ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಭಾರತಕಥಾಮಂಜರಿ127


 ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರಿ 
ಕರ್ಣ ಪರ್ವ - ಹದಿನೇಳನೆಯ ಸಂಧಿ

 
ಸೂ.   
ರಾಯನನು ಕೆಡೆನುಡಿದನಾ ವಜ್ರಾಯುಧನ ನಂದನನು ಬಳಿಕಬುಜಾಯತಾಂಬಕ ಸಂತವಿಟ್ಟನು ಧರ್ಮಜಾರ್ಜುನರ   
 
ಕೇಳು ಧೃತರಾಷ್ಟ್ರಾವನಿಪ ಭೂ
ಪಾಲನಾಡಿದ ನುಡಿಯನಾಲಿಸಿ
ಕೇಳಿದನು ಕೆದರಿದನು ಜಡಿದವು ರೋಮರಾಜಿಗಳು
ಮೇಲು ಮೇಲುಬ್ಬೇಳ್ವ ರೋಷ
ಜ್ವಾಲೆ ಹೊದಸಿತು ವದನವನು ಕ
ಣ್ಣಾಲಿ ಕಾಹೇರಿದವು ಪಾರ್ಥಂಗೊಂದು ನಿಮಿಷದಲಿ        ೧  
 
ಆಯುಧವ ಹಿಡಿದೊರೆಯಿನುಗಿದನ
ಡಾಯುಧವ ಝಳಪಿಸುತ ರೌದ್ರ
ಸ್ಥಾಯಿಭಾವದ ಭಾರದಲಿ ಭುಲ್ಲಯಿಸಿ ಭಯವಡಗಿ
ರಾಯನಲ್ಲಿಗೆ ಮೆಲ್ಲ ಮೆಲ್ಲನು
ಪಾಯಗತಿ ಪಲ್ಲವಿಸಲುಪ್ಪರ
ಘಾಯದಲಿ ಲಾಗಿಸುವ ಪಾರ್ಥನ ಕಂಡುದಖಿಳಜನ    ೨  
 
ಅಹಹ ಕೈತಪ್ಪಾಯ್ತು ಹಾ ಹಾ
ರಹವಿದೇನೆನುತ ರಾಯನ
ಮಹಿಳೆ ಬಿದ್ದಳು ಮೇಲುಖಡ್ಗಕೆ ತನ್ನನಡೆಯೊಡ್ಡಿ
ಬಹಳ ಶೋಕದಲಖಿಳಜನವು
ಮ್ಮಹವ ಬಿಸುಟರು ದೈವಗತಿ ದು
ಸ್ಸಹವಲಾ ಎನುತಸುರರಿಪು ಹಿಡಿದನು ಧನಂಜಯನ        ೩  
 
ಹಿಡಿಯದಿರು ಮುರವೈರಿ ಪಾರ್ಥನ
ಬಿಡು ಬಿಡೀತನ ಖಡ್ಗಕಿದೆಯೆ
ನ್ನೊಡಲು ತನ್ನನೆ ಧಾರೆಯೆರೆದೆನು ನಯನವಾರಿಯಲಿ
ತೊಡಗಿದೀತನ ರಾಜಕಾರ‍್ಯವ
ಕೆಡಿಸದಿರು ನಿರ್ವಾಹಿಸಲಿ ನೀ
ಬಿಡು ಬಿಡೆನೆ ಜರಿದನು ಮುರಾಂತಕನಿಂದ್ರನಂದನನ        ೪  
 
ಅಕಟ ಗುರುಹತ್ಯಾ ಮಹಾ ಪಾ
ತಕಕೆ ತಂದೈ ಮನವ ಭರತ
ಪ್ರಕಟಕುಲ ನಿರ‍್ಮೂಲಕನೆ ನೀನೊಬ್ಬನುದಿಸಿದಲ
ವಿಕಳ ಕುರುನೃಪರೊಳಗೆ ದುರಿತಾ
ತ್ಮಕರ ಕಾಣೆನು ನಿನ್ನ ಸರಿ ಹೋ
ಲಿಕೆಗೆ ಹರಹರದೇನ ನೆನೆದೆಯೆನುತ್ತ ಗರ್ಜಿಸಿದ         ೫  
 
ಧರಣಿಪನ ಕೊಲಲೆಂದೊ ಮೇಣೀ
ತರುಣಿಯರಿಗೋ ನಕುಲ ಸಹದೇ
ವರಿಗೆಯೋ ಮೇಣೆನಗೆಯೋ ನೀನುಗಿದಡಾಯುಧದ
ಪರಿಯ ಹೇಳೈ ಪಾರ್ಥ ಮೋನದೊ
ಳಿರದಿರೆನ್ನಾಣೆನಲು ಬೆರಗಿನ
ಗರದ ಗಾಹಿನಲದ್ದು ಮೋನದೊಳಿದ್ದನಾ ಪಾರ್ಥ         ೬  
 
ಬೆದರಿಸದಿರೈ ಕೃಷ್ಣ ದುಷ್ಕರ‍್ಮದಲಿ
ಸುಳಿಯೆನು ಭೂಪತಿಯ ಗ
ದ್ಗದ ವಚೋವಿನ್ಯಾಸವನ್ಯಾಯಪ್ರಪಂಚವಿದು
ಅದರಿನೀತನ ಪೊಯ್ದು ಕೊಂದ
ಲ್ಲದೆ ಸುನಿಷ್ಕೃತಿಯಿಲ್ಲ ಸತ್ಯಾ
ಭ್ಯುದಯವೇ ತನ್ನುದಯವದರಳಿವೆನ್ನ ಲಯವೆಂದ      ೭  
 
ದೇವ ಪೂರ‍್ವದಲೆನ್ನ ನುಡಿ ಗಾಂ
ಡೀವವೇತಕೆ ನಿನಗೆ ನಿನಗೀ
ದೇವಧನು ಸಾದೃಶ್ಯವೇ ತೆಗೆಯೆಂದು ರೋಷದಲಿ
ಆವನೊಬ್ಬನು ನುಡಿದನಾತನ
ಜೀವನವ ಜಕ್ಕುಲಿಸಿಯೆನ್ನ ವ
ಚೋವಿಳಾಸವ ಕಾಯ್ವೆನೆಂದೆನು ಕೃಷ್ಣ ಕೇಳೆಂದ         ೮  
 
ಸಾರು ತೆಗೆ ಗಾಂಡಿವವ ನಿನಗನು
ಸಾರಿಯೇ ಬಿಸುಡೆಂದು ನುಡಿಯನೆ
ಧಾರುಣೀಪತಿ ಕೇಳಿರೇ ನೀವಿನಿಬರೀ ನುಡಿಯ
ಆರದನ್ಯಾಯವು ವಿಚಾರ ವಿ
ಶಾರದನು ನೀನೆಲೆ ಮುಕುಂದ ವಿ
ಕಾರಿಯೇ ತಾನೆಂದು ಬಿನ್ನಹ ಮಾಡಿದನು ಪಾರ್ಥ        ೯  
 
ಲೇಸು ಲೇಸಿದು ತಮ್ಮನಾಡಿದ
ಭಾಷೆ ಬಾಹಿರವಾಗಬೇಡ ವಿ
ನಾಶಕಾನಂಜೆನು ಮುರಾಂತಕ ಬಿಡು ಧನಂಜಯನ
ಆಸೆಯೆನಗೀ ರಾಜ್ಯದಲಿ ಮೇ
ಣೀ ಶರೀರದಲಿಲ್ಲ ಪಾರ್ಥನ
ಭಾಷೆ ಸಂದರೆ ಸಾಕು ನೀ ಸಾರೆಂದನಾ ಭೂಪ         ೧೦  
 
ಮರುಳೆ ಮೋನದೊಳಿರು ಯುಧಿಷ್ಠಿರ
ನರನ ನೀ ಮುಂದಿಟ್ಟು ಯಮದೂ
ತರಿಗೆ ಕೈವರ್ತಿಸುವ ಪರಿಯೇ ಕೋಟಿ ನರಕದಲಿ
ಹುರುಳನರಿಯದೆ ಧರ್ಮಶಾಸ್ತ್ರದ
ಪರಮತತ್ತ್ವವದಾವ ಮುಖವೆಂ
ದರಿಯೆ ವಿಷಮ ಕ್ಷತ್ರತಾಮಸ ನಿನ್ನ ಬಿಡದೆಂದ          ೧೧  
 
ಎಲೆ ಧನಂಜಯ ಧರ್ಮಪುತ್ರನ
ಕೊಲುವೆನುಳುಹುವದಿಲ್ಲವೆಂಬ
ಗ್ಗಳಿಕೆಯಿದು ನಗೆಯಲ್ಲವೇ ನಿಶ್ಚಯವೆ ಹಿಂಸೆಯಲಿ
ಕಲುಮನವಲಾ ನಿನಗಕಟ ನಿ
ರ್ಮಳದ ಧರ್ಮಸ್ಥಿತಿ ರಹಸ್ಯವ
ತಿಳುಪಿದವರಾರೆನುತ ತಲೆದೂಗಿದನು ಮುರವೈರಿ       ೧೨  
 
ನುಡಿದ ಮಾತ್ರದಲಿರದು ಧರ್ಮದ
ಬೆಡಗು ತಾನದು ಬೇರೆ ಸತ್ಯವ
ನುಡಿದು ಕೆಟ್ಟವರುಂಟು ಹಿಂಸಾಧರ್ಮವೃತ್ತಿಯಲಿ
ನಡೆದು ಯಾವಜ್ಜೀವದಲಿ ಗತಿ
ವಡೆದರುಂಟೆಲೆ ಪಾರ್ಥ ನಿನ್ನು
ಗ್ಗಡದ ವೀರಾವೇಶ ಮಾಣಲಿ ಮಾತ ಕೇಳೆಂದ         ೧೩  
 
ವನದೊಳೊಬ್ಬನು ಕೌಶಿಕಾಹ್ವಯ
ಮುನಿ ತಪಶ್ಚರಿಯದಲಿ ಸತ್ಯವೆ
ತನಗೆ ಸುವ್ರತವೆಂದು ಬಟ್ಟೆಯೊಳಿದ್ದನೊಂದು ದಿನ
ವನಚರರು ಬೇಹಿನಲಿ ಭೂಸುರ
ಜನವ ಬೆಂಬತ್ತಿದರು ಕೌಶಿಕ
ಮುನಿಯ ಬೆಸಗೊಂಡರು ಮಹೀಸುರಮಾರ್ಗಸಂಗತಿಯ    ೧೪  
 
ವಿತತ ಸತ್ಯದ ವಿಷಯಭೇದ
ಸ್ಥಿತಿಯನಱಿಯದ ಮುನಿಪ ವನಚರ
ತತಿಗೆ ಭೂಸುರಜನದ ಮಾರ್ಗವನರುಹಿದನು ಬಳಿಕ
ಅತಿ ದುರಾತ್ಮಕರವದಿರನಿಬರು
ಕ್ಷಿತಿಸುರರ ಕೊಂದಮಳಭೂಷ
ಪ್ರತತಿಯನು ಕೊಂಡೊಯ್ದರೆಲೆ ಕೌಂತೇಯ ಕೇಳೆಂದ     ೧೫  
 
ಕಾಲವಶದಲಿ ಕೌಶಿಕನನಾ
ಕಾಲದೂತರು ತಂದರಾತನ
ಮೇಲುಪೋಗಿನ ಸುಕೃತ ದುಷ್ಕೃತವನು ವಿಚಾರಿಸಲು
ಮೇಲನರಿಯದೆ ಸತ್ಯದಲಿ ವಿ
ಪ್ರಾಳಿ ವಧೆಯಾತಂಗೆ ಬಂದುದು
ಹೇಳಲದು ಭೋಕ್ತವ್ಯವತಿ ಪಾತಕದ ಫಲವೆಂದ         ೧೬  
 
ನರಕಕಾತನ ನೂಕಿದರು ವಿ
ಸ್ತರಣವೆಂತೈ ಪಾರ್ಥ ಸತ್ಯದ
ಹುರುಳನರಿಯದೆ ಕಾಳುಗೆಡೆದರೆ ಕಾರ‍್ಯವೆಂತಹುದು
ಮರುಳೆ ಕೇಳದ್ಭುತವ ಹಿಂಸಾ
ಪರನಹರ್ನಿಶವಾ ದುರಾತ್ಮನ
ವರಿಸಿದರು ದೇವಾಂಗನೆಯರೀ ಕಥೆಯ ಕೇಳೆಂದ          ೧೭  
 
ಬನದೊಳೊಬ್ಬ ಬಳಾಕನೆಂಬವ
ವನಚರನು ತನ್ನಯ ಕುಟುಂಬವ
ನನುದಿನವು ಮೃಗವಧೆಯಲೇ ಸಲಹಿದನು ಬೇಸರದೆ
ತನಗೆ ಕಡೆಪರಿಯಂತ ಮತ್ತೊಂ
ದನುವನರಿಯನು ರಾಗ ಲೋಭವ
ನೆನೆಯನದರಿಂ ಹಿಂಸೆ ಸಂದುದು ವೃತ್ತಿರೂಪದಲಿ        ೧೮  
 
ವರವವಂಗೆ ಕುಟುಂಬ ರಕ್ಷಾ
ಕರುಣ ಕಾರಣವಾದ ಹಿಂಸಾ
ಚರಣೆಯೆಂದೇ ಬರಹ ಧರ್ಮನ ಸೇನಬೋವನಲಿ
ಮರಣವಾತಂಗಾಗೆ ಕೊಂಡೊ
ಯ್ದರು ಸುರಾಂಗನೆಯರು ಧನಂಜಯ
ಪರಮಧರ್ಮರಹಸ್ಯವಾವಂಗರಿಯಬಹುದೆಂದ       ೧೯  
 
ಪಿತೃಸಮೋ ಭ್ರಾತಾ ಎನಿಪ್ಪುದು
ಶ್ರುತಿವಚನವರಸಂಗೆ ನೀನುಪ
ಹತಿಯ ಮಾಡಲು ನೆನೆದೆ ಮಾತಿನ ವಾಸಿ ಬೇಕೆಂದು
ಕ್ಷಿತಿಯೊಳಬುಜ ಮೃಣಾಳಕೋಸುಗ
ಕೃತತಟಾಕವನೊಡೆದವೊಲು ಭೂ
ಪತಿ ವಧವ್ಯಾಪಾರ ನಿರ್ಮಳ ಧರ್ಮವಹುದೆಂದ      ೨೦  
 
ಗುರುಹತಿಯೆ ಕರ್ತವ್ಯ ತಾನಾ
ದರಿಸಿ ಮಾಡಿದ ಮಾತನೇ ಪತಿ
ಕರಿಸುವುದು ಶ್ರುತಿವಿಹಿತ ಧರ್ಮವಿದೆಂಬುದೀ ಲೋಕ
ಎರಡರಭ್ಯಂತರವ ನೀನೇ
ನಱಿಯದವನೇ ವೇದಶಾಸ್ತ್ರದ
ವರ ನಿಧಾನಜ್ಞಾತೃವಲ್ಲಾ ಪಾರ್ಥ ನೀನೆಂದ          ೨೧  
 
ಈಸು ನಿರ್ದಯನೆಂಬುದನು ನಾ
ವೀಸು ದಿನವರಿಯೆವು ಮಹಾದೇ
ವೇಸು ಪರಿಯಂತಿದ್ದುದೋ ನಿನ್ನಂತರಂಗದಲಿ
ಏಸನೋದಿದಡೇನು ಪಾಪ ವಿ
ಳಾಸ ರಚನಾ ರೌರವಾತ್ಮರ
ವಾಸನೆಗಳವು ಬೇರೆ ಹರಹರ ಎಂದನಸುರಾರಿ        ೨೨  
      
ನನೆದುದಂತಃಕರಣ ಮಧುಸೂ
ದನನ ಸೂಕ್ತಿ ಸುಧಾರಸದಿ ನೆರೆ
ನೆನೆದುದಾತನ ಮೈ ವಿಲೋಚನವಾರಿ ಪೂರದಲಿ
ಮನದ ಪರಿತಾಪವ್ಯಥಾ ದು
ರ್ಮನನು ಖಡ್ಗವನೊರೆಯೊಳೌಕುತ
ವಿನಯದಲಿ ಕೃಷ್ಣಂಗೆ ಬಿನ್ನಹ ಮಾಡಿದನು ಪಾರ್ಥ      ೨೩  
 
ನಾವು ನೆರೆ ಸರ‍್ವಾಪರಾಧಿಗ
ಳಾವ ಗುಣದೋಷವನು ನಮ್ಮಲಿ
ಭಾವಿಸುವೆ ನಾವೆತ್ತ ಬಲ್ಲೆವು ಧರ್ಮನಿರ್ಣಯವ
ಆವ ಪರಿಯಲಿ ತನ್ನ ಸತ್ಯದ
ಠಾವು ನಿಲುವುದು ರಾಯನುಪಹತಿ
ಯಾವ ಪರಿಯಿಂದಾಗದಿಹುದದನರಿದು ಬೆಸಸೆಂದ        ೨೪  
 
ಭರತವಂಶದೊಳುದಿಸಿದೆಮ್ಮೈ
ವರಿಗೆ ಇಹಲೋಕದ ನಿವಾಸಕೆ
ಪರದ ಸೌಖ್ಯಸ್ಥಿತಿಗೆ ಹೊಣೆ ನೀನಲ್ಲದೆಮಗಾರು
ದುರುಳರಾವನ್ವಯಮದದ ದು
ರ್ಧರ ಪರಾಕ್ರಮಮದದ ಘನಮ
ತ್ತರಿಗೆ ಕೃಪೆಮಾಡೆಂದು ಬಿನ್ನಹ ಮಾಡಿದನು ಪಾರ್ಥ        ೨೫  
 
ಕೊಲುವುದೇನೊಂದರಿದೆ ಟಿಕ್ಕರಿ
ಗಳೆವುದೇ ಪರಹಿಂಸೆ ಲೋಗರ
ಹಳಿವುದೇ ವಧೆ ಶಸ್ತ್ರವಧೆ ವಧೆಯಲ್ಲ ನೋಡುವರೆ
ಖಳರ ದುಸ್ಸಹ ದುಷ್ಟವಚನದ
ಹಿಳುಕು ಹೃದಯವ ಕೊಂಡು ಮರುಮೊನೆ
ಮೊಳೆತ ಬಳಿಕವ ಬದುಕಿದವನೇ ಪಾರ್ಥ ಹೇಳೆಂದ       ೨೬  
 
ಅರಸಗುಪಹತಿಯೆನಿಸದೇ ನಿ
ಷ್ಠುರ ದುರುಕ್ತಿ ಕೃಪಾಣದಲಿ ಸಂ
ಹರಿಸಿದರೆ ನಿರ್ವಾಹವಾಗದೆ ನಿನ್ನ ನುಡಿಗಳಿಗೆ
ಪರಮ ಋಷಿಮತವೆನೆ ಮುರಾರಿಯ
ಸಿರಿವಚನಕೆ ಹಸಾದವೆಂದು
ಬ್ಬರದ ಗರ್ವೋಕ್ತಿಯಲಿ ಗರುವಿಕೆಗೆಡಿಸಿದನು ನೃಪನ       ೨೭  
 
ಎಲೆ ಯುಧಿಷ್ಠಿರ ಜನಿಸಿದೈ ಶಶಿ
ಕುಲದ ವೀರಕ್ಷತ್ರ ಪಂತಿಯೊ
ಳೆಳಮನದ ಕಾಳಿಕೆಯ ತೊಡಹದ ಗಂಡುರೂಪಿನಲಿ
ನೆಲನ ಕೊಂಡರು ನಿನ್ನ ಮೋರೆಯ
ಬಲುಹ ಕಂಡೇ ಕೌರವರು ನಿ
ನ್ನೊಳಗೆ ಬಲ್ಲಿದನೆನ್ನ ಭಂಗಿಸಲೇಕೆ ನೀನೆಂದ         ೨೮  
 
ನಿನ್ನ ಜೂಜಿನ ವಿಲಗದಲಿ ಸಂ
ಪನ್ನ ರಾಜ್ಯವ ಬಿಸುಟು ನಿನ್ನಯ
ಬೆನ್ನಲಡವಿಯಲಾಡಿದೆವು ಹನ್ನೆರಡು ವರ್ಷದಲಿ
ಮನ್ನಿಸಿದೆ ಲೇಸಾಗಿ ಕೌರವ
ರಿನ್ನು ಕೊಡುವರೆ ನಿನಗೆ ರಾಜ್ಯವ
ನಿನ್ನ ಹಿಡಿದೇ ಭೀಮ ಬದುಕಲಿ ಎಂದನಾ ಪಾರ್ಥ       ೨೯  
      
ರಣದ ಘಾರಾಘಾರಿಯಾರೋ
ಗಣೆಯ ಮನೆಯಲ್ಲರಸ ಶಿರದಲಿ
ಕುಣಿವಡಾಯ್ದಕೆ ಸುಳಿವ ಸುರಗಿಗೆ ತಿವಿವ ಬಲ್ಲೆಹಕೆ
ಹಣಿವ ಲೌಡಿಗೆ ಪಾಯ್ದು ಬೀಳುವ
ಕಣೆಗೆ ಖಂಡದ ರುಧಿರ ರಣದೌ
ತಣವ ರಚಿಸದೆ ಬರಿದೆ ರಾಜ್ಯವ ಕೊಂಬೆ ನೀನೆಂದ    ೩೦  
 
ಕರುಳ ಕಂಕಣದಾರ ಮಿದುಳಿನ
ಶಿರದ ಬಾಸಿಗ ಭುಜದ ವಕ್ಷದ
ಕರದ ಘಾಯದ ತೋಳ ಬಂದಿಯ ಪದಕ ಸರಪಣಿಯ
ಅರುಣಜಲಲುಳಿತಾಂಬರದ ಸಂ
ಗರ ವಿವಾಹದ ಭೂಷಣದ ಸೌಂ
ದರಿಯವಿಲ್ಲದೆ ರಾಜ್ಯಸಿರಿ ನಿನಗೊಲಿವಳಲ್ಲೆಂದ         ೩೧  
 
ಇಂದಿನಲಿ ಹದಿನೇಳು ದಿನವಿ
ಲ್ಲಿಂದ ಹಿಂದಣ ಬವರದಲಿ ನೀ
ನೊಂದುದುಂಟೇ ದ್ರೋಣ ಭೀಷ್ಮರ ಕೋಲ ತೋಹಿನಲಿ
ಒಂದು ತೂರಂಬಿನಲಿ ಗಡ ನೀ
ನಿಂದು ಜೀವವ ಜಾರಿಸುವೆ ಸುಡ
ಲಿಂದುಕುಲ ಕಂಟಕರನಿರಿದರೆ ದೋಷವೇನೆಂದ         ೩೨  
 
ಎನುತಡಾಯ್ದವನೊರೆಯೊಳುಗಿದ
ರ್ಜುನನು ತನ್ನಯ ಕೊರಳ ಸಂದಿಗೆ
ಮನದೊಳಗೆ ಖಯಖೋಡಿಯಿಲ್ಲದೆ ಚಾಚಿದನು ಬಳಿಕ
ದನುಜರಿಪುವಡಹಾಯ್ದು ಪಿಡಿದೀ
ತನ ಕೃಪಾಣವ ಕೊಂಡು ನಿನ್ನಯ
ನೆನಹಿದೇನೈ ಪಾರ್ಥ ಹೇಳೆನ್ನಾಣೆ ಹೇಳೆಂದ         ೩೩  
 
ಏನ ಹೇಳುವೆನಡ್ಡಹಾಯಿದು
ನೀನೆ ಕೆಡಿಸಿದೆಯೆಮ್ಮನಲ್ಲದ
ಡೇನ ಮಾಡೆನು ಸತ್ಯಶೌರ‍್ಯದ ಹಾನಿ ಹರಿಬದಲಿ
ಈ ನರೇಂದ್ರನ ಕೊಂದ ನನಗಿ
ನ್ನೇನು ದೇಹಕೆ ತಲೆಯೊಡನೆ ಸಂ
ಧಾನವೇ ಸಾಕೆನ್ನ ಕೈದುವನೆನಗೆ ನೀಡೆಂದ          ೩೪  
 
ಎಲವೊ ಖೂಳ ಕಿರೀಟಿ ಮತ್ತೆಯು
ತಿಳಿಯೆಲಾ ನೀನಾವ ಪರಿಯಲಿ
ಮುಳಿದು ರಾಯನನಿರಿದೆ ನಿನಗೆಯು ತದ್ವಿಧಾನದಲಿ
ಅಳಿವ ನೆನೆಯಾ ಸಾಕು ದೇಹವ
ನಳಿವುದೇ ಕೊಲೆಯಲ್ಲ ನಿನ್ನ
ಗ್ಗಳಿಕೆಗಳ ನೀನಾಡಿ ನಿನ್ನನೆ ಕೊಂದುಕೊಳ್ಳೆಂದ         ೩೫  
      
ಸಂದ ಪರಿಯಿದು ಜಗಕೆ ಲೋಗರ
ನಿಂದಿಸುವುದೇ ಹಿಂಸೆ ತನ್ನನೆ
ಕೊಂದವನು ತನ್ನಾಳುತನವನು ತಾನೆ ಹೊಗಳಿದರೆ
ಎಂದಡರ್ಜುನನವನಿಪಾಲಂ
ಗೆಂದನೆನಗಿದಿರಾಗಿ ರಣದಲಿ
ನಿಂದು ಕಾದುವನಾರು ದನುಜಾಮರರ ಥಟ್ಟಿನಲಿ         ೩೬  
 
ನಾನಲಾ ದ್ರೌಪದಿಯ ಮದುವೆಯೊ
ಳಾ ನರೇಂದ್ರರ ಗೆಲಿದವನು ಬಳಿ
ಕಾ ನಿಳಿಂಪ ವ್ರಜವ ಮುರಿದುರುಪಿದೆನು ಖಾಂಡವವ
ಏನನೆಂಬೆನು ಸಕಲ ಕೌರವ
ಸೇನೆಯನು ಗೋಗ್ರಹಣದಲಿ ಸಲೆ
ನಾನಲೇ ರಥವೊಂದರಿಂದವೆ ಗೆಲಿದೆ ದಿಟವೆಂದ       ೩೭  
 
ಬಳಿಕ ಭೀಷ್ಮನನಾರು ರಣದಲಿ
ಗೆಲಿದವನು ದ್ರೋಣಪ್ರತಾಪಾ
ನಳನ ನಂದಿಸಿದಾತನಾರು ಮಹಾಹವಾಗ್ರದಲಿ
ಮಲೆತು ನಿಂದರೆ ಸೂತತನಯನ
ಕೊಲುವನಾವನು ಎನ್ನ ಟಿಕ್ಕರಿ
ಗಳೆವೆ ನೀನೆನ್ನೊಡನೆ ಸೆಣಸುವ ಭಟನ ತೋರೆಂದ      ೩೮  
 
ಉಂಟು ಫಲುಗುಣ ನಿನ್ನ ಹೋಲಿಸ
ಲುಂಟೆ ಸುಭಟರು ದೇವ ದೈತ್ಯರೊ
ಳೆಂಟು ಮಡಿ ನಾವರಿಯವೇ ಕೈವಾರವೇನದಕೆ
ಕಂಟಣಿಸದಿರು ಕೃಷ್ಣನಿಕ್ಕಿದ
ಗಂಟಿನಲಿ ಸಿಲುಕದಿರು ತನ್ನಯ
ಗಂಟಲಿದೆ ಶಸ್ತ್ರೌಘವಿದೆ ನೀ ಬೇಗ ಮಾಡೆಂದ       ೩೯  
 
ಭರತ ಕುಲದಲಿ ಭಾಗಧೇಯ
ಸ್ಫುರಣ ಹೀನರನೆಮ್ಮನುರೆ ಧಿ
ಕ್ಕರಿಸಿದಾದಡೆ ಮುನಿದು ಮಾಡುವದೇನು ವಿಧಿಯೊಡನೆ
ಅರಿನೃಪಾಲರ ಗೆಲಿದು ವಿಶ್ವಂ
ಭರೆಯ ಕೊಂಡರೆ ಭೀಮಸೇನನ
ನರಸುತನದಲಿ ನಿಲಿಸು ಸುಖದಲಿ ಬದುಕಿ ನೀವೆಂದ      ೪೦  
 
ಇರಿದು ಮೆರೆವ ವಿನೋದ ವಿಗ್ರಹ
ದಿರಿತವೇ ಹಿಂದಾಯ್ತು ಹರಹಿನೊ
ಳುರುವ ಫಲಿತದ ಬೀಡು ಬಿಟ್ಟುದು ನಮ್ಮ ತನುವಿನಲಿ
ಇರಿದ ಕರ್ಣನೆ ಸಾಲದೇ ಪೆಣ
ನಿರಿದು ಪಗೆಯೇಕೆಂಬ ಮಾತನು
ಮರೆದು ಕಳೆದೈ ತಮ್ಮ ಎಂದವನೀಶ ಬಿಸುಸುಯ್ದ        ೪೧  
      
ನಿನ್ನ ಜನನಿಯ ಜಠರದಲಿ ತಾ
ಮುನ್ನ ಜನಿಸಿದೆನೀ ಗುರುತ್ವಕೆ
ಮನ್ನಿಸಿದೆ ಸಾಕೈಸಲೇ ಸರ‍್ವಾಪರಾಧವನು
ಎನ್ನನೊಬ್ಬನನುಳಿಯಲುಳಿದರ
ಭಿನ್ನ ಸಾಹೋದರ‍್ಯ ಸಂಪ್ರತಿ
ಪನ್ನಗುಣರವರೊಡನೆ ಸುಖದಲಿ ರಾಜ್ಯ ಮಾಡೆಂದ     ೪೨  
 
ಸೇರುವುದು ಭೀಮನಲಿ ಸಾಹಂ
ಕಾರನಾತನ ಕೊಂಡು ನಡೆವುದು
ಕಾರಣಿಕ ನೀನಾದಡೀ ಸಹದೇವ ನಕುಲರನು
ಆರಯಿದು ಸಲಹುವುದು ದ್ರುಪದ ಕು
ಮಾರಿಯನು ಬೇಸರಿಸದೀ ಪರಿ
ವಾರವನು ಮನ್ನಿಸುವುದರ್ಜುನದೇವ ಕೇಳೆಂದ         ೪೩  
 
ಎನುತ ನಯನೋದಕದ ಸರಿಯಲಿ
ನನೆದ ವಲ್ಲಿಯ ಬಾಹುಮೂಲದ
ಕನಕದೊರೆಯ ಕಠಾರಿಯವನಿಪನೆದ್ದು ಸಂವರಿಸಿ
ಮನದ ದುಗುಡದ ದಡಿಯ ಮೋರೆಯ
ತನಿಹೊಗರ ಬಿಸುಸುಯ್ಲ ತವಕದ
ಬನದ ಪಯಣದ ಧರ್ಮಸುತ ಹೊರವಂಟನರಮನೆಯ    ೪೪  
 
ರಾಯನ ಪರೋಕ್ಷದಲಿ ರಾಜ್ಯ
ಶ್ರೀಯ ಬೇಟವೆ ಶಿವ ಶಿವಾದಡೆ
ತಾಯ ನುಡಿ ತೊದಳಾಯ್ತೆ ತಮತಮ್ಮಂತರಂಗದಲಿ
ಆಯಿತಿದು ಲೇಸೆನುತ ತಮ ತ
ಮ್ಮಾಯುಧಂಗಳ ಕೊಂಡು ವರ ಮಾ
ದ್ರೇಯರರಸನ ಕೂಡೆ ಹೊರವಂಟರು ನೃಪಾಲಯವ      ೪೫  
 
ಕೊರಳನೊಲೆದಳು ಬಾಪು ದೈವದ
ಪರುಠವಣೆ ದುಶ್ಶಾಸನನ ನೆ
ತ್ತರಿನ ವೇಣೀಬಂಧಕಘಟಿತವಾಯ್ತು ಸಂಬಂಧ
ತರಣಿ ಬಿಜಯಂಗೈದರಬುಜದ
ಸಿರಿಗೆ ಸುಮ್ಮಾನವೆ ಎನುತ ಪಂ
ಕರುಹಮುಖಿ ಸಖಿಯರು ಸಹಿತ ಹೊರವಂಟಳರಮನೆಯ    ೪೬  
 
ಸದನವನು ತಮತಮಗೆ ಹೊರವಂ
ಟುದು ನೃಪಾಲಸ್ತೋಮ ದುಮ್ಮಾ
ನದಲಿ ಧೃಷ್ಟದ್ಯುಮ್ನ ಸಾತ್ಯಕಿ ಚೇಕಿತಾನಕರು
ಕದಡಿತಾ ಪರಿವಾರ ವಾರಿಧಿ
ಕೆದಱರಿ ಹೊರವಂಟುದು ಕಿರೀಟಿಯ           
ಹೃದಯ ಹೊಗೆದುದು ಹೊತ್ತಿದನುಪಮ ಶೋಕವಹ್ನಿಯ     ೪೭  
                                          
ಮೂಗನಾದನು ಪಾರ್ಥ ನೃಪ ಚಿಂ
ತಾಗಮದೊಳಳ್ಳಿರಿವ ಶೋಕದ
ಸಾಗರವನೀಸಾಡಿ ತೆರೆಗಳ ಹೊಯ್ಲ ಹೊದರಿನಲಿ
ಆ ಗರುವನಡಿಗದ್ದು ಮೂಡಿದ
ನಾಗಳೇ ತಡಿಗಡರಿ ಬಳಲಿದು
ತಾಗಿದನು ನೆರೆ ತಳ್ಳವಾರುತ ಪಾರ್ಥ ಹೊರವಂಟ     ೪೮  
 
ಹರಿದು ಬೀದಿಯೊಳವನಿಪಾಲನ
ಚರಣದಗ್ರದೊಳೊಡಲ ಹಾಯಿಕಿ
ಹೊರಳಿದನು ಹೊನಲಿಡುವ ಲೋಚನವಾರಿ ಪೂರದಲಿ
ಧರಣಿಪತಿಯೆ ದುರಾತ್ಮಕನನು
ದ್ಧರಿಸಬೇಹುದು ಜೀಯ ಕರುಣಾ
ಕರನಲಾ ನೀನೆನುತ ಪಿಡಿದನು ಭೂಪನಂಘ್ರಿಗಳ     ೪೯  
 
ಮಾಡಿದೆನ್ನಪರಾಧಶತವನು
ನೋಡಲಾಗದು ಕರುಣದಲಿ ನೀ
ಖೋಡಿಯನು ಬಿಡು ಚಿತ್ತಗೊಡದಿರು ಖತಿಯ ಘಲ್ಲಣೆಗೆ
ನೋಡುವುದು ಕಾರುಣ್ಯದೃಷ್ಟಿಯೊ
ಳೀಡಿರಿವ ಘನ ಶೋಕವಹ್ನಿಗೆ
ಖೇಡನಾದೆನು ಜೀಯೆನುತ ಹಲುಬಿದನು ಕಲಿಪಾರ್ಥ     ೫೦  
 
ಏಳು ತಂದೆ ಕಿರೀಟಿ ತನ್ನಾ
ಣೇಳು ಸಾಕೀ ಹವಣಿನಲಿ ಮು
ನ್ನಾಳಿಕೆಯ ಕಾಂತಾರ ರಾಜ್ಯದ ಸಿರಿಯೆ ಸಾಕೆಮಗೆ
ಬಾಲಕರು ನೀವ್ ಮೇಲಣದು ದು
ಷ್ಕಾಲವೀ ಸಾಮ್ರಾಜ್ಯ ಭೋಗ
ವ್ಯಾಳವಿಷಕಂಜುವೆನು ಪಾಂಡುವಿನಾಣೆ ಸಾರೆಂದ         ೫೧  
 
ಹಿಂಗದಿನ್ನೂ ದ್ವಾಪರದ ಸ
ರ‍್ವಾಂಗವೀ ದ್ವಾಪರದ ಸೀಮಾ
ಸಂಗದಲಿ ಸಿಗುರೆದ್ದ ಕಲ್ಕಿಯ ಸೊಗಡ ಸೋಹಿನಲಿ
ಸಂಗಡಿಸಿತಧರೋತ್ತರದ ಸಮ
ರಂಗವೀ ಹದನರಿದು ರಾಜ್ಯಾ
ಸಂಗ ಸುಗತಿವ್ಯರ್ಥನಹೆನೇ ಪಾರ್ಥ ಹೇಳೆಂದ          ೫೨  
 
ಸಾಕು ಪಾರ್ಥನ ಬಿನ್ನಹವ ಕೆಡೆ
ನೂಕದಿರು ನೆಳಲಿಂಗೆ ಬೇರೆ ವಿ
ವೇಕ ಚೇಷ್ಟೆಗಳೇ ಸಹೋದರರೀ ಚತುಷ್ಟಯಕೆ
ಈ ಕಮಲಮುಖಿಯರಿಗೆ ನಿನ್ನಾ
ಲೋಕವಲ್ಲದೆ ಬೇರೆ ಕಾರ‍್ಯ
ವ್ಯಾಕುಳತೆ ಬೇಡೆಂದು ಮುರರಿಪು ತಿರುಹಿದನು ನೃಪನ     ೫೩

ಸಂಕ್ಷಿಪ್ತ ಭಾವ
Lrphks Kolar

ಧರ್ಮಾರ್ಜುನರನ್ನು ಕೃಷ್ಣನು ಸಮಾಧಾನ ಪಡಿಸಿದ್ದು.

ಧರ್ಮಜನ ವ್ಯಂಗ್ಯದ ನುಡಿಗಳನ್ನು ಕೇಳುತ್ತಾ ಅರ್ಜುನ ಸಿಡಿದೆದ್ದನು. ಧರ್ಮಜನೆಡೆಗೆ ಆಯುಧವನ್ನು ಹಿಡಿದು ಸಾಗಿದನು. ತಕ್ಷಣ ಕೃಷ್ಣನು ಅವನನ್ನು ತಡೆದನು. ಬಿಡು ಎನ್ನಲು ಕೃಷ್ಣನು ಅರ್ಜುನನನ್ನು ಅಣ್ಣನನ್ನು ಕೊಲ್ಲಲು ಹೊರಟ ನೀನು ಪಾತಕಿಯಾಗುವೆಯೆಂದು ತಡೆದನು. ಈ ಹಿಂದೆ ನನ್ನ ಗಾಂಡೀವವನ್ನು ಜರಿದವರನ್ನು ಸುಮ್ಮನೆ ಬಿಡೆಯೆಂದು ಹೇಳಿದ್ದೆನಲ್ಲ ಎಂದನು. ಆಗ ಧರ್ಮಜನು ಹೌದು, ತಮ್ಮನ ಮಾತು ತಪ್ಪಬಾರದು. ನನ್ನನ್ನು ಹೊಡೆಯಲಿ ಬಿಡು ಎಂದು ಕೂಗಾಡಿದನು.

ಆಗ ಕೃಷ್ಣನು ಅರ್ಜುನನಿಗೆ ವಿವಿಧ ರೀತಿಯಲ್ಲಿ ಸಮಾಧಾನ ಹೇಳಿದನು. ಧರ್ಮಜನನ್ನು ಕೊಲ್ಲುವೆನೆಂದರೆ ನಗೆಯಲ್ಲವೆ? ಮರುಳೆ ಎಂದನು. ಹಿಂದೆ ಕೌಶಿಕನೆಂಬ ಋಷಿ ತಪಸ್ಸನ್ನು ಆಚರಿಸುತ್ತಿರಲು ವನಚರನೊಬ್ಬನು ಭೂಸುರರನ್ನು ಬೆನ್ನಟ್ಟಿದನು. ಅವರು ತಮ್ಮ ಸುಳಿವನ್ನು ನೀಡಬಾರದೆಂದು ಕೇಳಿಕೊಂಡು ಮರೆಯಲ್ಲಿದ್ದರು. ಆದರೆ  ಸತ್ಯವನ್ನು ನುಡಿಯಲೇಬೇಕು ಎಂದು ಕೌಶಿಕನು ಅವರ ಗುರುತು ಹೇಳಿ ಭೂಸುರರ ಹತ್ಯೆಗೆ ಕಾರಣನಾದನು. ಪಾಪ ಅವನಿಗೆ ಅಂಟಿತು. ಹಾಗೆಯೇ ಬಳಾಕನೆಂಬ ವನಚರನು ಪ್ರಾಣಿಹಿಂಸೆಯೇ ಧರ್ಮವೆಂದು ಬಾಳಿದನು. ಕುಟುಂಬದ ರಕ್ಷಣೆಗಾಗಿ. ಅವನಿಗೆ ಸ್ವರ್ಗ ಸಿಕ್ಕಿತು.  ಹೀಗೆ ಸಮಯವರಿತು ಮಾತನ್ನಾಡಬೇಕು ಎಂದು ಹೇಳಿದನು.

ಅಣ್ಣನೆಂದರೆ ತಂದೆಗೆ ಸಮಾನ. ಅಂತವನನ್ನು ಕೊಲ್ಲಹೊರಟಿದ್ದೆಯಲ್ಲ, ನಿನ್ನಂಥ ನಿರ್ದಯನನ್ನು ಇದುವರೆಗೆ ನೋಡಿಲ್ಲವಲ್ಲ ಎಂದನು. ಕೃಷ್ಣನ ನೀತಿಸುಧಾರಸದಲ್ಲಿ ಮುಳುಗಿ ನೆನೆದುದು ಅಂತಃಕರಣ ಅರ್ಜುನನಿಗೆ. ಖಡ್ಗವನ್ನು ಒರೆಯೊಳಿರಿಸಿ ಕೃಷ್ಣನಿಗೆ ಶರಣಾಗಿ ಪಶ್ಚಾತ್ತಾಪ ಪಟ್ಟನು. ಧರ್ಮನಿರ್ಣಯವನ್ನು ಅರಿಯದಾದೆ ಎಂದು ಅಳಲಿದನು. 

ಯುಧಿಷ್ಠಿರನಿಗೂ ಸಾಕಷ್ಟು ಮಾತುಗಳನ್ನು ಆಡಿದನು ಅರ್ಜುನ. ನಿನ್ನ ಜೂಜಿನ ಕಾರಣದಿಂದಾಗಿ ಇಷ್ಟೆಲ್ಲ ಆಯಿತು. ನಿನ್ನ ಮುಖ ನೋಡಿ ನೆಲವನ್ನು ಕೊಡುವನೆ ಕೌರವ? ಹೋರಾಡಿದಲ್ಲದೆ ರಾಜ್ಯಲಕ್ಷ್ಮಿ ಒಲಿಯಳೆಂದ. ಇಂದಿಗೆ ಹದಿನೇಳು ದಿನಗಳಾದವು ಯುದ್ಧ ಆರಂಭವಾಗಿ. ಇದುವರೆಗೆ ನೀನು ನೊಂದುದುಂಟೆ?

ಅರ್ಜುನನು ತನ್ನನ್ನೇ ತಾನು ಆಯುಧದಿಂದ ನೋಯಿಸಿಕೊಳ್ಳಹೊರಟ. ಕೃಷ್ಣನು ಅಡ್ಡ ಬಂದು ಬಿಡಿಸಿದ.  ಸಾಕು ಮಾಡು ಎಂದ. ಅರ್ಜುನನಿಗೆ ಇನ್ನೂ ಕೋಪ ಇತ್ತು. ತಾನು ದ್ರೌಪದಿಯನ್ನು ಗೆದ್ದು ತಂದವನು, ಭೀಷ್ಮ ದ್ರೋಣರನ್ನು ಗೆಲಿದವನು, ಗೋಗ್ರಹಣ ನಿವಾರಿಸಿದವನು ಇತ್ಯಾದಿ ಹೇಳಿಕೊಳ್ಳುತ್ತಲಿದ್ದ. ಅದಕ್ಕೆ ಭೀಮನ ಆಡಳಿತದಲ್ಲಿ ನೀವೆಲ್ಲ ಸುಖಿಯಾಗಿರಿ ಎಂದು ಧರ್ಮಜ ಮನನೊಂದು ಅರಮನೆಯಿಂದ ಹೊರನಡೆದ. ಅವನೊಂದಿಗೆ ದ್ರೌಪದಿ, ಇತರ ನೃಪರೂ ನಡೆದರು. ಆಗ ಅರ್ಜುನನು ಓಡಿ ಬಂದು ಬೀದಿಯಲ್ಲಿ ಇವರನ್ನು ತಡೆದು ಕ್ಷಮೆ ಬೇಡಿದನು. ಎಲ್ಲರಿಗೂ ರಾಜಿಯಾಯಿತು. ಸಮಾಧಾನ ಹೇಳಿ ಮತ್ತೆ ಅವರೆಲ್ಲರನ್ನೂ ಕೃಷ್ಣ ಒಳತಂದನು.


ಧರ್ಮಜನ ಮಹತ್ವ

ಸಾಮಾನ್ಯವಾಗಿ ನಾವು ಮಹಾಭಾರತದ ಕಥೆಯಲ್ಲಿ ಧರ್ಮಜನ ಮಹತ್ವವನ್ನು ಗುರುತಿಸುವುದು ಕಡಿಮೆ.  ಹದಿನಾರನೆಯ ಸಂಧಿಯ ಈ ಪದ್ಯದಲ್ಲಿ ಕೃಷ್ಣ ಧರ್ಮಜನ ಮಹತ್ವವನ್ನು ಕಾಣಿಸಿಕೊಡುತ್ತಾನೆ:

ನೋಡುವೆವು ನಡೆ ಧರ್ಮಪುತ್ರನ
ಕೇಡು ಕಲಿಯುಗ ಬೀಜವೀ ಪರಿ
ಕೂಡದೀ ಹೊತ್ತಿನಲಿ ಧರ್ಮಸ್ಥಿತಿಗೆ ಲಯವಿಲ್ಲ
ಖೇಡನಾಗದಿರಿದಕೆ ಚಿಂತಿಸ
ಬೇಡೆನುತ ಫಲಗುಣನ ಚಿತ್ತದ
ಪಾಡರಿದು ನುಡಿವುತ್ತ ತಂದನು ಪಾಳೆಯಕೆ ರಥವ (ಕರ್ಣ ಪರ್ವ, ೧೬ ಸಂಧಿ, ೨ ಪದ್ಯ)

ಅರ್ಜುನನ ದುಗುಡ ಸ್ಥಿತಿಯನ್ನು ಅರಿತ ಶ್ರೀಕೃಷ್ಣನು ಅರ್ಜುನ ನೋಡುವ ನಡೆ ಧರ್ಮಜನಿಗೇನಾದರು ಕೇಡಾದರೆ ಅದು ಕಲಿಯುಗದ ಪ್ರಾರಂಭದ ಬೀಜ, ಈಗ ಧರ್ಮಕ್ಕೆ ಇನ್ನೂ ಲಯವಾಗಿಲ್ಲ, ಈ ಕಾಲ ಇನ್ನೂ ಬಂದಿಲ್ಲ. ಹೇಡಿಯಂತೆ ಭಯಗೊಂಡು ಚಿಂತಿಸಬೇಡ ಎಂದು ಹೇಳುತ್ತಾ ಅರ್ಜುನನಿಗೆ ಧೈರ್ಯವನ್ನು ತುಂಬುತ್ತಾ ರಥವನ್ನು ಪಾಳೆಯಕ್ಕೆ ತಂದನು.

ಒಮ್ಮೆ ಕರ್ಣನಿಗೆ ಉತ್ತರಿಸುತ್ತ ಭೀಷ್ಮರೆನ್ನುತ್ತಾರೆ.  ನೀನ್ಯಾಕೆ ಅವರ ಬಳಿ ಜಯಿಸಲು ಸಾಧ್ಯವಾಗಿಲ್ಲ ಎಂದರೆ ಅವರ ಪರ ಧರ್ಮ ಇದೆ ಎನ್ನುತ್ತಾರೆ. ಇಲ್ಲಿ ಕೃಷ್ಣ ಧರ್ಮ ಎಲ್ಲಿದೆ ಎಂದು ಧರ್ಮರಾಯನ ಕಡೆಗೆ ಬೊಟ್ಟು ಮಾಡಿ ತೋರಿಸುತ್ತಿದ್ದಾನೆ. 

ಹದಿನೇಳನೆಯ ಸಂಧಿಯಲ್ಲಂತೂ ಧರ್ಮಜ ನಾನು ಕಾಡಿಗೆ ಹೊರಡುವೆ ಎಂದಾಗ ಎಲ್ಲ ರಾಜರುಗಳೂ, ಯುದ್ಧ ಬೇಕೆಂದು ಕಾರಣಳಾದ ದ್ರೌಪದಿ ಕೂಡಾ ಅವನನ್ನು ಹಿಂಬಾಲಿಸುತ್ತಾರೆ.  

ನನಗಂತೂ  ಕೃಷ್ಣನನ್ನು ಬಿಟ್ಟರೆ ಧರ್ಮಜ ಕೇಂದ್ರ ಶಕ್ತಿ. ಇಲ್ಲಿ ಅವನಿಗೆ ಕೋಪ ತಮ್ಮನನ್ನು ಎಚ್ಚರಿಸುವವ ಒಂದು ಮಾಧ್ಯಮ. ಅರ್ಜುನ ಇದರಿಂದ ಮತ್ತಷ್ಟು ಶಕ್ತಿಭರಿತನಾಗಿ ಏಕ್ರಾಗನಾದ.


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ