ಮಾರ್ಕ್ ಜು಼ಕರ್ಬರ್ಗ್
ಮಾರ್ಕ್ ಜು಼ಕರ್ಬರ್ಗ್
ಮಾರ್ಕ್ ಜು಼ಕರ್‍ಬರ್ಗ್ ಆಡಾಡುತ್ತಾ ಅದ್ಭುತವನ್ನು ಸಾಧಿಸಿದವರು.
ಇಂದು ನಾವು ಹೆಚ್ಚು ಸಂವಹಿಸುವ ಫೇಸ್ಬುಕ್ ಅಂತಹ ಅದ್ಭುತ ಸೃಷ್ಟಿಯ ಹಿಂದಿರುವ ಪ್ರತಿಭೆ ಮಾರ್ಕ್ ಜು಼ಕರ್‍ಬರ್ಗ್ ಜನ್ಮದಿನ. ಇದಕ್ಕೆ ಮುಂದೆ ಇನ್ಸ್ಟಾಗ್ರಾಮ್, ವಾಟ್ಸಾಪ್, ಮೆಸೆಂಜರ್, ಕ್ವೆಸ್ಟ್ 2 ಸಹಾ ಸೇರಿ 'ಮೆಟಾ' ಸಮೂಹವಾಗಿದೆ. ಈ ಹುಡುಗ ತನ್ನ ಕಾಲೇಜಿನ ದಿನಗಳಲ್ಲಿ ತಾನಿದ್ದ ಡಾರ್ಮೆಟರಿಯಲ್ಲಿ ಕುಳಿತು ಕಲ್ಪಿಸಿದ ವ್ಯವಸ್ಥೆ ಫೇಸ್ಬುಕ್. ಆತ ಜನಿಸಿದ್ದು 1984 ವರ್ಷದ ಮೇ 14 ರಂದು.
ಮಾರ್ಕ್ ಜು಼ಕರ್‍ಬರ್ಗ್ ಹಾರ್ವರ್ಡ್ ವಿಶ್ವವಿದ್ಯಾಲಯದ ಓದುವದಿನಗಳಲ್ಲಿ ತಮ್ಮ ಕಾಲೇಜಿನ ಸಹಪಾಠಿಗಳು ಮತ್ತು ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಗಳಾದ ಎಡ್ವಾರ್ಡೊ ಸೆವರಿನ್, ಡಸ್ಟಿನ್ ಮಸ್ಕೊವಿಟ್ಸ್ ಮತ್ತು ಕ್ರಿಸ್ ಹ್ಯುಸ್‌ರೊಂದಿಗೆ ಸೇರಿಕೊಂಡು ಫೇಸ್‍ಬುಕ್ ಅನ್ನು ಕಲ್ಪಿಸಿ ಸಾಕಾರಗೊಳಿಸಿದರು. 2004 ವರ್ಷದ ಫೆಬ್ರವರಿ 4 ರಂದು ಉಪಯೋಗಕ್ಕೆ ಬಿಡುಗಡೆಯಾದ ಈ ವ್ಯವಸ್ಥೆ ಆರಂಭದಲ್ಲಿ ಕೇವಲ ಹಾರ್ವರ್ಡ್ ವಿದ್ಯಾರ್ಥಿಗಳ ಉಪಯೋಗಕ್ಕೆ ಮಾತ್ರ ಸೀಮಿತವಾಗಿತ್ತು, ನಂತರ ಬೊಸ್ಟನ್ ಏರಿಯಾ, ದಿ ಐವಿ ಲೀಗ್, ಮತ್ತು ಸ್ಟಾನ್ ಫೋರ್ಡ್ ವಿಶ್ವವಿದ್ಯಾಲಯದಂತಹ ಇತರ ಕಾಲೇಜುಗಳಿಗೂ ವಿಸ್ತಾರಗೊಂಡಿತು. ನಂತರ ಇನ್ನೂ ವಿಸ್ತರಿಸುತ್ತ ಯಾವುದೇ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೂ ಕೂಡ ಸೇರ್ಪಡೆಗೆ ಅವಕಾಶ ನೀಡತೊಡಗಿತು, ನಂತರ ಪ್ರೌಢ ಶಾಲೆಯ ವಿದ್ಯಾರ್ಥಿಗಳು, ಮತ್ತು ಕೊನೆಯದಾಗಿ 13 ವರ್ಷ ಹಾಗು ಅದಕ್ಕಿಂತ ಮೇಲ್ಪಟ್ಟವರು ಯಾರಾದರೂ ಸೇರಬಹುದಾಗಿತ್ತು.
ಜೂನ್ 2004ರಲ್ಲಿ, ಫೇಸ್‍ಬುಕ್ ತನ್ನ ಕಾರ್ಯಗಳಿಗಾಗಿ ಕ್ಯಾಲಿಫೋರ್ನಿಯಾದ ಪ್ಯಾಲೋ ಆಲ್ಟೋ ಜಾಗದಲ್ಲಿ ಹೊಸ ಬೃಹತ್ ಆಫೀಸ್ ತೆರೆಯಿತು.! 2005 ರಲ್ಲಿ $200,000 ರೂ ನೀಡಿ facebook.com ಡೊಮೆನ್ ಹೆಸರನ್ನು ಖರೀದಿಸಿ ಹಳೆಯ ಹೆಸರನ್ನು ತ್ಯಜಿಸಿತು. ನಂತರ 2005ರಲ್ಲಿ ಒಂದು ಫೇಸ್ ಬುಕ್ ಕೋಚಿಂಗ್ ಆರಂಭಿಸಿದ ಜುಗರ್ಬರ್ಗ್'ಗೆ ತನ್ನ ಸಾಫ್ಟ್‌ವೇರ್ ಹರಡಲು ಪ್ರಬಲವಾದ ಕಂಪನಿಗಳು ಬೇಕಾದ ಕಾರಣ ಆ್ಯಪಲ್ ಮತ್ತು ಮೈಕ್ರೋಸಾಫ್ಟ್ ಹಾಗು ಹಲವು ಕಂಪನಿಗಳಿಗೆ ಫೇಸ್ ಬುಕ್ ವಿಸ್ತರಿಸಿದರು. ಈ ಜಾಲತಾಣವು ಇಂದು ವಿಶ್ವದಾದ್ಯಂತ 3.05 ಬಿಲಿಯನ್ಗಿಂತ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿದೆ.
ಜುಕರ್ಬರ್ಗ್ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಪದವಿ ಶಿಕ್ಷಣ ಪಡೆಯುವಾಗ ಡ್ರಾಪ್ ಔಟ್ ಆಗಿದ್ದರು. ಫೇಸ್ಬುಕ್‍ನ ಕಡೆಗೆ ಹೆಚ್ಚು ಗಮನ ಕೇಂದ್ರಿಕರಿಸಬೇಕಾದ ಕಾರಣ 2004ರಲ್ಲಿ ಹಾರ್ವಡ್ ವಿವಿಯಲ್ಲಿ ತಮ್ಮ ಪದವಿಯ 2ನೇ ವರ್ಷ ಕಲಿಯುತ್ತಿರುವಾಗ ಕಾಲೇಜಿನಿಂದ ಹೊರ ನಡೆದಿದ್ದರು. ಯಾವ ಕಾಲೇಜಿನಿಂದ ಹೊರಬಿದ್ದಿದ್ದರೋ ಅದೇ ಕಾಲೇಜು ಅವರಿಗೆ 2017 ರಲ್ಲಿ ಪದವಿ ನೀಡಿ ಗೌರವಿಸಿತು. ಪದವಿ ಪಡೆದ ಜುಕರ್ಬರ್ಗ್ ತಾವು ಕಾಲೇಜು ದಿನಗಳಲ್ಲಿ ಇದ್ದ ಕೊಠಡಿಗೆ ಭೇಟಿ ನೀಡಿ ಸಂಭ್ರಮಿಸಿದರು.
ಚೇತೋಹಾರಿಯಾದ ಕನಸು ಕಾಣುವುದು ಮುಖ್ಯ. ಮಾರ್ಕ್ ಜು಼ಕರ್‍ಬರ್ಗ್ ಅವರಿಗೆ ಒಂದು ಕಂಪನಿ ಕಟ್ಟಬೇಕು ಅನ್ನುವುದು ಕನಸಾಗಿರಲಿಲ್ಲ. ದೂರದೂರದಲ್ಲಿರುವ ಜನರನ್ನು ಒಟ್ಟು ಮಾಡಬೇಕು, ಹತ್ತಿರ ತರಬೇಕು ಅನ್ನುವುದು ಅವರ ಉದ್ದೇಶವಾಗಿತ್ತು. ಫೇಸ್‌ಬುಕ್ ಅನ್ನು ಆರಂಭಿಸಿದ ಕೆಲವು ವರ್ಷಗಳ ನಂತರ ಕೆಲವು ದೊಡ್ಡ ಕಂಪನಿಗಳು ಫೇಸ್‌ಬುಕ್ ಅನ್ನು ಖರೀದಿಸಲು ಬಂದವು. ಬಹುತೇಕರು ಫೇಸ್‌ಬುಕ್ ಅನ್ನು ಮಾರುವುದೇ ಒಳ್ಳೆಯದು ಎಂಬ ತೀರ್ಮಾನಕ್ಕೆ ಬಂದರು. ಆದರೆ ಮಾರ್ಕ್ ಜು಼ಕರ್‍ಬರ್ಗ್ ಒಪ್ಪಲಿಲ್ಲ. ಮತ್ತಷ್ಟು ಜನರನ್ನು ಹತ್ತಿರ ತರಬೇಕು ಅಂದುಕೊಂಡರು. ಇವರ ನಿರ್ಧಾರ ಇತರರಿಗೆ ಇಷ್ಟವಾಗಲಿಲ್ಲ. ಸಂಬಂಧಗಳಲ್ಲಿ ಬಿರುಕು ಕಾಣಿಸಿಕೊಂಡಿತು. ಅಷ್ಟು ದಿನ ಜೊತೆಗಿದ್ದವರು ಮುನಿಸಿಕೊಂಡು ಬೇರೆಬೇರೆಯಾದರು. ಕೇವಲ ಒಂದು ವರ್ಷದಲ್ಲಿ ಕಂಪನಿಯ ಮ್ಯಾನೇಜ್‌ಮೆಂಟ್ ತಂಡದಲ್ಲಿದ್ದ ಪ್ರತಿಯೊಬ್ಬರೂ ಬಿಟ್ಟು ಹೋದರು. ಫೇಸ್‌ಬುಕ್ ಇತಿಹಾಸದಲ್ಲಿ ಮಾರ್ಕ್ ಜು಼ಕರ್‍ಬರ್ಗ್ ಅನುಭವಿಸಿದ ಅತ್ಯಂತ ಕಷ್ಟಕರ ದಿನಗಳು ಅವು. ಆದರೆ ಅವರಿಗೆ ತಾವು ಮಾಡುತ್ತಿದ್ದ ಕೆಲಸದ ಮೇಲೆ ನಂಬಿಕೆ ಇತ್ತು. ಆದರೆ ಒಂಟಿಯಾಗಿ ಬಿಟ್ಟಿದ್ದರು. ಎಲ್ಲರನ್ನೂ ಕಳೆದುಕೊಂಡಿದ್ದ ಅವರು ಒಂದು ಪಾಠವನ್ನು ಕಲಿತರು. ಆ ಕುರಿತು ಅವರು ಹೇಳುವ ಮಾತು ಮನನೀಯ: “ನಾನಷ್ಟೇ ಕನಸು ಕಂಡರೆ ಸಾಲದು. ನಾನಷ್ಟೇ ಉದ್ದೇಶ ಇಟ್ಟುಕೊಂಡು ಮುಂದುವರಿದರೆ ಸಾಕಾಗುವುದಿಲ್ಲ. ಜೊತೆಯಿರುವವರಲ್ಲಿಯೂ ಕನಸುಗಳನ್ನು ಬಿತ್ತಬೇಕಿತ್ತು. ಬೇರೆಯವರ ಬದುಕಿಗೂ ಒಂದು ಉದ್ದೇಶವನ್ನು ಸೃಷ್ಟಿಸಬೇಕಿತ್ತು. ನಾನು ಮಾಡಿದ ತಪ್ಪೇನು ಅಂದರೆ ಅವರು ಯಾರಿಗೂ ನನ್ನ ಉದ್ದೇಶ ಏನು ಅನ್ನುವುದನ್ನು ವಿವರಿಸಿರಲಿಲ್ಲ. ನನ್ನ ಕನಸು ಅವರ ಕನಸು ಆಗಿರಲಿಲ್ಲ. ಕನಸು, ಸಂಕಲ್ಪ ಎಲ್ಲಕ್ಕಿಂತ ದೊಡ್ಡದು. ದುಡ್ಡು ಗಳಿಸುವುದಷ್ಟೇ ಬದುಕಲ್ಲಿ ಮುಖ್ಯ ಅಲ್ಲ ಅನ್ನುವುದನ್ನು ಕನಸುಗಳು ಕಲಿಸುತ್ತವೆ. ಒಂದು ಒಳ್ಳೆ ಸಂಕಲ್ಪ ಇತರರನ್ನೂ ಆಕರ್ಷಿಸುತ್ತದೆ. ನಾವಿಲ್ಲಿ ಏನೇನೋ ಹೊಸತನ್ನು ಕಂಡು ಹಿಡಿಯಲು ಶ್ರಮಿಸುತ್ತೇವೆ. ನಮ್ಮ ಉದ್ದೇಶ ಒಂದೇ, ನಾವು ಏನೋ ಹೊಸತು ಕೊಟ್ಟರು ಅದರಿಂದ ಫೇಸ್‌ಬುಕ್ ಬಳಸುವವರ ಬದುಕಲ್ಲಿ ಏನೋ ಒಂದು ಅರ್ಥಪೂರ್ಣವಾದುದು ಘಟಿಸಬೇಕು ಅನ್ನುವುದು. ಜಗತ್ತಲ್ಲಿ, ಸಮಾಜದಲ್ಲಿ ಒಂದು ಪಾಸಿಟಿವ್ ಆದ ಬದಲಾವಣೆ ಉಂಟು ಮಾಡಲು ನೆರವಾಗುತ್ತಿದ್ದೇವೆ ಅನ್ನುವ ಭಾವವೇ ನಮ್ಮನ್ನು ಕೈ ಹಿಡಿದು ನಡೆಸುತ್ತಿದೆ. ಫೇಸ್‌ಬುಕ್‌ನ ಯಶಸ್ಸಿಗೆ ಕಾರಣವೂ ಅದೇ. ಫೇಸ್‌ಬುಕ್‌ನಂತಹ ದೊಡ್ಡ ಸಮುದಾಯವನ್ನು ಮುನ್ನಡೆಸಬೇಕಾದರೆ ಒಂದು ಸ್ಫೂರ್ತಿ ಬೇಕು. ನಮ್ಮ ಲೀಡರ್ ಟೀಂ ಆ ಸ್ಫೂರ್ತಿಯವನ್ನು ಯಾವಾಗಲೂ ಉಳಿಸಿಕೊಳ್ಳಲು ಪ್ರಯತ್ನಿಸುತ್ತಾ ಇರುತ್ತದೆ. ನಾವು ನೀಡುವ ಸೇವೆಗಳು ಜಗತ್ತಿನ ಅತಿ ಹೆಚ್ಚು ಮಂದಿಗೆ ತಲುಪಬೇಕು ಅನ್ನುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಲೇ ಇರುತ್ತೇವೆ. ನಮ್ಮ ಧ್ವನಿ ಅವರನ್ನು ತಲುಪಿದರೆ ಸಾರ್ಥಕ. ಸಾಮಾನ್ಯವಾಗಿ ಬಹುತೇಕರು ಹೊಸತಾಗಿ ಕಂಪನಿ ಪ್ರಾರಂಭ ಮಾಡುವವರಿಗೆ ಏನಾದರೂ ಸಲಹೆ ನೀಡಿ ಅಂತ ಕೇಳುತ್ತಾರೆ. ನಾನು ಕಂಪನಿ ಮಾಡಬೇಕು ಅನ್ನುವ ಆಸೆ ಇರುವ ಎಲ್ಲರಿಗೂ ಹೇಳುವುದಿಷ್ಟೇ: ನಿಮ್ಮ ಗುರಿ ಕಂಪನಿ ಶುರು ಮಾಡುವುದು ಆಗಿರಬಾರದು. ನೀವು ಏನೋ ಬದಲಾವಣೆ ತರಬೇಕು ಅಂತ ಬಯಸುತ್ತಿದ್ದೀರಲ್ಲ ಆ ಕಡೆ ನಿಮ್ಮ ಗಮನ ಇರಲಿ. ಅನಂತರ ಸಮಾನ ಮನಸ್ಥಿತಿ ಇರುವವರನ್ನು ನಿಮ್ಮ ಜೊತೆ ಸೇರಿಸಿಕೊಳ್ಳಿ. ಎಲ್ಲರೂ ಸೇರಿಕೊಂಡು ಬೇರೆಯವರ ಬದುಕಿನಲ್ಲಿ ಬದಲಾವಣೆ ತರಲು ಸಾಧ್ಯವಾ ಎಂದು ಯೋಚಿಸಿ. ಒಂದಲ್ಲ ಒಂದು ದಿನ ಜಗತ್ತಿನಲ್ಲಿ ಒಂದು ಸಣ್ಣ ಪಾಸಿಟಿವ್ ಬದಲಾವಣೆ ಉಂಟುಮಾಡಲು ಸಾಧ್ಯವಾದರೆ ಅದೇ ನಿಮ್ಮ ಗೆಲುವು."
ನನಗೆ ಬಿಲ್ ಗೇಟ್ಸ್, ಸ್ಟೀವ್ ಜಾಬ್ಸ್ ಮತ್ತು ಮಾರ್ಕ್ ಜು಼ಕರ್‍ಬರ್ಗ್ ಅವರುಗಳು ಇಷ್ಟವಾಗುವುದು ಅವರು ನಿರ್ಮಿಸಿದ ಸಂಸ್ಥೆಗಳಿಗಲ್ಲ, ಅವರು ಬೆಳೆಸಿದ ಸಂಪತ್ತಿಗಲ್ಲ. ಅವರು ನಿರ್ಮಿಸಿದ ವಸ್ತು ವ್ಯವಸ್ಥೆಗಳಿಗೂ ಅಲ್ಲವೇನೋ. ಅವರು ಚಿಂತಿಸಿದ ಹೊಸರೀತಿಗಾಗಿ.
ಮಾರ್ಕ್ ಜು಼ಕರ್‍ಬರ್ಗ್ ಅವರ ಶೇರುಗಳ ಒಡೆತನದ ಮೌಲ್ಯ ಸುಮಾರು 167.1 ಬಿಲಿಯನ್ ಡಾಲರುಗಳಂತೆ. ಕೆಲ ವರ್ಷದ ಹಿಂದೆ ಅವರು ತಮ್ಮ ಷೇರು ಮೌಲ್ಯದ ಶೇಕಡಾ 99 ಭಾಗವನ್ನು ವೈದ್ಯಕೀಯ ಮತ್ತು ಶಿಕ್ಷಣದ ಅಭಿವೃದ್ಧಿಗೆ ಮೀಸಲಿರಿಸುವುದಾಗಿ ಹೇಳಿದ್ದಾರೆ. ಮಾರ್ಕ್ ಜು಼ಕರ್‍ಬರ್ಗ್ ಅವರು ವಾಟ್ಸಾಪ್ ಮತ್ತು ಇನ್ಸ್ಟಾಗ್ರಾಮ್, ಮೆಸೆಂಜರ್, ಕ್ವೆಸ್ಟ್ 2, ಥ್ರೆಡ್ಸ್ ಅನ್ನು ಕೂಡಾ ತಮ್ಮ ಸಂಸ್ಥೆಯ ಪ್ರಸಕ್ತ ಹೆಸರಾದ 'ಮೆಟಾ' ಒಡೆತನಕ್ಕೆ ತಂದಿದ್ದಾರೆ. ಸೋಲಾರ್ ಸೈಲ್ ಸ್ಪೇಸ್ ಕ್ರಾಪ್ಟ್ ಯೋಜನೆಯ ಕನಸುಳ್ಳ ಬ್ರೇಕ್‍ತ್ರೂ ಸ್ಟಾರ್ ಶಾಟ್ ಸಂಸ್ಥೆಯ ಸಹಸಂಸ್ಥಾಪಕರೂ ಆಗಿದ್ದಾರೆ.
ಲೋಕ ಎಲ್ಲವನ್ನೂ ತನ್ನ ಉಪಯುಕ್ತತೆಯಲ್ಲಿ, ತನ್ನ ಚಪಲಗಳಲ್ಲಿ, ತನ್ನ ನಿಷ್ಕರ್ಷೆಗಳಲ್ಲಿ ನೋಡುತ್ತದೆ. ಅದು ತನಗೆ ಏನನ್ನು ಕೊಟ್ಟವರನ್ನೂ ಸ್ಮರಿಸುವುದಿಲ್ಲ. ಅವನನ್ನೂ ಶಪಿಸುತ್ತದೆ. ಅದರ ಬಗ್ಗೆ ಕುರುಡಾಗಿ, ಕಿವುಡಾಗಿ, ಮೂಕವಾಗಿ, ಓ ನಾನು ಇದನ್ನು ನನ್ನ ಸಂತೋಷಕ್ಕೆ ಮತ್ತು ಲೋಕದ ಸಂತಸಕ್ಕೆ ಎಂದು ವಿಭಿನ್ನ ಮನಃಸ್ಥಿತಿಯಲ್ಲಿ ಮಾಡಿದ ಮನಸ್ಸೇ ಧನ್ಯ. ಅಂತಹ ಅದ್ಭುತ ಮನಗಳಲ್ಲಿ ಒಂದಾದ ಮಾರ್ಕ್ ಜು಼ಕರ್‍ಬರ್ಗ್ ಎಂಬ ಹೆಸರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆ.
Mark Zuckerberg Happy birth day. Hearty wishes Sir 🌷🙏🌷
ಕಾಮೆಂಟ್‌ಗಳು