ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶ್ರೀಮಾಲಾ ಮೂರ್ತಿ


 ಶ್ರೀಮಾಲಾ ಮೂರ್ತಿ


ಡಾ. ಶ್ರೀಮಾಲಾ ಮೂರ್ತಿ ಅಮೆರಿಕದಲ್ಲಿ ಭಾರತೀಯ ಯೋಗ, ಸಾಹಿತ್ಯ, ಸಂಸ್ಕೃತಿಗಳನ್ನು ಆಪ್ತವೃತವೆಂಬಂತೆ ಪೋಷಿಸಿಕೊಂಡು ಬಂದಿರುವ ವಿಶಿಷ್ಟರು.

ವೃತ್ತಿಯಿಂದ ವೈದ್ಯರಾದ ಶ್ರೀಮಾಲಾ ಸಂಗೀತಜ್ಞೆ.  ವೀಣಾವಾದಕಿ.  ಕನ್ನಡ ಸಾಹಿತ್ಯ ಪ್ರೇಮಿ.  ಭಾರತೀಯ ಯೋಗ ಮತ್ತು ಸೂರ್ಯ ನಮಸ್ಕಾರ ಅಭಿಯಾನಗಳಲ್ಲಿ ಅವರ ಮತ್ತು ಅವರ ಕುಟುಂಬದ್ದು ಅಪಾರ ಸಾಧನೆ ಮತ್ತು ಸೇವೆ.    

ಶ್ರೀಮಾಲಾ ಅಮೆರಿಕದಲ್ಲಿರುವ ಭಾರತೀಯ ಹೃನ್ಮನಗಳು ತಮ್ಮಲ್ಲಿ  ಅಂತರ್ಗತವಾಗಿರುವ ಭಾರತೀಯ ಸಾಂಸ್ಕೃತಿಕ  ಒಲವನ್ನು  ನಿರಂತರವಾಗಿ ಕಂಡುಕೊಳ್ಳಲು ಸ್ಥಾಪಿಸಿಕೊಂಡಿರುವ ಕೈಗನ್ನಡಿಯೋಪಾದಿಯ ಒಕ್ಕೂಟ ‘ಹಿಂದೂ ಸ್ವಯಂಸೇವಕ ಸಂಘ’ದ ಇಂಡಿಯಾನಾ ವಿಭಾಗದ ಸಂಚಾಲಕಿ. ಈ ಒಕ್ಕೂಟ  ನಡೆಸುತ್ತಿರುವ ಸಾಮೂಹಿಕ  ಚಟುವಟಿಕೆಗಳು ವೈವಿಧ್ಯಪೂರ್ಣವಾಗಿವೆ.  ಈ ಚಟುವಟಿಕೆಗಳಲ್ಲಿ  ಪ್ರಮುಖವಾದುದು ಅಮೆರಿಕದಲ್ಲಿರುವ ಭಾರತೀಯರನ್ನು ಮಾತ್ರವಲ್ಲದೆ  ಅಮೆರಿಕದಲ್ಲಿರುವ ವಿಶ್ವದೆಲ್ಲೆಡೆಯ  ಜನಾಂಗವನ್ನು ಆಕರ್ಷಿಸಿರುವ  ‘ಸೂರ್ಯನಮಸ್ಕಾರ ಅಭಿಯಾನ’.   ಈ ಒಕ್ಕೂಟವು ಕಳೆದ 16 ವರ್ಷಗಳಿಂದ  ತಾನು ಕೈಗೊಂಡಿರುವ ‘ಸೂರ್ಯನಮಸ್ಕಾರ ಯಜ್ಞ’ದಲ್ಲಿ ಅಸಂಖ್ಯಾತ ವಿಶ್ವಸಮೂಹವನ್ನು ಪಾಲ್ಗೊಳ್ಳುವಂತೆ ಮಾಡುತ್ತಿದೆ.  ಜೊತೆಗೆ ಭಾರತೀಯ ಯೋಗವನ್ನು ಜನಪ್ರಿಯಗೊಳಿಸುವ ಕೆಲಸವನ್ನೂ ನಿರಂತರವಾಗಿ ಮಾಡುತ್ತಿದೆ.

ಶ್ರೀಮಾಲಾ ಅವರು ಅಮೆರಿಕದಲ್ಲಿರುವ ಭಾರತೀಯ ಸಮುದಾಯದ ಮಕ್ಕಳಲ್ಲಿ ಭಾರತೀಯ  ಸಂಸ್ಕಾರಗಳನ್ನು ಜೀವಂತವಾಗಿರಿಸುವ ‘ಬಾಲ ಪ್ರಮುಖ್’ ಅಭಿಯಾನದ ಬಾಲಪ್ರಮುಖ ನೇತೃತ್ವವನ್ನೂ ಸಹಾ ಅತ್ಯಂತ ಅಕ್ಕರೆ ಹಾಗೂ ಆತ್ಮೀಯ ಸಾಂಸ್ಕೃತಿಕ ಕಾಳಜಿಗಳಿಂದ  ನಿರ್ವಹಿಸುತ್ತಿದ್ದಾರೆ. 

ಸರ್ವಧರ್ಮ, ಸರ್ವ ಪ್ರಾಂತೀಯ, ಸರ್ವದೇಶೀಯ, ಸರ್ವ ಸಂಸ್ಕೃತಿಗಳ ನಡುವೆ ಸೇತುವೆಯಂತಿರುವ ‘ Centre for Interfaith cooperation' ಚಟುವಟಿಕೆಗಳಲ್ಲೂ ಶ್ರೀಮಾಲಾ ಸಕ್ರಿಯರಾಗಿದ್ದಾರೆ.

ಶ್ರೀಮಾಲಾ ಅವರ ಈ ಸಾಂಸ್ಕೃತಿಕ ಸಹಭಾಗಿತ್ವದಲ್ಲಿ ಅವರ ಪತಿ ಉದಯ್ ಮೂರ್ತಿ ಮತ್ತು ಅವರ ಇಬ್ಬರ ಮಕ್ಕಳೂ ಭಾಗಿ.  ಜೊತೆಗೆ ಯೋಗ, ಸೂರ್ಯನಮಸ್ಕಾರ ಮತ್ತು ಭಾರತೀಯ ಸಂಸ್ಕೃತಿಗಳ ಸರ್ವತೋಮುಖ ಅನುಷ್ಠಾನಕ್ಕೆ ನಿಷ್ಠರಾಗಿದ್ದ ಅವರ ತಂದೆ ಅವರಿಗೆ ನಿರಂತರ ಸ್ಪೂರ್ತಿ. 

ಎಲ್ಲೇ ಇದ್ದರೂ ನಮ್ಮ ಭಾರತೀಯ ಸಂಸ್ಕೃತಿಯನ್ನು ಜೀವಂತವಾಗಿರಿಸಿರಲು ಅನನ್ಯ ಕಾಳಜಿ ವಹಿಸಿರುವ  ಹಿಂದೂ ಸ್ವಯಂಸೇವಕ ಸಂಘದಂತ ಒಕ್ಕೂಟದಲ್ಲಿ  ಅಪಾರ ಪ್ರೀತಿ ಉತ್ಸಾಹಗಳಿಂದ ಸಂಘಟನಾ ಕಾರ್ಯದಲ್ಲಿ ತೊಡಗಿರುವ ಶ್ರೀಮಾಲಾ ಮೂರ್ತಿ ಅವರ  ನಿಷ್ಠೆ ನಮ್ಮನ್ನು ಅಪಾರವಾಗಿ ಪ್ರೇರಿಸುವಂತದ್ದು.  ‘ವಸುಧೈವ ಕುಟುಂಬಕಂ’ ಎಂಬ  ವಿಶ್ವವೆಲ್ಲಾ ಒಂದೇ ಕುಟುಂಬ ಎಂಬ ನಮ್ಮ ಭಾರತೀಯ  ಶ್ರೇಷ್ಠಕಲ್ಪನೆ ಸಾಕಾರಗೊಳ್ಳಲು ಇಂತಹ ಶ್ರೇಷ್ಠ ಕಾಯಕಗಳು ಬಹು ಮುಖ್ಯವಾದದ್ದು. 

ಸಾಂಸ್ಕೃತಿಕ ಭಾವಗಳು ಎಲ್ಲಿ ಕಂಡರೂ ಆಪ್ತವಾಗಿ ಕಾಣುವ ಶ್ರೀಮಾಲಾ ನನಗೆ 'ಕನ್ನಡ ಸಂಪದ' ಪುಟ ಪ್ರಾರಂಭವಾದಾಗಿನಿಂದ ನಿರಂತರವಾಗಿ ಅಕ್ಕರೆಯ ಬೆಂಬಲವಾಗಿ ನಿಂತು, ಹೃದಯತುಂಬಿ ಅಣ್ಣಾ ಎಂದು ಕರೆಯುತ್ತಾ ನನಗೊಂದು ವಿಶೇಷ‍ ಭಾಗ್ಯ ನೀಡಿದ್ದಾರೆ.

ಆತ್ಮೀಯ ಸಹೋದರಿ ಶ್ರೀಮಾಲಾ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. 

Happy birthday Sreemala Murthy 🌷🌷🌷 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ