ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಫಿರೋಜ್ ಗಾಂಧಿ


 ಫಿರೋಜ್ ಗಾಂಧಿ


ಫಿರೋಜ್ ಗಾಂಧಿ ಸ್ವಾತಂತ್ರ್ಯ ಹೋರಟಗಾರ, ಪತ್ರಕರ್ತ, ವಾಗ್ಮಿ ಮತ್ತು ರಾಜಕಾರಣಿ.  ಅವರು ಭಾರತದ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯವರ ಪತಿ. 

ಫಿರೋಜ್ ಗಾಂಧಿ 1912ರ ಸೆಪ್ಟೆಂಬರ್ 12ರಂದು ಮುಂಬೈನಲ್ಲಿ ಜನಿಸಿದರು. ತಂದೆ ಜಹಾಂಗೀರ್ ಗಾಂಧಿ.  ತಾಯಿ ರತಿಮಾಯ್.
ಇವರು ಮುಂಬಯಿಯಲ್ಲೂ,  ಲಂಡನಿನಲ್ಲೂ (ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್) ವಿದ್ಯಾಭ್ಯಾಸ ಮಾಡಿದರು. ಲಂಡನಿನಲ್ಲಿದ್ದಾಗಲೇ ಇವರು ಭಾರತೀಯ ವಿದ್ಯಾರ್ಥಿಗಳು ಮತ್ತು ಬ್ರಿಟಿಷ್ ಬುದ್ಧಿಜೀವಿಗಳಲ್ಲಿ ಗಾಂಧೀಜಿಯವರ ವಿಚಾರಧಾರೆಯನ್ನು ಪ್ರಚಾರ ಮಾಡುವ ಕಾರ್ಯದಲ್ಲಿ ನಿರತರಾಗಿದ್ದರು. ಲಂಡನ್ನಿನ ಇಂಡಿಯನ್ ಮಜ್ಲಿಸ್ನ ಅಧ್ಯಕ್ಷರಾಗಿದ್ದರು. ಭಾರತದ ಸ್ವಾತಂತ್ರ್ಯದ ಬಗ್ಗೆ ಇವರಿಗಿದ್ದ ಅಮಿತೋತ್ಸಾಹ, ಇವರು ಮಾಡುತ್ತಿದ್ದ ಕೆಲಸ-ಇವು ಮಹಾತ್ಮ ಗಾಂಧಿ, ಜವಹರಲಾಲ್ ನೆಹರೂ ಮುಂತಾದವರ ಗಮನ ಸೆಳೆದುವು. ಇವರು 1942ರ ಮಾರ್ಚ್ 26ರಂದು ನೆಹರೂ ಅವರ ಕುಮಾರಿ ಇಂದಿರಾ ಅವರನ್ನು ವಿವಾಹವಾದರು. ‘ಭಾರತ ಬಿಟ್ಟು ತೊಲಗಿ’ ಚಳವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ಕಾರಾಗೃಹವಾಸ ಪ್ರಾಪ್ತವಾಯಿತು. ಅನಂತರ ಇವರು ಲಖನೌದಿಂದ ಪ್ರಕಟವಾಗುವ ಇಂಗ್ಲಿಷ್ ದಿನಪತ್ರಿಕೆ ನ್ಯಾಷನಲ್ ಹೆರಾಲ್ಡ್ ಮತ್ತು ಹಿಂದಿ ದಿನಪತ್ರಿಕೆ ನವಜೀವನ ಇವುಗಳ ಪ್ರಕಾಶನ ಸಂಸ್ಥೆಯಾದ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕರಾದರು. ಇವರ ಮಾರ್ಗದರ್ಶನದಲ್ಲಿ ನ್ಯಾಷನಲ್ ಹೆರಾಲ್ದ್ ಉತ್ತರ ಭಾರತದ ಪ್ರಮುಖ ರಾಷ್ಟ್ರೀಯ ಪತ್ರಿಕೆಗಳಲ್ಲಿ ಒಂದಾಯಿತು. ಇವರು ಇತರ ಪತ್ರಿಕೆಗಳೊಂದಿಗೂ ಯುವಜನ ಚಳವಳಿಗೆ ಸಂಬಂಧಪಟ್ಟ ಹಲವಾರು ಸಾರ್ವಜನಿಕ ಸಂಘ ಸಂಸ್ಥೆಗಳೊಂದಿಗೂ ನಿಕಟ ಸಂಬಂಧ ಹೊಂದಿದ್ದರು.

ಸ್ವಾತಂತ್ರ್ಯಾನಂತರ 1950ರಲ್ಲಿ ಫಿರೋಜ್ ಗಾಂಧಿಯವರು ಸಂಸತ್ತನ್ನು ಪ್ರವೇಶಿಸಿದರು. 1952ರಲ್ಲಿ ನಡೆದ ಪ್ರಥಮ ಮಹಾ ಚುನಾವಣೆಗಳಲ್ಲಿ ಜಯಗಳಿಸಿ ಲೋಕಸಭೆಯ ಸದಸ್ಯರಾದರು. 1957ರಲ್ಲಿ ಇವರು ಮತ್ತೊಮ್ಮೆ ಲೋಕಸಭೆಗೆ ಆಯ್ಕೆಯಾದರು. ಇವರು ಸಂಸತ್ತಿನಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖ ಸದಸ್ಯರಾಗಿದ್ದರು. ಇವರು ದಕ್ಷ ಭಾಷಣಕಾರರೆಂದೂ ಸಮರ್ಥರಾದ ವಾದ ಚತುರರೆಂದೂ ಖ್ಯಾತಿ ಗಳಿಸಿದ್ದರು. ಇವರ ಕರ್ತವ್ಯನಿಷ್ಠೆ, ಪ್ರಾಮಾಣಿಕತೆ ಎಲ್ಲರ ಮೆಚ್ಚುಗೆಗೂ ಪಾತ್ರವಾಗಿದ್ದುವು. ಜೀವವಿಮಾ ಕಾರ್ಪೊರೇಷನ್ ಮುಂತಾದ ಸರ್ಕಾರಿ ಉದ್ಯಮಗಳ ವ್ಯವಹಾರಗಳು, ಸರ್ಕಾರದಲ್ಲಿ ಮಿತವ್ಯಯ ಸಾಧನೆ-ಇಂಥ ನಾನಾ ವಿಚಾರಗಳಲ್ಲಿ ಗಾಂಧಿಯವರು ಆಸಕ್ತಿ ತಳೆದಿದ್ದರು. ಕೇಂದ್ರ ಸರ್ಕಾರದ ಉದ್ಯೋಗಿಗಳ ಮುಷ್ಕರದಲ್ಲಿ ಇವರು ಪ್ರಭಾವಪುರ್ಣವಾದ ಮಧ್ಯಸ್ಥಿಕೆ ವಹಿಸಿದ್ದರು.

ಗಾಂಧಿಯವರು ಗೌಹಾತಿ (ಗುವಾಹಟಿ) ಯಲ್ಲಿರುವ ಇಂಡಿಯನ್ ಆಯಿಲ್ ರಿಫೈನರೀಸ್ ಲಿಮಿಟೆಡ್ ಸಂಸ್ಥೆಯ ಅಧ್ಯಕ್ಷರೂ ಆಗಿದ್ದರು. ಇವರು 1960ರ ಸೆಪ್ಟೆಂಬರ್ 8ರಂದು ಹೃದಯಾಘಾತದಿಂದ ನಿಧನರಾದರು. ರಾಜೀವ್ ಗಾಂಧಿ ಮತ್ತು ಸಂಜಯ್ ಗಾಂಧಿ ಇವರು ಫಿರೋಜ್ ಗಾಂಧಿಯವರ ಪುತ್ರರು.

On the birth anniversary of freedom fighter, journalist and politician Feroze Gandhi

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ