ವಿವೇಕ್
ವಿವೇಕ್ ನೆನಪು
ವಿವೇಕ್ ಚಿತ್ರರಂಗ ಕಂಡ ಅತ್ಯದ್ಭುತ ಪ್ರತಿಭೆ. ಪ್ರತಿಭೆಗಳನ್ನು ಉತ್ತಮವಾಗಿ ಬಳಸುವ ತಮಿಳು ಚಿತ್ರರಂಗ ಹಾಸ್ಯ ಸನ್ನಿವೇಶಗಳಲ್ಲಿ ವಿವೇಕ್ ಅವರನ್ನು ಬಳಸಿದ ರೀತಿ ವಿಶಿಷ್ಟವಾದದ್ದು. ಆತನ ಅಭಿನಯದ ಹಾಸ್ಯ ಸನ್ನಿವೇಶಗಳ ದೃಶ್ಯಾವಳಿಯನ್ನು ನೋಡುವುದು ನನಗೆ ಅಪಾರ ಸಂತೋಷ ಕೊಡುವ ವಿಷಯ. ಇಂದು ಅವರ ಸಂಸ್ಮರಣೆ ದಿನ.
ವಿವೇಕ್ 1961ರ ನವೆಂಬರ್ 19ರಂದು ಜನಿಸಿದರು. ಚೆನ್ನೈನ ಸರ್ಕಾರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ 'ಹ್ಯೂಮರ್ ಕ್ಲಬ್' ಆವರಣದಲ್ಲಿ ಎಲ್ಲರಲ್ಲೂ ನಗೆಯುಕ್ಕಿಸುತ್ತಿದ್ದ ವಿವೇಕ್ ಅವರನ್ನು ಅಲ್ಲಿನ ಅಧ್ಯಕ್ಷರು ಮಹಾನ್ ನಿರ್ದೇಶಕ ಕೆ. ಬಾಲಚಂದರ್ ಅವರಿಗೆ ಪರಿಚಯಿಸಿದರು. ಹೀಗೆ 1986ರಲ್ಲಿ ಚಿತ್ರರಂಗಕ್ಕೆ ಬಂದ ವಿವೇಕ್ ಹಲವು ನೂರು ಚಿತ್ರಗಳಲ್ಲಿ ನಟಿಸಿ ತಮ್ಮ ಸಹಜ ಅಭಿನಯಕ್ಕೆ ಹೆಸರಾದರು. ರಜನೀಕಾಂತ್ ಅಂತಹ ನಟನ ಮುಂದೆ ನಟಿಸುವಾಗಲೂ ವಿವೇಕ್ ನಟನೆಯ ಲೀಲಾಜಾಲ ಪ್ರಭಾವಳಿ ವಿಶಿಷ್ಟವಾಗಿ ಕಂಗೊಳಿಸುತ್ತಿತ್ತು.
ಕಿರುತೆರೆಯಲ್ಲೂ ವಿವೇಕ್ ಅನೇಕ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದು ಅಬ್ದುಲ್ ಕಲಂ ಅಂತಹ ಮಹನೀಯರನ್ನೂ ಸಂದರ್ಶಿಸಿದ್ದರು.
ವಿಶಿಷ್ಟರೆನಿಸುವ ಹಾಸ್ಯ ನಟರು ಯಾವ ಚಿತ್ರದಲ್ಲಿ, ಯಾರೊಡನೆ ನಟಿಸಿದರು ಎಂಬುದರ ಪರಿಧಿಗಳಿಗೆ ಅತೀತರು. ಅವರು ನಟಿಸಿದ ಸನ್ನಿವೇಶಗಳೆಲ್ಲ ವಿಶಿಷ್ಟವೇ. ವಿವೇಕ್ ಅಂತಹ ಅದ್ಭುತ ಕಲಾವಿದರಲ್ಲೊಬ್ಬರು.
ಮೂರು ಫಿಲಂಫೇರ್, 5 ತಮಿಳುನಾಡು ರಾಜ್ಯ ಪ್ರಶಸ್ತಿ, ಪದ್ಮಶ್ರೀ, ಗೌರವ ಡಾಕ್ಟರೇಟ್ ಮುಂತಾದ ಗೌರವ ಗಳಿಸಿದ್ದ ವಿವೇಕ್ 2021ರ ಏಪ್ರಿಲ್ 17ರಂದು ಹಠಾತ್ ನಿರ್ಗಮಿಸಿದ್ದು ಏನೋ ಕಳೆದುಕೊಂಡ ಭಾವ ಮೂಡಿಸಿತು.
ಕಲಾವಿದನೊಬ್ಬ ತನ್ನ ಪ್ರತಿಭೆಯಿಂದ ನಗಿಸುತ್ತಿದ್ದ ಹೃದಯಗಳು, ತಾನು ಲೋಕದಿಂದ ಹೊರನಡೆವಾಗ ಕಣ್ಣೀರು ಮಿಡಿಯುವಂತೆ ಬದುಕುವುದಿದೆಯಲ್ಲಾ ಅದೇ ಬದುಕಿಗಿರುವ ಧನ್ಯತೆ.
In memory of great talent Vivek
ಕಾಮೆಂಟ್‌ಗಳು