ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ರೂಬೆನ್ ಡೇವಿಡ್


 ರೂಬೆನ್ ಡೇವಿಡ್


ರೂಬೆನ್ ಡೇವಿಡ್ ಅವರು ವನ್ಯಮೃಗ ಸಂರಕ್ಷರಾಗಿ, ಶ್ರೇಷ್ಠ ಪ್ರಾಣಿಸಂಗ್ರಹಾಲಯ ಸ್ಥಾಪಕರಾಗಿ ಮತ್ತು ಪ್ರಕೃತಿಪ್ರಿಯರಾಗಿ ಹೆಸರಾಗಿದ್ದಾರೆ.

ರೂಬೆನ್ ಡೇವಿಡ್ ಅವರು ಅಹಮದಾಬಾದ್‌ನ ಬೆನೆ ಇಸ್ರೇಲ್ ಯಹೂದಿ ಕುಟುಂಬದಲ್ಲಿ 1912ರ ಸೆಪ್ಟೆಂಬರ್ 19ರಂದು ಜನಿಸಿದರು.

ರೂಬೆನ್ ಡೇವಿಡ್ ಅವರು ಸಾಂಪ್ರದಾಯಿಕ ಅರ್ಥದಲ್ಲಿ ಪ್ರಾಣಿಶಾಸ್ತ್ರದ ಶಿಕ್ಷಣವನ್ನು ಗಳಿಸಿದವರಾಗಿರಲಿಲ್ಲ. ಅವರು ಸ್ವಯಂ ಅಧ್ಯಯನ ಕೈಗೊಂಡ ಪಶುವೈದ್ಯರೂ, ಹಾಗೂ ಸಹಾನುಭೂತಿಯುಳ್ಳ ವನ್ಯಜೀವಿ ಸಂರಕ್ಷಕರೂ ಆಗಿದ್ದರು. ರೂಬೆನ್ ಡೇವಿಡ್ ಅಹಮದಾಬಾದ್‌ನ ಸೌಮ್ಯ ಪ್ರಾಣಿ ಪಾಲಕ ಎಂದು ಗೌರವಾನ್ವಿತರಾಗಿದ್ದರು.

ಐವತ್ತರ ದಶಕದ ಆರಂಭದಲ್ಲಿ, ಅಹಮದಾಬಾದ್‌ನಲ್ಲಿ ಮೃಗಾಲಯ ಸಂಕೀರ್ಣವನ್ನು ರಚಿಸಲು ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ರೂಬೆನ್ ಡೇವಿಡ್ ಅವರನ್ನು ಆಹ್ವಾನಿಸಿತು. ಪತ್ನಿ ಸಾರಾ ಮತ್ತು ಸಹೋದರ ಡಾ. ಜೇಕಬ್ ಡೇವಿಡ್ ಅವರ ಬೆಂಬಲದೊಂದಿಗೆ ಅವರು ಈ ಕಾರ್ಯಸಾಧನೆಗೆ ಹೊರಟರು. 1951ರಲ್ಲಿ ಮೃಗಾಲಯದ ನೀಲಿ ನಕ್ಷೆಯನ್ನು  ಬಿಡಿಸಿದಾಗ, ಅವರು ಪ್ರಾಣಿಗಳು, ಪಕ್ಷಿಗಳು ಮತ್ತು ಸರೀಸೃಪಗಳಿಗೆ ಹತ್ತಿರದ ನೈಸರ್ಗಿಕ ಆವಾಸ ಸ್ಥಾನವನ್ನು ರಚಿಸಿದರು, ಮೃಗಾಲಯದ ವಿಶಿಷ್ಟ ಶೈಲಿಯೊಂದನ್ನು ಸೃಷ್ಟಿಸಿದರು.  ಮೃಗಾಲಯದಲ್ಲಿ ಮಾತ್ರವಲ್ಲದೆ ಆ ಆವರಣದ ಸುತ್ತಲೂ ಅಸಂಖ್ಯಾತ ಮರಗಳನ್ನು ನೆಟ್ಟು ಹಸಿರು ವಲಯವನ್ನು ರಚಿಸಿದರು. ಮೃಗಾಲಯದ ಸಂಕೀರ್ಣ ಎಂದು ಕರೆಯಲ್ಪಡುವ ಈ ಸ್ಥಳ ಕಂಕಾರಿಯಾ ಸರೋವರವನ್ನು ಸುತ್ತುವರೆದಿದೆ. ಮೃಗಾಲಯವನ್ನು ಈಗ ಕಮಲಾ ನೆಹರು ಝೂಲಾಜಿಕಲ್ ಗಾರ್ಡನ್ಸ್ ಎಂದು ಕರೆಯಲಾಗುತ್ತಿದೆ. ಮಕ್ಕಳ ಉದ್ಯಾನವನ್ನು ಚಾಚಾ ನೆಹರು ಬಲ್ವಾಟಿಕಾ ಎಂದು ಕರೆಯಲಾಗುತ್ತಿದೆ ಹಾಗೂ  ಮ್ಯೂಸಿಯಂ ಅನ್ನು ರೂಬೆನ್ ಡೇವಿಡ್ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ ಎಂದು ಕರೆಯಲಾಗುತ್ತಿದೆ. 

1968 ರಲ್ಲಿ, ರೂಬೆನ್ ಡೇವಿಡ್ ಧ್ವನಿಪೆಟ್ಟಿಗೆಯ ಕ್ಯಾನ್ಸರಿನಿಂದ ತಮ್ಮ ಧ್ವನಿಯನ್ನು ಕಳೆದುಕೊಂಡರು. ಮುಂದಿನ ಇಪ್ಪತ್ತು ವರ್ಷಗಳ ಕಾಲದಲ್ಲೂ ಮೃಗಾಲಯದಲ್ಲಿ ಕೆಲಸ ಮಾಡುವುದನ್ನು ಮುಂದುವರೆಸಿ, ತಮ್ಮ ಎಲೆಕ್ಟ್ರೋ ಲಾರೆಂಕ್ಸ್ ಸಂಜ್ಞಾ ಸಂವೇದನೆಗಳ ಮೂಲಕ  ಪಕ್ಷಿಗಳು ಮತ್ತು ಪ್ರಾಣಿಗಳೊಂದಿಗೆ ಸಂವಹನ ನಡೆಸಿದರು. ತಮ್ಮ ಜೀವಿತದ ಕೊನೆಯವರೆಗೂ, ಅವರು ತಮ್ಮ ಕಾಡು ಸಾಕುಪ್ರಾಣಿಗಳು ಮತ್ತು ಗುಜರಾತಿನ ಜನರಿಂದ  ಅಪಾರವಾಗಿ ಪ್ರೀತಿಸಲ್ಪಟ್ಟರು. 

ರೂಬೆನ್ ಡೇವಿಡ್ ಅವರು ಮಗ್ಗರ್ ಮೊಸಳೆಗಳು, ಫ್ಲೆಮಿಂಗೋಗಳು ಮತ್ತು ಬಿಳಿ ಪಕ್ಷಿಗಳು ಮತ್ತು ಇತರ ಪ್ರಾಣಿಗಳ ಸಂತಾನೋತ್ಪತ್ತಿ  ವೃದ್ಧಿಸುವ ಕಾರ್ಯದಲ್ಲಿ  ಅಪಾರ ಕೆಲಸ ಮಾಡಿದರು. ಮಣಿನಗರ ಪ್ಯಾಂಥರ್, ವಡ್ನಾಗರ್ ಪ್ಯಾಂಥರ್ ಹಾಗೂ ನರಭಕ್ಷಕ ಮೊಸಳೆಗಳು, ಮಾನವ ವಾಸಸ್ಥಳಕ್ಕೆ ದಾರಿ ತಪ್ಪಿ ಬಂದ ಪಕ್ಷಿಗಳು ಮತ್ತು ಪ್ರಾಣಿಗಳನ್ನು ಸೆರೆಹಿಡಿಯುವುದರಲ್ಲಿ ಅವರು ಹೆಸರುವಾಸಿಯಾಗಿದ್ದರು.

ರೂಬೆನ್ ಡೇವಿಡ್ ಅವರು ಅಂತರರಾಷ್ಟ್ರೀಯ ಮೃಗಾಲಯದ ವರ್ಷದ ಪುಸ್ತಕಕ್ಕೆ ಕೊಡುಗೆ ನೀಡುತ್ತಿದ್ದರು, ಇದು ಅಹಮದಾಬಾದ್ ಮೃಗಾಲಯದಲ್ಲಿ ಮಾಡಿದ ಎಲ್ಲಾ ಪಕ್ಷಿಗಳು ಮತ್ತು ಪ್ರಾಣಿಗಳ ಯಶಸ್ವಿ ಸಂತಾನೋತ್ಪತ್ತಿಯನ್ನು ದಾಖಲಿಸುತ್ತದೆ. ಮಾಂಟು ಸಿಂಹ ಮತ್ತು ಟಾಮಿ ನಾಯಿಯಂತಹ ವಿರುದ್ಧ ಸ್ವಭಾವದ ಪ್ರಾಣಿಗಳು ಹಾಗೂ ಪಕ್ಷಿಗಳಿಗೆ ಒಟ್ಟಿಗೆ ಬದುಕಲು ಕಲಿಸುತ್ತಿದ್ದ ಅವರು ಸಹಬಾಳ್ವೆಯ ಪ್ರಯೋಗಗಳಿಗೆ ಹೆಸರುವಾಸಿಯಾಗಿದ್ದರು. 

ಭಾರತದಲ್ಲಿ ಅಮೆರಿಕದ ರಾಯಭಾರಿಯಾಗಿದ್ದ ಪ್ರೊ. ಜಾನ್ ಗಾಲ್‌ಬ್ರೈತ್ ಅವರು 1962ರಲ್ಲಿ, ತಮ್ಮ ಪುಸ್ತಕವಾದ ಆನ್ ಅಂಬಾಸಿಡರ್ಸ್ ಜರ್ನಲ್‌ನಲ್ಲಿ ರೂಬೆನ್ ಡೇವಿಡ್ ಅವರೊಂದಿಗಿನ ಭೇಟಿಯ ಬಗ್ಗೆ ಬರೆದಿದ್ದಾರೆ.

ರೂಬೆನ್ ಡೇವಿಡ್ ಅವರು ಗುಜರಾತ್‌ನ ಅರಣ್ಯ ಸರ್ಕಾರದ ನಿವೃತ್ತ ಮುಖ್ಯ ಸಂರಕ್ಷಣಾಧಿಕಾರಿ ಎಂ.ಎ. ರಶೀದ್ ಅವರೊಂದಿಗೆ 'ದ ಏಷಿಯಾಟಿಕ್ ಲಯನ್' ಎಂಬ ಪುಸ್ತಕ ರಚಿಸಿದ್ದರು. 1991ರಲ್ಲಿ ಭಾರತ ಸರ್ಕಾರದ ಪರಿಸರ ಇಲಾಖೆಯು ಈ ಪುಸ್ತಕವನ್ನು ಪ್ರಕಟಿಸಿತು. 

ರೂಬೆನ್ ಡೇವಿಡ್ ಅವರಿಂದ ಪ್ರೇರಿತರಾದ ಆಸ್ಟ್ರೇಲಿಯನ್ ಮಾನವಶಾಸ್ತ್ರಜ್ಞ ಕಾಲಿನ್ ಗ್ರೋವ್ಸ್ ಅವರು 1981ರಲ್ಲಿ ಇತಿಹಾಸಪೂರ್ವ ವಾರ್ಥ್ ಹಾಗ್ ಅನ್ನು ಅನ್ವೇಷಿಸಿ ಅದಕ್ಕೆ ರೂಬೆನ್ ಡೇವಿಡ್ ಅವರ ಗೌರವ ಸೂಚಕವಾಗಿ 'ಸಸ್ ಸ್ಕ್ರೋಫಾ ಡೇವಿಡಿ' ಎಂದು ಹೆಸರಿಸಿದರು. 

ರೂಬೆನ್ ಡೇವಿಡ್ ಅವರ ಕಂಚಿನ ಪ್ರತಿಮೆ ಈಗ ಅಹಮದಾಬಾದಿನ ಮೃಗಾಲಯದ ಆವರಣದಲ್ಲಿದೆ. ಈ ಪ್ರತಿಮೆಯನ್ನು 1962ರಲ್ಲಿ ಪ್ರಸಿದ್ಧ ಶಿಲ್ಪಿ ಸಂಖೋ ಚೌಧುರಿ ಅವರು ತಯಾರಿಸಿದ್ದರು.‍ ಕಾಂತಿ ಪಟೇಲ್ ಅವರು ಕಂಚಿನ ಮೇಲೆ ಎರಕಹೊಯ್ದರು, ಅದರ ಪ್ರತಿಯನ್ನು ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಸಿಟಿ ಮ್ಯೂಸಿಯಂನಲ್ಲಿ ಇರಿಸಲಾಗಿದೆ. ರೂಬೆನ್ ಡೇವಿಡ್ ಅವರು 'ಸುಂದರವನ್'‌ ಪ್ರಕೃತಿ ಉದ್ಯಾನವನದ ಸಲಹೆಗಾರರೂ ಆಗಿದ್ದರು.

ಹಿಂದೂಸ್ತಾನ್ ಟೈಮ್ಸ್‌ನಲ್ಲಿ ಖುಷ್ವಂತ್ ಸಿಂಗ್ ಹೀಗೆ ಬರೆದಿದ್ದರು.  "ಸ್ಟೀವ್ ಇರ್ವಿನ್ ಎಂಬ ಪ್ರಸಿದ್ಧ ಮೊಸಳೆ ಬೇಟೆಗಾರ ಸ್ಟಿಂಗ್ ರೇನಿಂದ ಕೊಲ್ಲಲ್ಪಟ್ಟಾಗ, ಆಸ್ಟ್ರೇಲಿಯಾದಲ್ಲಿ ಮಾತ್ರ ಮೊಸಳೆಗಳು, ಅಲಿಗೇಟರ್‌ಗಳು ಮತ್ತು ವಿಷಪೂರಿತ ಹಾವುಗಳಂತಹ ಅಪಾಯಕಾರಿ ಪ್ರಾಣಿಗಳನ್ನು ಹಿಡಿಯುವ ಡೇರ್‌ಡೆವಿಲ್‌ಗಳು ಹುಟ್ಟಿಕೊಂಡಿದ್ದಾರೆ ಎಂದು ನಾನು ತೀರ್ಮಾನಿಸಿದ್ದೆ.  ಆದರೆ ನಂತರ ಅರಿವಾಯಿತು. ಅನೇಕ ಭಾರತೀಯರು ತಲೆಮಾರುಗಳಿಂದ ಹೀಗೆ ಮಾಡುತ್ತಿದ್ದಾರೆ ಮತ್ತು ಇಂದಿನವರೆಗೂ ಹಾಗೆ ಮಾಡುತ್ತಿದ್ದಾರೆ. ಅವರಲ್ಲಿ ಅಹಮದಾಬಾದ್‌ನ ರೂಬೆನ್ ಡೇವಿಡ್ ಅತ್ಯಂತ ಪ್ರಸಿದ್ಧರು. ಅವರು ಮೊಸಳೆಗಳು ಮತ್ತು ಹಾವುಗಳನ್ನು ಮಾತ್ರವಲ್ಲದೆ ಹುಲಿಗಳು, ಸಿಂಹಗಳು, ಲಂಗೂರ್ಗಳು, ಕರಡಿಗಳು ಮತ್ತು ವಿವಿಧ ಪಕ್ಷಿಗಳನ್ನು ಸೆರೆಹಿಡಿದರು. ಅವರು ತಮ್ಮ  ಈ ಸ್ನೇಹಿತರನ್ನು ಉತ್ತಮ ಸ್ಥಿತಿಯಲ್ಲಿಡಲು ತಮ್ಮದೇ ಆದ ಗಿಡಮೂಲಿಕೆ ಔಷಧಿಗಳನ್ನು ರೂಪಿಸಿದರು. ಅವರ ಜೀವನ ಕಥೆಯನ್ನು ಅವರ ಮಗಳು ಎಸ್ತರ್ ಡೇವಿಡ್ ಬರೆದಿದ್ದಾರೆ. ಅವಳ ರೇಖಾ ಚಿತ್ರಗಳು ಆತ ಪಕ್ಷಿಗಳು ಮತ್ತು ಮೃಗಗಳಿಗೆ ಎಷ್ಟು ಹತ್ತಿರವಾಗಿದ್ದನು ಎಂಬುದನ್ನು ವಿವರಿಸುತ್ತವೆ.  ಆತ ಆ ಜೀವಿಗಳೊಂದಿಗೆ ವಾಸಿಸುತ್ತಿದ್ದನು. ಆತ ಹೆಣ್ಣು ಮೊಸಳೆಯೊಂದರ ಬಳಿ ಕುಳಿತು ಅದು ಮೊಟ್ಟೆಗಳನ್ನು ಇಡುತ್ತಿದ್ದಾಗ ಅದಕ್ಕೆ ಕಾವು ಕೊಡಲು ಸಹಾಯ ಮಾಡಿದನು. ಇದು ಮಾನವ-ಪ್ರಾಣಿ ಸಂಬಂಧಗಳು ಎಷ್ಟು ಸಾಮರಸ್ಯದಿಂದ ಕೂಡಿರುತ್ತವೆ ಎಂಬುದರ ನಿಜವಾದ ಜೀವನ ಕಥೆಯಾಗಿದೆ.  ಯಾವುದೇ ವ್ಯಕ್ತಿ ತನ್ನ ಪ್ರೀತಿಯನ್ನು ಪ್ರಾಣಿ ಅಥವಾ ಪಕ್ಷಿಗಳಿಗೆ ನೀಡಿದರೆ ಅದು ಅವರಿಗೆ ಪೂರ್ಣ ಪ್ರಮಾಣದಲ್ಲಿ ಮರಳುತ್ತವೆ. ಈ ಪುಸ್ತಕವು ವಿಶೇಷವಾಗಿ ಹದಿಹರೆಯದವರಿಗೆ ಉದ್ದೇಶಿಸಲಾಗಿದೆಯಾದರೂ ವಯಸ್ಕರಿಗೂ ಸಮಾನ ರೀತಿಯಲ್ಲಿ ಓದಲು ಆಕರ್ಷಕವಾಗಿದೆ".

ರೂಬೆನ್ ಡೇವಿಡ್ ಅವರಿಗೆ 1975ರಲ್ಲಿ ಪದ್ಮಶ್ರೀ ಪ್ರಶಸ್ತಿ, ವಿಶ್ವ ಗುರ್ಜರಿ ಪ್ರಶಸ್ತಿ, ರೋಟರಿ ಪ್ರಶಸ್ತಿ, ದಧೀಚಿ ಪ್ರಶಸ್ತಿ ಮುಂತಾದ ಅನೇಕ ಪ್ರಶಸ್ತಿಗಳು ಸಂದಿದ್ದವು. 

ರೂಬೆನ್ ಡೇವಿಡ್ 1989 ಮಾರ್ಚ್ 24 ರಂದು ನಿಧನರಾದರು.

2012ರ ಸೆಪ್ಟೆಂಬರ್ 19ರಂದು ರೂಬೆನ್ ಡೇವಿಡ್ ಅವರ ನೂರನೇ ಜನ್ಮದಿನವನ್ನು ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಭವ್ಯ ರೀತಿಯಲ್ಲಿ ಆಯೋಜಿಸಿತ್ತು.

On the birth anniversary of great Reuben David, Founder of Ahmedabad Zoo

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ