ಲೆಸ್ಲಿ ಕೋಲ್‍ಮನ್
ಕನ್ನಡ ನಾಡಿನ ಮಹಾನ್ ರೈತಬಂಧು ಲೆಸ್ಲಿ ಕೋಲ್‍ಮನ್
ಲೆಸ್ಲಿ ಸಿ ಕೋಲ್‍ಮನ್ ಮೈಸೂರು ಸಂಸ್ಥಾನದಲ್ಲಿ ಆಧುನಿಕ ಕೃಷಿಯ ಪ್ರವರ್ತಕರೆಂದು ಪ್ರಸಿದ್ಧರು. ಇಂದು ಈ ಮಹಾನುಭಾವರ ಸಂಸ್ಮರಣೆ ದಿನ.
ಕೋಲ್‍ಮನ್ ಅವರು ಕೆನಡ ದೇಶದ ಟೊರಾಂಟೋ ರಾಜ್ಯದ ಆಂಟೇರಿಯೋ ಪಟ್ಟಣದಲ್ಲಿ 1878ರ ಜೂನ್ 16ರಂದು ಜನಿಸಿದರು. ಆಂಟೇರಿಯೋ ವಿಶ್ವವಿದ್ಯಾಲಯದ ಎಂ.ಎ. ಪದವೀಧರರು. ಮೈಸೂರು ಸರ್ಕಾರದ ನೆರವಿನಿಂದ ಜರ್ಮನಿಯ ಗಟಿಂಗೆನ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ನಡೆಸಿ ಡಾಕ್ಟರೇಟ್ ಪದವಿ ಪಡೆದರು.
ಕೋಲ್‍ಮನ್ ಮೊದಲು ಸಂಸ್ಥಾನ ಸರ್ಕಾರದ ಕೀಟ ಮತ್ತು ಶಿಲೀಂಧ್ರ ವಿಜ್ಞಾನಿಯಾಗಿಯೂ (1908) ತರುವಾಯ ವ್ಯವಸಾಯ ಇಲಾಖೆಯ ನಿರ್ದೇಶಕರಾಗಿಯೂ (1913) ದುಡಿದು 1934ರಲ್ಲಿ ನಿವೃತ್ತರಾದರು. ಈ ಕಾಲು ಶತಮಾನದ ನಿಷ್ಠಾವಂತ ಮತ್ತು ದಕ್ಷ ಸೇವೆಯ ಮೂಲಕ ಕೋಲ್ಮನ್ ಮೈಸೂರಿನಲ್ಲಿ ಕೃಷಿರಂಗದ ಸರ್ವತೋಮುಖ ಪ್ರಗತಿಗೆ ಕಾರಣರಾದರು. ಅಮೆರಿಕ, ಜರ್ಮನಿ ಮುಂತಾದ ಮುಂದುವರಿದ ದೇಶಗಳಲ್ಲಿ ಅನುಷ್ಠಾನಕ್ಕೆ ತಂದಿದ್ದ ಸುಧಾರಣೆಗಳನ್ನು ಮೈಸೂರಿನ ಸ್ಥಿತಿಗತಿಗಳಿಗೆ ತಕ್ಕಂತೆ ಮಾರ್ಪಾಡು ಮಾಡಿ ಜೋಡಿಸುವ ಮೂಲಕ ಇಲ್ಲಿನ ಕೃಷಿಪದ್ಧತಿಯನ್ನು ವೈಜ್ಞಾನಿಕ ಬುನಾದಿಯ ಮೇಲೆ ಸ್ಥಾಪಿಸಿ ಆಧುನೀಕರಿಸುವ ಪ್ರಯತ್ನ ಬಹಳ ಮಟ್ಟಿಗೆ ಸಫಲಗೊಂಡಿತು.
ಮೈಸೂರು ಕೃಷಿರಂಗದಲ್ಲಿ ಕೋಲ್ಮನ್ ತಂದ ವಿವಿಧ ಸುಧಾರಣೆಗಳನ್ನು ಪಟ್ಟಿಮಾಡುವುದು ಕಷ್ಟ; ಆದರೂ ಕೆಲವು ಹೆಗ್ಗುರುತುಗಳನ್ನು ಸ್ಮರಿಸಬಹುದು.
ಮಲೆನಾಡಿನ ಮುಖ್ಯ ಬೆಳೆ ಅಡಿಕೆಗೆ ಹತ್ತುವ ಶಿಲೀಂಧ್ರಜನ್ಯ ಕೊಳೆರೋಗದಿಂದ ಬೆಳೆಗಾರರು ಕಂಗಾಲಾಗಿದ್ದರು. ಆಳವಾದ ಮತ್ತು ವ್ಯಾಪಕ ಸಂಶೋಧನೆಗಳನ್ನು ನಡೆಸಿದ ಕೋಲ್ಮನ್ ಫೈಟಾಫ್ತೊರ ಅರಕೀ ಎಂಬ ವೈಜ್ಞಾನಿಕ ಹೆಸರಿನ ಆ ಶಿಲೀಂಧ್ರದ ರೂಪರೇಖೆಗಳನ್ನು ವಿವರಿಸಿ ಅದರ ಹಾವಳಿಯನ್ನು ತಡೆಗಟ್ಟಲು ಬೋರ್ಡೋ (ಮೈಲುತುತ್ತ ಮತ್ತು ಸುಣ್ಣದ ತಿಳಿ) ಮಿಶ್ರಣದ ಸಿಂಪಡಿಕೆಯನ್ನು ಅಳವಡಿಸಿಕೊಟ್ಟರು. ಮುಂಗಾರು-ಹಿಂಗಾರು ಮಳೆಗಳ ಅವಧಿಯಲ್ಲಿ ಸಮರೋಪಾದಿಯಾಗಿ ವ್ಯವಸ್ಥೆಗೊಳಿಸಿದ್ದ ಕಾರ್ಯಕ್ರಮ ಈಗಲೂ ಸೂಕ್ತ ಮಾರ್ಪಾಡುಗಳೊಂದಿಗೆ ಅಸ್ತಿತ್ವದಲ್ಲಿದೆ. ಹಾಗೆಯೇ ಕಾಫಿ ಬೆಳೆಗೆ ಹತ್ತುವ ಎಲೆರೋಗ, ಕೊಳೆರೋಗಗಳ ದೀರ್ಘ ಅಧ್ಯಯನ ನಡೆಸಿ ಅವುಗಳ ಹತೋಟಿಗೆ ಬೋರ್ಡೋ ಮಿಶ್ರಣ ಸಿಂಪಡಿಕೆಯನ್ನು ಅನುಷ್ಠಾನಕ್ಕೆ ತಂದರು. ಚಿತ್ರದುರ್ಗ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಖುಷ್ಕಿ ಬೆಳೆಗಳಿಗೆ ಕಂಟಕವಾದ ಆರುಕಾಲು ಚಿಟ್ಟೆ ಅಥವಾ ಕುದುರೆ ಮೂತಿ ಚಿಟ್ಟೆಯ ಸಮಗ್ರ ಅಧ್ಯಯನ ಮಾಡಿ ಸರಳರೀತಿಯ ನಿವಾರಣೋಪಾಯ ಸೂಚಿಸಿದರು. ಇವರ ಜ್ಞಾಪಕಾರ್ಥವಾಗಿ ಆ ಮಿಡಿತೆಗೆ ಕೋಲ್ಮೇನಿಯಾ ಸ್ಫೆನೆರಿಯಾಯ್ಡೀಸ್ ಎಂಬ ವೈಜ್ಞಾನಿಕ ಹೆಸರಿದೆ. ಕೋಲಾರ ಜಿಲ್ಲೆಯ ಹೊಲಗಳಲ್ಲಿ ಮುಂಗಾರಿನಲ್ಲಿ ತಲೆದೋರುವ ಕಂಬಳಿಹುಳುವಿನ ಹತೋಟಿ, ಚಿಟ್ಟೆಗಳನ್ನು ಸಾಮೂಹಿಕವಾಗಿ ಕೈಯಿಂದ ಆರಿಸಿಹಾಕುವ ಸರಳ ರೀತಿಯಲ್ಲಿ ಸಾಧ್ಯವಾಯಿತು. ಕೋಲ್ಮನ್ನರ ಸಂಚಾಲಕತ್ವದಲ್ಲಿ ರಾಗಿ, ಭತ್ತ, ಹತ್ತಿ, ಕಬ್ಬು, ಹರಳು ಮುಂತಾದ ಬೆಳೆಗಳ ಶ್ರೇಷ್ಠ ತಳಿಗಳನ್ನು ಅಭಿವೃದ್ಧಿ ಪಡಿಸುವ ಕಾರ್ಯಕ್ರಮ ಅವ್ಯಾಹತವಾಗಿ ಜರುಗಿತು. ಹಲವಾರು ಕೃಷಿ ಸಂಶೋಧನ ಕೇಂದ್ರಗಳು ಸ್ಥಾಪನೆಯಾದವು, ಅನೇಕ ಹೊಸ ತಳಿಗಳು ರೈತರಿಗೆ ದೊರೆತವು. ಮಂಡ್ಯ ಜಿಲ್ಲೆಯ ಇಂದಿನ ಏಳಿಗೆಯಲ್ಲಿ ಕೋಲ್ಮನ್ನರ ರಚನಾತ್ಮಕ ಪಾತ್ರ ಉಲ್ಲೇಖಾರ್ಹ. ವಿಶ್ವೇಶ್ವರಯ್ಯ ನಾಲೆ ಪ್ರದೇಶದ ಪ್ರಗತಿ ಬಗ್ಗೆ ಅವರು ವಹಿಸಿದ ವಿಶೇಷ ಆಸಕ್ತಿಯ ಫಲವಾಗಿ ಮಂಡ್ಯ ಸಕ್ಕರೆ ನಗರವಾಯಿತು. ಕೋಲ್ಮನ್ನರ ಸಲಹೆಯಂತೆ ಉಪನಾಲೆಗಳ ಕೆಳಗಿನ ಜಮೀನುಗಳನ್ನು ತಾಕುಗಳಾಗಿ ವಿಂಗಡಿಸಿ ಅವುಗಳಲ್ಲಿ ಕಡ್ಡಾಯವಾಗಿ ಸರದಿ ಮೇಲೆ ನಿರ್ದಿಷ್ಟ ಬೆಳೆಗಳನ್ನಿಡುವ ಪದ್ಧತಿ ಅನುಷ್ಠಾನಕ್ಕೆ ಬಂತು.
ಬೆಂಗಳೂರು ನಗರದ ಸಮೀಪದ ಹೆಬ್ಬಾಳಿನಲ್ಲಿ ಕೋಲ್ಮನ್ 1913ರಲ್ಲಿ ಸ್ಥಾಪಿಸಿದ ವ್ಯವಸಾಯ ಶಾಲೆ ಈಗ ಕೃಷಿ ವಿಶ್ವವಿದ್ಯಾಲಯವಾಗಿದೆ. ರೈತಮಕ್ಕಳ ಮತ್ತು ಕ್ಷೇತ್ರನೌಕರರ ಶಿಕ್ಷಣಕ್ಕಾಗಿ ಚಿಕ್ಕನಹಳ್ಳಿ, ರಾಮಕೃಷ್ಣಾಪುರ ಮತ್ತಿತರ ರೈತ ಬಾಂಧವರ ನಡುವೆ ವಿಚಾರವಿನಿಮಯ ಕೇಂದ್ರವಾಗಿ ಮೈಸೂರು ರೈತಸಂಘ 1920ರಲ್ಲಿ ಅಸ್ತಿತ್ವಕ್ಕೆ ಬಂದು ಇಂದಿಗೂ ರೈತಜನರ ಏಳಿಗೆಗಾಗಿ ಅವಿಶ್ರಾಂತವಾಗಿ ದುಡಿಯುತ್ತಿದೆ. ಕೋಲಾರ ನೇಗಿಲು ಮುಂತಾದ ಸರಳರಚನೆಯ ಸುಧಾರಿಸಿದ ಕೃಷಿಪರಿಕರಗಳು ಟ್ರಾಕ್ಟರ್‍ನಿಂದ ಉಳುಮೆ, ರಾಸಾಯನಿಕ ಗೊಬ್ಬರಗಳ ಬಳಕೆ, ಜಾನುವಾರು ಮತ್ತು ರೇಷ್ಮೆ ಉದ್ಯಮಗಳ ಅಭಿವೃದ್ಧಿ, ಪಶುವೈದ್ಯಕೀಯ ಪ್ರಗತಿ, ಇತ್ಯಾದಿಗಳಲ್ಲಿ ಕೋಲ್ಮನ್ನರ ಕೊಡುಗೆ ಗಣನೀಯ.
ಮೃದುಸ್ವಭಾವದ ಕೋಲ್ಮನ್ನರು ರೈತಬಾಂಧವರನ್ನು ವಿಶೇಷ ಅನುಕಂಪ, ಪ್ರೀತಿ, ವಾತ್ಸಲ್ಯಗಳಿಂದ ಕಾಣುತ್ತ ಅವರ ಅಭಿಮಾನ, ಪ್ರೀತಿಗಳಿಗೆ ಪಾತ್ರರಾಗಿದ್ದರು.
ಮೈಸೂರು ಸರ್ಕಾರದ ಸೇವಾವಧಿ 1934ರಲ್ಲಿ ಮುಗಿದು ಸ್ವದೇಶಕ್ಕೆ ಹಿಂತಿರುಗಿದ ಮೇಲೆ ಕೋಲ್ಮನ್ ಏಡಿಗಂತಿ ರೋಗದ ಸಂಶೋಧನೆಯಲ್ಲಿ ನಿರತರಾಗಿದ್ದು ಆ ಕ್ಷೇತ್ರದಲ್ಲಿ ಸಹ ಶ್ರೇಷ್ಠ ಸಂಶೋಧಕರೆಂದು ಹೆಸರು ಪಡೆದರು. 1954ರ ಪ್ರಾರಂಭದಲ್ಲಿ ಮೈಸೂರು ಸರ್ಕಾರದ ಆಹ್ವಾನದ ಮೇಲೆ ಸಂಸ್ಥಾನದಲ್ಲಿ ಒಂದೆರಡು ತಿಂಗಳು ತಿರುಗಾಡಿ ಕೃಷಿರಂಗದ ಪ್ರಗತಿಯ ಬಗ್ಗೆ ಅಧ್ಯಯನ ನಡೆಸಿ, ಅದರ ಮುಂದಿನ ಬೆಳೆವಣಿಗೆಯ ರೂಪರೇಖೆಗಳನ್ನೊಳಗೊಂಡ ಸಮಗ್ರ ವರದಿಯನ್ನು ಸರ್ಕಾರಕ್ಕೆ ಒಪ್ಪಿಸಿದರು. ತರುವಾಯ ಕೆನಡ ದೇಶಕ್ಕೆ ಹಿಂತಿರುಗಿ ಪುನಃ ಏಡಿಗಂತಿ ಸಂಶೋಧನೆಯಲ್ಲಿ ತೊಡಗಿ ತತ್‍ಸಂಬಂಧದಲ್ಲಿ ಒಂದು ಪ್ರವಾಸ ಮಾಡುತ್ತಿದ್ದಾಗ ಮೋಟಾರು ಅಪಘಾತದಲ್ಲಿ 1954ರ ಸೆಪ್ಟೆಂಬರ್ 14ರಂದು ವಿಧಿವಶರಾದರು.
On Remembrance Day of great agriculture scientist Leslie Coleman
ಕಾಮೆಂಟ್‌ಗಳು