ರಂಗನಾಥರಾವ್
ಎಂ. ಆರ್. ರಂಗನಾಥರಾವ್
ರಂಗನಾಥರಾವ್ ಗೊಂಬೆ ಪ್ರಪಂಚದ ಮಹಾನ್ ವ್ಯಕ್ತಿ ಎನಿಸಿದ್ದವರು. ಅವರು ನಶಿಸಿ ಹೋಗಿದ್ದ ಕರ್ನಾಟಕದ ಜಾನಪದ ಕಲೆಯಾದ ಸಲಾಕೆಗೊಂಬೆ ಕಲೆಗೆ ಮರು ಹುಟ್ಟು ನೀಡಿದವರು.
ರಂಗನಾಥರಾವ್ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾಗಡಿ ತಾಲ್ಲೂಕಿನ ದೊಡ್ಡಮುಡಿಗೆರೆ ಎಂಬಲ್ಲಿ 1933ರ ಮೇ 10ರಂದು ಜನಿಸಿದರು. ತಂದೆ ಎಂ. ರಂಗಯ್ಯ. ತಾಯಿ ಪುಟ್ಟಲಕ್ಷ್ಮಮ್ಮ. ಆಚಾರ್ಯ ಪಾಠಶಾಲಾ ಸಂಜೆ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದ ರಂಗನಾಥರಾವ್ ಹೈಸ್ಕೂಲು ಉಪಾಧ್ಯಾಯರಾಗಿ ಉದ್ಯೋಗ ಆರಂಭಿಸಿದರು.
ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ವಿಚಾರಗೋಷ್ಠಿ ಒಂದರಲ್ಲಿ ಕಮಲಾದೇವಿ ಚಟ್ಟೋಪಾಧ್ಯಾಯ ಅವರು ಸಲಾಕೆಗೊಂಬೆ ಬಗ್ಗೆ ಮಾಡಿದ ಉಪನ್ಯಾಸ ರಂಗನಾಥರಾವ್ ಅವರಿಗೆ ಮನ ಮುಟ್ಟಿತು. ಆ ಉಪನ್ಯಾಸದಲ್ಲಿ ಕೇಳಿ ಬಂದ ಪ್ರಧಾನ ಹೆಸರು ಸ್ವಯಂ ರಂಗನಾಥರಾವ್ ಅವರ ತಾತನವರೇ ಆದ ನರಸಿಂಹರಾಯರದಾಗಿತ್ತು. ಈ ಪ್ರೇರಣೆಯಿಂದ ರಂಗನಾಥರಾವ್ ತಮ್ಮ ತಾತನವರು ಒಮ್ಮೆ ಪ್ರಸಿದ್ಧಿಗೊಳಿಸಿದ ಕಲೆಯನ್ನು ಉಳಿಸಲು ಪಣತೊಟ್ಟರು. ಗೊಂಬೆಗಳ ಬಗ್ಗೆ ಯಾವ ತಿಳುವಳಿಕೆಯೂ ಇಲ್ಲದಿದ್ದರೂ ಗೊಂಬೆಗಳ ಬಗ್ಗೆ ತಲಸ್ಪರ್ಶಿ ಅಧ್ಯಯನ ಕೈಗೊಂಡರು. ಅಜ್ಜನ ಡೈರಿಯಿಂದ ಬಹಳಷ್ಟು ಮಾಹಿತಿ ಪಡೆದು ಗೊಂಬೆಗಳ ನಿರ್ಮಾಣ ಮತ್ತು ಬಣ್ಣದ ಬಳಕೆ ಕುರಿತಾಗಿ ಅಭ್ಯಾಸವನ್ನು ಕೈಗೊಂಡರು.
ಹೀಗೆ ರಂಗನಾಥರಾಯರಿಗೆ ಗೊಂಬೆಯಾಟದ ಬಗ್ಗೆ ಆಸ್ಥೆಮೂಡಿ ತಮ್ಮ ವೃತ್ತಿಗೆ ರಾಜೀನಾಮೆ ನೀಡಿ ಗೊಂಬೆಯಾಟ ಕಲಿಯಲಾರಂಭಿಸಿದರು. ಇದಕ್ಕಾಗಿ ನಾಟಕ ತರಬೇತಿ ಪಡೆದು, ಬಿ.ವಿ. ಕಾರಂತರೊಡನೆ ರಂಗ ಪರಿಚಯ ಮಾಡಿಕೊಂಡರು. ಹಲವಾರು ರಂಗ ಸಂಸ್ಥೆಗಳಿಗೆ ನಾಟಕ ನಿರ್ದೇಶನ ಮಾಡಿದರು.
ರಂಗನಾಥರಾಯರು ಮೊದಲ ರಂಗ ಪ್ರವೇಶಕ್ಕೆ ಆಯ್ಕೆ ಮಾಡಿಕೊಂಡದ್ದು ಕೃಷ್ಣ ಪಾರಿಜಾತ ಪ್ರಸಂಗವನ್ನು. ರಾಜಾಜಿನಗರದ ಕುಮಾರವ್ಯಾಸ ಮಂಟಪದಲ್ಲಿ ಮೊದಲ ಪ್ರಯೋಗ ಮಾಡಿದರು. ಅಂದೇ 'ರಂಗ ಪುತ್ಥಳಿ' ಸಂಸ್ಥೆ ಹುಟ್ಟು ಪಡೆಯಿತು. ನಂತರ ಕೃಷ್ಣತುಲಾಭಾರ, ಗಿರಿಜಾ ಕಲ್ಯಾಣ ಹೀಗೆ ಅನೇಕ ಗೊಂಬೆಯಾಟ ಕಥೆಗಳ ರಚನೆ ಮಾಡಿದರು. 1981ರಲ್ಲಿ ನಡೆದ ರಾಷ್ಟ್ರೀಯ ಸೂತ್ರದ ಗೊಂಬೆಯಾಟ ಸಮ್ಮೇಳನದಲ್ಲಿ ಭಾಗಿಯಾದರು.
ರಂಗನಾಥರಾಯರಿಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ ಸಂದಿತು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಂದಿತು. ಜಪಾನಿನಲ್ಲಿ ನಡೆದ ಗೊಂಬೆಯಾಟದಲ್ಲಿ ರಂಗ ಪುತ್ಥಳಿಗೆ ಆಹ್ವಾನ ಬಂತು. ವಿಶ್ವಮಾನ್ಯ ಸದಸ್ಯತ್ವ ಪ್ರಾಪ್ತವಾಯಿತು. ಶ್ರೇಷ್ಠ ಸಾಂಪ್ರದಾಯಕ ಮೇಳವೆಂಬ ಪ್ರಶಸ್ತಿ ಸಂದಿತು.
ದೇಶದಾದ್ಯಂತ ರಂಗನಾಥರಾಯರ ರಂಗ ಪುತ್ಥಳಿ ಕಾರ್ಯಕ್ರಮಗಳು ಜನಪ್ರಿಯಗೊಂಡು ವಿದೇಶಗಳಿಗೂ ವ್ಯಾಪಿಸಿತು. ವಿದೇಶಿಯರಿಗೆ ಗೊಂಬೆಯಾಟ ತಯಾರಿಕೆ ಬಗ್ಗೆ ಕಮ್ಮಟ ನಡೆಸಿದರು. ಕ್ಯಾಲಿಫೋರ್ನಿಯಾ, ಆಸ್ಟ್ರಿಯಾಗಳಲ್ಲಿ ಗೊಂಬೆಪ್ರದರ್ಶನ ನಡೆಸಿದರು. ಸ್ವಿಟ್ಜರ್‌ಲ್ಯಾಂಡ್‌ನ ದಿ ಸ್ವಿಸ್ ಪಪೆಟ್ ಮ್ಯೂಸಿಯಂ ಕೌನ್ಸಿಲರ್ ಆಗಿ ಮೂರು ವರ್ಷ ಸೇವೆ ಸಲ್ಲಿಸಿದರು. ಪೋಲೆಂಡ್ ಸಾಂಸ್ಕೃತಿಕ ಉತ್ಸವದಲ್ಲಿ ಭಾಗಿಯಾದರು. ಲಂಡನ್, ಜಪಾನ್, ಚೀನಾ, ಸ್ವಿಸ್ ಮ್ಯೂಸಿಯಂಗಳಲ್ಲಿ ಗೊಂಬೆಗಳು ಸ್ಥಾನ ಪಡೆದವು. ಹೀಗೆ ಗೊಂಬೆಯಾಟ ಕಲೆ ಪ್ರಸಿದ್ಧಿ ಪಡೆಯಿತು.
ರಂಗನಾಥರಾಯರ ಅನೇಕ ಶಿಷ್ಯರೂ ಕೂಡಾ ಈ ಕಲೆಯನ್ನು ಬೆಳಗಿಸುತ್ತಾ ತಾವೂ ಪ್ರಸಿದ್ಧಿ ಪಡೆದಿದ್ದಾರೆ. ರಂಗನಾಥರಾಯರ ಪುತ್ರರುಗಳಾದ ಎಂ. ಆರ್. ಶ್ರೀನಿವಾಸ್ ಮತ್ತು ಎಂ. ಆರ್. ವಿಜಯ್ ಅವರುಗಳು ಸಹಾ ಕಳೆದ ನಾಲ್ಕು ದಶಕಗಳಿಂದ ಈ ಕಾಯಕದಲ್ಲಿ ಶ್ರಮಿಸುತ್ತ ಬಂದಿದ್ದಾರೆ.
ಮಹಾನ್ ಕಲಾವಿದ ಎಂ. ಆರ್. ರಂಗನಾಥರಾವ್ ಅವರು 2022ರ ಜುಲೈ 22ರಂದು ಈ ಲೋಕವನ್ನು ಅಗಲಿದರು. ಅವರು ಅಗಲಿದಾಗ ನಮ್ಮ ಸುದ್ದಿಲೋಕ ಅವರನ್ನು ಮರೆವಷ್ಟು ಕುರುಡಾಗಿತ್ತು.
On Remembrance Day of great puppeteer M.R. Ranganatha Rao 🌷🙏🌷
ಕಾಮೆಂಟ್‌ಗಳು