ಜವಹರಲಾಲ್ ನೆಹರೂ
ಜವಹರಲಾಲ್ ನೆಹರೂ
ಇಂದು ಜವಹರಲಾಲ್ ನೆಹರೂ ಸಂಸ್ಮರಣೆ ದಿನ. ಅವರನ್ನು ಸ್ಮರಿಸಿದರೆ ಇಷ್ಟವಾಗದವರು ತುಂಬಿ ತುಳುಕುತ್ತಿದ್ದಾರೆ. ನಾನು ಎಲ್ಲರಿಗೂ ಇಷ್ಟವಾದದ್ದನ್ನು ಬರೆಯಲಾರೆ. ನನ್ನೊಳಗಿರುವ ಅಂತರಾತ್ಮದ ಕೂಗನ್ನು ನಾ ಹಿಂಬಾಲಿಸುವೆ.
1964ರ ಮೇ 22ರ ದಿನ ನಾನು ಒಂದನೇ ಕ್ಲಾಸಿಗೆ ಸೇರಿದ್ದೆ. ಆಗ ಶಿಶುವಿಹಾರ ಇಲ್ಲದ್ದರಿಂದ ಶಾಲೆಗೆ ಅದೇ ಮೊದಲ ಪ್ರವೇಶ. ಮೇ27ರಂದು ಶಾಲೆಯಲ್ಲಿ ಗಂಭೀರ ವಾತಾವರಣ. ಪ್ರಧಾನಿ ನೆಹರೂ ಹೋಗಿಬಿಟ್ರು ಎಂದರೆ ಏನು ಅಂತ ಗೊತ್ತಿಲ್ಲದೆ, ಆ ದಿನ ಶಾಲೆ ಇಲ್ಲ ಅಂತ ಮನೆಗೆ ಹೋಗಿದ್ದು ಮಾತ್ರಾ ನೆನಪು. ಅದೇನೊ ದುಃಖದ ಸಂಗತಿ ಎಂಬ ವಾತಾವರಣ ಎಲ್ಲೆಡೆ ಇತ್ತು ಎಂಬ ಅರಿವು ಮಾತ್ರಾ ಇದ್ದದ್ದು ಸ್ಪಷ್ಟವಿದೆ.
ನಾವು ಪುಟ್ಟವರಿದ್ದಾಗ ನಮ್ಮ ಮನೆಯವರಿಗೆಲ್ಲ ಗಾಂಧಿ, ನೆಹರೂ ಎಂದರೆ ಅದೇನೋ ಭಕ್ತಿ. ತಮಗಿರುವ ತಾಪತ್ರಯಗಳ ಬಗ್ಗೆ, ಬೆಲೆ ಜಾಸ್ತಿ ಆಗುವ ಬಗ್ಗೆ, ಲೋಕ ಕೆಟ್ಟು ಹೋಗುತ್ತಿರುವ ಬಗ್ಗೆ ಇತ್ಯಾದಿ ಹಲವು ಬಗೆಯ ಕೊನಿಷ್ಟೆ ಬೇಸರಗಳಿದ್ದರೂ ನಮ್ಮ ಕಾಲದ ಜನರಂತೆ ಎಲ್ಲದಕ್ಕೂ ಪ್ರಧಾನ ಮಂತ್ರಿಯನ್ನು ಹೊಣೆಮಾಡಿ ತೀಟೆ ತೀರಿಸಿಕೊಳ್ಳುವ ಚಪಲ ಅಂದಿನ ನಮ್ಮ ಸುತ್ತ ಮುತ್ತಲಿನ ಹಿರಿಯರಿಗೆ ಇದ್ದಂತಿರಲಿಲ್ಲ. ನೆಹರು ಬರುತ್ತಾರೆ, ನೆಹರು ರೇಡಿಯೋದಲ್ಲಿ ಭಾಷಣ ಮಾಡುತ್ತಾರೆ ಅಂದರೆ, ಅಂದು ರಾಮಮಂದಿರದ ಪಾರಾಯಣಕ್ಕೆ ಚಕ್ಕರ್ ಹಾಕಿ ರೇಡಿಯೋ ಮುಂದೆ ಕುಳಿತುಕೊಳ್ಳುತ್ತಿದ್ದ ನಿಷ್ಠರ ಕಾಲ. ನೆಹರೂ ಬದುಕಿರುವವರೆಗೆ, ನಂತರ ಹಲವು ವರ್ಷ ಇಂದಿರಾ ಗಾಂಧಿ ಅವರಿಗೆ ಕೂಡ ರಾಜಗೌರವ ಅಂದಿನ ಜನರಲ್ಲಿ ಇತ್ತು. ನೆಹರೂ ಅವರ ದಿನಗಳಲ್ಲಿ ಭಾರತದ ರಾಜಕೀಯದಲ್ಲಿ ವಿರೋಧಪಕ್ಷಗಳು ಗಳಿಸಿದ್ದ ಕ್ಷೀಣ ಬೆಂಬಲ ಕೂಡ ಅಂದಿನ ಜನರಲ್ಲಿದ್ದ ಗಾಂಧಿ, ನೆಹರೂ ಜನಭಕ್ತಿಗಳನ್ನು ಸಾರುತ್ತದೆ.
ನೆಹರೂ ಎಂದರೆ ಮೊದಲು ಹೃದಯವನ್ನು ತಟ್ಟುವ ವಿಚಾರವೆಂದರೆ, ದೇಶ ವಿದೇಶಗಳಲ್ಲಿ ಸುಖಭೋಗಗಳಲ್ಲಿ ಬೆಳೆದ ಒಬ್ಬ ಹುಡುಗ ಸಾಮಾನ್ಯ ಮಟ್ಟಕ್ಕೆ ತನ್ನನ್ನು ಪರಿವರ್ತಿಸಿಕೊಂಡ ರೀತಿ. ಅವರ ತಂದೆ ಮೋತಿಲಾಲ್ ನೆಹರೂ ಅವರಿಗೆ ಅಂದಿನ ಬುದ್ಧಿವಂತ ಜನಾಂಗದಲ್ಲಿ ಜಾಗೃತವಾಗಿದ್ದ ‘ಸ್ವಾತಂತ್ರ’ ಎಂಬ ವಿಚಾರಧಾರೆಯಲ್ಲಿ ಪಾಲ್ಗೊಳ್ಳುವಿಕೆ ಆಕರ್ಷಣೆಯ ವಿಚಾರವಾಗಿತ್ತು. ತಂದೆಯಂತೆ ಬ್ಯಾರಿಸ್ಟರ್ ಪದವಿ ಪಡೆದ ನೆಹರೂ ಕೂಡ ಆ ಅಲೆಯಲ್ಲಿನ ಆಕರ್ಷಣೆಗೆ ಒಳಪಟ್ಟರು. ಬಹುಶಃ ಗಾಂಧೀಜಿಯಂತಹ ಕ್ರಿಯಾಶೀಲ ವ್ಯಕ್ತಿ ಇಲ್ಲದಿದ್ದರೆ, ನಾವು ಇಂದಿನ ಸಮಾಜದಲ್ಲಿ ಎಲ್ಲೆಡೆ ಸಮಾಜೋದ್ಧಾರದ ಚಿಂತನೆ ನಡೆಸುವ ಹಾಗೆ, ಬುದ್ಧಿವಂತ ಜನರ ‘ಸ್ವಾತಂತ್ರ್ಯ ಸಿದ್ಧಾಂತ’ಗಳೂ ಕ್ಲಬ್ಬುಗಳು, ಪಾರ್ಕುಗಳು, ಪಾರ್ಟಿಗಳು, ಸಮಾರಂಭಗಳು ಇತ್ಯಾದಿಗಳಲ್ಲಿ ಹೊತ್ತು ಕಳೆಯುವ ಚಿಂತನೆಗಳಾಗಿ ಉಳಿದು ಬಿಡುತ್ತಿತ್ತೇನೋ! ಸುಖದ ಸುಪ್ಪತ್ತಿಗೆಯಲ್ಲಿ ಬಾಲ್ಯ ಕಳೆದು, ಹಾರ್ವರ್ಡ್, ಕೆಂಬ್ರಿಡ್ಜ್ ಮುಂತಾದೆಡೆಗಳಲ್ಲಿ ಭೋಗದ ವಿದ್ಯಾರ್ಥಿ ಜೀವನ ನಡೆಸಿದ ಈ ಹುಡುಗ ಮುಂದೆ ಗಾಂಧಿಯಂತಹ ವ್ಯಕ್ತಿಯ ಮೋಡಿಗೆ ಒಳಗಾಗಿ ಸಾಮಾನ್ಯನಾಗಿ, ಸಾಧಾರಣ ರೀತಿಯಲ್ಲಿ ಬದುಕನ್ನು ನಡೆಸುವ ರೀತಿಗೆ ತನ್ನನ್ನೇ ಒಡಂಬಡಿಸಿಕೊಂಡು, ಜೈಲುಗಳಲ್ಲಿ ವರ್ಷಾನುಗಟ್ಟಲೆ ಬದುಕಿದ ಕಷ್ಟಗಳು ತನ್ನ ದೇಹಕ್ಕೆ ಮಾತ್ರ ಸಂಬಂಧಿಸಿದ್ದು, ನನ್ನ ಆತ್ಮಕ್ಕೆ ಅದೇನೂ ಮಾಡಲಾರದು ಎನ್ನುವಂತೆ ಬದುಕಿದ ರೀತಿ ಸಾಮಾನ್ಯವಾದದ್ದಲ್ಲ.
ಜೈಲುಗಳಲ್ಲಿ ಹಲವಾರು ವರ್ಷ ಕೊಳೆಯುತ್ತಿದ್ದಾಗ ಕಾಲಹರಣ ಮಾಡದೆ ಅಧ್ಯಯನ, ಜೊತೆಗೆ ‘The Discovery of India’, ‘Glimpses of World History’ ಅಂತಹ ಬರಹಗಳ ಮೂಲಕ ತಮ್ಮ ಮಗಳ ಜೊತೆಯಲ್ಲಿ ಪತ್ರಗಳ ಮೂಲಕ ಚಿಂತನೆಗಳನ್ನು ಹಂಚುತ್ತಲೇ ಆ ಬರಹಗಳಲ್ಲಿನ ವೈಶಿಷ್ಟತೆಯ ಚಿಂತನೆಗಳಿಗಾಗಿ ಹೆಚ್. ಜಿ. ವೇಲ್ಸ್ ಅಂತಹ ಮಹಾನ್ ಬರಹಗಾರರಿಂದ ಕೂಡ ಮಹಾನ್ ಚಿಂತಕ ಎಂಬ ಪ್ರಶಂಸೆ ಪಡೆದರು. ಇದು ಅವರ ಅಪಾರ ಅಧ್ಯಯನಶೀಲ ಪ್ರವೃತ್ತಿಗೆ ಹಿಡಿದ ಕನ್ನಡಿಯಾಗಿದೆ. ರಾಜಕೀಯ ವಲಯದಲ್ಲಿ ನೆಹರೂ ಅವರ ವಿರೋಧಪಕ್ಷದಲ್ಲಿದ್ದ ವಾಜಪೇಯಿ ಅವರು ಹೇಳುವ ಮಾತುಗಳು ಇಲ್ಲಿ ಉಲ್ಲೇಖನೀಯವಾದದ್ದು. “ನಾನು ನೆಹರೂ ಅವರ ಅಭಿಮಾನಿ, ಅವರ ಜ್ಞಾನದ ಆಳ ಆಧ್ಯಾತ್ಮದ ಸಂಯೋಗ ಪಡೆದಿತ್ತು. ‘ಗಂಗೆ'ಯ ಕುರಿತಾಗಿ ಅವರು ‘ಡಿಸ್ಕವರಿ ಆಫ್ ಇಂಡಿಯಾ’ದಲ್ಲಿ ನೀಡಿರುವ ವರ್ಣನೆ ಒಬ್ಬ ಶ್ರೇಷ್ಠ ಕವಿಗೆ ಮಾತ್ರ ಸಾಧ್ಯವಿರುವಂತದ್ದು."
ನೆಹರೂ ಅವರ ಆಳ್ವಿಕೆಯ ಬಗ್ಗೆ ಅವಲೋಕನಗಳನ್ನು ರಾಜಕೀಯ ಪಂಡಿತರು, ಆರ್ಥಿಕ ಶಾಸ್ತ್ರಜ್ಞರು ನಡೆಸಬೇಕಾದ ಮತ್ತು ಅವರುಗಳು ಅನುದಿನವೂ ನಡೆಸುತ್ತಿರುವ ವಿಚಾರ. ಈ ವಿಚಾರವನ್ನು ನನ್ನ ಮಾತಿನ ಚಪಲದಿಂದ ಇಲ್ಲಿ ಮೂಡಿಸುವುದು ವ್ಯರ್ಥ ಪ್ರಯತ್ನವಾದೀತು. ನಮ್ಮಲ್ಲಿ ಆಗುವ ಅನಾಹುತಗಳಿಗೆಲ್ಲಾ ಚುಕ್ಕಾಣಿ ಹಿಡಿದ ನಾಯಕನನ್ನೇ ದೂಷಿಸುವ ಪರಿ ನೆನ್ನೆ ಇಂದಿನದೇನಲ್ಲ. ಆಗುವ ಅನಾಹುತಗಳಿಗೆಲ್ಲಾ ಅವರೇ ಕಾರಣರು ಎನ್ನುತ್ತೇವೆ. ಆದರೆ, ಭಾರತದಂತಹ ಸಂಕೀರ್ಣ ಸಮಾಜದಲ್ಲಿ ಆಡಳಿತ ನಡೆಸುವುದು ಸುಲಭಸಾಧ್ಯವಲ್ಲ ಎಂದು ಒಬ್ಬರಾದ ಮೇಲೆ ಒಬ್ಬರು ಬಂದ ಪ್ರಧಾನಿಗಳು ನಮಗೆ ಸಾಕಷ್ಟು ಮನವರಿಕೆ ಮಾಡಿಕೊಟ್ಟಿದ್ದಾರೆ ಎಂಬುದಂತೂ ಸತ್ಯ.
ಭಾರತದಲ್ಲಿ ಪ್ರಜಾಪ್ರಭುತ್ವಕ್ಕೆ ಸುಂದರ ಚಾಲನೆ ಕೊಟ್ಟದ್ದು, ಈ ದೇಶದಲ್ಲಿ ಪ್ರಾಥಮಿಕ ಶಿಕ್ಷಣ ವ್ಯವಸ್ಥೆಗಳಿಂದ ಮೊದಲುಗೊಂಡು, ಭಾರತೀಯ ವಿಜ್ಞಾನ ಸಂಸ್ಥೆ, ಭಾರತೀಯ ವೈದ್ಯಕೀಯ ಶಿಕ್ಷಣ ವ್ಯವಸ್ಥೆ, ಭಾರತೀಯ ತಂತ್ರಜ್ಞಾನ ಶಿಕ್ಷಣ ಸಂಸ್ಥೆ, ಭಾರತೀಯ ಬಾಹ್ಯಾಕಾಶ ಸಂಸ್ಥೆ ಮುಂತಾದ ಪ್ರಮುಖ ವ್ಯವಸ್ಥೆಗಳವರೆಗೆ ಅವರು ತೋರಿದ ಭವಿಷ್ಯದ ಚಿಂತನೆಗಳ ಫಲವನ್ನು ನಮ್ಮ ಸಮಾಜ ಮುಂಬಂದ ವರ್ಷಗಳಲ್ಲಿ ಖಂಡಿತವಾಗಿ ಅನುಭವಿಸುತ್ತಿದೆ. ಆರ್ಥಿಕ ಉದಾರೀಕರಣದ ಇಂದಿನ ದಿನಗಳಲ್ಲಿ ವಿದೇಶಿ ಸಹಯೋಗಗಳು, ಕಂಪ್ಯೂಟರ್, ಸಾಫ್ಟ್ವೇರ್, ದೂರವಾಣಿ ಸಂಪರ್ಕ ಇತ್ಯಾದಿಗಳ ಬಗ್ಗೆ ಅದರಿಂದ ಭಾರತ ಸಾಧಿಸಿರುವ ಪ್ರಗತಿ ಬಗ್ಗೆ ಚಿಂತಿಸುವ ಇಂದಿನ ಸಮಾಜದಲ್ಲಿ ನೆಹರೂ ಅವರ ಸಮಾಜವಾದದ ಚಿಂತನೆಗಳು ಹೇಗೆ ಸ್ವೀಕೃತವಾಗುತ್ತದೋ ಹೇಳುವುದು ಕಷ್ಟ. ಆದರೆ, ಅಂದಿನ ದಿನಗಳಲ್ಲಿ ಜನರ ದಿನ ನಿತ್ಯದ ಬದುಕಿನ ಅವಶ್ಯಕತೆಗಳು, ಶಿಕ್ಷಣ, ವ್ಯವಸಾಯ, ಕೈಗಾರಿಕೆಗಳಿಗೆ ಬೇಕಾದ ಮೂಲಭೂತ ಸೌಲಭ್ಯಗಳು, ಬೇಕಿದ್ದ ಸಂಪನ್ಮೂಲಗಳು ಮುಂತಾದವುಗಳನ್ನು ಪಡೆಯಲು ಆಗ ತಾನೇ ಸ್ವಾತಂತ್ರ್ಯ ಪಡೆದಿದ್ದ, ಯಾವುದೇ ದೇಶವಾಗಲಿ ಆರ್ಥಿಕವಾಗಿ ನಮ್ಮನ್ನು ಗಂಭೀರವಾಗಿ ಪರಿಗಣಿಸದಿದ್ದ ಆ ದಿನಗಳಲ್ಲಿ ಖಾಸಗೀ ವ್ಯವಸ್ಥೆಗಳ ಮೂಲಕ ಗಣನೀಯ ಪ್ರಮಾಣದಲ್ಲಿ ಸಾಧ್ಯವಿತ್ತೆ ಎಂದು ಕೂಡ ಯೋಚಿಸುವುದು ಅವಶ್ಯಕವೇನೋ ಎನಿಸುತ್ತದೆ. ಲಾಭ ಇರುವವರೆಗೆ ವಿಮಾನ ಯಾನ ಕ್ಷೇತ್ರ ಹಿಡಿದು, ಅದು ಒಂದು ಚೂರು ಕಡಿಮೆಯಾದಾಗ ಪಲಾಯನ ಮಾಡುತ್ತಿರುವ ಇಂದಿನ ಕೆಲವೊಂದು ಉದ್ಯಮಿಗಳು ಭಾರತ ಅಂದಿನ ದಿನದಲ್ಲಿ ಕಷ್ಟದ ಕ್ಷಣಗಳಲ್ಲಿ ಏನಾದರೂ ಮಾಡುತ್ತಿದ್ದರೆ ಎಂಬುದು ಕೂಡ ಚಿಂತನಯೋಗ್ಯವಾದದ್ದು.
ಮತ್ತೊಂದು ವಿಚಾರವೆಂದರೆ, ಅಂದಿನ ದಿನಗಳಲ್ಲಿದ್ದ ಕರ್ತ್ಯವ್ಯ ನಿಷ್ಠರು ಏನು ಮಾಡಿದರೋ ಅದನ್ನು ಮಾಡಿದ ರೀತಿಯ ಶ್ರದ್ಧೆ ಕೂಡ ಬೆರಗುಗೊಳಿಸುವಂತಹದು. ಉದಾಹರಣೆಗೆ ಹೇಳುವುದಾದರೆ, ಅಂದಿನ ದಿನದಲ್ಲಿ ಸಾರ್ವಜನಿಕ ಸಂಸ್ಥೆಗಳಲ್ಲಿ ನಾವು ಕೆಲಸ ಮಾಡಲು ಇದ್ದ ವ್ಯವಸ್ಥೆಗಳು. ನಾನು ಕೆಲಸ ನಿರ್ವಹಿಸುತ್ತಿದ್ದ ಎಚ್ ಎಮ್ ಟಿ ಸಂಸ್ಥೆಯ ಅನುಭವದಲ್ಲಿ ಹೇಳುವುದಾದರೆ, ಇಡೀ ದೇಶದಲ್ಲಿ ಅದರ 27 ಘಟಕಗಳು ದೇಶದ ವಿವಿಧ ಭಾಗಗಳಲ್ಲಿ ಕೆಲಸ ಮಾಡುತ್ತಿದ್ದವು. ಪ್ರತಿಯೊಂದಕ್ಕೂ ಘಟಕಗಳಿಗೂ ಹತ್ತು ಪಟ್ಟು ಪ್ರಗತಿ ಸಾಧಿಸಿದರೂ ಸಾಲದಷ್ಟು ಸಾವಿರಾರು ಎಕರೆಗಳ ಭೂಮಿ. ಆ ಕಾರ್ಖಾನೆಗಳ ಆವರಣಗಳೆಲ್ಲ ಮರ ಗಿಡಗಳು, ಉದ್ಯಾನವನಗಳಿಂದ ಶೋಭಿತ. ಕೆಲಸಗಾರರಿಗೆ ಅಧಿಕಾರಿಗಳಿಗೆ ಉನ್ನತ ದರ್ಜೆಯ ಟೌನ್ ಶಿಪ್ ನಿರ್ಮಾಣ. ಅಲ್ಲಿ ಆಟದ ಬಯಲು, ಮಕ್ಕಳಿಗೆ ಓದು, ನಿವಾಸ, ಕ್ಲಬ್ಬು, ಲಲಿತ ಕಲೆಗಳ ಪ್ರದರ್ಶನ ವೇದಿಕೆ, ಸಿನಿಮಾ ಮಂದಿರ ಹೀಗೆ ಪ್ರತಿಯೊಂದೂ ಉಚಿತವಾಗಿ ಅಥವ ಅತಿ ಕಡಿಮೆ ಬೆಲೆಯಲ್ಲಿ ಲಭ್ಯ. ನಾಮಕಾವಸ್ತೆ ದರದಲ್ಲಿ ಊಟ, ತಿಂಡಿ, ಉಪಚಾರಗಳು. ಹೀಗೆ ಪ್ರತಿಯೊಂದೂ ಉನ್ನತ ದರ್ಜೆಯಲ್ಲಿ ನಡೆಯುವ ವ್ಯವಸ್ಥೆ. ನಾನು ಹೇಳುತ್ತಿರುವುದು ನೆಹರೂ ಹೋದ ಇಪ್ಪತ್ತು ಇಪ್ಪತ್ತೈದು ವರ್ಷಗಳ ನಂತರದಲ್ಲಿ ಕೂಡ ಇದ್ದ ವ್ಯವಸ್ಥೆ.
ಇಲ್ಲಿ ನನಗನ್ನಿಸುವುದೆನೆಂದರೆ, ನೆಹರೂ ಅವರೂ ಸಮಾಜವಾದದ ರೀತಿಯನ್ನು ಬಿಟ್ಟು ಬೇರೆ ಮಾರ್ಗಗಳಲ್ಲಿ ದೇಶವನ್ನು ನಡೆಸಿದ್ದರೆ ಅದು ಹೇಗಿರುತಿತ್ತೋ ಅದು ಬೇರೆಯ ವಿಷಯ. ಆದರೆ ನೆಹರೂ ಅವರು ತಾವು ಏನನ್ನು ಮಾಡಿದರೋ ಯಾವುದರ ಸಿದ್ಧಾಂತದಲ್ಲಿ ಮಾಡಿದ್ದರೋ ಅದನ್ನು ಪ್ರಾಮಾಣಿಕಾರಾಗಿ ಮಾಡಿದ್ದರು ಎಂದು ಯೋಚಿಸುವುದು ಕೂಡ ಮುಖ್ಯವಾದದ್ದು.
ನಂತರದ ವರ್ಷಗಳಲ್ಲಿ ಇಂತಹ ಶ್ರೇಷ್ಟ ವಾತಾವರಣಗಳನ್ನು, ಹಲವು ರಾಜಕೀಯ ವ್ಯವಸ್ಥೆಗಳು, ಅಸಮರ್ಪಕ ಆಡಳಿತಗಾರರು, ಸಮಾಜೋದ್ಧಾರಕ ಕಾರ್ಮಿಕ ಮುಖಂಡರು, ಅವರನ್ನು ಹಿಂಬಾಲಿಸಿದ ಕರ್ತ್ಯವ್ಯಹೀನರು ಹೀಗೆ ಎಲ್ಲರೂ ನುಂಗಿ ನೀರು ಕುಡಿದು ನೆಹರೂ ರೂಪಿಸಿದ ರೀತಿ ಸರಿಯಲ್ಲ ಎಂದು ಭಾಷಣ ಮಾಡುವ ಶ್ರೇಷ್ಠ ಸಮಾಜ ನಮ್ಮದು ಎಂಬುದು ಕೂಡ ನಾವು ಅರಿಯಬೇಕಾದ ಸಂಗತಿ. ಇಂದು, ಅಂದಿನ ದಿನಗಳಲ್ಲಿ ಉತ್ತಮ ಉದ್ದೇಶಕ್ಕಾಗಿ ರೂಪಿಸಿದ್ದ ಆ ವ್ಯವಸ್ಥೆಗಳನ್ನೆಲ್ಲ ಲಂಪಟರ ಮೂಲಕ ಭೂಕಬಳಿಕೆಧಾರರಿಗೆ ಸೇರಿಸಿ ಆರ್ಥಿಕ ಉದಾರೀಕರಣದ ವೈಭವವನ್ನು ಕೊಂಡಾಡುವ ನಮ್ಮ ಸಮಾಜದ ವೈಖರಿ ಇಂದಿನ ಬಹುತೇಕ ಜನಪ್ರತಿನಿಧಿಗಳು ನೆಹರೂ ಅಂತಹವರನ್ನು ಹೆಸರಿಸಲು ಕೂಡ ಯೋಗ್ಯರಲ್ಲವೆಂದು ಸಾರುತ್ತದೆ.
ಭಾರತವನ್ನು ವಿಶ್ವಸಂಸ್ಥೆಯ ಭಾಗವಾಗಿಸುವಲ್ಲಿ, ಕಾಮನ್ ವೆಲ್ತ್ ದೇಶಗಳ ಒಕ್ಕೂಟದ ನಿರ್ಮಾಣದಲ್ಲಿ, ಅಲಿಪ್ತ ರಾಷ್ಟ್ರಗಳ ಚಿಂತನೆಯನ್ನು ರೂಪಿಸುವಲ್ಲಿ, ಸೋವಿಯತ್ ರಷ್ಯಾದೊಂದಿಗೆ ಸ್ನೇಹದಲ್ಲೂ ಅಮೇರಿಕಾ ಮತ್ತಿತರ ದೇಶಗಳ ಜೊತೆಗೆ ತಿಕ್ಕಾಟ ನಿರ್ಮಿಸದ ಸೌಜನ್ಯತೆಯಲ್ಲಿ ಹೀಗೆ ನೆಹರೂ ಅವರು ಭಾರತಕ್ಕೆ ವಿಶ್ವ ಭ್ರಾತೃತ್ವದ ಕೊಂಡಿಯನ್ನು ಗಣನೀಯವಾಗಿ ಮೆರೆಸಿದ್ದರು.
ಒಂದು ದೇಶದ ಹಲವು ರೀತಿಯ ಸೋಲುಗಳು ಆ ದೇಶದ ನಾಯಕನ ಮೇಲೆ ಕೂಡ ಪ್ರತಿಬಿಂಬಿತವಾಗುತ್ತದೆ ಎಂಬುದು ನಿಜ. ಆ ನಿಟ್ಟಿನಲ್ಲಿ ಒಂದು ಸಮಾಜವಾಗಿ, ಒಂದು ವ್ಯವಸ್ಥೆಯಾಗಿ ಭಾರತದ ಹಲವು ಸೋಲುಗಳನ್ನು ನೆಹರು ಅವರ ನೇತ್ರತ್ವದಲ್ಲಿ ಅಳೆಯುವುದನ್ನು, ಅಲ್ಲಗೆಳೆಯುವುದು ಸಾಧ್ಯವಿಲ್ಲ ಎಂಬುದು ನಿಜ. ಆದರೆ, ಒಬ್ಬ ಆಜನ್ಮ ಶ್ರೀಮಂತ ವ್ಯಕ್ತಿ ತನ್ನ ದೇಶಕ್ಕಾಗಿ ಕಂಕಣ ಕಟ್ಟಿ, ಮಾಹಾತ್ಮ ಗಾಂಧಿ ಅವರ ಅನುಯಾಯಿಯಾಗಿ, ನಿಷ್ಠ ಮತ್ತು ಪ್ರಾಮಾಣಿಕ ಆಡಳಿತಗಾರನಾಗಿ ಈ ದೇಶಕ್ಕೆ ಸಲ್ಲಿಸಿದ ಸೇವೆ ಸ್ಮರಣೀಯವಾದದ್ದು.
ಅಪಾರ ಅಧ್ಯಯನಶೀಲ, ಮಹಾನ್ ದೇಶ ಭಕ್ತ, ಮಕ್ಕಳ ಹೃದಯವನ್ನು ಸ್ಪಂದಿಸಿದ, ನಮ್ಮ ಭಾರತ ದೇಶದ ಮೊದಲ ಪ್ರಧಾನಿ ಜವಹರಲಾಲ್ ನೆಹರೂ ಅವರನ್ನು ನಾನು ಗೌರವದಿಂದ ಸ್ಮರಿಸುತ್ತಿದ್ದೇನೆ.
On Remembrance Day of our First Prime Minister Jawaharlal Nehru
ಕಾಮೆಂಟ್‌ಗಳು