ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಭಾರತಕಥಾಮಂಜರಿ149


ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರಿ 
ಗದಾ ಪರ್ವ - ಒಂಭತ್ತನೆಯ ಸಂಧಿ

ಸೂ. ರಾಯಪರಬಲ ಮದನಹರ ರಿಪು
ರಾಯಕುವರರು ಸಹಿತ ಪಾಂಡವ
ರಾಯಕಟಕವ ಕೊಂದನಶ್ವತ್ಥಾಮ ರಜನಿಯಲಿ  
 
ಕೇಳು ಧೃತರಾಷ್ಟ್ರಾವನಿಪ ನಿ
ನ್ನಾಳ ಚಿತ್ತದ ಚಟುಳಪಣದ ಚ
ಡಾಳತನವನು ಸಂಗರದೊಳುದ್ದಾಮ ಸತ್ವದಲಿ
ಪಾಳೆಯವ ಸಾರಿದರು ವಿಟಪ ಲ
ತಾಳಿ ವಿಶ್ರಮ ತಿಮಿರಗಹನವಿ
ಶಾಲವಟಕುಜವಿರಲು ಕಂಡರು ನಿಲಿಸಿದರು ರಥವ      ೧  
 
ನಿಲುವೆವಿಲ್ಲಿ ವಿರೋಧಿಸಂತತಿ
ಯುಲುಹನಾಲಿಸಬಹುದು ಕೋಟಾ
ವಳಯವಿದೆ ಹತ್ತಿರೆಯೆನುತ ಗುರುಸೂನು ರಥವಿಳಿಯೆ
ಇಳಿದರಿಬ್ಬರು ಸೂತರಿಗೆ ಕೈ
ಕೊಳಿಸಿದರು ಕುದುರೆಗಳನಾ ಕಲು
ನೆಲದೊಳೊರಗಿದರವರು ಸಮರಶ್ರಮದ ಭಾರದಲಿ      ೨  
 
ಒಳಗೆ ತೊಳಲಿಕೆಯುಕ್ಕಡಕೆ ಕಳ 
ವಳಿಸಿ ಹಾಯಿದರೊಮ್ಮೆ ಮತ್ತಂ
ತೆಲೆಮಿಡುಕದಾಲಿಸಿ ನಿಧಾನಿಸಿ ಸಾರಿದರು ಮರನ
ಬಳಲಿಕೆಯ ಬೇಸರಿನೊಳಾ ಕೃಪ
ಮಲಗಿದನು ಕೃತವರ್ಮನೊಲೆದಾ
ಗುಳಿಸಿ ತೂಕಡಿಸಿದನು ತೆಗೆದುದು ನಿದ್ರೆ ತನುಮನವ         ೩  
 
ಕುಸಿದು ಜೊಮ್ಮಿನ ಜಾಡ್ಯದಲಿ ಝೊಂ
ಪಿಸಿದರಿಬ್ಬರು ರಾಯಗರುಡಿಯ
ಜಸದ ರಹಿಯಲಿ ಸ್ವಾಮಿಕಾರ‍್ಯದ ಹೊತ್ತಹೊರಿಗೆಯಲಿ
ಉಸುರು ಮಿಡುಕದೆ ನಿದ್ರೆ ನೆನಹಿನ
ಮುಸುಕನುಗಿಯದೆಯಿಷ್ಟಸಿದ್ಧಿಯ
ವಿಷಮ ಸಮಸಂಧಿಗಳ ಸರಿವಿನೊಳಿರ್ದನಾ ದ್ರೌಣಿ        ೪  
 
ಭಾಗ ಬೀತುದು ರಜನಿಯಲಿ ಸರಿ
ಭಾಗವಿದ್ದುದು ಮೇಲೆ ತತ್‌ಕ್ಷಣ
ಗೂಗೆ ಬಂದುದದೊಂದು ವಟಕುಜದಗ್ರಭಾಗದಲಿ
ಕಾಗೆಗಳ ಗೂಡುಗಳ ಹೊಯ್ದು ವಿ
ಭಾಗಿಸಿತು ತುಂಡದಲಿ ಬಿದ್ದವು
ಕಾಗೆ ಸುಭಟನ ಸಮ್ಮುಖದಲಿ ಸಹಸ್ರಸಂಖ್ಯೆಯಲಿ        ೫  
 
ಇದು ಮದೀಯ ಮನೋರಥದ ಸೌ
ಹೃದದವೊಲು ಸಂಕಲ್ಪಕರ‍್ಯಾ
ಭ್ಯುದಯ ಸೂಚಕವಾಯ್ತು ನಿದ್ರಾಮುದ್ರಿತೇಕ್ಷಣರ
ಪದವ ಹಿಡಿದಲ್ಲಾಡಿಸಿದಡೆ ಮೈ
ಬೆದರುತೇನೇನೆನುತ ನಿದ್ರಾ
ಮದ ವಿಘೂರ್ಣನವಡಗಿ ಕುಳ್ಳಿರ್ದರು ಮಹಾರಥರು     ೬  
 
ಏನು ಗುರುಸುತ ಕಾರ‍್ಯದನುಸಂ
ಧಾನವೇನೆನೆ ವಾಯಸಂಗಳ
ನಾ ನಿಶಾಟನನಿರಿವುತದೆ ಗೂಡುಗಳ ಗಬ್ಬರಿಸಿ
ಈ ನಿದರುಶನದಿಂದ ಪಾಂಡವ
ಸೇನೆಯನು ಕಗ್ಗೊಲೆಯೊಳಗೆ ಕೊಲ
ಲೇನು ಹೊಲ್ಲೆಹ ಮಾವ ಎಂದನು ಗುರುಸುತನು ಕೃಪಗೆ    ೭  
 
ಲೇಸಲೈ ಕೃತವರ್ಮ ಬಳಿಕೇ
ನಾಸುರದ ಕಗ್ಗೊಲೆಗೆ ರಾಜಾ
ದೇಶದಲಿ ನಾವ್ ಬಂದೆವೀ ಪಾಂಡವರ ಪಾಳೆಯಕೆ
ಘಾಸಿಯಾಗರು ಪಾಂಡುಸುತರಿಗೆ
ವಾಸುದೇವನ ಕಾಹು ಘನ ಕಾ
ಳಾಸ ತಪ್ಪಿದ ಬಳಿಕ ನಮಗಪಕೀರ್ತಿ ಬಹುದೆಂದ         ೮  
 
ಕ್ರತುಹರನ ಸಮಜೋಳಿ ಗಂಗಾ
ಸುತನ ಜಯಿಸಿದರವರ ತೂಕದ
ವಿತತಬಲರೈ ಭಾವನವರೊಗ್ಗಿದರು ದಿವಿಜರಲಿ
ಅತಿರಥರೊಳಗ್ಗಳೆಯ ರಾಧಾ
ಸುತ ಸುಯೋಧನ ಮಾದ್ರಪತಿಯೀ
ವ್ಯತಿಕರದೊಳೇನಾದರಿದು ಮುರಹರನ ಕೃತಿಯೆಂದ       ೯  
 
ಇರಿಸನಿಲ್ಲಿ ಮುರಾರಿ ಕೌಂತೇ
ಯರನಿದೊಂದು ನಿಧಾನ ಮೇಣಿ
ಲ್ಲಿರಿಸಿದಡೆ ಕೊಲಲೀಯನಡ್ಡೈಸುವನು ಚಕ್ರದಲಿ
ಇರುಳು ಹಗಲಡವಿಯಲಿ ಮನೆಯಲಿ
ಶರಧಿಯಲಿ ಪರ್ವತದಲಗ್ನಿಯ
ಲಿರಲಿ ತನ್ನವರಲ್ಲಿ ಹರಿಗವಧಾನ ಬಲುಹೆಂದ         ೧೦  
 
ಮರಹಿನಲಿ ಮುಡುಹುವುದು ಧರ್ಮದ
ಹೊರಿಗೆಯಲ್ಲದು ನಿದ್ರೆಗೈದರ
ನಿರಿವುದೇನಿದು ಪಂಥವೇ ಪೌರಾಣಮಾರ್ಗದಲಿ
ಅರಿಯದಾರಂಭಿಸಿದೆವಿದರಲಿ
ಪರಿಸಮಾಪ್ತಿಯ ಕಂಡೆವಾದಡೆ
ನೆರೆ ಕೃತಾರ್ಥರು ವಿಘ್ನಶತವಡ್ಡೈಸದಿರವೆಂದ        ೧೧  
 
ತಪ್ಪದಾಚಾರಿಯನ ನುಡಿ ಮೇ
ಲಪ್ಪುದನು ದೈವಾಭಿಯೋಗದೊ
ಳೊಪ್ಪವಿಡುವುದು ರಜನಿಯಲಿ ಕಳ್ಳೇರ ಕದನದಲಿ
ಒಪ್ಪದಿದು ಸೌಭಟ ವಿಧಾನಕೆ
ನೊಪ್ಪಿತಹುದಿದರಿಂದ ರಿಪುಗಳ
ತಪ್ಪಿಸುವನಸುರಾರಿಯೆಂದನು ನಗುತ ಕೃತವರ್ಮ        ೧೨  
 
ಆದಡಿರಿ ನೀವಿಬ್ಬರಿಲ್ಲಿ ವಿ
ವಾದ ನಿಮ್ಮೊಡನೇಕೆ ಜನಪರಿ
ವಾದ ಭಯವೆಮಗಿಲ್ಲ ಸಾರಥಿ ರಥವ ತಾಯೆನುತ
ಕೈದುಗಳ ಸಂವರಿಸಿ ರಥದಲಿ
ಹಾಯ್ದು ಹೊರವಡೆ ಭೋಜಕೃಪರನು
ವಾದರೆಮಗೇನೆನುತ ಬಂದರು ಪಾಳೆಯದ ಹೊರಗೆ        ೧೩  
 
ಮುರಿದು ಕೋಟೆಯನೊಂದು ಕಡೆಯಲಿ
ತೆರಹುಮಾಡಿ ಮಹಾರಥರು ಜನ
ವರಿಯದವೊಲೊಳಹೊಕ್ಕು ಹೆಬ್ಬಾಗಿಲಲಿ ರಥವಿಳಿದು
ತರವಳರ ತೊಳಲಿಕೆಯ ಮೇಲೆ
ಚ್ಚರಿಕೆ ಮಸುಳಿಸೆ ಮಧ್ಯರಾತ್ರಿಯೊ
ಳಿರಿತದಂಘವಣೆಯಲಿ ಪರುಠವಿಸಿದನು ಗುರುಸೂನು      ೧೪  
 
ಎರಡು ಬಾಗಿಲ ಪಾಳೆಯಕೆ ಕೃಪ
ನಿರಲಿ ಮೂಡಲು ಪಶ್ಚಿಮಾಂಗದೊ
ಳಿರಲಿ ಕೃತವರ್ಮಕನು ಬಾಗಿಲೊಳಾಂತ ರಿಪುಜನವ
ಕರಿ ತುರಗ ರಥ ಪತ್ತಿಗಳ ಸಂ
ಹರಿಸುವುದು ನೀವಿಲ್ಲಿ ಮಧ್ಯದೊ
ಳರಸು ಮೊತ್ತಕೆ ಮಿತ್ತು ತಾನಹೆನೆಂದು ಕೈಗೊಂಡ         ೧೫  
 
ಎರಡು ಬಾಗಿಲೊಳಿವರನಿಬ್ಬರ
ನಿರಿಸಿ ಚಾಪವ ಮಿಡಿದು ಬಾಣವ
ತಿರುಹುತೊಬ್ಬನೆ ರಥವ ಬಿಟ್ಟನು ರಾಜಬೀದಿಯಲಿ
ಅರಸ ಕೇಳದುಭುತವನಾ ನಡು
ವಿರುಳು ನೃಪವೀಥಿಯಲಿ ನಿಂದುದು
ಧರೆಗೆ ಗಗನಕೆ ಕೀಲನಿಕ್ಕಿದವೊಲು ಮಹಾಭೂತ        ೧೬  
 
ನಿಟಿಲನಯನದ ಜಡಿವ ಜೂಟದ
ಜಟೆಯ ಫೂತ್ಕೃತಿಯುರಿಯ ನಾಸಾ
ಪುಟದ ವೈಕಕ್ಷಕದ ವಿಷಧರಪತಿಯ ವಾಸುಗಿಯ
ಚಟುಳ ಚಪಳಪ್ರಭೆಯ ಘನಸಂ
ಘಟಿತವೆನೆ ಗರ್ಗರದ ಘೋರ
ಸ್ಫುಟರವದ ರೌದ್ರಾಭಿರತಿಯಲಿ ರಂಜಿಸಿತು ಭೂತ        ೧೭  
 
ಬೆಚ್ಚಿದನೆ ಭಾರಣೆಯ ಭೂತವ
ನೆಚ್ಚು ಬೊಬ್ಬಿರಿದಾರಿದನು ಮಗು
ಳೆಚ್ಚನೈದರೇಳುನೂರೈನೂರು ಸಾವಿರವ
ಎಚ್ಚು ಹಾಯ್ದಂಬುಗಳು ಭೂತದ
ಬಿಚ್ಚುಗಂಗಳ ಕೊಂಡದುರಿಯಲಿ
ಬಚ್ಚಿಸಿದ ಗರಿ ಸೀದು ಸೀಕರಿಯೋಗಿ ನಿಮಿಷದಲಿ        ೧೮  
 
ಉಗಿದು ಮಂತ್ರಾಸ್ತ್ರವನು ತಿರುವಿಂ
ದುಗುಳಿಚಿದಡಾ ಭೂತದಂಘ್ರಿಗೆ
ಮುಗಿದ ಕೈಗಳಲೆರಗಿದರು ಶಸ್ತ್ರಾಧಿದೇವಿಯರು
ಉಗಿದನೊರೆಯಲಡಾಯುಧವನು
ಬ್ಬೆಗದಲಪ್ಪಳಿಸಿದಡೆ ಕಯ್ಯಿಂ               
ಜಗುಳ್ದು ಬಿದ್ದುದು ಝಂಕೆಯದ್ದುದು ಭಯದ ಝಾಡಿಯಲಿ [    ೧೯  
                                        
ಕಾಕಮುಖದ ಮಯೂರ ಟಿಟ್ಟಿಭ
ಕೋಕವದನದ ಹಂಸ ಕಂಕ ಬ
ಳಾಕವಕ್ತ್ರದ ಗೌಜು ಗೀಜಗ ಚಾತಕಾನನದ
ಘೂಕಮುಖದ ಸೃಗಾಲ ಶಾರ್ದೂ
ಲಾಕೃತಿಯ ಬಹುವಿಧದ ರೂಪದ ನೇಕ
ಭೂತವ್ರಾತ ನೆರೆದುದು ಭೂಪ ಕೇಳೆಂದ          ೨೦  
 
ಇದು ವಿರೂಪಾಕ್ಷನ ಮನಃಕ್ಷೋ
ಭದ ವಿಕಾರವಲಾ ಪಿನಾಕಿಯ
ಪದವ ಹಿಡಿದೋಲೈಸುವೆನು ರ‍್ವಾಂಗಯಜ್ಞದಲಿ
ಇದಕುಪಾಯವ ಬಲ್ಲೆನೆಂದು
ಬ್ಬಿದನು ಬೊಬ್ಬಿರಿದಾರಿ ತೋಡಿದ
ನುದರವಹ್ನಿಯನಿದಿರೊಳಗ್ನಿತ್ರಯವ ನಿರ‍್ಮಿಸಿದ         ೨೧  
 
ಸೆರೆನರಂಗಳ ದರ್ಭೆ ಮಿದುಳಿನ
ಚರು ಕಪಾಲದ ಪಾತ್ರೆಯೆಲುವಿನ
ಬೆರಳ ಸಮಿಧೆ ವಿಶಾಳದನುಮಜ್ಜೆಗಳ ಪೃಷದಾಜ್ಯ
ಅರುಣಜಲದಾಜ್ಯಾಹುತಿಯ ವಿ
ಸ್ತರವ ವಿರಚಿಸಿ ನಿಗಮಮಂತ್ರೋ
ಚ್ಚರಣೆಯಲಿ ಪೂರ್ಣಾಹುತಿಗೆ ತನ್ನೊಡಲನೊಪ್ಪಿಸಿದ     ೨೨  
 
ಮೆಚ್ಚಿದನು ಮದನಾರಿ ಹೋಮದ
ಕಿಚ್ಚು ತುಡುಕದ ಮುನ್ನ ತೆಗೆದನು
ಬಿಚ್ಚುಜಡೆಗಳ ಜಹ್ನುಸುತೆಯಲಿ ನಾದಿದನು ಭಟನ
ಎಚ್ಚ ಶರವಿದೆ ಖಡ್ಗವಿದೆ ಕೋ
ಮುಚ್ಚುಮರೆಯೇಕಿನ್ನು ಸುತರಲಿ
ಚೊಚ್ಚಿಲವ ನೀನೆಂದು ಮೈದಡವಿದನು ಶಶಿಮೌಳಿ      ೨೩  
 
ಸಾರಥಿಗಳೊಳಗೆನಿಸಿದನು ಭೂ
ಭಾರಭಂಜಕನಸುರಹರನೀ
ಭಾರ ಬಿದ್ದುದು ನಮಗೆ ಪಾಂಚಾಲಪ್ರಭದ್ಧಕರ
ತೀರಿತಿದು ನಿಮ್ಮಲ್ಲಿ ನಮ್ಮ ವಿ
ಹಾರವೊಡಬೆಚ್ಚಿತು ರಿಪುವ್ರಜ
ಮಾರಣಾಧ್ವರಕೃತಿಯ ನೀ ಕೈಕೊಳಿಸು ಹೋಗೆಂದ         ೨೪  
 
ಎನೆ ಪುರಾರಿಯ ಪದಯುಗಕೆ ಗುರು
ತನುಜ ಮೈಯಿಕ್ಕಿದನು ಬೀಳ್ಕೊಂ
ಡನು ತಿರೋಹಿತನಾದನೀಶ್ವರನೀತನನು ಕಳುಹಿ
ಧನುವ ಕೊಂಡನು ಧೂರ್ಜಟಿಯ ರೂ
ಹಿನ ಮಹಾರಥ ರಥವನೇರಿದ
ನನುವರದ ರೌರವವನಂಘೈಸಿದನು ರಜನಿಯಲಿ      ೨೫  
 
ಧರಣಿಪತಿ ಕೇಳ್ ರಾಜಬೀದಿಯೊ
ಳುರವಣಿಸಿ ಗುರುಸೂನು ರಥದಲಿ
ಬರುತ ಕಂಡನಲೈ ಯುಧಿಷ್ಠಿರ ರಾಜಮಂದಿರವ
ಇರರು ಪಾಂಡವರಿಲ್ಲಿ ಮೇಣವ
ರಿರಲಿ ಬಳಿಕಾರೈವೆನಯ್ಯನ
ಹರಿಬ ಹೋಗಲಿ ಮುನ್ನ ಕೊಲುವೆನು ದ್ರುಪದನಂದನನ    ೨೬  
 
ಎಂದು ರಾಯನ ಗುಡಿಯ ಗೂಢದ
ಮಂದಿರದ ಬಲವಂಕವೀಧಿಯ
ಮುಂದೆ ಧೃಷ್ಟದ್ಯುಮ್ನನರಮನೆಗಾಗಿ ವಹಿಲದಲಿ
ಬಂದು ಬಾಗಿಲ ಮುರಿದು ಕಾಹಿನ
ಮಂದಿಯನು ನಿಡುನಿದ್ರೆಗೈಸಿದ
ನಂದು ಮಿಣ್ಣನೆ ಹೊಕ್ಕನಾತನ ಸೆಜ್ಜೆಯೋವರಿಯ         ೨೭  
 
ತೊಳತೊಳಗುವಿಕ್ಕೆಲದ ದೀಪದ
ಬೆಳಗಿನಲಿ ಮಣಿರುಚಿಯ ಚಿತ್ರಾ
ವಳಿಯ ಮೇಲ್ಕಟ್ಟಿನಲಿ ಲಲಿತಸ್ತರಣ ಮಧ್ಯದಲಿ
ಹೊಳೆಹೊಳೆವ ನವರತ್ನಭೂಷಣ
ಕಳಿತಕಾಯನ ಕಂಡು ರೋಷ
ಪ್ರಳಯ ಭೈರವರೂಪನೊದೆದನು ವಾಮಪಾದದಲಿ       ೨೮  
 
ಘಳಿಲನೆದ್ದನಿದಾರು ನಿದ್ರೆಯ
ನಳಿದವನ ತಿವಿಯೆನುತ ಮುಂದಣ
ವಿಳಯರುದ್ರನ ರಹಿಯ ರೌದ್ರದ ರಣಭಯಂಕರನ
ನಿಲವ ಕಂಡನಡಾಯುಧವ ತಾ
ಹಲಗೆಯಾವೆಡೆಯೆಂಬವನ ಮುಂ
ದಲೆಯ ಹಿಡಿದಡಗೆಡಹಿ ಕುಸುಕಿರಿದರಿಯನಸಬಡಿದ    ೨೯  
 
ಉಗಿದು ಬಿಲ್ಲಿನ ತಿರುವ ಕೊರಳಲಿ
ಬಿಗಿಯೆ ಭಯದಲಿ ದ್ರುಪದಸುತ ಬೆರ
ಳುಗಳ ಬಾಯಲಿ ಬೇಡಿಕೊಂಡನು ದ್ರೋಣನಂದನನ
ಉಗಿದಡಾಯ್ದದಲೆನ್ನ ಶಿರವನು
ತೆಗೆದು ಕಳೆಯೈ ಶಸ್ತ್ರಘಾತದಿ
ನುಗುಳಿಸಸುವನು ತನಗೆ ವೀರಸ್ವರ್ಗವಹುದೆಂದ         ೩೦  
 
ಅಕಟ ಗುರುಹತ್ಯಾ ಮಹಾಪಾ
ತಕಿಯೆ ನಿನಗೇ ಸ್ವರ್ಗ ದೇವ
ಪ್ರಕರ ನಿನ್ನನು ಹೊಗಿಸಿದಡೆ ಸುಡುವೆನು ಸುರಾಲಯವ
ಕ್ರಕಚ ಕುಂಭೀಪಾಕಮುಖ ನಾ
ರಕದೊಳರಮನೆ ನಿನಗೆ ಕೌಕ್ಷೇ
ಯಕದ ಹತಿ ಗಡ ತನಗೆನುತ ಕಟ್ಟಿದನು ತಿರುವಿನಲಿ      ೩೧  
 
ಉರಲ ಹತ್ತಿಸಿ ಸೆಳೆಯೆ ಗೋಣಲಿ
ಗುರುಗುರಿಸಲಸು ಜಾರಿದುದು ಬೊ
ಬ್ಬಿರಿದು ಹೊಕ್ಕನು ಕದವನೊದೆದು ಶಿಖಂಡಿಯರಮನೆಯ
ತರಿದನಾತನನುತ್ತಮೌಂಜಸ
ನರಸಿ ಹೊಯ್ದನು ಹೊಕ್ಕು ಬಾಗಿಲ
ಮುರಿದು ಮೈಯರಿಹಿಸಿ ಯುಧಾಮನ್ಯುವ ವಿದಾರಿಸಿದ    ೩೨  
 
ಗಜಬಜವಿದೇನೆನುತ ನಿದ್ರೆಯ
ಮಜಡರೊಳಗೊಳಗರಿದರೀತನ
ಭುಜಬಲಕೆ ಮಲೆತವರ ಕಾಣೆನು ಸೃಂಜಯಾದಿಗಳ
ರಜನಿಯಲಿ ರೌಕುಳವ ಮಾಡಿದ
ನಜಿತಸಾಹಸನಿತ್ತ ದ್ರುಪದಾ
ತ್ಮಜೆಯ ಭವನದ ಹೊರೆಗೆ ಬಂದನು ಪಾಂಡವರನರಸಿ    ೩೩  
 
ಇದು ಯುಧಿಷ್ಠಿರ ರಾಜಗೃಹವೆಂ
ದೊದೆದು ಕದವನು ಕಾಹಿನವರನು
ಸದೆದು ಹೊಕ್ಕನು ಸೆಜ್ಜೆಯಲಿ ಧರ‍್ಮಜನ ನಂದನನ
ಒದೆದಡೆದ್ದನು ಸುರಗಿಯಲಿ ಕಾ
ದಿದನು ಖಡುಗವ ಜಡಿದು ನಿಮಿಷಾ
ರ್ಧದಲಿ ತಲೆಯನು ನೆಗಹಿ ಪ್ರತಿವಿಂಧ್ಯಕನನಸುಗಳೆದ      ೩೪  
 
ಜನಪ ಕೇಳೈ ಬಳಿಕ ಸುತಸೋ
ಮನನು ಶ್ರುತಕೀರ್ತಿಯ ಶತಾನೀ
ಕನನು ಶ್ರುತವರ್ಮನನು ತರಿದನು ದ್ರೌಪದೀಸುತರ
ಜನಪರೈವರ ತಲೆಗಳೆಂದೇ
ಕನಕರಥದೊಳಗಿರಿಸಿ ಹೊಕ್ಕನು
ಮನೆಮನೆಗಳಲಿ ಸವರಿದನು ಸೋಮಪ್ರಭದ್ಧಕರ        ೩೫  
 
ಸೀಳ ಬಡಿದನು ಸಮರಥರ ಪಾಂ
ಚಾಳ ರಾವುತರನು ಮಹಾರಥ
ಜಾಲವನು ಜೋದರನು ಭಾರಿಯ ಪಾರಕವ್ರಜದ
ಸಾಲ ಹೊಯ್ದನು ಹುಯ್ಯಲಿಗೆ ಹೊಗು
ವಾಳ ತರಿದನು ಖಡ್ಗಮುಷ್ಟಿಯ
ಕಾಲಭೈರವ ಬೀದಿವರಿದನು ಕೇರಿಕೇರಿಯಲಿ         ೩೬  
 
ಎಲೆಲೆ ಕವಿ ಕಳ್ಳೇರುಕಾರನ
ತಲೆಯ ಹೊಯ್‌ಹೊಯ್ಯೆನುತ ನಿದ್ರಾ
ಕುಳರು ಗರ್ಜಿಸುತಾಗುಳಿಸಿ ತೂಕಡಿಸಿದರು ಮರಳಿ
ಕೆಲಕೆಲಬರರೆನಿದ್ರೆಗಳ ಕಳ
ವಳಿಗರೊರೆಗಳ ಕೊಂಡಡಾಯ್ದವ
ನೆಲಕೆ ಬಿಸುಟರು ಬತ್ತಳಿಕೆಯಲಿ ಹೂಡಿದರು ಧನುವ      ೩೭  
 
ಗಜವ ಹಲ್ಲಣಿಸಿದರು ವಾಜಿ
ವ್ರಜಕೆ ರಂಚೆಯ ಹಾಯ್ಕಿದರು ಗಜ
ಬಜವಿದೇನೇನುತ ಗಾಲಿಗೆ ಬಿಗಿದು ಕುದುರೆಗಳ
ರಜನಿ ಬಂದುದೆ ಹಗಲು ಹೋಯಿತೆ
ಗಜಬಜದೊಳಕಟೆನುತ ಸುಭಟ
ವ್ರಜಸುವಿಹ್ವಳಕರಣರಿರಿದಾಡಿದರು ತಮ್ಮೊಳಗೆ        ೩೮  
 
ಲಾಯದಲಿ ಹೊಕ್ಕಿರಿದು ಕುದುರೆಯ
ಬೀಯ ಮಾಡಿದನಂತಕಂಗೆಯ
ಡಾಯುಧದ ಧಾರೆಯಲಿ ಕೊಟ್ಟನು ಕುಂಜರವ್ರಜವ
ರಾಯದಳ ಧರೆಯಂತೆ ನವಖಂ
ಡಾಯಮಾನವಿದಾಯ್ತು ಪಾಂಡವ
ರಾಯ ಕಟಕವ ಕೊಂದನಶ್ವತ್ಥಾಮ ಬೇಸರದೆ         ೩೯  
 
ದೊರೆಗಳೇನಾದರೊ ಯುಧಿಷ್ಠಿರ
ನರ ವೃಕೋದರ ನಕುಲ ಸಹದೇ
ವರು ಮುರಾಂತಕ ಸಾತ್ಯಕಿಗಳೊಳಗಿಹರೆ ರೌರವಕೆ
ಹರನ ಖತಿಯೋ ಲಯಕೃತಾಂತನ
ವಿರಸಕೃತಿಯೋ ಸರ‍್ವದಳಸಂ
ಹರಣಕೇನು ನಿಮಿತ್ತವೆಂದುದು ಭೂಸುರವ್ರಾತ         ೪೦  
 
ಉಳಿದುದೇಳಕ್ಷೋಹಿಣೀದಳ
ದೊಳಗೆ ನಾರೀನಿಕರ ವಿಪ್ರಾ
ವಳಿ ಕುಶೀಲವ ಸೂತ ಮಾಗಧ ವಂದಿಸಂದೋಹ
ಸುಳಿವ ಕಾಣೆನು ಕೈದುವಿಡಿದರ
ನುಳಿದು ಜೀವಿಸಿದಾನೆ ಕುದುರೆಗ
ಳೊಳಗೆ ಜವಿಯಿಲ್ಲೇನನಂಬೆನು ಜನಪ ಕೇಳೆಂದ         ೪೧  
 
ಕೂಡೆ ಕಟ್ಟಿತು ಕಿಚ್ಚು ತೆರಪಿನ
ಲೋಡುವಡೆ ಗುರುಸುತನ ಶರ ಮಿ
ಕ್ಕೋಡುವಡೆ ಬಾಗಿಲುಗಳಲಿ ಕೃತವರ್ಮ ಕೃಪರೆಸುಗೆ
ಕೂಡೆ ಮುಮ್ಮಳಿಯೋದುದೀ ಶರ
ಝಾಡಿಯಲಿ ಚತುರಂಗಬಲವ
ಕ್ಕಾಡಿತೇನೆಂಬೆನು ಯುಧಿಷ್ಠಿರನೃಪನ ಪರಿವಾರ          ೪೨  
 
ಬಸಿವ ರಕುತದಡಾಯುಧದ ನೆಣ
ವಸೆಯ ತೊಂಗಲುಗರುಳ ಬಂಧದ
ವಸನ ಕೈಮೈಗಳ ಕಠೋರಭ್ರುಕುಟಿ ಭೀಷಣದ
ಮುಸುಡ ಹೊಗರಿನ ದಂತದಂಶಿತ
ದಶನವಾಸದ ವೈರಿಹಿಂಸಾ
ವ್ಯಸನ ವೀರಾವೇಶಿ ಬಂದನು ಕೃಪನ ಸಮ್ಮುಖಕೆ        ೪೩  
 
ಹೇಳಿದನು ಸೃಂಜಯವಧೆಯ ಪಾಂ
ಚಾಲ ರಾಜಕುಮಾರವರ್ಗದ
ಮೌಳಿಗಳ ಬಲಿಗೊಟ್ಟ ಪರಿಯನು ಖಡ್ಗಪೂತನಿಗೆ
ಪಾಳೆಯದೊಳರಸಿದನು ಪಾಂಡುನೃ
ಪಾಲತನುಜರನವರು ಕೆಡುವರೆ
ಮೇಲುಗಾಹಿನ ವೀರನಾರಾಯಣನ ಕರುಣದಲಿ        ೪೪

ಸಂಕ್ಷಿಪ್ತ ಭಾವ
Lrphks Kolar

ಅಶ್ವತ್ಥಾಮ ಕತ್ತಲೆಯಲ್ಲಿ ಪಾಂಡವರೆಂದುಕೊಂಡು ದ್ರೌಪದೀಪುತ್ರರನ್ನು ಕೊಂದದ್ದು.

ಪಾಂಡವರ ಪಾಳೆಯದತ್ತ ಹೋಗುವಷ್ಟರಲ್ಲಿ ಅಲ್ಲೊಂದು ವಟವೃಕ್ಷವಿತ್ತು. ನಿದ್ರೆ ತಡೆಯಲಾರದೆ ಕೃಪ ಮತ್ತು ಕೃತವರ್ಮರು ಮಲಗಿದರು. ದ್ರೌಣಿ ಕುಳಿತು ಆಲೋಚಿಸುತ್ತಿದ್ದನು. ಆಗ ಗೂಗೆಯೊಂದು ಮಲಗಿದ್ದ ಕಾಗೆಗಳ ಮೇಲೆ ಧಾಳಿ ಮಾಡಿತು. ಅವು ಸತ್ತು ಕೆಳಗೆ ಬಿದ್ದವು. ಅದನ್ನು ನೋಡಿ ಇವನಿಗೆ ಉಪಾಯ ಹೊಳೆಯಿತು. ಇದೇ ಸುಸಮಯವೆಂದು ಇನ್ನಿಬ್ಬರನ್ನು ಎಬ್ಬಿಸಿದನು. ಕೃತವರ್ಮನು ಇದರ ಸಾಧ್ಯಾಸಾಧ್ಯತೆಗಳನ್ನು ಹೇಳಿದ. ಸುಲಭವಲ್ಲ ಇದು. ಹರಿಯ ಕಟಾಕ್ಷವಿದೆ ಅವರಿಗೆ ಎಂದ. ಗುರುಸುತ ಕೇಳಲಿಲ್ಲ. ಬಾಗಿಲುಗಳಲ್ಲಿ ಅವರನ್ನು ಕಾವಲಿರಿಸಿ ತಾನು ಕೋಟೆಯ ಒಳಹೊಕ್ಕ.

ಆಗ ಒಂದು ಅದ್ಭುತ ನಡೆಯಿತು. ಒಂದು ಮಹಾಗಾತ್ರದ ಭೂತವು ಎದುರಾಗಿ ನಿಂತಿತು. ಜೊತೆಗೆ ಬೇರೆ ಬೇರೆ ಗಾತ್ರದ, ಆಕೃತಿಗಳ ಭೂತಗಣ. ಇದಕ್ಕೆ ಹರನ ಕೃಪೆಯೊಂದೇ ದಾರಿ ಎಂದು ತನ್ನ ಶರೀರದ ಅವಯವಗಳಿಂದಲೇ ಯಜ್ಞ ಮಾಡಿ ಶಿವನನ್ನು ಮೆಚ್ಚಿಸಿದನು ಅಶ್ವತ್ಥಾಮ. ಶಿವ ಒಲಿದು ಹರಸಿದನು.

ಮೊದಲಿಗೆ ದ್ರುಪದನನ್ನು ಕೊಲ್ಲುವೆನೆಂದು ಹೊರಟ. ತನ್ನ ತಂದೆಯನ್ನು ಕೊಂದವನೆಂದು ಕೋಪವಿತ್ತು.ಮಲಗಿದ್ದವನನ್ನು ಹೊಡೆದೆಬ್ಬಿಸಿ ಸಾಯಿಸಿದ. ನಂತರ ಶಿಖಂಡಿ, ಯುಧಾಮನ್ಯು, ಸೃಂಜಯರು ಎಲ್ಲರನ್ನೂ ಕೊಂದು ಹಾಕಿದನು. ನಂತರ ಪಾಂಡವರೆಂದೇ ತಿಳಿದು ದ್ರೌಪದೀಸುತರೈವರನ್ನೂ ತರಿದು ಅವರ ತಲೆಗಳನ್ನು ರಥದಲ್ಲಿಟ್ಟುಕೊಂಡ. ನಂತರ ಕೇರಿಕೇರಿಗಳಲ್ಲಿ ಅಲೆದು ಸೈನ್ಯವನ್ನು ಕೊಚ್ಚಿಹಾಕಿದ. ಆ ವೇಳೆಗೆ ಪಾಂಡವರು ಅಲ್ಲಿಲ್ಲದ್ದು ತಿಳಿಯಿತು. ಪಾಳೆಯದಲ್ಲೆಲ್ಲ ಹುಡುಕಿದರೂ ಸಿಗಲಿಲ್ಲ. ದೇವ ವೀರನಾರಾಯಣನ ಕಾಪಿನಲ್ಲಿ ಇರುವವರಲ್ಲವೆ ಅವರು! ಪರಿವಾರದವರಲ್ಲದೆ ಆಯುಧವನ್ನು ಹಿಡಿದವರೊಬ್ಬರೂ ಉಳಿಯಲಿಲ್ಲ. ಓಡಿಹೋಗಲೂ ಅವಕಾಶ ಸಿಗಲಿಲ್ಲ ಸೈನ್ಯಕ್ಕೆ. ಕೃಪನ ಬಳಿ ಬಂದು ತಾನು ಸಾಯಿಸಿದವರೆಲ್ಲರ ಬಗ್ಗೆ ಹೇಳಿದ. ಇನ್ನೂ ಕತ್ತಲು ಇತ್ತು. ಅಲ್ಲಿಂದ ಹೊರಟರು.


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ