ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎಂ. ಎ. ಹೆಗಡೆ


ಎಂ.ಎ.ಹೆಗಡೆ

ಪ್ರೊ. ಎಂ.ಎ.ಹೆಗಡೆ ಅವರು ಪ್ರಸಂಗಕರ್ತ, ವಾಗ್ಮಿ, ಸಂಸ್ಕೃತ ವಿದ್ವಾಂಸ, ಗ್ರಂಥಕರ್ತ , ಭಾಷಾಶಾಸ್ತ್ರಜ್ಞ ಮತ್ತು ನಿವೃತ್ತ ಪ್ರಾಂಶುಪಾಲ, ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಹೀಗೆ ಬಹುಮುಖಿಯಾಗಿ ಹೆಸರಾಗಿದ್ದವರು. 

ಉತ್ತರಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಜೋಗಿನ್ಮನೆ ಮೂಲದವರಾದ ಮಹಾಬಲ ಅಣ್ಣಪ್ಪ ಹೆಗಡೆ ಅವರು 1948ರ ಜುಲೈ 3ರಂದು ತಮ್ಮ ತಾಯಿಯ ತವರೂರಾದ ದಂಟ್ಕಲ್ ಎಂಬಲ್ಲಿ ಜನಿಸಿದರು. ತಂದೆ ಅಣ್ಣಪ್ಪ ಹೆಗಡೆ. ತಾಯಿ ಕಾಮಾಕ್ಷಿ.

ಹೆಗಡೆ ಅವರು ಉಪನ್ಯಾಸಕರಾಗಿ ಮೂರೂವರೆ ದಶಕಗಳ ಕಾಲ ಸಿದ್ದಾಪುರ, ಹುಬ್ಬಳ್ಳಿಯಲ್ಲಿ ಕಾರ್ಯನಿರ್ವಹಿಸಿದ್ದರು. ನಿರಂತರವಾಗಿ ಜೀವನಪರ್ಯಂತ ಯಕ್ಷಗಾನ, ತಾಳಮದ್ದಲೆ ಕ್ಷೇತ್ರದಲ್ಲಿ ಕ್ರಿಯಾಶೀಲರಾಗಿ ತೊಡಗಿಸಿಕೊಂಡ ಹೆಗ್ಗಳಿಕೆ ಅವರದಾಗಿತ್ತು. 

ಯಕ್ಷಗಾನದ ಅರ್ಥಧಾರಿ ಹಾಗೂ ಪ್ರಸಂಗಕರ್ತರಾಗಿದ್ದ ಪ್ರೊ. ಎಂ.ಎ.ಹೆಗಡೆ ಅವರು ಎರಡು ಅವಧಿಗೆ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿದ್ದರು. ಕೋವಿಡ್–19 ಲಾಕ್‌ಡೌನ್‌ ಅವಧಿಯಲ್ಲಿ ಯಕ್ಷಗಾನ ಲೋಕದ ಪ್ರಸಿದ್ಧ ಹಿರಿಯ ಕಲಾವಿದರ ಜೊತೆ ಅಂತರಜಾಲ‌ ರೂಪದಲ್ಲಿ ‘ಮಾತಿನ ಮಂಟಪ’ ಮಾತುಕತೆ ಕಾರ್ಯಕ್ರಮ ಆಯೋಜಿಸಿದ್ದರು. ಈ ಕಾರ್ಯಕ್ರಮದಡಿ 100ಕ್ಕೂ ಅಧಿಕ ಕಲಾವಿದರ ಬದುಕಿನ ಚಿತ್ರಣವನ್ನು ಕಟ್ಟಿಕೊಟ್ಟಿದ್ದರು. ಅಕಾಡೆಮಿ‌ ಅಧ್ಯಕ್ಷರಾಗಿ ಕಲೆ, ಕಲಾವಿದರ ಉನ್ನತಿಗಾಗಿ ಎಂ.ಎ.ಹೆಗಡೆ ಅವರು ಸಾಕಷ್ಟು ಶ್ರಮಿಸಿದ್ದರು. ಕಲಾವಿದರ ವಲಯದಲ್ಲಿಯೂ ಹೆಗಡೆ ಅವರ ಬಗ್ಗೆ ಅಪಾರ ಗೌರವವಿತ್ತು.

ಯಕ್ಷಗಾನ ಕ್ಷೇತ್ರದಲ್ಲಿ ವೇಷಧಾರಿ, ಅರ್ಥಧಾರಿ, ಪ್ರಸಂಗಕರ್ತ, ಸಂಶೋಧಕ ಮತ್ತು ಚಿಂತಕರಾಗಿ ಅವರು ಹೆಸರು ಮಾಡಿದ್ದರು. ‘ಸೀತಾ ವಿಯೋಗ’, ‘ರಾಜಾಕರಂಧಮ’, ‘ವಿಜಯೀ ವಿಶ್ರುತ’, ‘ಧರ್ಮ ದುರಂತ’ ಸೇರಿ ಇಪ್ಪತ್ತಕ್ಕೂ ಹೆಚ್ಚು ಯಕ್ಷಗಾನ ಪ್ರಸಂಗ ರಚಿಸಿದ್ದರು. ಯಕ್ಷಗಾನದ ಮೊದಲ ಕೃತಿ ‘ಆದಿಪರ್ವ’ ಸಂಪಾದಿಸಿದ್ದರು. ಅನೇಕ ಹಸ್ತಪ್ರತಿಗಳನ್ನು ಸಂಗ್ರಹಿಸಿ ಪ್ರಕಟಿಸಲು ಕಾರಣರಾಗಿದ್ದರು.

ಪ್ರೊ. ಎಂ.ಎ.ಹೆಗಡೆ ಕಲೆಯ ಬಗೆಗೆ ನೂರಾರು ಲೇಖನಗಳನ್ನು ಬರೆದಿದ್ದರು. ಗೋಷ್ಠಿ, ಸಮ್ಮೇಳನಗಳಲ್ಲಿ ಪ್ರಬಂಧಕಾರರಾಗಿ, ಅಧ್ಯಕ್ಷರಾಗಿ ಭಾಗವಹಿಸಿದ್ದರು. ಶಿರಸಿಯಲ್ಲಿ ನಡೆದ ಅಖಿಲ ಭಾರತ ಯಕ್ಷಗಾನ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಯಕ್ಷಗಾನಕ್ಕೆ ಸಂಬಂಧಿಸಿದ ಹಲವಾರು ಸಂಘಸಂಸ್ಥೆಗಳಿಗೆ ಮಾರ್ಗದರ್ಶಕರಾಗಿದ್ದರು.

'ಬ್ರಹ್ಮಸೂತ್ರ ಚತುಃಸೂತ್ರಿ', 'ಅಲಂಕಾರತತ್ವ', 'ಭಾರತೀಯ ತತ್ವಶಾಸ್ತ್ರ ಪ್ರವೇಶ', 'ಕುಮಾರಿಲಭಟ್ಟ', 'ಶಬ್ದ ಮತ್ತು ಜಗತ್ತು', 'ಸೌಂದರ್ಯ ಲಹರಿ ಮತ್ತು ಸಮಾಜ', 'ಹಿಂದೂ ಸಂಸ್ಕಾರಗಳು', 'ಕೆರೆಮನೆ ಶಂಭು ಹೆಗಡೆ', 'ಮರೆಯಲಾಗದ ಮಹಾಬಲ', 'ಉತ್ತರ ಕನ್ನಡ ಜಿಲ್ಲೆಯ ಯಕ್ಷಗಾನ ಸಾಹಿತ್ಯ ಚರಿತ್ರೆ' ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಕೃತಿ ರಚಿಸಿದ್ದರು. 

ಪ್ರೊ. ಎಂ.ಎ.ಹೆಗಡೆ ಅವರಿಗೆ ಯಕ್ಷಗಾನ ಸೇವೆಗಾಗಿ ಸದಾನಂದ ಪ್ರಶಸ್ತಿ, ಶೇಣಿ ಪುರಸ್ಕಾರ, ಚಿಟ್ಟಾಣಿ ಪ್ರಶಸ್ತಿ ಮುಂತಾದ ಗೌರವಗಳು ಸಂದಿದ್ದವು. ಇವರ 'ಸಿದ್ಧಾಂತಬಿಂದು' ಗ್ರಂಥಕ್ಕೆ ಪ್ರೊ.ಎಂ. ಹಿರಿಯಣ್ಣ ಪುರಸ್ಕಾರ, ಭಾರತೀಯ ದರ್ಶನಗಳು ಮತ್ತು ಭಾಷೆ ಎಂಬ ಗ್ರಂಥಕ್ಕೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದ್ದವು.

ಮಹಾನ್ ವಿದ್ವಾಂಸರೂ ಕ್ರಿಯಾಶೀಲರೂ, ಕಲಾ ಪೋಷಕರೂ, ಸಂಘಟಕರೂ ಆದ ಮಹಾಬಲ ಅಣ್ಣಪ್ಪ ಹೆಗಡೆ 2021ರ ಏಪ್ರಿಲ್ 18ರಂದು ಈ ಲೋಕವನ್ನಗಲಿದರು. 

Prof. M. A. Hegde 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ