ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ರಾಮೇಶ್ವರಿ ವರ್ಮ



 ರಾಮೇಶ್ವರಿ ವರ್ಮ


ರಾಮೇಶ್ವರಿ ವರ್ಮ ಹಿರಿಯ ರಂಗಭೂಮಿ ಮತ್ತು ಚಲನಚಿತ್ರ ಕಲಾವಿದೆ. ಶಿಕ್ಷಣ, ರಂಗಭೂಮಿ, ಸಾಹಿತ್ಯ, ಆಡಳಿತ, ಆರ್ಥಿಕತೆ ಮತ್ತು ಸಮಾಜದ ಕುರಿತಾಗಿ ಅವರು ತಮ್ಮ ಕ್ರಾಂತಿಕಾರಕ ಚಿಂತನೆ ಮತ್ತು ಅಭಿವ್ಯಕ್ತಿಗಳಿಗೆ  ಹೆಸರಾದವರು. 

ಅಕ್ಟೋಬರ್ 21 ರಾಮೇಶ್ವರಿ ವರ್ಮ ಅವರ ಜನ್ಮದಿನ. ಇವರ ತಂದೆ ಪಿ. ಆರ್. ರಾಮಯ್ಯನವರು ಕಳೆದ ಶತಮಾನದ ಮಹಾನ್ ಸಾಹಸಿ ಪತ್ರಿಕೋದ್ಯಮಿ. ರಾಮಯ್ಯನವರು ಅನೇಕ ಪ್ರತೀಕೂಲ ಪರಿಸ್ಥಿತಿಗಳ ನಡುವೆ ತಾವು ಕಟ್ಟಿ ಬೆಳೆಸಿದ 'ತಾಯಿನಾಡು' ಪತ್ರಿಕೆಯಿಂದ 'ತಾಯಿನಾಡು ರಾಮಯ್ಯ' ಎಂದೇ ಪ್ರಸಿದ್ಧರಾದವರು. ತಾಯಿ ಜಯಲಕ್ಷಮ್ಮ ಸಾರ್ವಜನಿಕ ಸೇವೆಯಲ್ಲಿ ತೊಡಗಿಕೊಂಡವರು. ಸಹೋದರ ಪಿ. ಆರ್. ಬ್ರಹ್ಮಾನಂದ ವಿಶ್ವಪ್ರಸಿದ್ಧ ಅರ್ಥಶಾಸ್ತ್ರಜ್ಞರು. ಮತ್ತೊಬ್ಬ ಸಹೋದರ ಪಾಲಹಳ್ಳಿ ವಿಶ್ವನಾಥ್ ವಿಜ್ಞಾನಿಗಳಾಗಿ, ವಿಜ್ಞಾನ ಸಂವಹನಕಾರಾಗಿ,  ಲೇಖಕರಾಗಿ ಮತ್ತು ಅಂಕಣಕಾರರಾಗಿ ಹೆಸರಾಗಿದ್ದಾರೆ. ಬೆಂಗಳೂರಿನ ಸೈಂಟ್ ಥೆರೇಸಾ ಶಾಲೆಯಲ್ಲಿ ಓದಿದ ನಂತರ ಮುಂದೆ ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಅಧ್ಯಯನಕ್ಕೆ ಬಂದರು. ಉನ್ನತ ಶಿಕ್ಷಣದ ಹಂತದಲ್ಲಿ ಎಕಾನಾಮಿಕ್ಸ್ ಮತ್ತು ಡೆವಲಪ್‍ಮೆಂಟ್ ಸ್ಟಡೀಸ್ ಆಯ್ಕೆಮಾಡಿಕೊಂಡರು. 1968ರಲ್ಲಿ ಪ್ರೊ. ಬಾಲಗೋಪಾಲ ವರ್ಮ ಅವರನ್ನು ವರಿಸಿದರು.

ಮೈಸೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪನ ವೃತ್ತಿ ಕೈಗೊಂಡ ರಾಮೇಶ್ವರಿ ವರ್ಮ ಮಹಿಳಾ ಅಭಿವೃದ್ಧಿ ಧಿಅಧ್ಯಯನ ಸಂಸ್ಥೆಯ ಸಂಸ್ಥಾಪಕರಾಗಿ, ನಿರ್ದೇಶಕರಾಗಿ ದುಡಿದವರು.  ರಾಜಕೀಯ , ಸಮಾಜ ಸೇವೆ, ಹಾಗೂ ಪತ್ರಿಕೋದ್ಯಮ ಪರಿಸರದಲ್ಲಿಯೇ ಬೆಳೆದ ಪ್ರೊ. ರಾಮೇಶ್ವರಿ ವರ್ಮ ಅವರು ಶೈಕ್ಷಣಿಕ, ರಂಗಭೂಮಿ, ಮತ್ತು ದೃಶ್ಯ ಮಾಧ್ಯಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು. ವೈಯಕ್ತಿಕ ಜೀವನದಲ್ಲಿ ಕ್ರಾಂತಿಕಾರಕ ನಿರ್ಧಾರವನ್ನು ಕೈಗೊಂಡರೆ ಸಾರ್ವಜನಿಕ ಜೀವನದಲ್ಲಿ ಸ್ನೇಹ, ವಿಶ್ವಾಸ, ಹಾಗೂ ಸಂಬಂಧಗಳನ್ನು ಕಾಪಾಡಿಕೊಳ್ಳಬಹುದು ಎಂಬ ನಿಲುವನ್ನು ತಳೆದವರು. 

ರಾಮೇಶ್ವರಿ ವರ್ಮ ಕರ್ನಾಟಕ ರಂಗಭೂಮಿಯಲ್ಲಿ ಕಳೆದ 6 ದಶಕಗಳಿಗೂ ಹೆಚ್ಚು ಕಾಲದಿಂದ ಒಬ್ಬ ನಟಿಯಾಗಿ, ನಿರ್ದೇಶಕಿಯಾಗಿ, ಸಂಘಟಕರಾಗಿ ದುಡಿದವರು. ವಿಶೇಷವಾಗಿ ಮೈಸೂರು ಆಧುನಿಕ ರಂಗಭೂಮಿಯನ್ನ ಕಟ್ಟಿ ಬೆಳೆಸಿದವರಲ್ಲಿ ಶ್ರೀಮತಿ ರಾಮೇಶ್ವರಿ ವರ್ಮ ಅವರು ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ. ಮೈಸೂರಿನ ಸರಸ್ವತಿಪುರಂ ಮಧ್ಯದಲ್ಲಿರುವ ತೆಂಗಿನ ತೋಪು (ಸಮತೆಂತೋ) ಎಂಬ ಪ್ರತಿಷ್ಠಿತ ರಂಗಭೂಮಿ ಸಂಸ್ಥೆಯ ಸ್ಥಾಪಕ ಸದಸ್ಯರಾಗಿ, ಸಮುದಾಯದಂತಹ ತಂಡದಲ್ಲೂ ಸಕ್ರಿಯ ಕಾರ್ಯಕರ್ತೆಯಾಗಿ ದುಡಿದವರು. ಅವರು ಅಂದಿನ ಹಿರಿಯ ರಂಗಕರ್ಮಿಗಳಾದ ಪರ್ವತವಾಣಿ, ಬಿ.ವಿ. ಕಾರಂತ, ಪ್ರಸನ್ನ, ಸತ್ಯು, ಸಿಂಧುವಳ್ಳಿ ಅನಂತಮೂರ್ತಿ ಮುಂತಾದ ಹಿರಿಯ ರಂಗಕರ್ಮಿಗಳೊಂದಿಗೆ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದವರು. ಸದಾ ಮಹಿಳೆಯರ ಪರವಾಗಿ ಹೋರಾಡಿದ ರಾಮೇಶ್ವರಿ ಅವರು ತಮ್ಮ ನಾಟಕಗಳಲ್ಲಿ ಮಾನವೀಯತೆಯ ನಿಲುವುಗಳನ್ನು ಅಭಿವ್ಯಕ್ತಿಸುತ್ತ ಬಂದಿದ್ದಾರೆ. ರುಡಾಲಿ, ಮೂಕಜ್ಜಿಯ ಕನಸುಗಳು, ಸೊನಾಟ, ಮೀಡಿಯಾ, ಮುಂತಾದ ನಾಟಕಗಳನ್ನು ನಿರ್ದೇಶಿಸಿರುವ ಇವರು ನೂರಾರು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಎರಡು ಬಾರಿ ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.

ಮೂಕಜ್ಜಿಯ ಕನಸುಗಳು, ಬೆಟ್ಟದ ಜೀವ, ಚಿಗುರಿದ ಕನಸು,  ನಾಯಿ ನೆರಳು ಮುಂತಾದ ಪ್ರಸಿದ್ಧ ಚಿತ್ರಗಳು ರಾಮೇಶ್ವರಿ ವರ್ಮಾ ಅವರು ಅಭಿನಯಿಸಿರುವ ಪ್ರಮುಖ ಚಿತ್ರಗಳಲ್ಲಿ ಸೇರಿವೆ. 

ರಾಮೇಶ್ವರಿ ವರ್ಮ  ಅವರಿಗೆ ಗೌರವ ಸಮರ್ಪಣೆಯಾಗಿ ’ಅಂತರಂಗ ಅನುಸಂಧಾನ’ ಕೃತಿಯನ್ನು ಡಾ. ಹೇಮಲತ ಎಚ್.ಎಂ. ಮತ್ತು ಡಾ. ಚಂದ್ರಮತಿ ಸೋಂದಾ ಅವರು ಸಂಪಾದಿಸಿ ಪ್ರಕಟಿಸಿದ್ದಾರೆ. ಅವರ ಕುರಿತ ಡಾಕ್ಯುಮೆಂಟರಿ ಚಿತ್ರವನ್ನು ಪರಿವರ್ತನ ರಂಗಸಮಾಜ ನಿರ್ಮಿಸಿದೆ.

ರಾಮೇಶ್ವರಿ ವರ್ಮಾ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ನಾಟಕ ಅಕಾಡೆಮಿಯ ಪ್ರಶಸ್ತಿ, ಗಾನಭಾರತಿ ಗೌರವ, 'ರಂಗಾಯಣದ ದಸರಾ ರಂಗಗೌರವ’ ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ.

ಹಿರಿಯ ಸಾಧಕಿ ರಾಮೇಶ್ವರಿ ವರ್ಮ ಅವರಿಗೆ ಜನ್ಮದಿನದ ಹಾರ್ದಿಕ ಶುಭಹಾರೈಕೆಗಳು. 

On the birthday of multi talented Rameshvari Varma 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ