ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ದಮಯಂತಿ ಜೋಶಿ


 ದಮಯಂತಿ ಜೋಶಿ 


ದಮಯಂತಿ ಜೋಶಿ  ಕಥಕ್ ನೃತ್ಯ ಪ್ರಕಾರದ ಮಹಾನ್ ಕಲಾವಿದೆಯಾಗಿದ್ದವರು. ಕಥಕ್ ‘ಕಥೆ ಹೇಳುವ ಕಲೆ’ ಎಂದು ಅವರು ನಂಬಿದ್ದರು. ಇಂದು ಅವರ ಸಂಸ್ಮರಣೆ ದಿನ. 

ದಮಯಂತಿ 1928ರ ಸೆಪ್ಟೆಂಬರ್ 5ರಂದು ಮುಂಬೈನಲ್ಲಿ ಜನಿಸಿದರು. ಅವರು ಜನರಲ್ ಡಾ. ಸಾಹಿಬ್ ಸಿಂಗ್ ಸೋಖೆ ಮತ್ತು ಅವರ ಪತ್ನಿ ಮೇಡಮ್ ಮೇನಕಾ ಎಂದು ಪ್ರಸಿದ್ಧರಾದ ಲೀಲಾ ಸೋಖೆ ಅವರ ಮನೆಯಲ್ಲಿ ಬೆಳೆದರು.  ಮೇನಕಾ ತಮ್ಮ ಸ್ವಂತ ಮಗುವನ್ನು ಕಳೆದುಕೊಂಡಿದ್ದರು.   ಹಾಗಾಗಿ ದಮಯಂತಿ ಜೋಶಿಯನ್ನು ದತ್ತು ತೆಗೆದುಕೊಳ್ಳಲು ಆಶಿಸಿದ್ದರು. ಆದರೆ ದಮಯಂತಿಯ ತಾಯಿ ವತ್ಸಲಾ ಜೋಶಿಯವರು ತಮ್ಮ ಮಗಳನ್ನು ಬಿಟ್ಟಿರುವುದಕ್ಕೆ ಸಮ್ಮತಿ ಹೊಂದಿರಲಿಲ್ಲ.   ಹೀಗಾಗಿ ಅವರು ಜಂಟಿ ಪೋಷಕರಾಗಲು ಒಪ್ಪಿಕೊಂಡರು. ಸೋಖೆ  ದಂಪತಿಗಳು ವತ್ಸಲಾ ಜೋಶಿ ಅವರನ್ನು ನೇಮಿಸಿಕೊಂಡು ದಮಯಂತಿಗೆ ಶಿಕ್ಷಣ ವ್ಯವಸ್ಥೆ ಮಾಡಿದರು. 

ದಮಯಂತಿ ಬಾಲ್ಯದಲ್ಲೇ ಜೈಪುರ ಘರಾನಾದ ಪಂಡಿತ್ ಸೀತಾರಾಮ್ ಪ್ರಸಾದ್ ಅವರಿಂದ ಕಥಕ್ ಕಲಿತು, ಮೇನಕಾ ಅವರ ತಂಡದೊಡನೆ ಪ್ರವಾಸ ಮಾಡಿದರು. 15 ವರ್ಷದವರಿದ್ದಾಗಲೇ ಯುರೋಪಿನ ಪ್ರಮುಖ ನಗರಗಳಲ್ಲಿ ಪ್ರದರ್ಶನ ನೀಡಿದರು. ಹೀಗೆ ಚಿಕ್ಕ ವಯಸ್ಸಿನಲ್ಲೇ ಪ್ರಾವೀಣ್ಯತೆ ಪಡೆದ  ನೃತ್ಯ ಕಲಾವಿದೆಯಾಗಿ ರೂಪುಗೊಂಡರು. 

ದಮಯಂತಿ ಜೋಶಿ 1950ರ ದಶಕದಲ್ಲಿ ಸ್ವತಂತ್ರರಾದರು. ಲಕ್ನೋ ಘರಾನಾದ ಪಂಡಿತರಾದ ಅಚ್ಚನ್ ಮಹಾರಾಜ್, ಲಚ್ಚು ಮಹಾರಾಜ್ ಮತ್ತು ಶಂಭು ಮಹಾರಾಜ್ ಮತ್ತು ಜೈಪುರ ಘರಾನಾದ ಗುರು ಹೀರಾಲಾಲ್ ಅವರಿಂದ ತರಬೇತಿ ಪಡೆದು ಯಶಸ್ವಿ ಏಕವ್ಯಕ್ತಿ ಕಥಕ್ ನೃತ್ಯಗಾರ್ತಿಯಾಗಿ ತಮ್ಮನ್ನು ತಾವು ಸ್ಥಾಪಿಸಿಕೊಂಡರು. ವಿಶೇಷವಾಗಿ ದೆಹಲಿಯ ಕಥಕ್ ಕೇಂದ್ರದಲ್ಲಿ ಶಂಭು ಮಹಾರಾಜರ ಬಳಿ ತರಬೇತಿ ಪಡೆದರು.  ಕಥಕ್ ನೃತ್ಯದಲ್ಲಿ ಸೀರೆಯನ್ನು ವೇಷಭೂಷಣವಾಗಿ ಪರಿಚಯಿಸಿದ ಮೊದಲ ವ್ಯಕ್ತಿ  ಈಕೆ.

ದಮಯಂತಿ ಜೋಶಿ ಮುಂಬೈನ ತಮ್ಮ ನೃತ್ಯ ಶಾಲೆಯಲ್ಲಿ ಗುರುವಾದರು. ಮುಂಬೈನ ಶ್ರೀ ರಾಜರಾಜೇಶ್ವರಿ ಭರತ ನಾಟ್ಯ ಕಲಾ ಮಂದಿರದಲ್ಲಿ ಮೊದಲ ವಿದ್ಯಾರ್ಥಿಯಾಗಿದ್ದ ಅವರು ಗುರು ಟಿ.ಕೆ. ಮಹಾಲಿಂಗಂ ಪಿಳ್ಳೈ ಅವರಿಂದ ಭರತ ನಾಟ್ಯವನ್ನು ಕಲಿತರು. ದಮಯಂತಿ ಅವರು ಇಂದಿರಾ ಕಲಾ ವಿಶ್ವವಿದ್ಯಾಲಯ, ಖೈರಾಘರ್ ಮತ್ತು ಲಕ್ನೋದ ಕಥಕ್ ಕೇಂದ್ರದಲ್ಲಿಯೂ ಕಥಕ್ ಕಲಿಸಿದರು. ಇವರು ಕಲಾವಿದ ಬೀರೇಶ್ವರ ಗೌತಮ ಅವರಿಗೆ ಗುರುವಾಗಿದ್ದರು.

ದಮಯಂತಿ ಜೋಶಿ ಅವರಿಗೆ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿದ್ದವು. 

1971ರಲ್ಲಿ ಭಾರತ ಸರ್ಕಾರದ ಚಲನಚಿತ್ರ ವಿಭಾಗದಿಂದ ನಿರ್ಮಾಣಗೊಂಡ ಕಥಕ್‌ ಕುರಿತಾದ ಸಾಕ್ಷ್ಯಚಿತ್ರದಲ್ಲಿ ಅವರು ಕಾಣಿಸಿಕೊಂಡಿದ್ದರು.  ಹುಕುಮತ್ ಸರಿನ್ ಅವರು 1973ರಲ್ಲಿ "ದಮಯಂತಿ ಜೋಶಿ" ಎಂಬ ಚಲನಚಿತ್ರವನ್ನು ನಿರ್ಮಿಸಿದ್ದರು 

ದಮಯಂತಿ ಜೋಶಿ 2004ರ ಸೆಪ್ಟೆಂಬರ್ 19ರಂದು ನಿಧನರಾದರು.

On Remembrance Day of great Kathak Dancer Damayanti Joshi

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ