ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬಿ.ಎಸ್ .ಕೃಷ್ಣಮೂರ್ತಿ


 ಗಣಿತಮಿತ್ರ ಬಿ.ಎಸ್ .ಕೃಷ್ಣಮೂರ್ತಿ


ಬಿ. ಎಸ್. ಕೃಷ್ಣಮೂರ್ತಿ ಅವರು ಗಣಿತಜ್ಞರಾಗಿ ವಿದ್ಯಾರ್ಥಿಗಳಲ್ಲಿ ಮತ್ತು ಜನ ಸಮುದಾಯದಲ್ಲಿ ಗಣಿತ ಪ್ರೀತಿ ಹುಟ್ಟಿಸಲು ಮಾಡುತ್ತಿರುವ ಕೆಲಸ ಅಗಣಿತ ವ್ಯಾಪ್ತಿಯದ್ದು.

ಕೃಷ್ಣಮೂರ್ತಿ ಅವರು 1964ರ ಆಗಸ್ಟ್ 30ರಂದು ಕೊಳ್ಳೇಗಾಲದಲ್ಲಿ ಜನಿಸಿದರು.
ತಂದೆ ಬಿ.ಎಸ್. ಸುಂದರಮೂರ್ತಿ. ತಾಯಿ ಟಿ.ಕೆ. ಶಾಂತರತ್ನಮ್ಮ. ಮೈಸೂರೆಂದರೆ ಪಂಚ ಪ್ರಾಣ ಎನ್ನುವ ಕೃಷ್ಣಮೂರ್ತಿ ತಮ್ಮ ವಿದ್ಯಾಭ್ಯಾಸ‍, ವೃತ್ತಿ ಮತ್ತು ವಾಸ್ತವ್ಯಗಳನ್ನು ಅಲ್ಲಿಯೇ ನಡೆಸಿ ಮುಂದುವರೆಯುತ್ತಿರುವ ಸಂತೃಪ್ತರು. ಇವರು ಬಾಲ್ಯದ ದಿನಗಳಲ್ಲಿ ಮನೆ ಮನೆಗೆ ಪೇಪರ್,  ಮ್ಯಾಗಜಿನ್ ಹಾಕುತ್ತಾ, ಮನೆ ಹೋಟೆಲ್ ಗಳಿಗೆ ಹಾಲು ಸರಬಾರಜು ಮಾಡುತ್ತ ಸ್ವಂತ ದುಡಿಮೆಯಿಂದ ಓದುತ್ತಾ ಮೇಲೆ ಬಂದ ಸಾಹಸಿ. 

ಕೃಷ್ಣಮೂರ್ತಿ ಅವರಿಗೆ ಬಾಲ್ಯದಿಂದಲೂ ಗಣಿತ ವಿಜ್ಞಾನ ಹಾಗು ಸಾಹಿತ್ಯ ಓದುವ ಹುಚ್ಚು. ಹಾಕಿಕೊಳ್ಳುವ ಬಟ್ಟೆ ಹಳೆಯಾದಾದರು ಓದುವ ಪುಸ್ತಕ ಹೊಸದಾಗಿರಬೇಕು ಎಂಬ ಚಿಂತನೆಯನ್ನು ಆಳವಡಿಸಿಕೊಂಡು, ಪುಸ್ತಕಗಳನ್ನು,  ಮ್ಯಾಗಜಿನ್ಗಳನ್ನು ಕೊಂಡು ಓದುತ್ತಾ ಪೇಪರ್ ಕಟಿಂಗ್ ಹವ್ಯಾಸವನ್ನು ಜೊತೆಗೆ ತಮ್ಮದೇ ಆದ ಲೈಬ್ರರಿ ಸಹಾ ಬೆಳೆಸಿಕೊಂಡರು.
ವಿದ್ಯಾರ್ಥಿ ಬದುಕನ್ನು ದುಡಿಮೆಯೊಂದಿಗೆ ಸಾಗಿಸಿದರೂ ಎಲ್ಲಾ ರೀತಿಯ ಸಾಹಿತ್ಯ ಪ್ರಕಾರ ಕಥೆ, ಕಾದಂಬರಿ, ಕವನ, ಕಾವ್ಯ, ಗಣಿತ, ವಿಜ್ಞಾನ, ಪದಬಂದ, ಪಝಲ್ ಬಿಡಿಸುವ - ರಚಿಸುವ ಹುಚ್ಚು ಇವರ ಜೊತೆಗೂಡಿತ್ತು. ಮಾಯಚೌಕಗಳಿಂದ, ಮಾಯಜಾಲ ಗಣಿತ ಕುತೂಹಲ ಬೆನ್ನತ್ತಿ ಕಲಿತು ಇತರರಿಗೂ ಕಲಿಸಿದ ಗಣಿತ ಅಪಾರ. ಸಹಪಾಠಿಗಳಿಗೆ ಗಣಿತ ಪಾಠ ಹೇಳಿಕೊಟ್ಟು ಅವರಿಗೆ ಗಣಿತದಲ್ಲಿ ಪಾಸಾಗಲು ಬೆನ್ನೆಲುಬಾದ  ಗಣಿತ ಪ್ರೇಮಿಯಾದರು.  ಕಾಲೇಜು ಓದುವಾಗ ಮನೆ ಪಾಠ ಮಾಡಿ ಪದವಿ ಗಳಿಸಿದರು.

1982-1984ರಲ್ಲಿ ಮೈಸೂರಿನ ಯುವರಾಜ ಕಾಲೇಜಿನಲ್ಲಿ ಫಿಸಿಕ್ಸ್, ಇಲೆಕ್ಟ್ರಾನಿಕ್ಸ್,  ಮ್ಯಾಥ್ ಮ್ಯಾಟಿಕ್ಸ್ ಪದವಿಗೆ ಓದಿದರು. ಆಗ ಪ್ರೊಫೆಸರ್ ಎಲ್. ಎನ್.  ಚಕ್ರವರ್ತಿ, ಪ್ರೊಫೆಸರ್ ಉಷಾದೇವಿ, ಪ್ರೊಫೆಸರ್ ಷಣ್ಮುಗಂ ಮುಂತಾದವರ ಗಣಿತ ಗರಡಿಯಲ್ಲಿ ಗಣಿತದಲ್ಲಿ ಆಸಕ್ತಿ ಮತ್ತಷ್ಟು ಹೆಚ್ಚಾಯಿತು.  ಪ್ರೊಫೆಸರ್ ಮಲ್ಲೇಶ್ ಪ್ರಭಾವದಿಂದ ಎಂ.ಎಸ್ಸಿ ಥಿಯರಿಟಿಕಲ್  ಫಿಸಿಕ್ಸ್  ಅನ್ನು ಮೈಸೂರು ವಿಶ್ವವಿಧ್ಯಾನಿಲಯದಲ್ಲಿ 1984-1986ರಲ್ಲಿ ಮುಗಿಸಿ ಸ್ವಲ್ಪ ಕಾಲ ಉಪನ್ಯಾಸಕ ವೃತ್ತಿ ಯಲ್ಲಿ ತೊಡಗಿದ್ದರು. 1987-1988 ಅವಧಿಯಲ್ಲಿ ಮುರುಗಪ್ಪ ಎಲೆಕ್ಟ್ರಾನಿಕ್ಸ್'ನಲ್ಲಿ ಪ್ರೊಡಕ್ಷನ್ ಆಫೀಸರ್ ವೃತ್ತಿ ನಿರ್ವಹಿಸಿ 1988ರಲ್ಲಿ ರಕ್ಷಣಾ ಲೇಖಾ ಇಲಾಖೆಯಲ್ಲಿ ಸೇರಿ ಪ್ರಸಕ್ತದವರೆಗೆ ಕಾರ್ಯ ನಿರ್ವಹಿಸಿತ್ತಿದ್ದಾರೆ. ಹೀಗಿದ್ದರೂ ಕಲಿಯುವ ಮತ್ತು ಕಲಿಸುವ  ಹುಚ್ಚಿನವರಾದ  ಕೃಷ್ಣಮೂರ್ತಿ ಶನಿವಾರ - ಭಾನುವಾರಗಳಂದು ವಿಶೇಷ ಉಪನ್ಯಾಸಕರಾಗಿ ಭೌತವಿಜ್ಞಾನ, ಗಣಿತ ಗಣಕ ವಿಜ್ಞಾನ ಬೋಧನೆ ಮತ್ತು ಗಣಿತ ಕುತೂಹಲ ಚಟುವಟಿಕೆಗಳ ಕಾರ್ಯಕ್ರಮಗಳನ್ನು ಫಲಾಪೇಕ್ಷೆಯಿಲ್ಲದೆ ಸೇವಾ ಮನೋಭಾವದಿಂದ ನಡೆಸುತ್ತ ಬಂದಿದ್ದಾರೆ.  ಮೈಸೂರಿನ ಆತ್ಮೀಯ ಗೆಳಯ ಜೆ.ಜಿ ವೆಂಕಟೇಶ್ ಮತ್ತು ಅನಿತಾ ವೆಂಕಟೇಶ್ ಅವರ ಆದಿತ್ಯಾ ವಿದ್ಯಾಸಂಸ್ಥೆ ಯಲ್ಲಿ 2000 ದಿಂದ 2015ರವರೆಗೆ ಡಿಪ್ಲೊಮಾ,ಆಡ್ವಾನ್ಸ್ ಡಿಪ್ಲೋಮಾ, ಪದವಿ, ಎಂ.ಎಸ್ಸಿ ,ಎಂ.ಟೆಕ್ ಹಾಗು C-DAC ವಿಧ್ಯಾರ್ಥಿಗಳಿಗೆ ವಾರಾಂತ್ಯದ ಅತಿಥಿ ಉಪನ್ಯಾಸಕರಾಗಿ ಹಾಗೂ ಗಣಿತ, ಗಣಕ ವಿಷಯಕ್ಕೆ ಸಂಬಂಧಿಸಿದಂತೆ 50ಕ್ಕೂ ಹೆಚ್ಚು ಪ್ರಾಜೆಕ್ಟ್ ಗಳಿಗೆ ಗೈಡ್ ಆಗಿ ಸೇವೆ ಸಲ್ಲಿಸಿದ್ದಾರೆ.

ಕೃಷ್ಣಮೂರ್ತಿ ಅವರಲ್ಲಿ ಗಣಿತ ವಿಜ್ಞಾನ ತಂತ್ರಜ್ಞಾನದ ಒಡನಾಟ, ಸೈಂದ್ದಾತಿಕ ಗಣಿತ, ಸೈದ್ಧಾಂತಿಕ ಭೌತವಿಜ್ಞಾನ, ಸೈದ್ಧಾಂತಿಕ ಗಣಕ ವಿಜ್ಞಾನ ಅರಿವು ವಿಸ್ತಾರಗೊಂಡು, ಬದುಕು ಕಟ್ಟಿ ಕೊಡುವ ಗಣಿತವನ್ನು ಎಲ್ಲರಿಗೂ ಕಲಿಸುವ ಹುಚ್ಚಿಗೆ ಬಿದ್ದರು.  ಹೀಗೆ ಪದವಿ, ಇಂಜಿನಿಯರಿಂಗ್ ಕಾಲೇಜು, ಶಾಲೆಗಳಿಗೆ "ಗಣಿತ ಕುಣಿತ" ಎಂಬ ಶೀರ್ಷಿಕೆಯಡಿಲ್ಲಿ ಗಣಿತ ಕಲಿಯುವ ಕಲೆಯನ್ನು ನೃತ್ಯ, ಸಂಗೀತ, ಕಿರು ಪ್ರಸಂಗ, ಆಟ ಚಟುವಟಿಕೆಗಳ ಮೂಲಕ ಪ್ರಚುರಪಡಿಸಲು ತೊಡಗಿದರು.  ಹೀಗೆ ಅವರೊಬ್ಬ Motivational Technical Speaker ಆಗಿ ‌ಸ್ಪೂರ್ತಿ ತಾಂತ್ರಿಕ ಸಂವಹನಕಾರರಾಗಿ ಬದುಕಿಗೊಂದು ಹೊಸ ಮಾರ್ಗ ಕಂಡುಕೊಂಡಿದ್ದಾರೆ.  ಅವರು ನಡೆಸುತ್ತಿರುವ ಶಿಬಿರಗಳು ವ್ಯಾಪಕವಾಗಿ ಶ್ಲಾಘನೆ ಪಡೆದಿವೆ.  ಅಸಂಖ್ಯಾತ ವಿದ್ಯಾರ್ಥಿಗಳು ಇದರ ಲಾಭ ಪಡೆದು ಗಣಿತ ಎಂಬುದು ಕಬ್ಬಿಣದ ಕಡಲೆ ಅಲ್ಲ ಕಬ್ಬಿನ ರಸದಂತೆ ಸ್ವಾದಿಷ್ಟ ಎಂದು ಕೃಷ್ಣಮೂರ್ತಿಗಳಿಂದ ಕುಣಿ ಕುಣಿದು ಅರಿತು ನಲಿಯುತ್ತಿದ್ದಾರೆ.

ಕೃಷ್ಣಮೂರ್ತಿ ಅವರ ಈ ಗಣಿತದ ಅಗಣಿತ ಯಾನದಲ್ಲಿ ಪ್ರೊ.  ಜಿ.ರಾಮಚಂದ್ರನ್, ಪ್ರೊ.  ಗೋಪಲ್ ಅಂತಹವರ ಪ್ರಭಾವವಿದೆ.
ಮಾರ್ಟಿನ್ ಗಾರ್ಡನ್ ಅಂತಹವರ   ಪುಸ್ತಕಗಳು ಪ್ರೇರಕವಾಗಿವೆ.  ಪತ್ನಿ ಮಾಲಾದೇವಿ ಬದುಕಿನ ಬೆನ್ನೆಲುಬಾಗಿ ಸದಾ ಜೊತೆಗಿದ್ದಾರೆ. ಮಗ ನಿಖಿಲ್ ಚಕ್ರವರ್ತಿ ವಿಡಿಯೊ ಎಡಿಟರ್ ಉದ್ಯೋಗಿ. ಪುತ್ರಿ
ಲಾವಣ್ಯ  ಕಂಪ್ಯೂಟರ್ ಸೈನ್ಸ್ ಇಂಜಿನಿಯರ್ ಆಗಿ ಜರ್ಮನಿಯಲ್ಲಿ  ಉನ್ನತ ಅಧ್ಯಯನ ನಡೆಸುತ್ತಿದ್ದಾರೆ.

ಕುಣಿ ಕುಣಿದು ಗಣಿತ ಕಲಿಸುತ್ತಿರುವ ಕೃಷ್ಣಮೂರ್ತಿಗಳ ಬದುಕು ಸದಾ ಸುಖ ಶಾಂತಿ ಸಂತಸಗಳ ಅಗಣಿತ ನೆಲೆಯಾಗಿರಲಿ.

Happy birthday to Krishnamurthy B S, who is making Mathematics easy for young generation 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ