ವಾಸುದೇವ ಶರಣ ಅಗ್ರವಾಲ
ವಾಸುದೇವ ಶರಣ ಅಗ್ರವಾಲ
ವಾಸುದೇವ ಶರಣ ಅಗ್ರವಾಲ ಪ್ರಸಿದ್ಧ ಹಿಂದಿ ಲೇಖಕರು ಹಾಗೂ ಪುರಾತತ್ತ್ವ ಸಂಶೋಧಕರು.
ವಾಸುದೇವ ಶರಣ ಅಗ್ರವಾಲ ಅವರು ಉತ್ತರಪ್ರದೇಶದ ಮೀರಠ್ ಜಿಲ್ಲೆಯ ಗಾಜಿಯಾಬಾದ್ ತಹಸೀಲಿನ ಖೇಡಾ ಎಂಬ ಹಳ್ಳಿಯಲ್ಲಿ 1904ರಲ್ಲಿ ಜನಿಸಿದರು. ತಂದೆ ಗೋಪಿನಾಥ್. ತಾಯಿ ಸುಖದೇ. ಇವರ ಪ್ರಾಥಮಿಕ ವಿದ್ಯಾಭ್ಯಾಸ ಖೇಡಾದ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ವಾಸುದೇವ ಶರಣ ಅಗ್ರವಾಲರಿಗೆ 1916ರಲ್ಲಿ ಪಂಡಿತ ಜಗನ್ನಾಥರ ಪರಿಚಯವಾಗಿ ಅವರಲ್ಲಿ ಸಂಸ್ಕೃತ, ಅದರಲ್ಲೂ ವಿಶೇಷವಾಗಿ ಪಾಣಿನಿಯ ಅಷ್ಟಾಧ್ಯಾಯೀಯನ್ನು ಅಭ್ಯಸಿಸಿದರು. ಇವರು ಕಾಶಿ ಮತ್ತು ಲಖನೌದಲ್ಲಿ ಉಚ್ಚ ಶಿಕ್ಷಣವನ್ನು ಪಡೆದರು. ಕಾಶೀ ಹಿಂದು ವಿಶ್ವವಿದ್ಯಾಲಯದ ಬಿ.ಎ. ಪದವಿಯನ್ನು (1927), ಲಖನೌದಲ್ಲಿ ಎಂ.ಎ. ಪದವಿಯನ್ನು ಪ್ರಥಮ ದರ್ಜೆಯಲ್ಲಿ ಪಡೆದರು(1929). ಅನಂತರ ಎಲ್‍ಎಲ್.ಬಿ ಪದವಿ ಪಡೆದರು.
ಇವರು ತಮ್ಮ ಪಾಣಿನಿ ಹ್ಯಾಸ್ ಎ ಸೋರ್ಸ್ ಆಫ್ ಇಂಡಿಯನ್ ಹಿಸ್ಟರಿ ಎಂಬ ಸಂಶೋಧನ ಪ್ರಬಂಧವನ್ನು ರಾಧಾ ಕುಮುದ ಮುಖರ್ಜಿಯವರ ಮಾರ್ಗದರ್ಶನದಲ್ಲಿ (1941) ಪ್ರಸ್ತುತ ಪಡಿಸಿದರು. ಈ ಪ್ರಬಂಧ ಇಂಗ್ಲಿಷಿನಲ್ಲಿ ಇಂಡಿಯ ಹ್ಯಾಸ್ ನೋನ್ ಟು ಪಾಣಿನಿ ಎಂಬ ಹೆಸರಿನಲ್ಲಿ ಅಚ್ಚಾಗಿದೆ. ಈ ಪ್ರಬಂಧದ ಪೂರ್ವಭಾಗಕ್ಕೆ (1941) ಪಿಎಚ್.ಡಿ. ಪದವಿಯೂ ಇದರ ಉತ್ತರಭಾಗಕ್ಕೆ (1946) ಡಿ.ಲಿಟ್. ಪದವಿಯೂ ಸಂದಿತು.
ವಾಸುದೇವ ಶರಣ ಅಗ್ರವಾಲರು ಮಥುರಾದ ಪುರಾತತ್ತ್ವ ಸಂಗ್ರಹಾಲಯದ ಅಧ್ಯಕ್ಷರೂ (1931-39) , ಲಖನೌ ಸಂಗ್ರಹಾಲಯದ ಅಧ್ಯಕ್ಷರೂ (1940-46), ದೆಹಲಿಯ ಸೆಂಟ್ರಲ್ ಏಷ್ಯನ್ ಆ್ಯಕ್ಟಿವಿಟೀಸ್ ಮ್ಯೂಸಿಯಮ್‍ನ ಸಹಾಯಕ ಅಧ್ಯಕ್ಷರೂ (1946), ಅನಂತರ ಅಧ್ಯಕ್ಷರೂ ಆಗಿ (1947) ಕಾರ್ಯನಿರ್ವಹಿಸಿದರು. ಅನಂತರ ಇವರು ಕಾಶೀ ಹಿಂದು ವಿಶ್ವವಿದ್ಯಾಲಯದ ಅಧೀನದಲ್ಲಿರುವ ಭಾರತೀ ಮಹಾವಿದ್ಯಾಲಯದಲ್ಲಿ ಸ್ಥಾಪತ್ಯ ವಿಭಾಗದ ಪ್ರಾಧ್ಯಾಪಕರೂ, ಮುಖ್ಯಸ್ಥರೂ ಆಗಿ ಕಾರ್ಯನಿರ್ವಹಿಸಿದರು (1951-66).
ಪಾಣಿನಿ ಕಾಲೀನ್ ಭಾರತ ವರ್ಷ್ ವಾಸುದೇವ ಶರಣ ಅಗ್ರವಾಲರ ಮೇರು ಕೃತಿ. ಈ ಕೃತಿಯಲ್ಲಿ ಪಾಣಿನೀಕೃತ ಅಷ್ಟಾಧ್ಯಾಯೀಯ ಸಾಂಸ್ಕೃತಿಕ ಅಧ್ಯಯನವಿದೆ. ಪಾಣಿನಿಕಾಲೀನ ಭೂಗೋಳ, ಸಾಮಾಜಿಕ ಜೀವನ, ಆರ್ಥಿಕಸ್ಥಿತಿ, ಶಿಕ್ಷಣ ಮತ್ತು ಸಾಹಿತ್ಯ, ಧರ್ಮ ಮತ್ತು ದರ್ಶನ, ರಾಜ್ಯತಂತ್ರ ಮತ್ತು ಶಾಸನಗಳನ್ನು ಕುರಿತ ವಿಸ್ತೃತ ವಿವೇಚನೆಯಿದೆ.
ಹರ್ಷಚರಿತ್-ಏಕ್ ಸಾಂಸ್ಕೃತಿಕ ಅಧ್ಯಯನ್ ಅಗ್ರವಾಲ ಅವರ ಮತ್ತೊಂದು ಕೃತಿ. ಇದು ಡೀಡ್ಸ್ ಆಫ್ ಹರ್ಷ ಎಂಬ ಶೀರ್ಷಿಕೆಯಲ್ಲಿ ಇಂಗ್ಲಿಷಿಗೆ ಅನುವಾದವಾಗಿದೆ. ಕಾದಂಬರಿ-ಏಕ್ ಸಾಂಸ್ಕೃತಿಕ್ ಅಧ್ಯಯನ್ ಇವರ ಇನ್ನೊಂದು ಗ್ರಂಥ. ಭಾರತ-ಸಾವಿತ್ರೀ ಮೂರು ಖಂಡಗಳಲ್ಲಿ ಅಚ್ಚಾದ ಒಂದು ಬೃಹತ್ ಕೃತಿ. ಮಹಾಭಾರತದ ಸಾಂಸ್ಕೃತಿಕ ಅಧ್ಯಯನಕ್ಕೆ ಈ ಕೃತಿ ಉಪಯುಕ್ತವಾದುದ್ದು. ಉರು-ಜ್ಯೋತಿಯಲ್ಲಿ ವೈದಿಕ ಸಾಹಿತ್ಯವನ್ನು ಕುರಿತ ಚಿಂತನೆಯಿದೆ(1937). ಪದ್ಮಾವತ್ ಮೂಲ್ ಔರ್ ಸಂಜೀವನೀ ವ್ಯಾಖ್ಯಾ ಇವರ ಒಂದು ಮಹತ್ತ್ವಪೂರ್ಣ ಕೃತಿ. ಉರು-ಜ್ಯೋತಿ (1937); ಪೃಥಿವೀ ಪುತ್ರ (1949); ಕಲಾ ಔರ್ ಸಂಸ್ಕೃತಿ (1952); ಕಲ್ಪವೃಕ್ಷ (1960); ಭಾರತ್ ಕೀ ಮೌಲಿಕ್ ಏಕತಾ (1954); ವೇದ-ವಿದ್ಯಾ (1959); ವೇದ-ರಶ್ಮಿ (1964) ಮತ್ತು ವಾಗ್ಧಾರಾ (1966)-ಇವು ಇವರ ನಿಬಂಧ ಸಂಕಲನಗಳು.
ಗ್ರಂಥಸಂಪಾದನೆಯಲ್ಲಿಯೂ ಅಗ್ರವಾಲರು ಸಿದ್ಧಹಸ್ತರಾಗಿದ್ದರು. ಪದ್ಮಾವತ್ ಮತ್ತು ಕೀರ್ತಿಲತಾ ಮುಂತಾದ ಕಾವ್ಯಗಳನ್ನು ಸಂಪಾದಿಸಿದ್ದರು. ಇವರ ಪತ್ರಸಾಹಿತ್ಯವೂ ಗಮನಾರ್ಹವಾದದ್ದು. ಹಿಂದಿ, ಇಂಗ್ಲಿಷ್, ಸಂಸ್ಕೃತದಲ್ಲಿ ಇವರು ಬರೆದ 316 ಪತ್ರಗಳನ್ನು ವೃಂದಾವನದಾಸರು ಸಂಪಾದಿಸಿ ಪ್ರಕಟಿಸಿದ್ದಾರೆ. ಇವರ ಪದ್ಮಾವತ್-ಮೂಲ್ ಔರ್ ಸಂಜೀವನೀ ವ್ಯಾಖ್ಯಾ ಗ್ರಂಥವನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಹಿಂದಿಯ ಶ್ರೇಷ್ಠ ಕೃತಿಯೆಂದು ಪುರಸ್ಕರಿಸಿತು (1956). ಇವರ ಮಾರ್ಕಂಡೇಯ ಪುರಾಣ್-ಏಕ್ ಸಾಂಸ್ಕೃತಿಕ್ ಅಧ್ಯಯನ್ ಗ್ರಂಥವನ್ನು ಉತ್ತರ ಪ್ರದೇಶ ಸರ್ಕಾರ ಪುರಸ್ಕರಿಸಿತು (1962). ಇವರ ಹರ್ಷ ಚರಿತ್-ಏಕ್ ಸಾಂಸ್ಕೃತಿಕ್ ಅಧ್ಯಯನ್ ಗ್ರಂಥಕ್ಕೆ ಪ್ರಯಾಗದ ಹಿಂದಿ ಸಾಹಿತ್ಯ ಸಮ್ಮೇಳನ ಮಂಗಲಾ ಪ್ರಸಾದ್ ಪಾರಿತೋಷಿಕ ನೀಡಿ ಗೌರವಿಸಿತು(1953).
ವಾಸುದೇವ ಶರಣ ಅಗ್ರವಾಲರು 1966 ಜುಲೈ 27ರಂದು ನಿಧನರಾದರು.
On Remembrance Day of greatest scholar Vasudev Sharana Agrawala
Vaudev Sharan Agarwal
ಕಾಮೆಂಟ್‌ಗಳು