲು ಬಿಡದೆ ತಡೆದ ಜಯದ್ರಥನು ತಾನು ಪಡೆದ ವರದ ಬಲದಿಂದ ಅವರನ್ನುಗೆಲಿದನುಅವರಾರಿಗೂ ಪದ್ಮವ್ಯೂಹದ ಒಳಗೆ ಹೋಗಲು ಆಗಲಿಲ್ಲಸುತರ ಮರಣವಾರ್ತೆದುರ್ಯೊಧನನನ್ನು ಕೆರಳಿಸಿತುಕೊನೆಗೆ ಎಲ್ಲರೂ ಸೇರಿ ಬಾಲಕನನ್ನು ತರುಬಿದರು.




ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ