ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಡಿ. ಕೇಶವ


 ಡಿ. ಕೇಶವ


ಕನ್ನಡಿಗರಾದ ವಿದ್ವಾನ್ ದಾಸಪ್ಪ ಕೇಶವ ಅವರು ಸ್ವಿಡ್ಜರ್ಲ್ಯಾಂಡ್ ದೇಶದಲ್ಲಿ ಭಾರತೀಯ ಯೋಗ,  ನೃತ್ಯ ಮತ್ತು ಸಂಗೀತ ಕಲಾವಿದರಾಗಿ, ನೃತ್ಯ ಸಂಯೋಜಕರಾಗಿ, ಗುರುವಾಗಿ ಮತ್ತು ಕಲಾಪೋಷಕರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. 

ಕೇಶವ ಅವರು 1946ರ ಜುಲೈ 18ರಂದು ಮೈಸೂರಿನಲ್ಲಿ ಜನಿಸಿದರು. 1969 ರಿಂದ 1975 ರವರೆಗೆ ಅವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ನೃತ್ಯ, ಸಂಗೀತ ಮತ್ತು ನಟನೆಯನ್ನು ಅಧ್ಯಯನ ಮಾಡಿದರು. ನೃತ್ಯಪಟುವಾಗಿ ನಾಟ್ಯವಿಶಾರದರಾಗಿ ಚಿನ್ನದ ಪದಕದ ಸಾಧನೆ ಮಾಡಿದರು.  ಕೇಶವ ಅವರು  ಮಹಾನ್ ನೃತ್ಯಕಲಾವಿದೆ ಪದ್ಮಶ್ರೀ ಡಾ. ಕೆ. ವೆಂಕಟಲಕ್ಷಮ್ಮ ಅವರಲ್ಲಿ ಮೈಸೂರು ಶೈಲಿಯಲ್ಲಿ ಭಾರತೀಯ ದೇವಾಲಯ ನೃತ್ಯ ರೂಪವಾದ ಭರತನಾಟ್ಯವನ್ನು ಅಧ್ಯಯನ ಮಾಡಿದರು. ಇತರ ಶಾಸ್ತ್ರೀಯ ನೃತ್ಯ ಶೈಲಿಗಳು, ಜಾನಪದ ನೃತ್ಯ, ಗಾಯನ ಮತ್ತು ವೀಣಾವಾದನವನ್ನು ತಜ್ಞ  ಗರುಗಳಲ್ಲಿ ಶ್ರದ್ಧೆಯಿಂದ ಅಧ್ಯಯನ ಮಾಡಿದರು. 

ಕೇಶವ ಅವರು ಆರಂಭದಲ್ಲಿ ತಮ್ಮ ತಂದೆಯವರಿಂದ ಯೋಗವನ್ನು ಕಲಿತರು, ನಂತರ ಮೈಸೂರಿನ ಪ್ರಸಿದ್ಧ ಯೋಗ ಪಟು ಯೋಗಿರಾಜ ದೇಶಿಕಾಚಾರ್ಯರಿಂದ ಹೆಚ್ಚಿನ ಯೋಗತರಬೇತಿ ಗಳಿಸಿದರು. 

ಡಿ. ಕೇಶವ ಅವರು 1976ರಿಂದ ಸ್ವಿಟ್ಜರ್ಲೆಂಡ್‌ನ ಬಾಸೆಲ್‌ನಲ್ಲಿ ವಾಸಿಸುತ್ತಿದ್ದಾರೆ. ಅವರು  ತಮ್ಮ ಪತ್ನಿ ಎಸ್ತರ್ ಜೆನ್ನಿ ಅವರೊಂದುಗೂಡಿ ಸ್ವಿಟ್ಜರ್ಲೆಂಡ್‌ನಲ್ಲಿ ಭಾರತೀಯ ನೃತ್ಯ ಮತ್ತು ಯೋಗ ಕೇಂದ್ರ 'ಕಲಾಶ್ರೀ'ಯ  ಮೊದಲ ಶಾಲೆಯನ್ನು ತೆರೆದರು.  ಆ ಮೂಲಕ ಸ್ವಿಟ್ಜರ್ಲೆಂಡ್‌ನಲ್ಲಿ ಭಾರತೀಯ ಕಲೆ ಮತ್ತು ಸಂಸ್ಕೃತಿಯ  ಪ್ರವರ್ತಕರಾಗಿ ಕಾರ್ಯನಿರ್ವಹಿಸುತ್ತ ಬಂದಿದ್ದಾರೆ. ಕೇಶವ ಅವರು ಕಲಾಶ್ರೀ ನೃತ್ಯ ತಂಡದ ನಿರ್ದೇಶಕರಾಗಿ, ಸಾಂಪ್ರದಾಯಿಕ ಮತ್ತು ನವೀನ ನೃತ್ಯ ರೂಪಕಗಳನ್ನು ಸಂಯೋಜಿಸಿದ್ದಾರೆ. ಅನೇಕ ವೇದಿಕೆಗಳು ಮತ್ತು ಟೆಲಿವಾಹಿನಿಗಳಲ್ಲಿ ಕಾರ್ಯಕ್ರಮ ಪ್ರಸ್ತುತಪಡಿಸಿದ್ದಾರೆ.  ಸ್ವಿಟ್ಜರ್ಲೆಂಡ್, ಭಾರತ, ಜರ್ಮನಿ, ಆಸ್ಟ್ರಿಯಾ, ಇಂಗ್ಲೆಂಡ್, ಅಮೆರಿಕ, ಇಟಲಿ, ಫ್ರಾನ್ಸ್ ಮತ್ತು ಕುವೈತ್ ಸೇರಿದಂತೆ ಅನೇಕ ಕಡೆಗಳಲ್ಲಿ ಯಶಸ್ವಿಯಾಗಿ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ.  ಭಾರತ ಮತ್ತು ಸ್ವಿಟ್ಜರ್ಲೆಂಡ್ ನಡುವೆ ಸಾಂಸ್ಕೃತಿಕ ಮಧ್ಯವರ್ತಿಯಾಗಿ ಅವರ ನಿರಂತರ ಪ್ರಯತ್ನಗಳಿಗಾಗಿ ಅಪಾರ ಗೌರವವನ್ನು ಗಳಿಸಿದ್ದಾರೆ ಮತ್ತು ವೃತ್ತಿಜೀವನದಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.  ಅನೇಕ ಆಲ್ಮಮ್ ಮತ್ತು ಕಲಾಕೃತಿಗಳನ್ನು ರಚಿಸಿ ಹೆಸರಾಗಿದ್ದಾರೆ. ಅಪಾರ ಶಿಷ್ಯವೃಂದ ಮತ್ತು ಕಲಾಸಕ್ತರ ಆಶಯಗಳನ್ನು ಪೋಷಿಸುತ್ತ ಬಂದಿದ್ದಾರೆ. 

ಹಿರಿಯ ಸಾಧಕರಾದ ವಿದ್ವಾನ್ ದಾಸಪ್ಪ  ಕೇಶವ ಅವರಿಗೆ ಜನ್ಮದಿನದ ಶುಭಹಾರೈಕೆಗಳು.

Happy birthday to great artiste Vidwan Dasappa Keshava Sir 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ