ಅಬ್ಬೂರು ಪ್ರಕಾಶ್
ಅಬ್ಬೂರು ಪ್ರಕಾಶ್
ಅಬ್ಬೂರು ಪ್ರಕಾಶ್ ಅವರು ವಾರ್ತಾ ಮತ್ತು ಪ್ರಸಾರ ಇಲಾಖೆಯ ಅಧಿಕಾರಿಗಳಾಗಿ, ಪತ್ರಕರ್ತರಾಗಿ ಮತ್ತು ಬರಹಗಾರರಾಗಿ ಹೆಸರಾದವರು.
ಅಕ್ಟೋಬರ್ 15, ಪ್ರಕಾಶ್ ಅವರ ಹುಟ್ಟುಹಬ್ಬ. ಇವರು ರಾಮನಗರ ಜಿಲ್ಲೆ, ಚನ್ನಪಟ್ಟಣ ತಾಲೂಕಿನ ಅಬ್ಬೂರು ಗ್ರಾಮದವರು. ತಾಯಿ ವೆಂಕಟಮ್ಮ. ತಂದೆ ರಂಗೇಗೌಡರು. ಸ್ವಗ್ರಾಮ ಅಬ್ಬೂರಿನಲ್ಲಿ ಪ್ರಾಥಮಿಕ ಶಿಕ್ಷಣ, ದಶವಾರದಲ್ಲಿ ಮಾಧ್ಯಮಿಕ ಶಿಕ್ಷಣ, ನಾಗವಾರದಲ್ಲಿ ಪ್ರೌಢ ಶಿಕ್ಷಣ ಮುಗಿಸಿದ ಪ್ರಕಾಶ್ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಪದವಿ ಪಡೆದು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದರು.
ಅಬ್ಬೂರು ಪ್ರಕಾಶ್ ಮೂರು ವರ್ಷಗಳ ಕಾಲ ವಿವಿಧ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಕಾರ್ಯನಿರ್ವಹಿಸಿದ್ದ ನಂತರ, ವಾರ್ತಾ ಮತ್ತು ಪ್ರಸಾರ ಇಲಾಖೆಯಲ್ಲಿ ಮೂರು ದಶಕಗಳ ಕಾಲ ಸೇವೆ ಸಲ್ಲಿಸಿ, ಸಹಾಯಕ ನಿರ್ದೇಶಕರಾಗಿ, ಜಂಟಿ ನಿರ್ದೇಶಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದು ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ಅಬ್ಬೂರು ಪ್ರಕಾಶ್ ಅವರ ಬರಹಗಳು ಅಂತರಜಾಲ ಮಾಧ್ಯಮದಲ್ಲಿನ ಓದುಗರನ್ನು ಅಪಾರವಾಗಿ ಸೆಳೆದಿದೆ. ಇದರ ಪ್ರತಿರೂಪವಾದ ಇವರ 'ಕಣ್ಣ ಕನ್ನಡಿಯಲ್ಲಿ’ ಕೃತಿಗೆ 2023ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಧುರಚೆನ್ನ ದತ್ತಿ ಬಹುಮಾನ ಸಂದಿದೆ. ಈ ಕೃತಿ ಇವರ ಸ್ವಗ್ರಾಮ ಅಬ್ಬೂರಿನಲ್ಲಿನ ಬದುಕಿನ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತೆ ಆಪ್ತವಾಗಿ ತೆರೆದಿಟ್ಟಿದೆ. ಇವರ ಮತ್ತೊಂದು ಕೃತಿ 'ಟಿಕೆಟ್ ಇಲ್ಲ, ಪ್ರಯಾಣ ನಿಲ್ಲಲ್ಲ' ಎಂಬುದು ಸುಬೂಹಿ ಜಿವಾನಿ ಅವರ ಮಕ್ಕಳ ಕೃತಿಯ ಅನುವಾದವಾಗಿದೆ.
ಸಹೃದಯಿ ಆತ್ಮೀಯರಾದ ಅಬ್ಬೂರು ಪ್ರಕಾಶ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday Abbur Prakash Sir
ಕಾಮೆಂಟ್‌ಗಳು