ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎಲ್ಲಿರುವೆ ಕಾಣಿಸದೆ



 ಎಲ್ಲಿರುವೆ ಕಾಣಿಸದೆ ಕರೆವ ಕೊರಳೇ
ಎಲ್ಲಿರುವೆ ಹೇಳು ನೀ ನಿಜವೆ ನೆರಳೇ?

ಮಂಜು ನೇಯುವ ಸಂಜೆಗನಸಿನಂತೆ
ಸಂಜೆ ಬಿಸಿಲಿನ ಮಳೆಯ ಮನಸಿನಂತೆ
ನಿಂತ ಎದೆಗೊಳದಲ್ಲಿ ಚಿಂತೆ ಬರೆಯಲು ಯಾರೊ
ಎಸೆದ ಕೋಗಿಲೆಯ ದನಿಹರಳಿನಂತೆ-
ಎಲ್ಲಿರುವೆ ಕಾಣಿಸದೆ ಕರೆವ ಕೊರಳೇ?

ಬೆಳಗ ತೆರೆಯುವ ಇರುಳ ಅಂಗಳದೊಳೋ
ತಂಪು ಹಾಸುವ ಬಿಳಿಯ ತಿಂಗಳಿನೊಳೋ
ಲೋಕಾಂತರದ ಮೂಲ ಸ್ಮರಣೆ ಮರೆಸಲು ಮಾಯೆ
ಹಾಡಿ ಕುಣಿಸುವ ಮೋಹರಿಂಗಣದೊಳೋ-
ಎಲ್ಲಿರುವೆ ಕಾಣಿಸದೆ ಕರೆವ ಕೊರಳೇ?

ನಿನಗೆಂದೆ ನೆಲ ಬಾನು ಕೂಗಿ ಕರೆದೆ
ಹೊಲ ಕಾನು ಬನವೆಲ್ಲ ತಿರುಗಿ ನವೆದೆ
ಓಡಿಬಂದೆನು ಇಗೋ ಪರಿವೆಯಿರದೆ
ಓಡಿ ಬರುವಂತೆ ನದಿ ಕಡಲ ಕರೆಗೆ-
ಎಲ್ಲಿರುವೆ ಕಾಣಿಸದೆ ಕರೆವ ಕೊರಳೇ?

ಸಾಹಿತ್ಯ: ಎನ್. ಎಸ್. ಲಕ್ಷ್ಮೀನಾರಾಯಣ ಭಟ್
ಸಂಗೀತ: ಎಚ್. ಕೆ. ನಾರಾಯಣ
ಗಾಯನ: ರತ್ನಮಾಲಾ ಪ್ರಕಾಶ್ Ratnamala Prakash

ಇಲ್ಲಿ ಕೇಳಿ:https://youtu.be/o3nDt66dJpI

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ