ರೊನಾಲ್ಡ್ ರಾಸ್
ರೊನಾಲ್ಡ್ ರಾಸ್
ರೊನಾಲ್ಡ್ ರಾಸ್ ಭಾರತದಲ್ಲಿ ಜನಿಸಿ, ಬೆಳೆದು, ಮಲೇರಿಯಾ ರೋಗಕ್ಕೆ ಪರಿಹಾರ ಕಂಡುಹಿಡಿದ ನೊಬೆಲ್ ಪುರಸ್ಕೃತ ಮಹಾನ್ ವಿಜ್ಞಾನಿ, ಚಿಂತಕ, ಸಾಹಿತಿ ಮತ್ತು ಕಲಾವಿದ.
ರೊನಾಲ್ಡ್ ರಾಸ್ 1857ರ ಮೇ 13ರಂದು ಭಾರತದ ಅಲ್ಮೋರಾದಲ್ಲಿ ಜನಿಸಿದರು. ತಂದೆ ಕ್ಯಾಂಪೆಲ್ ಕ್ಲೇಯ್ ಗ್ರಾಂಟ್ ರಾಸ್ (ಸಿ.ಸಿ. ಜಿ. ರಾಸ್) ಬ್ರಿಟಿಷ್ ಸೈನ್ಯದಲ್ಲಿ ಜನರಲ್ ಆಗಿದ್ದರು. ರೊನಾಲ್ಡ್ ರಾಸ್ 1875 ರಲ್ಲಿ ಲಂಡನ್‌ನ ಸೇಂಟ್ ಬಾರ್ತಲೋಮ್ಯೂಸ್ ಆಸ್ಪತ್ರೆಯಲ್ಲಿ ವೈದ್ಯಕೀಯ ಅಧ್ಯಯನವನ್ನು ಪ್ರಾರಂಭಿಸಿದರು. 1881 ರಲ್ಲಿ ಭಾರತೀಯ ವೈದ್ಯಕೀಯ ಸೇವೆಯನ್ನು ಪ್ರವೇಶಿಸಿದರು. ಅವರು 1892ರಲ್ಲಿ ಮಲೇರಿಯಾದ ಅಧ್ಯಯನವನ್ನು ಪ್ರಾರಂಭಿಸಿದರು. 1894ರಲ್ಲಿ ಅವರು ಲ್ಯಾವೆರಾನ್ ಮತ್ತು ಮ್ಯಾನ್ಸನ್ ಅವರ 'ಸೊಳ್ಳೆಗಳು ರೋಗದ ಹರಡುವಿಕೆಯೊಂದಿಗೆ ಸಂಪರ್ಕ ಹೊಂದಿವೆ' ಎಂಬ ಊಹೆಯ ಬಗ್ಗೆ ಭಾರತದಲ್ಲಿ ಪ್ರಾಯೋಗಿಕ ಸಂಶೋಧನೆ ಮಾಡಲು ನಿರ್ಧರಿಸಿದರು. ಎರಡೂವರೆ ವರ್ಷಗಳ ಸತತ ಪರಿಶ್ರಮದ ನಂತರ, ಸೊಳ್ಳೆಗಳಲ್ಲಿ ಮಲೇರಿಯಾದ ಪರಾವಲಂಬಿಗಳ ಜೀವನ ಚಕ್ರವನ್ನು ನಿರೂಪಿಸುವಲ್ಲಿ ರಾಸ್ ಯಶಸ್ವಿಯಾದರು. ಹೀಗಾಗಿ ಲ್ಯಾವೆರಾನ್ ಮತ್ತು ಮ್ಯಾನ್ಸನ್ ಅವರ ಊಹೆಗೆ ಖಚಿತ ಸ್ಪಷ್ಟತೆಯನ್ನು ತಂದರು.
ರೊನಾಲ್ಡ್ ರಾಸ್ 1899ರಲ್ಲಿ ಸರ್ ಆಲ್ಫ್ರೆಡ್ ಜೋನ್ಸ್ ಅವರ ನಿರ್ದೇಶನದಲ್ಲಿ ಲಿವರ್‌ಪೂಲ್ ಸ್ಕೂಲ್ ಆಫ್ ಟ್ರಾಪಿಕಲ್ ಮೆಡಿಸಿನ್‌ಗೆ ಸೇರಿದರು. ಅವರು ಈಗಾಗಲೇ ನಡೆಸುತ್ತಿದ್ದ ಸಂಶೋಧನೆಗಳನ್ನು ಮುಂದುವರಿಸಲು ತಕ್ಷಣವೇ ಪಶ್ಚಿಮ ಆಫ್ರಿಕಾಕ್ಕೆ ಕಳುಹಿಸಲಾಯಿತು. ಅಲ್ಲಿ ಅವರು ಮಾರಣಾಂತಿಕ ಆಫ್ರಿಕನ್ ಜ್ವರವನ್ನು ತಿಳಿಸುವ ಸೊಳ್ಳೆಗಳ ಜಾತಿಗಳನ್ನು ಕಂಡುಕೊಂಡರು.
ರಾಸ್ ಅವರ ಸಂಶೋಧನೆಗಳನ್ನು ಕೋಚ್, ಡೇನಿಯಲ್ಸ್, ಬಿಗ್ನಾಮಿ, ಸೆಲ್ಲಿ, ಕ್ರಿಸ್ಟೋಫರ್ಸ್, ಸ್ಟೀಫನ್ಸ್, ಆನೆಟ್, ಆಸ್ಟೆನ್, ರೂಜ್, ಝೀಮನ್ ಮುಂತಾದ ಅನೇಕ ತಜ್ಞರು ಬೆಂಬಲಿಸಿದರು. ರಾಸ್ 1901ರಲ್ಲಿ
ಇಂಗ್ಲೆಂಡ್‌ನ ರಾಯಲ್ ಕಾಲೇಜ್ ಆಫ್ ಸರ್ಜನ್ಸ್‌ನ ಫೆಲೋ ಆಗಿ ಮತ್ತು ರಾಯಲ್ ಸೊಸೈಟಿಯ ಫೆಲೋ ಆಗಿ ಆಯ್ಕೆಯಾದರು, 1911ರಿಂದ 1913ರವರೆಗೆ ಅಲ್ಲಿನ ಉಪಾಧ್ಯಕ್ಷರಾದರು. 1902ರಲ್ಲಿ ಹಿಸ್ ಮೆಜೆಸ್ಟಿ ದಿ ಕಿಂಗ್ ಆಫ್ ಗ್ರೇಟ್ ಬ್ರಿಟನ್ ಅವರಿಂದ ಕಂಪಾನಿಯನ್ ಆರ್ಡರ್ ಆಫ್ ಬಾತ್‌ನ ನೇಮಕಗೊಂಡರು. 1911ರಲ್ಲಿ ಅವರು ನೈಟ್ ಕಮಾಂಡರ್ ಸ್ಥಾನಕ್ಕೆ ಏರಿದರು. ಬೆಲ್ಜಿಯಂನಲ್ಲಿ, ಅವರನ್ನು ಆರ್ಡರ್ ಆಫ್ ಲಿಯೋಪೋಲ್ಡ್ II ಅಧಿಕಾರಿಯನ್ನಾಗಿ ಗೌರವಿಸಲಾಯಿತು.
1902ರಲ್ಲಿ ಸ್ಕೂಲ್ ಆಫ್ ಟ್ರಾಪಿಕಲ್ ಮೆಡಿಸಿನ್‌ಗೆ ಸಂಸ್ಥಾಪಕರೂ ಅಧ್ಯಕ್ಷರೂ ಆದ ಸರ್ ಆಲ್ಫ್ರೆಡ್ ಜೋನ್ಸ್ ಅವರು ಸಲ್ಲಿಸಿದ ಅಮೂಲ್ಯವಾದ ಸೇವೆಗಳ ಸ್ಮರಣಾರ್ಥವಾಗಿ ಯೂನಿವರ್ಸಿಟಿ ಕಾಲೇಜಿನಲ್ಲಿ ಟ್ರಾಪಿಕಲ್ ಮೆಡಿಸಿನ್ ಚೇರ್ ಅನ್ನು ಸ್ಥಾಪಿಸಲಾಯಿತು. ರಾಸ್ ಅವರನ್ನು 1902ರಲ್ಲಿ ಪ್ರಾಧ್ಯಾಪಕ ಹುದ್ದೆಗೆ ನೇಮಿಸಲಾಯಿತು. ರಾಸ್ 1912ರವರೆಗೆ ಆ ಜವಾಬ್ದಾರಿ ನಿರ್ವಹಿಸಿದರು. ಮುಂದೆ ಲಂಡನ್‌ನ ಕಿಂಗ್ಸ್ ಕಾಲೇಜ್ ಆಸ್ಪತ್ರೆಯಲ್ಲಿ ಉಷ್ಣವಲಯದ ಕಾಯಿಲೆಗಳಿಗೆ ವೈದ್ಯರಾಗಿ ನೇಮಕಗೊಂಡರು. ಜೊತೆಗೆ ಲಿವರ್‌ಪೂಲ್‌ನಲ್ಲಿನ ಉಷ್ಣವಲಯದ ನೈರ್ಮಲ್ಯದ ಅಧ್ಯಕ್ಷತೆಯನ್ನೂ ನಿರ್ವಹಿಸಿದರು. ಪ್ರಥಮ ಮಹಾ ಯುದ್ಧದ ಸಮಯದಲ್ಲಿ ಮಲೇರಿಯಾಲಜಿಯಲ್ಲಿ ಸಲಹೆಗಾರರಾಗಿ ನೇಮಕಗೊಂಡರು. ಮಿನಿಸ್ಟ್ರಿ ಆಫ್ ಪೆನ್ಷನ್ಸ್ ಪರಿಧಿಯಲ್ಲಿ ಮಲೇರಿಯಾ ಕುರಿತಾದ ಸಲಹೆಗಾರರನ್ನಾಗಿ ನೇಮಿಸಲಾಯಿತು. 1926ರಲ್ಲಿ ಅವರು ತಮ್ಮ ಅಭಿಮಾನಿಗಳು ಸ್ಥಾಪಿಸಿದ ರಾಸ್ ಇನ್ಸ್ಟಿಟ್ಯೂಟ್ ಮತ್ತು ಹಾಸ್ಪಿಟಲ್ ಆಫ್ ಟ್ರಾಪಿಕಲ್ ಡಿಸೀಸ್ ಅಂಡ್ ಹೈಜೀನ್‌ನ ಮುಖ್ಯ ನಿರ್ದೇಶಕ ಹುದ್ದೆಯನ್ನು ವಹಿಸಿಕೊಂಡು ತಮ್ಮ ಜೀವಿತದ ಅಂತ್ಯದವರೆಗೂ ನಿರ್ವಹಿಸಿದರು. ಅವರು ಸೊಸೈಟಿ ಆಫ್ ಟ್ರಾಪಿಕಲ್ ಮೆಡಿಸಿನ್‌ನ ಅಧ್ಯಕ್ಷರೂ ಆಗಿದ್ದರು.
ರಾಸ್ ಅವರು ತಮ್ಮ ಸಕ್ರಿಯ ವೃತ್ತಿಜೀವನದ ಅವಧಿಯಲ್ಲಿ, ಪ್ರಪಂಚದ ವಿವಿಧ ದೇಶಗಳಲ್ಲಿ ಮಲೇರಿಯಾವನ್ನು ತಡೆಗಟ್ಟುವ ಕ್ರಮಗಳ ಬಗ್ಗೆ ಆಸಕ್ತಿ ತಳೆದರು. ಅವರು ಪಶ್ಚಿಮ ಆಫ್ರಿಕಾ, ಸೂಯೆಜ್ ಕಾಲುವೆ ವಲಯ, ಗ್ರೀಸ್, ಮಾರಿಷಸ್, ಸೈಪ್ರಸ್ ಮತ್ತು 1914-1918ರ ಯುದ್ಧದಿಂದ ಬಾಧಿತ ಪ್ರದೇಶಗಳೂ ಸೇರಿದಂತೆ ಹಲವು ಸ್ಥಳಗಳಲ್ಲಿ ಸಮೀಕ್ಷೆಗಳನ್ನು ನಡೆಸಿ ಅನೇಕ ಯೋಜನೆಗಳನ್ನು ಪ್ರಾರಂಭಿಸಿದರು. ಅವರು ಭಾರತ ಮತ್ತು ಸಿಲೋನ್‌ನ ಪ್ರದೇಶಗಳಲ್ಲಿ ಮಲೇರಿಯಾವನ್ನು ತಡೆಗಟ್ಟಲು ಉತ್ತಮ ಸಂಸ್ಥೆಗಳನ್ನು ಪ್ರಾರಂಭಿಸಿದರು. ಮಲೇರಿಯಾದ ಸಾಂಕ್ರಾಮಿಕ ರೋಗಶಾಸ್ತ್ರಕ್ಕೆ ಮತ್ತು ಅದರ ಸಮೀಕ್ಷೆ ಮತ್ತು ಮೌಲ್ಯಮಾಪನದ ವಿಧಾನಗಳಿಗೆ ಅನೇಕ ಕೊಡುಗೆಗಳನ್ನು ನೀಡಿದರು. 1908ರ ವೇಳೆಗೆ ಸಾಂಕ್ರಾಮಿಕ ರೋಗಶಾಸ್ತ್ರದ ಅಧ್ಯಯನಕ್ಕಾಗಿ ಗಣಿತದ ಮಾದರಿಗಳ ಅಭಿವೃದ್ಧಿ ಪಡಿಸಿದರು. ಈ ನಿಟ್ಟಿನಲ್ಲಿ 1911ರಲ್ಲಿ ಮತ್ತು 1915 ಮತ್ತು 1916ರಲ್ಲಿ ರಾಯಲ್ ಸೊಸೈಟಿ ವೈಜ್ಞಾನಿಕ ಪತ್ರಿಕೆಗಳಲ್ಲಿ ಪ್ರಕಟಗೊಂಡ ವಿವರಗಳು ಅದ್ಭುತವೆನಿಸಿವೆ. ಈ ಪತ್ರಿಕೆಗಳು ಆಳವಾದ ಗಣಿತದ ಆಸಕ್ತಿಯನ್ನು ಪ್ರತಿನಿಧಿಸುತ್ತವೆ. ಅವು ಸಾಂಕ್ರಾಮಿಕ ರೋಗಶಾಸ್ತ್ರಕ್ಕೆ ಮಾತ್ರಾ ಸೀಮಿತವಾಗಿಲ್ಲದೆ, ಶುದ್ಧ ಮತ್ತು ಅನ್ವಯಿಕ ಗಣಿತಶಾಸ್ತ್ರಕ್ಕೆ ಅಮೂಲ್ಯ ಕೊಡುಗೆಗಳನ್ನು ನೀಡುವಂತಿವೆ. "ಪ್ಯಾಥೋಮೆಟ್ರಿ"ಗೆ ಸಂಬಂಧಿತವಾದ ಅವರ ನಿರೂಪಣೆಗಳು ಮುಂದೆ 40 ವರ್ಷಗಳ ನಂತರ ರೂಪುಗೊಂಡ ಕೀಟಗಳಿಂದ ಹರಡುವ ರೋಗಗಳ ಸಾಂಕ್ರಾಮಿಕ ರೋಗಶಾಸ್ತ್ರದ ಹೆಚ್ಚಿನ ತಿಳುವಳಿಕೆಗಳಿಗೆ ಆಧಾರವಾಯಿತು.
ಈ ಕೃತಿಗಳ ಮೂಲಕ ರಾಸ್ ಸೊಳ್ಳೆಯಿಂದ ಮಲೇರಿಯಾ ಹರಡುವಿಕೆಯ ಆವಿಷ್ಕಾರದ ರೂಪದಲ್ಲಿ ತನ್ನ ಮಹತ್ತರವಾದ ಕೊಡುಗೆಯನ್ನು ನೀಡಿದರು.
ರೊನಾಲ್ಡ್ ರಾಸ್ ಕವಿ, ನಾಟಕಕಾರ, ಬರಹಗಾರ ಮತ್ತು ವರ್ಣಚಿತ್ರಕಾರರಾಗಿ ಸಹಾ ಅನೇಕ ಇತರ ಅನ್ವೇಷಣೆಗಳಿಗೆ ತಮ್ಮ ಸಮಯ ಮತ್ತು ಮಾನಸಿಕ ಶಕ್ತಿಯನ್ನು ಕೊಟ್ಟಿದ್ದರು ಎಂಬುದು ವಿಶೇಷ. ಅವರ ಕಾವ್ಯಾತ್ಮಕ ಕೃತಿಗಳು ಅವರಿಗೆ ವ್ಯಾಪಕ ಮೆಚ್ಚುಗೆಯನ್ನು ಗಳಿಸಿಕೊಟ್ಟವು.ಇದು ಅವರ ವೈದ್ಯಕೀಯ ಮತ್ತು ಗಣಿತದ ನಿಲುವಿನಿಂದ ಸ್ವತಂತ್ರವಾಗಿತ್ತು.
ರೊನಾಲ್ಡ್ ರಾಸ್ ಅವರಿಗೆ ನೊಬೆಲ್ ಪ್ರಶಸ್ತಿಯೇ ಅಲ್ಲದೆ ಅನೇಕ ಗೌರವಗಳು ಸಂದವು. ವಿಶ್ವದೆಲ್ಲೆಡೆಯ ಅನೇಕ ಸಮಾಜಗಳ ಗೌರವ ಸದಸ್ಯತ್ವ ಅವರಿಗೆ ಸಂದವು. ಅವರು 1910ರಲ್ಲಿ ಕ್ಯಾರೋಲಿನ್ ಇನ್ಸ್ಟಿಟ್ಯೂಟ್ನ ಶತಮಾನೋತ್ಸವದ ಆಚರಣೆಯಲ್ಲಿ ಸ್ಟಾಕ್ಹೋಮ್ನಲ್ಲಿ ಗೌರವ ಎಂ.ಡಿ ಪದವಿ ಪಡೆದರು. ಅವರು ಯುರೋಪ್, ಏಷ್ಯಾ ಮತ್ತು ಅಮೆರಿಕದಲ್ಲಿ ಅಪಾರ ಸ್ನೇಹಿತರ ವಲಯವನ್ನು ಹೊಂದಿದ್ದರು.
ರಾಸ್ 1889 ರಲ್ಲಿ ರೋಸಾ ಬೆಸ್ಸಿ ಬ್ಲೋಕ್ಸಾಮ್ ಅವರನ್ನು ವಿವಾಹವಾದರು. ಅವರಿಗೆ ರೊನಾಲ್ಡ್ ಮತ್ತು ಚಾರ್ಲ್ಸ್ ಎಂಬ ಇಬ್ಬರು ಗಂಡುಮಕ್ಕಳು ಮತ್ತು ಡೊರೊಥಿ ಮತ್ತು ಸಿಲ್ವಿಯಾ ಎಂಬ ಇಬ್ಬರು ಪುತ್ರಿಯರಿದ್ದರು. ಅವರ ಪತ್ನಿ 1931ರಲ್ಲಿ ನಿಧನರಾದರು. ರಾಸ್ ಅವರು 1932ರ ಸೆಪ್ಟೆಂಬರ್ 16ರಂದು ಲಂಡನ್‌ನ ರಾಸ್ ಇನ್‌ಸ್ಟಿಟ್ಯೂಟ್‌ನಲ್ಲಿ ನಿಧನರಾದರು.
On the birth anniversary of Nobel Laureate Sir Ronald Ross known for grea invention on transmission of malaria
ಕಾಮೆಂಟ್‌ಗಳು