ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವಿಜಯಶ್ರೀ ಹಾಲಾಡಿ

ವಿಜಯಶ್ರೀ ಹಾಲಾಡಿ

ವಿಜಯಶ್ರೀ ಹಾಲಾಡಿ ಕಥೆ, ಕವಿತೆ ಮತ್ತು ಮಕ್ಕಳ ಸಾಹಿತ್ಯದಲ್ಲಿ ಹೆಸರಾದವರು. 

ಏಪ್ರಿಲ್ 28, ವಿಜಯಶ್ರೀ  ಅವರ ಜನ್ಮದಿನ.  
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಾಲಾಡಿ ಇವರ ಮೂಲ ಊರು. ತಂದೆ ಬಾಬುರಾವ್. ತಾಯಿ ಎಂ.ರತ್ನಾವತಿ. ಕನ್ನಡ ಎಂ.ಎ. ಮತ್ತು ಬಿ.ಎಡ್. ಇವರ ವಿದ್ಯಾ ಸಾಧನೆಗಳು. ಶಿಕ್ಷಣದಲ್ಲಿ ಉನ್ನತ ದರ್ಜೆಯ ಸಾಧನೆಗಳನ್ನು ಮಾಡಿದ ವಿಜಯಶ್ರೀ ಬಿ.ಎಡ್ ವ್ಯಾಸಂಗದಲ್ಲಿ ಚಿನ್ನದ ಪದಕದೊಂದಿಗೆ ಪ್ರಥಮ ರ್‍ಯಾಂಕ್ ಸಾಧನೆಯನ್ನೂ ಮಾಡಿದವರು.

ಶಿಕ್ಷಕಿಯೂ ಆಗಿ, ಪ್ರಕೃತಿಯನ್ನು ಮಕ್ಕಳ ಮನದಲ್ಲಿ ಕಾಣುತ್ತ ಬಂದ ವಿಜಯಶ್ರೀ ಅವರ ಬರಹಗಳು ಎಲ್ಲ ಪ್ರಮುಖ ನಿಯತಕಾಲಿಕಗಳ ಮೂಲಕ ಕಿರಿಯರ ಜೊತೆಗೆ ಹಿರಿಯರನ್ನೂ ಆಕರ್ಷಿಸಿವೆ.  'ಮಾನವೀಯತೆ ಮತ್ತು ಮಾನವೀಯತೆಯೊಂದೇ ನನ್ನ ಧರ್ಮ' ಎಂಬ ನಿಲುವಿನ ಅವರ ಬರಹಗಳು ಮಕ್ಕಳ ಮನಸ್ಸು, ಪರಿಸರದೆಡೆಗೆ ನಲಿ ನಲಿಯುತ್ತ ಗಮನ ಹರಿಸುತ್ತಲೇ ಸಾಮಾಜಿಕ ಮತ್ತು ವೈಚಾರಿಕ ಚಿಂತನೆಗಳ ಆಳಗಳನ್ನೂ ಅನ್ವೇಷಿಸುತ್ತ ಬಂದಿವೆ.  ತಮ್ಮ ಬರಹಗಳಿಗೆ ಅನುರೂಪವಾದ ಚಿತ್ರಗಳನ್ನು ಬಿಡಿಸುವ ಕಲೆಯೂ ಅವರಲ್ಲಿ ಹಾಸುಹೊಕ್ಕಾಗಿದೆ.

ವಿಜಯಶ್ರೀ ಹಾಲಾಡಿ ಅವರ ಕವನ ಸಂಕಲನಗಳಲ್ಲಿ  ಬೀಜ ಹಸಿರಾಗುವ ಗಳಿಗೆ, ಅಲೆಮಾರಿ ಇರುಳು, ಸಾಕು ಬೆಳಕಿನ ಮಾತು ಸೇರಿವೆ. 

ವಿಜಯಶ್ರೀ ಹಾಲಾಡಿ ಅವರು ಮಕ್ಕಳಿಗಾಗಿ ರಚಿಸಿದ ಕೃತಿಗಳಲ್ಲಿ 'ಪಪ್ಪು ನಾಯಿಯ ಪ್ರೀತಿ', 'ಓತಿಕ್ಯಾತ ತಲೆ ಕುಣ್ಸಿ' ಪದ್ಯಗಳು; 'ಜಂಬಿಕೊಳ್ಳಿ ಮತ್ತು ಪುಟ್ಟವಿಜಿ', 'ಕಾಡಂಚಿನ ಊರಿನಲ್ಲಿ' ಎಂಬ ಮಕ್ಕಳಿಗಾಗಿ ಅನುಭವ ಕಥನಗಳು; 'ಸೂರಕ್ಕಿ ಗೇಟ್' ಎಂಬ ಕಾದಂಬರಿ ಸೇರಿವೆ. 'ಕಣ್ಣ ಕಾಡಿನ ಹಾಡು' ಅವರ ಪ್ರಬಂಧ ಸಂಕಲನ.

ವಿಜಯಶ್ರೀ ಹಾಲಾಡಿ ಅವರಿಗೆ ‘ಸೂರಕ್ಕಿ ಗೇಟ್' ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ 2023 ಸಾಲಿನ ಬಾಲಸಾಹಿತ್ಯ ಪುರಸ್ಕಾರ ಸಂದಿದೆ. ಇದಲ್ಲದೆ 'ಪಪ್ಪು ನಾಯಿಯ ಪ್ರೀತಿ' ಕೃತಿಗೆ  ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ, ಮುಂಬೈ ಕನ್ನಡ ಸಂಘದ ಸುಶೀಲಾ ಶೆಟ್ಟಿ ಸ್ಮಾರಕ ಪ್ರಶಸ್ತಿ,, ಕನ್ನಡ ಸಾಹಿತ್ಯ ಪರಿಷತ್ತಿನಿಂದ ಶಾರದಾ ಆರ್ ರಾವ್ ದತ್ತಿ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ. ಅವರ ಕಥೆ, ಕವಿತೆ, ಪ್ರಬಂಧಗಳು ಪ್ರತಿಷ್ಠಿತ ನಿಯತಕಾಲಿಕಗಳಲ್ಲಿ ಓದುಗರನ್ನಾಕರ್ಷಿಸುವುದರ ಜೊತೆಗೆ ಬಹುಮಾನಗಳನ್ನೂ  ಗೆದ್ದಿವೆ.

ವಿಜಯಶ್ರೀ ಹಾಲಾಡಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

Happy birthday Vijayashree M Halady
🌷🌷🌷


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ