ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಭಾರತಕಥಾಮಜರಿ150

ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರಿ 
ಗದಾ ಪರ್ವ - ಹತ್ತನೆಯ ಸಂಧಿ

ಸೂ.   
ರಾಯಕಟಕವನಿರಿದ ಗುರುಸುತ
ನಾಯುಧದ ವಿಗ್ರಹದೊಳಗೆ ಹರಿ
ಕಾಯಿದನು ಕೃಪೆಯಿಂದಲಭಿಮನ್ಯುವಿನ ನಂದನನ    |
 
ಕೇಳು ಧೃತರಾಷ್ಟ್ರಾವನಿಪ ರಿಪು
ಜಾಲಗರ‍್ವಾಣೀ ಕದಂಬ
ಸ್ಥೂಲಲಕ್ಷನು ಬಂದು ಕಂಡನು ಭೋಜಗೌತಮರ
ಲೀಲೆಯಲಿ ರಥವೇರಿ ಕುರುಭೂ
ಪಾಲನಲ್ಲಿಗೆ ಬಂದರುಬ್ಬಿನ
ಮೇಲು ಮದದ ಜಯಪ್ರಚಂಡರು ಕಂಡರವನಿಪನ         ೧  
 
ಬಲಿದ ಮರವೆಯ ಕರಣವೃತ್ತಿಯ
ಕಳವಳದ ಪಂಚೇಂದ್ರಿಯದ ಪರಿ
ಚಲನಸಂಚದ ಶಿಥಿಲಮೂಲಾಧಾರಮಾರುತನ
ಅಲಘುತರಪರಿವೇದನಾವಿ
ಹ್ವಳಿತಕಂಠಗತಾತ್ಮನೂರ್ಧ್ವ
ಸ್ಖಲಿತ ದೀರ್ಘಶ್ವಾಸನಿದ್ದನು ಕೌರವರ ರಾಯ         ೨  
 
ಕಂಡು ಕಂಬನಿದುಂಬಿದರು ಭೂ
ಮಂಡಲಾಧಿಪ ವೈರಿಮದವೇ
ತಂಡಕೇಸರಿಯಿರವಿದೇ ಮಝ ಪೂತು ವಿಧಿಯೆನುತ
ಗಂಡುಗಲಿಯವಧಾನ ರಿಪುಬಲ
ದಂಡಧರನವಧಾನ ಕುರುಕುಲ
ಚಂಡಕರನವಧಾನವೆನುತೆಚ್ಚರಿಸಿದರು ನೃಪನ        ೩  
 
ಕೆದರಿದುದು ಕುಡಿನೋಟ ಕರಣದ
ಕದಡು ಹರೆದುದು ಇಂದ್ರಿಯಾವಳಿ
ತುದಿಗೊಳಿಸಿದುದು ಪವನ ನಟಿಸಿತು ನಾಭಿಪರಿಯಂತ
ವದನವನು ನಸು ನೆಗಹಿ ನೃಪ ನುಡಿ
ಸಿದನಿದಾರಸ್ಮತ್ಪುರೋಭಾ
ಗದಲಿ ಸೇವಾಮಧುರವಚನವಿಳಾಸಪರರೆಂದ        ೪  
 
ನಾವು ನಿಮ್ಮವರೆಮ್ಮ ಬೊಪ್ಪನ
ಭಾವ ಕೃಪ ಕೃತವರ್ಮನೀತನು
ದೇವರವಧರಿಸುವುದು ರಜನಿಯ ರಾಜಕಾರಿಯವ
ನೀವು ಬಿನ್ನಹಮಾಡಬೇಹುದು
ಮಾವ ರಣಸಂಗತಿಯನಾತ್ಮ
ಸ್ತಾವಕರು ನಾವಲ್ಲವೆಂದನು ಕೃಪಗೆ ಗುರುಸೂನು         ೫  
 
ಏನನೆಂಬೆನು ಜೀಯ ದ್ರುಪದನ
ಸೂನು ಪಂಚದ್ರೌಪದೇಯರ
ಹಾನಿಯನು ಸೃಂಜಯ ಶಿಖಂಡಿ ಪ್ರಮುಖರುಪಹತಿಯ
ವೈನತೇಯನ ಲಳಿಯಲಹಿಕುಲ
ವಾನುವುದೆ ಪಾಂಚಾಲಕದಳೀ
ಕಾನನವ ನಿನ್ನಾನೆ ಸವರಿತು ಹೇಳಲೇನೆಂದ          ೬  
 
ದೈವಕೃಪೆ ಜವನಿಕೆಯ ಮರೆಗೊಂ
ಡೈವರುಳಿದರು ಮೇಲೆ ಸಾತ್ಯಕಿ
ದೈವದೊಡಹುಟ್ಟಿದನಲೇ ತಾನಿಲ್ಲ ಶಿಬಿರದಲಿ
ದೈವಬಲವಿನಿತಕ್ಕೆ ಕೇಳ್ ನಿ
ರ್ದೈವಬಲನಿಶ್ಶೇಷವಿನಿತೇ
ದೈವವೆತ್ತಿದ ಛಲದ ವಾಸಿಗೆ ರಾಯ ಕೇಳೆಂದ         ೭  
 
ಎಲೆ ಕೃಪಾಚಾರಿಯ ವಿರೋಧಿಗ
ಳುಳಿದರೈವರು ಬಲ್ಲೆನದನಸ
ದಳದ ಕೃಪೆಯಲಿ ಬಸಿದು ಬೀಳುವನವರಿಗಸುರಾರಿ
ಅಳಿದುದೇ ನಿಶ್ಶೇಷ ಪಾಂಡವ
ದಳ ಕುಮಾರರು ಸಹಿತವಿನ್ನ
ಗ್ಗಳೆಯನಶ್ವತ್ಥಾಮನಹನೆಂದನು ಮಹೀಪಾಲ        ೮  
 
ಏನನೊದಗಿದ ನಮಗೆ ಗಂಗಾ
ಸೂನು ಭಾರದ್ವಾಜ ನಮಗೊಲಿ
ದೇನ ಮಾಡಿದ ನಮ್ಮ ಥಟ್ಟಿನ ಭದ್ರಗಜವೆಂಬ
ಮಾನನಿಧಿ ರಾಧಾತನುಜನಿಂ
ದೇನು ಹರಿದುದು ಹರಿಬವನು ಗುರು
ಸೂನುವೇ ಮರಳಿಚಿದನೆಂದನು ಕೌರವರರಾಯ         ೯  
 
ಹರಿಬ ಬಂದುದೆ ಪಾಂಡುಸುತರುಳಿ
ದಿರಲಿ ಸಾಕಂತಿರಲಿ ನಿಮ್ಮಡಿ
ಪುರಕೆ ಬಿಜಯಂಗೆಯ್ಯಿರೇ ಚೈತನ್ಯಗತಿಯೆಂತು
ಹರಣವುಳಿದಡೆ ಪಾಂಡುತನುಜರ
ಶಿರವ ಕೇವಣಿಸುವೆನಲೈ ಕೇ
ಸರಿಯ ಪೀಠದೊಳೆಂದನಶ್ವತ್ಥಾಮ ಕೈಮುಗಿದು         ೧೦  
 
ಸಾಕದಂತಿರಲಿನ್ನು ವೈರಿ 
ವ್ಯಾಕರಣಪಾಂಡಿತ್ಯದಲ್ಲಿ ವಿ
ವೇಕಶೂನ್ಯರು ನಾವು ಮೊದಲಾಗೌರ್ಧ್ವದೈಹಿಕವ
ಆಕೆವಾಳರಿಗರುಹಿ ನೀವ
ಸ್ತೋಕಪುಣ್ಯರ ತಿಳುಹಿ ವಿಗಳಿತ
ಶೋಕರೆನಿಸುವುದಂಧನೃಪ ಗಾಂಧಾರಿದೇವಿಯರ        ೧೧  
 
ಎನುತ ಕಣ್ ಮುಚ್ಚಿದನು ಜೀವಾ
ತ್ಮನು ಜವಾಯಿಲತನದಲೊಡೆಹಾ
ಯ್ದನು ಸುನಾಸಾಲಂಬಿತಶ್ವಾಸದ ಸಮಾಪ್ತಿಯಲಿ
ಜನಪ ಮರೆದೊರಗಿದನಲಾ ಹಾ
ಯೆನುತ ವದನಾಂಜುಳಿಪುಟದ ತಾ
ಡನದಲಿವರಳಲಿದರು ಕುರುರಾಜಾವಸಾನದಲಿ         ೧೨  
 
ತಿರುಗಿದರು ಕೈದುವ ಬಿಸುಟು ಮೂ
ವರು ಮಹಾರಥರಂಧತಿಮಿರಕೆ
ತರಣಿಕಿರಣದ ಧಾಳಿ ಹರಿದುದು ಕೂಡೆ ದೆಸೆದೆಸೆಗೆ
ಅರಸನುಪ್ಪವಡಿಸಿ ಮುರಾರಿಯ
ಸಿರಿಮೊಗವ ನೋಡಿದನು ತಮ್ಮಂ
ದಿರುಸಹಿತ ಹೊರವಂಟನಾ ಕುರುಪತಿಯ ಪಾಳೆಯವ    ೧೩  
 
ಪಾಳೆಯದಲಿ ಕುಮಾರರನು ಪಾಂ
ಚಾಲರನು ನೋಡುವೆವೆನುತ ಭೂ
ಪಾಲ ನಡೆತರಲಿದಿರುವಂದುದು ಯುವತಿನಿಕುರುಂಬ
ಸೂಳುವೊಯ್ಲಿನ ತೆಳುವಸುರ ಕರ
ತಾಳದಲಿ ಹಾಹಾವಿರಾವದ
ಮೇಳವದ ಗೀತದಲಿ ಬಂದಳು ದ್ರೌಪದೀದೇವಿ         ೧೪  
 
ಏನಿದೇನದುಭುತವೆನುತ ದು
ಮ್ಮಾನದಲಿ ಹರಿತಂದು ಹಿಡಿದನು
ಮಾನಿನಿಯ ಕೈಗಳನು ಕಂಬನಿದೊಡೆದು ಸೆರಗಿನಲಿ
ಹಾನಿಯೇನೆನೆ ಮಡಿದರೆನ್ನಯ
ಸೂನುಗಳು ತನ್ನನುಜರೆನೆ ಪವ
ಮಾನಸುತ ಕೇಳಿದನು ಕೋಳಾಹಳವ ಗುರುಸುತನ       ೧೫  
 
ಸುತರ ತಲೆಯೈದಕ್ಕೆ ರಿಪುಗುರು
ಸುತನ ತಲೆಯೇ ಹೊಣೆ ಕಣಾ ಬಿಡು
ಸತಿಯೆ ಶೋಕವನೆನುತ ಬಿಟ್ಟನು ಸೂಠಿಯಲಿ ರಥವ
ವ್ಯತಿಕರವಿದವಗಡ ಸಮೀರನ
ಸುತಗೆ ಹರಿಯದು ಬವರ ನಡೆಯೆಂ
ದತಿ ರಥನ ಬಳಿಸಲಿಸಿದರು ನೃಪ ಹರಿ ಧನಂಜಯರು     ೧೬  
 
ನಿಲ್ಲು ಗುರುಸುತ ಶೌರ‍್ಯಪಣ ನ
ಮ್ಮಲ್ಲಿಯೇ ಹುಲುಜೀವರಿಗೆ ಜವ
ನಲ್ಲಿ ಮೇಳವೆ ಉಗುಳು ಪಂಚದ್ರೌಪದೀಸುತರ
ಬಿಲ್ಲ ಗುರು ನೀನಾದಡೆಮಗೇ
ನಿಲ್ಲಿ ದ್ರೌಪದಿಯಕ್ಷಿಜಲ ಕೃಪೆ
ಯಲ್ಲಿ ಲಂಬಿಸಬೇಕೆನುತ ಮೂದಲಿಸಿದನು ಭೀಮ      ೧೭  
 
ಎಲವೊ ಶರಸಂನ್ಯಾಸವನು ಕುರು
ತಿಲಕನವಸಾನದಲಿ ಮಾಡಿದೆ
ನಳಲಿದಡೆ ಫಲವೇನು ನಮ್ಮೀ ಸ್ವಾಮಿಕಾರ‍್ಯದಲಿ
ತಲೆಯ ಹೊಯ್ದೆನು ನಿನ್ನವರ ನೀ
ವಳುಕಿ ರಣದೊಳಗಡಗಿ ಜೀವವ
ನುಳುಹಿಕೊಂಡಿರಿ ಕೊಲುವೆನಲ್ಲದೊಡೆಂದನಾ ದ್ರೌಣಿ     ೧೮  
 
ಮರುಳಲಾ ಗುರುಸುತ ಯುಧಿಷ್ಠಿರ
ನಿರೆ ವಿಭಾಡಿಸುವಾ ಮೃಗೇಂದ್ರನ
ಗರವಟಿಗೆಯಲಿ ಬಡಸೃಗಾಲನ ಬಾಧೆ ಬಲುಹು ಗಡಾ
ಕುರುನೃಪತಿಯಾಸ್ಥಾನವಲ್ಲು
ಬ್ಬರಿಸಿ ಬೊಬ್ಬಿಡಲಾಹವಾಂತ
ಸ್ಸರಣಿ ಗುರುಸುತ ನಿನಗೆ ಸದರವೆಯೆಂದನಸುರಾರಿ      ೧೯  
 
ಕಾಯಬಲ್ಲೈ ಪಾಂಡವರನು ನಿ
ರಾಯುಧರು ನಾವೆಂದು ನೀ ನಿ
ರ್ದಾಯದಲಿ ನಿನ್ನವರು ಹೊಗುವರೆ ಹಸ್ತಿನಾಪುರವ
ಸಾಯಕವ ಪರಿಹರಿಸು ಪಾಂಡವ
ರಾಯಜೀವಿ ಗಡೆನುತ ವರ ಚ
ಕ್ರಾಯುಧನ ಬೋಳೈಸಿ ತೃಣದಿಂದಿಟ್ಟನಾ ದ್ರೌಣಿ        ೨೦  
 
ಆ ಮಹಾಮಂತ್ರಾಭಿಮಂತ್ರಿತ
ಭೀಮವಿಕ್ರಮತೃಣವನಶ್ವ
ತ್ಥಾಮನಿಡೆ ಲೋಕತ್ರಯಕ್ಷೋಭಪ್ರಭಂಜನವ
ವ್ಯೋಮಕೇಶಲಲಾಟವಿಶ್ರುತ
ಧೂಮಕೇತುಶಿಖಾವಿಸಂಸ್ಥುಳ
ಧೂಮಚುಂಬಿತ ಖಚರಚಯ ಭೂರಿಸಿತು ರಿಪುನೃಪರ    ೨೧  
 
ಅವನಿಪತಿ ಕೇಳೈ ಮಹಾವೈ
ಷ್ಣವದ ಸತ್ರಾಣವನು ಗುರುಸಂ
ಭವನ ಮಂತ್ರದ ಪಾಡಿ ನಡಪಾಡಿಸಿತು ಪಾಂಡವರ
ತವಕದಲಿ ತೃಣಬಾಣವಭಿಮ
ನ್ಯುವಿನ ರಾಣೀವಾಸದುದರೋ
ದ್ಭವದ ಗರ್ಭಕೆ ಮುರಿದು ಹರಿದುದು ಸೂಕ್ಷ್ಮರೂಪದಲಿ    ೨೨  
 
ಜಗವ ಹೂಡುವ ಮೇಣ್ ಚತುರ್ದಶ
ಜಗದ ಜೀವರನೂಡಿಯುಣಿಸುವ
ಜಗವನಂತರ್ಭಾವದಲಿ ಬಲಿಸುವ ಗುಣತ್ರಯದ
ಸೊಗಡು ತನ್ನ ಸಹಸ್ರಧಾರೆಯ
ಝಗೆಯೊಳೆನಿಪ ಮಹಾಸುದರ್ಶನ
ಬಿಗಿದು ಸುತ್ತಲು ವೇಢೆಯಾಯ್ತುತ್ತರೆಯ ಗರ್ಭದಲಿ        ೨೩  
 
ಸೆಳೆದುಕೊಂಡನು ಮಿತ್ತುವಿನ ಗಂ
ಟಲಲಿ ಮಾರ್ಕಂಡೇಯನನು ರಣ
ದೊಳಗೆ ಭಗದತ್ತಾಂಕುಶದಿ ನಾರಾಯಣಾಸ್ತ್ರದಲಿ
ಉಳುಹಿದನು ಪಾರ್ಥನನು ಗುರುಸುತ
ಕಳುಪಿದೀ ಐಶಿಕಾಸ್ತ್ರದಲಿ ಶಶಿ
ಕುಲದ ರಾಜಾಂಕುರವ ಕರುಣಿಸಿ ಕಾಯ್ದನಸುರಾರಿ        ೨೪  
 
ತೀರಿತೈ ಇಷಿಕಾಸ್ತ್ರಘಾತಿ ಮು
ರಾರಿ ಗುರುಸುತರೊಬ್ಬರೊಬ್ಬರ
ವೀರಪಣವಾಸಿಯಲಿ ಶಪಿಸಿದರಧಿಕರೋಷದಲಿ
ನಾರಿಯಂತಸ್ತಾಪವಹ್ನಿ ನಿ
ವಾರಣಕೆ ಜಲವೀತನೆಂದಾ
ಚಾರಿಯನ ನಂದನನ ಹಿಡಿದರು ಭೀಮಫಲುಗುಣರು     ೨೫  
 
ಬಂದಳಾ ದ್ರೌಪದಿಯಹಹ ಗುರು
ನಂದನನ ಕೊಲಬಾರದಕಟೀ
ನಂದನರ ಮರಣದ ಮಹಾವ್ಯಥೆಯೀತನಳಿವಿನಲಿ
ಕೊಂದುಕೂಗದೆ ಕೃಪೆಯನಬಲಾ
ವೃಂದ ಸಮಸುಖದುಃಖಿಗಳು ಸಾ
ರೆಂದು ಭೀಮಾರ್ಜುನರ ತೆಗೆದಳು ಬಳಿಕ ಪಾಂಚಾಲಿ    ೨೬  
 
ತಲೆಯ ಕೊಂಬವಗಡದ ಭಾಷೆಯ
ಸಲಿಸಲೆಂದಾ ದ್ರೋಣತನುಜನ
ಹೊಳೆವ ಮಕುಟದ ಮಾಣಿಕವ ಕೊಂಡುತ್ತರಾಯದಲಿ
ಗೆಲಿದು ತಿರುಗಿದರಿವರು ಸಾಹಸ
ವಳುಕಿಸದೆ ಮೂಜಗವ ಯದುಕುಲ
ತಿಲಕ ಗದುಗಿನ ವೀರನಾರಾಯಣನ ಕರುಣದಲಿ        ೨೭

ಸಂಕ್ಷಿಪ್ತ ಭಾವ
Lrphks Kolar

ಅಶ್ವತ್ಥಾಮನ ಕುಶಿತಾಸ್ತ್ರವನ್ನು ನಿವಾರಿಸಿ ಉತ್ತರೆಯ ಗರ್ಭವನ್ನು ಉಳಿಸಿದ ಕೃಷ್ಣ.

ಅಶ್ವತ್ಥಾಮನು ಕೌರವರಾಯನಲ್ಲಿಗೆ ಬಂದನು. ಅವನು ತನ್ನ ಕೊನೆಯ ಕ್ಷಣಗಳನ್ನು ಎಣಿಸುತ್ತಿದ್ದನು. ಇವರನ್ನು ತಕ್ಷಣ ಗುರುತಿಸಲೂ ಇಲ್ಲ. ಕೃಪನು ನಡೆದುದನ್ನು ವಿವರಿಸಿದನು. ಶತ್ರುಗಳ ಪಡೆಯನ್ನು ತರಿದ ಸಂಗತಿ, ಪಾಂಡವರೈವರು ಉಳಿದದ್ದು ಎಲ್ಲ ಕೇಳಿ ಕೃಷ್ಣನ ಕೃಪೆಯಿರಲು ಪಾಂಡವರು ಉಳಿಯದಿಹರೆ? ಭೀಷ್ಮ, ದ್ರೋಣ ಕರ್ಣರು ಮಾಡದ ಸಾಹಸವನ್ನು ಅಶ್ವತ್ಥಾಮ ಮಾಡಿದನೆಂದು ಹೊಗಳಿದನು. ತಂದೆತಾಯಿಯರನ್ನು ಸಂತೈಸಹೇಳಿದನು. ಅವನ ಪ್ರಾಣಪಕ್ಷಿ ಹಾರಿತು. ಇವರು ವ್ಯಥಿತರಾಗಿ ಆಯುಧಗಳನ್ನು ತ್ಯಜಿಸಿ ಹೊರಟರು.

ಇತ್ತ ಯುಧಿಷ್ಟಿರ ಕೌರವರ ಪಾಳೆಯದಿಂದ ಹೊರಟು ತಮ್ಮ ಶಿಬಿರದತ್ತ ಬರುವಾಗ ದಾರಿಯಲ್ಲಿ ಶೋಕಿಸುತ್ತ ದ್ರೌಪದಿ ಎದುರಾದಳು. ತನ್ನ ಪುತ್ರರ ಮರಣ ಕುರಿತು ಹೇಳಿ ಶೋಕಿಸಿದಳು. ಗುರುಸುತನ ಕಾರ್ಯ ತಿಳಿದ ಭೀಮ ಕೋಪದಿಂದ ಅವನನ್ನು ಕೊಲ್ಲಲು ಹೊರಟ. ಅವನನ್ನು ತಡೆಯಲು ಧರ್ಮಜ, ಹರಿ, ಧನಂಜಯರು ಹೊರಟರು. 

ಗುರುಸುತನನ್ನು ಕೂಗಿ ನಿಲ್ಲಿಸಿ ರೋಷದಿಂದ ಮೂದಲಿಸಲು ನಾನು ಕೌರವನ ಅವಸಾನದಲ್ಲಿ ಶರಸಂನ್ಯಾಸ ಮಾಡಿದೆ. ಇಲ್ಲದಿದ್ದರೆ ನೀವುಗಳೂ ಉಳಿಯುತ್ತಿರಲಿಲ್ಲವೆಂದು ಉತ್ತರಿಸಿದನು. ಕೃಷ್ಣನು ಗುರುಸುತನನ್ನು ಬಯ್ಯಲು ಕೋಪದಿಂದ ದ್ರೌಣಿ ತೃಣಾಸ್ತ್ರವನ್ನು ಪ್ರಯೋಗಿಸಿ ಕಾಯ್ದುಕೊಳ್ಳಲು ಸಾಧ್ಯವಾದರೆ ಕಾಯ್ದುಕೋ ಎಂದು ಕೃಷ್ಣನನ್ನು ಛೇಡಿಸಿದನು. ಅದು ಸೂಕ್ಷ್ಮರೂಪದಲ್ಲಿ ಉತ್ತರೆಯ ಗರ್ಭವನ್ನು ತಲುಪಲು  ಹೊರಟಾಗ ಕೃಷ್ಣನ ಸುದರ್ಶನವು ಗರ್ಭಕ್ಕೆ ರಕ್ಷೆಯಾಗಿ ನಿಂತು ತೃಣಾಸ್ತ್ರವನ್ನು ತಡೆಯಿತು. ಈ ರೀತಿಯಲ್ಲಿ ವಂಶದ ಕುಡಿಯನ್ನು ಕರುಣಿ ಕೃಷ್ಣ ಕಾಪಾಡಿದನು. ಒಬ್ಬರನ್ನೊಬ್ಬರು ಶಪಿಸಿಕೊಂಡರು. ಭೀಮಾರ್ಜುನರು ಅಶ್ವತ್ಥಾಮನನ್ನು ಕೊಲ್ಲಲು ಹೊರಟಾಗ ದ್ರೌಪದಿ ತಡೆದಳು. ಇವನನ್ನು ಕೊಂದರೆ ಪುತ್ರಶೋಕ ತಪ್ಪುವುದೆ ಎಂದಳು. ಸಾಂಕೇತಿಕವಾಗಿ ಅವನ ಮಕುಟದ ಮಾಣಿಕ್ಯವನ್ನು ತೆಗೆದುಕೊಂಡು ತಿರುಗಿದರು.


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ