ಹ.ವೆಂ.ನಾ
ಹ. ವೆಂ. ನಾಗರಾಜರಾವ್
ಹ. ವೆಂ. ನಾಗರಾಜರಾವ್ ಪ್ರಜಾಮತ ಸಂಪಾದಕರಾಗಿ ಮತ್ತು ಬರಹಗಾರರಾಗಿ ಪ್ರಸಿದ್ಧರಾಗಿದ್ದವರು.
ನಾಗರಾಜರಾಯರು ಚಾಮರಾಜನಗರ ತಾಲ್ಲೂಕಿನ ಹರುವೆ ಗ್ರಾಮದಲ್ಲಿ 1926ರ ಮೇ 8ರಂದು ಜನಿಸಿದರು. ತಂದೆ ವೆಂಕಟರಾವ್. ತಾಯಿ ರಾಜಮ್ಮ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಇಂಟರ್ ಮೀಡಿಯೇಟವರೆಗೆ ಓದಿದರು.
ಜನವಾಣಿ ಪತ್ರಿಕೆಯಲ್ಲಿ ವೃತ್ತಿ ಜೀವನವನ್ನಾರಂಭಿಸಿದ ನಾಗರಾಜರಾಯರು 1953ರಲ್ಲಿ ಪ್ರಜಾಮತ ವಾರಪತ್ರಿಕೆಯ ಉಪಸಂಪಾದಕರಾಗಿ ನೇಮಕಗೊಂಡು 1971ರಲ್ಲಿ ಸಂಪಾದಕರಾಗಿ, 1973ರಲ್ಲಿ ಮುಖ್ಯಸಂಪಾದಕರಾಗಿ ಪ್ರಜಾಮತವನ್ನು ವರ್ಣರಂಜಿತ ಪತ್ರಿಕೆಯನ್ನಾಗಿ ರೂಪಿಸಿ 1987ರಲ್ಲಿ ನಿವೃತ್ತರಾದರು.
‘ಪ್ರಜಾಮತ' 1931ರ ಆಗಸ್ಟ್ 15ರಂದು ಆಂಧ್ರದ ಚಿತ್ತೂರಿನ ಬೈಸಾನಿ ನರಸಿಂಹೇಶ್ವರ ಗುಪ್ತರವರು (ಬಿ.ಎನ್.ಗುಪ್ತ) ಮದರಾಸಿನಿಂದ ಪ್ರಾರಂಭಿಸಿದ ಪತ್ರಿಕೆ. 1934ರಲ್ಲಿ ಬೆಂಗಳೂರಿನಿಂದ ಪ್ರಕಟವಾಗತೊಡಗಿತು. ಬ್ರಿಟಿಷರ ಆಡಳಿತ ವ್ಯಾಪ್ತಿಯಲ್ಲಿದ್ದ ಮೈಸೂರು ಸಂಸ್ಥಾನದವರು ಪ್ರಜಾಮತ ಪ್ರಕಟಣೆಯನ್ನು ನಿಷೇಧಿಸಿದಾಗ, ಮಾ. ನ. ಚೌಡಪ್ಪನವರು ರಾತ್ರೋರಾತ್ರಿ ಮುಂಬಯಿ ಕರ್ನಾಟಕದ ಭಾಗವಾಗಿದ್ದ ಹುಬ್ಬಳ್ಳಿಗೆ ಹೋಗಿ, ಅಲ್ಲಿಂದ ಪ್ರಜಾಮತವನ್ನು ಹೊರಡಿಸಿದರು.
1948ರಲ್ಲಿ ಬೆಂಗಳೂರಿನಿಂದ ಬಿ.ಎಂ. ಶ್ರೀನಿವಾಸಯ್ಯನವರ ನೇತೃತ್ವದಲ್ಲಿ ಪತ್ರಿಕೆ ಪ್ರಕಟವಾಗತೊಡಗಿತು. 1953ರಲ್ಲಿ ಬಿ.ಎಂ. ಶ್ರೀನಿವಾಸಯ್ಯನವರ ನಿಧನದ ನಂತರ ಅವರ ಮಗ ಬಿ.ಎಸ್. ನಾರಾಯಣರು ಮಾಲಿಕತ್ವ ವಹಿಸಿಕೊಂಡರು. ಎಂ.ಎಸ್. ಗುರುಪಾದಸ್ವಾಮಿ, ನರಸಿಂಹ ಸೋಮಯಾಜಿ, ಕಳಸ ಸತ್ಯನಾರಾಯಣ, ನಾಡಿಗೇರ್ ಕೃಷ್ಣರಾವ್, ಹ.ವೆಂ. ನಾಗರಾಜರಾವ್, ಕುಮಾರ ವೆಂಕಣ್ಣ ಮುಂತಾದವರುಗಳು ಸಂಪಾದಕರಾಗಿ ದುಡಿದರು. ಆಫ್‌ಸೆಟ್ ಮುದ್ರಣಯಂತ್ರ ದೊರೆತ ನಂತರ ವರ್ಣರಂಜಿತವಾಗಿ ಮೂಡತೊಡಗಿತು. ಧಾರಾವಾಹಿಗಳು, ಸುದ್ದಿಯ ಜೊತೆಗೆ ಸಚಿತ್ರ ಫೋಟೋಗಳಲ್ಲದೆ ದೀಪಾವಳಿ ವಿಶೇಷಾಂಕವು ವರ್ಣರಂಜಿತವಾಗಿ ಮುದ್ರಣವಾಗತೊಡಗಿದ್ದರಿಂದ ಹೆಚ್ಚು ಪ್ರಖ್ಯಾತಗೊಂಡಿತು.
ಹ. ವೆಂ. ನಾಗರಾಜರಾವ್ ಅವರು ಪ್ರಜಾಮತ ವಾರಪತ್ರಿಕೆಯ ಸಂಪಾದಕರಾಗಿ ರಾಷ್ಟ್ರೀಯ ಹಬ್ಬ ಹರಿದಿನಗಳು, ಸಮಾರಂಭಗಳು, ರಾಷ್ಟ್ರೀಯ ನಾಯಕರುಗಳ ಬಗ್ಗೆ ಸಚಿತ್ರ ಲೇಖನಗಳನ್ನು ಪ್ರಕಟಿಸಿ, ಪತ್ರಿಕೋದ್ಯಮದಲ್ಲಿ ಹೊಸ ಆಯಾಮವನ್ನೇ ಸೃಷ್ಟಿಸಿ, ಪತ್ರಿಕೆಗೊಂದು ಘನತೆಯನ್ನು ತಂದುಕೊಟ್ಟು ಪತ್ರಿಕೆಯ ಪ್ರಸಾರ ಲಕ್ಷಕ್ಕೇರುವಂತೆ ಮಾಡಿದರು.
ನಾಗರಾಜರಾವ್ ಅವರು ರಷ್ಯಕ್ಕೆ ಭೇಟಿ ನೀಡಿ ಬಂದನಂತರ ರಷ್ಯಾದೇಶದ ತಮ್ಮ ಅನುಭವಗಳನ್ನು ಕುರಿತ ಲೇಖನಮಾಲೆ ‘ನವರಷ್ಯದ ನೋಟ’ ವನ್ನು ಪ್ರಾರಂಭಿಸಿ ಕವಿ ಅಲಿ ಸುಲೇಮನಾವ್ ವಿಷಯ, ಮಾಸ್ಕೊ ನಗರದ ಸೌಂದರ್ಯ, ಲೆನಿನ್ ಹಿಲ್ಸ್‌ನಲ್ಲಿದ್ದ ಮಾಸ್ಕೊ ಮತ್ತು ಪೆಟ್ರಿಸ್ ಲುಮುಂಬಾ ಮೈತ್ರಿ ವಿಶ್ವವಿದ್ಯಾಲಯಗಳ ಶೈಕ್ಷಣಿಕ ವಿಚಾರ, ಲೆನಿನ್‌ಗ್ರಾಡ್‌ನ ಕಲಾ ಸೌಂದರ್ಯ, ವೀರಭೂಮಿ ವೋಲ್ಗಾ ಗ್ರಾಡ್ ಮತ್ತು ಕೂಲ್ ಸ್ಟಾಯ್ ಸಾಹಿತ್ಯ ರಚನೆಯ ತಪೋಭೂಮಿ ಹೀಗೆ ನಾನಾ ವಿಷಯಗಳ ಬಗ್ಗೆ ವರ್ಣರಂಜಿತ ವ್ಯಾಖ್ಯಾನ ನೀಡಿ ಪತ್ರಿಕೆಯನ್ನು ಜನಪ್ರಿಯಗೊಳಿಸಿದರು.
ಹ. ವೆಂ. ನಾಗರಾಜರಾವ್ ಸಂಪಾದಕರಾಗಿ ಸದಾಕಾಲ ಹೊಸತರ ಹುಡುಕಾಟದಲ್ಲಿ ತೊಡಗಿದ್ದು, ಪ್ರಗತಿಶೀಲ ಮನೋಭಾವ ಹೊಂದಿದವರೆನಿಸಿ, ಹೊಸ ಹೊಸ ಲೇಖಕರನ್ನು ಬೆಳಕಿಗೆ ತರುವಲ್ಲಿ ಸದಾ ಕ್ರಿಯಾಶೀಲರಾಗಿದ್ದರು.
ಹ. ವೆಂ. ನಾಗರಾಜರಾವ್ ಅವರು ವಿದ್ಯಾರ್ಥಿ ದೆಸೆಯಲ್ಲಿದ್ದಾಗಲೇ ಸಾಹಿತ್ಯದ ಬಗ್ಗೆ ಅಭಿರುಚಿ ಬೆಳೆಸಿಕೊಂಡು ರಚಿಸಿದ ಕಥೆ, ಕವನಗಳು ದೇಶಬಂಧು, ಛಾಯಾ, ಉಷಾ, ವಾಣಿ, ಸ್ವತಂತ್ರ, ಪ್ರಗತಿ, ಕಥೆಗಾರ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದವು. 1948ರಲ್ಲಿ ಇವರು ಪ್ರಕಟಿಸಿದ ಮೊದಲ ಕಥಾ ಸಂಕಲನ ‘ಕತ್ತಲೆಬೆಳಕು’. ಇದರಲ್ಲಿ ಆರು ಕಥೆಗಳಿವೆ. ಈ ಸಂಕಲನದಲ್ಲಿ ಪ್ರಕಟಗೊಂಡ ರಂಗಾಶಾಮಿ ಕಥೆಯು, ಪ್ರಸಿದ್ಧ ವಿಮರ್ಶಕರಾದ ಕೆ. ನರಸಿಂಹಮೂರ್ತಿಯವರು ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣೆಗಾಗಿ ಸಂಪಾದಿಸಿದ ‘ಅತ್ಯುತ್ತಮ ಸಣ್ಣ ಕಥೆಗಳು’ ಸಂಕಲನದಲ್ಲಿ ಸೇರಿದೆ. ಇದೇ ಕಥೆಯು ಇಂಗ್ಲಿಷ್‌ಗೂ ಭಾಷಾಂತರಗೊಂಡು, ಇಂಗ್ಲಿಷ್ ಲೇಖಕ ಕಾ.ನಾ. ಸುಬ್ರಹ್ಮಣ್ಯ ಅವರು ಸಂಪಾದಿಸಿದ ಮಾಡರ್ನ್ ಇಂಡಿಯನ್ ಶಾರ್ಟ್ ಸ್ಟೋರೀಸ್ ಸಂಪುಟ-3ರಲ್ಲಿಯೂ ಸ್ಥಾನ ಪಡೆದುಕೊಂಡಿತು. 'ಐದು ದೀಪಗಳ ಕಂಬ’ 1964ರಲ್ಲಿ ಪ್ರಕಟವಾದ ಕವನ ಸಂಕಲನ. ಇದರಲ್ಲಿ 16 ಕವನಗಳಿವೆ. 1977ರಲ್ಲಿ ಪ್ರಕಟವಾದ ಕೃತಿ ‘ಸೃಜನಶೀಲ’. ಇದರಲ್ಲಿ ಟಿ.ಎಸ್. ಎಲಿಯಟ್, ಟಾಯ್ನಬಿಯಿಂದ ಹಿಡಿದು ಪು.ತಿ.ನ., ಅ.ನ.ಕೃ., ಕಾರಂತ, ರಾವಬಹದ್ದೂರ್, ಕೆ.ಕೆ. ಹೆಬ್ಬಾರ್, ಪಂಡಿತ್ ರವಿಶಂಕರ್ ಮುಂತಾದವರ ವ್ಯಕ್ತಿಚಿತ್ರಗಳು, ಬಾಂಗ್ಲಾ-ಭಾರತ ಸಾಂಸ್ಕೃತಿಕ ಸಂಬಂಧ ಮುಂತಾದವುಗಳ ಕುರಿತಾದ ಲೇಖನಗಳಿವೆ. ಸೋವಿಯತ್ ರಷ್ಯ ಪ್ರವಾಸ ಮಾಡಿದ ನಂತರ ತಾವು ಕಂಡ ಅನುಭವಗಳನ್ನು ‘ನವರಷ್ಯದನೋಟ’ ಎಂಬ ಅಂಕಣದಲ್ಲಿ ಬರೆದಿದ್ದು ಪುಸ್ತಕ ರೂಪದಲ್ಲೂ ಪ್ರಕಟಗೊಂಡು 1978ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡಮಿಯ ದ್ವಿತೀಯ ಬಹುಮಾನ ಪಡೆದ ಕೃತಿ ಎನಿಸಿತು. ಇದನ್ನು 1979ರಲ್ಲಿ ಗುರುನಾಥ ಜೋಷಿಯವರು ‘ನಯಾರೋಸ್‌ನ ಯಾಜಮಾನ’ ಎಂಬ ಹೆಸರಿನಿಂದ ಹಿಂದಿಗೂ ಅನುವಾದಿಸಿದರು. ಮತ್ತೊಮ್ಮೆ 1979ರಲ್ಲಿ ಪಶ್ಚಿಮ ಜರ್ಮನಿಯ ಪ್ರವಾಸ ಕೈಗೊಂಡು, ಇಂಗ್ಲೆಂಡ್‌ಗೂ ಭೇಟಿ ನೀಡಿ ಬಂದರು. 1991ರಲ್ಲಿ ಪ್ರಕಟಗೊಂಡ ಕೃತಿ ‘ಮನದ ತೆರೆಯ ಮೇಲೆ’ ಪ್ರಬಂಧಗಳ ಸಂಕಲನ . ಇದರಲ್ಲಿ ಡಿ.ವಿ.ಜಿ: ನಮ್ಮ ಕನ್ನಡ ಪತ್ರಿಕೋದ್ಯೋಗಿ, ಕೃಷ್ಣನ ಕತೆಯಿಂದ ಮೊದಲುಗೊಂಡು ವರ್ತಮಾನದ ನಗರವಾಸಿಗಳ ಗತಿಯವರೆಗೆ 16 ಲೇಖನಗಳಿಂದ ಕೂಡಿದೆ. ಮಕ್ಕಳ ಸಾಹಿತ್ಯದಲ್ಲೂ ಕೆಲಸ ಮಾಡಿರುವ ನಾಗರಾಜರಾಯರು ಶ್ರೀಪಾದರಾಜ ಮತ್ತು ಎಂ.ವೆಂಕಟಕೃಷ್ಣಯ್ಯ (ಮೈಸೂರುತಾತಯ್ಯ) ನವರ ವ್ಯಕ್ತಿ ಚಿತ್ರಗಳು, ರಾಷ್ಟ್ರೋತ್ಥಾನ ಪರಿಷತ್‌ನ ಭಾರತ ಭಾರತಿ ಪುಸ್ತಕ ಸಂಪದಕ್ಕಾಗಿ ‘ದಾದಾಬಾಯಿ ನವರೋಜಿ’, ಕಲಾವತಿ ಹಾಗೂ ಅಮರಾವತಿಯ ಅರಸುಕುಮಾರ ನೀಳ್ಗತೆಗಳನ್ನು ರಚಿಸಿದ್ದಾರೆ. ಜೊತೆಗೆ ಪ್ರಜಾಮತ ಪತ್ರಿಕೆಗಾಗಿ ಪ್ರತಿವಾರವೂ ಬರೆದ ಸಂಪಾದಕೀಯ ಲೇಖನಗಳು ಸಂಪುಟ-೧ ಪ್ರಕಟಗೊಂಡಿತು. 2011ರಲ್ಲಿ ಬಿ.ಜಿ. ಸತ್ಯಮೂರ್ತಿಯವರ ಸಂಪಾದಕತ್ವದಲ್ಲಿ ‘ಹವೆಂನಾ ಸಮಗ್ರಸಾಹಿತ್ಯ ಭಾಗ 1-2’ ಪ್ರಕಟಗೊಂಡಿತು.
ಹ. ವೆಂ. ನಾಗರಾಜರಾವ್ ಅವರಿಗೆ 1978ರಲ್ಲಿ ಕರ್ನಾಟಕದ ಅಂದಿನ ರಾಜ್ಯಪಾಲರಾಗಿದ್ದ ಗೋವಿಂದ ನಾರಾಯಣ್‌ರವರ ಅಧ್ಯಕ್ಷತೆಯಲ್ಲಿ ಸಾರ್ವಜನಿಕ ಸನ್ಮಾನ, 1980ರಲ್ಲಿ ಜ್ಞಾನಜ್ಯೋತಿ ಕಲಾವೃಂದದವರಿಂದ ‘ಪತ್ರಿಕಾ ಸಾಹಿತ್ಯ ರತ್ನ’ ಬಿರುದು ಮತ್ತು ಅದೇ ವರ್ಷ ಜನಸೇವಾ ಪರಿಷತ್ತಿನವರಿಂದ ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಮಾಜಿ ಉಪರಾಷ್ಟ್ರಪತಿಗಳಾಗಿದ್ದ ಬಿ.ಡಿ. ಜತ್ತಿಯವರ ಅಧ್ಯಕ್ಷತೆಯಲ್ಲಿ ‘ಸಂಪಾದಕ ಕೇಸರಿ’ ಬಿರುದು ಮುಂತಾದ ಪ್ರಶಸ್ತಿ ಗೌರವಗಳು ಸಂದಿದ್ದವು.
ಹ. ವೆಂ. ನಾಗರಾಜರಾವ್ 1992ರ ಫೆಬ್ರವರಿ 9ರಂದು ನಿಧನರಾದರು.
On the birth anniversary of journalist and writer of our times H. V. Nagaraja Rao ಹ.ವೆ
ಕಾಮೆಂಟ್‌ಗಳು