ಗಾಯತ್ರಿ ಮೂರ್ತಿ
ಗಾಯತ್ರಿ ಮೂರ್ತಿ
ಗಾಯತ್ರಿ ಮೂರ್ತಿವಿಜ್ಞಾನ ಬರಹಗಾರ್ತಿಯಾಗಿ ಮತ್ತು ಬೋಧಕಿಯಾಗಿ ಹೆಸರಾಗಿದ್ದಾರೆ.
ಗಾಯತ್ರಿ ಮೂರ್ತಿ 1948ರ ಮೇ 4ರಂದು ಮೈಸೂರಿನಲ್ಲಿ ಜನಿಸಿದರು. ತಂದೆ ಮಹಾರಾಜ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿದ್ದ ಕೆ. ರಾಮಸ್ವಾಮಿ. ತಾಯಿ ಇಂದುಮತಿ. ಗಾಯತ್ರಿ ಅವರ ಶಿಕ್ಷಣ ಕುಣಿಗಲ್, ಶಿವಮೊಗ್ಗ ಹಾಗೂ ಮೈಸೂರುಗಳಲ್ಲಿ ನಡೆಯಿತು. ಶಾರದಾ ವಿಲಾಸ್ ಕಾಲೇಜಿನಿಂದ ಬಿ.ಎಸ್‍ಸಿ. ಹಾಗೂ ಮೈಸೂರು ವಿಶ್ವವಿದ್ಯಾಲಯದ ಮಾನಸಗಂಗೋತ್ರಿಯಿಂದ ಎಂ.ಎಸ್‍ಸಿ. ಪದವಿ ಗಳಿಸಿದರು.
ಗಾಯತ್ರಿ ಮೂರ್ತಿ ಅವರು ಬೆಂಗಳೂರಿನ ಶ್ರೀ ಭಗವಾನ್ ಮಹಾವೀರ್ ಜೈನ್ ಕಾಲೇಜಿನ ಭೌತಶಾಸ್ತ್ರ ವಿಭಾಗದಲ್ಲಿ ಆಧ್ಯಾಪನ ನಡೆಸಿ ನಿವೃತ್ತರಾಗಿದ್ದಾರೆ.
ಗಾಯತ್ರಿ ಮೂರ್ತಿ ಮಕ್ಕಳಿಗಾಗಿ ಹಲವಾರು ವೈಜ್ಞಾನಿಕ ಕೃತಿಗಳನ್ನು ರಚಿಸುತ್ತ ಬಂದರು. ತಿಳಿಯಾದ ಭಾಷೆಯಲ್ಲಿ ಮಕ್ಕಳ ಮನಸ್ಸಿಗೆ ನಾಟುವಂತೆ ವೈಜ್ಞಾನಿಕ ವಿಷಯಗಳನ್ನು ಸರಳವಾಗಿ ವಿವರಿಸಿ ಕೃತಿ ರಚಿಸುತ್ತಿರುವ ವೈಜ್ಞಾನಿಕ ಬರಹಗಾರರಲ್ಲಿ ಇವರು ಪ್ರಮುಖರು. ಇವರು ಬರೆದ ವೈಜ್ಞಾನಿಕ ಕೃತಿಗಳು ಗಾಳಿ, ಶಾಖ, ನೀರು, ಬೆಳಕು, ಶಬ್ದಲೋಕ ಮೊದಲಾದ ವಸ್ತುಗಳನ್ನಾಯ್ದುಕೊಂಡು ರಚಿಸಿದ ಕೃತಿಗಳೆಲ್ಲವೂ ಅನೇಕ ಮರು ಮುದ್ರಣಗಳನ್ನು ಕಾಣುತ್ತ ಬಂದಿವೆ.
ಗಾಯತ್ರಿ ಮೂರ್ತಿ ಅವರು ಜ್ಞಾನ ವಿಜ್ಞಾನ ಕೋಶ ಭಾಗ – ೧, ನಿಶ್ಯಬ್ದದೊಳಗಿನ ಶಬ್ದ, ದೀಪಗಳು, ಎಕ್ಸ್‌ರೆ – ಕಿರಣಗಳ ಅದೃಶ್ಯಲೋಕ, ಕಥೆಗಳ ರೂಪದಲ್ಲಿ ವಿಜ್ಞಾನ ಪ್ರಯೋಗಗಳನ್ನು ನಿರೂಪಿಸಿರುವ ‘ಪ್ರಯೋಗ ಲೋಕ’ ಮುಂತಾದವುಗಳ ಜೊತೆಗೆ ಮೈಕೆಲ್ ಫ್ಯಾರಡೆ, ಆಲ್ಬರ್ಟ್ ಐನ್‌ಸ್ಟೀನ್ ಮುಂತಾದವರುಗಳ ಜೀವನ ಚರಿತ್ರೆಗಳನ್ನೂ ಬರೆದಿದ್ದಾರೆ. ಮಕ್ಕಳಿಗಾಗಿ ಮಕ್ಕಳ ಕವನ ಸಂಕಲನಗಳು – ನಕ್ಷತ್ರಗಳು ಮತ್ತು ಕಾಮನ ಬಿಲ್ಲು, ಮಕ್ಕಳ ಕಾದಂಬರಿಗಳು – ಕಾಡಿನಲ್ಲೊಂದು ಕ್ಯಾಂಪು, ಬಿಂದು – ಸಿಂಧು ಮತ್ತು ಬ್ರೂಸ್ ಲೀ, ಅದೃಶ್ಯ ಮಾನವ ಟಿನಿ ಟಿನಿ ಟಿನ್, ಪ್ರೀತಿಯ ಗೆಲವು ಮುಂತಾದವುಗಳು ಇವರ ಕೃತಿಗಳಲ್ಲಿ ಸೇರಿವೆ. ಎಪಿಜೆ ಅಬ್ದುಲ್ ಕಲಾಂ, ಸಿ.ಎಸ್. ರಾಜನ್, ಸೃಜನ್ ಪಾಲ್ ಸಿಂಗ್ ಅಂತಹವರ ವಿಜ್ಞಾನ ಚಿಂತನೆಗಳನ್ನು ಕನ್ನಡದಲ್ಲಿ ಅನುವಾದಿಸಿದ್ದಾರೆ.
ಗಾಯತ್ರಿ ಮೂರ್ತಿ ಅವರ ಸಾಮಾಜಿಕ ಕಾದಂಬರಿಗಳಲ್ಲಿ ಹಂಬಲ, ಆಸೆಯಬಲೆ, ದೋಣಿ ಸಾಗಲಿ ತೀರಕೆ, ಬಾಳೆಂಬ ಕಡಲಲ್ಲಿ ಸೇರಿವೆ. ‘ಕೋಸಂಬರಿ’, ‘ಆಭರಣಗಳೊಡನೆ ಒಡನಾಟ’, 'ಹುರಿಗಳು' ಮುಂತಾದವು ಪ್ರಬಂಧಗಳು.
ಗಾಯತ್ರಿ ಮೂರ್ತಿ 'ಸಿಂಗಾರಿ' ಎಂಬ ಅಂತರ್ಜಾಲ ಮಾಸ ಪತ್ರಿಕೆಯ ಸಹ ಸಂಪಾದಕಿಯಾಗಿಯೂ ಕಾರ‍್ಯ ನಿರ್ವಹಿಸಿದ್ದಾರೆ. ರಾಜ್ಯ ಲೋಕ ಶಿಕ್ಷಣ ಇಲಾಖೆಯಿಂದ ನವ ಸಾಕ್ಷರರಿಗಾಗಿ ಬರೆದ ‘ನೀರು’ ಕೃತಿಗೆ ಅತ್ಯುತ್ತಮ ‘ಹಸ್ತ ಪ್ರತಿ ಪ್ರಶಸ್ತಿ’ , ‘ಬೆಳಕು’ ಮಕ್ಕಳ ಪುಸ್ತಕಕ್ಕೆ ಆರ್ಯಭಟ ಪ್ರಶಸ್ತಿ, ‘ಶಬ್ದ ಲೋಕ’ ಪುಸ್ತಕಕ್ಕೆ ಎನ್.ಸಿ.ಇ.ಆರ್.ಟಿ.(ನ್ಯಾಷನಲ್ ಕೌನ್ಸಿಲ್ ಫಾರ್ ಎಜುಕೇಷನಲ್ ರಿಸರ್ಚ ಅಂಡ್ ಟ್ರೈನಿಂಗ್) ರಾಷ್ಟ್ರೀಯ ಪ್ರಶಸ್ತಿ, ‘ಅದೃಶ್ಯ ಮಾನವ ಟಿನಿ ಟಿನಿ ಟಿನ್’ ಮಕ್ಕಳ ಕಾದಂಬರಿಗೆ ಅತ್ತಿಮಬ್ಬೆ ಪ್ರಶಸ್ತಿ, ‘ಕೋಸುಂಬರಿ’ ಪ್ರಬಂಧ ಸಂಕಲನಕ್ಕೆ ನುಗ್ಗೇ ಹಳ್ಳಿ ದತ್ತಿ ನಿಧಿಯ ಅತ್ಯುತ್ತಮ ಹಾಸ್ಯ ಸಾಹಿತ್ಯ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಇವರಿಗೆ ಸಂದಿವೆ. ‘ಹಂಬಲ’ ಸಾಮಾಜಿಕ ಕಾದಂಬರಿಯು ಇಟಾಲಿಯನ್ ಭಾಷೆಗೆ ಅನುವಾದವಾಗಿದೆ. ಇಟಲಿಯ ಟ್ಯೂರಿನ್ ನಲ್ಲಿರುವ ಪ್ರತಿಷ್ಠಿತ ಸಾಹಿತ್ಯ ಸಂಘ ‘ದಿ ಪ್ರಿಮಿಯೋ ಗ್ರೀನ್ ಜಾನೆ’ ಎಂಬ ಸಂಸ್ಥೆಯು ನಡೆಸಿದ ‘ದಿ ಫೀಲ್ ಆಫ್ ಇಂಡಿಯಾ’ ಕಾರ‍್ಯಕ್ರಮದಲ್ಲಿ ಭಾಗವಹಿಸಿ ಶಶಿ ತರೂರ್, ಎಂ.ಜೆ.ಅಕ್ಬರ್, ತರುಣ್ ತೇಜ್ ಪಾಲ್ ಮುಂತಾದವರುಗಳೊಡನೆ ವೇದಿಕೆ ಹಂಚಿಕೊಂಡ ಹೆಗ್ಗಳಿಕೆ ಇವರದಾಗಿತ್ತು.
On the birthday of our science writer Gayathri Murthy
ಕಾಮೆಂಟ್‌ಗಳು