ನಾನಾ ಸಾಹೇಬ್
ನಾನಾ ಸಾಹೇಬ್ 1857ರ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಹೋರಾಟಗಾರರಲ್ಲೊಬ್ಬ. ಝಾನ್ಸಿ ಲಕ್ಷ್ಮೀಬಾಯಿ, ತಾಂತ್ಯಾ ಟೋಪಿ ಮುಂತಾದವರೊಂದಿಗೆ ಅದರಲ್ಲಿ ಪ್ರಮುಖ ಪಾತ್ರ ವಹಿಸಿದ್ದಾತ. ದೂಂಢೂ ಪಂತ್ ಎಂಬುದು ಇವನ ನಿಜನಾಮ.
ನಾನಾ ಸಾಹೇಬ್ 1824ರಲ್ಲಿ ಜನಿಸಿದ. ಇವನು ಗಂಗಾಬಾಯಿ ಮತ್ತು ನಾರಾಯಣ ಭಟ್ ಎಂಬ ದಂಪತಿಗಳ ಮಗ. 1827ರ ಜೂನ್ 7ರಂದು ಮರಾಠರ ಕೊನೆಯ ಪೇಶ್ವೆ 2ನೆಯ ಬಾಜಿರಾವ್ ಇವನನ್ನು ದತ್ತು ತೆಗೆದುಕೊಂಡ. ನಾನಾ ಸಾಹೇಬ್ ಉತ್ತಮ ವಿದ್ಯಾಭ್ಯಾಸ ಪಡೆದ. ಸಂಸ್ಕೃತವನ್ನು ಚೆನ್ನಾಗಿ ವ್ಯಾಸಂಗ ಮಾಡಿದ. ಪಾಶ್ಚಾತ್ಯ ಶಿಕ್ಷಣ ಪಡೆದಿರಲಿಲ್ಲ. ಅಂದಿನ ಎಲ್ಲ ಆಂಗ್ಲೊ-ಇಂಡಿಯನ್ ಪ್ರಕಟಣೆಗಳನ್ನೂ ಇವನು ಒಬ್ಬ ಭಾಷಾಂತರಕಾರನ ಮೂಲಕ ತಿಳಿಯುತ್ತಿದ್ದ. ಸಾಂಗ್ಲಿಯ ನಾಯಕರ ಮನೆತನದ ಮಗಳೊಬ್ಬಳೊಂದಿಗೆ ನಾನಾ ಸಾಹೇಬನ ವಿವಾಹವಾಗಿತ್ತು.
ದೇಶದಲ್ಲಿ ಪ್ರಬಲರಾಗುತ್ತಿದ್ದ ಇಂಗ್ಲಿಷರ ವಿರುದ್ಧ ದೇಶೀಯ ರಾಜರು ಸಂಘಟಿತರಾಗಿ ಹೋರಾಡಬೇಕೆಂದು ಹವಣಿಸಿ 1818ರಲ್ಲಿ ಸೋತ ಬಾಜೀರಾಯನಿಗೆ ಇಂಗ್ಲಿಷರು 8 ಲಕ್ಷ ರೂಪಾಯಿಗಳ ವಾರ್ಷಿಕ ವಿರಾಮವೇತನ ನೀಡುತ್ತಿದ್ದರು. 1853ರಲ್ಲಿ ಬಾಜೀರಾಯ ಕಾಲವಾದ. ಆದರೆ ಇಂಗ್ಲಿಷರು ಅವನ ದತ್ತುಪುತ್ರನಾದ ದೂಂಢೂ ಪಂತನಿಗೆ ಇದನ್ನು ಮುಂದುವರಿಸಲಿಲ್ಲ. ಇದೊಂದು ತುಂಬ ಕಟುವಾದ ತೀರ್ಮಾನವೆಂದು ಬ್ರಿಟಿಷ್ ಇತಿಹಾಸಕಾರರೇ ಟೀಕಿಸಿದ್ದಾರೆ.
1857ರಲ್ಲಿ ಸಂಭವಿಸಿದ ಮಹಾ ಬಂಡಾಯದಲ್ಲಿ ನಾನಾ ಸಾಹೇಬನೂ ಪಾತ್ರವಹಿಸಿದ. ಜೂನ್ ತಿಂಗಳಲ್ಲಿ ಕಾನ್‍ಪುರದಲ್ಲಿ ನಡೆದ ಬಂಡಾಯಕ್ಕೆ ಇವನು ನಾಯಕನಾದ. ತಾನೇ ಪೇಶ್ವೆಯೆಂದು ಘೋಷಿಸಿಕೊಂಡ. ಕಾನ್‍ಪುರದಲ್ಲಿದ್ದ ಸುಮಾರು 400 ಬ್ರಿಟಿಷ್ ಸೈನಿಕರನ್ನೂ ಅವರ ಹೆಂಗಸರು ಮಕ್ಕಳನ್ನೂ ಅವನ ಸೈನ್ಯ ಸುತ್ತುವರಿಯಿತು. ಜೂನ್ 8ರಿಂದ 26ರವರೆಗೂ ಅವರು ಈ ಮುತ್ತಿಗೆಗೆ ಒಳಗಾಗಿದ್ದು 27ರಂದು ಶರಣಾಗತರಾದರು. ಅವರನ್ನು ಅಲಹಾಬಾದಿಗೆ ಸುರಕ್ಷಿತವಾಗಿ ತಲುಪಿಸಲಾಗುವುದೆಂದು ವಾಗ್ದಾನ ಮಾಡಲಾಗಿತ್ತು. ಸೈನಿಕರು ದೋಣಿಗಳಲ್ಲಿ ನದಿಯನ್ನು ದಾಟತೊಡಗಿದಾಗ ಅವರ ಮೇಲೆ ಗುಂಡಿನ ಮಳೆ ಸುರಿಯಿತು. ನಾಲ್ವರನ್ನುಳಿದು ಎಲ್ಲರೂ ಸಾವಿಗೆ ಶರಣಾದರು. ಇದಕ್ಕೆ ಪ್ರತೀಕಾರವಾಗಿ ಬ್ರಿಟಿಷ್ ಸೈನ್ಯ ರೋಷಾವೇಶದಿಂದ ಹೋರಾಡಿ ಕಾನ್‍ಪುರವನ್ನು ಆಕ್ರಮಿಸಿತು.
ತಾಂತ್ಯಾ ಟೋಪಿ ನಾನಾ ಸಾಹೇಬನನ್ನು ಕೂಡಿಕೊಂಡ. ಬ್ರಿಟಿಷ್ ಸೈನ್ಯ ಹಿನ್ನಡೆಯಿತು. ಆದರೆ ಡಿಸೆಂಬರ್ 6ರಂದು ಕಾಲಿನ್ ಕ್ಯಾಂಪ್‍ಬೆಲ್ ಇವರನ್ನು ಓಡಿಸಿ ಕಾನ್‍ಪುರವನ್ನು ಗೆದ್ದ. ರಾಣಿ ಲಕ್ಷ್ಮೀಬಾಯಿ, ತಾಂತ್ಯಾ, ನಾನಾ ಸಾಹೇಬ ಇವರು ಗ್ವಾಲಿಯರನ್ನು ಹಿಡಿದರು. ಅಲ್ಲಿ ನಾನಾ ಸಾಹೇಬನನ್ನು ಪೇಶ್ವೆಯೆಂದು ಸಾರಲಾಯಿತು. ಆದರೆ ಬ್ರಿಟಿಷ್ ಸೈನ್ಯ ಸುಮ್ಮನಿರಲಿಲ್ಲ. ಲಕ್ಷ್ಮೀಬಾಯಿ 1858ರ ಜೂನ್ 18ರಂದು ಯುದ್ಧದಲ್ಲಿ ಮಡಿದಳು. ತಾಂತ್ಯಾ ತಪ್ಪಿಸಿಕೊಂಡ; 1859ರ ಏಪ್ರಿಲ್‍ನಲ್ಲಿ ಸಿಕ್ಕಿಬಿದ್ದ. ಅವನನ್ನು ಗಲ್ಲಿಗೆ ಹಾಕಲಾಯಿತು. ನಾನಾ ಸಾಹೇಬ ನೇಪಾಲದ ಅರಣ್ಯಗಳಿಗೆ ಓಡಿಹೋಗಬೇಕಾಯಿತು. ಅಲ್ಲಿ ಇವನು 1860ರ ಸುಮಾರಿಗೆ ತೀರಿಕೊಂಡಿರಬೇಕೆಂದು ಊಹಿಸಲಾಗಿದೆ. ಆದರೆ ಆಮೇಲೂ ಇವನು ಅನೇಕ ವರ್ಷಗಳ ಕಾಲ ಸನ್ಯಾಸಿಯಾಗಿ ಬದುಕಿದ್ದನೆಂದೂ ಆಗಾಗ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದ್ದನೆಂದೂ ಹೇಳಲಾಗಿದೆ.
ನಾನಾ ಸಾಹೇಬನಿಗೆ ತನ್ನ ಹುಟ್ಟು ಮತ್ತು ಕುಲದ ಬಗ್ಗೆ ಅಪಾರ ಹೆಮ್ಮೆಯಿತ್ತು. ಇವನು ಉದಾರಿಯಾಗಿದ್ದ. ಇಂಗ್ಲಿಷರೊಂದಿಗೆ ಒಳ್ಳೆಯ ಸಂಬಂಧ ಇದ್ದ ಕಾಲದಲ್ಲಿ ಅವರಿಗೆ ಇವನು ನೀಡುತ್ತಿದ್ದ ಸತ್ಕಾರಗಳನ್ನು ಅವರು ಮುಕ್ತಕಂಠದಿಂದ ಹೊಗಳುತ್ತಿದ್ದರಂತೆ. 1857ರ ಬಂಡಾಯದಲ್ಲಿ ನಾನಾ ಸಾಹೇಬನ ಪಾತ್ರದ ಬಗ್ಗೆ ಕೆಲವು ಲೇಖಕರು ಮತ್ತು ಇತಿಹಾಸಕಾರರು ಅವನನ್ನು ವಿಶೇಷವಾಗಿ ಪ್ರಶಂಸಿದ್ದಾರೆ. ಬ್ರಿಟಿಷರ ವಿರುದ್ಧ ಬಂಡಾಯ ಹೂಡುವುದು ಅವನಿಗೆ ಮೊದಮೊದಲು ಇಷ್ಟವಿರಲಿಲ್ಲವೆಂದೂ ಕಾನ್ಪುರಕ್ಕೇ ಬಂಡಾಯ ಹಬ್ಬುವವರೆಗೂ ಅವನು ಬ್ರಿಟಿಷರೊಂದಿಗೆ ಒಳ್ಳೆಯ ಸಂಬಂಧವನ್ನಿರಿಸಿಕೊಂಡಿದ್ದನೆಂದೂ ಹೇಳಲಾಗಿದೆ. ಕೊನೆಯ ಪೇಶ್ವೆ 2ನೆಯ ಬಾಜೀರಾಯನ ನಿಧನಾನಂತರ ನಾನಾ ಸಾಹೇಬನಿಗೆ ವಾರ್ಷಿಕ ವೇತನ ಮತ್ತು ಸನ್ನದನ್ನು ರದ್ದುಪಡಿಸಿದ್ದಾಗ್ಯೂ ಇವನು ಬಾಜೀರಾಯನ ಆಸ್ತಿಗೆ ಉತ್ತರಾಧಿಕಾರಿಯಾಗಿದ್ದ. ವಾರ್ಷಿಕ ವೇತನವನ್ನು ಮುಂದುವರಿಸಬೇಕೆಂದು ಕಂಪನಿ ಸರ್ಕಾರಕ್ಕೆ ಇವನು ಮನವಿ ಸಲ್ಲಿಸಿದ್ದ. ಅದರಿಂದ ಪ್ರಯೋಜನವಾಗಿರಲಿಲ್ಲ. ಆದರೂ ಇವನು ಬಂಡಾಯ ಏಳುವ ಸಂಚು ಮಾಡಿರಲಿಲ್ಲವೆನ್ನಲಾಗಿದೆ. ಬಂಡಾಯದ ಸಮಯದಲ್ಲಿ ಬ್ರಿಟಿಷರ ಪರವಾಗಿ ಹೋರಾಡಲು ಇವನು ಕಳುಹಿಸಿದ್ದ ಸೈನಿಕರು ಬ್ರಿಟಿಷರ ವಿರುದ್ಧ ದಂಗೆ ಎದ್ದಾಗ ಉಂಟಾದ ಪರಿಸ್ಥಿತಿಯ ಒತ್ತಡದಿಂದಾಗಿ ಮತ್ತು ಬಂಡಾಯಗಾರರ ಬೆದರಿಕೆಯಿಂದಾಗಿ ಇವನು ಬಂಡಾಯದಲ್ಲಿ ನಾಯಕತ್ವ ವಹಿಸಬೇಕಾಯಿತೆನ್ನಲಾಗಿದೆ. ಕಾನ್ಪುರದಲ್ಲಿ ಬ್ರಿಟಿಷರ ಒಂದು ಚಿಕ್ಕ ಸೇನಾಗಾರವನ್ನು ವಶಪಡಿಸಿಕೊಂಡ ನಾನಾ ಸಾಹೇಬ್ ತನ್ನನ್ನು ಪೇಶ್ವೆ ಎಂದು ಘೋಷಿಸಿಕೊಂಡು, ಬ್ರಿಟಿಷರ ಅಧಿಕಾರವನ್ನು ಭಾರತದಿಂದ ಸಂಪೂರ್ಣವಾಗಿ ಅಳಿಸಿಹಾಕುವಂತೆ ಕರೆ ಇತ್ತ. ಆದರೆ ಬ್ರಿಟಿಷರ ವಿರುದ್ಧದ ಈ ಹೋರಾಟದಲ್ಲಿ ನಾನಾ ಸಾಹೇಬ್ ಸಮರ್ಥ ನಾಯಕತ್ವವನ್ನು ಪ್ರದರ್ಶಿಸಲಿಲ್ಲ. 1857ರ ಜುಲೈ 16ರಂದು ನಡೆದ ಕೊನೆಯ ಕಾದಾಟದಲ್ಲಿ ನಾನಾ ಸಾಹೇಬನ ಸೇನಾಬಲವನ್ನು ಬ್ರಿಟಿಷರು ಸಂಪೂರ್ಣವಾಗಿ ನಿರ್ನಾಮ ಮಾಡಿದರು.
ಬಂಡಾಯದಲ್ಲಿ ನಾನಾ ಸಾಹೇಬನ ಪಾತ್ರ ಪೂರ್ವನಿಯೋಜಿತವಾದ್ದಲ್ಲ ಎಂಬುದೂ ಸರಿಯಾಗಿ ವ್ಯವಸ್ಥೆಗೊಳಿಸಿದ್ದಲ್ಲವೆಂಬುದೂ ಸಿಪಾಯಿ ದಂಗೆ ಆರಂಭವಾದ ಅನಂತರ ನಾನಾ ಸಾಹೇಬ್ ಬ್ರಿಟಿಷ್ ಸರ್ಕಾರಕ್ಕೆ ಬರೆದಿದ್ದ ಪತ್ರಗಳಿಂದಲೂ, ತಾಂತ್ಯಾಟೋಪಿ ನೀಡಿದ ಕೊನೆಯ ಹೇಳಿಕೆಯಿಂದಲೂ ತಿಳಿದುಬರುತ್ತದೆ.
ಮಾಹಿತಿ ಆಧಾರ: ಮೈಸೂರು ವಿಶ್ವವಿದ್ಯಾಲಯದ ವಿಶ್ವಕೋಶ
On the birth anniversary Nana Saheb who led rebellion in great revolt of 1857
ಕಾಮೆಂಟ್‌ಗಳು