ಶ್ರೀದೇವಿ ಕೆರೆಮನೆ
ಶ್ರೀದೇವಿ ಕೆರೆಮನೆ ನಮ್ಮೊಡನಿರುವ ಪ್ರತಿಭಾನ್ವಿತ ಬರಹಗಾರ್ತಿ ಮತ್ತು ವಿದ್ಯಾರ್ಥಿಗಳ ಅಕ್ಕರೆಯ ಉಪಾಧ್ಯಾಯಿನಿ.
ಶ್ರೀದೇವಿ ಕೆರೆಮನೆ ಅವರ ಮೂಲ ಊರು ಅಂಕೋಲ. ಪ್ರಸಕ್ತದಲ್ಲಿ ಅವರು ಕಾರವಾರದ ನಿವಾಸಿ. ಏಪ್ರಿಲ್ 6 ಅವರ ಜನ್ಮದಿನ. ಕನ್ನಡ ಎಂ.ಎ, ಇಂಗ್ಲಿಷ್ ಎಂ. ಎ ಮತ್ತು ಬಿ.ಎಡ್ ಅವರ ವಿದ್ಯಾ ಸಾಧನೆಗಳು.
ಇಂಗ್ಲಿಷ್ ಅಧ್ಯಾಪಕಿಯಾಗಿ ಅಪಾರ ಅನುಭವದಿಂದ ಕಾರ್ಯನಿರ್ವಹಿಸುತ್ತಿರುವ ಶ್ರೀದೇವಿ ಅವರಿಗೆ ತಮ್ಮ ವಿದ್ಯಾರ್ಥಿಗಳೆಂದರೆ ಅಪಾರ ಪ್ರೀತಿ. "ನನ್ನ ವಿದ್ಯಾರ್ಥಿಗಳಿಂದ ನಾನು ಅಪಾರ ಕಲಿಯುತ್ತಿರುವೆ” ಎನ್ನುವ ಶ್ರೀದೇವಿ ತಮ್ಮ ಕೆಲವು ಕೃತಿಗಳನ್ನೂ ತಮ್ಮ ವಿದ್ಯಾರ್ಥಿಗಳಿಗೆ ಅರ್ಪಿಸಿರುವುದು ಗಮನಾರ್ಹ ಸಂಗತಿ. ಪ್ರಸ್ತುತದಲ್ಲಿ ಇವರ ಶೈಕ್ಷಣಿಕ ಸೇವೆ ಕಾರವಾರದ ಸರಕಾರಿ ಪ್ರೌಢಶಾಲೆ ಚಿತ್ತಾಕುಲ (ಪುನರ್ವಸತಿ)ದಲ್ಲಿ ಸಲ್ಲುತ್ತಿದೆ.
ಸಂವೇದನಾಶೀಲ ಬರಹಗಾರ್ತಿಯಾಗಿ ಉತ್ತಮ ಸಾಧನೆ ಮಾಡುತ್ತ ಬಂದಿರುವ ಶ್ರೀದೇವಿ ಅವರ ಕಥೆ, ಕವನ, ಅಂಕಣ ಹಾಗೂ ವೈವಿಧ್ಯಪೂರ್ಣ ಚಿಂತನ ಬರಹಗಳು ನಾಡಿನ ಎಲ್ಲ ನಿಯತಕಾಲಿಕಗಳಲ್ಲಿ ನಿರಂತರ ರಾರಾಜಿಸುತ್ತ ಬಂದಿವೆ.
ಶ್ರೀದೇವಿ ಅವರ ಪ್ರಕಟಿತ ಕವನ ಸಂಕಲನಗಳಲ್ಲಿ ನಾನು ಗೆಲ್ಲುತ್ತೇನೆ, ಮೌನದ ಮಹಾ ಕೋಟೆಯೊಳಗೆ, ಗೆಜ್ಜೆ ಕಟ್ಟದ ಕಾಲಲ್ಲಿ, ಬೈಟೂ ಚಹಾ ಕವನಗಳು, ನಗುವಿಗೊಂದು ಧನ್ಯವಾದ, ಮೈ ಮುಚ್ಚಲೊಂದು ತುಂಡು ಬಟ್ಟೆ ಸೇರಿವೆ. ಇವರ ಅಂಕಣ ಬರಹಗಳು ಪ್ರೀತಿ ಎಂದರೆ ಇದೇನಾ?, ಹೆಣ್ತನದ ಆಚೆ-ಈಚೆ, ಉರಿವ ಉಡಿ, ಮನದಾಳದ ಮಾತು, ವರ್ತಮಾನದ ಉಯ್ಯಾಲೆ ಮುಂತಾದ ಸಂಕಲನಗಳಲ್ಲಿ ವ್ಯಾಪಿಸಿವೆ. 'ಅಲೆಯೊಳಗಿನ ಮೌನ' ಗಜಲ್ ಸಂಕಲನ. 'ನನ್ನ ದನಿಗೆ ನಿನ್ನ ದನಿಯು' ಗಜಲ್ ಜುಗಲ್ ಸಂಕಲನ. 'ತೀರದ ಧ್ಯಾನ' ಗಜಲ್ ವಿಶ್ಲೇಷಣೆ. 'ಬಿಕ್ಕೆ ಹಣ್ಣು' ಮತ್ತು 'ಚಿತ್ತ ಚಿತ್ತಾರ' ಕಥಾ ಸಂಕಲನಗಳು. 'ಅಂಗೈಯೊಳಗಿನ ಬೆಳಕು' ವಿಮರ್ಶಾ ಸಂಕಲನ. 'ಗೂಡು ಕಟ್ಟುವ ಸಂಭ್ರಮದಲ್ಲಿ' ಮತ್ತು 'ಕಾಡುವ ಗರ್ಭ' ಪ್ರಬಂಧ ಸಂಕಲನಗಳು. ‘ಕಡಲು ಕಾನನದ ನಡುವೆ’ ಸಮಕಾಲೀನ ಬರಹ ಸಂಕಲನ. 'ಎಲ್ಲೆಗಳ ಮೀರಿ' ಪಾಶ್ಚಾತ್ಯ ಲೇಖಕಿಯರ ಆಶಯ, ಚಿಂತನೆ ಮತ್ತು ಗ್ರಹಿಕೆ.
ಶ್ರೀದೇವಿ ಕೆರೆಮನೆ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತು ನೀಡುವ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ 'ಶ್ರೀ ವಿಜಯ' ಪ್ರಶಸ್ತಿ, ಪ್ರಜಾವಾಣಿ ಕಾವ್ಯ ಪ್ರಥಮ ಸ್ಥಾನ, ‘ವರ್ತಮಾನದ ಉಯ್ಯಾಲೆ’ಗೆ ಸಾರಾ ಅಬೂಬ್ಕರ ಪ್ರಶಸ್ತಿ, 'ನನ್ನ ದನಿಗೆ ನಿನ್ನ ದನಿಯು' ಸಂಕಲನಕ್ಕೆ
ಸುಮನಾ ಸೋಮಶೇಖರ ಸೋಮವಾರಪೇಟೆ ದತ್ತಿ ಪ್ರಶಸ್ತಿ, 'ಬಿಕ್ಕೆಹಣ್ಣು' ಕಥಾ ಸಂಕಲನಕ್ಕೆ ದೇವಾಂಗನಾ ಶಾಸ್ತ್ರಿ ಕಥಾ ಪ್ರಶಸ್ತಿ, 'ಮೈ ಮುಚ್ಚಲೊಂದು ತುಂಡು ಬಟ್ಟೆ' ಕೃತಿಗೆ ಅಮ್ಮ ಪ್ರಶಸ್ತಿ, 'ಅಂಗೈಯೊಳಗಿನ ಬೆಳಕು' ಕೃತಿಗೆ ಶಿವಮೊಗ್ಗದ ಎಂ ಕೆ ಇಂದಿರಾ ಪ್ರಶಸ್ತಿ, 'ಮೈ ಮುಚ್ಚಲೊಂದು ತುಂಡು ಬಟ್ಟೆ' ಕೃತಿಗೆ ಅಂತರಾಷ್ಟ್ರೀಯ ಮಹಿಳಾ ವರ್ಷದ ದತ್ತಿ ಪ್ರಶಸ್ತಿ, 'ಬಿಕ್ಕೆ ಹಣ್ಣು' ಕಥಾ ಸಂಕಲನಕ್ಕೆ ಹೇಮರಾಜ ದತ್ತಿ ಪ್ರಶಸ್ತಿ, 'ಬೈ ಟೂ ಚಹಾ ಕವನಗಳು' ಕೃತಿಗೆ ಅಡ್ವೈಸರ್ ಪತ್ರಿಕಾ ಪ್ರಶಸ್ತಿ , ರಾಜೀವ್ ಗಾಂಧಿ ಸದ್ಭಾವನಾ ಪ್ರಶಸ್ತಿ, 'ಹೆಣ್ತನದ ಆಚೆ ಈಚೆ'ಗೆ ಬಸವರಾಜ ಕಟ್ಟಿಮನಿ ಪ್ರಶಸ್ತಿ, 'ಹೆಣ್ತನದ ಆಚೆ ಈಚೆ'ಗೆ ಬೇಂದ್ರೆ ಯುವ ಗ್ರಂಥ ಪುರಸ್ಕಾರ,
'ನಾನು ಗೆಲ್ಲುತ್ತೇನೆ' ಕವನ ಸಂಕಲನದ ಹಸ್ತಪ್ರತಿಗೆ 'ಶ್ರೀ ಗಂಧ ಹಾರ' ಪ್ರಶಸ್ತಿ, ಹಾಸನದ ಜನ್ನ ಕಾವ್ಯ ಪ್ರಶಸ್ತಿ, ಮೌನದ ಮಹಾ ಕೋಟೆಯೊಳಗೆ ಕೃತಿಗೆ ಮಂಡ್ಯದ ಬಿಎಂಶ್ರಿ ಕಾವ್ಯ ಪ್ರಶಸ್ತಿ, 'ಮೈ ಮುಚ್ಚಲೊಂದು ತುಂಡು ಬಟ್ಟೆ' ಕವನ ಸಂಕಲನಕ್ಕೆ ತುಮಕೂರಿನ ಅವ್ವ ಪ್ರಶಸ್ತಿ, 'ಅಂಗೈಯೊಗಿನ ಬೆಳಕು' ಕೃತಿಗೆ ಮಾತ್ರೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ, ಸಿಂಗಾಪುರ ಕಥಾ ಪ್ರಶಸ್ತಿ , ತೆಲಂಗಾಣದ ಗಜಲ್ ರಾಷ್ಟ್ರೀಯ ಪ್ರಶಸ್ತಿ, ಡಿ. ಎಸ್. ಕರ್ಕಿ ಪ್ರಶಸ್ತಿ, ತ್ರಿವೇಣಿ ದತ್ತಿ ಪ್ರಶಸ್ತಿ ಸೇರಿದಂತ ಅನೇಕ ಪ್ರಶಸ್ತಿ ಪುರಸ್ಕಾರಗಳು ಸಂದಿವೆ.
ಶ್ರೀದೇವಿ ಕೆರೆಮನೆ ಅವರು ಶಿಕ್ಷಕಿಯಾಗಿ ಅಲ್ಲದೆ ಶಿಕ್ಷಣ ತರಬೇತಿ ಶಿಬಿರಗಳ ಸಂಪನ್ಮೂಲ ವ್ಯಕ್ತಿಯಾಗಿಯೂ ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿನ ಸೇವೆಗಾಗಿ ಅವರಿಗೆ ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ, ಸಾವಿತ್ರಿಬಾಯಿ ಫುಲೆ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಗೌರವಗಳೂ ಸಂದಿವೆ.
ಶ್ರೀದೇವಿ ಕೆರೆಮನೆ ಕನ್ನಡ ಸಾಹಿತ್ಯ ಸಮ್ಮೇಳನಗಳೂ ಸೇರಿದಂತೆ ಅನೇಕ ಪ್ರತಿಷ್ಟಿತ ವೇದಿಕೆಗಳಲ್ಲಿ ಕಾವ್ಯ ಮತ್ತು ವಿಚಾರ ಮಂಡನೆ ಮಾಡಿದ್ದಾರೆ.
ಸಾಧಕರೂ, ಸರಳ ಸಜ್ಜನಿಕೆಗಳ ಪ್ರತಿರೂಪರೂ ಆದ ಆತ್ಮೀಯ ಶ್ರೀದೇವಿ ಕೆರೆಮನೆ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Shreedevi Keremane
ಕಾಮೆಂಟ್‌ಗಳು