ಮೆಹದಿ ಹಸನ್
ಮೆಹದಿ ಹಸನ್
ಮೆಹದಿ ಹಸನ್ ಮಹಾನ್ ಗಜಲ್ ಗಾಯಕರು. ಲತಾ ಮಂಗೇಶ್ಕರ್ ಅವರಿಂದ "ಭಗವಾನ್ ಕಾ ಸುರ್" ಎಂದು ಭಕ್ತಿಪೂರ್ವಕ ಪ್ರಶಂಸೆ ಪಡೆದಿದ್ದವರು. ಗಜಲ್ ಸಂಗೀತದಲ್ಲಿ ಅವರ ಪ್ರಭಾವ ಜಗಜಿತ್ ಸಿಂಗ್, ಸೋನು ನಿಗಮ್ ಅಂತಹ ಹಲವು ತಲೆಮಾರುಗಳನ್ನು ದಾಟಿ ನಡೆದಿವೆ. ಮೆಹದಿ ಹಸನ್ ತಮ್ಮ ಅದ್ಭುತ ಹಾಡುಗಾರಿಕೆಯಿಂದ ಶ್ರೋತೃಗಳನ್ನು ಮಂತ್ರಮುಗ್ಧರನ್ನಾಗಿಸುತ್ತಿದ್ದರು.
ಮೆಹದಿ ಹಸನ್ 1927ರ ಜುಲೈ 18ರಂದು ರಾಜಸ್ತಾನದ ಲುನಾ ಎಂಬ ಗ್ರಾಮದಲ್ಲಿ ಜನಿಸಿದರು. ಅವರ ಇಡೀ ವಂಶವೇ ಸಂಗೀತ ಸಾಗರದಲ್ಲಿ ತೇಲಾಡಿದ್ದು, ಹಸನ್ ಅವರು ಈ ವಂಶದ 16ನೇ ಪೀಳಿಗೆಯವರು. ಭಾರತ ಮತ್ತು ಪಾಕಿಸ್ತಾನ ವಿಭಾಗವಾದಾಗ ಪಾಕ್‌ಗೆ ತೆರಳಿದ್ದರಿಂದ ಪಾಕ್ ನೆಲವನ್ನೇ ಅವರ ಸಂಗೀತದ ಬೇರುಗಳು ಬಲವಾಗಿ ಹಿಡಿದುಕೊಂಡವು.
ಬಾಲ್ಯದಲ್ಲಿಯೇ ಗಜಲ್ ಹಾಡಲು ಪ್ರಾರಂಭಿಸಿದ ಹಸನ್ ಅವರು ತಮ್ಮ ಅಣ್ಣನೊಂದಿಗೆ ಕಚೇರಿಗಳನ್ನು ನೀಡಲು ಪ್ರಾರಂಭಿಸಿದ್ದರು. ಅವರು 20 ವರ್ಷದವರಿದ್ದಾಗ ಪಾಕಿಸ್ತಾನಕ್ಕೆ ತೆರಳಿದ ಮೇಲೆ ಭಾರೀ ಹಣಕಾಸಿನ ತೊಂದರೆಗೆ ಅವರು ಕುಟುಂಬ ಸಿಲುಕಿತು. ಆಗ ಬದುಕು ಸಾಗಿಸಲು ಸೈಕಲ್ ರಿಪೇರಿ ಕೆಲಸ ಮಾಡುತ್ತಲೇ ಹಾಡುಗಾರಿಕೆಯಲ್ಲಿ ತೊಡಗಿಕೊಂಡರು. 1957ರಲ್ಲಿ ಪಾಕಿಸ್ತಾನದ ರೇಡಿಯೋದಲ್ಲಿ ಅವರಿಗೆ ಹಾಡಲು ಸಿಕ್ಕ ಅವಕಾಶ ಅವರ ಅದೃಷ್ಟದ ಬಾಗಿಲನ್ನು ತೆರೆಯಿತು.
ನಂತರ ಅವರು ಹಿಂದೆ ತಿರುಗಿ ನೋಡಲಿಲ್ಲ. ಮುಂದೆ ಕಾರು ಮತ್ತು ಡೀಸೆಲ್ ಟ್ರಾಕ್ಟರ್ ಮೆಕ್ಯಾನಿಕ್ ಆಗಿ ಕೆಲಸ ನಿರ್ವಹಿಸಿದರೂ ಕೆಲ ಕಾಲದ ನಂತರ ಪೂರ್ಣಪ್ರಮಾಣದಲ್ಲಿ ಸಂಗೀತದಲ್ಲಿ ತೊಡಗಿಕೊಂಡರು. ಆರಂಭದಲ್ಲಿ ಉರ್ದು ಕಾವ್ಯದ ಮೇಲೆ ಅಪಾರ ಆಸಕ್ತಿ ಹೊಂದಿದ್ದ ಹಸನ್ ಗಜಲ್ ಹಾಡುಗಳನ್ನು ಆಗಾಗ ಹಾಡುತ್ತಿದ್ದರು. ಮುಂದೆ ಅವಕಾಶ ಹೆಚ್ಚಿದಂತೆಲ್ಲ ಗಜಲ್ ಕ್ಷೇತ್ರವನ್ನೇ ಪೂರ್ಣ ಪ್ರಮಾಣದಲ್ಲಿ ಅಪ್ಪಿಕೊಂಡರು. ಪಾಕಿಸ್ತಾನ ಚಲನಚಿತ್ರಗಳಲ್ಲಿ ಕೂಡ ಅವರು ಹಿನ್ನೆಲೆ ಗಾಯಕರಾಗಿ ಪ್ರಸಿದ್ಧಿ ಪಡೆದರು. ಮೆಹದಿ ಹಸನ್ ಭಾರತದ ನೆಲದಲ್ಲೂ ಕಾರ್ಯಕ್ರಮಗಳನ್ನು ನೀಡಿದ್ದರು.
ಎಷ್ಟೇ ಹಣ, ಗೌರವ ಗಳಿಸಿದರೂ ಅವರ ಆರೋಗ್ಯ ಅವರನ್ನು ಸಂಗೀತ ಕ್ಷೇತ್ರದಲ್ಲಿ ಮುಂದುವರಿಯಲು ಬಿಡಲಿಲ್ಲ. ಶ್ವಾಸಕೋಶ ಸೋಂಕಿನಿಂದ ಬಳಲುತ್ತಿದ್ದ ಅವರು 1999ರಲ್ಲಿ ಹಾಡುಗಾರಿಕೆಯಿಂದ ಹೊರಬರಬೇಕಾಯಿತು. ಅವರು ಪಾಕಿಸ್ತಾನ ಮಾತ್ರವಲ್ಲ ಭಾರತದಿಂದಲೂ ಅನೇಕ ಪ್ರಶಸ್ತಿ, ಗೌರವಗಳಿಗೆ ಭಾಜನರಾದರು. ಪಾಕಿಸ್ತಾನ ತಮಘಾ-ಇ-ಇಮ್ತಿಯಾಜ್ ಪ್ರಶಸ್ತಿ ನೀಡಿದರೆ, 1979ರಲ್ಲಿ ಭಾರತ ಸೈಗಲ್ ಪ್ರಶಸ್ತಿ ನೀಡಿ ಗೌರವಿಸಿತು.
ಮೆಹದಿ ಹಸನ್ 2012ರ ಜೂನ್ 13ರಂದು ನಿಧನರಾದರು.
On the birth anniversary of Ghazal singer Mehdi Hasan
ಕಾಮೆಂಟ್‌ಗಳು