ತಕಳಿ ಶಿವಶಂಕರ ಪಿಳ್ಳೈ
ತಕಳಿ ಶಿವಶಂಕರ ಪಿಳ್ಳೈ
ತಕಳಿ ಶಿವಶಂಕರ ಪಿಳ್ಳೈ ಭಾರತೀಯ ಕಥಾಲೋಕದ ಮಹಾನ್ ಬರಹಗಾರರಲ್ಲಿ ಒಬ್ಬರು.
ಶಿವಶಂಕರ ಪಿಳ್ಳೈ ಅವರು 1912ರ ಏಪ್ರಿಲ್ 17ರಂದು ಕೇರಳದ ಅಳಪುಯಾ ಜಿಲ್ಲೆಯ ತಕಳಿ ಎಂಬಲ್ಲಿ ಜನಿಸಿದರು. ತಂದೆ ಪೊಯಪಲ್ಲಿ ಕಲಾತಿಲ್ ಶಂಕರ ಕುರುಪ್. ತಾಯಿ ಅರಿಪುರುತ್ತ ವೀಟಿಲ್ ಪಾರ್ವತಿ. ತಂದೆಯ ಸಹೋದರ ಗುರು ಕುಂಚು ಕುರುಪ್ ಅವರು ಕಥಕ್ಕಳಿ ಲೋಕದ ಮೇರುಕಲಾವಿದರು. ಪ್ರಾರಂಭಿಕ ಶಿಕ್ಷಣವನ್ನು ತಂದೆ ಮತ್ತು ತಕಳಿಯಲ್ಲಿನ ಶಿಕ್ಷಕರೊಬ್ಬರಿಂದ ಪಡೆದು ಅಂಬಲಪ್ಪುಳ ಎಂಬಲ್ಲಿನ ಇಂಗ್ಲಿಷ್ ಶಾಲೆಯಲ್ಲಿ 7ನೇ ತರಗತಿ ಓದಿದರು. ವೈಕೋಂನಲ್ಲಿ ಮತ್ತು ಕರುವಟ್ಟ ಎಂಬಲ್ಲಿ ಹೈಸ್ಕೂಲು ಓದಿದರು. ಮುಂದೆ ತಿರುವನಂತಪುರದ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಪ್ಲೀಡರ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು.
ತಕಳಿ ಶಿವಶಂಕರ ಪಿಳ್ಳೈ ಅವರು ಕೆಲಕಾಲ ಕೇರಳ ಕೇಸರಿ ಪತ್ರಿಕೆಯ ವರದಿಗಾರರಾಗಿ ನಂತರ ಪಿ. ಪರಮೇಶ್ವರನ್ ಪಿಳ್ಳೈ ಅವರಲ್ಲಿ ಕಾನೂನು ಅಭ್ಯಾಸಕ್ಕಾಗಿ ಅಂಬಲಪ್ಪುಳ ಮುನ್ಸೀಫ್ ಕೋರ್ಟಿಗೆ ದಾಖಲಾದರು.ಆ ಸಮಯದಲ್ಲಿ ಕಮ್ಯೂನಿಸ್ಟ್ ಸಿದ್ಧಾಂತಕ್ಕೆ ಒಲಿದು ಸಾಹಿತ್ಯ ಸಹಕರಣಾ ಸಂಘಂ ಸೇರಿದರು. ಕೇರಳ ಸಾಹಿತ್ಯ ಅಕಾಡೆಮಿಯ ಮುಖ್ಯಸ್ಥರಾಗಿದ್ದ ಅವರು ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ್ಯರೂ ಆದರು.
ತಕಳಿ ಶಿವಶಂಕರ ಪಿಳ್ಳೈ ಅವರ ಮೊಟ್ಟಮೊದಲ ಕತೆ ‘ಸಾಧುಕ್ಕಳ್’ (ಬಡವರು). ಅವರಿಗೆ ಜನಜೀವನದ ನೂರಾರು ಮಗ್ಗುಲುಗಳ ಪರಿಚಯವಾಗಿದ್ದು ಅವರ ನಿರಂತರ ಅಲೆದಾಟದಿಂದ. ತಕಳಿಯವರ ಪ್ರತಿಭೆಯನ್ನು ಮೊದಲಿಗೆ ಗುರುತಿಸಿದ್ದು ‘ಕೇಸರಿ’ ಪತ್ರಿಕೆಯ ಸಂಪಾದಕರಾಗಿದ್ದ ಬಾಲಕೃಷ್ಣ ಪಿಳ್ಳೆ. ಅವರು, ತಕಳಿಯವರನ್ನು ಪಾಶ್ಚಾತ್ಯ ಸಾಹಿತ್ಯ ಕೃತಿಗಳ ಲೋಕಕ್ಕೆ ಕರೆದುಕೊಂಡು ಹೋದರು. ಈ ಘಟ್ಟದಲ್ಲಿ ಕಮ್ಯುನಿಸಂನ ಗಾಢ ಪ್ರಭಾವಕ್ಕೆ ಅವರು ಒಳಗಾದರು. ಇನ್ನೊಂದೆಡೆ, ಅವರು ಬದುಕಿಗೆ ಅವಲಂಬಿಸಿದ್ದ ವಕೀಲಿ ವೃತ್ತಿಯಿಂದಾಗಿ ಲೋಕದ ಕರಾಳ ಮುಖಗಳ ವಾಸ್ತವವೂ ಅರಿವಿಗೆ ಬಂತು. ಇವೆಲ್ಲ ಅವರ ಆತ್ಮಕತೆ ‘ನನ್ನ ವಕೀಲಿ ವೃತ್ತಿ’ಯಲ್ಲಿ ದಾಖಲಾಗಿವೆ. ಅವರ ಚೊಚ್ಚಲ ಪ್ರಕಟಿತ ಕಾದಂಬರಿ ‘ತ್ಯಾಗತ್ತಿಂಡೆ ಪ್ರತಿಫಲಂ’. ಇದು ಮಡಿವಂತರಿಂದ ಪೋಲಿ ಪುಸ್ತಕ ಎಂಬ ಟೀಕೆಗೆ ಈಡಾಯಿತು. ಆ ಹಂತದಲ್ಲಿ ತಕಳಿಯವರ ಸಾಹಿತ್ಯ ವ್ಯವಸಾಯ ಸ್ವಲ್ಪಕಾಲ ಸ್ತಬ್ಧವಾಗಿತ್ತು. ಅವರಿಗೆ ಹೆಸರು ತಂದುಕೊಟ್ಟ ಕಾದಂಬರಿಯೆಂದರೆ ಮಹಾನ್ ನಿರ್ದೇಶಕ ರಾಮು ಕಾರಿಯಾತ್ ಅವರಿಂದ ಚಲನಚಿತ್ರವಾಗಿಯೂ ಮೂಡಿಬಂದ ‘ಚೆಮ್ಮೀನ್’. ಬೆಸ್ತರ ಬದುಕಿನ ನಾನಾ ಮುಖಗಳನ್ನು ಹಿಡಿದಿಟ್ಟಿರುವ ಇದು, ಎಲ್ಲ ಭಾರತೀಯ ಭಾಷೆಗಳಿಗೂ ಕೆಲ ವಿದೇಶಿ ಭಾಷೆಗಳಿಗೂ ಅನುವಾದವಾಗಿದೆ. ಇದು ಕನ್ನಡದಲ್ಲಿ ನಾ. ಕಸ್ತೂರಿಯವರಿಂದ ‘ಕೆಂಪು ಮೀನು’ ಆಗಿ ಮೂಡಿಬಂದಿದೆ. ಅವರ ಬೃಹತ್ ಕಾದಂಬರಿಯೆಂದರೆ ‘ಕಯರ್’ (ಹಗ್ಗ). ತಕಳಿಯವರು 17 ವರ್ಷ ಕೂತು ಬರೆದ ಈ ಕೃತಿಯಲ್ಲಿ ಸಾವಿರಕ್ಕೂ ಹೆಚ್ಚು ಪಾತ್ರಗಳಿವೆ! ಈ ಕೃತಿಯ ಜತೆಗೆ ಅವರ ‘ಏಣಿಪ್ಪಡಿಗಳ್’, ತೋಟ್ಟಿಯುಡೆ ಮಗನ್’ ಮುಂತಾದ ಕಾದಂಬರಿಗಳೂ ಕನ್ನಡಕ್ಕೆ ಬಂದಿವೆ. ಅವರ ಕಾದಂಬರಿಗಳ ಸಂಖ್ಯೆ ಸುಮಾರು 40 ಮತ್ತು ಸುಮಾರು 600ಕಥೆಗಳುಳ್ಳ ಕಥಾಸಂಕಲನಗಳ ಸಂಖ್ಯೆ 23.
ಅವಂತೆ ಸ್ಮರಣಕಾಲ್, ರಂಧಿದಂಗಸಿ, ತೊಟ್ಟಿಯುಡೆ ಮಗನ್, ಅನುಭವಂಗಳ್ ಫಲಿಚ್ಚಕಾಲ್, ಪುನ್ನಪ್ರ ವಯಲಾರಿನು ಶೇಷಂ, ಅಳಿಯಾಕ್ಕುರುಕ್ಕು, ಬಲೂನುಕಳ್, ನೆಲ್ಲುಂ ತೇಂಗಾಯುಂ, ಒರು ಎರಿಂಜಾದಂಗಳ್, ಪರಮಾರ್ಥಂಗಳ್, ಇರುಪತ್ತೊನ್ನಾಮ್ ನೂತ್ತಾಂಡು, ಪತಿತಪಂಕಜಮ್, ಕುರೆ ಮನುಷ್ಯರತೆ ಕಥಾ, ತಕಳಿಯುಡೆ ನೊವಲುಗಳ್, ಪಪ್ಪಿಯಮ್ಮಯುಮ್ ಮಕ್ಕಳುಂ, ಔಸಿಪ್ಪಿಂಡೆ ಮಕ್ಕಳ್, ಅಂಜುಪೆಣ್ಣುಗಳು, ಚುಕ್ಕು, ಕೊಡಿಪೋಯ ಮುಖಂಗಳ್, ತಲೆಯೋಡು, ವಿಲಪಂಕರಿ, ಜೀವಿತಂ ಸಮುದ್ರಮಾನು, ಆಕಾಶಂ, ಧರ್ಮನೀತಿಯೋ ಅಲ್ಲ ಜೀವಿತಮ್, ಪೇರಿಲ್ಲಾಕಥಾ, ಪೆನ್ನಾಯಿ ಪಿರನಾಳ್ , ಮಾಂಮ್ಸತಿಂಟೆ ವಿಲಿ, ಒರು ಮನುಷ್ಯಂತೆ ಮುಖಮ್, ಒರು ಪ್ರೇಮತಿಂಟೆ ಬಕ್ಕಿ, ನೂರಾಯುಂ ಪಥಾಯುಂ, ಪೆಣ್ಣು ಮುಂತಾದವು ತಕಳಿ ಶಿವಶಂಕರ ಪಿಳ್ಳೈ ಅವರ ಇನ್ನಿತರ ಕಾದಂಬರಿಗಳಲ್ಲಿ ಸೇರಿವೆ.
ತಕಳಿ ಶಿವಶಂಕರ ಪಿಳ್ಳೈ ಅವರ 'ಕಯರ್' ಕೃತಿಗೆ 1984ರಲ್ಲಿ ಜ್ಞಾನಪೀಠ ಪ್ರಶಸ್ತಿ ಸಂದಿತು. 'ಚೆಮ್ಮೀನ್' ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ, ಕೇಂದ್ರ ಸಾಹಿತ್ಯ ಅಕಾಡೆಮಿ ಫೆಲೋಷಿಪ್ ಮತ್ತು ಪದ್ಮಭೂಷಣ ಪ್ರಶಸ್ತಿಗಳೂ ಸೇರಿದಂತೆ ಅನೇಕ ಗೌರವಗಳು ಅವರಿಗೆ ಸಂದವು.
ತಕಳಿ ಶಿವಶಂಕರ ಪಿಳ್ಳೈ ಅವರು 1999ರ ಏಪ್ರಿಲ್ 10ರಂದು ಈ ಲೋಕವನ್ನಗಲಿದರು.
On the birth anniversary of thakazhi shivashankara pillai
ಕಾಮೆಂಟ್‌ಗಳು