ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಪಟ್ಟಮ್ಮಾಳ್


 ಡಿ. ಕೆ. ಪಟ್ಟಮ್ಮಾಳ್


ಡಿ. ಕೆ. ಪಟ್ಟಮ್ಮಾಳ್ ಕರ್ನಾಟಕ ಶಾಸ್ತ್ರೀಯ ಸಂಗೀತದ ಮಹಾನ್ ಸಾಧಕಿ. 

ಪಟ್ಟಮ್ಮಾಳ್ ಅವರು  1919ರ ಮಾರ್ಚ್ 19ರಂದು ಜನಿಸಿದರು. 2009ರ ಜುಲೈ 16ರಂದು ನಿಧನರಾದಾಗ ಅವರಿಗೆ 90 ವರ್ಷ.  ಅವರು ಚಲನಚಿತ್ರಗಳಲ್ಲಿನ ಹಿನ್ನಲೆ ಗಾಯನದಲ್ಲಿ ಸಹಾ ಅಭಿಮಾನಿಗಳನ್ನು ಮೋಡಿ ಮಾಡಿದ್ದರು.

ಪಟ್ಟಮ್ಮಾಳ್ ಅವರು ತಮಿಳುನಾಡಿನ ಕಾಂಚೀಪುರದ ಸಂಪ್ರದಾಯಸ್ಥ ಕುಟುಂಬದಲ್ಲಿ ಜನಿಸಿದರು.  ತಂದೆಯವರು, ಧಮಾಳ್ ಕೃಷ್ಣಸ್ವಾಮಿ ದೀಕ್ಷಿತರು. ಸಂಗೀತದಲ್ಲಿ ಆಸ್ಥೆಯುಳ್ಳವರು.  ಅವರು ರಾಗವಾಗಿ ಪಠಿಸುತ್ತಿದ್ದ ಸಂಸ್ಕೃತ ಶ್ಲೋಕಗಳು ಮತ್ತು ತ್ಯಾಗರಾಜ ಆರಾಧನೆಯ ಸಮಯದಲ್ಲಿ ಪ್ರಸಿದ್ಧ ನೈನಾ ಪಿಳ್ಳೆಯವರು ನಡೆಸಿಕೊಡುತ್ತಿದ್ದ ಸಂಗೀತ ಕಚೇರಿಗಳು ಬಾಲಕಿ ಪಟ್ಟಮ್ಮಾಳ್ ಮೇಲೆ ಪ್ರಭಾವ ಬೀರಿದವು.  ಅಂದಿನ ದಿನದಲ್ಲಿ ಬ್ರಾಹ್ಮಣ ಕುಟುಂಬದ ಹೆಣ್ಣುಮಕ್ಕಳಿಗೆ ಗುರುಕುಲ ವ್ಯವಸ್ಥೆಯಲ್ಲಿ ಸಂಗೀತ ಕಲಿಕೆಯಲ್ಲಿ ಪಾಲ್ಗೊಳ್ಳುವ ಅವಕಾಶವಿರಲಿಲ್ಲ.  ಸಂಗೀತ ಪ್ರಧಾನ ಕುಟುಂಬ ಕೂಡಾ ಅವರದ್ದಾಗಿರಲಿಲ್ಲ.  ಹೀಗಾಗಿ ಅವರು ಸ್ವರ ಪ್ರಸ್ತಾರದ ಪಾಠಗಳನ್ನು ಕ್ರಮಬದ್ಧವಾಗಿ ಕಲಿಯಲಿಕ್ಕೆ ಅವಕಾಶವಾಗಲಿಲ್ಲ.  ತಾವು ಸಂಗೀತ ಕಚೇರಿಗಳಲ್ಲಿ ಗಮನವಾಗಿ ಕೇಳಿ ಕ್ಲಿಷ್ಟಕರವಾದ ಸಂಗೀತ ಕೃತಿಗಳ ಪದ ಸರಣಿ ಮತ್ತು ರಾಗಾಲಾಪನೆಗಳ ಕ್ರಮವನ್ನು ಗುರುತು ಮಾಡಿಕೊಂಡು ಮನನ ಮಾಡುತ್ತಿದ್ದರಂತೆ.  ಅವರ ಸಹೋದರ  ಈ ಕಾರ್ಯದಲ್ಲಿ ಜೊತೆಗೂಡುತ್ತಿದ್ದ.    ಅವರು ಪ್ರಥಮ ಕಚೇರಿ ನೀಡುವವರೆಗೆ ಅವರು ಪಕ್ಕವಾದ್ಯದ ಜೊತೆ ಎಂದೂ ತಾಲೀಮು ನಡೆಸಿರಲಿಲ್ಲವಂತೆ.  ಇದೆಲ್ಲಾ ಹೇಗೆ ಸಾಧ್ಯವಾಯಿತು ಎಂದರೆ  ಎಲ್ಲಾ ದೈವ ಕೃಪೆ ಮತ್ತು ಆಂತರ್ಯ ಪ್ರೇರಣೆ ಎನ್ನುತ್ತಿದ್ದರು.

ಡಿ.ಕೆ. ಪಟ್ಟಮ್ಮಾಳ್ ಅವರ ಪ್ರಾರಂಭಿಕ ಗುರುಗಳು ಹೀಗೆ ಎಂದು ಹೆಸರಿಸಲು ಸಿಕ್ಕುವವರಲ್ಲ.  ಅಲ್ಲಲ್ಲಿ ಕೆಲವರು ತಮಗೆ ಗೊತ್ತಿದ್ದನ್ನು ತಿಳಿಸುತ್ತಿದ್ದರು.  ಅವರ ಶಾಲೆಯ ಮುಖ್ಯೋಪಾಧ್ಯಾಯಿನಿಯವರು ಈಕೆಯಲ್ಲಿದ್ದ ಪ್ರತಿಭೆಯನ್ನು ಗುರುತಿಸಿ ಸಂಗೀತ ಪರೀಕ್ಷೆಯಲ್ಲಿ ಪಾಲ್ಗೊಳ್ಳಲು ಉತ್ತೇಜನ ನೀಡಿದರು.  ಪುಟ್ಟ ಒಂಭತ್ತು ವರ್ಷದ ಹುಡುಗಿ ಪಟ್ಟಮ್ಮಾಳ್ ‘ಸುಬ್ರಹ್ಮಣ್ಯ ನಮಸ್ತೆ’ ಹಾಡಿದ ರೀತಿಯನ್ನು ಕೇಳಿ ಚಕಿತರಾದ ಅಂದಿನ ಪರೀಕ್ಷಕ ಮುತ್ತುಸ್ವಾಮಿ ದೀಕ್ಷಿತರ ಮೊಮ್ಮಗ ಅಂಬಿ ದೀಕ್ಷಿತರು ತಾವೇ ಸಂಗೀತ ಪಾಠ ಹೇಳಿ ಕೊಡಲು ಮುಂದಾದರು.  ಆದರೆ ಮದ್ರಾಸಿನಲ್ಲಿ ಹೆಚ್ಚು ದಿನದ ವಾಸ್ತವ್ಯ ಅಧ್ಯಾಪನದಿಂದ ಜೀವನ ನಡೆಸುತ್ತಿದ್ದ ಡಿ. ಕೆ ಪಟ್ಟಮ್ಮಾಳ್ ಅವರ ತಂದೆಯವರಿಗೆ  ಸಾಧ್ಯವಿಲ್ಲದ್ದರಿಂದ ಅದು ಕೆಲವೇ ದಿನಗಳಿಗೆ ಸೀಮಿತಗೊಂಡಿತು.  ನಂತರದ ದಿನಗಳಲ್ಲಿ ಡಿ. ಕೆ. ಪಟ್ಟಮ್ಮಾಳ್ ಅವರಿಗೆ ಟಿ ಎಲ್ ವೆಂಕಟರಮಣ ಅಯ್ಯರ್ ಅವರ ಮಾರ್ಗದರ್ಶನ ದೊರೆಯಿತು.

ಪಟ್ಟಮ್ಮಾಳ್ ಅವರು ತಮ್ಮ ಇಂಪಾದ ಕಂಠದಿಂದ ಮುತ್ತುಸ್ವಾಮಿ ದೀಕ್ಷಿತರು ಹಾಗೂ ಇನ್ನಿತರರ ಕೃತಿಗಳನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದರು. ದೇಶ ಭಕ್ತಿ ತುಂಬಿದ ಕ್ರಾಂತಿಕವಿ ಸುಬ್ರಹ್ಮಣ್ಯ ಭಾರತಿಯವರ ಕೆಲವು ರಚನೆಗಳನ್ನು ಪಟ್ಟಮ್ಮಾಳ್ ಅವರಿಂದ ಕೇಳಿದಾಗ ಆಗುತ್ತಿದ್ದ ಆನಂದ ಅನುಪಮ ಮತ್ತು ಅವರ್ಣನೀಯವೆಂದು ಸಂಗೀತಜ್ಞ ರಸಿಕರ ಅಭಿಪ್ರಾಯ.  ಪಾಪನಾಶಂ ಶಿವಂ ಅವರ ಕೃತಿರಚನೆಗಳನ್ನೂ ಹಾಗೆಯೇ ಹಾಡಿ ಅವಕ್ಕೆ ಮೆರುಗು ತುಂಬಿದ್ದರು. 'ದೇಶಭಕ್ತಿ' ಮತ್ತು 'ದೈವಭಕ್ತಿ'  ಗೀತೆಗಳು ಅವರಿಗೆ ಪ್ರಿಯವಾಗಿದ್ದವು. ದಾಸ ಸಾಹಿತ್ಯದ ಹಲವಾರು ಗೀತೆಗಳನ್ನು ಸಹಾ ಸ್ಪಷ್ಟವಾಗಿ ಹಾಡುತ್ತಿದ್ದರು.   ಗೀತೆಗಳಲ್ಲಿನ ಅಂತರ್ಭಾವವನ್ನು ಆತ್ಮೀಕರಿಸದೆ ಅವರು ಯಾವುದೇ ಹಾಡುಗಳನ್ನೂ ಹಾಡುತ್ತಿರಲಿಲ್ಲ.  ಸಿನಿಮಾ ಕ್ಷೇತ್ರದಲ್ಲಿ ಸಾಂದರ್ಭಿಕವಾಗಿ ಬರುವ ಪ್ರಣಯ ಗೀತೆಗಳನ್ನು ಅವರು ಹಾಡಲು ಒಪ್ಪಲಿಲ್ಲ. ಹಾಗಾದರೂ ನೂರಾರು  ಚಿತ್ರಗಳಲ್ಲಿ ತಮ್ಮ ಕಂಠಸಿರಿಯನ್ನು ಬೆಳಗಿಸಿದ್ದರು. 2000ದ ವರ್ಷದಲ್ಲಿ  'ಹೇರಾಮ್' ಚಿತ್ರಕ್ಕೆ ಹಾಡಿದ ಗೀತೆ ಕೊನೆಯದು.  ಕೆಲವು ಹಾಡುಗಳಿಗೆ ಪುರುಷ ದನಿಯನ್ನು ಕೂಡಾ ಅವರೇ ನೀಡಿದ್ದರು.

ಡಿ.ಕೆ ಪಟ್ಟಮ್ಮಾಳ್ ಅವರಿಗೆ ಪದ್ಮ ಭೂಷಣ, ಪದ್ಮವಿಭೂಷಣ ಪ್ರಶಸ್ತಿಗಳು ಸಂದಿದ್ದವು.  ಟೈಗರ್ ವರದಾಚಾರ್ಯರು ಒಮ್ಮೆ ಡಿ.ಕೆ ಪಟ್ಟಮ್ಮಾಳ್ ಅವರನ್ನು ‘ಸಂಗೀತ ಸಾಗರ ರತ್ನ’ವೆಂದು ಸಭಿಕರಿಗೆ ಪರಿಚಯಿಸಿದ್ದರು.  ಸಂಗೀತ ಕಲಾನಿಧಿ, ಪಲ್ಲವಿ ಪಟ್ಟಮ್ಮಾಳ್, ಗಾನಸರಸ್ವತಿ ಇವು ಅವರಿಗೆ ಸಂದ ಇನ್ನಿತರ ಗೌರವಗಳು.

ಡಿ. ಕೆ ಪಟ್ಟಮ್ಮಾಳ್ ಅವರ  ತಮ್ಮ 'ಡಿ. ಕೆ. ಜಯರಾಮನ್', ಅಕ್ಕನಷ್ಟೇ ಪ್ರತಿಭಾವಂತರು.  'ಸಂಗೀತ ಕಲಾನಿಧಿ ಪ್ರಶಸ್ತಿ' ಗಳಿಸಿದ್ದ ಅವರು ಪಟ್ಟಮ್ಮಾಳ್ ಅವರಿಗೆ ಮೊದಲೇ ವಿಧಿವಶರಾದರು. ಪಟ್ಟಮ್ಮಾಳ್ ಅವರ ಸೊಸೆ 'ಲಲಿತಾ ಶಿವಕುಮಾರ್'  ಹಾಗೂ  ಪಟ್ಟಮ್ಮಾಳ್ ರವರ ಪ್ರಿಯ ಶಿಷ್ಯೆ, ಮೊಮ್ಮಗಳು, ಮತ್ತು ಹೆಸರಾಂತ ಗಾಯಕಿ - ಸಂಯೋಜಕಿ ವಿದುಷಿ  'ನಿತ್ಯಶ್ರೀ ಮಹಾದೇವನ್' ಇವರೆಲ್ಲಾ ಡಿ.ಕೆ ಪಟ್ಟಮ್ಮಾಳ್ ಅವರ ಸಂಗೀತ ಪರಂಪರೆಯನ್ನು ಮುದುವರೆಸಿದ್ದಾರೆ.

ಈ ಮಹಾನ್ ಸಂಗೀತ ಸಾಧಕಿ  ಪಟ್ಟಮ್ಮಾಳ್ ರವರು 2009ರ ಜುಲೈ 16ರಂದು ವಿಧಿವಶರಾದರು. ಹಿರಿಯ ವಯಸ್ಸಿನಲ್ಲೂ ಅವರು ತಮ್ಮ ಗಾಯನದಲ್ಲಿ ಮೂಡಿಸುತ್ತಿದ್ದ ಸ್ಪಷ್ಟತೆ ಮತ್ತು ಸುಶ್ರಾವ್ಯತೆಗಳು ಮರೆಯಲಾರದಂತದ್ದು.  ಈ ಮಹಾನ್ ಚೇತನಕ್ಕೆ ನಮ್ಮ ಅನಂತ  ನಮನಗಳು.

great vocalist D.K. Pattammal 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ