ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬಹುಗುಣ


 ಸುಂದರಲಾಲ್ ಬಹುಗುಣ


ಸುಂದರಲಾಲ್ ಬಹುಗುಣ ಮಹತ್ವದ ಪರಿಸರ ಹೋರಾಟಗಾರರಾಗಿ ಜನರಲ್ಲಿ ಪರಿಸರದ ಉಳಿಕೆಯ ಮಹತ್ವವನ್ನು ಆಳವಾಗಿ ಬೇರೂರಿಸಿದ ಪ್ರಮುಖರು.  ಗರ್ವಾಲಿ ಪರಿಸರವಾದಿಯಾಗಿ ಹಾಗೂ  ಚಿಪ್ಕೊ ಚಳುವಳಿಯ ನಾಯಕರಾಗಿ ಅವರು ಮಾಡಿದ ಕಾಯಕ ವಿಶ್ವದೆಲ್ಲೆಡೆಯ ಜನರನ್ನು ಪ್ರೇರಿಸುತ್ತಾ ಬಂದಿದೆ.  ಇಂದು ಈ ಮಹಾನ್ ಪರಿಸರ ಸಂರಕ್ಷಕರ ಸಂಸ್ಮರಣೆ ದಿನ. 

ಸುಂದರಲಾಲ್ ಬಹುಗುಣ ಉತ್ತರಖಂಡದ ತೆಹ್ರಿ ಬಳಿಯ ಮರೊಡ ಎಂಬ ಹಳ್ಳಿಯಲ್ಲಿ 1927ರ ಜನವರಿ 9ರಂದು ಜನಿಸಿದರು.  ಅವರ ಪೂರ್ವಜರು ಬಂಡೋಪಾಧ್ಯಾಯ ಎಂಬ ವಂಶಾವಳಿಗೆ ಸೇರಿದವರಾಗಿದ್ದು ಸುಮಾರು  800 ವರ್ಷದ ಹಿಂದೆ ಬಂಗಾಳದಿಂದ ತೆಹ್ರಿ ಗ್ರಾಮಕ್ಕೆ ವಲಸೆ ಬಂದರು ಎಂದು ಬಹುಗುಣ ಹೇಳುತ್ತಿದ್ದರು. ಪ್ರಾರಂಭದಲ್ಲಿ ಅಸ್ಪೃಶ್ಯತೆಯ ವಿರುದ್ಧ ಹೋರಾಡಿದ ಬಹುಗುಣ ಅವರು 1965ರಿಂದ 1970ರ ಅವಧಿಯಲ್ಲಿ ಮದ್ಯಪಾನದ ವಿರುದ್ಧ ಗಿರಿವಾಸಿ ಮಹಿಳೆಯರನ್ನು ಸಂಘಟಿಸಿದರು.

ಬಹುಗುಣ ಹದಿಮೂರನೇ ವಯಸ್ಸಿನಲ್ಲಿ ಅಹಿಂಸಾ ವಾದದಲ್ಲಿ ಕ್ರಿಯಾಶೀಲರಾಗಿದ್ದ ಶ್ರೀದೇವ್ ಸುಮನ್ ಅವರ ಮಾರ್ಗದರ್ಶನದಲ್ಲಿ ಸಾಮಾಜಿಕ ಚಟುವಟಿಕೆಗಳನ್ನು ಆರಂಭಿಸಿದರು. ಬಹುಗುಣರವರು 1947ರ ಮುಂಚಿತವಾಗಿ ವಸಾಹತು ಆಡಳಿತದ ವಿರುದ್ಧ ಜನರನ್ನು ಸಜ್ಜುಗೊಳಿಸಿದ್ದರು.  ತಮ್ಮ ಜೀವನದಲ್ಲಿ ಗಾಂಧಿವಾದಿ ತತ್ವಗಳನ್ನು ಅಳವಡಿಸಿಕೊಂಡ ಬಹುಗುಣರು ವಿಮಲಾ ಅವರನ್ನು ಮದುವೆ ಆದ ಸಮಯದಲ್ಲಿ ತಮಗೆ ಗುಡ್ಡಗಾಡು ಪ್ರದೇಶಗಳ ಜನರ ನಡುವೆ ಸರಳ ಜೀವನ ನಡೆಸುವ ಇಚ್ಛೆಗೆ ಒಪ್ಪಿಗೆ ಇದ್ದಲ್ಲಿ ಮಾತ್ರಾ ತಮ್ಮನ್ನು ಮದುವೆ ಆಗಬಹುದು ಎಂದರಂತೆ. ಚಿಪ್ಕೊ ಚಳುವಳಿಗೆ ಸುಂದರಲಾಲ್ ಬಹುಗುಣರಿಗೆ ಪ್ರೇರಣೆ ನೀಡಿದವರು ಅವರ ಪತ್ನಿ ವಿಮಲ ಅವರೇ.

ಗಾಂಧಿಯವರ ಪ್ರೇರಣೆಯಿಂದಾಗಿ, ಸುಮಾರು 4700 ಕಿಲೋಮೀಟರ್ ಅಷ್ಟು ಹಿಮಾಲಯದ ಕಾಡು ಹಾಗೂ ಬೆಟ್ಟಗಳ ನಡುವೆ ಪಾದಯಾತ್ರೆಯನ್ನು ಕೈಗೊಂಡ ಸುಂದರಲಾಲ್ ಬಹುಗುಣರು ದೊಡ್ಡ ಹೆಸರಿನ ಅಭಿವೃದ್ಧಿ ಯೋಜನೆಗಳ ಹೆಸರಿನಲ್ಲಿ ಹಿಮಾಲಯದ ಪರಿಸರಕ್ಕೆ ಆದ ಹಾನಿಯನ್ನು ಗಮನಿಸಿ ನೊಂದರು.

ಸುಂದರಲಾಲ್ ಬಹುಗುಣರು 1974ರ ಮಾರ್ಚ್ 26ರಂದು ಉತ್ತರಪ್ರದೇಶದಲ್ಲಿನ ಕಾಡುಗಳಲ್ಲಿ ಗುತ್ತಿಗೆದಾರರು ಮರಕಡಿಯುವ ವಿರುದ್ಧ 'ಚಿಪ್ಕೊ' ಚಳುವಳಿಯನ್ನು ಆರಂಭಿಸಿದರು.  ಗುತ್ತಿಗೆದಾರರು ಮರ ಕಡಿಯುವ ಸಮಯದಲ್ಲಿ ಅದನ್ನು ಅಪ್ಪಿಕೊಳ್ಳುವುದು ಇದರ ಸ್ವರೂಪ.  ಹಳ್ಳಿಯಿಂದ ಹಳ್ಳಿಗೆ ಪಯಣಿಸಿ ತಮ್ಮ  ಚಳುವಳಿಗೆ ವ್ಯಾಪಕ ಜನ ಬೆಂಬಲವನ್ನು ಪಡೆದರು. ಚಿಪ್ಕೊ ಚಳುವಳಿಯು, ಕರ್ನಾಟಕದಲ್ಲಿ ಅಪ್ಪಿಕೊ ಚಳುವಳಿಗೆ ಸ್ಫೂರ್ತಿಯನ್ನು ನೀಡಿತು. ಇದೇ ರೀತಿಯಲ್ಲಿ ದೇಶದಲ್ಲಿ ನಡೆದ ಅನೇಕ ಪರಿಸರ ಪರವಾದ ಚಳವಳಿಗಳಿಗೆ  ಬಹುಗುಣರ ಚಿಪ್ಕೊ ಚಳುವಳಿ ಪ್ರೇರಣೆ ನೀಡಿದೆ.

'ಪರಿಸರವೇ ಶಾಶ್ವತ ಆರ್ಥಿಕತೆ' ಎಂಬುದು ಸುಂದರಲಾಲ್ ಬಹುಗುಣರು ಚಿಪ್ಕೊ ಚಳುವಳಿಗೆ ನೀಡಿದ ಘೋಷ ವಾಕ್ಯ.  ಅವರು ತಮ್ಮ ಚಳುವಳಿಯನ್ನು ವ್ಯಾಪಕಗೊಳಿಸಲು 1981ರಿಂದ 1983ರವರೆಗೆ  ಹಳ್ಳಿಯಿಂದ ಹಳ್ಳಿಗೆ ಸುಮಾರು 5000 ಕಿಲೋಮೀಟರ್ ದೂರ ಕ್ರಮಿಸಿ ಚಳುವಳಿಗೆ ಮತ್ತಷ್ಟು ಜನಜಾಗೃತಿಯ ವ್ಯಾಪ್ತಿಯನ್ನು  ತಂದರು.  ಅವರು ಪ್ರಧಾನಿ ಇಂದಿರಾಗಾಂಧಿಯವರ ಜೊತೆ 1980ರಲ್ಲಿ ನಡೆಸಿದ ಮಾತುಕತೆಯ ಫಲವಾಗಿ 1980ರಿಂದ 15 ವರ್ಷಗಳ ಕಾಲ ಹಸಿರು ಮರಗಳನ್ನು ಕಡಿಯದಿರುವ ಆಜ್ಞೆ ಹೊರಬಂತು.  ಸುಂದರಲಾಲ್ ಬಹುಗುಣರು ಪರಿಸರ ಉಳಿಯುವಿಕೆಯಲ್ಲಿ ಮಹತ್ವದ ಕೆಲಸ ಮಾಡಿದ ಗೌರಾ ದೇವಿ ಅವರ ಸಮೀಪವರ್ತಿಯಾಗಿದ್ದರು.  

ಸುಂದರಲಾಲ್ ಬಹುಗುಣರು ತೆಹ್ರಿ ಅಣೆಕಟ್ಟಿನ ನಿರ್ಮಾಣದ ವಿರುದ್ಧವೂ  ನಿರಂತರ ಹೋರಾಟ ನಡೆಸಿದರು. ಅಣೆಕಟ್ಟು 2004ರಲ್ಲಿ ನಿರ್ಮಾಣವಾಗುವುದನ್ನು ತಪ್ಪಿಸಲಾಗದಿದ್ದರೂ ಆ ಅಣೆಕಟ್ಟಿನ ನಿರ್ಮಾಣ ಸಮಯದಲ್ಲಿ ಹಾಗೂ ನಂತರದಲ್ಲಿ  ಪರಿಸರ ಪ್ರಜ್ಞೆಯ ಕುರಿತಾದ ಜವಾಬ್ಧಾರಿಗಳ ಕುರಿತು ಸಮಾಜದ ಸಾಕ್ಷೀಪ್ರಜ್ಞೆಯನ್ನು ಉಳಿಸುವಲ್ಲಿ ಅವರ ಹೋರಾಟ ಸಹಾಯಮಾಡಿದೆ.  ಎಲ್ಲಕ್ಕಿಂತ ಮುಖ್ಯವಾಗಿ ಸುಂದರಲಾಲ್ ಬಹುಗುಣರ ಹಿಮಾಲಯದ ಪ್ರೀತಿ ಇಂದು ಕೂಡಾ ನಮಗಾಗಿ ಒಂದಷ್ಟು ಈ ಪ್ರಕೃತಿಯ ಕೊಡುಗೆ ಉಳಿಯುವಂತೆ ಮಾಡಿದೆ.

ಸುಂದರಲಾಲ್ ಬಹುಗುಣರಿಗೆ ಪದ್ಮಶ್ರೀ (ಅವರು ಅದನ್ನು ಸ್ವೀಕರಿಸಲಿಲ್ಲ),  ರೈಟ್ ಲೈವ್ಲಿಹುಡ್ ಅವಾರ್ಡ್ (ಚಿಪ್ಕೊ ಚಳುವಳಿ).
ಜಮ್ನಾಲಾಲ್‌ ಬಜಾಜ್‌ ಪ್ರಶಸ್ತಿ,  ಐಐಟಿ ರೂರ್ಕಿಯಿಂದ ಡಾಕ್ಟರ್ ಆಫ್ ಸೋಷಿಯಲ್ ಸೈನ್ಸಸ್ ಗೌರವ,  ಪದ್ಮ ವಿಭೂಷಣ ಸೇರಿದಂತೆ ಅನೇಕ ಗೌರವಗಳು ಸಂದಿದ್ದವು.

ಪರಿಸರ ಪ್ರೇಮಿಗೆ ಪ್ರಶಸ್ತಿ ಗೌರವಗಳು ಹೆಚ್ಚಿನ ಸುಖವನ್ನೇನೂ ತಂದಿರಲಾರವು.  ಹೋರಾಟ ಮಾಡಿದರೂ ಅಂತರಂಗದಲ್ಲಿ ಶಾಂತವಾದ ನದಿ ಹರಿಯುವ ವಿಸ್ಮಿತ ಹಿಮಾಲಯದಂತ ಬಹುಗುಣ ವ್ಯಕ್ತಿತ್ವ ಈ ಸುಂದರಲಾಲರದು. ಅವರು 2021ರ ಮೇ 21ರಂದು ಈ ಲೋಕಕ್ಕೆ ವಿದಾಯ ಹೇಳಿದರು.

On Remembrance Day of great environmentalist Sunderlal Bahuguna 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ