ನಿತಿನ್ ಗಡ್ಕರಿ
ನಿತಿನ್ ಗಡ್ಕರಿ
ನಿತಿನ್ ಗಡ್ಕರಿ ದೇಶದಲ್ಲಿ ಶ್ರೇಷ್ಠ ಮಟ್ಟದ ಹೆದ್ದಾರಿಗಳನ್ನು ನಿರ್ಮಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತ ಬಂದವರಾಗಿದ್ದಾರೆ.
ನಿತಿನ್ ಗಡ್ಕರಿ 1957ರ ಮೇ 27ರಂದು ನಾಗಪುರದ ಮಧ್ಯಮವರ್ಗದ ಕುಟುಂಬದಲ್ಲಿ ಜನಿಸಿದರು. ತಮ್ಮ ಬೆಳವಣಿಗೆಯ ದಿನಗಳಲ್ಲಿ ಭಾರತೀಯ ಜನತಾ ಮೋರ್ಚಾ ಮತ್ತು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನ ಕಾರ್ಯಕರ್ತರಾಗಿದರು. ರಾಜಕಾರಣದ ಪ್ರಾರಂಭಿಕ ಹಂತಗಳಲ್ಲಿ ನಿಷ್ಠೆಯಿಂದ ಕೆಲಸ ಮಾಡಿದ ಗಡ್ಕರಿ ಎಂ.ಕಾಮ್, ಎಲ್ ಎಲ್ ಬಿ ವಿದ್ಯಾರ್ಜನೆಗಳನ್ನೂ ನಡೆಸಿದರು.
1995-1999ರ ಅವಧಿಯಲ್ಲಿ ಮಹಾರಾಷ್ಟ್ರ ಸರ್ಕಾರದ ಲೋಕೋಪಯೋಗಿ ಸಚಿವರಾಗಿ ಕಾರ್ಯನಿರ್ವಹಿಸಿದ ನಿತಿನ್ ಗಡ್ಕರಿ ಆ ವಿಭಾಗವನ್ನು ಕೆಳಹಂತದಿಂದ ಮೇಲಿನ ಹಂತದವರೆಗೆ ಕ್ರಾಂತಿಕಾರಕವಾಗಿಯೋ ಎಂಬಂತೆ ಕ್ರಿಯಾಶೀಲಗೊಳಿಸಿದರು. ಮೂಲಭೂತ ಸೌಕರ್ಯಗಳ ನಿರ್ಮಾಣಕ್ಕೆ ಖಾಸಗೀ ಸಂಸ್ಥೆಗಳ ಸಹಭಾಗಿತ್ವವನ್ನು ಪ್ರತಿಪಾದಿಸಿದ ಗಡ್ಕರಿ ಆ ನಿಟ್ಟಿನಲ್ಲಿ ಮಹತ್ಸಾಧನೆ ಮಾಡಿದರು. ಹಳ್ಳಿಗಳಿಗೆ ಸೂಕ್ತ ಸಂಪರ್ಕ ಒದಗಿಸಲಿಕ್ಕಾಗಿ ಮಹಾರಾಷ್ಟ್ರ ರಾಜ್ಯ ಸಂಪುಟವು 700 ಕೋಟಿ ಹಣವನ್ನು ಮೀಸಲಾಗಿರಿಸಲು ಮನವೊಲಿಸಿದರು. ಈ ಮೂಲಕ ಅವರ ಆಳ್ವಿಕೆಯ ಕೇವಲ ನಾಲ್ಕೇ ವರ್ಷಗಳಲ್ಲಿ ಮಹಾರಾಷ್ಟ್ರ ಸರ್ಕಾರದ ಶೇಕಡಾ 98ರಷ್ಟು ಗ್ರಾಮೀಣ ಪ್ರದೇಶಗಳು ಉತ್ತಮ ರಸ್ತೆ ಸಂಪರ್ಕ ಪಡೆಯುವಂತಾದವು. ಇದರಿಂದಾಗಿ ಬಹಳಷ್ಟು ಸ್ಥಳಗಳಲ್ಲಿ ಅಪೌಷ್ಟಿಕತೆಕತೆಯಿಂದ ಬಳಲುತ್ತಿದ್ದ ಗ್ರಾಮೀಣ ಜನಾಂಗಕ್ಕೆ ಸಮರ್ಪಕ ರೇಷನ್ ವ್ಯವಸ್ಥೆ, ಸಾರಿಗೆ ವ್ಯವಸ್ಥೆ ಮತ್ತು ಶೈಕ್ಷಣಿಕ ಸೌಲಭ್ಯಗಳು ದೊರಕುವಂತಾದವು. ಇದರಿಂದಾಗಿ ಸ್ವಾತಂತ್ರ್ಯಾ ನಂತರದಲ್ಲಿ 50 ವರ್ಷಗಳಲ್ಲಿ ಸಾಧ್ಯವಾಗದಿದ್ದ 13,736 ಹಳ್ಳಿಗಳು ಉತ್ತಮ ಸಂಪರ್ಕ ವ್ಯವಸ್ಥೆಹೊಂದಲು ಸಾಧ್ಯವಾಯಿತು. ಬಹಳಷ್ಟು ಉತ್ತಮ ರಸ್ತೆ, ಹೆದ್ಧಾರಿಗಳು, ಮೇಲ್ಸೇತುವೆ, ಮೇಲು ರಸ್ತೆಗಳನ್ನು ನಿರ್ಮಿಸಿದ ಕೀರ್ತಿ ನಿತಿನ್ ಗಡ್ಕರಿ ಅವರದು. ಈ ಸಾಧನೆಯಲ್ಲಿ ಮುಂಬೈ ಪೂನಾ ನಗರಗಳ ಮಧ್ಯೆ ನಿರ್ಮಿಸಿದ ಭಾರತದಲ್ಲೇ ಪ್ರಪ್ರಥಮ ಆರು ಪಥಗಳ ಕಾಂಕ್ರೀಟ್ ರಸ್ತೆಯಾದ ಎಕ್ಸ್ಪ್ರೆಸ್ ಹೈವೇ ಮಾರ್ಗ ಕೂಡಾ ಪ್ರಮುಖವಾದದ್ದು. 55 ಫ್ಲೈ ಓವರ್ ನಿರ್ಮಿಸಿ ಮುಂಬೈ ನಗರದ ಸಂಚಾರವನ್ನು ಸುಗಮಗೊಳಿಸಿದ ಕೆಲಸ ಕೂಡಾ ಗಡ್ಕರಿ ಅವರ ಸಾಧನೆ.
ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದ ಕೇಂದ್ರ ಸರ್ಕಾರವು ನಿತಿನ್ ಗಡ್ಕರಿ ಅವರನ್ನು ನ್ಯಾಷನಲ್ ರೂರಲ್ ರೋಡ್ ಡೆವೆಲಪ್ ಮೆಂಟ್ ಸಮಿತಿಯ ಚೇರ್ಮನ್ ಆಗಿ ನೇಮಿಸಿತು. ಕೇಂದ್ರ ಸರ್ಕಾರಕ್ಕೆ ತಮ್ಮ ಸಮಗ್ರವರದಿಯನ್ನು ನೀಡುವುದರ ಜೊತೆಗೆ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಬಳಿ ತಮ್ಮ ಸಮಗ್ರ ಯೋಜನೆಯನ್ನು ಪ್ರಸ್ತುತ ಪಡಿಸಿದ ಗಡ್ಕರಿ ‘ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ’ ಆರಂಭಕ್ಕೆ ನಾಂದಿಹಾಡಿದರು. ಈ ಬೃಹತ್ ಯೋಜನೆಯ ಗಾತ್ರ 60,000 ಕೋಟಿ ಮೌಲ್ಯವುಳ್ಳದ್ದಾಗಿತ್ತು. ಇದರಿಂದಾಗಿ ದೇಶದ ಎಲ್ಲೆಡೆ ಉತ್ತಮ ಹೆದ್ಧಾರಿಗಳ ಅಭಿವೃದ್ಧಿಯನ್ನು ದೇಶ ಕಾಣುವಂತಾಯಿತು.
ಗಡ್ಕರಿ 2009-2013 ಅವಧಿಯಲ್ಲಿ ಭಾರತೀಯ ಜನತಾಪಕ್ಷದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು.
2014ರಿಂದ ನಿರಂತರವಾಗಿ ಕೆಂದ್ರದಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ನಿರ್ವಹಣಾ ಸಚಿವರಾಗಿರುವ ನಿತಿನ್ ಗಡ್ಕರಿ ಹಿಂದೆ ದೇಶದಲ್ಲಿ ದಿನವೊಂದಕ್ಕೆ ಕೇವಲ ಎರಡು ಕಿಲೋ ಮಿಟರ್ ಆಗುತ್ತಿದ್ದ ನಿರ್ಮಾಣ ಆಮೆ ವೇಗದ ಅಭಿವೃದ್ಧಿಯನ್ನು, 30 ಕಿಲೋಮೀಟರ್ ನಿರ್ಮಾಣದಷ್ಟು ವೇಗಕ್ಕೆ ವಿಸ್ತರಿಸಿದ್ದಾರೆ. ತಮ್ಮ ಖಾತೆಗೆ ನೀಡಿದ ಹಣದಲ್ಲಿ ಒಂದು ಭಾಗವನ್ನು (ಸುಮಾರು 2 ಟ್ರಿಲಿಯನ್ ಡಾಲರ್ ಹಣವನ್ನು) ಮರಗಿಡಗಳ ಬೆಳವಣಿಗೆ ಮತ್ತು ಪ್ರಾಕೃತಿಕ ಸೌಂದರ್ಯ ಅಭಿವೃದ್ಧಿಗೆ ಮೀಸಲಿರಿಸಿದ್ದಾರೆ.
ರಾಜಕೀಯ ಚಟುವಟಿಕೆಗಳಲ್ಲಿ ಮಾತ್ರವಲ್ಲದೆ ಹಲವಾರು ಸಾರ್ವಜನಿಕ ಸಂಸ್ಥೆಗಳನ್ನೂ ಉತ್ತಮವಾಗಿ ನಡೆಸಿದ ಅನುಭವ ನಿತಿನ್ ಗಡ್ಕರಿ ಅವರದ್ದು. ಅವರಿಗೆ ಮುಂಬೈ ಭೂಷಣ ಗೌರವ, ಮಾಧವ ರಾವ್ ಲಿಮಯೆ ಪ್ರಶಸ್ತಿ ಮತ್ತು ಇನ್ನೂ ಹಲವಾರು ಸಂಘ ಸಂಸ್ಥೆಗಳ ಗೌರವಗಳು ಸಂದಿವೆ. ಒಂದೇ ಖಾತೆಯಲ್ಲಿ ಹೆಚ್ಚಿನ ವರ್ಷಗಳ ಕಾಲ ಕಾರ್ಯನಿರ್ವಹಿಸಿ ಉತ್ತಮ ಸಾಧನೆ ತೋರಿದ ಕೀರ್ತಿ ಇವರದ್ದಾಗಿದೆ. 'ಇಂಡಿಯಾ ಆಸ್ಪೈರ್ಸ್' ಎಂಬ ತಮ್ಮ ಕೃತಿಯಲ್ಲಿ ಅವರು ಹೊಸ ಅಭಿವೃದ್ಧಿ ಸಾಧ್ಯತೆಗಳು, ಹಸಿರು ಶಕ್ತಿ, ಬದಲಿ ಇಂಧನ, ಉತ್ತಮ ಕಸ ವಿಲೇವಾರಿ ವ್ಯವಸ್ಥೆ ಮುಂತಾದ ಅಪರಿಮಿತ ಚಿಂತನೆಗಳ ಕುರಿತಾಗಿ ತಮ್ಮ ವಿಶಾಲ ದೃಷ್ಟಿ ಹರಿಸಿದ್ದಾರೆ. ಅವರು ಸ್ವಯಂ, ಹಸಿರು ಇಂಧನ ವಾಹನಗಳನ್ನು ಬಳಸುವುದಲ್ಲದೆ ಜನರಿಗೂ ಆ ನಿಟ್ಟಿನಲ್ಲಿ ಕರೆಕೊಡುತ್ತ ಬಂದಿದ್ದಾರೆ.
On the birthday of man who is making great roads Nitin Gadkari
ಕಾಮೆಂಟ್‌ಗಳು