ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಚಂದ್ರಶೇಖರಭಾರತಿ


 ಶ್ರೀ ಚಂದ್ರಶೇಖರಭಾರತಿ ಸ್ವಾಮಿಗಳು


ಯೋಗಿವರ್ಯ ಶ್ರೀ ಚಂದ್ರಶೇಖರಭಾರತಿ ಸ್ವಾಮಿಗಳು ಅವಧೂತರಾಗಿ ಶೃಂಗೇರಿ ಶಾರದಾ ಪೀಠದ ಜಗದ್ಗುರು  ಶಂಕರಾಚಾರ್ಯರಾಗಿ ಖ್ಯಾತರು. ಅವರು 20ನೇ ಶತಮಾನದಲ್ಲಿ ಹಿಂದೂ ಧರ್ಮದ ಅತ್ಯಂತ ಮಹತ್ವದ ಆಧ್ಯಾತ್ಮಿಕ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು. ಅವರು ಜೀವನ್ಮುಕ್ತರು.

ಶ್ರೀ ಚಂದ್ರಶೇಖರಭಾರತಿ ಸ್ವಾಮಿಗಳ ಪೂರ್ವಾಶ್ರಮದ ಹೆಸರು ನರಸಿಂಹ ಶಾಸ್ತ್ರಿ.  ಗೋಪಾಲ ಶಾಸ್ತ್ರಿ ಮತ್ತು ಲಕ್ಷ್ಮಮ್ಮ ದಂಪತಿಗಳಿಗೆ ಶೃಂಗೇರಿಯಲ್ಲಿ ಹಿಂದೂ ಚಾಂದ್ರಮಾನ ಸಂವತ್ಸರ ನಂದನ (1892ರ ಅಕ್ಟೋಬರ್ 16ರಂದು) ಆಶ್ವಯುಜ ಶುಕ್ಲ ಏಕಾದಶಿಯಂದು ಜನಿಸಿದರು. ಅವರು ತಮ್ಮ ಹೆತ್ತವರ ಹನ್ನೆರಡು ಮಕ್ಕಳಲ್ಲಿ ಕೊನೆಯವರು ಮತ್ತು ಶೈಶವಾವಸ್ಥೆಯಲ್ಲಿ ಬದುಕುಳಿದ ಏಕೈಕ ಮಗು.

ನರಸಿಂಹ ಶಾಸ್ತ್ರಿಗಳ ಬಾಲ್ಯದ ದಿನಗಳು ಶೃಂಗೇರಿಯಲ್ಲಿ ಕಳೆದವು. ಅಂತರ್ಮುಖಿಯಾದ ಅವರಿಗೆ ಸಾಮಾಜಿಕ ಜೀವನದಲ್ಲಿದ್ದ  ಆಕರ್ಷಣೆ ಅತ್ಯಲ್ಪದ್ದಾಗಿತ್ತು. ಶೃಂಗೇರಿ ಮಠದ ಅಂದಿನ ಆಡಳಿತಾಧಿಕಾರಿಗಳಾದ ಶ್ರೀಕಂಠ ಶಾಸ್ತ್ರಿಗಳ ಮನೆಯಲ್ಲಿ ಅವರು ವಾಸ್ತವ್ಯ ಹೂಡಿದ್ದರು. ಅವರ ತಂದೆ ತಾಯಿ ಚೂಡಾಕರ್ಮ ನೆರವೇರಿಸಿದರು. ನಂತರ ಅವರನ್ನು ಸ್ಥಳೀಯ ಸರ್ಕಾರಿಆಂಗ್ಲೋ-ವರ್ನಾಕ್ಯುಲರ್ ಶಾಲೆಗೆ ಕಳುಹಿಸಲಾಯಿತು. ಅವರು ಎಂಟನೇ ವಯಸ್ಸಿನಲ್ಲಿದ್ದಾಗ ಅವರ ಬ್ರಹ್ಮೋಪದೇಶವನ್ನು ನೆರವೇರಿಸಲಾಯಿತು. ದಿನಕ್ಕೆ ಮೂರು ಬಾರಿ ಸಂಧ್ಯಾವಂದನೆ ಮತ್ತು ದಿನಕ್ಕೆ ಎರಡು ಬಾರಿ ಅಗ್ನಿಕಾರ್ಯವನ್ನು ಮಾಡುತ್ತಿದ್ದರು.
ಹನ್ನೆರಡನೇ ವರ್ಷದ ನಂತರ ಇವರ ಪ್ರಗತಿಯ ಮೇಲೆ  ಸೂಕ್ಷ್ಮವಾಗಿ ಗಮನವಿಟ್ಟಿದ್ದ ಜಗದ್ಗುರು ಶಂಕರಾಚಾರ್ಯರಾದ ಸ್ವಾಮಿ ಸಚ್ಚಿದಾನಂದ ಶಿವಾಭಿನವ ನರಸಿಂಹಭಾರತಿ ಸ್ವಾಮಿಗಳ ಆಶಯದಂತೆ ಶೃಂಗೇರಿಯ ಸದ್ವಿದ್ಯಾ ಸಂಜೀವಿನಿ ಪಾಠಶಾಲೆಗೆ ಸೇರಿದರು.

ಶೃಂಗೇರಿಯ ಶಂಕರಾಚಾರ್ಯರು 1910 ರಲ್ಲಿ ಬೆಂಗಳೂರಿನಲ್ಲಿ ಭಾರತೀಯ ಗೀರ್ವಾಣ ಪ್ರೌಡ ವಿದ್ಯಾ ವರ್ಧಿನಿ ಶಾಲೆ ಎಂಬ ಉನ್ನತ ವೇದಾಂತ ತರಬೇತಿ ಸಂಸ್ಥೆಯನ್ನು ಸ್ಥಾಪಿಸಿದರು. ನರಸಿಂಹ ಶಾಸ್ತ್ರಿಯವರು ಆ ಸಂಸ್ಥೆಯ ವಿದ್ಯಾರ್ಥಿಯಾದರು. 1911ರಲ್ಲಿ ತಮ್ಮ ಹೆತ್ತವರೊಂದಿಗೆ ಬೆಂಗಳೂರಿಗೆ ತೆರಳಿದ ನರಸಿಂಹ ಶಾಸ್ತ್ರಿಗಳು ಅಲ್ಲಿ ಅಧ್ಯಯನದಲ್ಲಿ ತಲ್ಲೀನರಾದರು. ಮಹಾಮಹೋಪಾಧ್ಯಾಯ ವೆಲ್ಲೂರು ಸುಬ್ರಹ್ಮಣ್ಯ ಶಾಸ್ತ್ರಿಗಳು ಮತ್ತು ಮೀಮಾಂಸಾ ಶಿರೋಮಣಿ ವೈದ್ಯನಾಥ ಶಾಸ್ತ್ರಿಗಳು ಭಟ್ಟ ದೀಪಿಕಾ ಮೊದಲಾದ ಗ್ರಂಥಗಳಿಂದ ಅವರಿಗೆ ಪೂರ್ವ ಮೀಮಾಂಸೆಯನ್ನು ಕಲಿಸಿದರು. ಮಹಾಮಹೋಪಾಧ್ಯಾಯ ವಿರೂಪಾಕ್ಷ ಶಾಸ್ತ್ರಿಗಳು ಅವರಿಗೆ ವೇದಾಂತವನ್ನು ಕಲಿಸಿದರು. ಬೆಂಗಳೂರಿನಲ್ಲೂ ಇಹಲೋಕದ ವ್ಯಾಪರದೆಡೆಗೆ ಅವರ ಮನ ಸುಳಿಯಲಿಲ್ಲ. ಬೆಂಗಳೂರಿನ ಗವಿಪುರಂನಲ್ಲಿರುವ ಗವಿಗಂಗಾಧರೇಶ್ವರ ದೇವಸ್ಥಾನದ ಶಾಂತಿಯುತ ಪರಿಸರದಲ್ಲಿ ಅವರು ತಮ್ಮ ಬಿಡುವಿನ ವೇಳೆಯನ್ನು ಕಳೆದರು.

1912ರಲ್ಲಿ ಜಗದ್ಗುರು ಶಂಕರಾಚಾರ್ಯ ಸಚ್ಚಿದಾನಂದ ಶಿವಾಭಿನವ ನೃಸಿಂಹ ಭಾರತಿಯವರು ಶಾರದ ಪೀಠಕ್ಕೆ ನರಸಿಂಹ ಶಾಸ್ತ್ರಿಗಳನ್ನು ತಮ್ಮ ಉತ್ತರಾಧಿಕಾರಿಯಾಗಿ ನೇಮಿಸಿರುವ ವಿಚಾರವನ್ನು ಮೈಸೂರಿನ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಕಳುಹಿಸಿದರು. ನರಸಿಂಹ ಶಾಸ್ತ್ರಿಗಳು ಶೃಂಗೇರಿಗೆ ಆಗಮಿಸುವ ಮೊದಲೇ ಶಂಕರಾಚಾರ್ಯರು ವಿದೇಹ ಮುಕ್ತಿಯನ್ನು ಪಡೆದರು.

1912ರ ಏಪ್ರಿಲ್ 7ರಂದು ನರಸಿಂಹ ಶಾಸ್ತ್ರಿಗಳಿಗೆ ಸ್ವಾಮಿ ಸತ್ಯಾನಂದ ಸರಸ್ವತಿಯವರು ಸಂನ್ಯಾಸ ದೀಕ್ಷೆ ನೀಡಿ ಸ್ವಾಮಿ ಚಂದ್ರಶೇಖರಭಾರತಿ ಎಂಬ ಯೋಗ ಪಟ್ಟವನ್ನು ನೀಡಿದರು.

1916ರಲ್ಲಿ ಶೃಂಗೇರಿಯ ಶಾರದ ದೇವಸ್ಥಾನದ ಕುಂಭಾಭಿಷೇಕವನ್ನು ಶ್ರೀ ಶಂಕರಾಚಾರ್ಯ ಚಂದ್ರಶೇಖರಭಾರತಿ ಸ್ವಾಮಿಗಳು ನೆರವೇರಿಸಿದರು. 1924ರಲ್ಲಿ ಅವರು ತಮ್ಮ ಮೊದಲ ಯಾತ್ರೆಗಾಗಿ ಶೃಂಗೇರಿಯಿಂದ ಹೊರಟು ಮೊದಲು ಮೈಸೂರು ತಲುಪಿ ತಮ್ಮ ಗುರುಗಳ ಮನೆಯಲ್ಲಿ ದೇವಾಲಯವನ್ನು ಪ್ರತಿಷ್ಠಾಪಿಸಿ, ಅದಕ್ಕೆ ಅಭಿನವ ಶಂಕರಾಲಯ ಎಂದು ಹೆಸರಿಟ್ಟರು. ನಂತರ ನಂಜನಗೂಡು, ಚಾಮರಾಜನಗರ ಮಾರ್ಗವಾಗಿ ಸತ್ಯಮಂಗಲಕ್ಕೆ ತೆರಳಿದರು. ನಂತರ ತಿರುನಲ್ವೇಲಿ ಮತ್ತು ಕನ್ಯಾಕುಮಾರಿ ಸೇರಿದಂತೆ ತಮಿಳು ದೇಶದ ದಕ್ಷಿಣ ಭಾಗಗಳಲ್ಲಿ ಪ್ರವಾಸ ಮಾಡಿದರು. ಮುಂದೆ ಅವರು ತಿರುವನಂತಪುರಂ ಮತ್ತು ತಿರುವಾಂಕೂರಿನ ಕಾಲಡಿಗೆ ಪ್ರವಾಸ ಮಾಡಿದರು. ಕಾಲಡಿಯಲ್ಲಿ 1927ರಲ್ಲಿ ಅವರು ವೇದಾಂತ ಪಾಠಶಾಲೆಯನ್ನು ಸ್ಥಾಪಿಸಿದರು. ನಂತರ ಅವರು ಕರ್ನಾಟಕ ಮತ್ತು ತಿರುವಾಂಕೂರಿನ ಇನ್ನೂ ಕೆಲವು ಸ್ಥಳಗಳಿಗೆ ಭೇಟಿ ನೀಡಿ ಶೃಂಗೇರಿಗೆ ಮರಳಿದರು.

ಶೃಂಗೇರಿಗೆ ಮರಳಿದ ನಂತರ ಶಂಕರಾಚಾರ್ಯ ಶ್ರೀ ಚಂದ್ರಶೇಖರಭಾರತಿ ಮಹಾಸ್ವಾಮಿಗಳು ಅವಧೂತ ಸ್ಥಿತಿಯನ್ನು ತಲುಪಿದರು. ಅವರು ಆತ್ಮದ ಅಂತರಂಗದ ಆನಂದದಲ್ಲಿ ಮುಳುಗಿದ್ದರು. ಧ್ಯಾನ ಮತ್ತು ಆತ್ಮದ ಚಿಂತನೆಯಲ್ಲಿ ಹೆಚ್ಚು ಸಮಯವನ್ನು ಕಳೆಯಲು, ಶ್ರೀನಿವಾಸ ಶಾಸ್ತ್ರಿ ಎಂಬ ವಟುವಿಗೆ  1931ರ ಮೇ 22ರಂದು ಶ್ರೀ ಅಭಿನವ ವಿದ್ಯಾತೀರ್ಥ ಎಂಬ ಹೆಸರಿನಲ್ಲಿ ಯೋಗಪಟ್ಟವನ್ನು ನೀಡಿದರು. 1938ರಲ್ಲಿ, ಶ್ರೀ ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮಿಗಳು ಬೆಂಗಳೂರು, ಮೈಸೂರು ಮತ್ತು ಕಾಲಡಿಗೆ ಯಾತ್ರೆ ಕೈಗೊಂಡರು. ಶೃಂಗೇರಿಗೆ ಹಿಂದಿರುಗಿದ ನಂತರ ವೇದಾಂತದ ಬಗ್ಗೆ ತಮ್ಮ ತರಗತಿಗಳನ್ನು ಪುನರಾರಂಭಿಸಿದರು.  ಮಠದಿಂದ ಪ್ರಕಟವಾದ ಆಸ್ತಿಕಮಠ ಸಂಜೀವಿನಿ ಎಂಬ ನಿಯತಕಾಲಿಕದಲ್ಲಿ ವೈಚಾರಿಕ ಮತ್ತು ವಿದ್ವತ್ಪೂರ್ಣ ಲೇಖನಗಳನ್ನು ಬರೆದರು. ನಿಜವಾದ ಅನ್ವೇಷಕರಿಗೆ ಸಂದರ್ಶನಗಳನ್ನು ನೀಡಿದರು ಮತ್ತು ಸಾರ್ವಜನಿಕರಿಗೆ ದರ್ಶನ ನೀಡಿದರು. ಅವರು ಸರಳ ಸಂಸ್ಕೃತದಲ್ಲಿ ಸಂಭಾಷಿಸುತ್ತಿದ್ದರು.

1945ರ ನಂತರ, ಶ್ರೀ ಚಂದ್ರಶೇಖರ ಭಾರತಿ ಮಹಾಸ್ವಾಮಿಗಳು ಕ್ರಮೇಣ ಎಲ್ಲಾ ಚಟುವಟಿಕೆಗಳಿಂದ ಹಿಂದೆ ಸರಿದರು. ಆದಾಗ್ಯೂ, ಅವರ ಖ್ಯಾತಿಯು ಎಲ್ಲೆಡೆ ಹರಡಿತು. 1954ರ ಆಗಸ್ಟ್ 24ರಂದು ಭಾರತದ ಮೊದಲ ರಾಷ್ಟ್ರಪತಿಗಳಾದ ಡಾ. ರಾಜೇಂದ್ರ ಪ್ರಸಾದ್ ಅವರು ಶಂಕರಾಚಾರ್ಯರಿಗೆ ಗೌರವ ಸಲ್ಲಿಸಲು ಶೃಂಗೇರಿಗೆ ಭೇಟಿ ನೀಡಿದರು.

1954ರ  ಸೆಪ್ಟೆಂಬರ್ 26ರಂದು ಜಗದ್ಗುರುಗಳು ಇಹಲೋಕವನ್ನು ತ್ಯಜಿಸಿದರು. ಅಂದು ಬೆಳಿಗ್ಗೆ ಬೇಗನೆ ಎದ್ದು ತುಂಗಾ ನದಿಯ ಕಡೆಗೆ ನಡೆದರು.  ಆಪ್ತ ಸೇವಕರೊಬ್ಬರು ಸ್ವಲ್ಪ ದೂರದವರೆಗೆ ಹಿಂಬಾಲಿಸಿದರು. ಆ ಸ್ಥಳದಲ್ಲಿ ನೀರಿನ ಆಳದ ಬಗ್ಗೆ ಲೆಕ್ಕಿಸದೆ ನೀರಿಗೆ ಹೆಜ್ಜೆ ಹಾಕಿ ಪ್ರವಾಹದ ಮಧ್ಯೆ ಪದ್ಮಾಸನದಲ್ಲಿ ಆಸೀನರಾಗಿ ಶ್ವಾಸವನ್ನು ಬಂಧಿಸಿದ್ದುದು ಸ್ಪಷ್ಟವಾಗಿತ್ತು. ಜಗದ್ಗುರುಗಳ ಪಾರ್ಥೀವ ಶರೀರವು ನರಸಿಂಹವನದಲ್ಲಿ ಅವರ ಮಹಾನ್ ಗುರುವಿನ ಪಕ್ಕದ ಸಮಾಧಿಯಲ್ಲಿ ತಮ್ಮ ವಿಶ್ರಾಂತಿ ಸ್ಥಳವನ್ನು ಕಂಡುಕೊಂಡಿತು. ಅವರ ಪುಣ್ಯಸ್ಮರಣೆಯ ಸಂದರ್ಭ ಮಹಾಲಯ ಅಮಾವಾಸ್ಯೆಯ ದಿನದಂದು, ನವರಾತ್ರಿ ಆಚರಣೆಗೆ ಪೂರ್ವಭಾವಿಯಾಗಿ ಶ್ರೀ ಶಾರದೆಯ ವಾರ್ಷಿಕ ಅಭಿಷೇಕದ ದಿನದಂದು ಬರುತ್ತದೆ. ಅವರ ಹುಟ್ಟು, ಉಪನಯನ, ಸನ್ಯಾಸ, ವಿದೇಹ ಮುಕ್ತಿ ಎಲ್ಲವೂ ಭಾನುವಾರವೇ.

ಚಂದ್ರಶೇಖರ ಭಾರತಿ ಅವರು ಕೆಲವು ಕವಿತೆಗಳನ್ನು ರಚಿಸಿದ್ದರು ಮತ್ತು ಪ್ರಸಿದ್ಧ ವ್ಯಾಖ್ಯಾನಗಳನ್ನು ಬರೆದಿದ್ದರು. ಅವರ ಗುರುರಾಜ ಸೂಕ್ತಿ ಮಾಲಿಕಾ ಸುಮಾರು 400 ಪುಟಗಳಲ್ಲಿ 36 ಸಂಯೋಜನೆಗಳನ್ನು ಹೊಂದಿದೆ. ಇದು ಸಂಸ್ಕೃತ ಮತ್ತು ತಮಿಳಿನಲ್ಲಿ ಮುದ್ರಣಗೊಂಡಿದೆ.
ಶ್ರೀ ಆದ್ಯಶಂಕರಾಚಾರ್ಯರ ವಿವೇಕಚೂಡಾಮಣಿ ಕುರಿತು ಭಾಷ್ಯವನ್ನೂ ಬರೆದಿದ್ದಾರೆ. 


On Aradhana day of Sri Chandrashekhara Bharathi Mahaswamiji 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ