ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸಾಂಕೃತ್ಯಾಯನ


 ರಾಹುಲ ಸಾಂಕೃತ್ಯಾಯನ 


ರಾಹುಲ ಸಾಂಕೃತ್ಯಾಯನರು ಭಾರತೀಯ ಪ್ರವಾಸೀ ಸಾಹಿತ್ಯದ ಪಿತಾಮಹ ಎಂದು ಪ್ರಖ್ಯಾತರು. ಪ್ರವಾಸದ ಅನುಭವಗಳನ್ನು ಸಾಹಿತ್ಯರೂಪಕ್ಕೆ ತಂದ ಪ್ರಧಾನರೆಂದು ಅವರನ್ನು ಸಾಹಿತ್ಯಲೋಕ ಗೌರವಿಸುತ್ತಾ ಬಂದಿದೆ.  ಭಾರತದಲ್ಲಿ ಅತಿ ಹೆಚ್ಚು ಸಂಚಾರ ಮಾಡಿದ ಮಹಾನ್ ಪಂಡಿತರೆಂದು ಪ್ರಸಿದ್ಧರಾದ ರಾಹುಲ ಸಾಂಕೃತ್ಯಾಯನರು ಮನೆ ಬಿಟ್ಟು ಸುಮಾರು 45ವರ್ಷಗಳ ಕಾಲ ಅಧ್ಯಯನ, ಜ್ಞಾನಾರ್ಜನೆಗಾಗಿ ಸುತ್ತಾಟ ನಡೆಸಿ ತಮ್ಮ ಅನುಭವ ಮತ್ತು ಅನುಭಾವಗಳಿಗೆ ವೈಚಾರಿಕ ಸಾಹಿತ್ಯ ಸ್ಪರ್ಶ ತಂದರು. 

ರಾಹುಲ ಸಾಂಕೃತ್ಯಾಯನ ಅವರು 1893 ವರ್ಷದ ಏಪ್ರಿಲ್ 9 ರಂದು ಉತ್ತರ ಪ್ರದೇಶದ ಅಜಮ್‌ಗಡ್ ಜಿಲ್ಲೆಯ ಪಂದಾಹ ಗ್ರಾಮದಲ್ಲಿ ಜನಿಸಿದರು. ರಾಹುಲರ ಬಾಲ್ಯದ ಹೆಸರು ಕೇದಾರನಾಥ ಪಾಂಡೆ.  ಅವರ ತಂದೆ ಗೋವರ್ಧನ್ ಪಾಂಡೆ ಮತ್ತು ತಾಯಿ ಕುಲವಂತಿ ಅವರು.

ರಾಹುಲ ಸಾಂಕೃತ್ಯಾಯನ ಅವರು ಆರಂಭದಲ್ಲಿ ಸ್ವಾಮಿ ದಯಾನಂದ ಸರಸ್ವತಿಯವರ ಅನುಯಾಯಿ ಆಗಿದ್ದರು. ಮುಂದೆ ನಾನಾ ಪಂಥಗಳಿಗೆ ಮಾರುಹೋಗಿ ವೈಷ್ಣವ ಸಾಧುವಾಗಿ, ಮಠಾಧಿಪತಿಯಾಗಿ, ಸನ್ಯಾಸಿಯಾಗಿ, ಬೌದ್ಧ ಭಿಕ್ಷುವಾಗಿ ಅದೆಲ್ಲದರ ಆದಿ ಅಂತ್ಯವನ್ನೆಲ್ಲ ತಿಳಿದು ಕೊನೆಗೆ ಅವೆಲ್ಲದ್ದರಿಂದ ರೋಸಿ ಹೋಗಿ 'ಭಾಗೋ ನಹಿ ದುನಿಯಾಕೋ ಬದಲೋ' (ಓಡಬೇಡಿ...ಜಗತ್ತನ್ನು ಬದಲಿಸಿ) ಎಂದು ಹೇಳುತ್ತಾ  ಮಾರ್ಕ್ಸ್‌ವಾದದ ವೈಜ್ಞಾನಿಕ ಅನಿವಾರ್ಯತೆಯನ್ನು ಮನಗಂಡು ಮತ್ತೆ ಜೀವನದುದ್ದಕ್ಕೂ ಸೃಜನಾತ್ಮಕ, ಕ್ರಿಯಾತ್ಮಕ ಮಾರ್ಕ್ಸ್‌ವಾದಿಯಾಗಿ, ರೈತ, ಕಾರ್ಮಿಕ ಹೋರಾಟಗಾರನಾಗಿಯೂ ಬದುಕು ನಡೆಸಿದರು. 

‘ವೋಲ್ಗಾ ಸೇ ಗಂಗಾ ತಕ್’ ಅವರ ಪ್ರಮುಖ ಕೃತಿಗಳಲ್ಲಿ ಒಂದು. ಇದನ್ನು ಬಿ.ಎನ್.ಶರ್ಮ ‘ವೋಲ್ಗಾ-ಗಂಗಾ’ ಎಂದು ಕನ್ನಡಕ್ಕೆ ಅನುವಾದಿಸಿದ್ದಾರೆ. ‘ಸಿಂಹ ಸೇನಾಪತಿ’ಯೂ ಕನ್ನಡಕ್ಕೆ ಬಂದಿದೆ. 'ನಿನ್ನ ಕ್ಷಯ’ (ತುಮ್ಹಾರೀ ಕ್ಷಯ್) ಎಂಬ ಅವರ ಕೃತಿ ಆರು ದಶಕಗಳ ಹಿಂದೆ ಬರೆದದ್ದು. ಅದರಲ್ಲಿನ ‘ನಿನ್ನ ಧರ್ಮದ ಕ್ಷಯ’ (ತುಮ್ಹಾರೀ ಧರಮ್ ಕೀ ಕ್ಷಯ್) ಎಂಬ ಅಧ್ಯಾಯ ಸಾರ್ವಕಾಲಿಕವಾಗಿ ಪ್ರಸ್ತುತ. 

ಸಾಂಕೃತ್ಯಾಯನ ಅವರು  36 ಭಾಷೆಗಳನ್ನು ಅಭ್ಯಸಿಸಿದ ಕೋವಿದ. 150ಕ್ಕೂ ಹೆಚ್ಚಿನ ಗ್ರಂಥಗಳನ್ನು ರಚಿಸಿದವರು. ಅವರು ಸಂಪಾದಿಸಿದ ಎಷ್ಟೋ ಕೃತಿಗಳು ಬರಹ, ಡೈರಿಗಳು ಇನ್ನೂ ಮುದ್ರಣ ಕಂಡಿಲ್ಲ. ಅವರು ಗ್ರಂಥಗಳಿಗೆ ಬಳಸಿದ ಭಾಷೆ ಹಿಂದಿ, ಸಂಸ್ಕೃತ, ಬೋಜ್, ಪಾಲಿ ಮತ್ತು ಭೋಜಪುರಿ. ರಾಹುಲ್ ಅವರು ತತ್ವಶಾಸ್ತ್ರ, ಕತೆ, ಕಾದಂಬರಿ, ವಿಮರ್ಶೆ, ಜೀವನ ಚರಿತ್ರೆ, ಪ್ರವಾಸ ಕಥನ, ಅರ್ಥಶಾಸ್ತ್ರ, ಭಾಷಾ ಶಾಸ್ತ್ರ, ವ್ಯಾಕರಣ, ವಿಜ್ಞಾನ ಕೋಶ ಸೇರಿದಂತೆ ಹಲವು ವಲಯಗಳಲ್ಲಿ ತಮ್ಮ ಪಾಂಡಿತ್ಯವನ್ನು ವ್ಯಾಪಿಸಿಕೊಂಡಿದ್ದರು.

ರಾಹುಲ ಸಾಂಕೃತ್ಯಾಯನರ ಪ್ರವಾಸದಲ್ಲಿ ಲಡಾಕ್, ಕಿನ್ನೌರ್, ಕಾಶ್ಮೀರಗಳೂ ಸೇರಿ ಭಾರತದ ಅನೇಕ ಊರುಗಳಿದ್ದವು. ನೇಪಾಳ, ಟಿಬೆಟ್, ಶ್ರೀಲಂಕಾ, ಇರಾನ್, ಚೀನಾ ಮತ್ತು ಅಂದಿನ ಅವಿಭಾಜಿತ ಸೋವಿಯತ್ ಯೂನಿಯನ್ ಸೇರಿದ್ದವು.

ರಾಹುಲ ಸಾಂಕೃತ್ಯಾಯನರು  ಬೋಧಗಯಾ, ಸಾರನಾಥ, ಕುಶಿನಾರಗಳಲ್ಲಿ ಅಧ್ಯಯನಕ್ಕಾಗಿ ಭೇಟಿ ನೀಡಿದ್ದರು. ಹಲವು ರೂಪಗಳಲ್ಲಿ ದೇಶದ ಗಡಿರೇಖೆಯ ಪ್ರದೇಶಗಳಿಗೆ ನುಸುಳಿ ಹೋಗಿ ಹಿಂದೆ ಬರುತ್ತಿದ್ದರು.  ಹಲವು ದೇಶಗಳಿಗೆ ವಿಕ್ರಮಶಿಲ ಮತ್ತು ನಳಂದ ವಿಶ್ವವಿದ್ಯಾಲಯದಿಂದ ಕಳುವಾಗಿ ಹೋಗಿದ್ದ ಕೆಲವೊಂದು ಅಮೂಲ್ಯ ಚಿತ್ರಗಳು ಮತ್ತು ಹಸ್ತಪ್ರತಿಗಳನ್ನು ಭಾರತಕ್ಕೆ ಹೊತ್ತು ತಂದರು.  ಮತ್ತಷ್ಟು ಸಂಸ್ಕೃತ ಅಧ್ಯಯನಕ್ಕಾಗಿ ತಿರುಪತಿಗೂ ಆಗಮಿಸಿದ್ದರು. ತಿರುಪತಿಯಲ್ಲಿ ತಮಿಳು ಭಾಷೆಯ ಬಗ್ಗೆಯೂ ಆಸಕ್ತಿ ವಹಿಸಿ ಅಧ್ಯಯನ ಮಾಡಿದ್ದರು. ಕರ್ನಾಟಕದ ಮಡಿಕೇರಿಯಲ್ಲಿಯೂ 4 ತಿಂಗಳ ಕಾಲ ತಂಗಿ ಕನ್ನಡ ಭಾಷೆಯ ಪರಿಚಯ ಪಡೆದಿದ್ದರು.ಸೋವಿಯತ್ ರಷ್ಯಾಕ್ಕೆ ಎರಡು ಬಾರಿ ಭೇಟಿ ನೀಡಿದ್ದ ಅವರು ಅಲ್ಲಿ ಹಲವಾರು ತಿಂಗಳು ಸಂಸ್ಕೃತ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದರು.  ಭಾರತದ ವಿವಿಧ ವಿಶ್ವವಿದ್ಯಾಲಯಗಳ ಸಂಗ್ರಹಾಲಯಗಳು ಅದರಲ್ಲೂ ಪಾಟ್ನಾದಲ್ಲಿರುವ ಪ್ರಾಚ್ಯ ವಸ್ತುಸಂಗ್ರಹಾಲಯದಲ್ಲಿ ರಾಹುಲ ಸಾಂಕೃತ್ಯಾಯನರು ಹೀಗೆ ಸಂಪಾದಿಸಿದ ಅನೇಕ ಅಮೂಲ್ಯ ವಸ್ತುಗಳಿವೆ.

ರಾಹುಲ ಸಾಂಕೃತ್ಯಾಯನ  ಅವರ ಕೃತಿಗಳಲ್ಲಿ ಬಾಯೇಸ್ವೀನ್ ಸದಿ, ಜೀನೇ ಕೆ ಲಿಯೇ, ಸಿಂಹ ಸೇನಾಪತಿ, ಜೈ ಯೌಧೇಯಾ, ಭಾಗೋ ನಹಿ ದುನಿಯಾ ಕೋ ಬದಲೋ, ಮಧುರ ಸ್ವಪ್ನ, ರಾಜಸ್ತಾನಿ ರಾಣಿವಾಸ್, ವಿಸ್ಮಿತ್ ಯಾತ್ರೀ, ದಿವೋದಾಸ್, ವಿಸ್ಮೃತೀ ಕೆ ಗರ್ಭ್ ಮೆ ಮುಂತಾದವು ಕಾದಂಬರಿಗಳು.

ಸತ್ಮೀ ಕೆ ಬಚ್ಚೆ, ವೋಲ್ಗಾ ಸೆ ಗಂಗಾ, ಬಹುರಂಗೀ ಮಧುಪುರಿ, ಕನೈಲಾ ಕಿ ಕಥಾ ಮುಂತಾದವು ಸಣ್ಣ ಕಥಾಪ್ರಕಾರಗಳು. 

ಮೇರೇ ಜೀವನ್ ಯಾತ್ರಾ ಎಂಬುದು ರಾಹುಲ ಸಾಂಕೃತ್ಯಾಯನ ಅವರ 5 ಸಂಪುಟಗಳ ಆತ್ಮಚರಿತ್ರೆ.

ಸರ್ದಾರ್ ಪ್ರಥ್ವಿ ಸಿಂಗ್, ನಯೆ ಭಾರತ್ ಕೆ ನಯೆ ನೇತಾ, ಬಚಪನ್ ಕಿ ಸ್ಮೃತಿ, ಅತೀತ್ ಸೆ ವರ್ತಮಾನ್, ಸ್ಟಾಲಿನ್, ಲೆನಿನ್, ಕಾರ್ಲ್ ಮಾರ್ಕ್ಸ್, ಮಾವೋ ತ್ಸೆ ತುಂಗ್, ಘುಮಕ್ಕರ್ ಸ್ವಾಮಿ, ಮೇರೇ ಆಶಾಯೋಗ್ ಕೆ ಸತಿ, ಜಿಂಕಾಮೇ ಕೃತಜ್ಞ, ವೀರ್ ಚಂದ್ರಸಿಂಗ್ ಗರ್ವಾಲಿ, ಸಿಂಹಳ ಘುಮಕ್ಕರ್ಜೈವರ್ಧನ್, ಕಪ್ತಾನ್ ಲಾಲ್, ಸಿಂಹಳ್ ಕೆ ವೀರ್ ಪುರುಷ್,  ಮಹಾ ಮಾನವ್ ಬುದ್ಧ ಮುಂತಾದವು ವ್ಯಕ್ತಿಚಿತ್ರಣಗಳು.

ಜೊತೆಗೆ ಮಾನಸಿಕ್ ಗುಲಾಮಿ, ಋಗ್ವೇದಿಕ್ ಆರ್ಯ, ಘುಮಕ್ಕರ್ ಶಾಸ್ತ್ರ, ಕಿನ್ನರ್ ದೇಶ್ ಮೆ, ದರ್ಶನ್ ದಿಗ್ದರ್ಶನ್,  ದಖ್ಖಿನೊ ಹಿಂದಿ ಕಾ ವ್ಯಾಕರಣ್, ಪರಾತತ್ವ ನಿಬಂಧಾವಳಿ, ಮಾನವ ಸಮಾಜ,  ಮಧ್ಯ ಏಷ್ಯಾ ಕಾ ಇತಿಹಾಸ್, ಸಂಯಮವಾದ್ ಹಿ ಕ್ಯೋಂ ಕೃತಿಗಳನ್ನೂ , ಭೋಜಪುರಿ ಭಾಷೆಯಲ್ಲಿ ಹತ್ತಾರು ಕೃತಿಗಳನ್ನೂ, ಟಿಬೆಟ್ ಕುರಿತಾಗಿ ಅನೇಕ ಕೃತಿಗಳನ್ನೂ ರಚಿಸಿದ್ದರು.

ರಾಹುಲ ಸಾಂಕೃತ್ಯಾಯನ ಅವರಿಗೆ ಯುವಕರಾಗಿದ್ದಾಗಲೇ ರಾಮ್ ದುಲಾರಿ ದೇವಿಯೊಂದಿಗೆ ವಿವಾಹ ಮಾಡಲಾಗಿತ್ತು. ಆದರೆ ಆಕೆ ಬಾಲಕಿಯಾಗಿದ್ದರಿಂದ ಆಕೆಯೊಂದಿಗೆ ದೀರ್ಘಕಾಲ ಸಂಸಾರ ಮಾಡಿರಲಿಲ್ಲ. ಬಹುಕಾಲದ ನಂತರ ಇಂಡಿಯನ್ ನೇಪಾಳಿ ಡಾ.ಕಮಲಾ ಅವರನ್ನು ಮದುವೆಯಾಗಿದ್ದರು. ಈ ದಂಪತಿಗಳಿಗೆ ಜಯ ಎಂಬ ಮಗಳು, ಜೇತಾ ಎಂಬ ಗಂಡು ಮಗ ಜನಿಸಿದರು.  ರಾಹುಲ ಸಾಂಕೃತ್ಯಾಯನ ಅವರು ಕೆಲಕಾಲ ಶ್ರೀಲಂಕಾ ಯೂನಿರ್ವಸಿಟಿಯಲ್ಲಿ ಅಧ್ಯಾಪನ ವೃತ್ತಿ ಮಾಡಲು ಒಪ್ಪಿಕೊಂಡು ಅಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ರಾಹುಲ ಸಾಂಕೃತ್ಯಾಯನ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ ಮತ್ತು ಪದ್ಮಭೂಷಣ ಪುರಸ್ಕಾರಗಳು ಸಂದವು. ಇದಲ್ಲದೆ ಅವರ ಗೌರವಾರ್ಥ ರಾಷ್ಟ್ರೀಯ ಪ್ರಶಸ್ತಿ ಮತ್ತು ಉತ್ತಮ ಪ್ರವಾಸ ಸಾಹಿತ್ಯಕ್ಕಾಗಿನ ಪ್ರಶಸ್ತಿಗಳನ್ನೂ ಸ್ಥಾಪಿಸಲಾಗಿದೆ.

ರಾಹುಲ ಸಾಂಕೃತ್ಯಾಯನ ಅವರು 1963ರ ಏಪ್ರಿಲ್ 14 ರಂದು ದಾರ್ಜಿಲಿಂಗ್‌ನಲ್ಲಿ ಇಹಲೋಕ ತ್ಯಜಿಸಿದರು.

On the birth anniversary of Father of Indian Travelogue Travel literature Rahul Sankrityayan

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ