ರಜನಿ ಗರುಡ
ರಜನಿ ಗರುಡ
ರಜನಿ ಗರುಡ ಅವರು ರಂಗನಟಿಯಾಗಿ, ರಂಗ ನಿರ್ದೇಶಕಿಯಾಗಿ, ರಂಗ ಶಿಕ್ಷಕಿಯಾಗಿ ಮತ್ತು ರಂಗದ ಕುರಿತು ಬರಹಗಾರ್ತಿಯಾಗಿ ಗಮನಾರ್ಹ ಕೆಲಸ ಮಾಡುತ್ತ ಬಂದಿದ್ದಾರೆ.
ರಜನಿ ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಪುಟ್ಟಹಳ್ಳಿ ಕೆರೇಕೈಯವರು. ಇವರು 'ನೀನಾಸಮ್'ನಲ್ಲಿ ರಂಗಶಿಕ್ಷಣ ಮುಗಿಸಿ 'ತಿರುಗಾಟ'ದಲ್ಲಿ ರೆಪರ್ಟರಿ ಕಂಪನಿಯಲ್ಲಿ ಮುಖ್ಯನಟಿಯಾಗಿದ್ದರು. ಶಿವಮೊಗ್ಗಾ ಜಿಲ್ಲೆಯಲ್ಲಿ UNICEF ನಡೆಸಿದ ಅಂಗನವಾಡಿ ಕಾರ್ಯಕರ್ತೆಯರಿಗೆ ಸಾಂಸ್ಕೃತಿಕ ಶಿಕ್ಷಣದ ತರಬೇತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಅಭಿನಯ ಕೇಸರಿ ಗರುಡ ಸದಾಶಿವ ರಾಯರ ಮೊಮ್ಮಗ ಡಾ. ಪ್ರಕಾಶ ಗರುಡರನ್ನು ತಮ್ಮ ಜೀವನ ಸಂಗಾತಿಯನ್ನಾಗಿ ಆಯ್ದುಕೊಂಡು, ಅವರೊಡನೆ ಧಾರವಾಡದಲ್ಲಿ ನೆಲೆಸಿ 'ಬಾಲಬಳಗ ಸೃಜನಶೀಲಶಿಕ್ಷಣ' ಎನ್ನುವ ಪರ್ಯಾಯ ಶಿಕ್ಷಣಶಾಲೆಯನ್ನು ಪ್ರಾರಂಭಿಸಿ 'ಥೇಟರ್ ಫಾರ್ ಎಜ್ಯುಕೇಶನ್' ಕಾರ್ಯಕ್ರಮವನ್ನು ರೂಪಿಸಿದರು.
ರಜನಿ ಸಮಕಾಲೀನ ಪ್ರೇಕ್ಷಕರಿಗಾಗಿ ಪಾರಂಪರಿಕ ತೊಗಲುಗೊಂಬೆಯಾಟವನ್ನು ಕಲಾತ್ಮಕವಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ ಮತ್ತು ಸರ್ ರತನ್ ಟಾಟಾ ಟ್ರಸ್ಟ್ ನ ಸಹಯೋಗದಲ್ಲಿ ಕೆಲಸ ಮಾಡಿದ್ದಾರೆ. ಪ್ರಕಾಶ್ ಗರುಡರೊಡನೆ ಗೊಂಬೆಮನೆ ಸಂಸ್ಥೆಯನ್ನು ಧಾರವಾಡದಲ್ಲಿ ಪ್ರಾರಂಭಿಸಿ, ಗೊಂಬೆ ವಿನ್ಯಾಸ ಮಾಡುವುದರ ಜೊತೆಗೆ ಗೊಂಬೆಯಾಟದ ನಿರ್ದೇಶನವನ್ನು ಮಾಡುತ್ತಾರೆ. ಮಕ್ಕಳ ಶಿಬಿರಗಳು, ನಾಟಕದ ಶಿಬಿರಗಳನ್ನು ನಡೆಸಿಕೊಡುವುದರೊಂದಿಗೆ ಆರ್ಟ್ ಎಜ್ಯುಕೇಶನ್ ತರಗತಿಗಳನ್ನೂ ನಡೆಸುತ್ತಾರೆ. ಬಹಳಷ್ಟು ನಾಟಕಗಳಿಗೆ ವಸ್ತ್ರವಿನ್ಯಾಸಕಿಯಾಗಿ ಕೆಲಸ ಮಾಡಿದ್ದಾರೆ.
ರಜನಿ ಇಂಡಿಯಾ ಫೌಂಡೇಶನ್ ಫಾರ ದಿ ಆರ್ಟ್ಸ್ ಮತ್ತು ಗಯತೆ ಇನ್ಸ್ಟಿಟ್ಯೂಟ್ ಸೇರಿ ನಡೆಸಿದ “ಕಲಿ-ಕಲಿಸು ಆರ್ಟ್ ಒರಿಯಂಟೇಶನ್ ಪ್ರೊಗ್ರಾಮ್ ಫಾರ್ ಟೀಚರ್ಸ್“ನಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿದ್ದರು. “ಉತ್ತರ ಕರ್ನಾಟಕದ ಅಭಿನಯ ಪರಂಪರೆ (ದೊಡ್ಡಾಟ ಮತ್ತು ಸಣ್ಣಾಟಗಳ ಕುರಿತು)” ಅಧ್ಯಯನ ಮತ್ತು ಅದರ ಸಮಕಾಲೀನ ಸಂದರ್ಭದ ಸ್ಥಿತಿ-ಗತಿಗಳ ದಾಖಲೆಯನ್ನು ಮಾಡಿದ್ದಾರೆ.
ರಜನಿ ಅವರು ಅಭಿನಯಿಸಿದ ನಾಟಕಗಳಲ್ಲಿ ಚೆರಿಹಣ್ಣಿನ ತೋಟ, ದಿ ಬಂಡಲ್, ತುಘಲಕ್, ಗುಡ್ ವುಮನ್ ಆಫ್ ಸೇಜುವಾನ್, ಸಾಹೇಬರು ಬರುತ್ತಾರೆ, ಧಾಂ ಧೂಂ ಸುಂಟರಗಾಳಿ, ಹ್ಯಾಮ್ಲೇಟ್, ಒಥೆಲೋ, ಈಡಿಪಸ್, ಬೆತ್ತಲೆವೇಷ, ಜಡಭರತನ ಕನಸುಗಳು, ಅಂಜುಮಲ್ಲಿಗೆ, ವಿಷಮ ವಿವಾಹ, ಸ್ವಪ್ನದರ್ಶನ, ಶಾಂತಕವಿಗಳ ವಿಶ್ರಾಂತಿ ಮುಂತಾದವು ಸೇರಿವೆ. ಚಿದಂಬರ ರಾವ್ ಜಂಬೆ, ಕೆ. ವಿ. ಅಕ್ಷರ, ರುಸ್ತುಂ ಭರೂಚಾ, ಫ್ರಿಟ್ಸ್ ಬೆನೆವಿಟ್ಸ್, ಡಾ. ಚಂದ್ರಶೇಖರ ಕಂಬಾರ, ಡಾ. ಪ್ರಕಾಶ ಗರುಡ, ನಟರಾಜ ಏಣಗಿ ಮುಂತಾದ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದಾರೆ.
ರಜನಿ ಅವರು ಪುಷ್ಪರಾಣಿ, ಗುಲ್ಪುಟ್ಟಿ- ಮುನ್ಪುಟ್ಟಿ, ಬೆಟ್ಟಪ್ಪನ ಕನಸು, ಬೆಪ್ಪುತಕ್ಕಡಿ ಬೋಳೆಶಂಕರ, ಹಕ್ಕಿಹಾಡು, ಬುದ್ಧಹೇಳಿದ ಕಥೆ, ಕಪ್ಪುಕಾಗೆಯ ಹಾಡು, ಅಗ್ನಿವರ್ಣ, ಮೈಸೂರು ಮಲ್ಲಿ ಮುಂತಾದ ನಾಟಕಗಳನ್ನು ಮಕ್ಕಳಿಗಾಗಿ ಮತ್ತು ಕಾಲೇಜು ವಿದ್ಯಾರ್ಥಿಗಳಿಗಾಗಿ ನಿರ್ದೇಶಿಸಿದ್ದಾರೆ. ಇವರು ಕೆಂಪು ಹೂ, ಅಂಗುಲಹುಳುವಿನ ಪರಕಾಯ ಪ್ರವೇಶ, ಅಂಚೆಮನೆ, ಪಾಪು ಗಾಂಧಿ ಬಾಪು ಗಾಂಧಿ ಆದ ಕಥೆ ಮುಂತಾದ ಗೊಂಬೆಯಾಟಗಳನ್ನು ನಿರ್ದೇಶಿಸಿದ್ದಲ್ಲದೆ ಶಾಲಾಮಕ್ಕಳಿಗಾಗಿ ಮತ್ತು ಬಾಲಾಕಾರ್ಮಿಕ ಮಕ್ಕಳಿಗಾಗಿಯೂ ಗೊಂಬೆಯಾಟಗಳನ್ನು ಬರೆದು - ನಿರ್ದೇಶಿಸಿದ್ದಾರೆ. ಕಳೆದ ವರ್ಷದಲ್ಲಿ ರೂಪುಗೊಂಡ ಇವರ 'ಅದ್ಭುತ ರಾಮಾಯಣ' ಬೊಂಬೆಯಾಟ ನಾಡಿನಾದ್ಯಂತ ನಿರಂತರವಾಗಿ ಜನಪ್ರಿಯ ಪ್ರದರ್ಶನಗಳನ್ನು ಕಾಣುತ್ತಿದೆ.
ರಜನಿ ಅವರು ಹಲವಾರು ಡಾಕ್ಯುಮೆಂಟ್ರಿ ಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ.
ರಜನಿ ಗರುಡ ಅವರಿಗೆ ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಪ್ರಶಸ್ತಿ, ಗೆಳೆಯರ ಬಳಗದ ಸಖಿಗೀತ ಪ್ರಶಸ್ತಿ, ಸುಶೀಲಾ ಕುಲಕರ್ಣಿ ಟ್ರಸ್ಟ್ ಪ್ರಶಸ್ತಿಗಳೇ ಅಲ್ಲದೆ ರಂಗಭೂಮಿಯಲ್ಲಿ ತೊಡಗಿಕೊಂಡಿರುವುದಕ್ಕಾಗಿ ಇನ್ನೂ ಹಲವಾರು ಪ್ರಶಸ್ತಿಗಳು ಸಂದಿವೆ.
ಮನಸೆಳೆಯುವಂತೆ ತಮ್ಮ ರಂಗದ ಅನುಭವಗಳನ್ನು ತಮ್ಮ ಬರವಣಿಗೆಯಲ್ಲಿ ಮೂಡಿಸಿರುವ ರಜನಿ ಅವರು ಅನೇಕ ರಂಗಭೂಮಿಯ ಕುರಿತಾದ ಲೇಖನಗಳನ್ನು ಮತ್ತು ಬಿಡಿ ಕವಿತೆಗಳನ್ನು ಬರೆದಿದ್ದಾರೆ.
Theatre personality of our pride Rajani Garud Kerekai
ಕಾಮೆಂಟ್‌ಗಳು