ಭಾರತಕಥಾಮಂಜರಿ126
ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರಿ
ಕರ್ಣ ಪರ್ವ - ಹದಿನಾರನೆಯ ಸಂಧಿ
ಸೂ.
ರಾಯರಿಪುಭಟಗಿರಿನಿವಹ ವ
ಜ್ರಾಯುಧನು ಕಲಿಪಾರ್ಥನಂಭೋ
ಜಾಯತಾಂಬಕ ಸಹಿತ ಕಂಡನು ಧರ್ಮನಂದನನ
ಕೇಳು ಧೃತರಾಷ್ಟ್ರಾವನಿಪ ಬಲು
ಗಾಳೆಗವ ಭೀಮಂಗೆ ಸೇರಿಸಿ
ಪಾಳೆಯಕೆ ತಿರುಗಿದರು ಕೃಷ್ಣಾರ್ಜುನರು ದುಗುಡದಲಿ
ಹೇಳು ಮುರಹರ ಬುದ್ಧಿ ಕದಡಿ ಛ
ಡಾಳಿಸಿತು ಪರಿಭೇದವೊಸಗೆಯ
ಕೇಳಲರಿಯೆನು ರಾಜವಾರ್ತೆಯನೆಂದನಾ ಪಾರ್ಥ ೧
ನೋಡುವೆವು ನಡೆ ಧರ್ಮಪುತ್ರನ
ಕೇಡು ಕಲಿಯುಗ ಬೀಜವೀ ಪರಿ
ಕೂಡದೀ ಹೊತ್ತಿನಲಿ ಧರ್ಮಸ್ಥಿತಿಗೆ ಲಯವಿಲ್ಲ
ಖೇಡನಾಗದಿರಿದಕೆ ಚಿಂತಿಸ
ಬೇಡೆನುತ ಫಲುಗುಣನ ಚಿತ್ತದ
ಪಾಡರಿದು ನುಡಿವುತ್ತ ತಂದನು ಪಾಳೆಯಕೆ ರಥವ ೨
ಬರಲು ಪಾರ್ಥನ ಕಂಡು ಪುರಜನ
ಹರೆದುದಲ್ಲಿಯದಲ್ಲಿ ದುಗುಡದ
ಭರದ ಗುಜುಗುಜು ಗೋಷ್ಠಿಗಳ ಜನಜನದ ಮುಸುಕುಗಳ
ಮುರಿದ ನೀಹಾರದ ವಿಹಾರದ
ಸರಸಿರುಹವನದಂತೆ ಪಾಳೆಯ
ದಿರವು ಲೇಸಲ್ಲೆನುತ ಬಂದನು ರಾಜಮಂದಿರಕೆ ೩
ಕಳಚಿದನು ಸೀಸಕವ ಬೆಂಬ
ತ್ತಳಿಕೆಯನು ವಜ್ರಾಂಗಿ ಮೊಚ್ಚೆಯ
ಬಿಲುಸರಳನಿಳುಹಿದನು ರಥದಲಿ ದೈತ್ಯರಿಪು ಸಹಿತ
ಇಳಿದು ರಥವನು ರಣದ ಭಾರಿಯ
ಬಳಲಿಕೆಯ ಕೈಕೊಳ್ಳದರಸನ
ನಿಳಯವನು ಹೊಕ್ಕನು ಧನಂಜಯ ಕಂಡನವನಿಪನ ೪
ಝೊಂಪಿಸುವ ಸಿರಿಮೊಗದ ನೋಟದ
ಸೊಂಪಡಗಿದಾಲಿಗಳ ಧೈರ‍್ಯದ
ಗುಂಪಳಿದ ನಿಜ ರಾಜತೇಜದ ವಿಪುಳ ವೇದನೆಯ
ಬಿಂಪಗಿವ ಬೇಸರಿರಿನ ತುರುಗಿದ
ತಂಪಿನಗ್ಗಳಿಕೆಯ ವಿಘಾತಿಯ
ಝೊಂಪಿನಲಿ ಹುದುಗಿದ ಮಹೀಶನ ಕಂಡನಾ ಪಾರ್ಥ ೫
ಬಿಗಿದು ಕಟ್ಟಿದ ಘಾಯ ಮದ್ದಿನ
ಜಿಗಿಯ ತೈಲದ ತಳಿತ ಲೇಪದ
ಲುಗಿದ ಬಾಣವ್ಯಥೆಯ ಕರ್ಣಧ್ಯಾನಚೇತನದ
ಸೊಗಸು ಮಿಗೆ ದ್ರೌಪದಿಯ ತುದಿವೆರ
ಳುಗುರುವೆರಸಿದ ಸಿರಿಮುಡಿಯ ಬಲು
ದುಗುಡ ಭರದಲಿ ಕುಸಿದ ಭೂಪನ ಕಂಡನಾ ಪಾರ್ಥ ೬
ನಕುಳ ಧೃಷ್ಟದ್ಯುಮ್ನ ಸಹದೇ
ವಕ ಯುಧಾಮನ್ಯುಕನು ಸುತಸೋ
ಮಕ ಶತಾನೀಕ ಪ್ರಬುದ್ಧಕ ಚೇಕಿತಾನಕರು
ಸಕಲ ಕೈಕೆಯ ಮತ್ಸ್ಯಸುತ ಸಾ
ತ್ಯಕಿ ಯುಯುತ್ಸು ಶಿಖಂಡಿ ಪ್ರತಿವಿಂ
ಧ್ಯಕರು ಪಾರ್ಥನನುಪಚರಿಸಿ ಕುಳ್ಳಿರ್ದರಲ್ಲಲ್ಲಿ ೭
ಕರಗಿತಂತಃಕರಣವಾಲಿಗ
ಳೊರತೆಯೆನೆ ಕಣ್ಣಾಲಿಯಲಿ ಕಾ
ತರಿಸಿದವು ಜಲಬಿಂದುಗಳು ಪುರುಹೂತ ನಂದನನ
ಅರಸನಿರವಿದೆಯೆನುತ ನೊಸಲನು
ಚರಣದಲಿ ಚಾಚಿದನು ಚೇಷ್ಟಾ
ಪರಿಗತಿಯನಾರೈವುತಭಿಮುಖನಾಗಿ ಕುಳ್ಳಿರ್ದ ೮
ನೊಂದೆಲಾ ನರನಾಥ ವಿಧಿಯೇ
ನೆಂದು ಮುನಿದುದೊ ನಿನಗೆನುತ್ತ ಮು
ಕುಂದನತಿ ಕಾರುಣ್ಯ ದೃಷ್ಟಿಯಲವನಿಪನ ನೋಡಿ
ಮಂದಮಂದದಿ ಪಾಣಿಪಲ್ಲವ
ದಿಂದ ತಡವಿದನೇರನಾಗಳೆ
ಕಂದೆರೆದು ನೋಡಿದನು ಭೂಪತಿ ಕೃಷ್ಣ ಫಲುಗುಣರ ೯
ಹರಿ ಕರಾಬ್ಜಸ್ಪರ್ಶ ಮಾತ್ರ
ಸ್ಫುರಣದಿಂದಾಪ್ಯಾಯಿತಾಂತಃ
ಕರಣನಾದನು ನನೆದನುದ್ಗತ ಬಾಷ್ಪವಾರಿಯಲಿ
ಮುರಿಯದೇರಿನ ಮೈವಳಿಗೆ ಲಘು
ತರದ ಲುಳಿಯಲಿ ಮೈಯ ಬಲಿದಾ
ದರಿಸಿ ಕುಳ್ಳಿರ್ದನು ಮಹೀಪತಿ ಮಾನಿನಿಯ ಮಲಗಿ ೧೦
ಹದುಳವೇ ಪಾರ್ಥಂಗೆ ಹೇರಾ
ಳದಲಿ ಕಾದಿದನಾ ಸುಶರ್ಮನ
ಕದನ ಬೆಟ್ಟಿತು ಶಪಥವಲ್ಲಾ ತಮ್ಮೊಳನಿಬರಿಗೆ
ಕೆದರಿದನು ಕೊಲ್ಲಣಿಗೆಯಲಿ ಬಂ
ದೊದಗಿ ನೀವವದಿರಲಿ ಸುಯ್ದಾ
ನದಲಿ ಬಂದುದೆ ಲಕ್ಷವೆಂದನು ನೃಪತಿ ಕೃಷ್ಣಂಗೆ ೧೧
ಆಯಿತಿದು ನೀ ಬಂದ ಪರಿ ರಿಪು
ರಾಯ ಥಟ್ಟಿನೊಳೊಕ್ಕಲಿಕ್ಕಿದ
ದಾಯವೊಳ್ಳಿತು ದಿಟ್ಟನಾವನು ನಿನ್ನ ಹೋಲಿಸಲು
ಕಾಯದರಿ ಕಳುಹಿದನೊ ಮೇಣಡ
ಹಾಯಿದನೊ ಕರ್ಣಂಗೆ ಮಾಡಿದು
ಪಾಯವಾವುದು ಪಾರ್ಥ ಹೇಳೆಂದವನಿಪತಿ ನುಡಿದ ೧೨
ಬೇರೆ ಸಮಸಪ್ತಕರೊಳೆಕ್ಕಟಿ
ತೋರಿಸಿದೆ ನೀ ತೊಂಡಿನೋಲೆಯ
ಕಾರತನವನು ಸೂತಸುತನಿಲ್ಲವರ ಥಟ್ಟಿನಲಿ
ಹಾರಲೂದಿ ಸುಶರ್ಮನವದಿರ
ತೂರಿ ತಿರುಗಿದ ಬಳಿಕ ಕೈ ಮೈ
ತೋರಿದನೆ ಕಲಿಕರ್ಣ ನಿನ್ನೊಡನೆಂದನಾ ಭೂಪ ೧೩
ಎಲೆ ಧನಂಜಯ ಸೂತತನಯನ
ಗೆಲಿದು ಬಂದೆಯೊ ದಿವಿಜ ನಗರಿಗೆ
ಕಳುಹಿ ಬಂದೆಯೊ ಕಂಡು ಕೆಣಕದೆ ಬಂದೆಯೋ ಮೇಣು
ಉಳುಹಿ ಬಿಡುವನೆ ಸಮರ ಮುಖದಲಿ
ಮಲೆತನಾದರೆ ಕರ್ಣನೇನ
ಗ್ಗಳಿಕೆವಡೆದನೊ ಶಿವ ಶಿವಾ ಎಂದರಸ ಬಿಸುಸುಯ್ದ ೧೪
ಜೀಯ ಖಾತಿಯಿದೇಕೆ ಕರ್ಣನ
ಕಾಯಿದುಳುಹಿದೆನೊಂದು ಬಾರಿ ವಿ
ಘಾಯದಲಿ ಘಟ್ಟಿಸುವೆನೀಗಳೆ ಹಾಯ್ಕು ವೀಳೆಯವ
ರಾಯದಳಗಿಳವೆನ್ನ ಕೂಡೆ ನ
ವಾಯಿಯೇ ಕಲಿಕರ್ಣನಾಯುಷ
ಹೋಯಿತಿದೆಯೆಂದೊರಸಿದನು ವಾಮಾಂಘ್ರಿಯಲಿನೆಲನ ೧೫
ಈಸು ಪರಿಯಲಿ ನಿಮ್ಮ ಚಿತ್ತದೊ
ಳಾಸರಾಯಿತೆ ನಮ್ಮ ದುಷ್ಕೃತ
ವಾಸನಾ ಫಲವೈಸಲೇ ತಾನಿದ್ದು ಫಲವೇನು
ಆ ಸುಯೋಧನ ವಿಗಡ ಭಟ ವಾ
ರಾಸಿಯನು ಮುಕ್ಕುಳಿಸುವೆನು ಧರ
ಣೀಶ ನಿಮ್ಮಡಿಯಾಣೆ ನೇಮವ ಕೊಂಡೆ ನಾನೆಂದ ೧೬
ನಾಲಗೆಯ ನೆಣಗೊಬ್ಬು ಮಿಕ್ಕು ಛ
ಢಾಳಿಸಿದರೇನಹುದು ಕರ್ಣನ
ಕೋಲಗರಿ ಸೋಂಕಿದರೆ ಸೀಯದೆ ಸಿತಗತನ ನಿನಗೆ
ವೀಳೆಯವ ತಾ ಕರ್ಣನಾಯುಷ
ಕೋಳುವೋಯಿತ್ತೆಂಬ ಗರ್ವನ
ಗಾಳುತನವನು ನಂಬಲರಿವೆನೆ ಪಾರ್ಥ ಹೇಳೆಂದ ೧೭
ನಿನಗೆ ಮಣಿವವನಲ್ಲ ರಾಧಾ
ತನಯನವ ಹೆಚ್ಚಾಳು ಕಡ್ಡಿಯ
ಮೊನೆಗೆ ಕೊಂಬನೆ ನಿನ್ನನೀ ಹೆಮ್ಮಕ್ಕಳಿದಿರಿನಲಿ
ಕನಲಿ ಕಳವಳಿಸಿದರೆ ನೀನಾ
ತನ ವಿಭಾಡಿಸಲಾಪ ಸತ್ವದ
ಮನವ ಬಲ್ಲೆನು ಪಾರ್ಥ ನುಡಿಯದಿರೆಂದನಾ ಭೂಪ ೧೮
ಬಲನ ಜಂಭನ ಕೈಟಭನ ದಶ
ಗಳನ ನಮುಚಿಯ ಕಾಲನೇಮಿಯ
ಬಲ ನಿಶುಂಭ ಹಿರಣ್ಯಕಾದಿಯ ಖಳರ ಸಂದೋಹ
ಅಳವಿಗೊಡುವರೆ ಪಾಡಹುದು ನೀ
ನಿಲುಕಲಳವೇ ಕರ್ಣಜಯವತಿ
ಸುಲಭವೇ ನಿನ್ನಂದದವರಿಗೆ ಪಾರ್ಥ ಹೇಳೆಂದ ೧೯
ಜಾಣತನದಲಿ ಕಾದಿ ಹಿಂಗುವ
ದ್ರೋಣನಲ್ಲಳವಿಯಲಿ ಕಳವಿನ
ಕೇಣದಲಿ ಕೊಂಡಾಡುವರೆ ಗಾಂಗೇಯನಿವನಲ್ಲ
ಸಾಣೆಗಂಡಲಗಿವನು ಸಮರಕೆ
ಹೂಣಿಗನು ರಿಪುಬಲದ ಹಾಣಾ
ಹಾಣಿಕಾರನು ಕರ್ಣನಳುಕುವನಲ್ಲ ನಿನಗೆಂದ ೨೦
ಜಾಳ ಜರಿದು ಜಡಾತ್ಮರಿಗೆ ಜಂ
ಘಾಳತನವನು ಮೆರೆದು ಖೋಡಿಯ
ಖೂಳರನು ಖೊಪ್ಪರಿಸಿ ಚೂಣಿಯ ಚರರ ಚಪ್ಪರಿಸಿ
ಆಳುತನದಲಿ ಬೆರೆವ ನಿನಗವ
ಸೋಲಲರಿಯನು ನಿನ್ನ ಗಂಟಲ
ಗಾಳ ನಿನಗಳುಕುವನೆ ಕರ್ಣನು ಪಾರ್ಥ ಹೇಳೆಂದ ೨೧
ಏನ ಹೇಳುವೆನೆನ್ನ ದಳದಲಿ
ತಾನು ಭೀಮನ ಥಟ್ಟಿನಲಿ ಬಳಿ
ಕೀ ನಕುಲ ಸಹದೇವ ಸಾತ್ಯಕಿ ದ್ರುಪದರೊಡ್ಡಿನಲಿ
ಮಾನನಿಧಿ ರಾಧೇಯನತ್ತಲು
ತಾನೆ ತನುಮಯವಾಯ್ತು ಪಾಂಡವ
ಸೇನೆ ಬಡ ಸಾಹಸಿಕರೆಣೆಯೇ ಸೂತತನಯಂಗೆ ೨೨
ಎಲ್ಲಿ ಕರ್ಣನು ತಿರುಗಿ ನೋಡಿದ
ಡಲ್ಲಿ ತಾನೆಡವಂಕ ಬಲಮುಖ
ದಲ್ಲಿ ಸೂತಜನೆಂಟು ದೆಸೆಗಳ ನೋಡೆ ಕರ್ಣಮಯ
ಎಲ್ಲಿ ನೋಡಿದಡಲ್ಲಿ ಕರ್ಣನ
ಬಿಲ್ಲ ಬೊಬ್ಬೆ ರಥಾಶ್ವರವವೆದೆ
ದಲ್ಲಣದ ದೆಖ್ಖಾಳ ರಚನಾ ರಸಿಕನವನೆಂದ ೨೩
ಮುರಿದು ಹರಿಹಂಚಾದ ನಿಜ ಮೋ
ಹರವ ನೆರೆ ಸಂತೈಸಿ ಜೋಡಿಸಿ
ಜರೆದು ಗರಿಗಟ್ಟಿದ ವಿರೋಧಿ ವ್ರಜದ ಥಟ್ಟಣೆಯ
ಮುರಿದು ಕುರಿದರಿ ಮಾಡಿ ದೊರೆಗಳ
ನರಸಿ ಕಾದಿ ವಿಭಾಡಿಸುವ ರಣ
ದುರುಬೆಕಾರನನೆಂತು ಸೈರಿಸಿ ಗೆಲುವೆ ನೀನೆಂದ ೨೪
ಕಾದಿ ನೊಂದೆನು ತಾನು ಬಳಿಕ ವೃ
ಕೋದರನೆಯಡಹಾಯ್ದನಾತನ
ಕಾದಿ ನಿಲಿಸಿ ಮದೀಯ ರಥವನು ಮತ್ತೆ ಕೆಣಕಿದನು
ಮೂದಲಿಸಿ ಸಹದೇವ ನಕುಲರು
ಕಾದಲಿವದಿರ ಮುರಿದನಗ್ಗದ
ಕೈದುಕಾರರ ದೇವ ಕರ್ಣನ ಗೆಲುವರಾರೆಂದ ೨೫
ಮಲೆತು ಧಾಳಾಧೂಳಿಯಲಿ ಬಲ
ಸುಳಿ ಮಸಗಿಯೆನ್ನೊಬ್ಬನನು ಮೈ
ಬಳಸಿ ಕಾದಿತು ವೀರಕರ್ಣನ ಕೂಡೆ ತಲೆಯೊತ್ತಿ
ಒಲವರವು ನಿನಗುಳ್ಳರಾಗಳೆ
ನಿಲಿಸಿದಾ ನೀ ಬಂದು ಬಯಲ
ಗ್ಗಳಿಕೆಯನೆ ಬಿಡೆ ಕೆದರುತಿಹೆ ಮಾಣೆಂದು ನೃಪ ನುಡಿದ ೨೬
ಉಕ್ಕಿದುದು ತನಿವೀರರಸ ಕುದಿ
ದುಕ್ಕಿ ಹರಿದುದು ರೌದ್ರರಸವವ
ರಕ್ಕಜವ ನಭಕೊತ್ತಿ ಪರಿದುದು ಶಾಂತಿರಸಲಹರಿ
ಮಿಕ್ಕು ಬಹಳ ಕ್ರೋಧವೊಡಲೊಳ
ಗುಕ್ಕಿತಮಳೋತ್ಸಾಹ ಚಾಪಳ
ಸುಕ್ಕಿತೊಂದೇ ನಿಮಿಷ ಮೋನದೊಳಿರ್ದನಾ ಪಾರ್ಥ ೨೭
ಹೇಳಲಂಜುವೆನಾ ಸುಶರ್ಮಕ
ನಾಳು ತಾಯಿಗೆ ಮಕ್ಕಳಾಗದೆ
ಬೀಳಹೊಯ್ದು ನಿಹಾರದಲಿ ತಿರುಗಿದೆನು ಹರಿಸಹಿತ
ಕೋಲಗುರುವಿನ ಮಗನಲೇ ಹರಿ
ಧಾಳಿ ಹರಿದಡಗಟ್ಟಿ ತಡೆದನು
ಹೇಳಿ ಫಲವಿನ್ನೇನೆನುತ ಬಿಸುಸುಯ್ದನಾ ಪಾರ್ಥ ೨೮
ಇಟ್ಟಣಿಸಿಕೊಂಡೆನ್ನೊಡನೆ ಸರಿ
ಗಟ್ಟಿ ಕಾದಿದ ರವಿಸುತನ ಹುಡಿ
ಗುಟ್ಟಿದೆನು ರಥವಾಜಿ ಸೂತ ಶರಾಸನಾದಿಗಳ
ಮುಟ್ಟೆ ಬಂದನು ಖಡುಗದಲಿ ಮೈ
ಮುಟ್ಟಿ ಹೆಣಗಿದೆನಾಕ್ಷಣಕೆ ಸಾ
ಲಿಟ್ಟು ಸರಿದುದು ಸಕಲ ಕೌರವಸೇನೆ ಸರಿಸದಲಿ ೨೯
ತೊಡಕಿದನು ಗಡ ಗರುಡ ಹಾವಿನ
ತಡಿಕೆವಲೆಯಲಿ ನಿನ್ನ ಗಮನವ
ತಡೆದರೈ ತಪ್ಪೇನು ಕೌರವದಳದ ನಾಯಕರು
ಕಡುಹಿನಲಿ ತಡವಾದುದುಳಿದಂ
ತೆಡೆಯಲುಳಿವರ್ಜುನನೆ ನಮ್ಮವ
ಗಡವ ಕೇಳಿದು ನಿಲ್ಲನೆಂದನು ನಗುತ ಯಮಸೂನು ೩೦
ಏನನೆಂಬೆನು ನಮ್ಮ ಪುಣ್ಯದ
ಹಾನಿ ತಲೆದೋರಿದರೆ ಭೀಮನ
ಸೂನುವಿರಲಭಿಮನ್ಯುವಿರಲೆವಗೀ ವಿಪತ್ತಹುದೆ
ಆ ನದೀಜ ದ್ರೋಣರಲಿ ತಾ
ಹಾನಿಯನು ಮಿಗೆ ಕಂಡೆನೇ ನೆರೆ
ಹೀನನನು ಕಂಡಾದಡೆಯು ಬದುಕುವುದು ಲೇಸೆಂದ ೩೧
ಅರಳಿಚದೆ ಮಧುಮಾಸ ಮಾಣಲಿ
ವರುಷ ಋತುವೇ ಸಾಕು ಜಾತಿಗೆ
ಜರಡರೆಮಗಿನ್ನೇನು ಪೂರ್ವಪ್ರಕೃತಿ ವನವಾಸ
ಸಿರಿಗೆ ಕಕ್ಕುಲಿತೆಯೆ ವಿಪಕ್ಷವ
ಬೆರಸಿ ಬದುಕುವೆವೈಸಲೇ ವರ
ಗುರುವಲಾ ಧೃತರಾಷ್ಟ್ರನೂಣೆಯವೇನು ಹೇಳೆಂದ ೩೨
ಬರಿದೆ ಬಯಸಿದಡಹುದೆ ರಾಜ್ಯದ
ಹೊರಿಗೆಯನು ನಿಶ್ಯಂಕೆಯಲಿ ಹೊ
ಕ್ಕಿರಿದು ಬಹ ಸತ್ವಾತಿಶಯ ಬೇಹುದು ರಣಾಗ್ರದಲಿ
ಇರಿದು ಮೇಣ್ ರಿಪುರಾಯರನು ಕು
ಕ್ಕುರಿಸುವರೆ ರಾಧೇಯನಂತಿರ
ಲುರುವನೊಬ್ಬನೆ ಬೇಹುದಲ್ಲದಡಿಲ್ಲ ಜಯವೆಂದ ೩೩
ಎವಗೆ ವಿಕ್ರಮವೆಂಬಡೀ ರೌ
ರವವ ಕಂಡೆನು ಕರ್ಣನಂತಿರ
ಲೆವಗೆ ಧೀವಸಿಯಾಗಿ ಕಾದುವರೆಂಬರವರಿಲ್ಲ
ಬವರ ಗೆಲುವರೆ ಹರಿಗೆ ಕೊಡು ಗಾಂ
ಡಿವವ ಸಾರಥಿಯಾಗು ನೀನೆಂ
ದವಗಡಿಸಿದನು ವೀರನಾರಾಯಣನ ಮೈದುನನ ೩೪
ಸಂಕ್ಷಿಪ್ತ ಭಾವ
Lrphks Kolar
ಧರ್ಮಜನು ಪಾರ್ಥನನ್ನು ಕರ್ಣನ ಬಗ್ಗೆ ಕೆರಳಿಸಿ ಮಾತನಾಡಿದ್ದು.
ಕೃಷ್ಣಾರ್ಜುನರು ದುಗುಡದಲ್ಲಿ ಪಾಳಯಕ್ಕೆ ಬಂದರು. ಎಲ್ಲಿಯೂ ಉತ್ಸಾಹವಿಲ್ಲದ ವಾತಾವರಣ. ಎಲ್ಲವನ್ನೂ ಬಿಸುಟು ರಥದಿಂದ ಧುಮುಕಿ ಒಳಗೆ ಓಡಿದನು ಪಾರ್ಥ. ಅಲ್ಲಿ ಧರ್ಮಜನ ಸ್ಥಿತಿ ಖೇದನೀಯವಾಗಿತ್ತು. ಎಚ್ಚರ, ಮೈಮರೆವಿನಲ್ಲಿ ಸೋತು ಒರಗಿದ್ದನು. ಗಾಯಗಳಿಗೆ ಪಟ್ಟು ಬಿಗಿದಿದ್ದರು. ದ್ರೌಪದಿ, ನಕುಲ, ಸಹದೇವ ಮುಂತಾದವರು ಸುತ್ತಲೂ ಇದ್ದರು. ಅಣ್ಣನನ್ನು ಕಂಡ ಅರ್ಜುನ ಬೆದರಿದನು. ಕಣ್ಣುಗಳಲ್ಲಿ ನೀರಾಡಿದವು. ನಮಸ್ಕರಿಸಿದನು.
ಧರ್ಮಜನು ಕಣ್ಣು ತೆರೆದು ಇಬ್ಬರನ್ನೂ ನೋಡಿದನು. ತನ್ನ ದೈನ್ಯದ ಸ್ಥಿತಿಗೆ ನೊಂದನು. ಕರ್ಣನನ್ನು ಗೆಲಿದು ಬಂದೆಯಾ ಎಂದು ಅರ್ಜುನನನ್ನು ಕೇಳಿದನು. ಸಂಶಪ್ತಕರು ತಡೆದರು. ಅವರೊಡನೆ ಹೋರಾಡಬೇಕಾಯಿತು ಎನ್ನಲು ಧರ್ಮಜನಿಗೆ ಬಹಳ ಕೋಪ ಬಂದಿತು. ತನ್ನನ್ನು ಈ ಸ್ಥಿತಿಗೆ ತಂದ ಕರ್ಣನು ಇನ್ನೂ ಉಳಿದಿರುವನಲ್ಲ ಎಂದು ಬೇಸರಿಸಿದನು.
ಕರ್ಣನು ಪರಾಕ್ರಮಿ. ನಿನಗೆ ಅವನು ಸೋಲುವವನಲ್ಲ. ಆಯಿತು, ಇನ್ನು ಮತ್ತೆ ನಮಗೆ ವನವಾಸವೇ ಗತಿಯೆಂದು ಹೇಳುತ್ತ ಅರ್ಜುನನನ್ನು ಕುರಿತು ವ್ಯಂಗ್ಯ ನುಡಿಗಳನ್ನು ನುಡಿದನು. ಜಾಣತನದಲ್ಲಿ ಕಾದಲು ಇವನೇನೂ ಭೀಷ್ಮ ದ್ರೋಣರಂತಲ್ಲವೆಂದನು. ಸೂತತನಯನಿಂದ ಸೋಲುವಂತಾಗುವುದು ಹೀನಕೃತ್ಯ. ಇಂತಹದನ್ನು ನೋಡುವ ಬದಲು ಸಾಯುವುದೇ ಲೇಸೆಂದನು. ಯುದ್ಧರಂಗದಲ್ಲಿ ಎಲ್ಲಿ ತಿರುಗಿದರಲ್ಲಿ ಕರ್ಣನ ಪರಾಕ್ರಮವೇ ತೋರುತ್ತಿದೆ. ನಕುಲಾದಿಗಳನ್ನು ಕ್ಷಣಮಾತ್ರದಲ್ಲಿ ಹಿಮ್ಮೆಟ್ಟಿಸಿದನಲ್ಲ. ಅವನ ಪರಾಕ್ರಮದ ಮುಂದೆ ನೀನು ಹೇಗೆ ಗೆಲ್ಲುವೆಯೆಂದು ಬಹಳ ಹೀಯಾಳಿಸಿದ. ಜ್ವರದ ತಾಪದಲ್ಲಿ ಅವನು ಆಡಿದ ಒಂದೊಂದು ಮಾತೂ ಶೂಲದಂತೆ ಅರ್ಜುನನನ್ನು ಇರಿಯಿತು.
ತಾನೂ ಬಹಳವಾಗಿ ಪ್ರಯತ್ನಿಸಿದೆ. ಆದರೆ ಅಡಿಗಡಿಗೂ ಗುರುಸುತ ಮತ್ತು ಕೃಪ, ಕೃತವರ್ಮರು ತಡೆದರು. ಹೇಳಿ ಫಲವಿನ್ನೇನೆಂದು ನಿಟ್ಟುಸಿರಿಟ್ಟನು. ಆದರೆ ಧರ್ಮಜನ ನಿಂದನೆ ತಪ್ಪಲಿಲ್ಲ. ಮತ್ತಷ್ಟು ತೀಕ್ಷ್ಣವಾಗಿ ಮುಂದುವರೆಯಿತು. ಯುದ್ಧ ಮಾಡಬೇಕೆಂದು ಅಂದುಕೊಂಡರೆ ನೀನು ಸಾರಥಿಯಾಗು. ಕೃಷ್ಣನಿಗೆ ಯುದ್ಧ ಬಿಟ್ಟುಕೊಡು ಎಂದೆಲ್ಲ ಹೇಳಿ ಅರ್ಜುನನ ಮನಸ್ಸನ್ನು ಕೆರಳಿಸಿದ.
ಕಾಮೆಂಟ್‌ಗಳು