ತ್ರಿವೇಣಿ ರಾವ್
'ತುಳಸಿವನ'ದ ತ್ರಿವೇಣಿ ರಾವ್
ಇಂದು ನಮ್ಮ ತ್ರಿವೇಣಿ ರಾವ್ ಅವರ ಹುಟ್ಟುಹಬ್ಬ. ಇಂದು ಅಂತರ್ಜಾಲದಲ್ಲಿ ಕನ್ನಡ ಸಾಕಷ್ಟು ವ್ಯಾಪಿಸಿದೆ. ಹದಿನಾರು ವರ್ಷಗಳ ಹಿಂದೆ ಕನ್ನಡವನ್ನು ಬಳಸುತ್ತಿದ್ದ ತಾಣಗಳು ಬೆರಳೆಣಿಕೆಯಷ್ಟಿದ್ದವು. ಅಂತಹ ದಿನಗಳಲ್ಲಿ ಅಂದರೆ 2006ರ ವರ್ಷದಷ್ಟು ಹಿಂದೆಯೇ ‘ತುಳಸೀವನ’ದಂತಹ ಅದ್ಭುತ ಬ್ಲಾಗ್ ಪ್ರಾರಂಭಿಸಿದವರು ನಮ್ಮ ತ್ರಿವೇಣಿ ಅವರು. ಇಂದು ‘ತುಳಸೀವನ’ ಕನ್ನಡದ ಪರಿಮಳವನ್ನು ತನ್ನಲ್ಲಿ ತುಂಬಿತುಳುಕಿಸಿಕೊಂಡಿರುವ ಒಂದು ನಂದನವನವೇ ಆಗಿದೆ.
ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕಡೂರಿನವರಾದ ತ್ರಿವೇಣಿಯವರು ಹಲವು ವರ್ಷಗಳಿಂದ ಅಮೆರಿಕದಲ್ಲಿ ತಮ್ಮ ಕುಟುಂಬದೊಂದಿಗೆ ನೆಲೆಸಿದ್ದಾರೆ. 2001ರ ವರ್ಷದಲ್ಲಿ ಅಮೇರಿಕದಲ್ಲಿ ವಿಶ್ವವಾಣಿಜ್ಯ ಮಳಿಗೆ ಕುಸಿದ ಸಂದರ್ಭದಲ್ಲಿ, ಅದಕ್ಕೆ ಸ್ವಲ್ಪ ಮುಂಚಿನ ದಿನಗಳು ತಾನೇ ಆ ದೇಶಕ್ಕೆ ಬಂದ ತ್ರಿವೇಣಿಯವರು, ತಮ್ಮ ತಲ್ಲಣಗಳನ್ನು ಅಕ್ರೋಶಯುಕ್ತವಾಗಿ ‘ಒಸಾಮ! ಒಸಾಮ’ ಎಂದು ಅಭಿವ್ಯಕ್ತಿಸಿದ್ದು, ದಟ್ಸ್ ಕನ್ನಡದಲ್ಲಿ ಕವನವಾಗಿ ಹರಿದು, ಮುಂದೆ ಅವರಿಂದ ಅನೇಕ ಬರಹಗಳು ಮೂಡುವ ಒಂದು ಘಳಿಗೆಯೂ ಆಯಿತು. ಹೀಗೆ ಬಂದ ಲೇಖನಗಳ ಸರಮಾಲೆ ದಟ್ಸ್ ಕನ್ನಡದಲ್ಲಿ ‘ತುಳಸೀವನ’ ಅಂಕಣರೂಪ ಪಡೆದು ಮುಂದೆ ಅದೇ ಹೆಸರಿನಲ್ಲಿ ಪ್ರಬಂಧ ಸಂಗ್ರಹವಾಗಿಯೂ ಪ್ರಕಟವಾಗಿ ಕನ್ನಡ ಓದುಗರ ಕೈಸೇರಿದೆ. ಈ ಕೃತಿಯನ್ನು ಅಮೆರಿಕದಲ್ಲಿ ಪ್ರೊ. ಅ. ರಾ. ಮಿತ್ರ ಅವರೂ , ಕನ್ನಡದ ನೆಲದಲ್ಲಿ ಡಾ. ಎಚ್. ಎಸ್. ವೆಂಕಟೇಶಮೂರ್ತಿ ಅವರೂ ಬಿಡುಗಡೆ ಮಾಡಿ ಸವಿನುಡಿಗಳನ್ನು ವರ್ಷಿಸಿದ್ದಾರೆ. ಹೀಗೆ ಮುಂದುವರೆದ ತ್ರಿವೇಣಿ ಅವರ ಬರವಣಿಗೆ ನಿರಂತರವಾಗಿ ಹರಿದುಬಂದಿದೆ. 'ತಿಳಿ ನೀಲಿ ಪೆನ್ನು' ಎಂಬುದು ತ್ರಿವೇಣಿ ರಾವ್ ಅವರು ಪ್ರಕಟಿಸಿರುವ ಕಥಾಸಂಕಲನ.
2006ರ ವರ್ಷದಲ್ಲಿ ಬ್ಲಾಗ್ ಆಗಿ ಮೂಡಿಬಂದು ನಿರಂತರವಾಗಿ ಉತ್ತುಂಗತೆಯನ್ನು ಕಾಯ್ದುಕೊಂಡು ಬಂದಿರುವ ತ್ರಿವೇಣಿ ಅವರ ‘ತುಳಸೀವನ’ ಕಂಡಾಗ ಅವರಲ್ಲಿರುವ ವಿವಿಧ ಸಾಂಸ್ಕೃತಿಕ ಆಸಕ್ತಿಗಳು, ಜೀವನಪ್ರೀತಿ ಹಾಗೂ ಅವೆಲ್ಲವನ್ನೂ ಮೀರಿಸುವ ಕನ್ನಡದ ಹೃದಯ ಇವೆಲ್ಲ ಬೆರಗು ಹುಟ್ಟಿಸುತ್ತೆ. ಅಲ್ಲಿ ಕಥೆ, ಕವನ, ಪ್ರಬಂಧಗಳಿವೆ. ದಾಸವರೇಣ್ಯರಿಂದ ಮೊದಲ್ಗೊಂಡು ಇತ್ತೀಚಿನ ದಿನಗಳವರೆಗಿನ ಬಹುತೇಕ ಸಾಹಿತಿಗಳ ಹೊಳುಹುಗಳು ಯಥೇಚ್ಛವಾಗಿವೆ, ಹಲವಾರು ಬ್ಲಾಗಿಗರು ಸರಮಾಲೆಯಂತೆ ಕೈಜೋಡಿಸಿ ನೀಳ್ಗತೆಯಂತೆ ನಿರೂಪಿಸಲನುವಾದ ‘ಕಟ್ಟು-ಕಥೆ’ಯಂತಹ ಪ್ರಯೋಗಗಳಿವೆ. ಇದಲ್ಲದೆ ಸಿನಿಮಾ, ನಾಟಕ, ಅಡುಗೆ-ಊಟ-ತಿಂಡಿ ಕೂಡಾ ಇವೆ. ಹೀಗೆ ಕನ್ನಡವನ್ನು ಪ್ರೀತಿಸುವ ಹೃದಯಗಳಿಗೆ ಬೇಕಾದ ಸಕಲ ರುಚಿಕರ ಭಕ್ಷ್ಯ, ಭೋಜ್ಯಗಳೂ ಇಲ್ಲಿವೆ. ಅತ್ಯಮೂಲ್ಯ ಸಾಹಿತ್ಯ ಸಾಂಸ್ಕೃತಿಕ ಸಿರಿಯನ್ನು ಭಿತ್ತರಿಸುವ ಈ ಸಕಲ ಕಾಯಕದ ಹಿಂದೆ ತ್ರಿವೇಣಿ ಅವರ ಕನ್ನಡ ಪ್ರೀತಿ ಬೆನ್ನುಲುಬಾಗಿ ನಿಂತಿದೆ.
ತ್ರಿವೇಣಿಯವರು ತಾವಿರುವ ವಿದೇಶಿ ನೆಲದಲ್ಲಿ ಕನ್ನಡದ ಸೊಗಡನ್ನು ಬಿಂಬಿಸುತ್ತಿರುವ ಕನ್ನಡ ಕೂಟಗಳಾದ ವಿದ್ಯಾರಣ್ಯ ಕನ್ನಡ ಕೂಟ, ಕನ್ನಡ ಸಾಹಿತ್ಯ ರಂಗ, ಅಮೆರಿಗನ್ನಡರ ಬುಕ್ ಕ್ಲಬ್, ಅಕ್ಕ ಮುಂತಾದ ವೇದಿಕೆಗಳೊಡನೆ ಆಪ್ತ ಕ್ರಿಯಾಶೀಲ ಭಾಗವಹಿಕೆ ಬಾಂಧವ್ಯವನ್ನು ಹೊಂದಿದ್ದಾರೆ. ಈ ಮೂಲಕ ನಡೆಯುವ ಕನ್ನಡಪರ ಸಾಂಸ್ಕೃತಿಕ, ಸಾಹಿತ್ಯಕ, ಸದ್ಭಾವನಾ ಸಮಾರಂಭಗಳು ಎಲ್ಲೆಡೆ ಮೆಚ್ಚುಗೆಗಳಿಸಿವೆ. ಭಾರತಕ್ಕೆ ಬಿಡುವಾದಾಗ ಬಂದಾಗಲೂ ಇಲ್ಲಿನ ಕನ್ನಡ ಹೃದಯಗಳೊಡನೆ ತ್ರಿವೇಣಿ ಆಪ್ತವಾಗಿ ಬೆರೆಯುತ್ತಾರೆ. ಫೇಸ್ಬುಕ್ ವಲಯದಲ್ಲಿರುವ ನಮಗೆ ತ್ರಿವೇಣಿ ರಾವ್ ಅವರ ಕನ್ನಡ ಪರಿಮಳಯುಕ್ತ ಆತ್ಮೀಯತೆ ಅಪ್ಯಾಯಮಾನವಾದದ್ದು.
ಕನ್ನಡವನ್ನು ಅತ್ಯಂತ ಆಪ್ತತೆ, ಅಭಿಮಾನ, ಪ್ರೀತಿಗಳಿಂದ ತಮ್ಮಲ್ಲಿ ತುಂಬಿಕೊಂಡು ಆ ಸವಿಯನ್ನು ಎಲ್ಲೆಡೆ ಹಂಚುತ್ತಿರುವ ಸಹೃದಯಿ ತ್ರಿವೇಣಿ ಶ್ರೀನಿವಾಸರಾವ್ ಅವರಿಗೂ ಅವರ ಕುಟುಂಬದವರಿಗೂ ಬದುಕು ನಿತ್ಯ ನಿರಂತರವಾಗಿ ಸವಿಯಾಗಿರಲಿ, ನಮಗೆ ಅವರ ಸಾಹಿತ್ಯ ಸಾಂಸ್ಕೃತಿಕ ಪ್ರೇಮದ ಸಿಂಚನ ನಿರಂತರವಾಗಿ ದೊರಕುತ್ತಿರಲಿ ಎಂದು ಆಶಿಸುತ್ತಾ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳನ್ನು ಹೇಳೋಣ.
Happy birthday Triveni Rao
ಕಾಮೆಂಟ್‌ಗಳು