ಅಚ್ಯುತ್ ಕುಮಾರ್
ಅಚ್ಯುತ್ ಕುಮಾರ್
ಅಚ್ಯುತ್ ಕುಮಾರ್ ಅತ್ಯುತ್ತಮ ಚಲನಚಿತ್ರ ಕಲಾವಿದರಲ್ಲಿ ಒಬ್ಬರು.
ಆಗಸ್ಟ್ 10 ಅಚ್ಯುತ್ ಕುಮಾರ್ ಅವರ ಜನ್ಮದಿನ (ಕೆಲವು ಕಡೆ ಮಾರ್ಚ್ 8 ಎಂದೂ ಇದೆ). ಹಾಸನ ಜಿಲ್ಲೆಯ ಬೇಲೂರಿನಲ್ಲಿ ಜನಿಸಿದ ಇವರು ಬೆಳೆದದ್ದು ತಿಪಟೂರಿನಲ್ಲಿ. ಅಲ್ಲಿನ ಕಲ್ಪತರು ಕಾಲೇಜಿನಲ್ಲಿ ಬಿ.ಕಾಮ್ ಪದವಿ ಪಡೆದರು.
ಅಚ್ಯುತ್ ಕುಮಾರ್ ಕಾಲೇಜಿನಲ್ಲಿ ಓದುವಾಗಲೇ ಗೆಳೆಯರ ಬಳಗ, ಮುಂಗಾರು ಹುಡುಗರು, ಅಭಿನಯ ಥಿಯೇಟರ್ ಗ್ರೂಪ್ ಮುಂತಾದ ತಂಡಗಳಲ್ಲಿ ಪಾತ್ರವಹಿಸಿದರು. ನಟರಾಜ್ ಹುಳಿಯಾರ್ ಅಂತಹವರ ಮಾರ್ಗದರ್ಶನ ಅವರಿಗೆ ದೊರಕಿತು. ಮುಂದೆ 'ನೀನಾಸಮ್'ನಲ್ಲಿ ರಂಗ ತರಬೇತಿ ಪಡೆದರು.
ಗಿರೀಶ್ ಕಾಸರವಳ್ಳಿಯವರು ಎಸ್. ಎಲ್. ಭೈರಪ್ಪನವರ ಕಾದಂಬರಿ ಆಧರಿಸಿ ನಿರ್ದೇಶಿಸಿದ 'ಗೃಹಭಂಗ' ಧಾರಾವಾಹಿಯಲ್ಲಿ ಚೆನ್ನಿಗರಾಯನಾಗಿ ಅಭಿನಯಿಸಿದ ಅಚ್ಯುತ್ ಕುಮಾರ್ ಅಭಿನಯ ಅವಿಸ್ಮರಣೀಯ. ಆ ಪಾತ್ರದಲ್ಲಿನ ಅವರು ಮೂಡಿಸಿರುವ ಪೆದ್ದುತನ, ಹಾಸ್ಯ, ಪುಂಡತನ, ಮೂಢತನ, ಕ್ರೌರ್ಯ ಇವೆಲ್ಲವುಗಳ ಸಂಗಮ ಅದ್ಭುತವಾದದ್ದು. ಮೂಡಲಮನೆ, ಪ್ರೀತಿ ಇಲ್ಲದ ಮೇಲೆ ಮುಂತಾದ ಇತರ ಧಾರಾವಾಹಿಗಳಲ್ಲೂ ನಟಿಸಿದರು.
ಅಚ್ಯುತ ಕುಮಾರ್ 'ಮೊಗ್ಗಿನ ಮನಸು' ಚಿತ್ರದಲ್ಲಿ ನಾಯಕಿಯ ತಂದೆಯ ಪಾತ್ರ ವಹಿಸಿದರು. 'ಆ ದಿನಗಳು' ಚಿತ್ರದಲ್ಲಿ ಗ್ಯಾಂಗ್‍ಸ್ಟರ್ ಪಾತ್ರ ವಹಿಸಿದ್ದರು. ಪೋಷಕ ಪಾತ್ರಗಳಲ್ಲಿ ಪ್ರಸಿದ್ಧಿ ಪಡೆದು ವರ್ಷಕ್ಕೆ ಹನ್ನೆರಡರಷ್ಟು ಚಿತ್ರಗಳಲ್ಲಿ ನಟಿಸಿದರು. 2013ರ 'ಲೂಸಿಯಾ'ದ ಪಾತ್ರ ನಿರ್ವಹಣೆ ವ್ಯಾಪಕವಾಗಿ ಮೆಚ್ಚುಗೆ ಗಳಿಸಿತು. ಈ ಅಭಿನಯ ಅವರಿಗೆ ಫಿಲಮ್‍ಫೇರ್ ಪ್ರಶಸ್ತಿ ತಂದಿತು. 'ಹೆಜ್ಜೆಗಳು' ಚಿತ್ರದಲ್ಲಿ ಜೂಜಿನ ಚಟದ ಕೊಂದಂಡ ಪಾತ್ರವನ್ನು ನಿರ್ವಹಿಸಿದರು. ಈ ನಟನೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ತಂದಿತು. 'ಅಮರಾವತಿ' ಚಿತ್ರದಲ್ಲಿನ ಶಿವಪ್ಪನ ಪಾತ್ರ ನಿರ್ವಹಣೆಗೂ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಬಂತು. 'ಊರ್ವಿ' ಚಿತ್ರದಲ್ಲಿನ ಪಾತ್ರವೂ ಪ್ರಸಿದ್ಧಿ ಪಡೆಯಿತು. ಜೋಶ್, ದೃಶ್ಯ ಚಿತ್ರಗಳ ಅಭಿನಯಕ್ಕೂ ಫಿಲಮ್‍ಫೇರ್ ಪ್ರಶಸ್ತಿ ಸಂದಿತ್ತು.
ಯಾವುದೇ ಪಾತ್ರವಿರಲ್ಲಿ ಶ್ರದ್ಧೆಯಿಂದ ತನ್ಮಯರಾಗಿ ಅದರೊಳಗೆ ಪರಕಾಯ ಪ್ರವೇಶ ಮಾಡಿದಂತೆ ಅಭಿನಯಿಸುವ ಅಚ್ಯುತ್ ಕುಮಾರ್ ಸಾಧನೆ ಪ್ರಶಂಸನೀಯ. ಅವರಿಗೆ ಅಪಾರ ಬೇಡಿಕೆ ಇದೆ. ಅಂತೆಯೇ ಅವರಿಗೆ ಎಲ್ಲ ಯಶಸ್ಸು ಮತ್ತು ಬದುಕಿನ ಸುಖ ಶಾಂತಿ ಸಾಧನೆಗಳ ಸಂತೃಪ್ತಿಗಳೂ ದೊರೆಯಲಿ ಎಂದು ಹಾರೈಸೋಣ.
On the birthday of our incredible talent Achyut Kumar
ಕಾಮೆಂಟ್‌ಗಳು