ವಿಶ್ವಮೋಹನ್ ಭಟ್
ಪಂಡಿತ್ ವಿಶ್ವಮೋಹನ್ ಭಟ್
ಪಂಡಿತ್ ವಿಶ್ವಮೋಹನ್ ಭಟ್ ವಿಶ್ವಪ್ರಸಿದ್ಧ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಸಾಧಕರು. ಇವರು ಸಿತಾರ್, ವೀಣೆ ಹಾಗೂ ಗಿಟಾರ್ ಮಾಧುರ್ಯಗಳ ಸಂಯೋಗದ ತಮ್ಮದೇ ಆದ ಮೋಹನವೀಣೆಯನ್ನು ಆವಿಷ್ಕರಿಸಿದ್ದು ತಮ್ಮ ಸಂಗೀತ ಸುನಾದದಿಂದ ವಿಶ್ವದೆಲ್ಲೆಡೆಯಲ್ಲಿ ಸಂಗೀತ ಪ್ರಿಯರ ಮನಗೆದ್ದಿದ್ದಾರೆ.
ವಿಶ್ವಮೋಹನ್ ಭಟ್ 1950ರ ಜುಲೈ 27ರಂದು ಜನಿಸಿದರು. ಇವರು ರಾಜಾಸ್ಥಾನದ ಜಯಪುರದವರು. ಭಟ್ಟರ ತಂದೆ ಮನಮೋಹನ್ ಭಟ್ ಮತ್ತು ತಾಯಿ ಚಂದ್ರಕಲಾ ಭಟ್ ಸಂಗೀತ ಕಲಾವಿದರಾಗಿದ್ದು ಮಗನಿಗೆ ಸಂಗೀತದ ಜ್ಞಾನವನ್ನೆರೆದರು.
ವಿಶ್ವಮೋಹನ್ ಭಟ್ ಅವರ ಹಿರಿಯ ಮಗ ಸಲೀಲ್ ಭಟ್ ಮೋಹನ್ ವೀಣಾವಾದಕರಾಗಿ ಮತ್ತು ಸಾತ್ವಿಕ್ ವೀಣಾವಾದಕರಾಗಿ ಹೆಸರಾಗಿದ್ದಾರೆ. ಕಿರಿಯ ಮಗ ಸೌರಭ್ ಭಟ್ ಸಂಗೀತ ಸಂಯೋಜಕರಾಗಿದ್ದು ಚಲನಚಿತ್ರಗಳು, ಆಲ್ಬಂಗಳು, ಟಿವಿ ಧಾರಾವಾಹಿಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಅವರ ಸೋದರಳಿಯ ಕೃಷ್ಣ ಭಟ್ ಅವರು ಸಿತಾರ್ ಮತ್ತು ತಬಲಾ ನುಡಿಸುತ್ತಾರೆ. ಅವರು ಅಹಮದಾಬಾದ್‌ನ ಸಪ್ತಕ್ ಸ್ಕೂಲ್ ಆಫ್ ಮ್ಯೂಸಿಕ್‌ನ ಸಹ ಸಂಸ್ಥಾಪಕರಾದ ಮಂಜು ಮೆಹ್ತಾ ಅವರ ಕಿರಿಯ ಸಹೋದರ ಮತ್ತು ಪಂಡಿತ್ ರವಿಶಂಕರ್ ಅವರಿಂದ ತರಬೇತಿ ಪಡೆದ ಶಿಷ್ಯರಾಗಿದ್ದಾರೆ.
ವಿಶ್ವಮೋಹನ್ ಭಟ್ ಗ್ರ್ಯಾಮಿ ಪ್ರಶಸ್ತಿ ಪಡೆದು 'ವಾಟರ್ ಲಿಲಿ ಅಕೌಸ್ಟಿಕ್ಸ್ ಲೇಬಲ್'ನಲ್ಲಿ ಬಿಡುಗಡೆಯಾದ 'ಆಲ್ಬಂ ಎ ಮೀಟಿಂಗ್ ಬೈ ದಿ ರಿವರ್ ವಿತ್ ರೈ ಕೂಡರ್' ಮೂಲಕ ವಿಶ್ವಪ್ರಸಿದ್ಧರಾದರು. ತಾಜ್ ಮಹಲ್, ಬೆಲಾ ಫ್ಲೆಕ್ ಮತ್ತು ಜೆರ್ರಿ ಡೌಗ್ಲಾಸ್‌ನಂತಹ ಪಾಶ್ಚಾತ್ಯ ಕಲಾವಿದರೊಂದಿಗೆ ಸಂಗೀತ ಸಾಂಸ್ಕೃತಿಕ ಸಹಯೋಗಗಳಿಗೆ ಹೆಸರುವಾಸಿಯಾಗಿದ್ದಾರೆ. ಎರಿಕ್ ಕ್ಲಾಪ್ಟನ್ ಆಯೋಜಿಸಿದ 2004 ಕ್ರಾಸ್‌ರೋಡ್ಸ್ ಗಿಟಾರ್ ಫೆಸ್ಟಿವಲ್‌ನಲ್ಲಿ ಕಾಣಿಸಿಕೊಂಡಂತಹ ಗೌರವ ಅವರದಾಗಿತ್ತು. 2016ರಲ್ಲಿ ಗಿಟಾರ್ ವಾದಕ ಮತ್ತು ಗಿಟಾರ್ಮಾಂಕ್ ಸಂಸ್ಥಾಪಕ ಕಪಿಲ್ ಶ್ರೀವಾಸ್ತವ ಅವರೊಂದಿಗೆ ಇವರ ಪ್ರಸಿದ್ಧ "ಮೆರ್ರಿ ಲವ್ ರೈನ್" ಆಲ್ಬಮ್ ಬಿಡುಗಡೆಯಾಯಿತು. ಇವರಿಗೆ ವಿಶ್ವದಾದ್ಯಂತ ಪ್ರಸಿದ್ಧ ಸಾಧಕ ಶಿಷ್ಯರಿದ್ದಾರೆ.
ಪಂಡಿತ್ ವಿಶ್ವಮೋಹನ್ ಭಟ್ ಅವರ ಶುದ್ಧ ಶಾಸ್ತ್ರೀಯ ಸಂಗೀತ ಕೂಡ ಎಲ್ಲೆಡೆ ಜನಪ್ರಿಯ. ವಿಶ್ವದೆಲ್ಲೆಡೆ ಅವರ ಸಂಗೀತದ ಸುನಾದ ಹಲವು ರೂಪಗಳಲ್ಲಿ ಹರಿಯುತ್ತ ಸಾಗಿದೆ.
ವಿಶ್ವಮೋಹನ್ ಭಟ್ ಅವರಿಗೆ ಪದ್ಮಶ್ರೀ, ಪದ್ಮಭೂಷಣ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಪುಟ್ಟರಾಜ ಗವಾಯಿ ಸನ್ಮಾನ, ಆಳ್ವಾಸ್ ನುಡಿಸಿರಿ ಗೌರವ ಸೇರಿದಂತೆ ಅನೇಕ ಗೌರವಗಳು ಸಂದಿವೆ.
On the birthday of great musician Pandit Vishwa Mohan Bhatt
ಕಾಮೆಂಟ್‌ಗಳು