ಎಸ್. ಎನ್. ಸುಬ್ಬರಾವ್
ಎಸ್. ಎನ್. ಸುಬ್ಬರಾವ್
ಕರ್ನಾಟಕ ಮೂಲದ ಹಿರಿಯ ಗಾಂಧಿವಾದಿ ಡಾ. ಎಸ್. ಎನ್. ಸುಬ್ಬರಾವ್ ಅವರ ಸಂಸ್ಮರಣೆ ದಿನವಿದು. ಅಸಾಮಾನ್ಯ ಸಮಾಜಸೇವಕರಾದ ಸುಬ್ಬರಾಯರು ರಾಷ್ಟ್ರಮಟ್ಟದಲ್ಲಿ ಹೆಸರಾಗಿರುವ 'ನ್ಯಾಷನಲ್ ಯೂಥ್ ಪ್ರಾಜೆಕ್ಟ್' ಸ್ಥಾಪಕರು.
ಡಾ. ಎಸ್. ಎನ್. ಸುಬ್ಬರಾವ್ ವಿನೋಬಾ ಅವರ ಜೊತೆ ಸರ್ವೋದಯ ಪಾದಯಾತ್ರೆ ಮಾಡಿದವರು. ಚಂಬಲ್ ಕಣಿವೆ ಡಕಾಯತರ ಶರಣಾಗತಿಯಲ್ಲಿ ವಿನೋಬಾ ಜೊತೆ ಮುಖ್ಯ ಪಾತ್ರ ವಹಿಸಿದವರು. ನಾ. ಸು. ಹರ್ಡಿಕರ ಅವರ ಜೊತೆಗೆ ಸೇರಿ ಕಾಂಗ್ರೆಸ್ ಸೇವಾದಳ ಸಂಘಟಿಸಲು ದುಡಿದವರು. ವಿಶೇಷವಾಗಿ ಯುವಕರ ನಡುವೆ ಜಾತಿ ಧರ್ಮಭೇದಭಾವಗಳಿಂದಾದ ಅಪಾಯದ ಬಗ್ಗೆ ಜಾಗ್ರತಿ ಮೂಡಿಸಲು ಶ್ರಮಿಸುತ್ತಿದ್ದವರು. ಅನೇಕ ಸಹಸ್ರ ಗ್ರಾಮೀಣ ಜನರಿಗೆ ಉದ್ಯೋಗಾವಕಾಶ ಕಲ್ಪಿಸಿದವರು.
ಸೇಲಂ ನಂಜುಂಡಯ್ಯ ಸುಬ್ಬರಾವ್ 1929ರ ಫೆಬ್ರವರಿ 7ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ನಂಜುಡಯ್ಯ ಅನ್ಯಾಯದ ಪ್ರಕರಣಗಳನ್ನು ನಿರಾಕರಿಸುವ ಖ್ಯಾತಿಯ ವಕೀಲರಾಗಿದ್ದರು. ತನ್ನ ಮೂವರು ಸಹೋದರರೊಂದಿಗೆ, ಸುಬ್ಬರಾವ್ ಹತ್ತನೇ ವಯಸ್ಸಿನಲ್ಲಿ ಮಲ್ಲೇಶ್ವರಂನ ರಾಮಕೃಷ್ಣ ವೇದಾಂತ ಕಾಲೇಜಿನಲ್ಲಿ ಭಕ್ತಿಗೀತೆಗಳನ್ನು ಹಾಡಲು ಪ್ರಾರಂಭಿಸಿದರು. ಶಾಲೆಯಲ್ಲಿ ಓದುತ್ತಿದ್ದಾಗಲೇ ಮಹಾತ್ಮಾ ಗಾಂಧಿಯವರ ಬೋಧನೆಗಳಿಂದ ಪ್ರೇರಿತರಾಗಿ ಖಾದಿ ಧಾರಿಯಾದರು.
1942ರ ಆಗಸ್ಟ್ 9ರ ಬೆಳಿಗ್ಗೆ ಸುಬ್ಬರಾಯರು ಇತರ ಶಾಲಾ ವಿದ್ಯಾರ್ಥಿಗಳೊಂದಿಗೆ ತರಗತಿಗಳನ್ನು ಬಹಿಷ್ಕರಿಸಿದರು. ಇದು ಭಾರತದ ಸ್ವಾತಂತ್ರ್ಯ ಚಳುವಳಿಯೊಂದಿಗೆ ಅವರ ಮೊದಲ ಅನುಭವ. ಅವರನ್ನು ಬ್ರಿಟಿಷ್ ಪೊಲೀಸರು ಬಂಧಿಸಿದಾಗ ಬೀದಿ ಗೋಡೆಗಳು ಮತ್ತು ರಸ್ತೆಗಳ ಮೇಲೆ "ಕ್ವಿಟ್ ಇಂಡಿಯಾ" ಎಂದು ಬರೆಯುತ್ತಿದ್ದರು. ಆದರೆ ಕೇವಲ 13 ವರ್ಷ ವಯಸ್ಸಿನ ಬಾಲಕನೆಂದು ಅವರನ್ನು ಬಿಡುಗಡೆ ಮಾಡಲಾಯಿತು. ಅಂದಿನಿಂದ ಸುಬ್ಬರಾವ್ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾದರು. ವಿದ್ಯಾರ್ಥಿ ಜೀವನದಲ್ಲಿ ಅವರು ವಿದ್ಯಾರ್ಥಿ ಕಾಂಗ್ರೆಸ್ ಮತ್ತು ರಾಷ್ಟ್ರ ಸೇವಾದಳ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಸ್ಥಳೀಯ ಸಂಸ್ಥೆಯಾದ ‘ಗಾಂಧಿ ಸಾಹಿತ್ಯ ಸಂಘ’ದ ಬ್ಯಾನರ್ ಅಡಿಯಲ್ಲಿ ಅವರು ಯುವಕರ ನೇತೃತ್ವದಲ್ಲಿ ಕೂಲಿಕಾರರ ಮೊಹಲ್ಲಾಗಳಲ್ಲಿ ವಯಸ್ಕ ಶಿಕ್ಷಣ ಕಾರ್ಯಕ್ರಮಗಳನ್ನು ಆಯೋಜಿಸಿದರು. ಈ ಅಸಾಮಾನ್ಯ ಸಂಘಟನಾ ಸಾಮರ್ಥ್ಯಗಳಿಂದಾಗಿ 1946ರಲ್ಲಿ ಬೆಳಗಾವಿ ಜಿಲ್ಲೆ ಗುರ್ಲ್ಹೊಸೂರಿನಲ್ಲಿ ನಡೆದ 31 ದಿನಗಳ ತರಬೇತಿ ಶಿಬಿರಕ್ಕೆ ಆಯ್ಕೆಯಾದರು.
ಸುಬ್ಬರಾವ್ ಅವರಿಗೆ ಡಾ. ಎನ್.ಎಸ್. ಹರ್ಡೀಕರ್ ಅವರು 1948ರಲ್ಲಿ ಚಿತ್ರದುರ್ಗದಲ್ಲಿ ನಡೆದ ಶಿಬಿರದ ಸಮಯದಲ್ಲಿ ಪರಿಚಯವಾದರು. ಅವರ ಅಹ್ವಾನದ ಮೇರೆಗೆ 1951ರಲ್ಲಿ ಕಾನೂನು ಪದವಿ ಮುಗಿಸಿದ ತಕ್ಷಣವೇ ಸೇವಾದಳವನ್ನು ಸೇರಿದರು. ಅವರು ತಮ್ಮ ಸೇವಾದಳದ ಚಟುವಟಿಕೆಗಳನ್ನು 7, ಜಂತರ್ ಮಂತರ್ ರಸ್ತೆ, ನವದೆಹಲಿಯಿಂದ 1970ರವರೆಗೆ ಮುಂದುವರೆಸಿದರು. ಪ್ರಚಂಡ ಯಶಸ್ಸು ಮತ್ತು ಜನಪ್ರಿಯತೆಯೊಂದಿಗೆ ಭಾರತದಾದ್ಯಂತ ಯುವ ಶಿಬಿರಗಳನ್ನು ಆಯೋಜಿಸಿದರು. ಅವರ ಸಾಮರ್ಥ್ಯಗಳು ಜವಾಹರ್ ಲಾಲ್ ನೆಹರು, ಕೆ. ಕಾಮರಾಜ್ ಮತ್ತು ಹಲವಾರು ರಾಷ್ಟ್ರೀಯ ನಾಯಕರ ಪ್ರೀತಿಯನ್ನು ಗಳಿಸಿದವು. ಭಾರತಮಾತೆಗೆ ಸೇವೆ ಸಲ್ಲಿಸುವ ಅವರ ಕ್ರಾಂತಿಕಾರಿ ವಿಚಾರಗಳಿಂದ ಎಲ್ಲರೂ ಪ್ರಭಾವಿತರಾಗಿದ್ದರು.
1965ರಲ್ಲಿ ಸುಬ್ಬರಾಯರಿಗೆ ಅವರ ಪ್ರೀತಿಯ ಕನಸುಗಳನ್ನು ನನಸಾಗಿಸುವ ಘಳಿಗೆ ಕೂಡಿಬಂತು. ಇಡೀ ರಾಷ್ಟ್ರವು ಆ ವರ್ಷದಲ್ಲಿ ಪ್ರಾರಂಭವಾದ ‘ಗಾಂಧಿ ಶತಮಾನೋತ್ಸವ’ವನ್ನು ಆಚರಿಸಲು ಸಜ್ಜಾಯಿತು. ಆ ಆಚರಣೆ 1969ರವರೆಗೆ ಮುಂದುವರೆಯಿತು. ಗಾಂಧಿ ಶತಮಾನೋತ್ಸವ ವರ್ಷದಲ್ಲಿ ಶ್ರೀ ಸುಬ್ಬಾ ರಾವ್ ಅವರನ್ನು "ಗಾಂಧಿ ದರ್ಶನ ರೈಲು" ನಿರ್ದೇಶಕರಾಗಿ ನಾಮನಿರ್ದೇಶನ ಮಾಡಲಾಯಿತು. ಮಹಾತ್ಮರ ಜೀವನ ಕುರಿತು ಆಡಿಯೋ-ದೃಶ್ಯ ಸಾಮಗ್ರಿಗಳನ್ನು ಹೊಂದಿದ ಎರಡು ರೈಲುಗಳನ್ನು ಪ್ರಾರಂಭಿಸಲಾಯಿತು, ಒಂದನ್ನು ಮೀಟರ್ ಗೇಜ್‌ನಲ್ಲಿ ಮತ್ತು ಇನ್ನೊಂದು ಬ್ರಾಡ್ ಗೇಜ್‌ನಲ್ಲಿ. ಈ ಕಾರವಾನ್‌ಗಳ ಮೂಲಕ ಪೂಜ್ಯ ಸಂತ ಗಾಂಧಿಯವರ ಜೀವನ, ಸಾಧನೆ ಮತ್ತು ಬದುಕಿನ ಮೌಲ್ಯಗಳನ್ನು ಪ್ರದರ್ಶಿಸುವ ಮೂಲಕ ದೇಶದಾದ್ಯಂತ ಒಂದು ವರ್ಷದ ಸುದೀರ್ಘ ಪ್ರಯಾಣವನ್ನು ಕೈಗೊಂಡರು. ರಚನಾತ್ಮಕ ಕೆಲಸಗಳನ್ನು ಉತ್ತೇಜಿಸಲು ಈ ರೈಲುಗಳು ದೇಶದಲ್ಲಿ ಲಕ್ಷಾಂತರ ಸ್ವಯಂಸೇವಕರಿಗೆ ಮಾಧ್ಯಮವಾಗಿ ಕಾರ್ಯನಿರ್ವಹಿಸಿದವು. ಸುಬ್ಬರಾವ್ ಅವರು ಕೇಂದ್ರ ಸಚಿವರಾಗಿದ್ದ ಶ್ರೀ ಆರ್.ಆರ್.ದಿವಾಕರ್ ಅವರ ಕೋರಿಕೆಯ ಮೇರೆಗೆ 1970 ರಲ್ಲಿ ‘ಗಾಂಧಿ ಶಾಂತಿ ಪ್ರತಿಷ್ಠಾನ’ದ ಆಜೀವ ಸದಸ್ಯರಾದರು.
1954ರಲ್ಲಿ, ಸುಬ್ಬರಾವ್ ಅವರಿಗೆ ಚಂಬಲ್ ಭೂಪ್ರದೇಶದ ಮೂಲಕ ಸಂಚರಿಸುವ ಸಮಯದಲ್ಲಿ, ಯುವಕರಿಗೆ ರಚನಾತ್ಮಕ ಶೈಕ್ಷಣಿಕ ಯೋಜನೆ ಸ್ಥಾಪಿಸುವ ಮಹದುದ್ದೇಶ ಮೂಡಿಬಂತು. ಈ ಪರಿಕಲ್ಪನೆಯು ಆ ಪ್ರದೇಶದಲ್ಲಿ "ಆಶ್ರಮ ಶಿಬಿರಗಳ" ಸಂಘಟನೆಗೆ ಕೊಡುಗೆ ನೀಡಿತು. ಸುಬ್ಬರಾವ್ ಅವರು 1964ರಲ್ಲಿ ಚಂಬಲ್ ಕಣಿವೆಯ ಜೌರಾ ಪಟ್ಟಣದಲ್ಲಿ ದೇಶದ ಎಲ್ಲಾ ಭಾಗಗಳ ಯುವಕ-ಯುವತಿಯರ ಭಾಗವಹಿಸುವಿಕೆಯ ದಾಖಲೆಯ 10 ತಿಂಗಳ ಶಿಬಿರವನ್ನು ಆಯೋಜಿಸಿದರು., 1970ರಲ್ಲಿ, ಅವರು ಮೊರೆನಾ (ಮಧ್ಯಪ್ರದೇಶ) ಜಿಲ್ಲೆಯ ಜೌರಾ ಚಂಬಲ್ ಕಣಿವೆಯಲ್ಲಿ ಮಹಾತ್ಮ ಗಾಂಧಿ ಸೇವಾ ಆಶ್ರಮವನ್ನು ಸ್ಥಾಪಿಸಿದರು. ಈ ಆಶ್ರಮವೇ ನಂತರ 14 ಏಪ್ರಿಲ್ 1972 ರಂದು ಮೋಹರ್ ಸಿಂಗ್, ಮಾಧೋ ಸಿಂಗ್ ಮತ್ತು ಇತರರಂತಹ ಅತ್ಯಂತ ಕುಖ್ಯಾತ ಡಕಾಯಿತರುಗಳ ಐತಿಹಾಸಿಕ ಶರಣಾಗತಿಯನ್ನು ಆಯೋಜಿಸಿತು. ಈ ಪ್ರಯತ್ನಗಳ ನಂತರ ಬಟೇಶ್ವರ (ಯು.ಪಿ.) ಮತ್ತು ತಲಬ್‌ಶಾಹಿ (ರಾಜಸ್ಥಾನ) ದಲ್ಲಿ ಡಕಾಯಿತರ ಶರಣಾಗತಿ ನಡೆಯಿತು. ಆಶ್ರಮವು ಈ ಡಕಾಯಿತರ ಕುಟುಂಬಗಳು ಮತ್ತು ಅವರ ಸಂತ್ರಸ್ತರ ಕುಟುಂಬಗಳ ಪುನರ್ವಸತಿಗಾಗಿ ಕೆಲಸ ಮಾಡಿತು. 1981ರಲ್ಲಿ ಚಂಬಲ್ ಕಣಿವೆಯಲ್ಲಿ ಮೂಡಿದ 47 ಹಳ್ಳಿಗಳನ್ನು ಒಳಗೊಂಡ ಸೈಕಲ್ ರ್‍ಯಾಲಿ ಸೂಕ್ಷ್ಮ ಮಟ್ಟದಲ್ಲಿ ಆ ಪ್ರದೇಶದ ಸಮಸ್ಯೆಗಳನ್ನು ಗುರುತಿಸಿ ಅವುಗಳ ಪರಿಹಾರಗಳನ್ನು ಆಡಳಿತ ಮಟ್ಟದಲ್ಲಿ ಕಂಡುಹಿಡಿಯಲು ಅವಕಾಶ ಒದಗಿಸಿತು. ಪ್ರಸ್ತುತ ಈ ಆಶ್ರಮವು ಖಾದಿ ಮತ್ತು ಗ್ರಾಮೋದ್ಯೋಗ ಶಿಬಿರಗಳು, ಯುವ ನಾಯಕತ್ವ ಶಿಬಿರಗಳು, ಉದ್ಯೋಗ ಸೃಷ್ಟಿ ಶಿಬಿರಗಳು ಮತ್ತು ಗ್ರಾಮೀಣ ಜನರ ಸಬಲೀಕರಣಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.
ಆಶ್ರಮವು ಗಾಂಧಿವಾದಿ ರಚನಾತ್ಮಕ ಕಾರ್ಯದ ಕೇಂದ್ರವಾಗಿದೆ, ಇದು 3000 ಕ್ಕೂ ಹೆಚ್ಚು ಕುಟುಂಬಗಳಲ್ಲಿ 5000 ಕ್ಕೂ ಹೆಚ್ಚು ಜನರಿಗೆ ಉದ್ಯೋಗವನ್ನು ಒದಗಿಸುವ ಚರಖಾಗಳ ಚಾಲನೆಯನ್ನು ಒಳಗೊಂಡಿದೆ.
ಸುಬ್ಬರಾವ್ ಅವರಿಗೆ ಪದ್ಮಶ್ರೀ ರಾಷ್ಟ್ರೀಯ ಯುವ ಯೋಜನೆಗೆ ರಾಷ್ಟ್ರೀಯ ಯುವ ಪ್ರಶಸ್ತಿ, ಕಾಶಿ ವಿದ್ಯಾಪೀಠದಿಂದ ಡಿ.ಲಿಟ್. ಗೌರವ, ಭಾರತೀಯ ಏಕತಾ ಪುರಸ್ಕಾರ, ಶಾಂತಿದೂತ್ ಅಂತರಾಷ್ಟ್ರೀಯ ಪ್ರಶಸ್ತಿ, ವಿಶ್ವ ಮಾನವಾಧಿಕಾರಿ ಪುರಸ್ಕಾರ, ರಾಜೀವ್ ಗಾಂಧಿ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ, ರಾಷ್ಟ್ರೀಯ ಸಾಂಪ್ರದಾಯಿಕ ಸದ್ಭಾವನಾ ಪುರಸ್ಕಾರ, ಜಮ್ನಾಲಾಲ್ ಬಜಾಜ್ ಪುರಸ್ಕಾರ, ಮಹಾತ್ಮ ಗಾಂಧಿ ಪುರಸ್ಕಾರ, ಅನುವರ್ತ್ ಅಹಿಂಸಾ ಪ್ರಶಸ್ತಿ, ಕರ್ನಾಟಕ ಸರ್ಕಾರದಿಂದ ಮಹಾತ್ಮಾ ಗಾಂಧಿ ಪ್ರೇರಣಾ ಸೇವಾ ಪುರಸ್ಕಾರ, ಮಹಾರಾಷ್ಟ್ರ ಸರ್ಕಾರದ ರಾಷ್ಟ್ರೀಯ ಸದ್ಭಾವನಾ ಏಕತಾ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿದ್ದವು.
ಡಾ. ಎಸ್. ಎನ್. ಸುಬ್ಬರಾವ್ 2021ರ ಅಕ್ಟೋಬರ್ 27ರಂದು ತಮ್ಮ 92ನೇ ವಯಸ್ಸಿನಲ್ಲಿ ನಿಧನರಾದರು. ಇಂತಹ ಮಹನೀಯರ ಕುರಿತು ಅವರು ಬದುಕಿದ್ದಾಗಲೂ ನಾವು ಹೆಚ್ಚು ಅರಿಯಬೇಕಿತ್ತು ಅನಿಸುತ್ತಿದೆ. ಕಳೆದು ಹೋದಾಗಲೇ ಶ್ರೇಷ್ಠತೆಯ ಮಿಂಚು ನಮಗೆ ಕಾಣುವುದು. ಗಾಂಧಿ ಎಂಬ ಮೌಲ್ಯ ತೀವ್ರ ಅವಹೇಳನಕ್ಕೆ ಗುರಿಯಾದ ನಮ್ಮ ಸಮಾಜಕ್ಕೆ ಮೌಲ್ಯಗಳು ರುಚಿಸುವುದಾದರೂ ಎಂತು.
ಕಳೆದು ಹೋದ ಮಹಾನುಭಾವರಿಗೆ ಸಾಷ್ಟಾಂಗ ನಮನ.
On Remembrance Day of great Gandhian of National Youth Project fame Dr. S. N. Subba Rao
ಕಾಮೆಂಟ್‌ಗಳು